Category Archives: ಹೇಳಲೇ ಬೇಕೆನಿಸಿದ್ದು…

ರಾಷ್ಟ್ರಗೀತೆ ಮತ್ತು ರಾಷ್ಟ್ರೀಯತೆ ಗೌರವ


ಕವಿ ರವೀಂದ್ರನಾಥ ಠಾಕೂರರರು ಯಾವ ಅರ್ಥದಲ್ಲಿ ಹೇಳಿದರೋ.. ವಿಶ್ವಮಾನವನಾಗಿ ಪರಸ್ಪರರ ರಾಷ್ಟ್ರೀಯತೆಯನ್ನು ಗೌರವಿಸುವಿಕೆಯೇ ಸರಿ. ಈ ದೇಶವಾಸಿಯಾಗಿ ಈ ನೆಲ ಜಲವ ಸವಿದು ಇಲ್ಲೇ ದುಡಿದು ಬದುಕುವವರು ನಾವಾಗಿ, ಹೊರಗಿನಿಂದ ಬಂದ ಅತಿಥಿಗಳೇ ಇರಲಿ ಅವರೂ ನೋಡಿ ನಮ್ಮೊಂದಿಗೆ ನಿಂತು ಗೌರವಿಸುವಂತೆ ಕೆಲ ಸೆಕೆಂಡುಗಳೇ ನಮ್ಮ ರಾಷ್ಟ್ರಗೀತೆಗೆ ರಾಷ್ತ್ರ ನಮನ ಸಲ್ಲಿಸಲೂ ಲಿಖಿತ ಕಾನೂನೊಂದು ಬೇಕೇ…??? ವಿಶ್ವಮಾನವನಾಗಿ ಒಂದು ರಾಷ್ಟ್ರವನ್ನು ರಾಷ್ಟ್ರೀಯತೆಯನ್ನು ಗೌರವಿಸುವಿಕೆಯೇ ಸರಿ. ಅದು ಆದ್ಯ ಕರ್ತವ್ಯವೂ ಹೌದು.

ಉದಾಹರಣೆಗೆ ನಾವು ಬೇರೊಂದು ದೇಶದಲ್ಲಿದ್ದಾಗ, ಆ ದೇಶದ ರಾಷ್ಟ್ರೀಯ ದಿನಾಚರಣೆಯಲ್ಲೋ ಅಥವಾ ಯಾವುದೇ ಸಭೆಯಲ್ಲೋ ನಾವು ಭಾಗವಹಿಸಿದ ಸಂದರ್ಭದಲ್ಲಿ ಅವರ ರಾಷ್ಟ್ರ ಗೀತೆ ಕೇಳಿಬಂದರೆ ಅವರೊಂದಿಗೆ ನಾವು ಎದ್ದು ನಿಂತು ಗೌರವ ಸೂಚಿಸುತ್ತೇವೆಂದರೆ ಅದು
ದೇಶಭಕ್ತಿಯ ಹೇರಿಕೆಯಾಗದು. ಇನ್ನು ಮನರಂಜನೆಯ ಸಿನಿಮಾ ಹಾಲ್ ನಲ್ಲಿ ಅದೇಕೆ? ಎಂಬ ಪ್ರಶ್ನೆ. ಇದು ರವಿಂದ್ರನಾಥ ಠಾಕೂರರ ಕಾಲವಲ್ಲ, ಆಕಾಲವೆಂದರೆ, ಆಗಷ್ಟೇ ದೇಶಕ್ಕೆ ಸ್ವಾತಂತ್ರ್ಯ ಬಂದಿತ್ತು, ಜನರಲ್ಲಿ ಭಾವೈಕ್ಯತೆ ರಾಷ್ಟ್ರಪ್ರೇಮ ಸಹಜವಾಗಿ ನೆಲೆಯೂರಿತ್ತು. ಇಂದಿಗೆ ಆ ಭಾವನೆಗಳು ರಾಷ್ಟ್ರಪ್ರೇಮ ನಶಿಸುತ್ತಿವೆಯಲ್ಲವೇ ಸ್ನೇಹಿತರೇ, ನಾವು ಹಿರಿಯರಾಗಿ ಮಕ್ಕಳೊಂದಿಗೆ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವಿಸಿದರೆ ಮಕ್ಕಳಿಗೂ ಇದು ನನ್ನ ದೇಶ ಎಂಬ ಗೌರವ ಮೂಡಿ ಬರುತ್ತದೆ ಅಲವೇ…Every rule has a general rule ಎಂಬಂತೆ, ಇಂದಿಗೆ ಬದಲಾದ ಕಾಲಮಾನದಲ್ಲಿ ರಾಷ್ಟ್ರಾಭಿಮಾನ ಜಾಗೃತಿ ಅನಿವಾರ್ಯವಾಗಿದೆ. ಮೊದಲನೆಯದಾಗಿ ನಾವು ರಾಷ್ಟ್ರವನ್ನು ಗೌರವಿಸುವುದರ ಸಂಕೇತ ರಾಷ್ಟ್ರಗೀತೆ.

 

Advertisements

ಕೆಲವು ಋಣಾತ್ಮಕ ಪ್ರಶ್ನೋತ್ತರಗಳು (Some Negative questions and answers)


ಪ್ರಶ್ನೆ:-

ಯಾರು ಹಿತವರು ನಿನಗೆ
ಸ್ನೇಹಿತರೋ ಹೆತ್ತವರೋ
ಒಡಹುಟ್ಟಿದವರೋ ಬಂಧುಗಳೋ
ಪ್ರೇಯಸಿಯೋ/ಪ್ರಿಯಕರನೋ
ಹೆಂಡತಿಯೋ/ಗಂಡನೋ
ಧಾರಿಣಿಯೋ ಬಲು ಧನದ ಸಿರಿಯೋ???

ಉತ್ತರ:-

ಬಲುಧನದ ಸಿರಿಯೇ ಸುಖವು
ಸ್ನೇಹವೇ ಸ್ವಚ್ಛಂದ ಖುಷಿಯೋ
ಮದುವೆಯೋ ಬಂಧನವು
ಹೆಂಡತಿ/ಗಂಡನೇ ನಿತ್ಯ ಹಿತವೋ
ಮಕ್ಕಳೋ ಅವರ ಓದೋ ಹೊರೆಯೋ
ಹೆತ್ತವರೋ ಬೇಡವಾದ ವಸ್ತುಗಳು
ಪ್ರೀತಿ ಪ್ರೇಮ ನಿರರ್ಥಕವೋ ವಿಚ್ಛೇದನವು
ಒಡಹುಟ್ಟಿದವರೋ ಬಂಧುಗಳೋ
ಯಾರೂ ಹೊಣೆಯಾಗದಿಹರು.

ನಿರುತ್ತರ:-

ಧಾರಿಣಿಯೇ ನಿಷ್ಕರುಣಿಯು
ಸಿರಿಸುಖವೇ ಹಿಂಸೆಯೋ
ಒಂಟಿತನವೇ ಶತ್ರುವು 
ರೋಗವೇ ನರಕವೋ
ಋಣವೇ ಘಾತಕವು
ಬದುಕೇ ಪಾತಕವು
ಸಾವೇ ಪೈಶಾಚಿಕವೋ

ಷರಾ:

ಋಣಾತ್ಮಕ ಜೀವನಶೈಲಿಯು ಜೀವಿತದುದ್ದಕೂ
ದೈವನಿಷ್ಠೆ-ಧರ್ಮದೃಷ್ಟಿ ಇಲ್ಲದ ಕರ್ಮಗೇಡಿತನದ
ಮನೋಬುದ್ಧಿಗಳ ತಿಕ್ಕಲುತನಗಳೇ ಆಗಿ ಕಾಡುವುವು

ನಾಡ ದೇವಿ ಭುವನೇಶ್ವರಿ – ಐತಿಹ್ಯ


kannada Taye Bhuvneshwariಭಾರತ ಮಾತೆ ಭಾರತಾಂಬೆ ಎಂಬ ಅಭಿದಾನಗಳಿಂದ ಕರೆಯಲ್ಪಟ್ಟಿರುವ ನಮ್ಮ ರಾಷ್ಟ್ರಮಾತೆಯ ಪ್ರಭಾವದಿಂದಲೇ ಆವಿರ್ಭವಿಸಿದವಳು ಕರ್ನಾಟಕದ ಮಾತೆ ಭುವನೇಶ್ವರಿ. ೧೯ ನೇ ಶತಮಾನದ ಕೊನೆ ದಶಕಗಳಲ್ಲಿ ಭಾರತೀಯರ ಏಕತೆ ಸಮಗ್ರತೆಯ ರೂಪಕಾರ್ಥವಾಗಿ ಜನತೆಯ ಬುದ್ಧಿ-ಭಾವ ಪ್ರಜ್ಞೆಗಳಿಗೆ ನವಚೇತನೋತ್ಸಾಹ ಮೂಡಿಸಲಿಕ್ಕಾಗಿಯೇ ಅವರ ಮನೋಭೂಮಿಕೆಯಲ್ಲಿ ಅವತರಿಸಿದ ದೇವತೆಯೇ ಭಾರತ ಮಾತೆ, ಭಾರತಾಂಬೆ. ಹಾಗೆ ರಾಷ್ಟಮಟ್ಟದಲ್ಲಿ ದೇಶಭಕ್ತಿ-ಅಭಿವ್ಯಕ್ತಿ-ಅಭಿಮಾನಗಳ ದ್ಯೋತಕವಾಗಿ ಬಂದ ಭಾರತಮಾತೆಯ ತನುಜಾತೆಯೇ ನಮ್ಮ ಕರ್ನಾಟಕ ನೆಲದ ನಾಡ ದೇವಿ ಭುವನೇಶ್ವರಿ.

ಭಾರತೀಯರ ಜನಮಾನಸದಲ್ಲಿ ಭಾವೈಕ್ಯತೆಯ ವೃಂದಗಾನವನ್ನು ಅರಳಿಸಿ ಹಾಡಿಸಿ, “ವಂದೇ ಮಾತರಂ” ಗೀತೆಯು ದಶದಿಕ್ಕುಗಳಿಗೆ ಮೇಳವಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ, ಸೂರ್ಯ ಮುಳುಗದ ಸಾಮ್ಯಾಜ್ಯವನ್ನು ಕಂಪನಗೊಳಿಸಿ, ಬ್ರಿಟಿಷರು ಕಂಗೆಟ್ಟು ಇಲ್ಲಿಂದ ಕಾಲ್ತೆಗೆಯುವಂತೆ ಮಾಡಿದ ನಮ್ಮೆಲ್ಲರ ತಾಯಿ ಭಾರತಾಂಬೆ. ಅಂತೆಯೇ, ಅಂದು ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಜನಸಮುದಾಯಗಳನ್ನು ಭಾವೈಕ್ಯತೆಯಲ್ಲಿ ಒಂದುಗೂಡಿಸಿದ ಭಾರತಮಾತೆಯ ಕೊರಳದನಿಯೇ ಸಂಕೇತವಾಗಿ “ವಂದೇ ಮಾತರಂ”ಮೇಳವಿಸಿತ್ತೆಂದರೆ ಉತ್ಪ್ರೇಕ್ಷೆಯೇನಿಲ್ಲ.

ಕರ್ನಾಟಕವೆಂದರೆ ಕೇವಲ ಒಂದು ನಾಡಲ್ಲ, ಭಾಷೆಯೊಂದರ ನೆಲವಷ್ಟೇ ಅಲ್ಲ, ಸಾಹಿತ್ಯ-ಕಲೆ-ಸಂಗೀತ ಸಂಸ್ಕೃತಿಗಳ ಪರಂಪರೆಯ ಚರಿತ್ರೆಯಷ್ಟೇ ಎಂದು ತಿಳಿಯುವಂತಿಲ್ಲ. ಹಾಗೆ ನೋಡಿದರೆ, ಒಬ್ಬ ವ್ಯಕ್ತಿಗೆ ಹೇಗೋ ಹಾಗೆಯೇ ಒಂದು ದೇಶಕ್ಕೂ ಮೂರು ಸ್ತರಗಳ ಶರೀರವಿದೆ. ಸ್ಥೂಲ, ಸೂಕ್ಷ್ಮ ಹಾಗೂ ಕಾರಣ(ಆಧ್ಯಾತ್ಮ. ಇವು ಮೂರೂ ಶರೀರಗಳ ಮೂಲಕ ಒಬ್ಬ ವ್ಯಕ್ತಿ ಹೇಗೆ ತನ್ನ ಜಿವಿತೋದ್ಧಾರವನ್ನು ಮಾಡಿಕೊಂಡು ಮೋಕ್ಷ ಪಡೆಯುತ್ತಾನೆಯೋ ಹಾಗೆಯೇ ಒಂದು ದೇಶ/ನಾಡು/ರಾಷ್ಟ್ರವೂ ಇಂಥದೇ ಸ್ತರಗಳಾದ ಮೂರು ಶರೀರಗಳಲ್ಲಿ ವಿಕಾಸ ಹೊಂದುವುದರ ಮೂಲಕವೇ ಉನ್ನತಿ ಹಾಗೂ ಔನ್ಯತ್ಯವನ್ನು ಸಾಧಿಸಿಕೊಳ್ಳುತ್ತದೆ. ಅದು ನಿತ್ಯನಿರಂತರ ಜನಮಾನಸದಲ್ಲಿ ಅವ್ಯಕ್ತ ಪ್ರೇರಣೆಯಿಂದ ನಡೆದೇ ತಿರುತ್ತದೆ.

ಭರತಮಾತೆ ಜನ್ಮ ತಳೆದುದು ವಂಗದೇಶದಲ್ಲಿ(ಬಂಗಾಲ. ಸ್ವದೇಶೀ ಚಳುವಳಿಯ ಹರಿಕಾರ ಅವನೀಂದ್ರನಾಥ ಠಾಗೋರ್ ೧೯೦೫ ರಲ್ಲಿ ವಿವರಿಸಿದ ರೀತಿಯನ್ನು ಚಿತ್ರಸಮೇತ “ದ ಗಾಡ್ ಅಂಡ್ ನೇಶನ್” ಎಂಬ ಸುಮತಿ ರಾಮಸ್ವಾಮಿಯವರ ಕೃತಿಯಲ್ಲಿ ಕಾಣಿಸಲಾಗಿದೆ. ಹಾಗೆ ವಂಗಮಾತೆಯೇ ಮುಂದೆ ನಮ್ಮ ಭಾರತಮಾತೆ ಎಂಬುದಾಗಿ ವಿಶ್ವದಾದ್ಯಂತ ಕ್ಯೋಟ್ಯಾನುಕೋಟಿ ಜನತೆಗೆ ಕಂಗೊಳಿಸಿದ್ದಾಳೆ. ಕರ್ನಾಟಕ, ತಮಿಳು ನಾಡು, ಕೇರಳಗಳು ಭಾರತಮಾತೆಯ ಪರಿಕಲ್ಪನೆಗೆ ಚಿತ್ರ ಕಲಾ ಕೃತಿಗಳ ಮೂಲಕ ಸಾಕಾರ ರೂಪವನ್ನು ಕೊಟ್ಟಿವೆ. ರಾಜಾ ರವಿವರ್ಮನ ಪ್ರಸಿದ್ಧ ವರ್ಣ ಚಿತ್ರವೊಂದು ಭೂಮಾತೆಯ ಪರಿಕಲ್ಪನೆಗೆ (ಸೀತೆಯನ್ನು ಭೂದೇವಿ ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ದೃಶ್ಯ) ಪುಷ್ಟಿ ನೀಡಿದೆ. ಹೀಗಾಗಿ ಭರತಭೂಮಿಯ ಮಾತೆ ಭರತ ಮಾತೆಯಿಂದ ನಾಡ ನೆಲದ ದೇವತೆಯ ಪರಿಕಲ್ಪನೆ ಬೆಳದು ಬಂದಿದೆಯನ್ನಬಹುದಾಗಿದೆ.

ಕರ್ನಾಟಕದಲ್ಲಿ ಕನ್ನಡ ಭುವನೇಶ್ವರಿ ದೇವಿ ಪರಿಕಲ್ಪನೆಗೆ ಸ್ಫೂರ್ತಿ-ಪ್ರೇರಣೆಯೊದಿಗಿಸಿದ ಆಕರಗಳೆಂದರೆ, ಹಂಪಿ ವಿರೂಪಾಕ್ಷ ಮಂದಿರದ ಪದ್ಮಾಂಬಿಕೆ ಭುವನೇಶ್ವರಿ ವಿಗ್ರಹ, ಕನ್ನಡ ಮೊದಲ ರಾಜವಂಶಸ್ತರಾದ ಕದಂಬರ ಆರಾಧ್ಯ ದೇವತೆಗಳ ಚಿತ್ರಣ. ಮೂರನೆಯದಾಗಿ ಮುಮ್ಮಡಿ ಕೃಷ್ಣರಾಜರ ರಚನೆಯಾದ ಮೈಸೂರು ಅರಮನೆಯಲ್ಲಿರುವ ಭುವನೇಶ್ವರಿ ಕೃತಿಯೆ. ಅಲ್ಲದೇ, ದೇವೀ ಭಾಗವತ(ದೇವೀ ಮಹಾತ್ಮೆ) ಆಧಾರವಾಗಿ ರಚಿತವಾದ ಸಂಸ್ಕೃತ ಕೃತಿಗಳಲ್ಲೂ ಭುವನೇಶ್ವರಿಯ ಪರಿಕಲ್ಪನೆಯಿದೆ. ಮೈಸೂರಿನ ಚಾಮುಂಡಿ ಬೆಟ್ಟದ ಶಿಲಾಲೇಖನವೊಂದರಲ್ಲಿ ಭುವನೇಶ್ವರಿಯ ಉಲ್ಲೇಖವಿದೆ. ಹೀಗೆ ಇನ್ನೂ ಹಲವು ಆಕರಗಳು ಕರ್ನಾಟಕದಲ್ಲಿ ಲಭ್ಯವಿವೆ. ಕನ್ನಡ ಏಕೀಕರಣ ಚಳುವಳಿಗೆ ಭುವನೇಶ್ವರಿ ಸ್ಫೂರ್ತಿ ದೇವತೆಯಾಗಿದ್ದಾಳೆ.

ಕನ್ನಡ ನೆಲದ ತಾಯಿಯನ್ನು ಕರ್ನಾಟಕ ದೇವಿ(ಶಾಂತ ಕವಿ), ಕನ್ನಡಿಗರ ತಾಯಿ(ಗೋವಿಂದ ಪೈ), ಜೈ ಭಾರತ ಜನನಿಯ ತನುಜಾತೆ(ಕುವೆಂಪು) ಹೀಗೆ ನಮ್ಮ ಕನ್ನಡ ನಾಡಿನ ಕವಿವರ್ಯರೆಲ್ಲ ಹಾಡಿದ್ದಾರೆ. ಕನ್ನಡ ಚಲನ ಚಿತ್ರರಂಗದ ಗೀತೆಗಳೂ ಜನಪ್ರಿಯವಾಗಿ ಅನುರಣಿಸಿವೆ. ಈ ಪರಿಯಲ್ಲಿಯೇ ಕನ್ನಡ ನೆಲದ ಕೀರ್ತಿಪತಾಕೆಯುನ್ನು ಜಗದಗಲ ಹಾಗೂ ಮುಗಿಲೆತ್ತರಕ್ಕೆ ಹಾಯಿಸಿದ್ದಾರೆ ಕರ್ನಾಟಕದ ಮಹಾಜನತೆ.

(ಉದಯವಾಣಿ-ಸಾಪ್ತಾಹಿಕ ಸಂಪದದಲ್ಲಿ (೦೧-೧೦-೨೦೧೪)ಪ್ರಕಟವಾದ ಉಣ್ಣಿ ಕೃಷ್ಣನ್ ಅವರ ಲೇಖನದಿಂದ )

ಭಾರತದಲ್ಲಿ ಭಾವೈಕ್ಯತೆ, ಬದಲಾವಣೆ ಮತ್ತು ಸುಧಾರಣೆ ಎಂಬುದು ಭ್ರಮೆಯೇ…?


ಇಂದಿನ ದಿನಗಳಲ್ಲಿ , ಭಾವೈಕ್ಯತೆ, ಬದಲಾವಣೆ ಮತ್ತು ಸುಧಾರಣೆ ಎಂಬುದು ಬರಿ ಭ್ರಮೆ ಎಂಬ ವದಂತಿ ಹಬ್ಬಿದೆ.  ಈ ದೇಶದಲ್ಲಿ ಬದಲಾವಣೆಯಲ್ಲಿ ಎಂದಿಗೂ ಸಾಧ್ಯವಿಲ್ಲ ಎಂದೇ ಹೇಳುವುದನ್ನೂ ಕೇಳಿದ್ದೇವೆ.ಹೊಸಬೆಳಕು ಹೊಸತಿರುವು ಇದೀಗ ಬರಲೇಬೇಕಲ್ಲ…

ಸೂರ್ಯ ಮುಳುಗದ ಸಾಮ್ಯಾಜ್ಯ ವೆನಿಸಿದ್ದ ಬ್ರಿಟಿಷರ ರಾಜ್ಯವನ್ನೂ ಕಿತ್ತೆಸೆದು ಹೊರಗೆಸೆಯಲು ಒಬ್ಬ ಗಾಂಧೀಜಿ ಬರಬೇಕಾಯಿತು. ಅ ಹೋರಾಟದಲ್ಲಿ ಗಾಂಧೀಜಿಗೆ ಇಡೀ ದೇಶವೇ ಬೆಂಬಲಿಸಿತು. ಇತಿಹಾಸದ ಪುಟಗಳನ್ನು ತಿರುವಿದರೆ, ದೊಡ್ಡವರು ದೊಡ್ಡವರೆನಿಸಿಕೊಂಡದ್ದು,  ಮಹಾತ್ಮರು ಮಹಾತ್ಮರೆನಿಸಿಕೊಂಡದ್ದು ಸುಲಭ ಮಾರ್ಗದಲ್ಲಲ್ಲ.  ಹುಟ್ಟಿನಿಂದ ಅವರ ತಂದೆ ತಾಯಿ ಯಾರೆಂದು ತಿಳಿಯಬಲ್ಲವರು ನಾವು. ಅವರು ಜಾತಿಯ ಚಕಾರವೆತ್ತಲಿಲ್ಲ; ಸರ್ವಜನಾಂಗಗಳಲ್ಲಿ ಭಾವೈಕ್ಯತೆ ಅವರ ಮೂಲ ಮಂತ್ರವಾಗಿತ್ತು.

ಯಾವಾಗಲೂ ನಾವು ಗತ ಚರಿತ್ರೆಯಿಂದ ಕಲಿಯುವ ಬಹಳವಿರುತ್ತದೆ. ನಮ್ಮ ನಮ್ಮ ನಡುವೆ ಬ್ರಿಟಿಷರು ಒಡೆದು ಆಳುವ ನೀತಿಯಿಂದ ಕಟ್ಟಿದ ಸಾಮ್ರಾಜ್ಯ ಕಡೆಗೂ ಭಾರತೀಯರ ಭಾವೈಕ್ಯತೆ ಹಾಗೂ ಒಗ್ಗಟ್ಟಿನ ಬಲದಿಂದಲೇ ಬಿದ್ದು ಹೋಯಿತು.

ಇದೀಗ 68 ದಶಕಗಳಲ್ಲಿ ನಮ್ಮ ಗಣರಾಜ್ಯದ ಸ್ವತಂತ್ರ ಭಾರತ ಎತ್ತ ಸಾಗಿದೆ? ಪಂಚವಾರ್ಷಿಕ ಯೋಜನೆಗಳೆಂದುಕೊಂಡು ಅಭಿವೃದ್ಧಿಯ ದಾರಿಯಲ್ಲಿ ಬರಬರುತ್ತಾ ನಮ್ಮ ನಮ್ಮೊಳಗೇ ಜಾತಿಬೇಧ ಸ್ವಜನಪಕ್ಷಪಾತದ ವಿಷಬೀಜ ಬಿತ್ತಿ, ಒಡೆದು ಆಳುವ ಕ್ಷುದ್ರರಾಜಕಾರಣವೇಕೆ..?! ಸ್ವಹಿತಾಸಕ್ತಿ  ಹಣದಾಹದಲ್ಲಿ ಪ್ರಗತಿ ಪಥದಲ್ಲಿ ಆಗಬೇಕಿದ್ದ ಯೋಜನೆಗಳು ಆಗುವುದು ಅನಿವಾರ್ಯವಾಗಿ ಆಗಿವೆಯಾದರೂ ಅವುಗಳಿಂತ ವೇಗವಾಗಿ ಹಗರಣಗಳೇ  ಬೆಳೆಯುವುದಾಗಿದ್ದು, ಅವುಳೆಲ್ಲವೂ ಎಂದಿದ್ದರೂ ಬಹಿರಂಗವಾಗದೇ ಇರಲಾರವೆಂಬುದಕ್ಕೆ ಉದಾಹರಣೆಗಳು ಸಾಕಷ್ಟು ಹೊರಬಂದಿವೆ;ಬರುತ್ತಿವೆಯಲ್ಲ!

ನಮ್ಮ ಕಾನೂನುಗಳೂ ಬದಲಾಗುವುದು ಯಾವಾಗ? ಅವುಗಳೋ ವರುಷಗಟ್ಟಲೇ ತಡೆಯೊಡ್ಡುತ್ತವೆಂಬ ಗೊಣಗಾಟವಂತೂ ಇದ್ದಿದ್ದೇ ಇಡೀ ದೇಶದ ಜನತೆಯಲ್ಲಿ. ರಾಜಕಾರಣಿಗಳಿಗೆ ಅವು ಬೇಗ ಇತ್ಯರ್ಥವಾಗುವಂತೆ ಸಂವಿಧಾನಿಕ ತಿದ್ದುಪಡಿಯಾಗುವುದು ಬೇಡವಾಗಿದೆಯೇ…? ಎಂಬುದೇ ಬೃಹತ್ ಪ್ರಶ್ನೆಯಾಗಿಬಿಟ್ಟಿದೆ. ದಿನವೂ ಪತ್ತಿಕೆಯಲ್ಲಿ ಅಧಿಕಾರ ದಾಹ ಹಾಗೂ ಹಗರಣಗಳಂತೂ ನಮ್ಮ ಕಣ್ಣ ಮುಂದೆ ರಾಚುತ್ತಲೇ ಸಾಲು ಸಾಲಾಗಿ ಬಂದು ಹೋಗುತ್ತಲೇ ಇರುತ್ತವೆ. ಅಯ್ಯೋ ಬಿಡಿ ಏನಾಗುತ್ತದೆ? ಒಂದಷ್ಟು ಅಂಥವರು ದಿನ ಜೈಲಿಗೆ ಹೋಗುತ್ತಾರೆ, ಜಾಮೀನು ಸಿಗುತ್ತದೆ, ಆಮೇಲೆ ಸರ್ಕಾರ ಬದಲಾಗುತ್ತದೆ ಅದು ಮುಚ್ಚಿ ಹಾಕಲ್ಪಡುತ್ತದೆ. ಅವರು ದುಡ್ಡು ಮಾಡಿಕೊಂಡು ಹಾಯಾಗಿರುತ್ತಾರೆಂಬ ವದಂತಿಯೇ…. ದೇಶ ದ್ರೋಹಿಗಳಿಗೆ ತಾವು ಭದ್ರ ತಮ್ಮಕುಟಿಲ ರಾಜಕಾರಣಕ್ಕೇ ಜಯವೆಂಬ ದುರಹಂಕಾರವೇ…

ಛೇ  ಅಧಿಕಾರಲಾಲಸೆ ಮತ್ತು ಧನಲಾಲಸೆ, ಪಕ್ಷ ಪಕ್ಷಗಳನ್ನು ಕಟ್ಟಿ ಹೊಡೆದಾಡುವ ದ್ವೇಷದ ರಾಜಕಾರಣವೇ ಮುಖ್ಯವೆನಿಸಿದೆಯೇ..? ಪ್ರಜೆಗಳ ಹಿತಾಸಕ್ತಿ ಎಂಬುದು ಚುನಾವಣೆಗಳಲ್ಲಿ ಮಾತ್ರ ನಾಟಕೀಯವಾಗಿ ಬಿಡುತ್ತದೆ. ಪ್ರಣಾಳಿಕೆ ಮತ್ತು ಆಶ್ವಾಸನೆಗಳು ಎಷ್ಟರ ಮಟ್ಟಿಗೆ ಕಾರ್ಯಗತವಾಗಿವೆ….?.

ಆದರೇನು! ಕಳೆದ ಲೋಕ ಸಭೆಯ ಚುನಾವಣೆ ಹೇಗಿತ್ತೆಂದರೆ, ಹಿಂದೆಂದೂ ಹಾಗೆ ಮಹಾಜನತೆ ತೀವ್ರ ಪ್ರತಿಕ್ರಿಯೆ ವ್ಯಕ್ತ ಪಡಿಸಿರಲಿಲ್ಲ. ಅಷ್ಟೇ ತಮ್ಮ ಬಹುಮತವನ್ನು ಭಾವನಾತ್ಮಕ ವಾಗಿ ಮಾನವತಾವಾದಕ್ಕೆ ತೋರ್ಪಡಿಸಿದ್ದಾರೆ ; ನರೇಂದ್ರ ಮೋದಿಯವರಲ್ಲಿ ವಿಶ್ವಮಾನವನನ್ನೇ ಕಂಡಿದ್ದಾರೆ. ಪ್ರಜೆಗಳ ಒಗ್ಗಟ್ಟಿನಲ್ಲೆ ಎಂದಿಗೂ ಬಲವಿದೆ ಯಶಸ್ಸಿದೆ.

ದುಷ್ಟ ರಾಜಕಾರಣಿಗಳು ಮತ್ತು ಪ್ರಜಾಪ್ರತಿನಿಧಿಗಳೂ ಒಡೆದು ಆಳುವುದರಲ್ಲಿ ಭ್ರಷ್ಟತೆ ಭಯವಿಹ್ವಲತೆಯೇ ಇರುತ್ತದೆ ಅಲ್ಲವೇ..? ಅದೊಂದು ಭಂಡತನದ ಧೈರ್ಯವಷ್ಟೇ. ಅದೆಂದಿಗಾದರೂ ಬಯಲಾಗದೇ ಇರುವುದಿಲ್ಲ, ಹಿಂದಿನ ಮುಗ್ಧ ಮನುಷ್ಯನಲ್ಲ ಒಬ್ಬ ಹಳ್ಳಿಯ ಶ್ರೀಸಾಮಾನ್ಯನೂ ಕೂಡ ಎಂಬ ಕಾಲವಿದೀಗ ನಮ್ಮ ಮುಂದೆ ಬಂದಿದೆ. ಹೊಸ ಬೆಳಕು ಹೊಸ ತಿರುವು ಕಾಣಲಾರಂಭಿಸಿದೆ ಎಂಬುದನ್ನು ಎಲ್ಲರೂ ಒಪ್ಪುವಂತಾಗಿದೆ.

ಇನ್ನಾದರೂ ನಾವು ಭಾವುಕತೆ ಭಾವೈಕ್ಯತೆಯಿಂದ ಮಾತನಾಡಿದರೆ ಅದು ಬೆಪ್ಪುತನವೆಂದು ತಮಾಷೆ ಮಾಡುವವರನ್ನು ನೋಡಿ ವಿಚಲಿತರಾಗದಿರೋಣ.  ಅಂಥವರನ್ನು ಕಂಡು ಮನದಲ್ಲೇ ನಗುತ್ತ ತಮ್ಮ ಉತ್ತಮ ಧ್ಯೇಯೋದ್ದೇಶ ಗುರಿಯಲ್ಲಿ ಸಾಗುವ ಉತ್ಸಾಹೀ ಯುವಕರೂ ಇದ್ದಾರೆ; ಹೆಚ್ಚುತ್ತಿದ್ದಾರೆ. 

ಆ ಕಾಲವೇ ಬೇರೆ ಈ ಕಾಲವೇ ಬೇರೆ ಎನ್ನುವ ವಾದದಲ್ಲಿ ಹುರುಳಿಲ್ಲವಾಗುತ್ತಲಿರುವುದೂ ಕಾಣಸಿಗುತ್ತಿದೆ.  ಒಬ್ಬ ನರೇಂದ್ರ ಮೋದಿ ಎಂಬ ನೇತಾರ  ಬರುತ್ತಾನೆ; ಆತನಿಂದ ಈ ದೇಶದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡುವಂತಾಗುತ್ತದೆಂದು ಯಾರೂ ಊಹಿಸಿರಲಾರರಲ್ಲ. ಅದೇ ಅಲ್ಲವೇ ಮಾನವನಿಗೆ ಮೀರಿದ ಅವ್ಯಕ್ತ ಅಭೂತಪೂರ್ವ ಶಕ್ತಿಯೊಂದಿದೆ ಎಂಬುದು…?! ಹೌದು ಬದಲಾವಣೆ ಎಂಬುದು ಜಗದ ನಿಯಮವಾದರೆ, ಅದೇ ಬದಲಾವಣೆಯಲ್ಲಿ ಪರಿವರ್ತನೆ ಎಂಬುದು ಜನಜೀವನದ ಸಮಸ್ಯೆಗಳಿಗೆ ಪರಿಹಾರವನ್ನೂ ಸೂಚಿಸುತ್ತದೆ.  ಇಲ್ಲವಾದರೆ, ಈ ಜಗದ ಅಸ್ತಿತ್ವಕ್ಕೆ ಬಲವಾದ ಕಾರಣವೊಂದಿದೆ ಎಂಬ ನಂಬಿಕೆಯೇ ಇನ್ನಿಲ್ಲವಾಗಿ ಬಿಡುತ್ತದೆಯಲ್ಲವೇ…?. ಎಲ್ಲವೂ ವೈಜ್ಞಾನಿಕ ಅಥವಾ ಭೌತಿಕ ಎನ್ನುವವರಿಗೂ ದಿಗ್ಬ್ರಮೆಯಾಗಿರಲಿಕ್ಕೂ ಸಾಕಲ್ಲ..

ಆದಕಾರಣ ವಿಶ್ವಮಾನವತಾ ವಾದ ಎಂಬುದು ಎಲ್ಲಕಾಲಕ್ಕೂ ಇರುವುದೇ. ಅದನ್ನೇ ಕಡೆಗಣಿಸಿ ಹಣವಿದ್ದರೇನೆ ಎಲ್ಲವೂ ಎಂದೇ ದುರಹಂಕಾರದಿಂದ ಎಲ್ಲ ಕ್ಷೇತ್ರಗಳಲ್ಲಿ, ವ್ಯಾಪಾರ ವಹಿವಾಟುಗಳಲ್ಲೂ  ದುಷ್ಟರಾಟ  ಮತ್ತು  ರಾಜಕಾರಣದಲ್ಲಿ ಭ್ರಷ್ಟರ ಕೂಟಗಳ ಅಟ್ಟಹಾಸವೇ ಮುಂದುವರೆಯುವುದಕ್ಕೇ ಕೊನೆ ಮೊದಲೆಂಬುದೇ ಇರುವುದಿಲ್ಲ. ಇಡೀ ಜಗತ್ತೇ ಸರ್ವನಾಶವಾಗುತ್ತದೆ. ಅದಕ್ಕೆ ಮನುಷ್ಯನೇ ಕಾರಣನಾಗುತ್ತಾನೆ. ಹಾಗಾಗುದೇ ಪ್ರಳವೇ ಮತ್ತೇನೂ ಅಲ್ಲ.

ಈ ದುಷ್ಟರು ಭ್ರಷ್ಟರು ಚಿಂತಿಸುವುದೇನು ಅವರಗಳ ಮುಂದಿನ ಪೀಳಿಗೆಯ ಗತಿ ಏನು?  ದ್ವೇಷ ಅಸೂಹೇ ನೀಚಸ್ವಾರ್ಥದಿಂದಲೇ ಸಂಪಾದಿಸಿ ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಅಕ್ರಮ ಆಸ್ತಿಗಳಿಸಿಟ್ಟು ಹೋಗುವುದೇ ಅವರ ಕೀಳು ಆದರ್ಶವೇನು? ಅಂಥವರ ಮಕ್ಕಳ ಭವಿಷ್ಯವೆಂದಿಗಾದರೂ ಊರ್ಜಿತವಾಗುವುದೇನು?!. ಅದಕ್ಕೂ ಬಹಳಷ್ಟು ಹೇಯವೆನಿಸುವಂತ ಉದಾಹರಣೆಗಳೆಷ್ಟಿಲ್ಲ!

“ತಂದೆ ಮಾಡಿದ ಪಾಪ ಕುಲದ ಪಾಲು. ರಾಜಕಾರಣಿಗಳು ಅಧಿಕಾಸ್ಥರು ಮಾಡಿದ ಪಾಪ ದೇಶದ ಪಾಲು”  ಇದು ಫಿಲಾಸಫಿಯಲ್ಲ(philosophy) ಫಿಜಿಯೋಯಾಂಥ್ರಫಿ(physianthropy) ಅಂದರೆ ಸಂವಿಧಾನಾತ್ಮಕವೇ ಆದ ಮಾನವೀಯ ಮೌಲ್ಯಗಳು!.

ಯಾಕೆಂದರೆ, ಬಡವ ಎಂದಿಗೂ ಬಡವನಾಗಿರಲು ಇಚ್ಛಿಸುವುದಿಲ್ಲ. ಕಷ್ಟಸಹಿಷ್ಣುತೆ ಹೋರಾಟವೇ ಅವನ ವ್ಯಕ್ತಿಗತ ಗುಣ.  ಅಂಥ ಪ್ರಾಮಾಣಿಕರಿಗೇನೂ ಈ ದೇಶದಲ್ಲಿ ಕೊರತೆ ಇಲ್ಲವಲ್ಲ, ಅವರಲ್ಲಿ ಪ್ರತಿಭಾವಂತರು, ಮೇಧಾವಿಗಳು ಹಾಗೇ ವಿಜ್ಷಾನಿಗಳಾದವರೂ ಮತ್ತು ದೇಶ ಭಕ್ತರೂ ಇದ್ದೇ ಇರುತ್ತಾರೆ.  ಸರಳ ಜೀವನದಲ್ಲೇ ಕಠಿಣ ಪರಿಶ್ರಮ ದಲ್ಲೇ ಸರ್ವೋಚ್ಛ ಗುಣಮಟ್ಟವನ್ನು ತಲುಪಬಲ್ಲವರು  ಇರುತ್ತಾರೆ. ವಿರಳವಾದರೂ ದೇಶ ಕಟ್ಟಲು ನೆರವಾಗಬಲ್ಲ ಹಣವುಳ್ಳ ಶ್ರೀಮಂತರೂ ಇರುತ್ತಾರೆ; ಉಳ್ಳವರು ಶಿವಾಲಯವ ಮಾಡುವರು ಎಂಬಂತೇ….ಎಂಬುದಕ್ಕೆ ಈಗಲೂ ಮಹಾನುಭಾವರ ಉದಾಹರಣೆಗಳೇ ಇವೆಯಲ್ಲ.

ಯೋಗಾಯೋಗವೆಂಬುದು ಫಿಲಾಸಫೀಯೇ ಆದರೂ ಎಂದಿಗೂ ಸತ್ಯ ಸತ್ಯವೇ…ಪ್ರಯತ್ತ ಪರಿಶ್ರಮ ದೊಡ್ಡದೇ ಅಲ್ಲವೇ ಬಡತನದಿಂದಲೇ ದೇಶದ ಸವೋಚ್ಛ ಸ್ಥಾನವನ್ನಲಂಕರಸಿ ವಿಶ್ವವೇ ಬೆರಗೊಡೆಯುವಂತೆ ಮಾಡಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿಜಿ  ಸಾಕಾರಣರಾಗಿದ್ದಾರೆ. ಅವರ “ಸ್ವಚ್ಛ ಭಾರತ” ಅಭಿಯಾನದೊಂದಿಗೋ ಮತ್ತೊಂದು ತಾರಕ ಮಂತ್ರ ” ಶ್ರಮಮೇವ ಜಯತೇ”

ಆದಕಾರಣ ಇನ್ನಾದರೂ, ದ್ವೇಷ ಅಸೂಯೆಗಳನ್ನು ಬದಿಗೊತ್ತಿ ಒಳಿತನ್ನು ಹಾರೈಸುತ್ತಾ ಸಜ್ಜನರಿಗೆ ಉಪದ್ರವ ಕೊಡದೇ ಇರುವುದೇ ಲೇಸಲ್ಲವೇ? ಅದು ಎಲ್ಲರಿಗೂ ಶಾಂತಿಯು ಸಹಬಾಳ್ವೆ ಅಲ್ಲವೇ…? ಅದನ್ನು ಬಿಟ್ಟು ಮೋಸ ವಂಚನೆ ಲಂಚಗಳಿಂದ ಸಂಪಾದಿಸುವವರು ಹೆಚ್ಚಿದಂತೆ ಅವರವರ ನಡುವೇಯೇ ಪೈಪೋಟಿಗೆ ಬಿದ್ದು ಕೊಲೆ ಸುಲಿಗೆ ದರೋಡೆಗಳಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವವರದನ್ನೂ ನೋಡುತ್ತಿದ್ದೇವೆ. ಹೀಗೆ ಅನ್ಯಾಯ ಅಕ್ರಮ ಗಳಿಕೆಯಿಂದ ಶ್ರೀಮಂತರಾಗುವುದೇ ಸರಿಯೆಂಬ ಧೋರಣೆ ಬೆಳಿದಂತೆಲ್ಲ ಬದುಕಿನ ಭದ್ರತೆ ಎಂಬುದು ಪ್ರಶ್ನೆಯಾಗಿ ಜೀವಭಯವೇ ಕಾಡುವುದೂ ಹೆಚ್ಚಿದೆಯಲ್ಲವೇ?.

ಕಡು ಬಡವರಲ್ಲಿ ಬಡವರು ಹಿಂದೆಂದಿಗಿಂತಲೂ ಬುದ್ಧಿವಂತರಾಗುತ್ತಿದ್ದಾರೆ. ಬಡವರು ರೊಚ್ಚಿಗೆದ್ದರೆ ಆಗುವ ಅನಾಹುತಗಳು ಊಹೆಗೂ ಸಿಗುವುದಿಲ್ಲ. ಈ ಕಾರಣಕ್ಕೇ ನಕ್ಸಲರು ಭಯೋತ್ಪಾದಕರೂ ವಿಚ್ಛಿದ್ರ ಕಾರಕರೂ ಹುಟ್ಟಿಕೊಳ್ಳುವುದು ಅವರಿಗೆ ಕುಮ್ಮಕ್ಕೂ ಕೊಡುವವರೂ ಇರುವುದೂ ದೇಶದ ಕ್ಷದ್ರ ಹೇಯ ರಾಜಕಾರಣದಲ್ಲೇ.

ಗಡಿ ನಾಡಿನಲ್ಲೇ ಕಾಲು ಕೆರೆದು ಯುದ್ಧಕ್ಕೆ ಸನ್ನಾಹ ಮಾಡುತ್ತಿದೆ ಪಾತಕಿ ಪಾಕೀಸ್ತಾನ. ಮನುಷ್ಯ ವಿಜ್ಞಾನ-ತಂತ್ರಜ್ಞಾನದಲ್ಲಿ ಅತಿವೇಗಗತಿಯಲ್ಲಿ ಮುಂದುವರೆದಿದ್ದಾನೆ ಅವನ ನಾಶ ಅವನಿಂದಲೇ ಆಗಬೇಕೇ… ಭಾರತ ಮನಸ್ಸು ಮಾಡಿದರೆ ಪಾಕ್ ಎಂಬುದೊಂದು ನೆಲವೇ ವಿಶ್ವ ನಕ್ಷೆಯಲ್ಲಿ ಇರುವುದಿಲ್ಲ. ಬಂಜರು ಬೆಂಗಾಡಾಗಿ ಬಿಡುತ್ತದೆ.  ಭಾರತಕ್ಕೆ ಅದರಿಂದ ಒಂದಿಷ್ಟು ಗಡಿನಾಡು ಹಾಳಾದೀತು ಒಂದಿಷ್ಟು ಕೋಟಿ ಜನಸಂಖ್ಯೆ ನಾಶವಾದೀತು. ಮುಸ್ಲಿಂ ರಾಷ್ಟಗಳು ತಿರುಗಿಬಿದ್ದಾವು. ಅದೆಂದಿಗೂ ಭಾರತಕ್ಕೆ ಇಷ್ಟವಿಲ್ಲವೇ ಇಲ್ಲ ಅಲ್ಲವೇ…? ಅಣ್ವಸ್ತ್ರ ಗಳ ಮೂರನೇ ಮಹಾಯುದ್ಧ ಯಾರಿಗೆ ಬೇಕು ಹೇಳಿ?

ತನ್ನೊಳಗಣ ಕಿಚ್ಚು ತನ್ನ ಸುಟ್ಟಲ್ಲದೇ ಎಂಬಂತೇ ನಮ್ಮ ಭಾರತಾಂಬೆಯ ಮೇಲೇ ಹಗೆ ಸಾಧಿಸುವುದರಿಂದ ಅವರ ಸರ್ವನಾಶ ಅವರೇ ತಂದುಕೊಳ್ಳುವುದು. ಖಂಡಿತ.  ಎಂಬುದೇನೂ ತಾತ್ವಿಕತೆಯ ನುಡಿಯಲ್ಲ; ಅದೇ ಭಾರತೀಯರ ಅಚಲ ನಂಬಿಕೆಯಲ್ಲದೇ ವಿಶ್ವ ಮಾನವತೆಯೇ ಆಗಿದೆಯಲ್ಲವೇ  ?

ಅಷ್ಟಕ್ಕೂ   ದಿನೇ ದೀನೇ ಗುಣಕ್ಕೇ ಮತ್ಸರ ಬೆಳೆಯುವುದನ್ನು ಕಂಡಾಗ, ಅಯ್ಯೋ ಭಗವಂತಾ ಈ ವ್ಯವಸ್ಥೆ ಇನ್ನೂ ಅವ್ಯಸ್ಥೆಯಾಗದಿರಲಿ ಎಂದೇ  ಹಿರಿಯರು ಸಂಕಟ ಪಡುತ್ತಾ ಅತೀವ ವ್ಯಥೆಪಡುತ್ತಿರುವುದೂ ಇನ್ನಾದರೂ ಮೋದೀಜಿ ಅವರ ನೇತೃತ್ವದಲ್ಲಿ ಒಳ್ಳೆಯದಿನಗಳು ಬರಲಿ ಎಂದೇ ಹಾರೈಸುವವರ ಸಂಖ್ಯೆ ಹೆಚ್ಚುತ್ತಲೇ ಇದೆಯಲ್ಲವೇ..?

ಯಾಕೆಂದರೆ, ಸಮಾಜವೇ ಅಸ್ವಸ್ಥವಾಗತೊಡಗಿದರೆ.ನಿರಾಶೆ ಹತಾಶೆಗಳಿಂದ ಕೃದ್ಧರಾಗಿ ಹೋಗುವ ಯುವಕರು ಗುಂಪು ಕಟ್ಟಿಕೊಂಡು ಭ್ರಷ್ಟರ ವಿರುದ್ಧ ತಿರುಗಿ ಬೀಳುತ್ತಾರೆ. ಮುಂದೆ ಎಂತಹ ದುಷ್ಪರಿಣಾಮವೋ ರಕ್ತಪಾತವೋ ಎಂಬುದನ್ನು ಊಹಿಸಲೂ ಆಗದಲ್ಲ….

ನೋಡಿ, ಸ್ವಾತಂತ್ರ್ಯ ಪೂರ್ವದಲ್ಲಿ ನಾವು ಭಾವೈಕ್ಯತೆಯಲ್ಲಿ ಒಕ್ಕೊರಲಿನಿಂದ “ ವಂದೇ ಮಾತರಂ” ಎನ್ನುತ್ತ  ಬ್ರಿಟಿಷರ ವಿರುದ್ಧ ಹೋರಾಡಿದವರು ಅಹಿಂಸೆಯಿಂದಲೇ ಸ್ವಾತಂತ್ರ್ಯ ಪಡೆದವರು.. ಇಂದಿಗೆ ನಮ್ಮ ಪ್ರಜಾಪ್ರಭುತ್ವ ಇಡೀ ವಿಶ್ವದಲ್ಲೇ ದೊಡ್ದದೆಂದು ಹೆಸರಾಗಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಸಾರ್ಥಕವಾಗಿದೆ? ಇದೀಗ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ನೂರ ಇಪ್ಪತ್ತು ಕೋಟಿ ಜನತೆಗೆ ಹೃದಯಾಂತರಾಳದಿಂದ ಕರೆನೀಡಿ ಭಾವೈಕ್ಯತೆ ಸಾರುತ್ತಲೇ ಪ್ರಚಂಡ ಬಹುಮತಗಳಿಸಿ ಪ್ರಧಾನಿಯಾಗಿ ಬಂದಿದ್ದಾರೆ ನರೇಂದ್ರ ಮೋದಿಜಿ. ಅವರ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದರೆ ಅದನ್ನು ಮೋದಿ ಮ್ಯಾಜಿಕ್ ಎಂದು ಮಾಧ್ಯಮಗಳು ಬಿಂಬಿಸುವುದು ನಿಜಕ್ಕೂ ಖಂಡನೀಯ.

ಯಾಕೆ, ಪತ್ರಕರ್ತರಿಗೆ ಮಾಧ್ಯಮಗಳಿಗೆ ದೇಶಾಭಿವೃದ್ಧಿ ಮತ್ತು ಪ್ರಗತಿ ನಿಜಕ್ಕೂ ಬೇಡವೇ…ನಾವು ಮನಸ್ಸು ಮಾಡಿದರೆ, ಪ್ರಪಂಚದಲ್ಲೇ ನಮ್ಮ ಭಾರತ ಶ್ರೀಮಂತ ರಾಷ್ಟ್ರವಾಗ ಬಹುದೆಂಬುದು ಅವರಿಗೂ ತಿಳಿದಿರುವುದೇ ಅಲ್ಲವೇ…?  ಅದನ್ನು ಬಿಟ್ಟು ಬಿಸಿಬಿಸಿ ಸುದ್ಧಿ ಮಾರುವ ಪತ್ರಿಕೆಯ ಪ್ರಸಾರ ಹೆಚ್ಚಿಸುವ ಚಾನೆಲ್ ಗಳಿಗೆ ಟಿಆರ್‍ ಪಿ ಹೆಚ್ಚಿಸಿಕೊಳ್ಳುವ ಹುನ್ನಾರವೇ ಮೇಲಾಗಬಾರದಲ್ಲವೇ… ಯಾಕೋ ಬಹುತೇಕ ಚಾನೆಲ್ ಗಳಲ್ಲಿ ಪೈಪೋಟಿ ಕಾಣುತ್ತಿದೆಯಲ್ಲವೇ?  ಯಾಕೆಂದರೆ, ಪ್ರತಿಯೊಂದು ಪತ್ರಿಕೆಯೂ ಯಾವುದೋ ಒಂದು ಪಕ್ಷದ ಮಖವಾಣಿಯಾಗಿರುತ್ತದೆ.  ಹಿರಿಯ ಪತ್ರಕರ್ತ ದಿ|| ಖಾದ್ರಿ ಶಾಮಣ್ಣ ತಮ್ಮ ಸಂಪಾದಕಿಗಳಲ್ಲಿ ವ್ಯಥೆಯಿಂದ ಪುನರುಚ್ಚರಿಸುತ್ತಿದ್ದ ಮಾತೆಂದೆರೆ, “ ಈ ದೇಶದ ಭವಿಷ್ಯ ಹಿಡಿಯಷ್ಟು ಮಂದಿಯ ಕಪಿಮುಷ್ಟಿಯಲ್ಲಿದೆ”. ಹಾಗೆ ನೋಡಿದರೆ ಈ ಹಿಡಿಯಷ್ಟು ಮಂದಿ ಯಾರು? ಕೋಟಿಗಟ್ಟಲೆ ಹಣ ಸಂಪಾದಿಸಿರುವ ರಾಜಕಾರಣಿಗಳೇ? ಬಂಡವಾಳ ಶಾಹಿಗಳೇ?

ಅವರಿಗೆಲ್ಲರಿಗೂ ನಮ್ಮ ದೇಶಾಭಿವೃದ್ಧಿಯಾಗುವುದೂ ಅವರೂ ಇಲ್ಲೇ ನೆಲೆಸಿ ವ್ಯಾಪಾರ ವಹಿವಾಹಿಟಿನಲ್ಲಿ ಹೆಮ್ಮೆಯಿಂದಲೇ ದೇಶ ಬೆಳೆಸುವುದು ಬೇಡವೇ? ಹೊರದೇಶಗಳಿಗೆ ನಾವು ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವುದರಿಂದ ನಮ್ಮ ನಿರುದ್ಯೋಗ ಸಮಸ್ಯೆಗಳಿ ಪರಿಹಾರವೂ ಅನೇಕ ವಿಧದಲ್ಲಿ ಸಿಗುತ್ತದಲ್ಲವೇ… ಐಟಿ ಬಿಟ ಗಳು ನಮ್ಮ ದೇಶಕ್ಕೆ ಬರುವ ಮುನ್ನ ನೀವೇ ಯೋಚಿಸಿ ಸರ್ಕಾರಿ ಕೆಲಸಕ್ಕೇ ಜೋತು ಬಿದ್ದುಕೊಳ್ಳುವುದಾಗಿತ್ತು ನಮ್ಮ ಯುವಕರು.  ಈಗ ಬೆಂಗಳೂರಿಗೆ ಬಂದರೆ ಖಂಡಿತ ದುಡಿಮೆ ನಾಲ್ಕು ಸಂಪಾದನೆ ಅಷ್ಟೇ ಅಲ್ಲ ಲಕ್ಷಗಟ್ಟಲೇ ಗಳಿಸಲೂ ಬಹುದು ಒಳ್ಳೆಯ ರೀತಿಯಲ್ಲೇ ಎಂಬ ನಂಬಿಕೆಯೆ ಹೆಚ್ಚುತ್ತಿದೆಯಲ್ಲವೇ…?

ರಾಜಕೀಯವೆಂದರೇನೆ ಪರಸ್ಪರರಲ್ಲಿ ನಿಷ್ಪಕ್ಷಪಾತ ಧೋರಣೆ ಹುಡುಕುವುದೂ ದಡ್ಡತನವೇ ಅನ್ನಿಸಿಬಿಟ್ಟಿದೆ ಮಹಾಜನತೆಗೆ ಇದು ಹೋಗಬೇಕಲ್ಲ…  ಬಡವನಿಗೆ ಸತ್ತಮೇಲೆ ಪಿಂಚಣಿ ಸಿಗುವ ತಬರನ ಕಥಗಳ ಉದಾಹರಣೆಗಳು ಇನ್ನಿಲ್ಲವಾಗಬೇಕು.

ಕಳೆದ ಹಿಂದಿನ ದಶಕಗಳಲ್ಲಿ ಸುದೀರ್ಘಕಾಲ ದೇಶಾಡಳಿತ ನಡೆಸಿದ ಪಕ್ಷವೇ ಕೋಟ್ಯಾಧಿಪತಿ ರಾಜಕಾರಣಿಗಳನ್ನು ಹುಟ್ಟುಹಾಕಿದ್ದು ಮತ್ತು ಬಹುಕೋಟಿ ಹಗರಣಗಳ ವಾರಸುದಾರರೂ ಬೆಳಕಿಗೆ ಬರುವಂತಾದುದು ಒಂದು ಮಹತ್ ಸಾಧನೆಯೇ ಎಂದು ಜಗಜ್ಜನಿತವಾಗಿಬಿಟ್ಟಿದೆ. ಹಾಗೆ ದಶಕಗಳೇ ಪ್ರಬಲವೆನಿಸಿದ್ದ ಪಕ್ಷ ಇಂದಿಗೆ ಪೂರ್ಣ ನೆಲ ಕಚ್ಚಿದ್ದು ದೇಶದ ಮಹಾಜನತೆಯ ದೃಢಸಂಕಲ್ಪದಿಂದಲೇ. ಅಂದಮೇಲೆ  ಇದೀಗ ಆ ಪಕ್ಷವೇ ವಿರೋಧವಲ್ಲದ ವಿರೋಧ ಪಕ್ಷವಾಗಿರುವುದಲ್ಲದೇ, ಆ ಪಕ್ಷವೂ ಸೇರಿದಂತೆ ಮತ್ತಿತರೆ ವಿರೋಧ ಪಕ್ಷಗಳಲ್ಲಿ ನಿಜಕ್ಕೂ ದೇಶಾಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ, ವ್ಯಕ್ತಿಗತ ವೈಶಮ್ಯವೇನೆ ಇರಲಿ ಮರೆತು, ಮೋದಿಯವರ ಸರ್ಕಾರವನ್ನು ವೃಥಾ ಕೆಟ್ಟ ಟೀಕೆಗಳಿಂದ ನಿಂದಿಸುವುದನ್ನು ಬಿಟ್ಟು, ಅವರ ಆಡಳಿತ ವೈಖರಿ ಏನಿದ್ದೀತೆಂದು ತಾಳ್ಮೆಯಿಂದಲೇ ಮುಂದಿನ ಐದು ವರುಷಗಳೇ ಕಾದು ನೋಡಬಹುದಲ್ಲವೇ? ಯಾಕೆಂದರೆ, ನಿಂದಕರಿರಬೇಕು ನಿಜ. ನಿಂದನೆಯಲ್ಲೂ ನೀತಿ ಎಂಬುದಿರುತ್ತದೆ. ಅದೂ ನೀಚತನ ವಾಗಿಬಿಟ್ಟರೆ, ಇದ್ದಬದ್ದ ಸ್ಥಾನಮಾನ ಗೌರವಗಳೂ ಇನ್ನಿಲ್ಲವಾಗುತ್ತದೆ ಅಲ್ಲವೇ? ಪ್ರಜಾಪ್ರಭುತ್ವದ ಹೆಸರಲ್ಲಿ ಏನು ಮಾಡಿದರೂ ನಡಯುತ್ತದೆ ತಮ್ಮ ಬಲವೇ ಬಲ ಎಂದು ಮೆರೆದದ್ದು ಸಾಕಲ್ಲವೇ…? ಇಲ್ಲವಾದರೆ, “ತನ್ನೊಳಗಣ ಕಿಚ್ಚು ತನ್ನ ಸುಟ್ಟಲ್ಲದೇ… ಎಂಬಂತೇ ಆಗುವುದು ಸಾರ್ವಕಾಲಿಕ ಸತ್ಯ.

`ಭಾವೈಕ್ಯತೆಯಲ್ಲಿ ಸರ್ವಜನಾಂಗಗಳೂ ಒಂದಾಗುವುದೂ ಮತ್ತು ಮಾನವತಾವಾದವನ್ನು ಎತ್ತಿ ಹಿಡಿಯುವುದೆಂದರೆ ಅದು  ಖಂಡಿತ ಭ್ರಮೆಯಾಗಲಾರದು… ದೇಶದ ಜನಸಂಖ್ಯೆ ಹೆಚ್ಚಿದಂತೆಲ್ಲ ಅವಿದ್ಯಾವಂತರೂ ಎಚ್ಚೆತ್ತು ಕೊಳ್ಳವ ಹಾಗೆ ವಿದ್ಯಾವಂತರಲ್ಲಿ ಸತ್ವಶಾಲಿ ಯವಶಕ್ತಿಯೇ ಅಡಗಿದೆ. ಅವರಲ್ಲಿ ದಿನೇ ದಿನೇ ಬುದ್ಧಿವಂತರಾಗಿ ಮುನ್ನಡೆಯುತ್ತಿರುವವರ ಸಂಖ್ಯೆಗೂ ಕಡಿಮೆ ಏನಿಲ್ಲ ಎಂಬ ನಂಬಿಕೆ  ನಮ್ಮ ಹಿರಿಯರಲ್ಲಿ ಮಾತ್ರವಲ್ಲ, ಕಳೆದ ಕೆಲವು ವರುಷಗಳಿಂದ ರಾಜಕಾರಣಿಗಳಲ್ಲೂ ಒಡಮೂಡುತ್ತಿದೆ ಎಂಬುಧು  ಪ್ರಾಮಾಣಿಕರಾಗಿ ದೇಶ ಕಟ್ಟಲು ಉತ್ಸಾಹಿಗಳಾಗಿರುವ ಯುವಕರಲ್ಲಿ ನಿಚ್ಛಳವಾಗಿ ಕಂಡುಬರುತ್ತಿದೆ, ನಮ್ಮದೇಶ ಮುಂದುವರೆಯುವುದು ಅವರಿಗಿಂತ ಶ್ರೀಮಂತವಾಗುವುದು ಅಮೇರಿಕಾಕ್ಕೆ ಮತ್ತು ಅದರ ಊರೂಗೋಲಾಗಿರುವ ಪಾಕ್ ಗೆ, ಹಾಗೂ ಚೀನಾಕ್ಕೆ ಬೆಡದಿರಬಹುದು

ಆದರೇನು! ನಮ್ಮ ದೇಶದ ಭವಿಷ್ಯದಲ್ಲಿ ಹಂತ ಹಂತವಾಗಿ ಸುಧಾರಣೆ ಕಾಣುತ್ತದೆಂಬ ಭರವಸೆಯಲ್ಲಿ ಮಹಾಜನತೆಯಲ್ಲಿ ಇದೆ. ಅದನ್ನು ಹುಸಿ ಮಾಡುವುದು ಯಾವ ದುಷ್ಟಶಕ್ತಿಗಳಿಂದಲೂ ಸಾಧ್ಯವಾಗದೆಂದರೆ ಉತ್ಪ್ರೇಕ್ಷೆಯಾಗಲಾರದು. ಬರಡು ನೆಲ ಹಸನಾದುದಿದೆ ಕೊನರು ಚಿಗುರೊಡೆದು ಹಸಿರಾದುದೂ ಇದೆಯಲ್ಲ… ಒಬ್ಬ ವ್ಯಕ್ತಿ ದೇಶ ಕಟ್ಟಬಲ್ಲರೇ ಎಂಬ ಪ್ರಶ್ನೆಗೆ ಅನಿವಾಸಿ ಭಾರತೀಯರು ಒಕ್ಕೊರಲಿನಿಂದ ಮಾರ್ಮಿಕವಾಗಿ ಉತ್ತರಿಸಿರುವಾಗ ಅದಕ್ಕಿಂತ ಇನ್ನೇನು ಬೇಕು..? ಅಂತಹ ಉತ್ತರ ವಿದೇಶೀ ನೆಲದಲ್ಲಿ  ಪಡೆದ ಭರತಮಾತೆ ನಿಜಕ್ಕೂ ಧನ್ಯಳೇ ಸರಿ.

ನಮ್ಮ ರಾಷ್ಟ್ರ ಕವಿ ಕುವೆಂಪು ಅವರ “ಜೈ ಭಾರತ ಜನನಿಯ ತನುಜಾತೆ….’ ಗೀತೆಯ ಸಾಲುಗಳಿವು.
ಸರ್ವಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ

ಜೈ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ|……

ಜಯ ಜಯ ಜಯ ಹೇ ಭಾರತ ಮಾತೆ…

ಸಾಮಾಜಿಕ ಜಾಲತಾಣಗಳಲ್ಲಿ ನಾನೆಷ್ಟರವನು….???!!!


ಅಂತರ್ಜಾಲವೆಂಬ ಮಹಾಜಾಲದಲ್ಲಿ.. ಜಾಲತಾಣಗಳು ಅಸಂಖ್ಯಾನೇಕಾನೇಕ!! ಸಾಮಾಜಿಕ ಜಾಲತಾಣಗಳಲ್ಲಿ ಮಹಾ ಪ್ರಾಜ್ಞರು, ಉಚಿತ ಮಾಹಿತಿ ಹಂಚಿಕೊಳ್ಳುವ ಸಮಯಾ ಸಂದರ್ಭಗಳಲ್ಲಿ ಸಹಾಯ ಮಾಡುವ ಮಹಾನುಭಾವರೂ, ಗೌರವಾನ್ವಿತರಾದ ಮಹಿಳೆಯರೂ ಮತ್ತು ಕಿರಿಯರಲ್ಲಿ ಹಿರಿಯರನ್ನೂ ಹಿಂದೆ ಹಾಕುವಂತ ಜಾಣ ಜಾಣೆಯರೇ ಇರುತ್ತಾರೆ. ಅಲ್ಲಿ ಏನೆಲ್ಲ ಮಾಹಿತಿ ಮತ್ತು ಬೇಕಾದ ವಸ್ತುಗಳೂ ಮುಂಬೆರಳುಗಳಿಗೆ ಎಟಕುವಂತಿರುವ ಇಂದಿನ ಆಧುನಿಕ ಯುಗದಲ್ಲಿರುವ ನಾವುಗಳೂ ನಿಜಕ್ಕೂ ಪುಣ್ಯಶಾಲಿಗಳೇ. ಮಾಹಿತಿ ಹುಡುಕಲು ಗೂಗಲ್ ನಂತ ಮಹಾ ಮುದಿಗೂಬೆ..(ಈಗ ಅದಕ್ಕೆಷ್ಟು ವಯಸ್ಸೆಷ್ಟೋ ತಿಳಿದವರು ಹೇಳಬೇಕು) ಅದರ ವಯಸ್ಸಿಗೂ ಮೀರಿದ ಅನುಭವ ಕಣಜಗಳಿರುವ ತಾಣಗಳಿಗೆ ನಮ್ಮನ್ನು ಕರೆದೊಯ್ಯುತ್ತದೆ!  ಎಷ್ಟೆಂದರೂ ಮನುಷ್ಯ ಸಂಘಜೀವಿಯಲ್ಲವೇ ಸಾಮಾಜಿಕ ಜಾಲತಾಣಗಳನ್ನು ಹುಟ್ಟು ಹಾಕಿದ್ದಾನೆ!

ಜಾಲತಾಣಗಳಲ್ಲಿ ಇದೀಗ ಪೇಸ್ ಬುಕ್ ಬಹಳ ಮಂಚೂಣಿಯಲ್ಲಿದೆಯಲ್ಲವೇ… ? ಕಂಪ್ಯೂಟರ್‍ ಪರಿಭಾಷೆಯಲ್ಲಿಯೇ ಹೇಳಬೇಕೆಂದರೆ ಇದು ವರ್ಚುಯಲ್ ವರ್ಲ್ಡ್ ಅಥವಾ ವರ್ಚುಯಲ್ ರಿಯಾಲಿಟಿ ವರ್ಲ್ಡ್ ಎಂದರೂ ಸರಿಯೇ… ಯಾಕೆಂದರೆ, ಇದು ಮಿಥ್ಯಾ ಪ್ರಪಂಚವೇ ಎಂದರೂ, ಇಲ್ಲಿ ನಾವು ನೋಡುವುದೆಲ್ಲವೂ ಮಿಥ್ಯೆಯೇ ಎಂದು ತಿಳಿಯಲಾಗದಲ್ಲ. ಈ ಮಾಹಿತಿಯುಗದಲ್ಲಿ ಇಲ್ಲಿ ಮಹಾಹೂರಣವೇ ಅಡಗಿರುತ್ತದೆ. ಅದನ್ನು ಜಾಲಾಡಿ ಹುಡುಕಿ ಪಡೆದುಕೊಂಡು ಪ್ರಯೋಜನ ಪಡೆಯುವವರೇ ನಿಜಕ್ಕೂ ಬುದ್ಧಿವಂತರು. ಇಲ್ಲಿ ಅತಿ ಬುದ್ಧಿವಂತರು ಮುಗ್ಧರೂ, ಅಪ್ರಬುದ್ಧರೂ ನಿಮಮ್ಮ ಖಾಸಗಿ ಮಾಹಿತಿ ಕದಿಯುವ ಕಳ್ಳರೂ, ಸುಳ್ಳರೂ, ಭಂಡರೂ, ಭಯೋತ್ಪಾದಕರೂ ಇನ್ನೂ ಎಂಥೆಂಥ ವಿಚಿತ್ರ ವಿಕೃತ ಮನಸ್ಕರೂ ಇರುತ್ತಾರೆ ಅಲ್ಲವೇ… ಅದಿರಲಿ, ಇಲ್ಲಿ ಸಹೃದಯಿಗಳೂ, ವಿಚಾರಶೀಲರು, ಖ್ಯಾತ ಸಾಹಿತಿಗಳೂ, ಕಲಾವಿದರೂ, ಸಿನಿಮಾ ನಟ ನಟಿಯರೂ, ವೈದ್ಯರೂ, ಸಮಾಜ ಸುಧಾರಕರೂ, ರಾಜಕಾರಣಿಗಳೂ, ರೌಡಿಗಳು, ರಸಿಕರು ಕಾಮುಕರು, ಅಶ್ಲೀಲ ತಾಣಗಳಲ್ಲಿ ವಿಜೃಂಭಿಸುವ ಜಗದೇಕ ಸುಂದರ, ರಮಣಿಯರು ಸ್ಪುರಧ್ರೂಪಿ ರಮಾರಮಣರೂ, ಇವರಲ್ಲದೇ ಮಹಾನ್ ಸಾಧಕರೂ ಸಂತರೂ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದ್ದರಿಂದಲೇ, ಇದನ್ನೂ ವರ್ಚುಯಲ್ ನಲ್ಲೇ ರಿಯಾಲಿ ವರ್ಲ್ಡ್ ಎಂದು ಕರೆದಿದ್ದಾರೆ. ಆನ್ ಲೈನ್ ಜಾಲತಾಣಗಳ ಈ ಮಹಾ ಸಮುದ್ರದಲ್ಲಿ ಈಗ ನಾನು (ಕಂಪ್ಯೂಟರ್ ನಲ್ಲಿ ಒಬ್ಬ ಸಾಮಾನ್ಯ ಶಿಕ್ಷಕನಾಗಿದ್ದ ವನಾಗಿಯೂ)ನನ್ನ ಅನುಭವದಲ್ಲಿ ಹೇಳಲೇ ಬೇಕೆನಿಸಿದ ಒಂದಿಷ್ಟು ವಿಷಯಕ್ಕಷ್ಟೇ ಬರುವ ಪ್ರಯತ್ನ ಮಾಡುತ್ತೇನೆ.

ಮೊದಲು ಇದನ್ನು ಓದಿ- ಕಂಪ್ಯೂಟರ್‍ ತಂತ್ರಜ್ಞಾನದಲ್ಲಿ ನಮಗೆ ಬೇಕು ಬೇಡ ಎಂಬುದನ್ನು ಉಳಿಸಿಕೊಳ್ಳಲಿಕ್ಕೆ ಎಷ್ಟು ಸರಳವಾಗಿದೆ ಎಂದರೆ, ನಾವು ಫೀಡ್ ಮಾಡುವುದೇನೆಲ್ಲವೂ ಒಟ್ಟಾರೆ ತಾತ್ಕಾಲಿಕ ಮೆಮೊರಿ  ರ್ಯ್ಯಾ ಮ್ (RAM)ಸ್ವೀಕರಿಸುತ್ತಿರುತ್ತದೆ.  ಅದನ್ನು ನಾವು ಅದೇ ತಾತ್ಕಾಲಿಕ ಮೆಮೊರಿಯಲ್ಲೇ ನಮಗಿಷ್ಟಬಂದಂತೇ  ಪರಿಷ್ಕರಿಸಿ ನಮಗೆ ಸರಿಯೆನಿಸಿದರೆ ಮಾತ್ರ, ಇನ್ನೊಂದು ಕಮಾಂಡ್ ಕೊಟ್ಟು ಶಾಶ್ವತ ಮೆಮೊರಿ-ಸ್ಟೋರೇಜ್ ಡಿಸ್ಕ್ ಗೆ ಕಳುಹಿಸುತ್ತೇವೆ ಅಲ್ಲವೇ…? ನಾನೂ ಕಂಪ್ಯೂಟರ್‍ ಶಿಕ್ಷಕನಾಗಿ  ಕಂಡುಕೊಂಡ ಪರಮ ಸತ್ಯವೆಂದು ಪ್ರಾರಂಭಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಇದನ್ನೇ ಹೇಳುತ್ತೇನೆ.
ಮೇಲೆ ಹೇಳಿದುದನ್ನೇ ಮನುಷ್ಯನಿಗೂ ಹೋಲಿಸಿ ನೋಡಿ,

ಮುಂದುವರೆದ ಮಾಹಿತಿಯುಗದಲ್ಲಿ ಸೋಷಿಯಲ್ ನೆಟ್ ವರ್ಕ್ ಗಳು ಆನ್ ಲೈನ್ ನಲ್ಲಿ ಬಹಳಷ್ಟು ಕಾಣಸಿಗುತ್ತವೆ. ಈಗ ಬಹಳ ಮುಂಚೂಣಿಯಲ್ಲಿದೆಯೆಂದೇ ಕೇಳಿಬರುತ್ತಿರುವುದೆಂದರೆ ಫೇಸ್ ಬುಕ್! ಮೊಬೈಲ್ ಇದ್ದವರ ಕೈಯಲ್ಲಿ ಇಂಟರ್‍ ನೆಟ್ ಯ್ಯಾಕ್ಸೆಸ್ ಇದೆಯೆಂದರೆ, ಫೇಸ್ ಬುಕ್ ನಲ್ಲಿ ಖಾತೆ ಇಲ್ಲದೇ ಇರುವುದಿಲ್ಲ. ಇಲ್ಲಿ ವಯಸ್ಸಿನ ಬೇಧವೆಂಬುದಿಲ್ಲ… ಎಲ್ಲವೂ ಮುಕ್ತ ನೋಟವೇ ಸಮಾಲೋಚನೆಯೇ…  ಯುಕ್ತಾಯುಕ್ತತೆ ಯಾವುದೆಂದು ಅದನ್ನು ಸ್ವೀಕರಿಸುವುದು/ಬಿಡುವುದಕ್ಕೆ (ಬೇಕಾದುದಷ್ಟನ್ನೇ ಮೆಮೊರಿಯಲ್ಲಿ ಸೇವ್ ಮಾಡಿಕೊಳ್ಳುವುದಕ್ಕೆ)ಎಲ್ಲರೂ ಸರ್ವಸ್ವತಂತ್ರರೂ ಕೂಡ.  ಆದರೆ, ಕೇಳುವುದರಿಂದ ಅಥವಾ ಏನನ್ನೂ ಓದುವುದರಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಒಟ್ಟಾರೆಯಾಗಿ ನಮ್ಮ ತಲೆಗೆ ಬಂದುದನ್ನು ಮಿದುಳಲ್ಲಿ ಸೇವ್ ಮಾಡಿಕೋಳ್ಳುವಾಗ, ಯಾವುದು ಒಳ್ಳೆಯದು ಕೆಟ್ಟದ್ದೂ ಎಂಬ ತಾರ್ಕಿಕ ಮತ್ತು ತಾರತಮ್ಯ ದೃಷ್ಟಿಯಿಂದ ಆಲೋಚಿಸಿ ವಿವೇಚಿಸಿ “ಜ್ಞಾನಸಂಸ್ಕರಣೆ” ಮಾಡಿಕೊಳ್ಳಬೇಕಾಗುತ್ತದೆ. …
‌ಇತ್ತೀಚೆಗೆ ನಾನು ಫೇಸ್ ಬುಕ್ ನಲ್ಲಿ ನಾಲ್ಕು ಸಾಲಿನ ಬರಹವೊಂದಕ್ಕೆ ಕಾಮೆಂಟ್ ಮಾಡಿ “ಮಹಾ ಅಪರಾಧ” ಮಾಡಿದೆನೇ…? ಜನರೇಷನ್ ಗ್ಯಾಪ್ ನಲ್ಲಿ  ಭಾಹಳ ದೊಡ್ಡ ಕಂದಕವಿದೇ ಕಣ್ರೀ ಅದನ್ನು ದಾಟಲು ಹೋದ್ರೆ ಸುಮ್ಮನೆ ಟೆನ್ಷನ್ ಕಣ್ರೇ…. ಫೇಸ್ ಬುಕ್ ನಂಥ ಮಹಾ ಸೋಷಿಯಲ್ ನೆಟ್ ವರ್ಕ ನಲ್ಲಿ ಹಾಗೆ ಸುಮ್ಮನೇ ವಿಡಿಯೋನೋ, ನನ್ನ ಮುದಿ ಫೋಟೋ ನೋಡಲಿ ಬಿಡಲಿ ನನ್ನ ವಿವಿಧಭಂಗಿಗಳನ್ನೋ ,ಮತ್ತೇನನ್ನೋ ಷೇರ್‍ ಮಾಡಿಕೊಂಡು ಇಲ್ಲವೇ, ಇತರರ ಸೈಟ್ ನಲ್ಲಿ ಕಂಡುದ್ದು  ಇಷ್ಟವಾಗಲಿ ಆಗದಿರಲಿ(ಕಾಮೆಂಟ್ ಮಾಡದೇನೆ) ಲೈಕ್ ಅಂತ ಕುಟ್ಟಿದರೆ ಸಾಕು, ಯಾಕೆಂದರೆ, ಹೊಗಳಿ ಕೆಟ್ಟವರುಂಟೇನ್ರೀ…. ನಾಲ್ಕಾರು ಸಮಾನವಯಸ್ಕರು/ ಒಳ್ಳೆಯ ಹುಡುಗ/ಗಿಯರೂ ಇದಾರೆ ಅವರು ಸ್ನೇಹಿರಾದರೆ ಸಾಕು ಸಂತೋಷದಿಂದ ಕಾಲಾಹರಣ ಮಾಡೋದೇ ಬೆಸ್ಟ್ ರೀ…
ಎಲ ಎಲಾ..! ಈಗಿನ ಹುಡುಗ/ಗಿಯರು ಹೆಚ್ಚಿಗೆ ಸಾಲು ಬರೆದು ಪೋಸ್ಟ್ / ಕಾಮೆಂಟ್ ಮಾಡಿ ಸಿಕ್ಕಿ ಹಾಕ್ಕೋಳ್ಳಲ್ಲ ನೋಡ್ರಿ.. ಅವರ ಕಡು ಜಾಣ ಜಾಣೆಯರು ಕಣ್ರೀ!  ಅವರಷ್ಟು ಚುರುಕು ಬುದ್ಧಿವಂತಿಕೆ ಈ ಮುದಿಗೂಬೆ ಎಲ್ಲಿಂದ ಬರಬೇಕ್ರೇ..? ಏನೋ ಅನಿಸಿದ್ದನ್ನ ಅಷ್ಟಿಷ್ಟು ಗೀಚಿ ಕೈಕಟ್ಟುಕೊಂಡು ಕಾಮೆಂಟ್ ನಿಂದ ದೂರವಿದ್ದರೇನೆ ಮನಃಶಾಂತಿಸರಿ!.  ಇನ್ನೊಬ್ಬರು ಬರೆದದ್ದರ ಮೇಲೆ ಏನೋ ನನಗೆ ತಿಳಿಯ ಹೇಳಲು ಹೋದೆನೋ ಸುಮ್ಮನೇ ಈ ವಯಸ್ಸಿಗೆ ವಿಪರೀತ ಟೆನ್ಷಷನ್ ಅಲ್ವೇ…ಆರೋಗ್ಯವೂ ಹಾಳು ನನ್ನ ಹೆಂಡ್ತಿ ಮಕ್ಕಳೂನೂ  ಬೈತಾರೆ, ಕಣ್ರೀ. ಪುಣ್ಯಕ್ಕೆ ನನ್ನ ಮಕ್ಕಳ ಜೊತೆ ಆಪ್ತ ಮಿತ್ರನಿಗಿಂತಲೂ ಹೆಚ್ಚಾಗಿ ವರ್ತಿಸೋದ್ರಿಂದ ಅವರು ಎಲ್ಲವನ್ನೂ ಮುಕ್ತವಾಗಿ ನನ್ನೊಡನೆ ಚರ್ಚಿಸುತ್ತಾರೆ. ಅವರೆಲ್ಲ ಸಾಫ್ವ್ ವೇರಿಗಳೇ ಆದರೂ ಅವರ ಮೇಲೆ ನನ್ನ ಅಭಿಪ್ರಯವನ್ನೇನೂ ಬಲವಂತವಾಗಿ ಹೀಗೇ ಇದೆಂದು ಹೇರೋಲ್ಲ… ಯಾಕೆಂದ್ರೆ ಅವರಿಗೆ ಗೊತ್ತು ಬೇಕಾದ್ರೆ ಸೇವ್ ಮಾಡ್ಕೋಳ್ಳಿ ಇಲ್ಲಾ ಬಿಡ್ರೀ ಅಂತಾರೆಂತ!  ಎಷ್ಟೇ ಆಗಲಿ, ಅವರಿಗೆ ಕಂಪ್ಯೂಟರ್‍ ಬೇಸಿಕ್ ಟೀಚರ್‍ ನಾನೇ ಆಗಿದ್ದೇ ಅಲ್ಲವೇ… ಹದಿನೈದು ವರುಷಗಳ ಕೆಳಗೆ ಅನ್ನಿ… ಈಗವರು  ಆ ತಂತ್ರಜ್ಞಾನದಲ್ಲಿ ನನ್ನ ನ್ನ ಮೀರಿಸಿದಾರೆ ಬಹಳ ಮುಂದೆ ಹೋಗಿದ್ದಾರೆ ಅಪ್ಪನಿಗೆ ಅದು ಸಂತೋಷವೇ..
ಇಷ್ಟೆಲ್ಲಾ ಹೇಳೋದ್ಯಾಕೇಂದ್ರೆ-  ನೋಡಿ ನನ್ನ ಅನುಭವದಲ್ಲೇ ಹೇಳೋದಾದ್ರೆ ಅಹಂಕಾರ ಎನ್ನುವುದನ್ನು ನಾವು  ಮಕ್ಕಳೆದುರಿಗೂ ತೋರಿಸಬಾರದು.  ಅದೋ ಮನುಷ್ಯನಿಗೆ ಎಳೆ ಮಗುವಿನಿಂದಲೇ ಇರುತ್ತದೆ.  ಈಗಿನ ಮಕ್ಕಳಂತೂ ಕೇಳಬೇಕೇ….? ಯಾಕೆಂದರೆ, ಒಂದು ಪುಟ್ಟ ಮಗುವನ್ನು ಮಾತನಾಡಿಸಿ ನೋಡಿ, ಅದು “ಉಹೂಂ” ಎಂದೋ, “ಹ್ಞಾಂ” ಎಂದೋ ರಾಗವಾಗಿ ಮುಖ ತಿರುಗಿಸುತ್ತದೆ. ಅದು ನೀವು ಮೆದುವಾಗಿ ಮೆಲುವಾಗಿ ಕರೆದರೂ ಬರಲಾರದು. ಅಂತೆಯೇ ವೆಂಕಟೇಶ ಪುರಾಣದಲ್ಲಿ ಹೇಳಲ್ಪಟ್ಟಿದೆ. ನಾನು ವೆಂಕಟೇಶ ಪುರಾಣ ಕಥೆಯನ್ನೂ ೧೫ ವರುಷಗಳೇ ಅಭ್ಯಸಿ ಪುಸ್ತಿ ಬರೆದಿದ್ದೇನೆ ” “ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ”   ಎಂದು ಅದರಲ್ಲಿ ಭೃಗು ಮಹರ್ಷಿ ಅಹಂಕಾರಿ,  ಆದ್ದರಿಂದ, ಅಹಂಕಾರದ ಬಗ್ಗೆ ಸಾಕಷ್ಟು ವಿವರಿಸಿ ಬರೆದಿದ್ದೇನೆ. ತ್ರಿಮೂರ್ತಿಗಳ ಸತ್ವ ಪರೀಕ್ಷೆಯಲ್ಲಿ ಮಹಾವಿಷ್ಣುವಿನ ವಕ್ಷಸ್ಥಳಕ್ಕೇ ಒದಿತಾನೆ( ಈ ಶ್ರೀಹರಿಯ ಹೃದಯದಲ್ಲಡಗಿದೆಯೇ ಸತ್ವಗುಣ ಸಾತ್ವಿಕ ಶಕ್ತಿ ಎಂಬುದಾಗಿ).  ನೋಡಿ, ಸೃಷ್ಟಿಕ್ರಿಯೆಯಲ್ಲಿ ಮಹತ್ತಿನಿಂದಲೇ “ಅಹಂಕಾರ ವ್ಯಾಖ್ಯೆ” ಹುಟ್ಟುತ್ತದೆ.  ಅದಕ್ಕೇ “ಅಹಂ ಬ್ರಹ್ಮಸ್ಮಿ” ಎಂದರು. ಈ ಮಹತ್ತಿನ ಅಂಶ ವೆಂಬುದು ಪ್ರತಿ ವ್ಯಕ್ತಿಯಲ್ಲೂ ಅಂತರ್ಗತವಾಗಿರುತ್ತದೆ. ಆದ್ದರಿಂದಲೇ ಅಹಂಕಾರ ಪುಟಿಯದೇ ಇರುವುದಿಲ್ಲ. ಅದನ್ನು ತ್ರಿಗುಣಗಳಲ್ಲಿ ಒಂದಾದ ಸತ್ವಗುಣದಿಂದಲೇ ನಿಗ್ರಹಿಸಬೇಕು. ಮನುಷ್ಯನಲ್ಲಿ ಆ ಮೂರುಗುಣಗಳೆಂದರೆ. ಅವು ಸತ್ವ, ರಜಸ್ಸು, ತಮಸ್ಸು ಎಂಬ ತ್ರಿಗುಣಗಳು. ಇಲ್ಲಿೇ ಯಾವಾಗಲೂ ಸತ್ವಗುಣ ಒಂದಂಶವಷ್ಟೇ. ಇನ್ನೆರಡರಷ್ಟು ರಜೋಗುಣ, ತಮೋಗುಣ ಸ್ವಭಾವದವರು ತ್ರಿಗುಣಾತ್ಮಕ ಪ್ರಪಂಚ

ಸತ್ವಗುಣಾಢ್ಯರಲ್ಲಿ ಅಹಂ ಇರುವುದಿಲ್ಲ. ಅವರಿಗೆ  ತಮ್ಮ ಅನುಭವದ ವಿಶಾಲ ದೃಷ್ಟಿಯಲ್ಲಿ ವಿಚಾರಶೀಲತೆಯಲ್ಲಿ ಆತ್ಮವಿಶ್ವಾಸವಿರುತ್ತದೆ. ಅವರು ಹಿರಿಯರಾದರೆ ಅವರ ಹಲವಾರು ವರುಷಗಳ ಅನುಭವವೇ ಮಾತನಾಡುತ್ತದೆ; ಅವರಿಗೆ ಇನ್ನೊಬ್ಬರು ತಾವು ಹೇಳಿದುದನ್ನೇ ಸರಿಯೆಂದೇ ತಿಳಿಯಬೇಕೆಂದು ಎಂದಿಗೂ ವಾದವನ್ನೂ ಮಂಡಿಸುವುದಿಲ್ಲ. ಅವರು ತಾವು ದೃಢವಿಶ್ವಾಸದಿಂದ ಆ ವಿಷಯದ ಬಗ್ಗೆ ಸಾಧನೆ ಮಾಡಿರುತ್ತಾರೆ. ಅದನ್ನು ಹೇಳಬೇಕೆಂದರೆ, ಅವರು ಮಾತನಾಡಬೇಕು; ಚರ್ಚೆಗಿಳಿದಾಗ ವಾದ ಮಾಡಿ ನಾನೇ ಗೆಲ್ಲಬೇಕು ಎಂಬ ಅಹಂಮಿಕೆ ಅವರಲ್ಲಿ ಎಂದಿಗೂ ಇರುವುದಿಲ್ಲ. ಅವರದು ವಸ್ತು ನಿಷ್ಠೆಯ ವೈಚಾರಿಕತೆ. ಅದನ್ನೇ ಹೇಳುತ್ತಾ ಹೋಗುತ್ತಾರೆ. ತಾವೂ ಕಂಡುಕೊಂಡು ಪ್ರಯೋಜನ ಪಡೆದ ಯಾವುದೇ ವಿಷಯವಿರಲಿ ಮಾಹಿತಿ ಇರಲಿ ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ದೊಡ್ಡಗುಣ ಅವರದು. ಅಲ್ಲದೇ ಅವರು ಹೇಳುವುದೆಲ್ಲವೂ ಕೇಳುವವರೆಲ್ಲರಿಗೂ ಇಷ್ಟವಾಗಲೇ ಬೇಕೆಂಬ ವಾದ ಮಂಡನೆ ಖಂಡಿತ ಅವರಿಗಿರುವುದಿಲ್ಲ. ವಯಸ್ಸಿನಲ್ಲಿ ಕಿರಿಯರಾದರೂ ತಿಳಿದವರಾದರೆ ಅಚ್ಚರಿಯಿಂದ ಹಾಗೇನು ಎಂದು ಕೇಳಿ ತಿಳಿಯುವ ಸೌಜನ್ಯ ಮುತ್ಸದ್ದೀತನ ಅವರದು. ಕಿರಿಯರು ಹೇಳಿದ್ದರಲ್ಲಿ ಸರಿಯಿದ್ದರೆ ತಮ್ಮ ತಪ್ಪು ತಿಳುವಳಿಕೆಯನ್ನು ತಿದ್ದಿಕೊಳ್ಳುತ್ತಾರೆ.

ಈಗಾಗಲೇ ಹೇಳಿದಂತೆ ಉದಾಹರಣೆಗೆ ಕಂಪ್ಯೂಟರ್‍ ತಂತ್ರಜ್ಞಾನದಲ್ಲಿ ಇದನ್ನು ಎಷ್ಟು ಸರಳವಾಗಿದೆ ನಾವು ಕಾಣಬಹುದೆಂದರೆ, ನಾವು ಫೀಡ್ ಮಾಡುವುದೇನೆಲ್ಲವೂ ತಾತ್ಕಾಲಿಕ ಮೆಮೊರಿ ರ್ಯ್ಯಾ ಮ್ ಸ್ವೀಕರಿಸುತ್ತಿರುತ್ತದೆ.  ಅದನ್ನು ನಾವು ಅದೇ ತಾತ್ಕಾಲಿಕ ಮೆಮೊರಿಯಲ್ಲೇ ನಮಗಿಷ್ಟಬಂದಂತೇ ಅದನ್ನು ಪರಿಷ್ಕರಿಸಿ ಸರಿಯೆನಿಸಿದರೆ ಮಾತ್ರ, ಇನ್ನೊಂದು ಕಮಾಂಡ್ ಕೊಟ್ಟು ಶಾಶ್ವತ ಮೆಮೊರಿ-ಸ್ಟೋರೇಜ್ ಡಿಸ್ಕ್ ಗೆ ಕಳುಹಿಸುತ್ತೇವೆ ಅಲ್ಲವೇ…? ನಾನೂ ಕಂಪ್ಯೂಟರ್‍ ಶಿಕ್ಷಕನಾಗಿ ಪ್ರಾರಂಭಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಇದನ್ನೇ ಹೇಳುತ್ತೇನೆ.
ಮೇಲೆ ಹೇಳಿದುದನ್ನೇ ಮನುಷ್ಯನಿಗೂ ಹೋಲಿಸಿ ನೋಡಿ, ನಾವು ಇತರರು ಹೇಳಿದುದನ್ನೆಲ್ಲ ಒಟ್ಟರಾರೆ ನಮ್ಮ ತತ್ಕಾಲಿಕ ಮೆಮೊರಿ (RAM) ನಲ್ಲಿ ಸಂಗ್ರಹಿಸುತ್ತೇವೆ. ಹಾಗೆ ಸಂಗ್ರಹವಾದ ವಿಷಯದಲ್ಲಿ ಪರಿಷ್ಕರಣೆ ಅಗತ್ಯವೆನಿಸಿದರೆ ಅದನ್ನು ಮಾಡಿ ನಮ್ಮ ಮೆದುಳಿನಲ್ಲಿ ಶಾಶ್ವತ ಉಳಿಸಿಕೊಳ್ಳಲೂ ನಾವು ಸ್ವತಂತ್ರರಲ್ಲವೇ..?

ಆದರೆ, ಆ ವಿಷಯವನ್ನು ಇತರರೂ/ಮೂರನೆಯವರೂ ಓದುತ್ತಾರೆ ಎಂದಾಗ ಅವರೂ ಅಷ್ಟೇ.  ಆ ವಿಷಯಕ್ಕೆ ಸಂಬಂಧಪಟ್ಟ ಸಂವಾದಗಳಿದ್ದರೆ(ಫೇಸ್ ಬುಕ್ ಅಥವಾ ಚರ್ಚೆಯ ಸಾಮಾಜಿಕ ಜಾಲತಾಣಗಳಲ್ಲಿ ಎನ್ನಿ)  ಯಾವುದು ಸರಿಯೋ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾರೆ. ಹಾಗೆಯೇ ಇಬ್ಬರ ಸಂಭಾಷಣೆಗಳ ನಡುವೆ ಮೂರನೆಯವರಾದವರಲ್ಲಿ ಜೀವನದಲ್ಲಿ ಅಥವಾ ಆನ್ ಲೈನ್ ನಲ್ಲಿ ಎನ್ನಿ ನಮ್ಮೆದುರಿಗೆ ತಿಳುವಳಿಕಸ್ಥರಿದ್ದರೆ  ಆ ಸಂವಾದ ಮಾಡುತ್ತಿರುವವರ ಮಾತುಗಳನ್ನು ಅಥವಾ ವಾಯ್ಸ್ ಚಾಟಿಂಗ್ ನಲ್ಲಿ ಕೇಳುತ್ತಾ/ಕಮೆಂಟ್ಸ್ ಓದುತ್ತಾ ಅವರಿಬ್ಬರಲ್ಲಿ ಯಾರು ಹೇಳುವುದು ಸರಿ ಎನ್ನುವುದನ್ನು ನಿರ್ಧರಿಸುತ್ತಾರಷ್ಟೇ. ಅದನ್ನು ಆ ತಕ್ಷಣವೇ ಅವರ ನಡುವೆ ಹೇಳುವ ಹಕ್ಕು ತಮಗಿರಲಿ ಇಲ್ಲದಿರಲಿ ಹೇಳುವುದೂ ಅಥವಾ ಕಾಮೆಂಟ್ ಬರೆಯುವುದೂ ಅವರ ನಿರ್ಧಾರಕ್ಕೆ ಬಿಟ್ಟಿದ್ದು.ಆದ್ದರಿಂದ ಇಲ್ಲಿ ಯಾರೂ ಅಹಂಕಾರ ಪಡುವುದೇನಿಲ್ಲ, ಕೋಪ ಮಾಡಿಕೊಂಡು ಸಾಧಿಸುವುದೇನಿಲ್ಲವಲ್ಲ….

ಅಷ್ಟಕ್ಕೂ ಯಾವುದೇ ಪುಸ್ತಕವಾಗಲಿ/ ಆನ್ ಲೈನ್ ಜಾಲತಾಣಗಳ ಚರ್ಚಾಕೂಟಗಳಾಗಲಿ(ಫೋರ್ಮ) ಯಾರೂ ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರಲಾರರಲ್ಲವೇ…? ಯಾವ ನಿಜವಾದ ಲೇಖಕಕರೂ ಕೂಡ ಹಾಗೆ ಮಾಡುವುದಿಲ್ಲ. ಅವರು ಹೇಳುವುದರಲ್ಲಿ ಖಚಿತವಾಗಿ ತಿಳಿದುಕೊಂಡಿದ್ದು  ಅದನ್ನೇ ದೃಢವಾಗಿ ಹೇಳುವುದನ್ನೇ ಅವನ ಅಹಂಕಾರ ವೆಂದು ತೀರ್ಮಾನಿಸಿ ಬಿಡಲಾದೀತೇ…?

ಮುಂದುವರೆದ ಮಾಹಿತಿಯುಗದಲ್ಲಿ ಸೋಷಿಯಲ್ ನೆಟ್ ವರ್ಕ್ ಗಳು  ಸದುಪಯೋಗ/ದುರುಪಯೋಗವೂ ನಮ್ಮ ಮುಂಗೈ ಬೆರಳುಗಳಲ್ಲೇ ಇದೆಯಲ್ಲವೇ..?.  ಇಲ್ಲಿ  ನಿಜಕ್ಕೂ  ಸಮಾನವಯಸ್ಕರು (ಅಂಥವರು ನಾನು ಮೇಲೆ ಹೇಳಿದ  ಫೇಸ್ ಬುಕ್ ಪೋಸ್ಟ್ ನ  ಕಮೆಂಟ್ ಥ್ರೆಡ್ ನಲ್ಲೇ ತಮ್ಮ ಹೆತ್ತವರು ಇಟ್ಟ ಹೆಸರನ್ನು ಉಳಿಸಿಕೊಂಡರು). ಆದ್ದರಿಂದ, ಸಮಾನ ಅಭಿರುಚಿಯ ಆಪ್ತ ಸ್ನೇಹಿತರನ್ನು ಕಂಡುಕೊಳ್ಳುವುದು ಎಷ್ಟುಕಷ್ಟವೋ ..  ಅಷ್ಟೇ ದುಡುಕಿನಿಂದ ತಿಳಿದಂಥ ಮಹಾನುಭಾವರನ್ನು ಅರೆ ಕ್ಷಣದಲ್ಲಿ ಕಳೆದುಕೊಳ್ಳುವುದು  ಸುಲಭವೇ. ಈಗಾಗಲೇ ಹಲವಾರು ವರುಷಗಳೇ ಸಾಧನೆ ಮಾಡಿದ ಅನುಭವವುಳ್ಳ ಹಿರಿಯರನ್ನೇ ತಪ್ಪಾಗಿ ಭಾವಿಸಿಕೊಂಡು ಅವರನ್ನು  ಇಂದಿನ ಕಾಲಕ್ಕೆ ಬದಲಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳದೇನೆ ದೂರಮಾಡಿಕೊಳ್ಳುವುದು ಕೆಲವಾರು ಕ್ಷಣಗಳಲ್ಲಷ್ಟೇ.. ಇನ್ನೂ ಕೆಲವರು ಇರುತ್ತಾರೆ ಬಿಡಿ, ಅವರಿಗೆ ತಮ್ಮ ಸ್ವಪ್ರತಿಷ್ಠೆಯೇ ಹೆಚ್ಚಾಗಿ ಚರ್ಚೆಗೆ ಬಂದ ವಿಷಯದ ಬಗ್ಗೆ ವಸ್ತು ನಿಷ್ಠೆಯಿಲ್ಲದೇ (ಸಬ್ ಜಕ್ಟ್ ಮ್ಯಾಟರ್‍ ಬಿಟ್ಟು) ಪೂರ್ವಾಗ್ರಹ ಪೀಡಿತರಾಗಿ ಏನೇನೋ ಕಲ್ಪಿಸಿಕೊಂಡು ಪರ್ಸ್‌ನಲ್ ಆಗಿ ತೆಗೆದು ಕೊಂಡು ಹುಚ್ಚುಚ್ಚಾಗಿ ಬಡಬಡಿಸುತ್ತಾರೆ ಅವರ ಉದ್ಯೋಗ ಮತ್ತು ವ್ಯಕ್ತಿತ್ವಕ್ಕೆ  ಅವರೇ ಚ್ಯತಿ ತಂದುಕೊಳ್ಳುತ್ತಾರೆ. ಅಂಥವರನ್ನು ಕಂಡರೆ ಮರುಕವುಂಟಾಗುತ್ತದೆ.  ಅವರಿಗೆ ಚರ್ಚೆಯಲ್ಲಿ ತಿಳಿದುಕೊಳ್ಳುವ ತಮ್ಮ ಜ್ಞಾನ ವೃದ್ಧಿಸಿಕೊಳ್ಳುವ ಇಚ್ಛೆಯೆಲ್ಲಿ..? ಏನು ಮಾಡುತ್ತಿದ್ದನೆ ಎಂಬ ಅರಿವಿಲ್ಲ. ಓ, ದೇವರೇ ಆತನಿಗೆ ಜ್ಞಾನೋದಯವನ್ನುಂಟು ಮಾಡು ಎಂದು ಕಮೆಂಟ್ ಥ್ರೆಡ್ ನಿಂದ ಹೊರಬರುವುದೇ ಲೇಸು.

ಕೊನೆಯ ಮಾತು: ನನಗೀಗ ವಯಸ್ಸು ೬೮, ನಾನು ಈ ನನ್ನ ಜೀವನದ ಸುಧೀರ್ಘ ಪಯಣದಲ್ಲಿ ಸಾಕಪ್ಪಾ ಎನ್ನುವಷ್ಟು ಕಹಿ ಹಾಗೂ ಸಿಹಿಯನ್ನೂ ಅನುಭವಿಸಿದ್ದೇನೆ. ನನ್ನ ಕಳೆದ ಆಯಷ್ಯದಲ್ಲಿ ಕಂಡುದರಲ್ಲಿ ಕಹಿಯೇ ಹೆಚ್ಚಿದ್ದೀತು. ಹಾಗೆ ಹಿಂತಿರುಗಿ ನೋಡಿದರೆ, ಕಷ್ಟದಿಂದಲೇ ನಾನು ಕಲಿತದ್ದೂ ಬಹಳವಿದೆ. ಯಾಕೆಂದರೆ, ಬದುಕು ನಿರ್ದಯಿ ಶಿಕ್ಷಕ ಅದು ಕಲಿಸದ ಪಾಠವಿಲ್ಲ. ನಾವು ಕಂಡುಕೊಂಡ ಸತ್ಯವನ್ನು ನಮ್ಮ ಕಿರಿಯರಿಗೆ ಹೇಳೋಣ. ನಾವು ಪಡೆದ ಸಿಹಿ ಅನುಭವವನ್ನು ಅವರೊಡನೆ ಹಂಚಿಕೊಳ್ಳೋಣ. ನಮಗೆ ಇಷ್ಟವಾದ ಸಿಹಿಯು ಅಂದಿಗೆ ಬೇರೆ ರೂಪದ (ಮಿಠಾಯಿ)ಲ್ಲಿತ್ತು. ಆದರೂ ಅದು ಸಿಹಿ ಸಿಹಿಯೇ ಇಂದಿನ ಹುಡುಗ/ಗಿಯರಿಗೆ ಅದೇ ಇಷ್ಟವಾಗಬೇಕೆಂಬ ಹಠವೂ ಈಗೀಗ ಹೆತ್ತವರಲ್ಲಿ ಹಿರಿಯರಲ್ಲಿ ಇರಲಿಕ್ಕಿಲ್ಲ.
-ಸರ್ವಜನಾ ಸಹೃದಯತೆಗೆ ವಿಮ್ರತೆಯಿಂದ,

“ಹಿಂದೂ” ಎಂದರೆ ಯಾರು? ಪ್ರಾಚೀನ ಗ್ರಂಥಗಳು ಹಾಗೂ ಪುರಾಣ ಗ್ರಂಥಗಳು ಹೇಳುವುದಾದರೂ ಏನು..?


ಪ್ರತಿಯೊಬ್ಬ ಭಾರತೀಯನೂ ಹಿಂದೂ ಎಂದರೆ ಯಾರು? ಎಂಬುದನ್ನು ತಿಳಿದಿರಬೇಕಾದ ಸಂಗತಿ ಇದು.

ಇಮೇಜ್ ಕ್ಲಿಕ್ಕಿಸಿ ಪೂರ್ಣ ಪರದೆಯಲ್ಲಿ ಓದಿ
ಇಮೇಜ್ ಕ್ಲಿಕ್ಕಿಸಿ ಪೂರ್ಣ ಪರದೆಯಲ್ಲಿ ಓದಿ

ಎಲ್ಲ ಪುರಾಣಗ್ರಂಥಗಳನ್ನೂ ಅರೆದು ಜೀರ್ಣಿಸಿಕೊಂಡವರಂತೆ “ಶ್ರೀ ರಾಮಾಯಣ ಅನ್ವೇ಼ಷಣ್ವಂ” ಪುರಾಣ ಗ್ರಂಥ ರಚಿಸಿದಂಥ ಹಿರಿಯ ಮುತ್ಸದ್ಧಿ ರಾಜಕಾರಣಿ ವೀರಪ್ಪ ಮೊಯಿಲಿಯವರು “ಹಿಂದೂ” ಎಂಬ ಪದ ಯಾವ ಪುರಾಣಗಳಲ್ಲೂ ಇಲ್ಲವೆಂದು ಹೇಳಿ  ಕಾಂಗ್ರೇಸ್ ನ ಮತಬ್ಯಾಂಕ್ ವಕ್ತಾರರಂತೇ ಕ್ಷುದ್ರ ರಾಜಕೀಯದಲ್ಲಿ ಮುಳುಗಿ ಮತಿಭ್ರಾಂಥರಂತೆ ವರ್ತಿಸುವುದು ಅವರ ಘನತೆಗೆ ತಕ್ಕುದಲ್ಲ. ಅವರಂತೇ ಮನಬಂದಂತೆ ಒದರುವ ಕಾಂಗ್ರೇಸ್ ನ ರಾಜಕಾರಣಿಗಳು ಇನ್ನಾದರೂ ನಮ್ಮ ದೇಶದ ಮಹಾಜನತೆ ಮುಗ್ಧರಲ್ಲ ಎಂಬುದನ್ನು ಅರಿತುಕೊಳ್ಳಲಿ.   ವಿಪರ್ಯಾಸವೆಂದರೆ ಅವರೂ ಹಿಂದೂಗಳಾಗಿ ಹುಟ್ಟಿ ಬೆಳೆದು, ಬಹುಸಂಖ್ಯಾತ ಹಿಂದೂಗಳ ಮತಗಳಿಂದಲೇ ರಾಜಕೀಯದಲ್ಲಿ ಸ್ಥಾನ ಮಾನ ಪಡೆದುಕೊಂಡಿದ್ದೂ ಹೀಗೆ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಎಂದಿಗೂ ಶೋಭೆ ತರುವುದಿಲ್ಲ. ಆದ್ದರಿಂದ, ಕ್ಷುದ್ರ ರಾಜಕಾರಣವನ್ನು ಹೊರಗಿಟ್ಟು ದೇಶದ ಹಿತದೃಷ್ಟಿಯಿಂದ ನಮ್ಮ ಭಾರತೀದ ಮಹಾಜನತೆಯ ನಡುವೆ ಏಕತೆ ಸಮಗ್ರತೆಗೆ ಎಂದಿಗೂ ಧಕ್ಕೆಯುಂಟಾಗದಂತೆ ಎಚ್ಚರಿಕೆಯಿಂದ ಮಾತನಾಡುವುದನ್ನು ರೂಢೀಸಿಕೊಂಡರೇನೆ ಅವರಿಗೆ ಶ್ರೇಯಸ್ಸು ಯಶಸ್ಸು! ಇಲ್ಲದಿದ್ದರೆ ಅದರ ಪರಿಣಾಮನ್ನು ಅವರು ಮುಂದೆ ಅನುಭವಿಸಿಯೇ ತೀರಬೇಕಾಗುತ್ತದೆ.

ಆಸ್ತಿಕರಿಗಿಂತ ನಾಸ್ತಿಕರು ಲೈಂಗಿಕವಾಗಿ ಹೆಚ್ಚು ಸಂತುಷ್ಟರಾಗಿತ್ತಾರೆಯೇ…?


ಒಂದು ಅಧ್ಯಯನದ ಪ್ರಕಾರ, ಆಸ್ತಿಕರಿಗಿಂತ ನಾಸ್ತಿಕರು ಲೈಂಗಿಕವಾಗಿ ಹೆಚ್ಚು ಸಂತುಷ್ಟರಾಗಿತ್ತಾರೆ. ಗಂಡು ಹೆಣ್ಣಿನ ಲೈಂಗಿಕ ಸಂಬಂಧ ಪರಸ್ಪರ ನಡೆಸುವ ಚರ್ಚೆಗಳ ಮೇಲೂ ಅವಲಂಬಿತವಾಗಿರುತ್ತವೆ. ಮಾತುಕತೆ ನಡೆಸುವುದರ ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂಬುದು ಸಾರ್ವಕಾಲಿಕ ಸತ್ಯ. ಈ ಅಧ್ಯಯನ ಹೇಳಿದ್ದೇನೆಂದರೆ, ಧಾರ್ಮಿಕ ಆಚರಣೆಗಳಲ್ಲಿ ಹೆಚ್ಚು ನಂಬಿಕೆ ಇರುವವರು ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಮ್ಮ ಸಂಗಾತಿಯ ಜೊತೆಗೆ ಹಂಚಿಕೊಳ್ಳುವುದಿಲ್ಲ ಅಥವಾ ಹಿಂಜರಿಯುತ್ತಾರೆ.

ಮೇಲಿನ ಸಾಲುಗಳನ್ನು ಅಯಾಚಿತವಾಗಿ ಒಂದು ವೆಬ್‌ ಸೈಟ್ ನಲ್ಲಿ ಓದಿದೆ. ಇಂತಹ ಅನಗತ್ಯ ಅಧ್ಯಯನ ಮತ್ತು ತಪ್ಪು ಅಭಿಪ್ರಾಯಗಳಿಂದಲೇ ಇಂದಿನ ಯುವ ಜನಾಂಗದಲ್ಲಿ ಬಹುಮಂದಿ ಅಧಃಪತನದ ಹಾದಿ ತುಳಿಯುತ್ತಿದ್ದಾರೆಂದರೆ ಉತ್ಪ್ರೇಕ್ಷೆಯಾಗಲಾರದು.

ನಮ್ಮ ದೇಶದಲ್ಲಿ ಆಸ್ತಿಕರೆಂದರೆ ನಮ್ಮ ಧರ್ಮ ಸಂಪ್ರದಾಯಗಳ ಪರಂಪರೆಯ ಕಟ್ಟುಪಾಡುಗಳಲ್ಲಿ ನಂಬಿಕೆಯುಳ್ಳವರು ನಿಜ. ಅವರೆಲ್ಲರೂ ಲೈಂಗಿಕವಾಗಿ ಅಸಂತುಷ್ಟರೆಂದರೇನು?. ಹಾಗೆ ಹಿಂದಿರುಗಿ ನೋಡಿದರೆ ೩೫-೪೦ ವರುಷಗಳೇ ಸಂತೃಪ್ತ ಜೀವನ ನಡೆಸಿ ಹೆಚ್ಚು ಮಕ್ಕಳನ್ನೂ ಪಡೆದು ಸಂತೋಷವಾಗಿರುವ ಅಜ್ಜ ಅಜ್ಜಿಯರನ್ನೇ ಕೇಳಿ ನೋಡಿ. ಅವರು ಲೈಂಗಿಕವಾಗಿಯೂ ಅದೆಷ್ಟು ಸುಖೀ ದಾಂಪತ್ಯ ಕಂಡಿದ್ದಾರೆ ಎಂಬುದನ್ನು ಅವರ ಸಂತೃಪ್ತ ನಗೆಯೊಂದಿಗೇ ಈಗಿನ ಗಂಡು ಹೆಣ್ಣು ಮಕ್ಕಳಿಗೆ ವಿವರಿಸಿ ಹೇಳದಿರಲಾರರು. ಯಾಕೆಂದರೆ, ಅವರಲ್ಲೂ ಇಂದಿನ ಕಾಲಕ್ಕೆ ತಕ್ಕಂತೆ ಬಹಳಷ್ಬು ಮಂದಿ ಬದಲಾದವರಿದ್ದಾರೆ. ಹಿಂದಿನವರಂತೆ ಸಂಗಾತಿಯೊಡನೆ ಲೈಂಗಿಕ ವಿಷಯವಾಗಿ ಚರ್ಚಿಸಲು ಹಿಂಜರಿಯುವುದಿಲ್ಲ. ತಂದೆ ತಾಯಿಗಳು ಸ್ನೇಹಿತರಿಗಿಂತಲೂ ಹೆಚ್ಚಾಗಿ ಮಕ್ಕಳೊಡನೆ ಲೈಂಗಿಕವಾಗಿ ಮುಕ್ತ ಚರ್ಚೆಗೆ ತಾವೂ ಭಾಗಿಗಳಾಗಲು ಅವಕಾಶವೀಯುತ್ತಾರೆ. ಅಲ್ಲದೇ, ಮಕ್ಕಳು ದೊಡ್ಡವರೊಡನೆ ಚರ್ಚಿಸಲು ಸಂಕೋಚವೆನಿಸಿದರೆ ಒಬ್ಬಳನ್ನೇ ಕರೆದು ಮಗಳಿಗೆ ತಾಯಿ ಹೇಳಿದರೆ, ತಂದೆ ಮಗನಿಗೆ ಪರ್ಸನಲ್ ಆಗಿ ಕರೆದು ಹೇಳದಿರಲಾರ. ಹೀಗಾಗಿ ಹೆತ್ತವರಿಂದಲೇ ಅವರ ಲೈಂಗಿಕ ಸಮಸ್ಯೆಗಳು ಮಾತ್ರವಲ್ಲ ಮತ್ತಿತರೆ ಅನೇಕ ಸಮಸ್ಯೆಗಳು ಮನೋವೈದ್ಯರ ಬಳಿಗೆ ಹೋಗದೆಯೇ ಬಗೆಹರಿಯುತ್ತವೆ.

ಉದಾಹರಣೆಗೆ- ಇಂದಿನ “ಆಧುನಿಕ ಜೀವನಶೈಲಿಯಲ್ಲಿ” ಪ್ರೀತಿಸಿ ಮದುವೆಯಾಗುವುದಕ್ಕಿಂತಲೂ ಮುಂಚೆಯೇ ಕೆಲ ವರ್ಷಗಳು ಒಟ್ಟಿಗೇ ಇದ್ದು  (Living together) ಲೈಂಗಿಕ ಸಂಪರ್ಕ ಸುಖ ಅನಭವಿಸಿದ ಗಂಡು ಹೆಣ್ಣು ಗಳೇ ವಿರಸದಲ್ಲಿ ತಮ್ಮ ಸಂಬಂಧವನ್ನು ಮುರಿದುಕೊಳ್ಳುವುದು ಹೆಚ್ಚಿದೆಯಲ್ಲ…!  ಲೈಂಗಿಕವಾಗಿ ಸಂತುಷ್ಟಿ ಎಂದರೇನು?! ಹೀಗೆ ಟೇಸ್ಟ್ ನೋಡಿ ಹಾಗೆ ಬಿಸಾಡಿಬಿಡುವ ಬೇಕರಿ ವಸ್ತುವೇ…ಅಥವಾ ಚೂಯಿಂಗ್ ಗಮ್ಮೇ…?

ಅದೇ ಆಸ್ತಿಕರ ಅರೇಂಜ್ಡ್ ಮ್ಯಾರೇಜ್ ಗಳಲ್ಲಿ  ಡಿವೋರ್ಸ್‌ಗಳು ತೀರ ವಿರಳ. ಇತ್ತೀಚೆಗೆ ಅವುಗಳಲ್ಲೂ ಡಿವೋರ್ಸ್‌ಗಳಿವೆಯೆಂದರೆ ಅದು ಅಹಂಕಾರ ಅಟ್ಟಹಾಸವೋ ವರದಕ್ಷಿಣೆ ವ್ಯಾಜ್ಯಗಳೋ, ಏನೋ ನೆಪ ಒಡ್ಡಿ ಟೇಸ್ಟ್ ಚೆಂಜ್ ಮಾಡುವುದೋ ಇಲ್ಲಾ… ದುಡಿಮೆಯಲ್ಲಿ ಸಮಾನತೆ ಮತ್ತು ಹಣದ ದಾಹಕ್ಕಾಗಿ ಬೇರೆಯಾಗುವುದೋ ಹೀಗೆಲ್ಲಾ ಅಶಾಂತಿ ಮತ್ತು ಅನಾರೋಗ್ಯಕರವಾದ ಕಾರಣಗಳೇ ಹೆಚ್ಚು. ಆನಂತರದ, ಅವರ ಜೀವನದಲ್ಲಿ ಅದೇನು ಸಂತುಷ್ಟಿಯೋ ಸಮಾಧಾನವೋ ನೆಮ್ಮದಿಯೋ ಅವರ ಮುಖಗಳೇ ಹೇಳುತ್ತವೆ. ಇಲ್ಲ ಅವರನ್ನೇ ಕೇಳಿ ನೋಡಿ.. ಉತ್ತರ ಸಿಗಲಾರದು. ಸಿಕ್ಕರೂ ಅದು ನಾಟಕೀಯವಾಗಿರುವುದೇ…

ಆದ್ದರಿಂದ, ಇಂದಿನ ಯುವಜನಾಂಗ ಎಚ್ಚೆತ್ತುಕೊಳ್ಳಬೇಕು; ಎಚ್ಚೆತ್ತುಕೊಳ್ಳುತ್ತಿದೆ.  ನಮ್ಮ ಕಟ್ಟುಪಾಡಿನಲ್ಲಿರುವ ಶಿಸ್ತು ಸಂಯಮಗಳನ್ನು ಕಡಿದೊಗೆದು ಪಶುಗಳಂತೆ ಸುಖಿಸುವುದರಲ್ಲಿ ಸಂತುಷ್ಟಿಯಿದೆ ಅದೇ ನಾಸ್ತಿಕತೆ ಎನ್ನುವುದೂ ಮೌಢ್ಯವೇ ಅಂಧಕಾರವೇ…

ದೈವೀಶಕ್ತಿ ಸ್ವರೂಪಗಳಲ್ಲಿ ಪ್ರಮುಖ ಗಜಮುಖ


Ganesha dancing

ವಿಶ್ವದಲ್ಲಿ ಮಾನವಜನಾಂಗ ವೈವಿಧ್ಯತೆಯಿಂದಲೂ ಹಾಗೂ ವೈಚಿತ್ರ್ಯಗಳಿಂದಲೂ ಕೂಡಿದೆ.. ಆಯಾ ಜನಾಂಗದವರಿಗೆ ಅವರವರದೇ ಆದ ಧಾರ್ಮಿಕ ಆಚಾರ, ವಿಚಾರ ಮತ್ತು ಸಂಪ್ರದಾಯಗಳು. ಎಲ್ಲ ಧರ್ಮಗಳ ಮೂಲವೂ ಮಾನವನನ್ನು ವಿಶ್ವಮಾನವನನ್ನಾಗಿ ರೂಪಿಸುವುದೇ ಆಗಿದೆ.  ಆಯಾ ಜನಾಂಗೀಯ ಪದ್ಧತಿಗಳು ಕಾಲಕಾಲಕ್ಕೆ ಮಾನವನ ಬದುಕಿಗೆ ಹೊಸಬೆಳಕು ಹೊಸತಿರುವು ನೀಡತ್ತಲೇ ಬೆರಗುಗೊಳಿಸಿವೆ. ಹಿಂದೂಧರ್ಮವು ಮಾನವೀಯ ನೆಲೆಯಲ್ಲೇ ವೈವಿಧ್ಯತೆಯಲ್ಲಿ ಐಕ್ಯತೆಯನ್ನೇ ಸಾರುತ್ತದೆ, ಸಾಂಪ್ರದಾಯಿಕ ಹಬ್ಬಗಳ ಆಚರಣೆಯಲ್ಲಿ ಸಹಬಾಳ್ವೆಯಿಂದ, ಸಂತೋಷ  ಮತ್ತು ನೆಮ್ಮದಿಯನ್ನರಸಲು ಧರ್ಮಸೂಕ್ಷ್ಮವನ್ನು ತಿಳಿಸುತ್ತದೆ.

ganesh-chaturthi-history

ಭಾರತೀಯ ಸನಾತನ ಧರ್ಮದಲ್ಲಿ ಆದಿಮಹರ್ಷಿಗಳ ಮಹತ್ವಾಕಾಂಕ್ಷೆಯೇ ಮನುಕುಲದ ಉದ್ಧಾರ.  ಅವರು ತಮ್ಮ ದಿವ್ಯದೃಷ್ಟಿ ಮತ್ತು ದೂರದೃಷ್ಟಿಯಲ್ಲಿ ಗ್ರಹಗತಿ, ಋತುಮಾನ ಮತ್ತು ದೈವಾರಾಧನೆಯ ಸ್ವರೂಪಗಳಲ್ಲಿ ಹಬ್ಬ ಹರಿದಿನ ವ್ರತನಿಯಮಗಳ ಪ್ರಾಮುಖ್ಯತೆ ತಿಳಿಸಿದ್ದಾರೆ. ಸಾಂಪ್ರದಾಯಿಕ ಹಬ್ಬಗಳ ಆಚರಣೆಗಳಲ್ಲಿ ಮಾನವಧರ್ಮ ಜಾಗೃತಿಯಲ್ಲಿ ಖಗೋಳಿಯ ನಿತ್ಯ ಸತ್ಯಗಳನ್ನು ಸಾದೃಶಗೊಳಿಸಿದ್ದಾರೆ.  ಆದಕಾರಣ, ಮಾನವನಿಗೆ ಧರ್ಮಸೂಕ್ಷ್ಮಗಳಿವೆ. ಧರ್ಮಸೂಕ್ಷ್ಮಗಳೆಂದರೆ ಅಲೌಕಿತೆ ದೈವಿಕತೆಯಲ್ಲಿ ಕಂಡುಕೊಂಡ ಕಟುಸತ್ಯವೇ. ಅದು  ಎಲ್ಲರಿಗೂ ಒಂದೇ. ಅದು ಏನೆಲ್ಲ ವೈಜ್ಞಾನಿಕತೆ ಆಧುನಿಕತೆಗಳಾಚೆ ಆಂತರಿಕ ಪ್ರಜ್ಞೆಯಲ್ಲಿರುತ್ತದೆ. ಯಾವೊಂದು ವಿಚಾರವೇ ಆಗಲಿ ಪ್ರಾಕೃತಿಕ ಮತ್ತು ಭೌತಿಕಜಗತ್ತಿನಿಂದ ಪ್ರೇರಿತವಾಗಿರುತ್ತದೆ ಯಾವುದು ಪರಿವೀಕ್ಷಣೆಯಲ್ಲಿ ಪ್ರಾಯೋಗಿಕವಾಗಿ ಅನುಭವಸಿದ್ಧವಾಗಿ ಪ್ರಾಮಾಣೀಕರಿಸಲ್ಪಟ್ಟಿರುತ್ತದೋ ಅದು ಸಿದ್ಧಾಂತವಾಗಿರುತ್ತದೆ. ಹಾಗೇ ಆದಿಮಹರ್ಷಿಗಳು ಅಲೌಕಿ-ದೈವಿಕಶಕ್ತಿ ಸ್ವರೂಪಗಳನ್ನೂ ಆಂತರಿಕ ಪ್ರಜ್ಞೆಯಲ್ಲೇ ಶೋಧನೆಗೊಪಡಿಸಿದ್ದಾರೆ. ಮನುಷ್ಯ ಆಯಾ ಶಕ್ತಿಸ್ವರೂಪಕ್ಕೆ ವಿಧೇಯನಾಗಿ ಭಯ ಭಕ್ತಿ ತೋರಬೇಕೆಂಬುದನ್ನು ಧರ್ಮಸೂಕ್ಷ್ಮದಲ್ಲಿ ನಿರೂಪಿಸಿದ್ದಾರೆ. ಹಾಗೆ ಪ್ರಾಮಾಣೀಕರಿಸಿದವುಗಳೇ ಸಿದ್ಧಾಂತಗಳಾಗಿ ಶಾಸ್ತ್ರಗಳಾಗಿರುತ್ತವೆ. ಅಂತೆಯೇ, ಶತಶತಮಾನಗಳಿಂದ ಅನೂಚಾನವಾಗಿ ನಡೆದು ಬಂದಿರುವ ಹಬ್ಬ ಹರಿದಿನಗಳಲ್ಲಿ ಪೂಜಾವಿಧಿಗಳು ವ್ರತನೇಮ ಉಪವಾಸಾದಿಗಳು ಸಾಂಪ್ರದಾಯಿಕ ಆಚರಣೆಗಳೆಲ್ಲವೂ ಅಚಲ ನಂಬಿಕೆಗಳಾಗಿವೆ.

ಆದ್ದರಿಂದ, ಮನುಷ್ಯ ವಿಚಾರವಂತನಾದರೆ ಮಾತ್ರ ಸಾಲದು; ಆಚಾರವಂತನೂ ಆಗಬೇಕು. ಆಚಾರದಲ್ಲಿ ಉತ್ತಮ ವಿಚಾರಗಳಿರಬೇಕು.  ಉತ್ತಮ ವಿಚಾರಗಳೆಂದರೆ ಜೀವನದ ಮೂಲಧ್ಯೇಯ ಮತ್ತು ಉದ್ದೇಶಗಳು. ಜೀವನ ಕಾಲಕಾಲಕ್ಕೆ ಪರಿವರ್ತನಶೀಲವೇ ಸರಿ. ಪರಿವರ್ತನೆಯಲ್ಲಿ ಪುರೋಗಾಮಿತ್ವದ ಪ್ರಗತಿಯಿರಬೇಕು. ತಿರೋಗಾಮಿಯಾದರೆ, ತಾನು ಹುಟ್ಟಿಬಂದ ಜನಾಂಗ ಪರಿಸರದ ಸಂಪ್ರದಾಯಗಳಿಗೆ ಬೆನ್ನುಹಾಕಿ ನಡೆದರೆ ಜೀವನವು ದ್ವಂದ್ವಾರ್ಥಗಳಿಂದ ಗೊಂದಲಗಳ ಗೂಡಾಗುತ್ತದೆ. ಸ್ವಾಮಿ ವಿವೇಕಾನಂದರು ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗ ವೆನ್ನುತ್ತಾರೆ. ಯಾಕೆಂದರೆ, ಜ್ಞಾನಮಾರ್ಗದಲ್ಲಿ ಯಾವೊಂದು ಗೊಂದಲವಿಲ್ಲದಿರುವ ಸ್ಥಾಯೀಭಾವವಿದೆ. ಅದನ್ನು ಸಾಂಪ್ರದಾಯಿಕ ಆಚರಣೆಗಳಲ್ಲಿ ತಿಳಿಸಿಕೊಡುವುದೇ ಹಬ್ಬ ಹರಿದಿಗಳು.

ಒಂದು ಕಾಲಕ್ಕೆ ವೇದಶಾಸ್ತ್ರ ಶೃತಿಸೂತ್ರಗಳ ಪಾರಾಯಣಕ್ಕೆ ಸೀಮಿತವಾದ ಸಂಪ್ರದಾಯಿಕ ಆಚರಣೆಗಳೆಲ್ಲ ಜನಸಾಮಾನ್ಯರಿಗೆಟುಕದೇ ಅತಿಕಷ್ಟಕರವೆನಿಸಿದ್ದವು. ವೇದಶಾಸ್ತ್ರಗಳೆಂದರೇನೆಂದು ತಿಳಿಯದೇ ಸತ್ವಗುಣಸಾಧಕರಾಗಿ ಸಿದ್ಧಿ ಪಡೆದ ಮಹಾನ್  ಯೋಗೀಶ್ವರರೂ ಇದ್ದರು.  ಆದುದರಿಂದ ಬ್ರಹ್ಮನ ವಾಙ್ಞಯ ರೂಪದ ವೇದಗಳನ್ನು ಲಿಖಿತರೂಪಕ್ಕೆ ತಂದ ವೇದವ್ಯಾಸರು ಜನಸಾಮಾನ್ಯರಿಗೂ ಅರ್ಥವಾಗುವಂತೆ ಪುರಾಣಗಳನ್ನು ಬರೆದರು. ಅಂತೆಯೇ, ಪುರಾಣಕಥೆಗಳ ಮೂಲಕ ವಿವಿಧ ದೈವೀಶಕ್ತಿಗಳ ಆರಾಧನೆಯಲ್ಲಿ ಹಿರಿಯರು ನಡೆಸಿಕೊಂಡುಬಂದ ಸಂಪ್ರದಾಯಗಳಲ್ಲಿ ಹಬ್ಬ ಹರಿದಿನಗಳ ಆಚರಣೆಗಳು. ಅವುಗಳಲ್ಲಿ, ಜಪ,ತಪ, ಧ್ಯಾನ, ಪ್ರಾರ್ಥನೆ, ಭಜನೆ ಫೂಜೆ ವ್ರತಗಳು. ಹಬ್ಬಗಳ ಆಚರಣೆಯಲ್ಲಿ ಅವರವರ ಶಕ್ತ್ಯಾನುಸಾರ ಭಗವಂತನನ್ನು ಆರಾಧಿಸುವುದೇ ಆಗಿದೆ ಎಂದು ಪುರಾಣಗಳಲ್ಲಿ ಸಾರಿದ್ದಾರೆ.ಆದ್ದರಿಂದ, ಹಬ್ಬಗಳ ಆಚರಣೆಯಲ್ಲಿ ಅಲೌಕಿ ದೈವೀಶಕ್ತಿ ಸ್ವರೂಪವನ್ನು ಭಯಭಕ್ತಿಯಿಂದ ಪೂಜಿಸಿ ಒಲಿಸಿಕೊಳ್ಳುವುದೇ ಮೂಲೋದ್ಧೇಶ. ಜನಸಾಮಾನ್ಯರೂ ಸರಳ ಪೂಜಾಪದ್ಧತಿಗಳಿಂದ ದೈವಾನುಗ್ರಹ ಪಡೆದು ಸಂತಾನಫಲ, ಆಯಸ್ಸು ಶ್ರೇಯಸ್ಸು, ಸುಖ-ಶಾಂತಿ ಮತ್ತು ಸಂಪತ್ತುಗಳನ್ನು ಹೊಂದಬಹುದು. ಆದುದರಿಂದ, ಹಬ್ಬಗಳೆಂದರೆ, ವಿಶೇ಼ಷಭೋಜನ ಮಾಡಿ ಸಂಭ್ರಮಿಸುವುದಷ್ಡೇ ಅಲ್ಲ, ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರಾಗತ ಸಂಪ್ರದಾಯಿಕ ಆಚರಣೆಯಲ್ಲಿರುವ ಅರ್ಥವನ್ನು ಗ್ರಹಿಸಿ ದೈವೀಶಕ್ತಿಸ್ವರೂಪಗಳಿಗೆ ಶರಣಾರ್ಥಿಗಳಾಗುವುದು. ನಮ್ಮ ರಾಷ್ಟ್ರಕವಿ ಕುವೆಂಪು ನುಡಿದಂತೆ- “ತನುವು ನಿನ್ನದು ಮನವು ನಿನ್ನದು| ಎನ್ನ ಜೀವನ ಧನವು ನಿನ್ನದು| ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೆ ನನ್ನದು|

ಗಣಪತಿಯ ಹುಟ್ಟು ಮತ್ತು ಬಾಲ್ಯ ವಿಚಿತ್ರ –ವೈಕಲ್ಯಗಳಿಂದ ಕೂಡಿದ್ದೂ  ಅಚ್ಚರಿ ಎಂಬಂತೇ ಸಾತ್ವಿಕಶಕ್ತಿ ಸಂದೇಶ ಸಾರುತ್ತದೆ. ತಂದೆಗೆ ಅರಿವಿಲ್ಲದಂತೆ ಜನ್ಮಿಸಿದ ತಾಯಿಯ ಮಾನಸ ಪುತ್ರ. ಆ ಬಳಿಕ ಮಾತೃವಾಕ್ಯ ಪರಿಪಾಲನೆಯಲ್ಲಿ ಪಿತಾಮಹ ಪರಮೇಶ್ವರನ ಪ್ರಕೋಪಕ್ಕೊಳಗಾದ. ಕೈಲಾಸ –ಭೂಲೋಕಗಳ ನಡುವಣ ಅಂತರ ಕಿರಿದುಗೊಳಿಸಿ ಕಾಯಕ- ಕೈಂಕರ್ಯ ತಿಳಿಸಿದ ಬೆನಕವನು.  ಮಾತಾಪಿತೃ ದಂಪತಿಗಳು ತಮ್ಮ ಅಂತಃಕಲಹದಲ್ಲಿ ಪರಸ್ವರರನ್ನು ಪುನಃ ಪರಾಮರ್ಶಿಸಿ ಅರ್ಥೈಸಿಕೊಳ್ಳುವಂತೆ ಮಾಡಿ ಸಾತ್ವಿಕತೆಯ ಸಂದೇಶ ಬೀರಿದ. ಇಂದಿಗೂ ಭೋಲೋಕದ ಗೃಹಸ್ಥರ ಮನೆಮನೆಯ ಮಹಾದ್ವಾರದ ಹೊಸ್ತಿಲಲ್ಲಿ (ಮರೆಯದಲೇ ಗಣೇಶ ಚತುರ್ಥಿಯಂದು)ಅವನು ಅನಭಿಷಕ್ತ ದೈವಗಣನಾಯಕ -ಬೆನಕನಾಗಿ ಅಗ್ರಪೂಜೆಗೊಳ್ಳುತ್ತಾನೆ.

ಬಾಲಕ ಗಣಪ ಮಾತಾಪಿತೃಗಳು ತನ್ನ ಸೋದರ ಸುಬ್ರಮಣಿಯೊಂದಿಗೆ ಒಡ್ಡಿದ ಪ್ರಪಂಚ ಪರ್ಯಟನಾ ಪರೀಕ್ಷೆಯಲ್ಲಿ ಅವರನ್ನೇ (ತಂದೆ ತಾಯಿಗಳನ್ನೇ)ಸುತ್ತಿ ಪ್ರದಕ್ಷಿಣೆಗೈದು, ಸಮಯಪ್ರಜ್ಞೆಯ ತೀಕ್ಷ್ಣ ಬುದ್ಧಿಯಿಂದ ಜನ್ಮದಾತ ರಿಗೇ ಅನನ್ಯ ಗೌರವದಿಂದ ಹೃತ್ಪೂರ್ವಕ ವಾಗಿ ನಮಿಸಿ  ಅವರಿಂದ ಆದರಣೀಯ ನಾಗಿ ವಿಶ್ವಪ್ರಿಯನೆನಿಸಿದ. ಇಂದಿಗೂ ಮಕ್ಕಳು ಗಣಪತಿ ಹಬ್ಬವೆಂದರೇ ಸಾಕು ಅವರು ದೂರದಲ್ಲಿದ್ದರೂ ತಪ್ಪದೇ ತಂದೆ ತಾಯಿಗಳ ಬಳಿಗೆ ಧಾವಿಸಿ ಬಂದು ಆಶೀರ್ವಾದ ಪಡೆಯುತ್ತಾರೆ. ಗಣಪತಿಯ ಅಭಿಮಾನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ಎಲ್ಲ ದೈವೀಶಕ್ತಿ ಸ್ವರೂಪಗಳಲ್ಲಿ ಪ್ರಮುಖನಾಗಿದ್ದಾನೆ ಗಜಮುಖ. ಅವನಿಗೆ ಅಗ್ರಪೂಜೆ. ವಿಶ್ವಜೀವನದ ಬಹುರಾಷ್ಟ್ರಗಳಲ್ಲಿ ಗಣಪತಿ ಹಬ್ಬ ಪ್ರಾಮುಖ್ಯತೆ ಪಡೆದಿದೆ. ಅಮೆರಿಕದ ರೆಡ್ ಇಂಡಿಯನ್ ಜನಾಂಗೀಯದಲ್ಲಿ, ಮೆಕ್ಸಿಕೋದ ನಿವಾಸಿಗಳು ಗಣಪತಿಯನ್ನು ಹೋಲುವ ದೇವತಾಮೂರ್ತಿಯನ್ನು ಪೂಜಿಸುತ್ತಾರೆ. ದಕ್ಷಿಣ ಏಷಿಯಾ ದೇಶಗಳಲ್ಲಂತೂ ಗಣೇಶನ ಆರಾಧನೆ ಹೆಚ್ಚಾಗಿ ಆಚರಣೆಯಲ್ಲಿದೆ. ಜಾವಾ, ಬಾಲಿ, ಸುಮಾತ್ರಗಳಲ್ಲಿ ಮತ್ತು ಮುಸ್ಮಿಂ ರಾಷ್ಟ್ರವಾದ ಇಂಡೋನೇಷಿಯಾದಲ್ಲಿ(ಇಂದಿಗೂ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸುತ್ತಾರೆ).

ಥಾಯ್ ಲೆಂಡಿನಲ್ಲಿ ಗಣೇಶನ ಆರಾಧನೆ ಇದೆ. ಹಿಂದೆ ಚೋಳರ ಆಳ್ವಿಕೆ ದಕ್ಷಿಣ ಏಷಿಯಾದತ್ತ ವ್ಯಾಪಿಸಿತ್ತು ಎನ್ನುವುದಕ್ಕೆ ಇಲ್ಲಿ ಪುರಾವೆಗಳಿವೆ. ಜೈನರಲ್ಲಿ ಗಣೇಶ ಆರಾಧನೆ ಸರ್ವೇಸಾಮಾನ್ಯವಾಗಿದೆ. ಅವರ ವ್ಯವಹಾರೀಕ ದಿನಚರಿ ಆರಂಭವಾಗುವುದೇ ಗಣೇಶನನ್ನು ಸ್ತುತಿಸುವುದರಿಂದ.

ಬೌದ್ಧರಲ್ಲಿ ಗಣೇಶ ಬುದ್ಧಿಪ್ರದ. ಜಪಾನ್ ದೇಶದ ಕೆಲ ಬೌದ್ಧ ದೇವಾಲಯಗಳಲ್ಲಿ ಗಣೇಶನ ಮೂರ್ತಿಗಳಿವೆ. ಜಪಾನ್ ನ ಕಾಂಗಿ ಬೌದ್ಧರಲ್ಲಿ ಗಣೇಶನ ಆರಾಧನೆ ಇದೆ. ಹೀಗೆ ವಿಶ್ವಜೀವನದಲ್ಲಿ ಸರ್ವಧರ್ಮ ಪೂಜಿತ ಸುಮುಖ ಗಣಪನಾಗಿದ್ದಾನೆ. ಶ್ರೀ ಗಜಮುಖ ಸೌಖ್ಯದಾತ| ಲೋಕಾದೀಶ ಸತತವು ನಮಿಪೆವು ಶ್ರೀ|| ಎಂಬ ಗೀತೆ ನಮ್ಮಲ್ಲಿದೆ.

ವೇದೋಕ್ತವಾಗಿ ಗಣಪತಿ ಎಂದರೆ ಅಖಿಲಾಂಡ ಕೋಟಿ ಬ್ರಹ್ಮಾಂಡದ ಗಣನಾಯಕ. ಗಣಗಳೆಂದರೆ ಮನುಷ್ಯಗಣ, ಪ್ರಾಣಿಪಕ್ಷಿಗಳಗಣ, ಸಸ್ಯ, ಹುಲ್ಲುಗರಿಕೆ, ವನ ವೃಕ್ಷಗಳಗಣ, ಸೌರಮಂಡಲದ ಭೂಮಿ ಮತ್ತು ಸಕಲಗ್ರಹಗಳು ಇವುಗಳೆಲ್ಲವೂ ಸೇರಿ  ಚರಾಚರ ಜಗತ್ತು ನಿರ್ವಿಘ್ನವಾಗಿ ನಿರಂತರ ಚಲನೆಯಲ್ಲಿರಬೇಕಲ್ಲ. ಅವುಗಳ ಅಧಿನಾಯಕನೇ ಮಹಾಗಣಪತಿ. “ ಮೂಷಿಕವಾಹನ ಮೋದಕ ಹಸ್ತಾ… ಎಂದು ಆರಂಭವಾಗುವ ಗೀತೆ ಕೇಳಿದ್ದೇವೆ-  ಮೋದಕ ಎಂದರೆ ಸದಾಕಾಲವೂ ಆನಂದ ಉಂಟುಮಾಡುವ ಪದಾರ್ಥ ಎಂದರ್ಥವೆನ್ನುತ್ತಾರೆ. ಆದುದರಿಂದಲೇ ಗಣಪತಿಗೆ ಮೋದಕ ಭಕ್ಷ್ಯವಿಶೇಷವೆಂದರೆ ಇಷ್ಟವಂತೆ. ಚತುರ್ಥಿಯಂದು ಗಣಪತಿಗೆ ವಿಶೇಷವಾಗಿ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ಮೋದಕಭಕ್ಷ್ಯವನ್ನು ನೈವೇದ್ಯಮಾಡಿ ಆನಂತರ ಅದನ್ನು ಪ್ರಸಾದವಾಗಿ ಸ್ವೀಕರಿಸುವುದರಿಂದ ಇಂದ್ರಿಯ ಸಂಪ್ರೀತಿ ಪ್ರಾಪ್ತವಾಗುವುದಲ್ಲದೇ, ನಾವು ಜೀವಾತ್ಮನಲ್ಲಿ ಪರಮಾತ್ಮನ ಪ್ರಸನ್ನಃತೆಯನ್ನೇ ಕಂಡುಕೊಳ್ಳಬಹುದೆಂಬ  ನಂಬಿಕೆಯಿದೆ.

ಒಬ್ಬ ವಿಶ್ವವಿಖ್ಯಾತ ಸಾಹಿತಿ ತಮ್ಮ ತತ್ವನಿಷ್ಠೆಯಂತೆಯೇ ಸಾವಿನಲ್ಲೂ ಸಂದೇಶ ಬೀರಿದ್ದರೆ ಚೆನ್ನಾಗಿತ್ತಲ್ಲವೇ…?


Dr Ananthamurthy copyಒಬ್ಬ  ವಿಶ್ವಾತ ಖ್ಯಾತ ಸಾಹಿತಿ ತಮ್ಮ ತತ್ವನಿಷ್ಠೆಯಂತೆಯೇ ತಮ್ಮ ಸಾವಿನಲ್ಲೂ ಒಂದು ಸಂದೇಶ ನೀಡಿ ನಿಜಕ್ಕೂ ತಾವು ಬದುಕಿರುವಾಗ ಜೀವಿತದುದಕ್ಕೂ ನಂಬಿಕೊಂಡ ತತ್ವಗಳಿಗೆ ತಾವೇ ಗೌರವ ತಂದುಕೊಟ್ಟು ವಿಶ್ವವೇ ತಲೆದೂಗುವಂತೆ  ಮಾಡಿದ ಉದಾಹರಣೆಗಳೆಷ್ಟಿಲ್ಲ! ಗಾಂಧೀಜಿಯನ್ನೇ ತೆಗೆದುಕೊಳ್ಳಿ-  ಜೀವಿತದುದ್ದಕ್ಕೂ ರಾಮ ಮಂತ್ರವನ್ನೇ ಜಪಿಸುತ್ತಲಿದ್ದವರು ಗೋಡ್ಸೆ ಹೊಡೆದಾಗ “ಹಾಯ್ ! ರಾಮ್” ಎಂದು ಕೊನೆಯುಸಿರೆಳೆದು ತಮ್ಮ ದೈವಿಕ ತತ್ವನಿಷ್ಠೆ ಮೆರೆದರು.  ಶ್ರೀಯುತ ಡಾ. ಯು.ಆರ‍್. ಅನಂತ ಮೂರ್ತಿಯವರು “ರಾಮ ಅಯ್ಯೋಧ್ಯೆಯಲ್ಲಿ ಹುಟ್ಟಲಿಲ್ಲ ಗೋಡ್ಸೆ ಗುಂಡು ಹೊಡೆದಾಗ ಗಾಂಧೀಜಿ ಬಾಯಲ್ಲಿ ಎಂದು ಲೇವಡಿ ಮಾಡಿದ್ದಾರೆ; ಕನ್ನಡ ಸುಪ್ರಸಿದ್ಧ ವಾರ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ…,

ಇದೇ ಕೊಂಡಿ ಹೊಸಬೆಳಕು; ಹೊಸತಿರುವು –  “ಅವಿಶ್ರಾಂತ ಚಿಂತಕ”..ನೋಡಿ

ಜ್ಞಾನಪೀಠ ಪುರಸ್ಕತ ಸಾಹಿತಿ ಅನಂತ ಮೂರ್ತಿಯವರೂ ವಿಶ್ವವಿಖ್ಯಾತರೆಂಬುದರಲ್ಲಿ ಎರಡು ಮಾತಿಲ್ಲ ಅಲವೇ..? ಇಡೀ ಜಗತ್ತು ಸಾವಿನಲ್ಲಿಯೂ ಅವರದೇ ತತ್ವನಿಷ್ಠೆಗೆ ಬದ್ದರಾಗಿ ಸಂದೇಶ ನೀಡುತ್ತಾರೆಂದೇ ನೀರೀಕ್ಷಿಸುತ್ತಿತ್ತು. ನಾನೂ ಕೂಡ ಊಟಮಾಡದೇ ಕಾತರನಾಗಿ ಟಿ.ವಿ. ವೀಕ್ಷಿಸುತ್ತಿದ್ದಾಗ ಘೋರ ನಿರಾಶೆಯೇ ಕಾದಿತ್ತು! (ಅಷ್ಟಕ್ಕೂ ನಾನು ಅವರು ಜೀವಿತದಲ್ಲಿ ನಂಬಿಕೊಂಡ ವಿಚಾರಗಳು-ತತ್ವಗಳನ್ನು ವಿರೋಧಿಸುತ್ತಲೇ ಬಂದವನು. ನಾನೂ ಒಬ್ಬ ಲೇಖಕನಾಗಿ ಭಿನ್ನಾಭಿಪ್ರಾಯಗಳೇನೆ ಇದ್ದರೂ ಗೌರವಿಸಬೇಕಲ್ಲ…). “ಮನುಷ್ಯನ ಹುಟ್ಟು ತಿಳಿಸುವ ಲೆಕ್ಕಾಚಾರಕ್ಕಿಂತಲೂ ಅವನ ಸಾವು ತಿಳಿಸಿಕೊಡುವ ಪಾಠ ದೊಡ್ಡದು’ ಅನಂತ ಮೂರ್ತಿ ನಿಜಕ್ಕೂ ಅವಿಶ್ರಾಂತ ಚಿಂತಕರೇ ಆಗಿದ್ದು ಸಾವಿನ ಅಂತಿಮ ದಿನ/ಕ್ಷಣಗಳಲ್ಲೂ ದೇಶ ಹಾಗಿರಬೇಕು ಹೀಗಿರಬೇಕು” ಎಂದೇ ಚಿಂತಿಸುತ್ತಿದ್ದವರು ಎಂದೇ ಪತ್ರಿಕಾ ವರದಿಗಳಲ್ಲಿದೆ…!

ತಮ್ಮ ಪ್ರಪ್ರಥಮ ಕಾದಂಬರಿ ಸಂಸ್ಕಾರ ದಿಂದಲೇ ಅತ್ಯಂತ ಖ್ಯಾತಿ ಹಾಗೂ ವಿವಾಸ್ವದ ಸಾಹಿತಿ ಎನಿಸಿದವರು ವೈದಿಕ ಧರ್ಮವನ್ನು ವಿರೋಧಿಸುತ್ತಲೇ ಹಿಂದೂಗಳ ಆಗ್ರಹಕ್ಕೆ ತುಪ್ಪ ಎರೆದರು. ಹಾಗಿರುವಾಗ ತಾವು ತೀರಿಕೊಂಡ ಮೇಲೇ ತಮ್ಮದೇ ಶವ “ಸಂಸ್ಕಾರ” ಹೇಗೆ ವೈಜ್ಞಾನಿಕವಾಗಿರಬೇಕು ಎಂಬ ಸೂಚನೆಯನ್ನು ತಮ್ಮ ಕುಟುಂಬದವರಿಗೆ ಹೇಳದೇ ಹೋದದ್ದು ವಿಪರ್ಯಾಸವೆ; ಬೃಹತ್ ಪ್ರಶ್ನೆಯೆ. ಅವರ ಅನುಯಾಯಿಗಳಿಗೆ ಅವರು ಮಾಡಿದ ಘೋರ ನಿರಾಶೆಯೇ. ಆತ್ಮ ವಂಚನೆಯೇ (ಕ್ಷಮಿಸಿ ಆತ್ಮದಲ್ಲಿ ಅವರಿಗೆ ನಂಬಿಕೆ ಇಲ್ಲವೇಂದೇ  ದೂರದಲ್ಲಿದ್ದೇ ತಿಳಿದುಕೊಂಡಿದ್ದೆನೆಂದೇ ಹೇಳಲೇ..? ನನ್ಣಂಥವರಿಗೂ ತೀರಾ ವಿಷಾದನೀಯವೇ…)

 ನಾಗರಾಜರಾಯರು (ಕನ್ನಡ ಒನ್ ಇಂಡಿಯಾ. ಕಾಂ) ಹೇಳಿದಂತೆ ಅವರ ಸಂಸ್ಕಾರಕ್ಕೆ ತಗುಲಿದ ಖರ್ಚು ವೆಚ್ಚಗಳನ್ನೂ ಈಗಲಾದರೂ ಅವರ ಕುಟುಂದವರು ಭರಿಸಿದರೆ ಅವರು ನಂಬಿಕೊಂಡ ತತ್ವಗಳಿಗೆ ಗೌರವ ತಂದು ಕೊಟ್ಟಂತಾಗುತ್ತದೆ ಎಂಬುದು ಹೇಗಾದೀತು…?  ಬದುಕಿನ ಲಾಜಿಕ್ ತಂತ್ರಜ್ಞಾನದಕ್ಕಿಂತಲೂ ಅತಿ ದೊಡ್ಡದು.  ನೋಡಿ, ಅನಂತ ಮೂರ್ತಿಯವರ ಪಾರ್ಥಿವ ಶರೀರದೊಂದಿಗೇ ಅವರು ನಂಬಿಕೊಂಡು ಬಂದಿದ್ದ ತತ್ವಗಳೂ ಭಸ್ಮವಾಗಿ ಹೋಗಿವೆ ಎಂದರೆ…. ಕ್ಷಮಿಸಿ ಅವರ ಅಭಿಮಾನಿಗಳ ಮನಸ್ಸಿಗೆ ಈಗಾಗಲೇ ನೋವಾಗಿದೆ ಇನ್ನಷ್ಟು ನೋವುಂಟು ಮಾಡಲಾರೆ.

ಸರ್ಕಾರದ ಖರ್ಚಿನ ಬಾಬ್ತಿನ ವಿಷಯಕ್ಕೆ ಬಂದರೆ, ನಮ್ಮ ಇಂದಿನ ಮಾನ್ಯ ಮುಖ್ಯ ಮಂತ್ರಿಗಳು ಒಳ್ಳೆಯದನ್ನೇ ಮಾಡಿದ್ದಾರೆ. ಬೇರೆ ಯಾವುದೇ ಸರ್ಕಾರವಿದ್ದರೂ ಅನಂತ ಮೂರ್ತಿಯವರ ಒಂದುದಶಕದಷ್ಟು ಕಾಲ ಅನಾರೋಗ್ಯದಿಂದ ಇದ್ದಾಗಲೂ ಚಿಕಿತ್ಸೆಯ ಖರ್ಚು ಭರಿಸಿತ್ತು ಅಲ್ಲವೇ..?  ಅದು ಸರ್ಕಾರ ಗಣ್ಯರಿಗೆ ಮಾಡ ಬೇಕಾದ ಕಾರ್ಯತತ್ಪರತೆಯೇ. ಹಾಗೆ ಲಕ್ಷಗಟ್ಟಲೇ ಚಿಕಿತ್ಸೆಯ ಭತ್ಯ ಭರಿಸಿರುವ ಸರ್ಕಾರಕ್ಕೆ ಕೇವಲ ೫೦ ಕೇಜಿ ಶ್ರೀಗಂಧ, ೨೦ ಕೆಜಿ, ತುಪ್ಪ ಇತ್ಯಾದಿ ಸಂಸ್ಕಾರದ ವೆಚ್ಚಗಳೆಲ್ಲ ಯಾತರ ಲೆಕ್ಕ…? ಕೋಮುವಾದಿಯಲ್ಲದ ( ಇದು ರಾಜಕೀಯದಲ್ಲಷ್ಟೇ ಅತೀ ಬಳಕೆಯಲ್ಲಿರುವ ಪದ ಅಲ್ಲವೇ… ಹಾಗೆ ನೋಡಿದರೆ ನಮ್ಮ ದೇಶವೇ ಜ್ಯಾತ್ಯಾತೀತ ದೇಶ…! ) ಆಗಿಹೋದ ಸರ್ಕಾರಗಳ ಮುಖ್ಯ ಮಂತ್ರಿಗಳೆಷ್ಟೋ ಪ್ರವಾಹ ಕಾಲದಲ್ಲಿ ಉಕ್ಕುಕ್ಕಿ ಹರಿವ ನದಿ ತಟಕ್ಕೆ ಹೋಗಿ ಗಂಗೆ ಪೂಜೆ ಮಾಡಿದ ಉದಾಹರಣೆಗೂ ನಮ್ಮ ಮುಂದೆ ಬಹಳಷ್ಟಿವೆಯಲ್ಲ…! ಅವು ಮಾತ್ರ ಏಕೋ ಮೂಢ ನಂಬಿಕೆಯಾಗದೇನೆ ಪ್ರಶ್ನಾತೀತವಾಗಿ ಬಿಡುತ್ತವೆ! ಯಾಕೆಂದರೆ, ನಮ್ಮದು ಜ್ಯಾತ್ಯಾತೀ ರಾಷ್ಟ್ರವೆಂಬುದು ಅಷ್ಟರ ಮಟ್ಟಿಗಾದರೂ “ಋಜುವಾತು” ಆಗಿರುತ್ತದೆ. ಯಾವುದೇ ಪಕ್ಷದ ಸರ್ಕಾರಕ್ಕೂ ಅದೇ ಅಲಿಖಿತ ಕಾನೂನು ಅಲ್ಲವೇ..?

ಈ ವಿಚಾರವನ್ನು  ಪ್ರಶ್ನೆಮಾಡದೇ …ಅವರ ಸಾವಿನೊಂದಿಗೇ ಬಿಟ್ಟುಬಿಡೋಣ.  ದಿವಂಗತರಾದವರಿಗೆ ಯಾಕೆ ಪ್ರಶ್ನೆ ಹಾಕಬೇಕು…? ಅವರ ಮಾತು ನಡೆದುಕೊಂಡ ಕೃತಿಯಂತೇ ಪ್ರಶ್ನೆ ಪ್ರಶ್ನೆಯೇ ಆಗಿ ಬಿಡುತ್ತದಲ್ಲವೆ….?
ಯಾಕೆಂದರೆ, “ಅವರವರ ಭಾವಕ್ಕೆ ಅವರವರ ವೇಷದಲಿ…” ಎಂಬಂತೆಯೇ  ಸಾಹಿತಿಯೇ ಆಗಲಿ, ಸಂನ್ಯಾಸಿಯೇ ಆಗಿರಲಿ ಪ್ರತಿಯೊಂದು ವ್ಯಕ್ತಿತ್ವವೂ ಬೇರೆ ಬೇರೆಯೇ.  (ಅದು ಆತ್ಮವಿಲ್ಲ ಅಂದುಕೊಂಡರೇನು) ತನ್ನದೇ ಮೋಕ್ಷವನ್ನು ತಾನೇ ಕಂಡುಕೊಳ್ಳಬೇಕಲ್ಲ… ಅದಕ್ಕೇ ಅವರ ಅನುಯಾಯಿಗಳಾಗಲಿ ಅಭಿಮಾನಿಗಳಾಗಲಿ ಹೊಣೆಯಲ್ಲ; ಸಂಕಟ ಪಡಬೇಕಿಲ್ಲ ಎಂಬುದೇ ನನ್ನ ಅನ್ನಿಸಿಕೆ.

“ಚಿಂತನೆ ಮುಗಿಸಿದ ಒಬ್ಬ ಅವಿಶ್ರಾಂತ ಚಿಂತಕ”  ಎಂಬ ಕೆಳಗಿನ ಕೊಂಡಿ  ನೋಡಿ

ಒಬ್ಬ ಅವಿಶ್ರಾಂತ “ಮಹಾನ್ ಚಿಂತಕ”ನ ಅಂತಿಮ ವಿದಾಯ.


ananthamurthyನಿನ್ನೆ (22, ಆಗಸ್ಟ್ 2014) ಡಾ.ಯು.ಆರ್. ಅನಂತ ಮೂರ್ತಿ ನಿಧನ ವಾರ್ತೆ ಕೇಳಿದೆವು. ಸುಂದರ ಪುರುಷ. ಧೀಮಂತ ವ್ಯಕ್ತಿತ್ವದ ಛಾಪು  ಅವರಿಗೆ ಹುಟ್ಟಿನಿಂದ ಪಡೆದು ಬಂದದ್ದೇ  ಇರಬೇಕು. ಕುವೆಂಪು, ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ. ಕೆ.ಎಸ್.ನ. ಅವರ ಕಾಲಘಟ್ಟದಲ್ಲಿ ಸಾಹಿತಿಗಳೆಂದರೆ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯ ಮತ್ತು ಸಾಮಾಜಿಕ ಬದ್ಧತೆಯ ಪ್ರತಿನಿಧಿಗಳಂತಿದ್ದವರೇ ಹೆಚ್ಚು. ಆ ಹಿರಿಯ ಸಾಹಿತಿಗಳ ಬಗ್ಗೆ ನಮಗೇ ಅರಿಯದ ಅವಿನಾಭಾವ ಸಂಬಂಧವಿತ್ತೆಂದು ಹೇಳಲು ನಿಜಕ್ಕೂ ಹೆಮ್ಮೆಯೇ. ಅವರುಗಳ ನಿಧನದ ವಾರ್ತೆ ಕೇಳಿದಾಕ್ಷಣಗಳಲ್ಲಿ ಅದೇನೋ ದುಗುಡ ನಮಗೆ ಹತ್ತಿರದ ಸಂಬಂಧಿಯನ್ನೇ ಕಳೆದುಕೊಂಡ ತೀವ್ರ ಸಂತಾಪದ ಅನುಭವವಾಗುತ್ತಿತ್ತು. ಅಲ್ಲದೇ ದುಃಖ ದುಗುಡ ಹೆಪ್ಪುಗಟ್ಟುತ್ತಿತ್ತೆಂದರೆ ಉತ್ಪ್ರೇಕ್ಷೆಯಾಗಲಾರದು…

ಆದರೆ, ಕುವೆಂಪು, ಕಾರಂತ, ಮಾಸ್ತಿ ಅವರಂತೇ ಜ್ಞಾನಪೀಠ ಪುರಸ್ಕೃತರೂ ಆದ ಡಾ.ಯು.ಆರ್ ಅನಂತ ಮೂರ್ತಿ ಅವರ ಸಾವು ನನ್ನ ಹಾಗೆಯೇ ಸಾಮಾನ್ಯರ ಆಂತರ್ಯಕ್ಕೆ ತಟ್ಟದೇ ಹೋಯಿತೆಂದು ಹೇಳಿದರೆ ತಪ್ಪಾಗಲಾರದಲ್ಲ… ಅದು ಅವರದೇ ನಂಬಿಕೆಗಳಿಂದಾಗಿ ವಿವಾದಾಸ್ಪದ, ವಿಕ್ಷಿಪ್ತ ಹಾಗೂ ವಿಶಿಷ್ಟ ವಿಚಿತ್ರ ವ್ಯಕ್ತಿತ್ವದ ಪರಿಣಾಮವೋ ಅಥವಾ  ಬರಬರುತ್ತ ಬದಲಾದ ಕಾಲಘಟ್ಟದ ಪ್ರಭಾವವೇ ಅವರ ಮೇಲಾದುದರ ಪರಿಣಾಮವೋ ಏನೋ…

ಡಾ.ಶಿವರಾಮ ಕಾರಂತರ ಹೇಳಿರುವರೆಂಬ ಒಂದು ಮಾತು ಈ ಸಂದರ್ಭದಲ್ಲಿ ನೆನಪಾಗುತ್ತದೆ- “ನನ್ನ ಬರವಣಿಗೆಗಿಂತಲೂ ನಾನು ಬದುಕಿದ ರೀತಿ ನೋಡಿ ಎನ್ನುತ್ತಿದ್ದರಂತೆ.

ಡಾ.ಮಾಸ್ತಿವೆಂಕಟೇಶ ಅಯ್ಯಂಗಾರ್ಯರು ಪತ್ರಕರ್ತರೇ ಆಗಲಿ, ಯಾವ ವಿಚಾರವಾದಿಗಳೆಂಬ ಎಡಪಂಥೀಯರೇ ಇರಲಿ,ಮಾಸ್ತಿ ಅವರಿಗೆ ದೇವರಲ್ಲಿದ್ದ ಅಚಲ ನಂಬಿಕೆಯ ಬಗ್ಗೆ  ಪ್ರಶ್ನಿಸಿದರೆ, “ನೀವು ಯಾವುದು ಕಾಕತಾಳೀಯ ಎನ್ನುತ್ತೀರೋ, ಯಾವುದೂ ಆಕಸ್ಮಿಕ ಎನ್ನೂತ್ತೀರೋ ಅವುಗಳ ವಿನ್ಯಾಸದ ಫಲವೇ ದೇವರು” ಎಂದು ಖಡಾಖಂಡಿತವಾಗಿ ನುಡಿಯುತ್ತಿದ್ದರು.

ಅನಂತ ಮೂರ್ತಿ ವಿದ್ಯಾರ್ಥಿ ದೆಸೆಯಲ್ಲಿಯೇ ರಷ್ಯಾ ಕ್ರಾಂತಿಯಾದದ್ದು ಘೋರ ಅಪರಾದವೆಂದು ಚಿರ್ಚಿಸುತ್ತ ಅಪ್ಪನ ಎಂಜಲ ಕೈಯಲ್ಲೇ ಕಪಾಳಕ್ಕೆ ಹೊಡೆತ ತಿಂದು, ತಾನು ತನ್ನದೇ ದಾರಿಯಲ್ಲಿ ನಡೆಯುವ ಚಿಂತಕ ಎಂಬ ಸೂಚನೆ ಕೊಟ್ಟವರು. ಬಿಂಬ ಬಿಂಬೋಸ್ಮಿ(ನಾನು ಬಿಂಬ. ನೀನು ಪ್ರತಿಬಿಂಬ) ಎಂಬ ತತ್ವವನ್ನಿಟ್ಟು ಕೊಂಡು ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದ ಅನಂತ ಮೂರ್ತಿಯವರಿಗೆ ಬದುಕಿನ ಉತ್ತರಾರ್ಧದಲ್ಲಿ ಮಾತನಾಡುವುದೆಂದರೆ ಬದುಕಿನಷ್ಟೇ ಬಲು ಪ್ರೀತಿ. ಕಡೆಯವರೆಗೂ ಅವರಿಗಿದ್ದ ಬದುಕಿನ ಪ್ರೀತಿ ಅಷ್ಟೇ ಅನನ್ಯ ಅಷ್ಟೇ  ಪ್ರಶ್ನಾತೀತವಾದದ್ದು.

“ಮೌನಿ” ಅವರ ಕೃತಿಗಳಲ್ಲೊಂದು. ಆದರೇನು! ಬರಹದಷ್ಟೇ ಮಾತೂ ಕೂಡ ನನ್ನ ಅಭಿವ್ಯಕ್ತಿ ಮಾಧ್ಯಮ ಎಂದಿದ್ದಾರೆ. ಬರವಣಿಗೆಗಿಂತಲೂ ಮಾತು ತಟ್ಟನೆ ಸಿಡಿಸುವುದರಿಂದಲೇ ಅಂತಿಮ ದಿನಗಳಿಗೆ ಸಮೀಪಿಸಿದ ಇತ್ತೀಚೆನ ವರುಷಗಳಲ್ಲಿ ಅತ್ಯಂತ ವಿವಾದಾಸ್ಪದ ಹಾಗೂ ಅಷ್ಟೇ ಸಮಸ್ಯಾತ್ಮಕ ವ್ಯಕ್ತಿಯಾಗಿ ಅವರೇ ಒಂದು ಬೃಹತ್ “ಪ್ರಶ್ನೆ” ಯಾಗಿದ್ದರು. (“ಪ್ರಶ್ನೆ” ಎಂಬುದೂ ಅವರದೇ ಕೃತಿಗಳಲ್ಲೊಂದು) ಪ್ರಾಯಶಃ ಜ್ಞಾನಪೀಠ ಪುರಸ್ಕೃತರಾದ ಬಳಿಕ, ತಮ್ಮನ್ನು  ಸಾಮಾಜಿಕ ನ್ಯಾಯದ ಹರಿಕಾರ ಮತ್ತು ಚಿಂತಕ ಜ್ಯಾತ್ಯಾತೀತ ಪ್ರತಿಪಾದಕ ಎಂದು ಗುರುತಿಸಿಕೊಳ್ಳುವ ಭರದಲ್ಲಿ ಎಡವಿದರೇನೋ… ಹಾಗೆ  ಇದ್ದರೇನೆ ಪ್ರಗತಿಪರ ಸಾಹಿತಿ ಎನಿಸಿಕೊಳ್ಳಲು ಸಾಧ್ಯವೆಂದೂ, ಯಾವುದೇ ಕ್ಷೇತ್ರದಲ್ಲಿ ಮುಂದುವರೆಯಲು ಸರ್ಕಾರದ ಬೆಂಬಲವೂ ಇರಬೇಕೆಂಬುದನ್ನು ಅವರದೇ ಜೀವನ ಶೈಲಿಯಲ್ಲಿ ನಿಜಕ್ಕೂ “ಋಜುವಾತು” (ಅದು ಅವರೇ ನಡೆಸುತ್ತಿದ್ದ ಮಾಸಿಕ ಪತ್ರಿಕೆ “ಋಜುವಾತು”) ಮಾಡಿದ ಅನಂತ ಮೂರ್ತಿ ಕಳೆದ ಕೆಲವು ವರುಷಗಳಿಂದೀಚೆಗೆ ಅನಾರೋಗ್ಯ ಪೀಡಿತರಾದಾಗ ತಾವು ಬಿಂಬವಾಗಿ ಆಡಳಿತಾರೂಢಪಕ್ಷವೇ ಬಿಂಬೋಸ್ಮಿಯಾಗಿ ಕಂಡುಕೊಂಡದ್ದು ಅತಿಶಯೋಕ್ತಿಯೇನಲ್ಲ.

ಯು.ಆರ್. ಅನಂತ ಮೂರ್ತಿ ಅವರು ಸಾಹಿತ್ಯಲೋಕಕ್ಕೆ ಪ್ರವೇಶಿಸಿದ್ದೇ ಅವರ ಮೊದಲ ರಚನೆಯಾಗಿ ಬಂದ  ವಿವಾದಾಸ್ಪದ ಕಾದಂಬರಿಯಾದ “ಸಂಸ್ಕಾರ” ದಿಂದ.  ಜೀವಿತದುದ್ದಕ್ಕೂ ಒಂದಲ್ಲ ಒಂದು ತಮ್ಮದೇ ಮಾತುಗಳಿಂದ ವಿವಾದಗ್ರಸ್ಥರಾಗಿ ವಿಚಿತ್ರ ವಿಕ್ಷಿಪ್ತ ವ್ಯಕ್ತಿಯಂತೇ ಕಾಣಿಸಿಕೊಳ್ಳುತ್ತಿದ್ದವರು.
ಒಮ್ಮೆ ಕನ್ನಡದ ಹೆಸರಾಂತ “ತರಂಗ (೧೯-೦೨-೧೯೯೫) ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, “ಕ್ರಿಸ್ತ ಚಾರಿತ್ರಿಕ ವ್ಯಕ್ತಿ, ಮಹಮ್ಮದ್ ಚಾರಿತ್ರಿಕ ವ್ಯಕ್ತಿ. ರಾಮ ಚಾರಿತ್ರಿಕ ವ್ಯಕ್ತಿಯಲ್ಲ. ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಲ್ಲ. ಗೋಡ್ಸೆ ಗುಂಡು ಹೊಡೆದಾಗ ಗಾಂಧೀಜಿಯ ಬಾಯಿಂದ” ಎಂದು ನಕ್ಕು ಲೇವಡಿ ಮಾಡಿದ್ದರು.
ವಿಪರ್ಯಾಸವೆಂದರೆ, ಸಾಂಪ್ರದಾಯಿಕ “ಸಂಸ್ಕಾರ” ದ ಬಗ್ಗೆ ಟೀಕಾಚಾರ್ಯರಾಗಿದ್ದ ಅನಂತ ಮೂರ್ತಿ ಅನಂತದಲ್ಲಿ ಲೀನವಾಗಲು  ಅಗ್ನಿ ಸಂಸ್ಕಾರವೇ ಆಗಬೇಕಾಯಿತು. 

ಅಂತೂ ಒಬ್ಬ ಅವಿಶ್ರಾಂತ(ಅಶಾಂತ) “ಮಹಾನ್ ಚಿಂತಕ” ತನ್ನದೇ ಚಿಂತನೆಗೆ ಸಂಪೂರ್ಣ ವಿರಾಮ ಹಾಕಿ ವಿದಾಯ ಹೇಳಿದ್ದಾರೆ. ನನ್ನದೊಂದು ಕಥೆಯಲ್ಲಿ ಬರೆದಿದ್ದೆ- “ಒಂದು ಹುಟ್ಟು ಹೇಳುವ ಲೆಕ್ಕಾಚಾರಕ್ಕಿಂತ ಒಂದು ಸಾವು ತಿಳಿಸಿಕೊಡುವ ಪಾಠ ದೊಡ್ಡದು”

ಅದೇನೇ ಇರಲಿ, ಕನ್ನಡ ಸಾರಸ್ವತ ಲೋಕಕ್ಕೇ ಡಾ.ಯು.ಆರ‍್. ಅನಂತಮೂರ್ತಿ ತಮ್ಮದೇ ಕೃತಿ ಚಿಂತನೆಗಳಿಂದ ಅವರದೇ ಘನತೆವೆತ್ತ ಛಾಪು ಮೂಡಿಸಿರುವುದೂ ಪ್ರಶ್ನಾತೀತವೇ ಅಲ್ಲವೇ…?

ಇತ್ತೀಚೆನ ಪೋಸ್ಟ್  ಕೊಂಡಿ ಕೆಳಗಿದೆ ನೋಡಿ