Category Archives: ಚಿಂತನೆಗಳು

ಸಾಮಾಜಿಕ ಜಾಲತಾಣಗಳಲ್ಲಿ ನಾನೆಷ್ಟರವನು….???!!!


ಅಂತರ್ಜಾಲವೆಂಬ ಮಹಾಜಾಲದಲ್ಲಿ.. ಜಾಲತಾಣಗಳು ಅಸಂಖ್ಯಾನೇಕಾನೇಕ!! ಸಾಮಾಜಿಕ ಜಾಲತಾಣಗಳಲ್ಲಿ ಮಹಾ ಪ್ರಾಜ್ಞರು, ಉಚಿತ ಮಾಹಿತಿ ಹಂಚಿಕೊಳ್ಳುವ ಸಮಯಾ ಸಂದರ್ಭಗಳಲ್ಲಿ ಸಹಾಯ ಮಾಡುವ ಮಹಾನುಭಾವರೂ, ಗೌರವಾನ್ವಿತರಾದ ಮಹಿಳೆಯರೂ ಮತ್ತು ಕಿರಿಯರಲ್ಲಿ ಹಿರಿಯರನ್ನೂ ಹಿಂದೆ ಹಾಕುವಂತ ಜಾಣ ಜಾಣೆಯರೇ ಇರುತ್ತಾರೆ. ಅಲ್ಲಿ ಏನೆಲ್ಲ ಮಾಹಿತಿ ಮತ್ತು ಬೇಕಾದ ವಸ್ತುಗಳೂ ಮುಂಬೆರಳುಗಳಿಗೆ ಎಟಕುವಂತಿರುವ ಇಂದಿನ ಆಧುನಿಕ ಯುಗದಲ್ಲಿರುವ ನಾವುಗಳೂ ನಿಜಕ್ಕೂ ಪುಣ್ಯಶಾಲಿಗಳೇ. ಮಾಹಿತಿ ಹುಡುಕಲು ಗೂಗಲ್ ನಂತ ಮಹಾ ಮುದಿಗೂಬೆ..(ಈಗ ಅದಕ್ಕೆಷ್ಟು ವಯಸ್ಸೆಷ್ಟೋ ತಿಳಿದವರು ಹೇಳಬೇಕು) ಅದರ ವಯಸ್ಸಿಗೂ ಮೀರಿದ ಅನುಭವ ಕಣಜಗಳಿರುವ ತಾಣಗಳಿಗೆ ನಮ್ಮನ್ನು ಕರೆದೊಯ್ಯುತ್ತದೆ!  ಎಷ್ಟೆಂದರೂ ಮನುಷ್ಯ ಸಂಘಜೀವಿಯಲ್ಲವೇ ಸಾಮಾಜಿಕ ಜಾಲತಾಣಗಳನ್ನು ಹುಟ್ಟು ಹಾಕಿದ್ದಾನೆ!

ಜಾಲತಾಣಗಳಲ್ಲಿ ಇದೀಗ ಪೇಸ್ ಬುಕ್ ಬಹಳ ಮಂಚೂಣಿಯಲ್ಲಿದೆಯಲ್ಲವೇ… ? ಕಂಪ್ಯೂಟರ್‍ ಪರಿಭಾಷೆಯಲ್ಲಿಯೇ ಹೇಳಬೇಕೆಂದರೆ ಇದು ವರ್ಚುಯಲ್ ವರ್ಲ್ಡ್ ಅಥವಾ ವರ್ಚುಯಲ್ ರಿಯಾಲಿಟಿ ವರ್ಲ್ಡ್ ಎಂದರೂ ಸರಿಯೇ… ಯಾಕೆಂದರೆ, ಇದು ಮಿಥ್ಯಾ ಪ್ರಪಂಚವೇ ಎಂದರೂ, ಇಲ್ಲಿ ನಾವು ನೋಡುವುದೆಲ್ಲವೂ ಮಿಥ್ಯೆಯೇ ಎಂದು ತಿಳಿಯಲಾಗದಲ್ಲ. ಈ ಮಾಹಿತಿಯುಗದಲ್ಲಿ ಇಲ್ಲಿ ಮಹಾಹೂರಣವೇ ಅಡಗಿರುತ್ತದೆ. ಅದನ್ನು ಜಾಲಾಡಿ ಹುಡುಕಿ ಪಡೆದುಕೊಂಡು ಪ್ರಯೋಜನ ಪಡೆಯುವವರೇ ನಿಜಕ್ಕೂ ಬುದ್ಧಿವಂತರು. ಇಲ್ಲಿ ಅತಿ ಬುದ್ಧಿವಂತರು ಮುಗ್ಧರೂ, ಅಪ್ರಬುದ್ಧರೂ ನಿಮಮ್ಮ ಖಾಸಗಿ ಮಾಹಿತಿ ಕದಿಯುವ ಕಳ್ಳರೂ, ಸುಳ್ಳರೂ, ಭಂಡರೂ, ಭಯೋತ್ಪಾದಕರೂ ಇನ್ನೂ ಎಂಥೆಂಥ ವಿಚಿತ್ರ ವಿಕೃತ ಮನಸ್ಕರೂ ಇರುತ್ತಾರೆ ಅಲ್ಲವೇ… ಅದಿರಲಿ, ಇಲ್ಲಿ ಸಹೃದಯಿಗಳೂ, ವಿಚಾರಶೀಲರು, ಖ್ಯಾತ ಸಾಹಿತಿಗಳೂ, ಕಲಾವಿದರೂ, ಸಿನಿಮಾ ನಟ ನಟಿಯರೂ, ವೈದ್ಯರೂ, ಸಮಾಜ ಸುಧಾರಕರೂ, ರಾಜಕಾರಣಿಗಳೂ, ರೌಡಿಗಳು, ರಸಿಕರು ಕಾಮುಕರು, ಅಶ್ಲೀಲ ತಾಣಗಳಲ್ಲಿ ವಿಜೃಂಭಿಸುವ ಜಗದೇಕ ಸುಂದರ, ರಮಣಿಯರು ಸ್ಪುರಧ್ರೂಪಿ ರಮಾರಮಣರೂ, ಇವರಲ್ಲದೇ ಮಹಾನ್ ಸಾಧಕರೂ ಸಂತರೂ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದ್ದರಿಂದಲೇ, ಇದನ್ನೂ ವರ್ಚುಯಲ್ ನಲ್ಲೇ ರಿಯಾಲಿ ವರ್ಲ್ಡ್ ಎಂದು ಕರೆದಿದ್ದಾರೆ. ಆನ್ ಲೈನ್ ಜಾಲತಾಣಗಳ ಈ ಮಹಾ ಸಮುದ್ರದಲ್ಲಿ ಈಗ ನಾನು (ಕಂಪ್ಯೂಟರ್ ನಲ್ಲಿ ಒಬ್ಬ ಸಾಮಾನ್ಯ ಶಿಕ್ಷಕನಾಗಿದ್ದ ವನಾಗಿಯೂ)ನನ್ನ ಅನುಭವದಲ್ಲಿ ಹೇಳಲೇ ಬೇಕೆನಿಸಿದ ಒಂದಿಷ್ಟು ವಿಷಯಕ್ಕಷ್ಟೇ ಬರುವ ಪ್ರಯತ್ನ ಮಾಡುತ್ತೇನೆ.

ಮೊದಲು ಇದನ್ನು ಓದಿ- ಕಂಪ್ಯೂಟರ್‍ ತಂತ್ರಜ್ಞಾನದಲ್ಲಿ ನಮಗೆ ಬೇಕು ಬೇಡ ಎಂಬುದನ್ನು ಉಳಿಸಿಕೊಳ್ಳಲಿಕ್ಕೆ ಎಷ್ಟು ಸರಳವಾಗಿದೆ ಎಂದರೆ, ನಾವು ಫೀಡ್ ಮಾಡುವುದೇನೆಲ್ಲವೂ ಒಟ್ಟಾರೆ ತಾತ್ಕಾಲಿಕ ಮೆಮೊರಿ  ರ್ಯ್ಯಾ ಮ್ (RAM)ಸ್ವೀಕರಿಸುತ್ತಿರುತ್ತದೆ.  ಅದನ್ನು ನಾವು ಅದೇ ತಾತ್ಕಾಲಿಕ ಮೆಮೊರಿಯಲ್ಲೇ ನಮಗಿಷ್ಟಬಂದಂತೇ  ಪರಿಷ್ಕರಿಸಿ ನಮಗೆ ಸರಿಯೆನಿಸಿದರೆ ಮಾತ್ರ, ಇನ್ನೊಂದು ಕಮಾಂಡ್ ಕೊಟ್ಟು ಶಾಶ್ವತ ಮೆಮೊರಿ-ಸ್ಟೋರೇಜ್ ಡಿಸ್ಕ್ ಗೆ ಕಳುಹಿಸುತ್ತೇವೆ ಅಲ್ಲವೇ…? ನಾನೂ ಕಂಪ್ಯೂಟರ್‍ ಶಿಕ್ಷಕನಾಗಿ  ಕಂಡುಕೊಂಡ ಪರಮ ಸತ್ಯವೆಂದು ಪ್ರಾರಂಭಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಇದನ್ನೇ ಹೇಳುತ್ತೇನೆ.
ಮೇಲೆ ಹೇಳಿದುದನ್ನೇ ಮನುಷ್ಯನಿಗೂ ಹೋಲಿಸಿ ನೋಡಿ,

ಮುಂದುವರೆದ ಮಾಹಿತಿಯುಗದಲ್ಲಿ ಸೋಷಿಯಲ್ ನೆಟ್ ವರ್ಕ್ ಗಳು ಆನ್ ಲೈನ್ ನಲ್ಲಿ ಬಹಳಷ್ಟು ಕಾಣಸಿಗುತ್ತವೆ. ಈಗ ಬಹಳ ಮುಂಚೂಣಿಯಲ್ಲಿದೆಯೆಂದೇ ಕೇಳಿಬರುತ್ತಿರುವುದೆಂದರೆ ಫೇಸ್ ಬುಕ್! ಮೊಬೈಲ್ ಇದ್ದವರ ಕೈಯಲ್ಲಿ ಇಂಟರ್‍ ನೆಟ್ ಯ್ಯಾಕ್ಸೆಸ್ ಇದೆಯೆಂದರೆ, ಫೇಸ್ ಬುಕ್ ನಲ್ಲಿ ಖಾತೆ ಇಲ್ಲದೇ ಇರುವುದಿಲ್ಲ. ಇಲ್ಲಿ ವಯಸ್ಸಿನ ಬೇಧವೆಂಬುದಿಲ್ಲ… ಎಲ್ಲವೂ ಮುಕ್ತ ನೋಟವೇ ಸಮಾಲೋಚನೆಯೇ…  ಯುಕ್ತಾಯುಕ್ತತೆ ಯಾವುದೆಂದು ಅದನ್ನು ಸ್ವೀಕರಿಸುವುದು/ಬಿಡುವುದಕ್ಕೆ (ಬೇಕಾದುದಷ್ಟನ್ನೇ ಮೆಮೊರಿಯಲ್ಲಿ ಸೇವ್ ಮಾಡಿಕೊಳ್ಳುವುದಕ್ಕೆ)ಎಲ್ಲರೂ ಸರ್ವಸ್ವತಂತ್ರರೂ ಕೂಡ.  ಆದರೆ, ಕೇಳುವುದರಿಂದ ಅಥವಾ ಏನನ್ನೂ ಓದುವುದರಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಒಟ್ಟಾರೆಯಾಗಿ ನಮ್ಮ ತಲೆಗೆ ಬಂದುದನ್ನು ಮಿದುಳಲ್ಲಿ ಸೇವ್ ಮಾಡಿಕೋಳ್ಳುವಾಗ, ಯಾವುದು ಒಳ್ಳೆಯದು ಕೆಟ್ಟದ್ದೂ ಎಂಬ ತಾರ್ಕಿಕ ಮತ್ತು ತಾರತಮ್ಯ ದೃಷ್ಟಿಯಿಂದ ಆಲೋಚಿಸಿ ವಿವೇಚಿಸಿ “ಜ್ಞಾನಸಂಸ್ಕರಣೆ” ಮಾಡಿಕೊಳ್ಳಬೇಕಾಗುತ್ತದೆ. …
‌ಇತ್ತೀಚೆಗೆ ನಾನು ಫೇಸ್ ಬುಕ್ ನಲ್ಲಿ ನಾಲ್ಕು ಸಾಲಿನ ಬರಹವೊಂದಕ್ಕೆ ಕಾಮೆಂಟ್ ಮಾಡಿ “ಮಹಾ ಅಪರಾಧ” ಮಾಡಿದೆನೇ…? ಜನರೇಷನ್ ಗ್ಯಾಪ್ ನಲ್ಲಿ  ಭಾಹಳ ದೊಡ್ಡ ಕಂದಕವಿದೇ ಕಣ್ರೀ ಅದನ್ನು ದಾಟಲು ಹೋದ್ರೆ ಸುಮ್ಮನೆ ಟೆನ್ಷನ್ ಕಣ್ರೇ…. ಫೇಸ್ ಬುಕ್ ನಂಥ ಮಹಾ ಸೋಷಿಯಲ್ ನೆಟ್ ವರ್ಕ ನಲ್ಲಿ ಹಾಗೆ ಸುಮ್ಮನೇ ವಿಡಿಯೋನೋ, ನನ್ನ ಮುದಿ ಫೋಟೋ ನೋಡಲಿ ಬಿಡಲಿ ನನ್ನ ವಿವಿಧಭಂಗಿಗಳನ್ನೋ ,ಮತ್ತೇನನ್ನೋ ಷೇರ್‍ ಮಾಡಿಕೊಂಡು ಇಲ್ಲವೇ, ಇತರರ ಸೈಟ್ ನಲ್ಲಿ ಕಂಡುದ್ದು  ಇಷ್ಟವಾಗಲಿ ಆಗದಿರಲಿ(ಕಾಮೆಂಟ್ ಮಾಡದೇನೆ) ಲೈಕ್ ಅಂತ ಕುಟ್ಟಿದರೆ ಸಾಕು, ಯಾಕೆಂದರೆ, ಹೊಗಳಿ ಕೆಟ್ಟವರುಂಟೇನ್ರೀ…. ನಾಲ್ಕಾರು ಸಮಾನವಯಸ್ಕರು/ ಒಳ್ಳೆಯ ಹುಡುಗ/ಗಿಯರೂ ಇದಾರೆ ಅವರು ಸ್ನೇಹಿರಾದರೆ ಸಾಕು ಸಂತೋಷದಿಂದ ಕಾಲಾಹರಣ ಮಾಡೋದೇ ಬೆಸ್ಟ್ ರೀ…
ಎಲ ಎಲಾ..! ಈಗಿನ ಹುಡುಗ/ಗಿಯರು ಹೆಚ್ಚಿಗೆ ಸಾಲು ಬರೆದು ಪೋಸ್ಟ್ / ಕಾಮೆಂಟ್ ಮಾಡಿ ಸಿಕ್ಕಿ ಹಾಕ್ಕೋಳ್ಳಲ್ಲ ನೋಡ್ರಿ.. ಅವರ ಕಡು ಜಾಣ ಜಾಣೆಯರು ಕಣ್ರೀ!  ಅವರಷ್ಟು ಚುರುಕು ಬುದ್ಧಿವಂತಿಕೆ ಈ ಮುದಿಗೂಬೆ ಎಲ್ಲಿಂದ ಬರಬೇಕ್ರೇ..? ಏನೋ ಅನಿಸಿದ್ದನ್ನ ಅಷ್ಟಿಷ್ಟು ಗೀಚಿ ಕೈಕಟ್ಟುಕೊಂಡು ಕಾಮೆಂಟ್ ನಿಂದ ದೂರವಿದ್ದರೇನೆ ಮನಃಶಾಂತಿಸರಿ!.  ಇನ್ನೊಬ್ಬರು ಬರೆದದ್ದರ ಮೇಲೆ ಏನೋ ನನಗೆ ತಿಳಿಯ ಹೇಳಲು ಹೋದೆನೋ ಸುಮ್ಮನೇ ಈ ವಯಸ್ಸಿಗೆ ವಿಪರೀತ ಟೆನ್ಷಷನ್ ಅಲ್ವೇ…ಆರೋಗ್ಯವೂ ಹಾಳು ನನ್ನ ಹೆಂಡ್ತಿ ಮಕ್ಕಳೂನೂ  ಬೈತಾರೆ, ಕಣ್ರೀ. ಪುಣ್ಯಕ್ಕೆ ನನ್ನ ಮಕ್ಕಳ ಜೊತೆ ಆಪ್ತ ಮಿತ್ರನಿಗಿಂತಲೂ ಹೆಚ್ಚಾಗಿ ವರ್ತಿಸೋದ್ರಿಂದ ಅವರು ಎಲ್ಲವನ್ನೂ ಮುಕ್ತವಾಗಿ ನನ್ನೊಡನೆ ಚರ್ಚಿಸುತ್ತಾರೆ. ಅವರೆಲ್ಲ ಸಾಫ್ವ್ ವೇರಿಗಳೇ ಆದರೂ ಅವರ ಮೇಲೆ ನನ್ನ ಅಭಿಪ್ರಯವನ್ನೇನೂ ಬಲವಂತವಾಗಿ ಹೀಗೇ ಇದೆಂದು ಹೇರೋಲ್ಲ… ಯಾಕೆಂದ್ರೆ ಅವರಿಗೆ ಗೊತ್ತು ಬೇಕಾದ್ರೆ ಸೇವ್ ಮಾಡ್ಕೋಳ್ಳಿ ಇಲ್ಲಾ ಬಿಡ್ರೀ ಅಂತಾರೆಂತ!  ಎಷ್ಟೇ ಆಗಲಿ, ಅವರಿಗೆ ಕಂಪ್ಯೂಟರ್‍ ಬೇಸಿಕ್ ಟೀಚರ್‍ ನಾನೇ ಆಗಿದ್ದೇ ಅಲ್ಲವೇ… ಹದಿನೈದು ವರುಷಗಳ ಕೆಳಗೆ ಅನ್ನಿ… ಈಗವರು  ಆ ತಂತ್ರಜ್ಞಾನದಲ್ಲಿ ನನ್ನ ನ್ನ ಮೀರಿಸಿದಾರೆ ಬಹಳ ಮುಂದೆ ಹೋಗಿದ್ದಾರೆ ಅಪ್ಪನಿಗೆ ಅದು ಸಂತೋಷವೇ..
ಇಷ್ಟೆಲ್ಲಾ ಹೇಳೋದ್ಯಾಕೇಂದ್ರೆ-  ನೋಡಿ ನನ್ನ ಅನುಭವದಲ್ಲೇ ಹೇಳೋದಾದ್ರೆ ಅಹಂಕಾರ ಎನ್ನುವುದನ್ನು ನಾವು  ಮಕ್ಕಳೆದುರಿಗೂ ತೋರಿಸಬಾರದು.  ಅದೋ ಮನುಷ್ಯನಿಗೆ ಎಳೆ ಮಗುವಿನಿಂದಲೇ ಇರುತ್ತದೆ.  ಈಗಿನ ಮಕ್ಕಳಂತೂ ಕೇಳಬೇಕೇ….? ಯಾಕೆಂದರೆ, ಒಂದು ಪುಟ್ಟ ಮಗುವನ್ನು ಮಾತನಾಡಿಸಿ ನೋಡಿ, ಅದು “ಉಹೂಂ” ಎಂದೋ, “ಹ್ಞಾಂ” ಎಂದೋ ರಾಗವಾಗಿ ಮುಖ ತಿರುಗಿಸುತ್ತದೆ. ಅದು ನೀವು ಮೆದುವಾಗಿ ಮೆಲುವಾಗಿ ಕರೆದರೂ ಬರಲಾರದು. ಅಂತೆಯೇ ವೆಂಕಟೇಶ ಪುರಾಣದಲ್ಲಿ ಹೇಳಲ್ಪಟ್ಟಿದೆ. ನಾನು ವೆಂಕಟೇಶ ಪುರಾಣ ಕಥೆಯನ್ನೂ ೧೫ ವರುಷಗಳೇ ಅಭ್ಯಸಿ ಪುಸ್ತಿ ಬರೆದಿದ್ದೇನೆ ” “ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ”   ಎಂದು ಅದರಲ್ಲಿ ಭೃಗು ಮಹರ್ಷಿ ಅಹಂಕಾರಿ,  ಆದ್ದರಿಂದ, ಅಹಂಕಾರದ ಬಗ್ಗೆ ಸಾಕಷ್ಟು ವಿವರಿಸಿ ಬರೆದಿದ್ದೇನೆ. ತ್ರಿಮೂರ್ತಿಗಳ ಸತ್ವ ಪರೀಕ್ಷೆಯಲ್ಲಿ ಮಹಾವಿಷ್ಣುವಿನ ವಕ್ಷಸ್ಥಳಕ್ಕೇ ಒದಿತಾನೆ( ಈ ಶ್ರೀಹರಿಯ ಹೃದಯದಲ್ಲಡಗಿದೆಯೇ ಸತ್ವಗುಣ ಸಾತ್ವಿಕ ಶಕ್ತಿ ಎಂಬುದಾಗಿ).  ನೋಡಿ, ಸೃಷ್ಟಿಕ್ರಿಯೆಯಲ್ಲಿ ಮಹತ್ತಿನಿಂದಲೇ “ಅಹಂಕಾರ ವ್ಯಾಖ್ಯೆ” ಹುಟ್ಟುತ್ತದೆ.  ಅದಕ್ಕೇ “ಅಹಂ ಬ್ರಹ್ಮಸ್ಮಿ” ಎಂದರು. ಈ ಮಹತ್ತಿನ ಅಂಶ ವೆಂಬುದು ಪ್ರತಿ ವ್ಯಕ್ತಿಯಲ್ಲೂ ಅಂತರ್ಗತವಾಗಿರುತ್ತದೆ. ಆದ್ದರಿಂದಲೇ ಅಹಂಕಾರ ಪುಟಿಯದೇ ಇರುವುದಿಲ್ಲ. ಅದನ್ನು ತ್ರಿಗುಣಗಳಲ್ಲಿ ಒಂದಾದ ಸತ್ವಗುಣದಿಂದಲೇ ನಿಗ್ರಹಿಸಬೇಕು. ಮನುಷ್ಯನಲ್ಲಿ ಆ ಮೂರುಗುಣಗಳೆಂದರೆ. ಅವು ಸತ್ವ, ರಜಸ್ಸು, ತಮಸ್ಸು ಎಂಬ ತ್ರಿಗುಣಗಳು. ಇಲ್ಲಿೇ ಯಾವಾಗಲೂ ಸತ್ವಗುಣ ಒಂದಂಶವಷ್ಟೇ. ಇನ್ನೆರಡರಷ್ಟು ರಜೋಗುಣ, ತಮೋಗುಣ ಸ್ವಭಾವದವರು ತ್ರಿಗುಣಾತ್ಮಕ ಪ್ರಪಂಚ

ಸತ್ವಗುಣಾಢ್ಯರಲ್ಲಿ ಅಹಂ ಇರುವುದಿಲ್ಲ. ಅವರಿಗೆ  ತಮ್ಮ ಅನುಭವದ ವಿಶಾಲ ದೃಷ್ಟಿಯಲ್ಲಿ ವಿಚಾರಶೀಲತೆಯಲ್ಲಿ ಆತ್ಮವಿಶ್ವಾಸವಿರುತ್ತದೆ. ಅವರು ಹಿರಿಯರಾದರೆ ಅವರ ಹಲವಾರು ವರುಷಗಳ ಅನುಭವವೇ ಮಾತನಾಡುತ್ತದೆ; ಅವರಿಗೆ ಇನ್ನೊಬ್ಬರು ತಾವು ಹೇಳಿದುದನ್ನೇ ಸರಿಯೆಂದೇ ತಿಳಿಯಬೇಕೆಂದು ಎಂದಿಗೂ ವಾದವನ್ನೂ ಮಂಡಿಸುವುದಿಲ್ಲ. ಅವರು ತಾವು ದೃಢವಿಶ್ವಾಸದಿಂದ ಆ ವಿಷಯದ ಬಗ್ಗೆ ಸಾಧನೆ ಮಾಡಿರುತ್ತಾರೆ. ಅದನ್ನು ಹೇಳಬೇಕೆಂದರೆ, ಅವರು ಮಾತನಾಡಬೇಕು; ಚರ್ಚೆಗಿಳಿದಾಗ ವಾದ ಮಾಡಿ ನಾನೇ ಗೆಲ್ಲಬೇಕು ಎಂಬ ಅಹಂಮಿಕೆ ಅವರಲ್ಲಿ ಎಂದಿಗೂ ಇರುವುದಿಲ್ಲ. ಅವರದು ವಸ್ತು ನಿಷ್ಠೆಯ ವೈಚಾರಿಕತೆ. ಅದನ್ನೇ ಹೇಳುತ್ತಾ ಹೋಗುತ್ತಾರೆ. ತಾವೂ ಕಂಡುಕೊಂಡು ಪ್ರಯೋಜನ ಪಡೆದ ಯಾವುದೇ ವಿಷಯವಿರಲಿ ಮಾಹಿತಿ ಇರಲಿ ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ದೊಡ್ಡಗುಣ ಅವರದು. ಅಲ್ಲದೇ ಅವರು ಹೇಳುವುದೆಲ್ಲವೂ ಕೇಳುವವರೆಲ್ಲರಿಗೂ ಇಷ್ಟವಾಗಲೇ ಬೇಕೆಂಬ ವಾದ ಮಂಡನೆ ಖಂಡಿತ ಅವರಿಗಿರುವುದಿಲ್ಲ. ವಯಸ್ಸಿನಲ್ಲಿ ಕಿರಿಯರಾದರೂ ತಿಳಿದವರಾದರೆ ಅಚ್ಚರಿಯಿಂದ ಹಾಗೇನು ಎಂದು ಕೇಳಿ ತಿಳಿಯುವ ಸೌಜನ್ಯ ಮುತ್ಸದ್ದೀತನ ಅವರದು. ಕಿರಿಯರು ಹೇಳಿದ್ದರಲ್ಲಿ ಸರಿಯಿದ್ದರೆ ತಮ್ಮ ತಪ್ಪು ತಿಳುವಳಿಕೆಯನ್ನು ತಿದ್ದಿಕೊಳ್ಳುತ್ತಾರೆ.

ಈಗಾಗಲೇ ಹೇಳಿದಂತೆ ಉದಾಹರಣೆಗೆ ಕಂಪ್ಯೂಟರ್‍ ತಂತ್ರಜ್ಞಾನದಲ್ಲಿ ಇದನ್ನು ಎಷ್ಟು ಸರಳವಾಗಿದೆ ನಾವು ಕಾಣಬಹುದೆಂದರೆ, ನಾವು ಫೀಡ್ ಮಾಡುವುದೇನೆಲ್ಲವೂ ತಾತ್ಕಾಲಿಕ ಮೆಮೊರಿ ರ್ಯ್ಯಾ ಮ್ ಸ್ವೀಕರಿಸುತ್ತಿರುತ್ತದೆ.  ಅದನ್ನು ನಾವು ಅದೇ ತಾತ್ಕಾಲಿಕ ಮೆಮೊರಿಯಲ್ಲೇ ನಮಗಿಷ್ಟಬಂದಂತೇ ಅದನ್ನು ಪರಿಷ್ಕರಿಸಿ ಸರಿಯೆನಿಸಿದರೆ ಮಾತ್ರ, ಇನ್ನೊಂದು ಕಮಾಂಡ್ ಕೊಟ್ಟು ಶಾಶ್ವತ ಮೆಮೊರಿ-ಸ್ಟೋರೇಜ್ ಡಿಸ್ಕ್ ಗೆ ಕಳುಹಿಸುತ್ತೇವೆ ಅಲ್ಲವೇ…? ನಾನೂ ಕಂಪ್ಯೂಟರ್‍ ಶಿಕ್ಷಕನಾಗಿ ಪ್ರಾರಂಭಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಇದನ್ನೇ ಹೇಳುತ್ತೇನೆ.
ಮೇಲೆ ಹೇಳಿದುದನ್ನೇ ಮನುಷ್ಯನಿಗೂ ಹೋಲಿಸಿ ನೋಡಿ, ನಾವು ಇತರರು ಹೇಳಿದುದನ್ನೆಲ್ಲ ಒಟ್ಟರಾರೆ ನಮ್ಮ ತತ್ಕಾಲಿಕ ಮೆಮೊರಿ (RAM) ನಲ್ಲಿ ಸಂಗ್ರಹಿಸುತ್ತೇವೆ. ಹಾಗೆ ಸಂಗ್ರಹವಾದ ವಿಷಯದಲ್ಲಿ ಪರಿಷ್ಕರಣೆ ಅಗತ್ಯವೆನಿಸಿದರೆ ಅದನ್ನು ಮಾಡಿ ನಮ್ಮ ಮೆದುಳಿನಲ್ಲಿ ಶಾಶ್ವತ ಉಳಿಸಿಕೊಳ್ಳಲೂ ನಾವು ಸ್ವತಂತ್ರರಲ್ಲವೇ..?

ಆದರೆ, ಆ ವಿಷಯವನ್ನು ಇತರರೂ/ಮೂರನೆಯವರೂ ಓದುತ್ತಾರೆ ಎಂದಾಗ ಅವರೂ ಅಷ್ಟೇ.  ಆ ವಿಷಯಕ್ಕೆ ಸಂಬಂಧಪಟ್ಟ ಸಂವಾದಗಳಿದ್ದರೆ(ಫೇಸ್ ಬುಕ್ ಅಥವಾ ಚರ್ಚೆಯ ಸಾಮಾಜಿಕ ಜಾಲತಾಣಗಳಲ್ಲಿ ಎನ್ನಿ)  ಯಾವುದು ಸರಿಯೋ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾರೆ. ಹಾಗೆಯೇ ಇಬ್ಬರ ಸಂಭಾಷಣೆಗಳ ನಡುವೆ ಮೂರನೆಯವರಾದವರಲ್ಲಿ ಜೀವನದಲ್ಲಿ ಅಥವಾ ಆನ್ ಲೈನ್ ನಲ್ಲಿ ಎನ್ನಿ ನಮ್ಮೆದುರಿಗೆ ತಿಳುವಳಿಕಸ್ಥರಿದ್ದರೆ  ಆ ಸಂವಾದ ಮಾಡುತ್ತಿರುವವರ ಮಾತುಗಳನ್ನು ಅಥವಾ ವಾಯ್ಸ್ ಚಾಟಿಂಗ್ ನಲ್ಲಿ ಕೇಳುತ್ತಾ/ಕಮೆಂಟ್ಸ್ ಓದುತ್ತಾ ಅವರಿಬ್ಬರಲ್ಲಿ ಯಾರು ಹೇಳುವುದು ಸರಿ ಎನ್ನುವುದನ್ನು ನಿರ್ಧರಿಸುತ್ತಾರಷ್ಟೇ. ಅದನ್ನು ಆ ತಕ್ಷಣವೇ ಅವರ ನಡುವೆ ಹೇಳುವ ಹಕ್ಕು ತಮಗಿರಲಿ ಇಲ್ಲದಿರಲಿ ಹೇಳುವುದೂ ಅಥವಾ ಕಾಮೆಂಟ್ ಬರೆಯುವುದೂ ಅವರ ನಿರ್ಧಾರಕ್ಕೆ ಬಿಟ್ಟಿದ್ದು.ಆದ್ದರಿಂದ ಇಲ್ಲಿ ಯಾರೂ ಅಹಂಕಾರ ಪಡುವುದೇನಿಲ್ಲ, ಕೋಪ ಮಾಡಿಕೊಂಡು ಸಾಧಿಸುವುದೇನಿಲ್ಲವಲ್ಲ….

ಅಷ್ಟಕ್ಕೂ ಯಾವುದೇ ಪುಸ್ತಕವಾಗಲಿ/ ಆನ್ ಲೈನ್ ಜಾಲತಾಣಗಳ ಚರ್ಚಾಕೂಟಗಳಾಗಲಿ(ಫೋರ್ಮ) ಯಾರೂ ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರಲಾರರಲ್ಲವೇ…? ಯಾವ ನಿಜವಾದ ಲೇಖಕಕರೂ ಕೂಡ ಹಾಗೆ ಮಾಡುವುದಿಲ್ಲ. ಅವರು ಹೇಳುವುದರಲ್ಲಿ ಖಚಿತವಾಗಿ ತಿಳಿದುಕೊಂಡಿದ್ದು  ಅದನ್ನೇ ದೃಢವಾಗಿ ಹೇಳುವುದನ್ನೇ ಅವನ ಅಹಂಕಾರ ವೆಂದು ತೀರ್ಮಾನಿಸಿ ಬಿಡಲಾದೀತೇ…?

ಮುಂದುವರೆದ ಮಾಹಿತಿಯುಗದಲ್ಲಿ ಸೋಷಿಯಲ್ ನೆಟ್ ವರ್ಕ್ ಗಳು  ಸದುಪಯೋಗ/ದುರುಪಯೋಗವೂ ನಮ್ಮ ಮುಂಗೈ ಬೆರಳುಗಳಲ್ಲೇ ಇದೆಯಲ್ಲವೇ..?.  ಇಲ್ಲಿ  ನಿಜಕ್ಕೂ  ಸಮಾನವಯಸ್ಕರು (ಅಂಥವರು ನಾನು ಮೇಲೆ ಹೇಳಿದ  ಫೇಸ್ ಬುಕ್ ಪೋಸ್ಟ್ ನ  ಕಮೆಂಟ್ ಥ್ರೆಡ್ ನಲ್ಲೇ ತಮ್ಮ ಹೆತ್ತವರು ಇಟ್ಟ ಹೆಸರನ್ನು ಉಳಿಸಿಕೊಂಡರು). ಆದ್ದರಿಂದ, ಸಮಾನ ಅಭಿರುಚಿಯ ಆಪ್ತ ಸ್ನೇಹಿತರನ್ನು ಕಂಡುಕೊಳ್ಳುವುದು ಎಷ್ಟುಕಷ್ಟವೋ ..  ಅಷ್ಟೇ ದುಡುಕಿನಿಂದ ತಿಳಿದಂಥ ಮಹಾನುಭಾವರನ್ನು ಅರೆ ಕ್ಷಣದಲ್ಲಿ ಕಳೆದುಕೊಳ್ಳುವುದು  ಸುಲಭವೇ. ಈಗಾಗಲೇ ಹಲವಾರು ವರುಷಗಳೇ ಸಾಧನೆ ಮಾಡಿದ ಅನುಭವವುಳ್ಳ ಹಿರಿಯರನ್ನೇ ತಪ್ಪಾಗಿ ಭಾವಿಸಿಕೊಂಡು ಅವರನ್ನು  ಇಂದಿನ ಕಾಲಕ್ಕೆ ಬದಲಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳದೇನೆ ದೂರಮಾಡಿಕೊಳ್ಳುವುದು ಕೆಲವಾರು ಕ್ಷಣಗಳಲ್ಲಷ್ಟೇ.. ಇನ್ನೂ ಕೆಲವರು ಇರುತ್ತಾರೆ ಬಿಡಿ, ಅವರಿಗೆ ತಮ್ಮ ಸ್ವಪ್ರತಿಷ್ಠೆಯೇ ಹೆಚ್ಚಾಗಿ ಚರ್ಚೆಗೆ ಬಂದ ವಿಷಯದ ಬಗ್ಗೆ ವಸ್ತು ನಿಷ್ಠೆಯಿಲ್ಲದೇ (ಸಬ್ ಜಕ್ಟ್ ಮ್ಯಾಟರ್‍ ಬಿಟ್ಟು) ಪೂರ್ವಾಗ್ರಹ ಪೀಡಿತರಾಗಿ ಏನೇನೋ ಕಲ್ಪಿಸಿಕೊಂಡು ಪರ್ಸ್‌ನಲ್ ಆಗಿ ತೆಗೆದು ಕೊಂಡು ಹುಚ್ಚುಚ್ಚಾಗಿ ಬಡಬಡಿಸುತ್ತಾರೆ ಅವರ ಉದ್ಯೋಗ ಮತ್ತು ವ್ಯಕ್ತಿತ್ವಕ್ಕೆ  ಅವರೇ ಚ್ಯತಿ ತಂದುಕೊಳ್ಳುತ್ತಾರೆ. ಅಂಥವರನ್ನು ಕಂಡರೆ ಮರುಕವುಂಟಾಗುತ್ತದೆ.  ಅವರಿಗೆ ಚರ್ಚೆಯಲ್ಲಿ ತಿಳಿದುಕೊಳ್ಳುವ ತಮ್ಮ ಜ್ಞಾನ ವೃದ್ಧಿಸಿಕೊಳ್ಳುವ ಇಚ್ಛೆಯೆಲ್ಲಿ..? ಏನು ಮಾಡುತ್ತಿದ್ದನೆ ಎಂಬ ಅರಿವಿಲ್ಲ. ಓ, ದೇವರೇ ಆತನಿಗೆ ಜ್ಞಾನೋದಯವನ್ನುಂಟು ಮಾಡು ಎಂದು ಕಮೆಂಟ್ ಥ್ರೆಡ್ ನಿಂದ ಹೊರಬರುವುದೇ ಲೇಸು.

ಕೊನೆಯ ಮಾತು: ನನಗೀಗ ವಯಸ್ಸು ೬೮, ನಾನು ಈ ನನ್ನ ಜೀವನದ ಸುಧೀರ್ಘ ಪಯಣದಲ್ಲಿ ಸಾಕಪ್ಪಾ ಎನ್ನುವಷ್ಟು ಕಹಿ ಹಾಗೂ ಸಿಹಿಯನ್ನೂ ಅನುಭವಿಸಿದ್ದೇನೆ. ನನ್ನ ಕಳೆದ ಆಯಷ್ಯದಲ್ಲಿ ಕಂಡುದರಲ್ಲಿ ಕಹಿಯೇ ಹೆಚ್ಚಿದ್ದೀತು. ಹಾಗೆ ಹಿಂತಿರುಗಿ ನೋಡಿದರೆ, ಕಷ್ಟದಿಂದಲೇ ನಾನು ಕಲಿತದ್ದೂ ಬಹಳವಿದೆ. ಯಾಕೆಂದರೆ, ಬದುಕು ನಿರ್ದಯಿ ಶಿಕ್ಷಕ ಅದು ಕಲಿಸದ ಪಾಠವಿಲ್ಲ. ನಾವು ಕಂಡುಕೊಂಡ ಸತ್ಯವನ್ನು ನಮ್ಮ ಕಿರಿಯರಿಗೆ ಹೇಳೋಣ. ನಾವು ಪಡೆದ ಸಿಹಿ ಅನುಭವವನ್ನು ಅವರೊಡನೆ ಹಂಚಿಕೊಳ್ಳೋಣ. ನಮಗೆ ಇಷ್ಟವಾದ ಸಿಹಿಯು ಅಂದಿಗೆ ಬೇರೆ ರೂಪದ (ಮಿಠಾಯಿ)ಲ್ಲಿತ್ತು. ಆದರೂ ಅದು ಸಿಹಿ ಸಿಹಿಯೇ ಇಂದಿನ ಹುಡುಗ/ಗಿಯರಿಗೆ ಅದೇ ಇಷ್ಟವಾಗಬೇಕೆಂಬ ಹಠವೂ ಈಗೀಗ ಹೆತ್ತವರಲ್ಲಿ ಹಿರಿಯರಲ್ಲಿ ಇರಲಿಕ್ಕಿಲ್ಲ.
-ಸರ್ವಜನಾ ಸಹೃದಯತೆಗೆ ವಿಮ್ರತೆಯಿಂದ,

Advertisements

ಒಬ್ಬ ಅವಿಶ್ರಾಂತ “ಮಹಾನ್ ಚಿಂತಕ”ನ ಅಂತಿಮ ವಿದಾಯ.


ananthamurthyನಿನ್ನೆ (22, ಆಗಸ್ಟ್ 2014) ಡಾ.ಯು.ಆರ್. ಅನಂತ ಮೂರ್ತಿ ನಿಧನ ವಾರ್ತೆ ಕೇಳಿದೆವು. ಸುಂದರ ಪುರುಷ. ಧೀಮಂತ ವ್ಯಕ್ತಿತ್ವದ ಛಾಪು  ಅವರಿಗೆ ಹುಟ್ಟಿನಿಂದ ಪಡೆದು ಬಂದದ್ದೇ  ಇರಬೇಕು. ಕುವೆಂಪು, ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ. ಕೆ.ಎಸ್.ನ. ಅವರ ಕಾಲಘಟ್ಟದಲ್ಲಿ ಸಾಹಿತಿಗಳೆಂದರೆ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯ ಮತ್ತು ಸಾಮಾಜಿಕ ಬದ್ಧತೆಯ ಪ್ರತಿನಿಧಿಗಳಂತಿದ್ದವರೇ ಹೆಚ್ಚು. ಆ ಹಿರಿಯ ಸಾಹಿತಿಗಳ ಬಗ್ಗೆ ನಮಗೇ ಅರಿಯದ ಅವಿನಾಭಾವ ಸಂಬಂಧವಿತ್ತೆಂದು ಹೇಳಲು ನಿಜಕ್ಕೂ ಹೆಮ್ಮೆಯೇ. ಅವರುಗಳ ನಿಧನದ ವಾರ್ತೆ ಕೇಳಿದಾಕ್ಷಣಗಳಲ್ಲಿ ಅದೇನೋ ದುಗುಡ ನಮಗೆ ಹತ್ತಿರದ ಸಂಬಂಧಿಯನ್ನೇ ಕಳೆದುಕೊಂಡ ತೀವ್ರ ಸಂತಾಪದ ಅನುಭವವಾಗುತ್ತಿತ್ತು. ಅಲ್ಲದೇ ದುಃಖ ದುಗುಡ ಹೆಪ್ಪುಗಟ್ಟುತ್ತಿತ್ತೆಂದರೆ ಉತ್ಪ್ರೇಕ್ಷೆಯಾಗಲಾರದು…

ಆದರೆ, ಕುವೆಂಪು, ಕಾರಂತ, ಮಾಸ್ತಿ ಅವರಂತೇ ಜ್ಞಾನಪೀಠ ಪುರಸ್ಕೃತರೂ ಆದ ಡಾ.ಯು.ಆರ್ ಅನಂತ ಮೂರ್ತಿ ಅವರ ಸಾವು ನನ್ನ ಹಾಗೆಯೇ ಸಾಮಾನ್ಯರ ಆಂತರ್ಯಕ್ಕೆ ತಟ್ಟದೇ ಹೋಯಿತೆಂದು ಹೇಳಿದರೆ ತಪ್ಪಾಗಲಾರದಲ್ಲ… ಅದು ಅವರದೇ ನಂಬಿಕೆಗಳಿಂದಾಗಿ ವಿವಾದಾಸ್ಪದ, ವಿಕ್ಷಿಪ್ತ ಹಾಗೂ ವಿಶಿಷ್ಟ ವಿಚಿತ್ರ ವ್ಯಕ್ತಿತ್ವದ ಪರಿಣಾಮವೋ ಅಥವಾ  ಬರಬರುತ್ತ ಬದಲಾದ ಕಾಲಘಟ್ಟದ ಪ್ರಭಾವವೇ ಅವರ ಮೇಲಾದುದರ ಪರಿಣಾಮವೋ ಏನೋ…

ಡಾ.ಶಿವರಾಮ ಕಾರಂತರ ಹೇಳಿರುವರೆಂಬ ಒಂದು ಮಾತು ಈ ಸಂದರ್ಭದಲ್ಲಿ ನೆನಪಾಗುತ್ತದೆ- “ನನ್ನ ಬರವಣಿಗೆಗಿಂತಲೂ ನಾನು ಬದುಕಿದ ರೀತಿ ನೋಡಿ ಎನ್ನುತ್ತಿದ್ದರಂತೆ.

ಡಾ.ಮಾಸ್ತಿವೆಂಕಟೇಶ ಅಯ್ಯಂಗಾರ್ಯರು ಪತ್ರಕರ್ತರೇ ಆಗಲಿ, ಯಾವ ವಿಚಾರವಾದಿಗಳೆಂಬ ಎಡಪಂಥೀಯರೇ ಇರಲಿ,ಮಾಸ್ತಿ ಅವರಿಗೆ ದೇವರಲ್ಲಿದ್ದ ಅಚಲ ನಂಬಿಕೆಯ ಬಗ್ಗೆ  ಪ್ರಶ್ನಿಸಿದರೆ, “ನೀವು ಯಾವುದು ಕಾಕತಾಳೀಯ ಎನ್ನುತ್ತೀರೋ, ಯಾವುದೂ ಆಕಸ್ಮಿಕ ಎನ್ನೂತ್ತೀರೋ ಅವುಗಳ ವಿನ್ಯಾಸದ ಫಲವೇ ದೇವರು” ಎಂದು ಖಡಾಖಂಡಿತವಾಗಿ ನುಡಿಯುತ್ತಿದ್ದರು.

ಅನಂತ ಮೂರ್ತಿ ವಿದ್ಯಾರ್ಥಿ ದೆಸೆಯಲ್ಲಿಯೇ ರಷ್ಯಾ ಕ್ರಾಂತಿಯಾದದ್ದು ಘೋರ ಅಪರಾದವೆಂದು ಚಿರ್ಚಿಸುತ್ತ ಅಪ್ಪನ ಎಂಜಲ ಕೈಯಲ್ಲೇ ಕಪಾಳಕ್ಕೆ ಹೊಡೆತ ತಿಂದು, ತಾನು ತನ್ನದೇ ದಾರಿಯಲ್ಲಿ ನಡೆಯುವ ಚಿಂತಕ ಎಂಬ ಸೂಚನೆ ಕೊಟ್ಟವರು. ಬಿಂಬ ಬಿಂಬೋಸ್ಮಿ(ನಾನು ಬಿಂಬ. ನೀನು ಪ್ರತಿಬಿಂಬ) ಎಂಬ ತತ್ವವನ್ನಿಟ್ಟು ಕೊಂಡು ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದ ಅನಂತ ಮೂರ್ತಿಯವರಿಗೆ ಬದುಕಿನ ಉತ್ತರಾರ್ಧದಲ್ಲಿ ಮಾತನಾಡುವುದೆಂದರೆ ಬದುಕಿನಷ್ಟೇ ಬಲು ಪ್ರೀತಿ. ಕಡೆಯವರೆಗೂ ಅವರಿಗಿದ್ದ ಬದುಕಿನ ಪ್ರೀತಿ ಅಷ್ಟೇ ಅನನ್ಯ ಅಷ್ಟೇ  ಪ್ರಶ್ನಾತೀತವಾದದ್ದು.

“ಮೌನಿ” ಅವರ ಕೃತಿಗಳಲ್ಲೊಂದು. ಆದರೇನು! ಬರಹದಷ್ಟೇ ಮಾತೂ ಕೂಡ ನನ್ನ ಅಭಿವ್ಯಕ್ತಿ ಮಾಧ್ಯಮ ಎಂದಿದ್ದಾರೆ. ಬರವಣಿಗೆಗಿಂತಲೂ ಮಾತು ತಟ್ಟನೆ ಸಿಡಿಸುವುದರಿಂದಲೇ ಅಂತಿಮ ದಿನಗಳಿಗೆ ಸಮೀಪಿಸಿದ ಇತ್ತೀಚೆನ ವರುಷಗಳಲ್ಲಿ ಅತ್ಯಂತ ವಿವಾದಾಸ್ಪದ ಹಾಗೂ ಅಷ್ಟೇ ಸಮಸ್ಯಾತ್ಮಕ ವ್ಯಕ್ತಿಯಾಗಿ ಅವರೇ ಒಂದು ಬೃಹತ್ “ಪ್ರಶ್ನೆ” ಯಾಗಿದ್ದರು. (“ಪ್ರಶ್ನೆ” ಎಂಬುದೂ ಅವರದೇ ಕೃತಿಗಳಲ್ಲೊಂದು) ಪ್ರಾಯಶಃ ಜ್ಞಾನಪೀಠ ಪುರಸ್ಕೃತರಾದ ಬಳಿಕ, ತಮ್ಮನ್ನು  ಸಾಮಾಜಿಕ ನ್ಯಾಯದ ಹರಿಕಾರ ಮತ್ತು ಚಿಂತಕ ಜ್ಯಾತ್ಯಾತೀತ ಪ್ರತಿಪಾದಕ ಎಂದು ಗುರುತಿಸಿಕೊಳ್ಳುವ ಭರದಲ್ಲಿ ಎಡವಿದರೇನೋ… ಹಾಗೆ  ಇದ್ದರೇನೆ ಪ್ರಗತಿಪರ ಸಾಹಿತಿ ಎನಿಸಿಕೊಳ್ಳಲು ಸಾಧ್ಯವೆಂದೂ, ಯಾವುದೇ ಕ್ಷೇತ್ರದಲ್ಲಿ ಮುಂದುವರೆಯಲು ಸರ್ಕಾರದ ಬೆಂಬಲವೂ ಇರಬೇಕೆಂಬುದನ್ನು ಅವರದೇ ಜೀವನ ಶೈಲಿಯಲ್ಲಿ ನಿಜಕ್ಕೂ “ಋಜುವಾತು” (ಅದು ಅವರೇ ನಡೆಸುತ್ತಿದ್ದ ಮಾಸಿಕ ಪತ್ರಿಕೆ “ಋಜುವಾತು”) ಮಾಡಿದ ಅನಂತ ಮೂರ್ತಿ ಕಳೆದ ಕೆಲವು ವರುಷಗಳಿಂದೀಚೆಗೆ ಅನಾರೋಗ್ಯ ಪೀಡಿತರಾದಾಗ ತಾವು ಬಿಂಬವಾಗಿ ಆಡಳಿತಾರೂಢಪಕ್ಷವೇ ಬಿಂಬೋಸ್ಮಿಯಾಗಿ ಕಂಡುಕೊಂಡದ್ದು ಅತಿಶಯೋಕ್ತಿಯೇನಲ್ಲ.

ಯು.ಆರ್. ಅನಂತ ಮೂರ್ತಿ ಅವರು ಸಾಹಿತ್ಯಲೋಕಕ್ಕೆ ಪ್ರವೇಶಿಸಿದ್ದೇ ಅವರ ಮೊದಲ ರಚನೆಯಾಗಿ ಬಂದ  ವಿವಾದಾಸ್ಪದ ಕಾದಂಬರಿಯಾದ “ಸಂಸ್ಕಾರ” ದಿಂದ.  ಜೀವಿತದುದ್ದಕ್ಕೂ ಒಂದಲ್ಲ ಒಂದು ತಮ್ಮದೇ ಮಾತುಗಳಿಂದ ವಿವಾದಗ್ರಸ್ಥರಾಗಿ ವಿಚಿತ್ರ ವಿಕ್ಷಿಪ್ತ ವ್ಯಕ್ತಿಯಂತೇ ಕಾಣಿಸಿಕೊಳ್ಳುತ್ತಿದ್ದವರು.
ಒಮ್ಮೆ ಕನ್ನಡದ ಹೆಸರಾಂತ “ತರಂಗ (೧೯-೦೨-೧೯೯೫) ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, “ಕ್ರಿಸ್ತ ಚಾರಿತ್ರಿಕ ವ್ಯಕ್ತಿ, ಮಹಮ್ಮದ್ ಚಾರಿತ್ರಿಕ ವ್ಯಕ್ತಿ. ರಾಮ ಚಾರಿತ್ರಿಕ ವ್ಯಕ್ತಿಯಲ್ಲ. ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಲ್ಲ. ಗೋಡ್ಸೆ ಗುಂಡು ಹೊಡೆದಾಗ ಗಾಂಧೀಜಿಯ ಬಾಯಿಂದ” ಎಂದು ನಕ್ಕು ಲೇವಡಿ ಮಾಡಿದ್ದರು.
ವಿಪರ್ಯಾಸವೆಂದರೆ, ಸಾಂಪ್ರದಾಯಿಕ “ಸಂಸ್ಕಾರ” ದ ಬಗ್ಗೆ ಟೀಕಾಚಾರ್ಯರಾಗಿದ್ದ ಅನಂತ ಮೂರ್ತಿ ಅನಂತದಲ್ಲಿ ಲೀನವಾಗಲು  ಅಗ್ನಿ ಸಂಸ್ಕಾರವೇ ಆಗಬೇಕಾಯಿತು. 

ಅಂತೂ ಒಬ್ಬ ಅವಿಶ್ರಾಂತ(ಅಶಾಂತ) “ಮಹಾನ್ ಚಿಂತಕ” ತನ್ನದೇ ಚಿಂತನೆಗೆ ಸಂಪೂರ್ಣ ವಿರಾಮ ಹಾಕಿ ವಿದಾಯ ಹೇಳಿದ್ದಾರೆ. ನನ್ನದೊಂದು ಕಥೆಯಲ್ಲಿ ಬರೆದಿದ್ದೆ- “ಒಂದು ಹುಟ್ಟು ಹೇಳುವ ಲೆಕ್ಕಾಚಾರಕ್ಕಿಂತ ಒಂದು ಸಾವು ತಿಳಿಸಿಕೊಡುವ ಪಾಠ ದೊಡ್ಡದು”

ಅದೇನೇ ಇರಲಿ, ಕನ್ನಡ ಸಾರಸ್ವತ ಲೋಕಕ್ಕೇ ಡಾ.ಯು.ಆರ‍್. ಅನಂತಮೂರ್ತಿ ತಮ್ಮದೇ ಕೃತಿ ಚಿಂತನೆಗಳಿಂದ ಅವರದೇ ಘನತೆವೆತ್ತ ಛಾಪು ಮೂಡಿಸಿರುವುದೂ ಪ್ರಶ್ನಾತೀತವೇ ಅಲ್ಲವೇ…?

ಇತ್ತೀಚೆನ ಪೋಸ್ಟ್  ಕೊಂಡಿ ಕೆಳಗಿದೆ ನೋಡಿ

ನಿನ್ನ ಜ್ಞಾನದ ಮುಂದೆ ನಾನು…


ನಾನು ನುಡಿದರೆ ನನ್ನನ್ನೇ ನಾನು ಕಳೆದುಕೊಂಡಂತೆ
ನೀನು ನುಡಿಸಿದರೆ ನಿನ್ನನ್ನೇ ನಾನು ಕಂಡುಕೊಂಡಂತೆ
ನನ್ನ ಜ್ಞಾನದ ಹಿಂದೆ ಆಗಿಹೋದುದೆಲ್ಲ ಅಜ್ಞಾನ;
ನಿನ್ನ ಜ್ಞಾನದ ಮುಂದೆ ನನಗೆ ಬಂದುದೆಲ್ಲ
ಇಂದ್ರಿಯಾತೀತ ಜ್ಞಾನ.

ಆತ್ಮಬಲದಿಂದಲೇ ವ್ಯಕ್ತಿತ್ವ ಮತ್ತು ರಾಷ್ಟ್ರ ನಿರ್ಮಾಣ


"My life is my message"
“My life is my message”

ಅಕ್ಟೋಬರ್ ೨,   ಗಾಂಧಿ ಜಯಂತಿ, ಪ್ರತಿವರುಷದಂತೆ ಈಗ ಮತ್ತೆ ಮಹಾತ್ಮ ಗಾಂಧೀಜಿಯ ನೆನಪು.  ಈ ಭಾನುವಾರ ಕನ್ನಡದ ಕೆಲವು ದಿನ ಪತ್ರಿಕೆಯ ವಾರದ ಪುರವಣಿಗಳಲ್ಲಿ ಗಾಂಧೀಜಿಯ ಬಗ್ಗೆ ಲೇಖನಗಳು ಪ್ರಕಟಗೊಳ್ಳುತ್ತವೆ. ನಮ್ಮ ಯುವ ಪೀಳಿಗೆಯಲ್ಲಿ ಗಾಂಧೀಜಿ ಇಂದಿಗೆ ಪ್ರಸ್ತುತ ಅಲ್ಲವೇ ಅಲ್ಲ ಎಂದೇ ಭಾವಿಸಿದವರಿದ್ದಾರೆ. ಆದರೆ, ಗಾಂಧೀಜಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಏಕಕಾಲಕ್ಕೆ  ಅವರ ಬಗ್ಗೆ ಪಕಟವಾದ ಈ ವಿಶೇಷ ಲೇಖನಗಳು ವಿವಿಧ ದೃಷ್ಟಿಕೋನಗಳಲ್ಲಿ ನಮ್ಮನ್ನು ಗಾಂಧಿ ತತ್ವದ ಬಗ್ಗೆ ಚಿಂತಿಸುವಂತೆ ಮಾಡುತ್ತವೆ. ಆ ಲೇಖನಗಳ ಸಾರಾಂಶವನ್ನು ಕೊಡುವ ಪ್ರಯತ್ನವಿದು-

 • ಆಧುನಿಕ ಜಗತ್ತಿಗೆ ಭಾರತದ ಅತಿ ದೊಡ್ಡ ಕೊಡುಗೆ ಯಾವುದೆಂದು ಯಾರಾದರೂ ಕೇಳಿದರೆ ಸ್ವಲ್ಪವೂ ಅನುಮಾನಿಸದೆ ಹೇಳಿಬಿಡಬಹುದು- “ಮಹಾತ್ಮ ಗಾಂಧಿ” ಎಂದು.
 • ಗಾಂಧೀಜಿಯವರಿಗೆ ಸತ್ಯ ದೇವರಷ್ಟೇ ವಾಸ್ತವ. ದೇವರಷ್ಟೇ ಸರ್ವಶಕ್ತಿಯುತ. ವಾಸ್ತವವಾಗಿ ಸತ್ಯವೇ ದೇವರು. ಏಕೆಂದರೆ, ಜಗತ್ತು ನಿಂತಿರುವುದೇ ಸತ್ಯದ ಅಡಿಗಲ್ಲಿನ ಮೇಲೆ.
 • ಗಾಂಧೀಜಿಯ ಮೇಲೆ ಅಧಿಕ ಪ್ರಭಾವ ಬೀರಿದ ಪುಸ್ತಕಗಳು ಯಾವುವು…?

ಲಂಡನ್ ಗೆ ಹೋಗುವವರೆಗೂ ಅವರು ಭಗವದ್ಗೀತೆಯನ್ನು ಓದಿರಲೇ ಇಲ್ಲ. ಅಲ್ಲಿ ಎಡ್ವಿನ್ ಅರ್ನಾಲ್ಡ್ ರ “ ದಿವ್ಯಗೀತ” ( Song Celestial) ಕೃತಿಯ ಮೂಲಕ ಪರಿಚಯವಾದ ಇಬ್ಬರು ಥಿಯೋಫಿಸ್ಟರಿಂದ ಗಾಂಧೀಜಿ ಗೀತೆಯ ಬಗ್ಗೆ ತಿಳಿದರು. ತಾವು ಇದುವರೆಗೂ ಅದನ್ನು ಓದದೇ ಇದ್ದುದರ ಬಗ್ಗೆ ಅವರಿಗೆ ನಾಚಿಕೆಯಾಯಿತು. ಮುಂದೆ ಜೀವಿತದಲ್ಲಿ ಭಗವದ್ಗೀತೆ ಅವರಿಗೆ ಅಚ್ಚುಮೆಚ್ಚಿನ ಗ್ರಂಥವಾಯಿತು. ಗುಜರಾತಿಯಲ್ಲಿ ಗೀತೆಯನ್ನು ಬರೆದರು. ಅವರ ಮೇಲೆ ಪ್ರಭಾವ ಬೀರಿದ ಇತರ ಪುಸ್ತಕಗಳಲ್ಲಿ ಮುಖ್ಯವಾದವು- ರಸ್ಕಿನ್ ನ Unto this last, ಅದನ್ನು ಗುಜರಾತಿಗೆ ಅನುವಾದಿಸಿ “ಸರ್ವೋದಯ’ ಎಂದು ಹೆಸರಿಟ್ಟರು.  ಅವರು ಸೆರೆಮನೆಯಲ್ಲಿದ್ದಾಗ, ಥೇರೋವಿನ Civil Disobedience ಓದಿದರು. ಅದನ್ನು ಅವರು ’ಸತ್ಯಾಗ್ರಹ” ಎಂದು ಕರೆದರು. ಟಾಲ್ ಸ್ಟಾಯ್, ರವೀಂದ್ರನಾಥ ಠಾಗೋರ್ ಅವರ ಮೇಲೆ ಗಾಢವಾದ ಪ್ರಭಾವ ಬೀರಿದರು.

-ಹೀಗೆ ಓದಿನಿಂದ ಗಾಂಧೀಜಿ ತಮ್ಮ ವ್ಯಕ್ತಿತ್ವವನ್ನೂ ತಮ್ಮ ಹೋರಾಟದ ಬದುಕನ್ನು ರೂಪಿಸಿಕೊಂಡರು.

 • ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಕೈಗೊಂಡಾಗ ಜಗತ್ತಿನಾದ್ಯಂತ ಸಾವಿರಕ್ಕೂ ಅಧಿಕ ಪತ್ರಿಕೆಗಳಲ್ಲಿ ಅದು ಸುದ್ದಿಯಾಯಿತು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ- “ಬ್ರಿಟನ್ ಅಮೆರಿಕವನ್ನು ಚಹದಿಂದ ಕಳೆದುಕೊಂಡಿತು. ಭಾರತವನ್ನು ಉಪ್ಪಿನಿಂದ ಕಳೆದುಕೊಳ್ಳುತ್ತಿದೆ’ ಎಂದು ಬರೆಯಿತು.
 • ಗಾಂಧೀಜಿ ತಮ್ಮ ಭಾಷಣಗಳಲ್ಲಿ”ಸ್ವಾತಂತ್ರ್ಯ’ ಎಂಬ ಶಬ್ದ ಬಳಸಿದ್ದಕ್ಕಿಂತ  ’ಸ್ವರಾಜ್ಯ ’ಎಂದು ಬಳಸಿದ್ದೇ ಹೆಚ್ಚು. ಗೋಪಾಲ ಕೃಷ್ಣ ಗೋಖಲೆ ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂದಿದ್ದರು.

-ಇಂದು ಸ್ವಾತಂತ್ರ್ಯ ವಿರುವುದು ಯಾರಿಗೆ…? ಸ್ವರಾಜ್ಯವಷ್ಟೇ ಆಗಿರುವುದು ಪ್ರಜೆಗಳಿಗೆ….?  ಈ ಎರಡು ಪ್ರಶ್ನೆಗಳಿಗೆ ಸರಿಯಾದ ಉತ್ತರ ನಮ್ಮೊಳಗೇ ಅನುರಣಿಸುತ್ತಿರುತ್ತದೆ ಎಂದರೆ ಏನೂ ಉತ್ಪ್ರೇಕ್ಷೆಯಾಗಲಾರದು.

-ಪರಕೀಯರ ದಬ್ಬಾಳಿಕೆಯಿಂದ, ದಾಸ್ಯದಿಂದ ಮುಕ್ತಿ ದೊರೆತಿದೆ. ಆದರೆ, ಅಂದು ನಮ್ಮ ದೇಶದ ಸಂಪತ್ತನ್ನು ಹೊತ್ತೊಯ್ದು ತಮ್ಮ ದೇಶವನ್ನು ಶ್ರೀಮಂತಗೊಳಿಸುವ ಉದ್ದೇಶದಲ್ಲಿ ಅವರು ಸಫಲರಾದರು.

-ಇಂದು ನಮ್ಮ ದೇಶದೊಳಗೇ ನಮ್ಮ ಸಂಪತ್ತಿನ ಸೂರೆಹೊಡೆಯಲಾಗುತ್ತಿದೆ. ಅದೆಲ್ಲಿಗೆ ಹೋಗುತ್ತಿದೆ…? ತಿಳಿಯದವರೇನಲ್ಲ ಭಾರತೀಯರು.

 •  ಇದಕ್ಕಾಗಿ ನಾವು ಸ್ವಾತಂತ್ರ್ಯ ಹೋರಾಟ ನಡೆಸಿದ್ದಲ್ಲ. ಇಂದು ಜನರ ಬದುಕು ಹಸನಾಗಿಲ್ಲ ಎಂಬ ಮಾತು ಎಲ್ಲ ವರ್ಗಗಳಿಂದಲೂ ಕೇಳಬರುತ್ತಿದೆ.
 • ಗಾಂಧಿ ತತ್ವದ ಪ್ರಕಾರ ಸ್ವಾತಂತ್ರ್ಯಾನಂತರ ಆಗಿರುವ ಪ್ರಗತಿ ಅಭಿವೃದ್ದಿ ಏನೂ ಅಲ್ಲ..
 • ಗಾಂಧೀಜಿ ತಮ್ಮ ಪ್ರಸಿದ್ಧ ಕನಸಿನ ಭಾರತ ಕೃತಿಯಲ್ಲಿ, ರಾಷ್ಟ್ರದ ಎಲ್ಲ ವ್ಯಕ್ತಿಗಳ ಆತ್ಮ ಸಂಯಮದ ಒಟ್ಟು ಮೊತ್ತವೇ ಸ್ವರಾಜ್ಯ ಎಂದು ಘೋಷಿಸಿದ್ದು ಈ ವ್ಯಾಖ್ಯಾನಕ್ಕೆ ತಾವೇ ಭಾಷ್ಯ ಬರೆದಿದ್ದಾರೆ.
 • ರಾಷ್ಟ್ರ ಪುನರ್ ನಿರ್ಮಾಣವಾಗಬೇಕಾದದ್ದು ಯಂತ್ರಗಳು, ಕಟ್ಟಡಗಳು, ಮತ್ತು ಕಾರ್ಖಾನೆಗಳ ಆಧಾರದ ಮೇಲಲ್ಲ. ಜನರ ಆತ್ಮಶಕ್ತಿಯ ಆಧಾರದ ಮೇಲೇ.-
 • ಇಂದು ವ್ಯಕ್ತಿಯೊಬ್ಬನ  ಪ್ರಗತಿಯನ್ನು ಅಳೆಯುವ ಮಾಪನಗಳು ಯಾವುವು? ವಿದ್ಯಾರ್ಥಿಯಾಗಿದ್ದರೆ ಅವನು ಪಡೆಯುವ ಅಂಕಗಳು. ಸಾಹಿತಿ ಕಲಾವಿದರಾದರೆ ಅವರ ಕೀರ್ತಿ,  ರಾಜಕಾರಣಿಗಳಾದರೆ ಅವರ ಅಧಿಕಾರ, ಅಧಿಕಾರಿವರ್ಗವಾದರೆ ಅವರ ಪದೋನ್ನತಿ, ವ್ಯಾಪಾರೋದ್ಯಮಿಗಳಾದರೆ ಅವರು ಗಳಿಸುವ ಲಾಭ ಮತ್ತು ಶ್ರೀಮಂತಿಕೆ. ಜನಸಾಮಾನ್ಯರಾದರೆ ನಿತ್ಯ ಜೀವನದಲ್ಲಿ ಅವರು ಹೊಂದಿರುವ ಭೋಗ-ವಿಲಾಸ ಸಾಮಗ್ರಿಗಳ ಪಟ್ಟಿ, ಒಟ್ಟಾರೆ ಹೇಳುವುದಾದರೆ ಭೌತಿಕ ಗಳಿಕೆಯೇ ಅಭಿವೃದ್ಧಿ! ಇದು ಅಭಿವೃದ್ಧಿಯೇ ಅಲ್ಲ ಅನ್ನುತ್ತದೆ ಗಾಂಧಿ ತತ್ವ.”
 • ವ್ಯಕ್ತಿಯ ಅಂತಃಸತ್ವದ ಗಟ್ಟಿತನವೇ ಆತನ ಅಭಿವೃದ್ಧಿಯ ಸಂಕೇತ’ ಎನ್ನುವುದು ಗಾಂಧಿಯ ಮತ. ಶಸ್ತ್ರ ಹಿಡಿಯುವ ದೇಹದಲ್ಲಿ ತಾಕತ್ತಿದ್ದೂ ಆತ್ಮಶಕ್ತಿಯಿಲ್ಲದಿದ್ದರೆ…? ಅಂಥ ರಾಷ್ಟ್ರದಲ್ಲಿ ಆಧುನಿಕ ತಂತ್ರಜ್ಞಾನವಿದ್ದರೇನು? ಶಸ್ತ್ರಾಸ್ರಗಳಿದ್ದೇನು ಪ್ರಯೋಜನ..?
 • ಯಾರು ಆತ್ಮಬಲ ಹೊಂದಿದ್ದಾರೋ ಅವರು  ಮಾನಸಿಕ ದೌರ್ಬಲ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ.
 • ಜವಹರಲಾಲ ನೆಹರು ಅವರ ಮಾನಸಿಕ ದೌರ್ಬಲ್ಯದಿಂದ ಕಾಶ್ಮೀರ ಶಾಶ್ವತ ಸಮಸ್ಯೆಯಾಗಿ ಉಳಿಯಿತು.
 • ನಮ್ಮ ದೇಶದ ಗಡಿಗಳಲ್ಲಿ ನಡೆಯುತ್ತಿರುವ ದಾಳಿಗಳನ್ನೂ ಹಿಂಸೆ, ಕ್ರೌರ್ಯವನ್ನು ಮೌನವಾಗಿ ಸಹಿಸಿಕೊಂಡಿರುವ ಮನಮೋಹನ್ ಸಿಂಗ್ ಸರ್ಕಾರವನ್ನು ನೋಡಿದಾಗಲೆಲ್ಲ ಆತ್ಮಬಲ ಇರುವವರು ಕೇಂದ್ರ ಸರಕಾರದಲ್ಲಿ ಇರಬೇಕಾಗಿತ್ತು ಎಂಬ ಉದ್ಗಾರ ಪ್ರತಿಯೊಬ್ಬ ಭಾರತೀಯನ ಹೃದಯದ ಮಾತೇ ಸರಿ.
 • ಹೀಗೆ ವೈಯಕ್ತಿಕ ಜೀವನದಲ್ಲಾಗಲಿ, ರಾಷ್ಟ್ರಮಟ್ಟದಲ್ಲಾಗಲಿ, ಆತ್ಮಬಲವೇ ಪ್ರಾಧಾನ ಪಾತ್ರವಹಿಸುತ್ತದೆ. ಗಾಂಧೀಜಿಯವರು ಪ್ರತಿಪಾದಿಸಿದ ಆತ್ಮಬಲ ಸಂವರ್ಧನೆ, ಸತ್ಯನಿಷ್ಠೆ ಈ ೬೬ ವರ್ಷಗಳಲ್ಲಿ ಬೆಳೆಸಿದ್ದೇವೆಯೇ…? ಅಥವಾ ದೌರ್ಬಲ್ಯ ಬೆಳೆಸಿದ್ದೇವೆಯೇ…?

–      ಬಡ ರೈತನಿಂದ ಹಿಡಿದು ವಿದ್ಯಾಂತರಾಗಿ ಸಾವಿರಾರು ರೂ. ಸಂಪಾದಿಸುವ ಯುವಕರ ಯುವತಿಯರಲ್ಲೂ ನಿರಾಶೆ ಹತಾಶೆಗಳಿಂದ  ಆತ್ಮಹತ್ಯೆ ಗೆ ಶರಣಾಗುವವರನ್ನು ಕಾಣುತ್ತಿದ್ದೇವೆ. ಪಾಶ್ವಾತ್ಯರ ಸ್ವಚ್ಛಂಧ ಪ್ರವೃತ್ತಿಯ ಅನುಕರಣೆಯಿಂದಾಗಿ, ನಮ್ಮ ಮಾತೃಭಾಷೆ ಮತ್ತು ಸಂಸ್ಕೃತಿ ಪರಂಪರೆಯಲ್ಲಿ ಕಾಣಸಿಗುವ ಸತ್ಯದರ್ಶನ ಹಾಗೂ ಸಾರ್ವಕಾಲಿಕ ಜೀವನ ಮೌಲ್ಯಗಳನ್ನೇ ಕಡೆಗಣಿಸುವಂಥ ಬೆಳವಣಿಗೆಯಲ್ಲಿದ್ದೂ, ತಾವು ಮುಂದುವರೆದಿದ್ದೇವೆಂದು ತಿಳಿದುಕೊಂಡು ಬೀಗುವವರನ್ನು ಯುವಜನಾಂಗದಲ್ಲಿ ಕಾಣುತ್ತಿರುವುದು ತೀರಾ ವಿಷಾದನೀಯವೇ…

–      ಗಾಂಧೀಜಯಂತಿಯ ಈ ಸಂದರ್ಭದಲ್ಲಿ ನಾವುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ…?

ನಿತ್ಯ ಚಿಂತನ ರಶ್ಮಿ


ಜ್ಞಾನಿಯು ಸತ್ಕರ್ಮ ಸಮರ್ಥನಾಗುವಂತೆ ದುಷ್ಕರ್ಮ ನಿರತನೂ ಆಗಿ ಜಯಿಸುವನು.
ಆದರೆ, ಆ ಜಯ ಅಲ್ಪಕಾಲವಷ್ಟೇ. ಅದು ಅವನ ಅವನತಿ ಅವನೇ ತಂದುಕೊಂಡಂತೆ.
****

ನಾನು ನಾನಲ್ಲ;
ನನ್ನೊಳಗಿನ ಮನಸ್ಸು ಮದಗಜದಂತೆ ನನ್ನ ಮಾತು ಕೇಳದಲ್ಲ
ಅದರ ಸೊಕ್ಕು ಮುರಿದಾಗ ನನಗೆ ನಾನೇ ಸರ್ವಜ್ಞ.

****

ಧ್ಯಾನದಲ್ಲಿ ಮೌನವಿದೆ
ಮೌನದಲ್ಲಿ ಮನಸ್ಸಿನ ಹಾರಾಟವಿದೆ
ಆ ಹಾರಾಟದಲ್ಲಿ ದೇಹದುಸಿರಾಟವಿದೆ
ಆ ಉಸಿರಾಟದಾಚೆ ಸಮಾಧಿ ಸ್ಥಿತಿ ಇದೆ
ಆ ಸ್ಥಿತಿಯಲ್ಲೇ ದೈವ ಸಾನ್ನಿಧ್ಯವಿದೆ.

*****

ನೀವು ಆತ್ಮನ ಅರಿವಿನಲ್ಲಿ
ಪರಮಾತ್ಮನನ್ನು ಏನೆಲ್ಲ ಬೇಡಿಕೊಳ್ಳುವಿರೋ
ಅವನು ಅದನ್ನೆಲ್ಲ ದಯಪಾಲಿಸುವನು.

****

ಚಿಂತೆ ತಳಮಳಗಳಿರಲಿ ತ್ರಿಗುಣಗಳ ಲೀಲೆಯಲಿ
ಜೀವನದಾಟ ಸಾಗುವುದು ಸಾಹಸದಿ
ಜೀವಸಮುದ್ರದ ತೆರೆಗಳೇರಿಳಿತದಲಿ
ಸತ್ವಗುಣದ ಹಿರಿಮೆ ಗರಿಮೆಗಳು
ಇಲ್ಲಿ ಸಿಗುವುವು ಜಲಧಿಯಾಳದ ಮುತ್ತು ರತ್ನಗಳಂದದಲಿ

ದಿನಾಂಕ:  ೦೯-೦೬-೨೦೧೩

ವಿಜ್ಞಾನಿ ಮತ್ತು ತತ್ವಜ್ಞಾನಿ


ವಿಜ್ಞಾನಿಯ ದೃಷ್ಟಿ ವೀಕ್ಷಣೆ, ವಿಶ್ಲೇಷಣೆಯಿಂದ ಕಂಡುಕೊಳ್ಳುವಿಕೆ. ಅವನದೆಲ್ಲ ಬಾಹ್ಯಾಚರಣೆಯಷ್ಟೇ. ಅವನ ದೃಷ್ಟಿಯು ಎಷ್ಟೇ ಸೂಕ್ಷ್ಮ ತೀಕ್ಷ್ಣ ವಾದರೇನು ಅದು ಪರಮಾತ್ಮನ ಇರುವಿಕೆಯನ್ನು ಕಂಡುಕೊಳ್ಳಲಾಗುವುದಿಲ್ಲ. ಯಾಕೆಂದರೆ, ಅವನ ನೋಟವು ಹೊರಗೆ ಬಾಹ್ಯದಲ್ಲಿ. ತತ್ವಜ್ಞಾನಿಯ ದೃಷ್ಟಿ ಆಂತರಂಗಿಕವಾದದ್ದು. ಅವನು ಧ್ಯಾನ ನಿರತನಾಗಿ ಆಂತರ್ಯದಲ್ಲಿ ಸಾಕ್ಷಿಚೇತನನಾಗುತ್ತಾನೆ. ಆ ಚೈತನ್ಯದಲ್ಲಿ ಪರಮಾತ್ಮನನ್ನೇ ಕಂಡುಕೊಳ್ಳುತ್ತಾನೆ.; ಧ್ಯಾನದ ರಹಸ್ಯವು ವೈಜ್ಞಾನಿಕ ದೃಷ್ಟಿಯಲ್ಲೇ ಇದೆ. ಅದು ಒಂದು ಕಲೆ, ಯುಕ್ತಿ ಎನ್ನಬಹುದು. ಆದುದರಿಂದಲೇ ಅದನ್ನು ಬ್ರಹ್ಮರಹಸ್ಯ ಎಂದರು. ‘ಬ್ರಹ್ಮ ಸತ್ಯವೇ. ಜಗನ್ಮಿತ್ಯವೇ.’ ವಿಜ್ಞಾನಿಯದು ವಾಸ್ತವಿಕ ಸತ್ಯ. ತತ್ವಜ್ಞಾನಿಯದು ಅಲೌಕಿಕ ಸತ್ಯ. ಹೇಗೆ ವಿಜ್ಞಾನಿ ಭೌತಿಕವಾಗಿ ತಾನು ಕಂಡುಕೊಂಡ ಸತ್ಯ ಪ್ರತಿಪಾದಿಸುತ್ತಾನೆ; ಪ್ರದರ್ಶಿಸುತ್ತಾನೆಯೋ ಹಾಗೆ ತತ್ವಜ್ಞಾನಿ ತಾನು ಕಂಡ ಸತ್ಯ ಅಲೌಕಿಕ; ಅದು ಆಂತರ್ಯಲದಲ್ಲಿ ಧ್ಯಾನಸ್ಥರಾದಾಗ ಅರಿವಿಗೆ ಬರುವುದೆನ್ನುತ್ತಾನೆ. ಆ ಪರಮಾತ್ಮನು ಅಂತರಂಗದ ಅನ್ವೇಷಣೆಯಲ್ಲಿ ಅನುಭವ ವೇದ್ಯನಾಗುತ್ತಾನೆ ಎನ್ನುತ್ತಾನೆ. ಹೇಗೆ ಎಲ್ಲರೂ ವಿಜ್ಞಾನಿಗಳಾಗಲಾರರೋ ಹಾಗೆ ಎಲ್ಲರೂ ತತ್ವಜ್ಞಾನಿಗಳಾಗಲಾರರು. ನಿಜ. ಆದರೆ, ಎಲ್ಲರಲ್ಲೂ ಆಂತರಂಗಿಕವಾದ ಪರಮ ಸತ್ಯವೊಂದು ಇದೆ. ಅದನ್ನು ಅವಿರತ ಧ್ಯಾನ ಯೋಗ ಸಾಧನೆಯಲ್ಲಿ ಸಾಕ್ಷಿಚೇತನರಾಗಿ ಕಂಡುಕೊಳ್ಳಲು ಸಾಧ್ಯವಿದೆ.

ಧ್ಯಾನದಲ್ಲಿ ಮೌನವಿದೆ.  ಮೌನದಲ್ಲಿ ಮನಸ್ಸಿನ ಹಾರಾಟವಿದೆ.  ಹಾರಾಟದಲ್ಲಿ ಪರಮಸತ್ಯದ ಹುಡುಕಾಟವಿದೆ. ಸತ್ಯದಲ್ಲಿ ಜೀವಾತ್ಮನ ಗಮ್ಯವಿದೆ. ಗಮ್ಯದಲ್ಲಿ ಸಮಾಧಿ ಸ್ಥಿತಿ ಇದೆ.  ಆ ಸ್ಥಿತ ಪ್ರಜ್ಞೆಯಲ್ಲಿ ಪರಮಾತ್ಮನ ಸಾಕ್ಷಾತ್ಕಾರವಿದೆ.

ಗುರಿಗಿಂತ ದಾರಿ ಮುಖ್ಯವೆಂದ ಸ್ವಾಮಿವಿವೇಕಾನಂದರನ್ನು ಓದಿ ಭಾರತವನ್ನು ಅರಿಯಬೇಕು


SwamiVivekanandaನಾವು ಇಂದು ವಿವೇಕಾನಂದರ 154 ನೇ ಜಯಂತೋತ್ಸವ ಸಂಭ್ರಮದಲ್ಲಿದ್ದೇವೆ.  “ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ” ಎನ್ನುತ್ತಾರೆ ಸ್ವಾಮಿವಿವೇಕಾನಂದರು. ನಾವು ಭಾರತವನ್ನು ಅರಿಯಬೇಕೆಂದರೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಬೇಕು. ಸ್ವಾಮೀಜಿ ಯುವಜನಾಂಗಕ್ಕೆ ಅಂದಿಗೂ ಇಂದಿಗೂ ಸ್ಫೂರ್ತಿ ಚೇತನರಾಗಿದ್ದಾರೆ. ನಾವು ಇಂದು ಧರ್ಮ ಸಂಸ್ಕೃತಿಯಲ್ಲಿಯೂ  ರಾಜಕೀಯವು ನುಸುಳಿ ಜಾತೀಯತೆ ಭೂತ ಕಾಡುತ್ತಿರುವ ವಿಲಕ್ಷಣ ಕಾಲಘಟ್ಟವನ್ನುಎದುರಿಸುತ್ತಿದ್ದೇವೆ.

ಸ್ವಾಮಿವಿವೇಕಾನಂದರು, ಇಡಿ ಜೀವಮಾನವೆಲ್ಲ ಹಿಮಾಲಯದಿಂದ ಕನ್ಯಾಕುಮಾರಿಯ ವರೆಗೆ ಆನಂತರ, ಪಾಶ್ಚಾತ್ಯ ದೇಶಗಳಲ್ಲಿಯೂ ಪರ್ಯಟನ ಮಾಡಿದವರು. ಅಮೆರಿಕ ಸರ್ವಧರ್ಮ ಸಮ್ಮೇಳನದಲ್ಲಿ ವಿಶ್ವವೇ ಬೇರಗೊಡೆವಂತೆ ತಾವು ಭಾರತೀಯರಾಗಿ ಸರ್ವಧರ್ಮ ಸಹಿಷ್ಟುತೆಗೆ ಹೆಸರಾದ ಹಿಂದೂ ಧರ್ಮದಿಂದ ಬಂದವನು ಎಂದು ಹೆಮ್ಮೆಯಿಂದ ನುಡಿದವರು; ಧೀಮಂತ ವ್ಯಕ್ತಿತ್ವ ವಿವೇಕಾನಂದರದು. ನಮ್ಮ ಹಿಡಿಯಷ್ಟು ಬ್ರಾಹ್ಮಣರ ಕಮಂಡಿತನ, ಮಡಿವಂತಿಕೆ, ಅಸ್ಪೃಶ್ಯತೆ ಹಾಗೂ ಅವರ  ಕೆಳವರ್ಗದ ಜನರ ಶೋಷಣೆಯನ್ನು  ಇಲ್ಲಿ ತೀವ್ರವಾಗಿ ಖಂಡಿಸಿದರು. ನಮ್ಮ ಜನರ ಅಜ್ಞಾನ ಅನಕ್ಷರತೆ ಬಡತನದ ಬಗ್ಗೆ ವಥೆಯಿಂದ ಹೇಳುತ್ತಿದ್ದರು. ಅವರೆಂದೂ ಹೊರದೇಶದಲ್ಲಿ  ಇವುಗಳ ಬಗ್ಗೆ ಪ್ರಸ್ತಾಪಿಸಲಿಲ್ಲ.  ಭೌದ್ಧಧರ್ಮವನ್ನು ಹಿಂದೂಧರ್ಮದೊಂದಿಗೆ ಹೋಲಿಸಿ ಅವರಷ್ಟು ವಿಶ್ಲೇಷಣೆ ಮಾಡಿದವರು ಬೇರಾರೂ ಇರಲಿಕ್ಕಿಲ್ಲ. ನಾನು ಹಿಂದೂ ಜನಾಂಗದವನೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದರು.ಹಿಂದೂಧರ್ಮ ಸಂಸ್ಕೃತಿಯ ವೈವಿಧ್ಯತೆ ವೈಶಿಷ್ಟ್ಯವ ನ್ನು ವಿಶ್ವದಾದ್ಯಂತ ಹೆಮ್ಮೆಯಿಂದ ಸಾರಿದರು.

ವೇಗಗತಿಯಲ್ಲಿ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಇಂದಿನ ದಿನಗಳಲ್ಲಿ ಧರ್ಮ ಸಂಸ್ಕೃತಿ ಪರಂಪರೆಯ ವಿಷಯಗಳಲ್ಲಿ ರಾಜಕೀಯವೂ ನುಸುಳಿರುವುದು ದೈವನಿಂದನೆ ಧರ್ಮನಿಂದನೆ ಮಾಡುವುದೂ ಶೋಚನೀಯ ಸಂಗತಿಯೇ. ನಾವು ಧರ್ಮೀಯರನ್ನುತ್ತೇವೆ. ದೇವರು ಧರ್ಮ ಎಲ್ಲ ಜನಾಂಗದಲ್ಲೂ ಒಂದೇ ಆದು ಅವ್ಯಕ್ತವ್ಯಕ್ತವೂ ಆದ ಸತ್ ಶಕ್ತಿಯೊಂದೇ. ಅನುಸರಣೆಯಲ್ಲಿ ಅವರವರ ಸಂಪ್ರದಾಯ ಆಚಾರ ವಿಚಾರಗಳಷ್ಟೇ ಬೇರೆ.

ವಿಗ್ರಹಾರಾಧನೆಯನ್ನಾಗಲಿ ಅಷ್ಟೇಕೆ ಗುರುಗಳ ಆಯ್ಕೆಯಲ್ಲಾಗಲಿ ವಿವೇಕಾನಂದರು ಸತ್ಯನಿಷ್ಠೂರ ‌ವ್ಯಕ್ತಿಯಾಗಿದ್ದರು. ಅವರ ಗುರು ರಾಮಕೃಷ್ಣರನ್ನೂ ಪರಿಕ್ಷಸದೇ ಬಿಡಲಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಸ್ವಯಂ  ಆತ್ಮಶಕ್ತಿಯಿಂದ ಏನೆಲ್ಲವನ್ನು ಎದುರಿಸಿ ಮುನ್ನೆಡೆಯಬಹುದೆಂಬುದಕ್ಕೆ ಮಾದರಿಯಾಗಿದ್ದರು  ಅವರ ಎಲ್ಲ ಉಪನ್ಯಾಸಗಳ ಮೂಲ ಆತ್ಮಸಾಕ್ಷಾತ್ಕಾರವೇ ಎಂದು ಹೇಳುತ್ತಿದ್ದರು. ಆತ್ಮ ಇಲ್ಲ ಎನ್ನುವ ವರೂ ಚಿಂತಿಸುವಂತೆ ಮಾಡಿದ  ಮಹಾನ್ ಸಂತರು ಅವರು ಯುವ ಪೀಳಿಗೆಗೆ ಅಂದಿಗೂ ಇಂದಿಗೂ ಸ್ಫೂರ್ತಿ ಚೇತನವಾಗಿದ್ದಾರೆ. ನಿಜಕ್ಕೂ ವಿದ್ಯಾವಂತರು ಬುದ್ಧಿವಂತರು ಆದ ಇಂದಿ ಯುವಪೀಳಿಗೆ ನಕಾರತ್ಮಕ ಧೋರಣೆ ಬಿಟ್ಟು  ಅವರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು.  ತಮ್ಮ ೨೪ ನೇ ವಯಸ್ಸಿನಲ್ಲಿ ರಾಮಕೃಷ್ಣರ ಇಚ್ಛೆಯಂತೆಯೇ ಅವರ ಮರಣಾನಂತರ ಸಂನ್ಯಾಸ ಸ್ವೀಕಾರ ಮಾಡಿದ ಸ್ವಾಮಿ ವಿವೇಕಾನಂದರು ಆನಂತರದ ಹದಿನೈದು ವರ್ಷಗಳಲ್ಲಿ ಬರಿಗೈ ಬೈರಾಗಿಯಾಗಿ ಪರಿವ್ರಾಜಕರಾಗಿ ಮೊದಲು ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ನಮ್ಮ ದೇಶ ಪರ್ಯಟನ ಮಾಡಿ ಆನಂತರ ಅಮೇರಿಕ ಮತ್ತಿತರ ಪಾಶ್ಚಾತ್ಯ ರಾಷ್ಟ್ರಗಳಿಗೆ  ವಾರ ತಿಂಗಳುಗಟ್ಟಲೆ ಪಯಣಿಸಿ ನಮ್ಮ ಧರ್ಮ ಸಂಸ್ಕೃತಿ ಯನ್ನು ಬಗ್ಗೆ ಹೊರ ದೇಶಗಳಲ್ಲಿ ಉಪನ್ಯಾಸಮಾಡಿ ಭಾರತದ ಕೀರ್ತಿಪತಾಕೆ ಯನ್ನು ಆಧ್ಯಾತ್ಮಿಕ ಪ್ರಪಂಚದಲ್ಲಿ ಉತ್ಕೃಷ್ಟಮಟ್ಟಕ್ಕೇರಿಸಿದ ಅವರು ಎಂದೆಂದಿಗೂ ಚಿರಸ್ಚರಣೀಯರು.

ಒಬ್ಬ ಮನಷ್ಯ ಹೇಗೆ ಸಾಧಕನಾಗಿ ದೈವತ್ವಕ್ಕೇರ ಬಹುದೆಂದಬುದನ್ನು ತೋರಿದ ಅವರ ಬಗ್ಗೆ  ಕುತರ್ಕಗಳನ್ನು  ಮಾಡುವ ಕುಹಕಿಗಳು ಅಂದಿಗೂ ಇಂದಿಗೂ ಕಾಣಸಿಗುವರು. ಅದರಿಂದ, ಸ್ವಾಮಿ ವಿವೇಕಾನಂದರನ್ನು ಬ್ರಾಹ್ಮಣನಲ್ಲ, ಮೀನು ಮಾಂಸಾಹಾರಿ, ಭಂಗಿ ಸೇದುವವ, ಕಾಯಿಲೆಯ ಮನುಷ್ಯ ಎಂದು ಹೀಗಳೆಯುವುದರಿಂದ ಸ್ವಾಮೀಜಿ ಅವರ  ಘನ ವ್ಯಕ್ತಿತ್ವಕ್ಕೇನೂ ಕುಂದುಬರಲಾರದು. ಎಂದಿಗೂ ಅಸೂಯೆ ಪರರು ನಿಂದಕರು, ಮತಾಂಧರು, ಪೂರ್ವಾಗ್ರಹ ಪೀಡಿತರು ಸಮಾಜಿಕ ಪಿಡುಗಿನಂತೆ ಇದ್ದೇ ಇರುತ್ತಾರೆ. ಅವರನ್ನು ಲೇಕ್ಕಿಸದೇ ಎಲ್ಲವನ್ನೂ ಸಾಕ್ಷಿಚೇತನ ಸ್ವರೂಪರಾಗಿ ಚಿಂತಿಸುವ ಸತ್ವಶಾಲಿಗಳ ಗುಂಪು  ಎಲ್ಲಕಾಲಕ್ಕೂ ಇದ್ದೇ ಇರುತ್ತದೆ.

ಸ್ವಾಮಿ ವಿವೇಕಾನಂದರೇ ಹೇಳಿದಂತೆ, “ಸತ್ಯ ಸಾಕ್ಷಾತ್ಕಾರವೇ ಎಲ್ಲಕ್ಕಿಂತ ಮುಖ್ಯವಾದದ್ದು. ನೀನು ಗಂಗಾನದಿಯಲ್ಲೇ ಸಾವಿರ ಬಾರಿ ಸ್ನಾನಮಾಡಿದರೇನು, ದೀರ್ಘಕಾಲ ಸಸ್ಯಾಹಾರ ಸೇವಿಸಿದರೇನು ಅದು ನಿನ್ನ ಆತ್ಮವಿಕಾಸಕ್ಕೆ ಒಯ್ಯವುದೇ?  ಆದರೆ, ಯಾರು ಇಂತಹ ಬಾಹ್ಯಾಚರಣೆಗಳನ್ನಾಚರಿಸದೇ ಆತ್ಮಸಾಕ್ಷಾತ್ಕಾರ ಮಾಡಿಕೊಂಡಿದ್ದರೆ ಇಂತಹ ಬಾಹ್ಯಾಚರಣೆಗಳನ್ನಾಚರಿಸದಿರುವ ಹಾದಿಯೂ ಶ್ರೇಷ್ಠ…. ಅನೇಕರು, ಸಂಪೂರ್ಣವಾಗಿ ಬಾಹ್ಯ ರೂಪ, ಸಂಪ್ರದಾಯಗಳಲ್ಲೇ ಮಗ್ನರಾಗುವರು. ತಮ್ಮ ಮನಸ್ಸನ್ನು ಆತ್ಮನ ಕಡೆ ತಿರುಗಿಸಲು ಅಸಮರ್ಥರಾಗುವರು”

ಅತಿಯಾಗಿ ತಿಂದರೆ ಅನ್ನವೂ ವಿಷವೇ. ಕಾಯಿಲೆ ಶರೀರಕ್ಕೆ ಅಷ್ಟೇ. ಮನಸ್ಸು ಬುದ್ಧಿ ಆಚೆಯ ಪ್ರಜ್ಞಾಚೇತನವು ರೋಗಗ್ರಸ್ಥವಾಗಬಾರದೆಂಬುದಕ್ಕೇ ಕ್ಯಾನ್ಸರ್ ಪೀಡಿತರಾದ ರಾಮಕೃಷ್ಣರೂ ಮಾದರಿಯಾಗುತ್ತಾರೆ. ಭೋಗಿಯಾದವನು ಯೋಗಿಯಾಗಲಾರ. ಪ್ರತ್ಯಾಹಾರ, ಅಪರಿಗ್ರಹ ಯೋಗಿಯ ಮೂಲಮಂತ್ರವಲ್ಲವೇ…?  ಅವರು ಶ್ರೀಮಂತ ಮನೆತನದಿಂದ ಬಂದವರಾದರೂ, ಸಂನ್ಯಾಸಿಯಾಗಿ ಭಿಕ್ಷುವಾಗಿ, ದೇಹಕ್ಕೆ ಸರಿಯಾದ ಪೋಷಕಾಂಶದ ಆಹಾರವಿಲ್ಲದೇ ಬಳಲಿದವರು. ಅವರ ಮನೋದಾರ್ಢತೆಯ ಮುಂದೆ ದೇಹಾಲಸ್ಯ ಹಿಂದೆ ಸರಿಯುತ್ತಿತ್ತು. ಅಮೇರಿಕಾ ಪ್ರವಾಸಾನಂತರದ ದಿನಗಳಲ್ಲಿ ಪ್ರಸಿದ್ಧರಾದಾಗಲಷ್ಟೇ ಆವರು ಒಳ್ಳೆಯ ಆಹಾರವನ್ನು ಸೇವಿಸುವ ಅವಕಾಶ ಸಿಕ್ಕಿತು. ಅವರ ಮಾತುಗಳಲ್ಲೇ ಹೇಳುವುದಾರೆ, ಯಾವ ಮಹತ್ವದ ಕೆಲಸವನ್ನ ಆಗಲಿ, ದೇಹವನ್ನು ದಂಡಿಸದೇ ತ್ಯಾಗವನ್ನು ಮಾಡದೇ ಸಾಧಿಸಲಾಗುವುದಿಲ್ಲ.

ವಿವೇಕಾನಂದರಿಗೆ ತಮ್ಮ ಅಂತಿಮ ದಿನಗಳು ಬಂದಿತೆಂಬುದು ಅವರ ಸೂಕ್ಷ್ಮಚೇತನಕ್ಕೆ ಅರಿವಾಗಿತ್ತು. ಅಂತಿಮ ದಿನಗಳಲ್ಲಷ್ಟೇ ಅವರಿಗೆ ದೇಹಾಲಸ್ಯ ಕಾಣಿಸಿಕೊಂಡಿತು. ಅವರದು ಇಚ್ಛಾ ಮರಣವೇ ಸರಿ. ಮಾಂಸ ತಿನ್ನುವ ಬ್ರಾಹ್ಮಣರಾದರೇನು ಇತರೆ ಜನಾಂಗದವರಾದರೇನು, ಅವರವರ ಆಂತರಿಕ ಪ್ರಜ್ಞೆಯ ಆಳದಲ್ಲಿ ಅವರವರನ್ನು ಅರಿಯುವುದಾಗಬೇಕು. ಅದೇ ಆತ್ಮಸಾಕ್ಷಾತ್ಕಾರದ ಮೊದಲ ಹೆಜ್ಜೆ.  ಆಧ್ಯಾತ್ಮ ಎಂಬದು ಕೇವಲ ವಯಸ್ಸಾದವರಿಗಷ್ಟೇ ಅಲ್ಲ ಅದು ಎಲ್ಲರನ್ನು ಆಂತರಿಕವಾಗಿ ಒರೆಹಚ್ಚಿ ನೋಡಿಕೊಳ್ಳುವಂತೆ ಮಾಡುವ ಅಧಿಕ್ಯತ ವಿದ್ಯೆ. ಸ್ವಾಮೀಜಿ ಆತ್ಮವಿಲ್ಲ ಎನ್ನುವ ನಾಸ್ತಿಕರನ್ನೂ ಅವರಿಗೆ ಪರಮಾಪ್ತವಾದ ಆಂತರಿಕ ಚೈತನ್ಯದಲ್ಲಿ ಚಿಂತನಗೆ ಹಚ್ಚುವಂತೆ ಮಾಡದರು. ಸ್ವಾಮಿವಿವೇಕಾನಂದರು “ಗುರಿಗಿಂತಲೂ ದಾರಿ ಮುಖ್ಯ” ಎಂದರು. ನಾವು ಆರಿಸಿಕೊಂಡ ದಾರಿ ಸರಿಯಿದ್ದರೆ, ಆ ದಾರಿಯಲ್ಲಿ ಎಚ್ಚರಿಕೆಯಿಂದ ನಡೆದರೆ ತಲುಪಬೇಕಾದ ಗುರಿಯನ್ನು ತಲುಪುತ್ತೇವೆ. ನಮಗೆ ಖಂಡಿತ ಯಶಸ್ಸು ಲಭಿಸುತ್ತದೆ. ನಿಮ್ಮ ಗುರಿ ಯಶಸ್ಸಿನತ್ತ ನೋಡುತ್ತಲಿದ್ದರೆ ದಾರಿಯೂ ಸರಿಯಾಗಿ ಕಾಣದೇ ಮುಗ್ಗರಿಸಿ ಬೀಳಿತ್ತೀರಿ.

ವಿಷಯಕ್ಕೊಂದು ವಿಶ್ವ ವಿದ್ಯಾನಿಲಯ….?


ವಿಷಯಕ್ಕೊಂದು ವಿಶ್ವ ವಿದ್ಯಾನಿಲಯ ಸ್ಥಾಪಿಸುವುದು ನಮ್ಮ ಶಿಕ್ಷಣ ಕ್ಷೇತ್ರವನ್ನು ಬಾಧಿಸುತ್ತಿರುವ ಮಾರಕ ರೋಗ. ಇದನ್ನು ನೋಡುತ್ತಿದ್ದರೆ ನಾವು ನಮ್ಮ ದೇಶವನ್ನು ದ್ವಿತೀಯ ಸ್ಥಾನಕ್ಕೆ ಕೊಂಡೊಯ್ಯಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ ಎಂಬ ಸಂಶಯ ಬರುತ್ತದೆ….ನಮಗೆ ಚಿಂತನೆ  ಮತ್ತು ಆಲೋಚನೆಗಳಲ್ಲಿ ಯಾವತ್ತೂ ಮುಂಚೂಣಿಯಲ್ಲಿರಲು ಸಾಧ್ಯವಿಲ್ಲ. ಎಂದು ನಾವೇ ನಿರ್ಧರಿಸಿಬಿಟ್ಟಿದ್ದೇವೆ. ಜೊತೆಗೆ ಶಿಕ್ಷಣವನ್ನೂ ಒಂದು ಲಾಭದಾಯಕ ಉದ್ಯಮವೆಂದು ಭಾವಿಸುವವರಿಗೆ ಈ ವಿಷಯ ವಿಶ್ವವಿದ್ಯಾಲಯಗಳು ಗಳಿಕೆ ಯ ಮಾರ್ಗವೂ ಆಗಿಬಟ್ಟಿವೆ….
ಎಂದಿದ್ದಾರೆ ಹಿರಿಯ ವಿಜ್ಞಾನಿ, ಶಿಕ್ಷಣ ತಜ್ಞ ಪ್ರೊ.ಯಶ್ ಪಾಲ್. (ಪ್ರ.ವಾಣಿ)

ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಗೇ ವಿರುದ್ಧವಾಗಿರುವ  ಈ “ವಿಷಯ ವಿಶ್ವವಿದ್ಯಾಲಯಗಳು” ವಿಶ್ವವಿದ್ಯಾಲಯಗಳನ್ನು ಕೇವಲ ತರಬೇತಿ ಸಂಸ್ಥೆಗಳಾಗಿ ಪರಿವರ್ತಿಸಿಬಿಡುತ್ತವೆ. ಅಂದರೆ ವಿಶ್ವವಿದ್ಯಾಲಯಗಳು ವಿಶಾಲ ಮನೋಭಾವದ ಪಾಂಡಿತ್ಯವುಳ್ಳ ನಾಗರೀಕರನ್ನು ಸೃಷ್ಟಿಸುವ ಕೆಲಸವನ್ನೂ ನಿಲ್ಲಿಸಿಬಿಡುತ್ತವೆ….ಯಾಕೆಂದರೆ, ನಮ್ಮ ಸರ್ಕಾರಕ್ಕೆ ಬೇಕಿರುವುದು ತನ್ನ ಗೊಡ್ಡು ಚಿಂತನೆಗಳನ್ನು ಪ್ರಶ್ನಿಸದ ನಾಗರಿಕ ಸಮಾಜವಷ್ಟೇ… ಇದು ಬಡವರನ್ನು ಉನ್ನತ ಶಿಕ್ಷಣದಿಂದ ಹೊರಗಿಡುವ ಕ್ರಿಯೆಯೂ ಆಗಿಬಿಡುತ್ತದೆ.. ಆದ್ದರಿಂದ ವಿಷಯ ವಿದ್ಯಾಲಯಗಳ ಸ್ಥಾಪನೆ ಒಂದು ಅಪ್ರಜಾಸತ್ತಾತ್ಮಕ ನೀತಿ.
-ಎಂದಿದ್ದಾರೆ ಕೇರಳ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರಾದ ಡಾ.ಕೆ.ಎನ್.ಪಣಿಕ್ಕರ್. (ಪ್ರ.ವಾಣಿ)

ಮೇಲೆ ತಿಳಿಸಿದ ಹಿರಿಯ ಶಿಕ್ಷಣ ತಜ್ಞರೂ ಮೇಧಾವಿಗಳ ಮಾತನ್ನು ನಮ್ಮ ಇಂದಿನ ಶಿಕ್ಷಣತಜ್ಞರು ಮತ್ತು ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ, ಮುಂದೊಂದು ದಿನ ಜ್ಞಾನ ದೇಗುಲ ಗಳೆಂದು ಕರೆಸಿಕೊಳ್ಳುವ, ನಮ್ಮ ಮುಂದಿನ ಪೀಳಿಗೆ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳೂ ಕೇವಲ “ಇಂಡಸ್ಟ್ರಿ” (ಕಾರ್ಖಾನೆ) ಗಳಾಗಿ ಬಿಡುತ್ತವೆಯಷ್ಟೇ. ಬಡವರಿಗೆ ಉನ್ನತ ಶಿಕ್ಷಣವೆಂಬುದು ಮರೀಚಿಕೆಯಾಗುತ್ತದೆ.  ಅಂತಹ ಸಾಮಾಜವಾದ ವಿರೋಧಿ ನೀತಿಯಿಂದ  ಅಪಾಯ ಬರದಿರುವಂತೆ ಸಂಬಂಧಪಟ್ಟ ಗಣ್ಯರು ಶಿಕ್ಷಣತಜ್ಞರೂ ಸೂಕ್ತ ಕ್ರಮ ತಡೆಯಾಜ್ಞೆಗಳತ್ತ ಗಮನ ಹರಿಸಬೇಕಲ್ಲವೇ…?

 

ಹಿರಿಯ ಮನಸ್ಕರು ಮತ್ತು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳು…


ಕನ್ನಡ ಸಾಹಿತ್ಯದ ನವೋದಯದ ಕಾಲದ ಸಂದರ್ಭದಲ್ಲಿ  ಇಂಗ್ಲೀಷ್ ಪ್ರಭಾವವೇ ಬಹಳವಿತ್ತು. ಆಗ  ಕನ್ನಡಿಗರು ಕನ್ನಡವನ್ನು ಅನನ್ಯವಾಗಿ ಪ್ರೀತಿಸುವಂತೆ ಓದುಗರನ್ನು ಅಪಾರ ಸಂಖ್ಯೆಯಲ್ಲಿ ಬೆಳೆಸಿ ಮನೆಮನೆಗಳಲ್ಲೂ ಮಾತಾದವರಲ್ಲಿ ಮೊದಲಿಗರು ಅ.ನ. ಕೃಷ್ಣರಾಯರು. ಅವರು ಕಾದಂಬರಿಕಾರರಾಗಿ ಅಂದು ಮಾಡಿದ ಪವಾಡ, ಪಡೆದ ಅಪಾರ ಜನಪ್ರಿಯತೆಯನ್ನು ಕಂಡು ಹೊಗಳಿದ ವಿದ್ವಜ್ಜನರೂ ಇದ್ದರು. ಅವರದು ಜನಪ್ರಿಯ ಸಾಹಿತ್ಯ ಅಗ್ಗದ ಪ್ರಚಾರದ ಸಾಹಿತ್ಯವೆಂದು ಅವರನ್ನೂ ಅವರ ಐಡಿಯಾಲಜಿ(ಇಂದಿನ ವ್ಯಾಖ್ಯೆ)ಯನ್ನೂ ಜರೆದ ಹಿರಿಯ ಸಾಹಿತಿಗಳೂ ವಿಮರ್ಶಕರೂ ಇದ್ದರು. ಆದರೇನು! ಅ.ನ.ಕೃ. ಅವರು ಕನ್ನಡ ನವೋದಯ ಕಾಲದ ಯುಗಪ್ರವರ್ತಕರಲ್ಲಿ ಅಗ್ರಣ್ಯರಾಗಿಯೇ ಉಳಿದರು. ಅಂದೂ ಅವರ ಯಶಸ್ಸನ್ನು ಕಂಡು ಕುದಿಯುವವರು ಕಾಲೆಳೆಯುವ ವಿದ್ವಜ್ಜನರ ಗುಂಪೇ ಇತ್ತು.  ಯಾರು ಏನೇ ಗೊಣಗಿದರೂ ಅ.ನ.ಕೃ ಅವರ ಜನಪ್ರಿಯತೆ ಹೆಚ್ಚಿತ್ತಲೇ ಹೋಯಿತು.  ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅಂದಿನ ಇಂಗ್ಲೀಷ್ ಪ್ರಭಾವೇ ಮೆರೆಯುತ್ತಿದ್ದ ಕಾಲದಲ್ಲಿ ಅವರು ಕನ್ನಡ ಓದುಗರನ್ನು ಅತ್ಯಧಿಕ ಸಂಖ್ಯೆಯಲ್ಲಿ ಬೆಳೆಸಿ ಕನ್ನಡ ಚಳುವಳಿಗಳಲ್ಲೂ ಸಕ್ರಿಯರಾಗಿದ್ದುದು ದಾಖಲೆಯಾಗಿದೆ; ಚಿರಸ್ಮರಣೀಯವೇ ಆಗಿದೆ.

ಇದೀಗ ದೃಶ್ಯಮಾಧ್ಯಮದ ಚಾನೆಲ್ ಗಳು ಹಾಗೂ ಸಿನಿಮಾಗಳೂ ಓದುಗರನ್ನು ಕಿತ್ತುಕೊಳ್ಳುತ್ತಲೇ ಇವೆ. ಹೊಸ ಓದುಗರನ್ನು ಸೃಷ್ಟಿಸುವುದರಲ್ಲಿ ವಿದ್ವಜ್ಜನರ    ಸಾಹಿತ್ಯ ಅದೆಷ್ಟು ಯಶಸ್ವಿಯಾಗಿದೆ ಎಂಬುದು ಬೃಹತ್ ಪ್ರಶ್ನೆಯಾಗಿ ಕಾಡಿದೆ.   ಇಂತಹ ಕಾಲಘಟ್ಟದಲ್ಲಿ ಸಾಹಿತ್ಯೇತರ ಕೃತಿಗಳಿಗೆ ಬೇಡಿಕೆ ಹೆಚ್ಚಿದೆ.

ಆದರೂ ಆಶಾದಾಯಕವೆಂದರೆ, ಮಧ್ಯಮ ವರ್ಗದ ಜನರೂ ಮತ್ತು ಐಟಿ/ಬಿಟಿ ವರ್ಗದವರೂ  ವಯೋವೃದ್ದರೂ ತಮ್ಮ ಸಾಹಿತ್ಯಾಸಕ್ತಿ ಉಳಿಸಿಕೊಂಡು, ಕೊಂಡು ಕಥೆ ಕಾದಂಬರಿಗಳನ್ನುಓದುತ್ತಿರುವುದು ಸಮಾಧಾನಕರವೇ. ಅಷ್ಟಕ್ಕೂ ಕಥೆ ಕಾದಂಬರಿ ಸಾಹಿತ್ಯಕ್ಕೆ ಬೇಡಿಕೆ ಇಲ್ಲವೆಂಬಂತಾಗಿರುವ ಈ ಸಂದರ್ಭದಲ್ಲಿ ಎಸ್.ಎಲ್. ಭೈರಪ್ಪನವರು ತಮ್ಮ ಸಾಮಾಜಿಕ ಬದ್ಧತೆಯ ಕೃತಿಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಸಾಮಾನ್ಯ ಜನತೆಯನ್ನು ಮಾತ್ರವಲ್ಲ, ನೌಕರರು,  ಉನ್ನತ ಅಧಿಕಾರದಲ್ಲಿರುವವರೂ, ರಂಗ ಭೂಮಿ ಸಿನಿಮಾ ಕಲಾವಿದರೂ, ಮತ್ತು ಔದ್ಯೋಗಿಕವಾಗಿ  ಐಟಿ,ಬಿಟಿ ಮತ್ತು ಇತರೆ ಕಂಪೆನಿಗಳ ಕಾರ್ಮಿಕ ವರ್ಗದವರೂ ಅವರ ಕೃತಿಗಳನ್ನುಮೆಚ್ಚಿಕೊಳ್ಳುತ್ತಿದ್ದಾರೆ.  ಅಷ್ಟೇ ಅಲ್ಲ ಕೃತಿಗಳು ಇತರ ಭಾಷೆಗಳಿಗೂ ತರ್ಜಮೆಗೊಂಡಿವೆಯೆಂದರೆ ಅವುಗಳ ಗುಣಮಟ್ಟ ಮತ್ತು ಉಪಯುಕ್ತತೆ ಹೆಚ್ಚಿದೆಯೆಂದೇ. ಹಾಗೇ ಅವರು ಸಾಮಾಜಿಕವಾಗಿ ಬದಲಾವಣೆಯನ್ನು ಸುಧಾರಣೆಯನ್ನೂ ಬಯಸುವ ಅವರ ಕೃತಿಗಳಿಂದ ಕನ್ನಡಿಗರ ಹೆಮ್ಮೆಯ ಸಾಹಿತಿಯಾಗಿದ್ದಾರೆ.

ಭೈರಪ್ಪನವರಿಗೆ ಇತ್ತೀಚೆಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಲಭಿಸಿರುವುದು ಅವರ ಅಭಿಮಾನಿಗಳಿಗೆ ಮಾತ್ರವಲ್ಲ ನಿಜಕ್ಕೂ ಕನ್ನಡಪರ ಕಾಳಜಿಇರುವವರಿಗೆ ಹಾಗೂ ಸಮಾಜಿಕ ಪರಿವರ್ತನೆ ಬಯಸುವ ಬುದ್ಧಿಜೀವಿಗಳಿಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆ ಪಡುವಂತಾಗಿದೆಯಲ್ಲವೇ…?  ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ ಎನ್ನುವವರಿದ್ದಾರೆ.  ಉತ್ತಮ ಸಾಹಿತ್ಯ ಕೃತಿಗಳು ಕಾಲ ಕಾಲಕ್ಕೆ ಜನಮಾನಸದಲ್ಲಿ  ಪ್ರಭಾವ ಬೀರಿರುವುದೂ ಜನಜೀವನಕ್ಕೆ ಹೊಸ ಬೆಳಕನ್ನು ಚೆಲ್ಲುವುದು ನಗ್ನ ಸತ್ಯ.  ಸಾಹಿತ್ಯವೆಂದರೆ ಸಹೃದಯರನ್ನು ತಲುಪುವುದಷ್ಟೇ ಮುಖ್ಯ ಅಲ್ಲವೇ?    ಅದಿಲ್ಲದವರು  ಸಣ್ಣಮನಸ್ಸಿನವರಾಗಿಬಿಡುತ್ತಾರೆ. ಅ.ನ.ಕೃ ಅವರ ಜನಪ್ರಿಯತೆ ಕಂಡು ಕರುಬುವ ಅವರದು ಜನಪ್ರಿಯ ಸಾಹಿತ್ಯವೆಂದು ಜರೆಯುವವರಿದ್ದಂತೆ ಈ ಕಾಲಘಟ್ಟದಲ್ಲೂ ಅಂಥವರು ಇರುವುದರಲ್ಲಿ ಯಾವ ಸೋಜಿಗವೇನಿಲ್ಲ.
ಈಗಿತ್ತಲಾಗಿ ಹಿರಿಯ ಸಾಹಿತಿಗಳ ಬೇರೆ ಬೇರೆ “ಐಡಿಯಾಲಜಿಗಳು” ಏನೇ ಇರಲಿ, ಅದರಿಂದ ಸಾಮಾನ್ಯ ಓದುಗರಿಗೆ ಏನು ಪ್ರಯೋಜನ?  ಈಗಾಗಲೇ ದೃಶ್ಯಮಾಧ್ಯಮದಿಂದ ಒಂದಿಷ್ಟು ಸೋರಗಿರುವ ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಕೊಡುಗೆ ಶ್ಲಾಘನಿಯ…. ನಾವು ಮಾಡಲಾಗದ ಕೆಲಸವನ್ನು ಕನ್ನಡಕ್ಕೆ ಭೈರಪ್ಪನವರು ಮಾಡಿದ್ದಾರೆ ಎಂದು ಹೆಮ್ಮೆಪಡುವ ಬದಲು ಜ್ಞಾನಪೀಠ ಪ್ರಶಸ್ತಿ ಹೊತ್ತುಕೊಂಡಿರುವ ಯು.ಆರ್.ಅನಂತಮೂರ್ತಿಯವರು,  ” ತಮ್ಮದೇ ಐಡಿಯಾಲಜಿ” ಹೊಂದಿದ್ದು ದುರಹಂಕಾರ, ಪೂರ್ವಾಗ್ರಹದಿಂದ ಬೈರಪ್ಪನವರನ್ನು ರಾಹುಗ್ರಸ್ತರೆನ್ನುವುದು, ಇತರ ಸಾಹಿತಿಗಳನ್ನು ಕೇತುಗ್ರಸ್ತರೆನ್ನುವುದು ಅವರಿಗೆ ಮಾತ್ರವಲ್ಲ ಕನ್ನಡಕ್ಕೂ ಶೋಭೆ ತರುವುದಿಲ್ಲ.

ಹಿರಿಯ ಸಾಹಿತಿ ಬರಗೂರರು ಅನಂತಮೂರ್ತಿ ಸುರಕ್ಷಾ ವಲಯದಲ್ಲಿದ್ದಾರೆ, ಅವರದೇ ಪಟಲಾಮ್ ಇದೆ … ಎಂದಿದ್ದಾರೆ.  ಅವರು ಎಡ ಪಂಥಿಯರಲ್ಲ,  ಬಲಪಂಥೀಯರೂ ಅಲ್ಲ ನಡುಪಂಥೀಯರು ಎಂಬ  ಚಂಪಾ ಅವರ ಮೂದಲಿಕೆ…. ಇವೆಲ್ಲ ನಮ್ಮಜನಸಾಮಾನ್ಯರೂ ಕನ್ನಡಾಭಿಮಾನಿಗಳ ಮೇಲೆ ಯಾವ ದುಷ್ಪಪರಿಣಾಮ ಬೀರುವುವು ಎಂಬುದನ್ನೇನೂ ಈ ಹಿರಿಯರು  ಚಿಂತಿಸಿದಂತಿಲ್ಲ.

ಯಾರೇನೆ  ಹೇಳಲಿ ಓದುಗರ ಸಂಖ್ಯೆ ಬೆಳೆಯತ್ತಿರಬೇಕು,  ಸಾಹಿತ್ಯಕೃತಿಗಳು, ಕಾದಂಬರಿಗಳು ಜನಸಾಮಾನ್ಯರನ್ನು ತಲುಪುವುದಷ್ಟೇ ಮುಖ್ಯವಲ್ಲವೇ? ಯಾವುದೇ ಸಾಹಿತ್ಯಕೃತಿಗಳು ಹಿರಿಯ ಸಾಹಿತಿಗಳನ್ನು ವಿದ್ವಜ್ಜನರನ್ನು ತೃಪ್ತಿಪಡಿಸಲಿಕ್ಕಾಗಿಯೆ ಹುಟ್ಟಿಕೊಳ್ಳುತ್ತವೆಯೇ …? ಸಾಹಿತ್ಯ ಕೃತಿಗಳು ಸಾಹಿತಿ ವಿಮರ್ಶಕರ ಗುಂಪಿನ ವಲಯಕ್ಕಾಗಿಯೇ ಆ ಮಟ್ಟದ ಐಡಿಯಾಲಜಿಯಲ್ಲಿ ತಯಾರಾಗುವ ಪ್ರಾಡಕ್ಟುಗಳೇನು..? ವಿದ್ವಜ್ಜನರನ್ನು ಮೆಚ್ಚಿಸುವ ಸಾಹಿತ್ಯ ಪ್ರಕಾರವೇ ಬೇರೆ ಇದ್ದೀತು;ಇರಲಿ.  ಹಾಗೆ ನೋಡಿದರೆ,ಯಾವುದೇ ಸಾಹಿತಿಯೊಬ್ಬರ ಕೃತಿಗಳೆಲ್ಲವೂ ವಿದ್ವತ್ ಪೂರ್ಣ ಕೃತಿಗಳೇ (ಮಾಸ್ಟರ್ ಪೀಸ್)  ಆಗಿರುತ್ತವೇನು? ಎಂಬೆಲ್ಲ ಪ್ರಶ್ನೆಗಳುಕಾಡುತ್ತವೆಯಲ್ಲ! ಹಾಗೆ ನೋಡಿದರೆ, ಬೈರಪ್ಪನವರು ಜನಸಾಮಾನ್ಯರ ಸಾಹಿತಿಯಾಗಿದ್ದಾರೆ. ಸಮಾಜದ ಮೇಲೆ ಬೆಳಕು ಚೆಲ್ಲುವ ಕೃತಿಗಳು, ಸಾಮಾನ್ಯ ಜನತೆಯನ್ನು ಮನವನ್ನು ಮುಟ್ಟಿ ತಟ್ಟಿ ಎಚ್ಚರಿಸುವ ಕೃತಿಗಳನ್ನು ಭೈರಪ್ಪನವರು ಬರೆದಿದ್ದಾರೆಂಬುದಕ್ಕೆ ಅವರ ಅಪಾರ ಜನಪ್ರಿಯತೆಯೇ ಸಾಕ್ಷಿ.

ಹಿರಿಯ ಮನಸ್ಕರು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳನ್ನು ಮುಕ್ತ ಮನಸ್ಸಿನಿಂದ ಮೆಚ್ಚಿ ಬೆಂಬಲಿಸಬೇಕಲ್ಲವೇ…..?  ಹಾಗಲ್ಲದೇ, ತಮ್ಮ ಮೂಗಿನ ನೇರಕ್ಕೇ ತಕ್ಕ ಐಡಿಯಾಲಜಿ ಹುಡುಕುವಂತ ಹುನ್ನಾರವೇಕೇ? ವ್ಯರ್ಥ ಪ್ರಲಾಪವೇಕೆ..? ಅದರಿಂದ ನಮ್ಮ ಕನ್ನಡ ನಾಡು ನುಡಿಗೆ ಜನಪರ ಕಾಳಜಿಗೆ ಮತ್ತು ಎಲ್ಲರನ್ನೂ ತಲುಪಬಲ್ಲ  ಸರಳ ಸುಲಭ ಶೈಲಿಯ ಸಾಮಾಜಿಕ ಬದ್ಧತೆಯುಳ್ಳ ಸಾಹಿತ್ಯಲೋಕಕ್ಕೆ ಯಾವ ಪ್ರಯೋಜನವಿದೆ?

ಒಟ್ಟಿನಲ್ಲಿ ಸಾಹಿತ್ಯ ಕೃತಿಯೊಂದು ಕರ ಪತ್ರವೋ,  ಕೇವಲ ವಾಚ್ಯವೋ ಅತ್ಯುತ್ತಮ ಕೃತಿಯೋ ಎಂಬುದನ್ನು ಓದುಗರು ಮೊದಲು ನಿರ್ಧರಿಸುತ್ತಾರಲ್ಲವೇ….. ಭೈರಪ್ಪನವರಂಥವರು ಮಹಾಜನತೆಯ ಕಾಳಜಿಪರವಾಗಿರುವ ಲೇಖಕರು ಯಾವೊಂದು ಪದವಿ ಪುರಸ್ಕಾರ ಬಯಸಿ ಬರೆಯುವವರೇ…?   ಅಂಥ ಪದವಿ ಪುರಸ್ಕಾರ ಅವರನ್ನೇ ಹುಡುಕಿಕೊಂಡು ಬರುತ್ತವೆ.  ಅದಕ್ಕಾಗಿ ಅವರು ಯಾವ ಬಗೆ ತಾಲೀಮು ಮಾಡುವ ಅಗತ್ಯವಿರುವುದಿಲ್ಲ.  ಅಂತೆಯೆ ಅವರಿಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಹುಡುಕಿಕೊಂಡು ಬಂದಿದೆಯಲ್ಲವೇ..?

ಅನಂತ ಮೂರ್ತಿ ಅವ್ರು ಯಾವ ಪಂಥೀಯ…?


ಇತ್ತ ಎಡ ಪಂಥೀಯರನ್ನು ಎದುರು ಹಾಕಿಕೊಂಡು ಅತ್ತ ಬಲ ಬಂಥೀಯರನ್ನೂ ವಿರೋಧಿಸುವಂತೆ ನಾಟಕವಾಡುತ್ತಿರುವ ಹಿರಿಯ ಸಾಹಿತಿ ಡಾ.ಯು.ಆರ್.ಅನಂತ ಮೂರ್ತಿ ಪೂರ್ವಾಗ್ರಹ ಪೀಡಿತರು. ಇಂತಹ ಒಬ್ಬ ಸಾಹಿತಿ ರಕ್ಷಣಾ ವಲಯದಲ್ಲಿ ನಿಂತು ಮಾತನಾಡುವುದಾದರೂ ಏಕೆ ಎಂದು ಹಿರಿಯ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ. ಅನಂತ ಮೂರ್ತಿ ಪತ್ರಿಕೆಯೊಂದರ ಸಾಪ್ತಾಹಿಕದಲ್ಲಿ ಬರೆದ ಲೇಖನದ (ಪ್ರ.ವಾಣಿ-26-06-2011) ಮೂಲಕ ಇತರೆ ಸಾಹಿತಿಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ. …ದೊಡ್ಡ ಸಾಹಿತಿಯಾದ ಅನಂತ ಮೂರ್ತಿ ಅವರ ಮಾತಿಗೂ ಕೃತಿಗೂ ಸಂಬಂಧವಿಲ್ಲದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ಇಂತಹ ಪೂರ್ವಾಗ್ರಹ ಪೀಡಿತರ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು ಎಂದೂ ಹೇಳಿದ್ದಾರೆ( ಕ.ಪ್ರ -28-06-2011).

ಅದೇ ಕ.ಪ್ರ ಪತ್ರಿಕೆಯಲ್ಲಿ ಹಿರಿಯ ಸಾಹಿತಿ ಚಂದ್ರಶೇಖ್ರಪಾಟೀಲರೂ ಅನಂತ ಮೂರ್ತಿ ಎಡವೂ ಅಲ್ಲ ಬಲವೂ ಅಲ್ಲದ ನಡು ಪಂಥೀಯ ಎಂದಿದ್ದಾರೆ. (ನನಗನಿಸುತ್ತದೆ ಅವ್ರು ಅತಂತ್ರೀಯರೋ. ಎಂದು.). ಮುಂಚೆ ವೈದಿಕರು ಇತರರನ್ನು ಕಚ್ಚಾಟಕ್ಕೆ ಬಿಟ್ಟು ಮಜಾನೋಡಿ ಅನುಭವಿಸುತ್ತಿದ್ದರು. ಇದೀಗ ಅಂಥವರ ನಡುವೆಯೇ ಸಂಘರ್ಷ ಹುಟ್ಟಿಕೊಂಡಿದೆ ಎನ್ನುತ್ತಾರೆ ಪಾಟೀಲರು. ಆದರೇನು!

ವೈದಿಕರಾದ ಭೈರಪ್ಪನವರು ಈ ಅಹಮಿಕೆಯ ಮನುಷ್ಯ ಗೊಣಗಿಕೊಂಡರೆ ನನಗೇನು… ಎಂಬಂತೇ ತಮ್ಮ ಸಾತ್ವಿಕ ಮೌನದಿಂದ ಇದ್ದಾರೆ;ಯಾರೆಲ್ಲರನ್ನೂ ಈ ಬಗ್ಗೆ ಚಿಂತನಗೆ ಹಚ್ಚಿದ್ದಾರೆ.

ನಾನು ಯು.ಆರ್.ಅನಂತ ಮೂರ್ತಿಯವರ ಲೇಖನ ಓದಿದ್ದೇನೆ. ಈ ಲೇಖನದ ಉದ್ದಕ್ಕೂ ಅವರ ವಿಕೃತ ವಿಚಾರಗಳು ಮತ್ತು ವಿರೋಧಾಭಾಸಗಳು ಎಂತವ್ರನ್ನೂ ಗೊಂದಗೊಳಿಸುತ್ತವೆ; ಕೆಲವೊಮ್ಮೆ ಅಪಾಯಕಾರಿಯಾದ  ಹೇಳಿಕೆಗಳೆನಿಸುತ್ತವೆ.

ಅವರ ಆ  ” ಸೃಜನಶೀಲತೆಯ ಅಗ್ನಿ ದಿವ್ಯ” ಲೇಖನದ ಆರಂಭದಲ್ಲೇ ಹೀಗೆ ಹೇಳುತ್ತಾರೆ- ಭಾರತೀಯ ಕಾವ್ಯ ಮೀಮಾಂಸೆಯಲ್ಲಿ “ವಿಭಾವ” ಎಂಬ ಶಬ್ದವಿದೆ. ಭಾವವೊಂದು ಸಾಹಿತ್ಯ ಕೃತಿಯಾಗುವಾಗ ಅದಕ್ಕೊಂದು ವಿಭಾವದ ಅಗತ್ಯವಿದೆ. ಅಂದರೆ ಆ ಭಾವವನ್ನು ಧರಿಸಬಲ್ಲ ಒಂದು ಅಥವಾ ಅದನ್ನು ಹೊತ್ತು ಹೆರಬಲ್ಲ ಒಂದು ದೇಹದ ಅಗತ್ಯವಿದೆ- ಅದೇ ವಿಭಾವ.. ನಾವು ಎಲಿಯಟ್ ನಿಂದ ತಿಳಿದುಕೊಂಡ ಆಬ್ಜೆಕ್ಟಿವ್ ಕೊರಿಲೇಟಿವ್ ಕೂಡಾ ಇದೇ ವಿಭಾವ ಎನ್ನುತ್ತಾರೆ.

ಅವರ ಈ ಮಾತಿನ ಜಾಡನ್ನೇ ಹಿಡಿದು ಹೇಳುವುದಾದರೆ, ಆತ್ಮಕ್ಕೊಂದು ದೇಹದ ಅಗತ್ಯವಿರುವಂತೆಯೇ ಭಾವವೊಂದು ಉತ್ತಮ ಸಾಹಿತ್ಯ ಕೃತಿಯಾಗುವಾಗ ಅದಕ್ಕೊಂದು ವಿಭಾವದ ಅಗತ್ಯವಿದೆ. ಅದನ್ನು ಹೊತ್ತು ಹೊರಹಾಕಬಲ್ಲ ದೈವಿಕ ಭಾವದ  ( ದೇಹವುಳ್ಳ ತಾತ್ವಿಕ ನಿರೀಕ್ಷಣಾಭಾವದ) ಸಾಹಿತಿಯ ಅಗತ್ಯವಿದೆ ಎನ್ನುತ್ತದೆ. ಇದಕ್ಕೆ ಅನಂತಮೂರ್ತಿಯವರು ಏನೆನ್ನುತ್ತಾರೋ…

ಬರಗೂರರು ಹೇಳುವಂತೇ ಅನಂತ ಮೂರ್ತಿ ಅವರ ಮಾತು ನಡವಳಿಕೆಗಳು ಒಂದಕ್ಕೊಂದು ತಾಳೆಯಾಗುವುದೇ ಇಲ್ಲ ಎನ್ನುವುದಕ್ಕೇ ಅದೇ ಲೇಖನದ ಇನ್ನೊಂದು ಸಾಲು ಹೀಗಿದೆ ನೋಡಿ- “ಭಾರತೀಯ ಸಿನಿಮಾ ಇರುವ ಹಾಗೆಯೇ ಕನ್ನಡ ಸಿನಿಮಾ ಅನ್ನುವುದೂ ಒಂದಿದೆ. ಇದು ಕನ್ನಡಕ್ಕೆ ತನ್ನದೇ ಆದ ಕೆಲವು ಕೊಡುಗೆಗಳನ್ನು ಕೊಟ್ಟಿದೆ”

ಭಾರತೀಯ ಸಿನಿಮಾ ಇರುವ ಹಾಗೆಯೇ… ಹಾಗೆಂದರೇನು? ಕನ್ನಡ ಸಿನಿಮಾಗಳೆಲ್ಲ ಭಾರತೀಯ ಸಿನಿಮಾ ಅಲ್ಲವೆಂದೇ…?

ದೊಡ್ಡ ಸ್ಥಾನದಲ್ಲಿರುವ ಸಾಹಿತಿಯಾಗಿ ಜ್ಞಾನವೃದ್ಧರೂ ಆಗಿರುವ ಅನಂತ ಮೂರ್ತಿಗಳು ವಸ್ತು ನಿಷ್ಠೆಯಿಂದ ವಿಮರ್ಶೆ ಮತ್ತು ಪರಾಮರ್ಶೆ ಮಾಡಿಕೊಳ್ಳದೇ ಪೂರ್ವಾಗ್ರಹ ಪೀಡಿತರಾಗಿ, ದೇಶವಿದೇಶಗಳಲ್ಲಿ ಅಪಾರ ಜನಮನ್ನಣೆಗಳಿಸಿರುವ ಬೈರಪ್ಪನವರನ್ನು ರಾಹುಗ್ರಸ್ತರೆಂದು ಇತರರನ್ನು ಕೇತು ಗ್ರಸ್ತರೆಂದು ಹೇಳುತ್ತ , ತಾವು ಕನ್ನಡದ ಪ್ರಗತಿಪರ ಕಾಳಜಿಯಿಂದ ದೂರವಾದ ಬುದ್ಧಿಗೂ ಮುಪ್ಪಡರಿದಂತೇ ವಿಕೃತ ಹೇಳಿಕೆಯನ್ನು ನೀಡುವುದೂ,  ನಾಡಿನ ಹಿರಿಯ ಸಾಹಿತಿಗಳೂ ಹಾಗೂ ಜನಸಾಮಾನ್ಯರಿಂದಲೂ ಆಗಾಗ್ಗೆ ಬೈಯಿಸಿಕೊಳ್ಳುವ ಶಾಪಗ್ರಸ್ತರಂತೆ ಕಾಣುವುದು ಅವರಿಗೆ, ಅವರು ಪಡೆದುಕೊಂಡಿರುವ ಸ್ಥಾನಕ್ಕೆ ಶೋಭೆಯಲ್ಲ.