Category Archives: ಕಾವ್ಯ

ನಮ್ಮ ಕನ್ನಡ ಭಾಷೆಯ ಪ್ರಾಮುಖ್ಯತೆ


ಸಂಸ್ಕೃತ ಮತ್ತು ಗ್ರೀಕ್ ಭಾಷೆಯ ನಂತರ ವಿಶ್ವದಲ್ಲಿ ನಮ್ಮ ಕನ್ನಡ ಮೂರನೆಯ ಪುರಾತನ ಭಾಷೆ, ೩೦೦೦ಕ್ಕೂ ವರ್ಷಕ್ಕೂ ಹಳೆಯದಾದದ್ದು.
ವೈಜ್ಙಾನಿಕವಾಗಿ, ಲಾಜಿಕಲ್ ಅಗಿ ಕನ್ನಡವು 99.99 ಉತ್ಕೃಷ್ಟ. ಭಾಷೆ.
ಕನ್ನಡಕ್ಕೆ 8 . ಹಿಂದಿ — 6, ತೆಲುಗು – 2, ಮಲಯಾಳಂ – 3, ತಮಿಳು – 2. ಜ್ನಾನಪೀಠ ಪ್ರಶಸ್ತಿಗಳು
ಅಂದು ಆಚಾರ್ಯ.ವಿನೋಭಬಾವೆ ಹೇಳಿದ ಮಾತೆಂದರೆ ವಿಶ್ವಲಿಪಿಗಳ. ರಾಣಿ ” ಕನ್ನಡ ಭಾಷೆ ”
ಅಂತರಾಷ್ಟ್ತೀಯ ಇಂಗ್ಲಿಷ್ ಭಾಷೆಗೆ ಸ್ವಂತ ಲಿಪಿಯಿಲ್ಲ. ಅದು ರೋಮನ್ ಭಾಷೆಯಿಂದ ಎರವಲು ಪಡೆದಿರುವುದು.
ಅದೇ ರೀತಿ ಹಿಂದಿಯದು ದೇವನಗರಿ ಲಿಪಿ
ಅನೇಕ ಉಚ್ಛಾರಣೆಗೆ ಸಾಮಾನ್ಯ ಅಕ್ಷರವನ್ನೇ ಬಳಸುವ ತಮಿಳು ಭಾಷೆ ಪರ್ಫೇಕ್ಟ್ ಆಗದು. ಆದರೆ ಸ್ವಂತ ಲಿಪಿಯಳ್ಳಾ ಭಾಷೆ ಅದೂ. ಅದೂ ಕೂಡ ಸಹಸ್ರಾರು ವರ್ಷದ್ದು..
ಮಾತನಾಡುವುದನ್ನೇ ಬರೆಯುವ, ಬರೆಯುವುದನ್ನೇ ಓದುವ ಭಾಷೆ ಕನ್ನಡ. ಮಾತ್ರವೇ.
ಅಮೋಫ ವರ್ಷ ನೃಪತುಂಗ ಬರೆದ ಕಾವೇರಿಯಿಂದ ಮ ಗೋದಾವರಿವರೆಗೂ….(ಆಗ ಹಿಂದಿ ಇಂಗ್ಲಿಷ್ ಹುಟ್ಟಿರಲಿಲ್ಲಾ)
ವಿದೇಶೀಯ ಕಿಟಲ್ ಎಂಬ ಸಾಹಿತಿ ಭಾರತೀಯ ಭಾಷೆಗಳ ಪೈಕಿ ಶಬ್ಧಕೋಶ ಬರೆದಿರುವುದು ಕನ್ನಡದಲ್ಲಿ ಮಾತ್ರ.
ರಗಳೆ ಸಾಹಿತ್ಯವನ್ನು ಕನ್ನ.ಡದಲ್ಲಿ ಬಿಟ್ಟು ಬೇರೆ ಭಾಷೆಯಲ್ಲಿ ಕಾಣುವುದಿಲ್ಲ ಇದು ಸಹ ಅಪರೂಪ
ಕುವೆಂಪು ಪಡೆದಷ್ಟು ಸಾಹಿತ್ಯ ರತ್ನ ಪ್ರಶಸ್ತಿ ದೇಶದ ಯಾವುದೇ ಭಾಷೀಕರು ಪಡೆದಿಲ್ಲಾ
ಕನ್ನಡದ ಛಂಧಸ್ಸಿಗೆ (ಷಟ್ಪದಿ) ಸರಿ ಸಮಾನ ಯಾವ ಭಾಷೆಯಲ್ಲೂ ಇಲ್ಲ. ಹೆಮ್ಮೆಯಿಂದ ಕನ್ನಡ ಬಳಸೋಣ ಕನ್ನಡಿಗನೆಂದು ಜಂಬದಿಂದ ಹೇಳೋಣ. ನಿಮ್ಮ ಮಿತ್ರರಿಗೂ ಈ ಸಂದೇಶ ಕಳುಹಿಸಿ, ಅವರು ಕನ್ನಡಿಗನೆಂದು ಜಂಬದಿಂದ ಹೇಳಲಿ.

Advertisements

ಇದೋ ಬಂತು ಸ್ವಾತಂತ್ರ್ಯ…


ಇದೋ ಬಂತು ಸ್ವಾತಂತ್ರ್ಯ
ಜನ್ಮಭೂಮಿ ಮಡಿಲಿಗೆ
ಸತತ ಬೆಂದು ನೊಂದ ಸುತರ
ಸಂತೈಸುವ ಒಡಲಿಗೆ.

ದುಷ್ಟರಕೂಟ ಭ್ರಷ್ಟರಾಟ
ಧನದಾಹಿಗಳ‌ ಹಗರಣಕೆ
ಅಧಿಕಾರಗಳಟ್ಟಹಾಸಕೆ ಕುಗ್ಗದೆ ಜಗ್ಗದೇ
ನುಗ್ಗಿ ನಡೆವ ಮಹಾಜನತೆಗೆ.

ದ್ವೇಷ ಸೇಡು ವಿಷ ಬೀಜಬಿತ್ತಿ
ಬೆಳೆವ ಒಳಗಣ ಕಿಚ್ಚಿಗವರೇ
ಬೆಂಕಿ ಹಚ್ಚಿಕೊಂಡು ವಿಕಟಹಾಸಗೈವ
ಪುಂಡ ಭಂಡರ ರಾಜಕೀಯ ದೊಂಬರಾಟಕೆ
ಅಂಜದೆ ಅಳುಕದೇ  ಮುಗಳ್ನಗುತಲಿ ಎದೆಸೆಟೆಸಿ
ಮುಂದೆ ಮುಂದೆ ದಿಟ್ಟ ಹೆಜ್ಜೆ  ಇಡುವ ಯುವಶಕ್ತಿಯ
ನೇತಾರರ ಈ ಪುಣ್ಯ ಭೂಮಿಗೆ.

ದೇಶ ಒಡೆವ ಐಕ್ಯತೆಗೆ ಭಂಗ ತರುವ
ಒಳಹೊರಗಿನ ಭಯೋತ್ಪಾದಕರ
ಹಿಮ್ಮೆಟ್ಟಿಸಿ ಹಡೆಮುರಿಕಟ್ಟಿ ಸೆರೆಗೆಸೆವ
ಕ್ಷಾತ್ರ ಯೋಧರ ಹೆಮ್ಮೆಯ ಹಿಂದೂಸ್ತಾನಕೆ

ಇದೋ ಬಂತು ಸ್ವಾತಂತ್ರ್ಯಹಲವು ಹತ್ತುನೂರು
ಸವಾಲುಗಳಿಗೆಲ್ಲ ಮಣಿಯದೆಲ್ಲ ಕ್ಷೇತ್ರಗಳಲಿ ನಿಂತು
ಹೋರಾಡುವಂಥ ಧೀಮಂತರ ನೆಲೆ ಬೀಡಿಗೆ.

ಅಕ್ರಮ ಅವ್ಯವಹಾರಗಳ ಮಸಲತ್ತುಗಳಿಗೆ
ನೇತಾರರ ಹೆಸರಿಗೆ ಮಸಿಬಳಿವ ಸೊಗಲಾಡಿಗಳಿಗೆ
ಕಾಮುಕರ ಹೆಣ್ಣಿನ ಮೇಲತ್ಯಾಚಾರಗಳಬ್ಬರಕೆ
ಸಿಡಿದು ಪ್ರತಿಭಟಿಸಿ ಶಿಕ್ಷೆಗೆಳೆವ ಪ್ರಜೆಗಳಿರುವ
ಸತ್ವಗುಣ ಸಾಧಕರ ಈ ಕರ್ಮ ಭೂಮಿಗೆ
ಬಡವ ಬಲ್ಲಿದರ ಬೆವರಿನ ದುಡಿಮೆ ನಿಷ್ಠೆಗೆ.

ವ್ಯವಸ್ಥೆಯಲಿ ಎಷ್ಟೇ ಮಾಲೀನ್ಯವಿರಲಿ ಜ್ಞಾನ-
ವಿಜ್ಞಾನದಲಿ ತಾಂತ್ರಿಕ ತಾತ್ವಿಕ ಬುದ್ಧಿಮತ್ತೆಯಲಿ
ಆತ್ಮಶಕ್ತಿ ಜಾಗರಣೆಯಲೆಲ್ಲ ತೊಡಕು ತೊಳೆದು ತೊನೆವ
ಸ್ವಚ್ಛ ಭಯಮುಕ್ತ ಸಾಧು ಸಂತರ ನೆಲೆ ವೀಡಿಗೆ
ಇದೋ ಬಂತು ಸ್ವಾತಂತ್ರ್ಯ
ದೇಶ ಸೇವೆ ಅಭಿವೃದ್ಧಿಯೆ ತಾರಕ
ಮಂತ್ರವೆನುವ ಈ ಭವ್ಯ ಭಾರತಕೆ.

ಹೈಮಾಚಲ ಗಿರಿಶೃಂಗಗಳಾಚೆ
ವಿಶ್ವಶಾಂತಿ ಸಂಕಲ್ಪದ ಸಾನ್ನಿಧ್ಯಲಿ
ನಮ್ಮ ಜನರ ರೀತಿ ಸಂಸ್ಕೃತಿಗಳು
ಪರಮೋಚ್ಚವೆಂದು ಸಾರುವಂಥ ನಾಡಿಗೆ
ಇದೋ ಬಂತು ಸ್ವಾಂತಂತ್ರ್ಯ
ಈ ನೆಲದ ಹಿರಿಮೆ ಗರಿಮೆಗೆ.

ವಿವಿಧ ಜಾತಿ ಪಂಥಗಳಲಿ ಬೇರೆಯಾಗದುಳಿದು
ಬೆರೆತು ಬೇಧಭಾವ ದ್ವಂದ್ವಗಳಲಿ ಎಂದೆಂದಿಗೂ
ಮತ್ತೆ ಮತ್ತೆ ವೈವಿಧ್ಯತೆಯಲಿ ಒಂದುಗೂಡಿಸಿ
ದೇಶದ ಹಿತಗೈವ ಗಣ್ಯರಿಗೆ ಮಣಿವ ಸೀಮೆಗೆ
ಇದೋ ಬಂತು ಸ್ವಾತಂತ್ರ್ಯ
ನಮ್ಮ ಒಲುಮೆ ಬಲುಮೆಗೆ.

(೧೯೯೮ ರ ಸುವರ್ಣ ಸ್ವಾತಂತ್ರ‍್ಯೋತ್ಸವ ಸಂಭ್ರಮಕೆ ನಾನು ಭದ್ರಾವತಿ ಆಕಾಶವಾಣಿಯಲ್ಲಿ ವಾಚಿಸಿದ ಕವನ, ಪ್ರಸ್ತುತ ಭಾರತಕೆ ತಿದ್ದಿ ವಿಸ್ತೃತಗೊಂಡಿದೆ….)

ಕವನ: ಅಟಲ್ ಬಿಹಾರಿ ವಾಜಪೇಯಿ   

ಕವನ: ಕಾರ್ಗಿಲ್ ಯುದ್ಧ ನಡೆದ ಸಂದರ್ಭದಲ್ಲಿ     

ಕವನ: ದೇಶ ಹೇಗಿದೆ ನೋಡಿ

ಇನ್ನಷ್ಟು ಕವನಗಳಿಗೆ>>>

ಕಥೆ ಏಕೆ ಮತ್ತು ಹೇಗೆ ಬರೆಯಬೇಕು…?


ಯಾವುದೇ ವಸ್ತು, ವಿಷಯ, ಘಟನೆ ಬಿಡದೇ ತಿಂಗಳಾನುಗಟ್ಟಲೇ, ವರ್ಷಗಳೇ ಕಾಡಿದಾಗ ಅದು ಕಥೆಯೋ ಕಾದಂಬರಿಯೋ ಆಗಿ ರೂಪ ತಳೆಯುತ್ತದೆ. ಕಥಾ ವಸ್ತುವಿನ ಆಯ್ಕೆ, ಅದು ಬೆರಗೊಡೆದು ಹೇಳಬಹುದಾದ ಹೊಸದೊಂದು ಕಥೆಯಾಗುತ್ತದೆಯೇ ಎಂಬ ಸೂಕ್ತ ಪರಾಮರ್ಶೆ ಮೊದಲಾಗಬೇಕು. ನಂತರ ಕಥಾ ರಚನೆ, ದಟ್ಟವಾದ ವಿವರಣೆ ಇದ್ದೂ ಓದುಗನನ್ನು ಸೆಳೆದುಕೊಳ್ಳುವ  ಆಕರ್ಷಕ ಕಲ್ಪನೆ, ನಿರೂಪಣಾ ತಂತ್ರಗಳಂತಹ ತಾಂತ್ರಿಕ ಸಂಗತಿಗಳವರೆಗೆ ಕಥೆಯ ವ್ಯಾಪ್ತಿ ಹರವು ಇರುತ್ತದೆ.  ಕಥೆ ಬರೆಯುವುದಕ್ಕೆ ಅಗತ್ಯವಾದ ಮೂಲ ಪ್ರೇರಣೆಗಳೆಂದರೆ- ಸ್ವಂತ ಅನುಭವ, ಸಂವೇದನೆ ಮತ್ತು ಸೃಜನಶೀಲ ಪ್ರತಿಭೆಗಳಿಂದ ಬರುತ್ತದೆ.  ಆದರೂ ಕಥಾ ರಚನೆಯ ಕಲೆಗಾರಿಕೆಯು ಅನೇಕ ಶ್ರೇಷ್ಠವಾದ ಕಥೆಗಳ ಆಭ್ಯಾಸಪೂರ್ಣ ಅಧ್ಯಯನದಿಂದ ಮಾತ್ರ ಬರುತ್ತದೆ. ಕನ್ನಡದಲ್ಲಿ  ಮತ್ತು ಅನ್ಯಭಾಷೆಗಳಲ್ಲಿ ಬಂದಿರುವ ನೂರಾರು ಕಥೆಗಳನ್ನು ಎಚ್ಚರದಿಂದ ಓದಿದಾಗ ಆಗುವ ಅನುಭವಗಳಿಂದ ಮತ್ತು ಅವುಗಳ ಅರ್ಥವಂತಿಕೆ ಸೋಪಜ್ಞತೆ ಹಾಗೂ ಶೈಲಿಗಳ ಹಲವು ಸಂಕೀರ್ಣ ಬಗೆಗಳು ಬರೆಯುವವನಿಗೆ ಗೋಚರವಾಗುತ್ತವೆ. ಅಂತಹ ಸಂದರ್ಭದಲ್ಲೂ  ಸ್ವಂತಿಕೆಯಿಂದ ಸೃಜಿಸಲ್ಪಡುವ ಬರವಣಿಗೆಯಲ್ಲಿ ಬರೆಯುವವಗೆ ಅಂತರಂಗದ ಧ್ವನಿಯೊಂದು ಕೇಳಿ ಬರಬೇಕು; ಆಗ ಮಾತ್ರ ಬರವಣಿಗೆ ಸರಾಗ ಸಲಲಿತವಾಗಿ ಸಾಗುತ್ತದೆ. ಸುಭಗ ಶೈಲಿ ಎಂಬುದು ಆನಂತರವಷ್ಟೇ ಪೂರ್ವಭಾವಿ ಸಿದ್ದತೆಯಲ್ಲಿ ಆಗಿರಬಹುದಾದ ಏನೆಲ್ಲ ಅಧ್ಯಯನದಿಂದ ತಂತಾನೆ ಕೂಡಿಬರಲು ಸಾಧ್ಯವಾಗುತ್ತದೆ….
ನನ್ನ ಕಥೆಗಳಿಗೆ…. ಆವರ್ತಕಾಲ…>>>

ದೀಪಾವಳಿ ಹಬ್ಬ


ದೀಪಾಲಂಕಾರ ಲೋಕಶೃಂಗಾರ
ಬೆಳಕು ಚೆಲ್ಲಿದ ಬಾಳ ವಿಹಾರ
ಸಂಭ್ರಮ ಸ್ಫುರಿಸುವ ಹ಼ರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.

ರಕ್ಕಸಲೀಲೆಯ ದಮನಗೊಳಿದ ಧಾತ್ರಿ
ಕತ್ತಲೆ ಕಳೆದು ಜ್ಞಾನ ಉದಿಸಿದ ಜ್ಯೋತಿ
ಹೊಸಬೆಳಕಲಿ ಹೊಸತಿರುವು ನೀಡಿದೆ ಕಾಂತಿ
ಬದುಕಿಗೆ ಸಂತಸ ಚಿಮ್ಮುವ ಹರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.

ಚಟಪಟ ಸಿಡಿಯುತ ಹೊಸ ಬಿರಿಸು ಬಾಣಗಳು
ಎಳೆಯರ ಕಿಲಕಿಲ ಕುಣಿಸುವ ಹಿರಿಯರ ತಣಿಸುವ
ಮನೆ ಮನೆ ಮನಗಳ ಹಗುರಗೊಳಿಸುವ ರಾತ್ರಿ
ಮತ್ತೆ ನಾಳೆಗೆ ನವಶಕ್ತಿ ತುಂಬುವ ಹರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.

ಹೃದಯ ಹೃದಯಗಳ ನಲಿಸಿ ಬೆಸೆಯುವ ಪ್ರೀತಿ
ಹೊಸ ಗೆಲುವಲಿ ಹೊಸ ದಾರಿ ತೋರುವ ದೀಪ್ತಿ
ನವೋದಯವೆ ತೊಲಗಿಸುವುದೆಲ್ಲರ ಭ್ರಾಂತಿ
ಜೀವಕೆ ಚೇತನ ತುಂಬುವ ಹ಼ರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.
-ಎಚ್.ಶಿವರಾಂ ಬೆಂಗಳೂರು

ಆನಂದ ಲೋಕದ ಗುರಿಯಾಗಲಿ


ಆನಂದ ಲೋಕದ ಗುರಿಯಾಗಲಿ
ಅಮೃತವಾಹಿನಿ ಸಿರಿಯಾಗಲಿ
ಹೃದಯಗಳೆಲ್ಲ ಗುಡಿಯಾಗಲಿ
ಆ ಗುಡಿಯ ದೇವರು ಜನರಾಗಲಿ.||

ಪ್ರೇಮದ ಮಾತೆಲ್ಲ ಒಂದಾಗಲಿ
ಒಂದಾದ ಮನವೆಲ್ಲ ಹೂವಾಗಲಿ
ಹೂವಿನ ಮಾಲೆಯು ಬಾಳಾಗಲಿ
ಆ ಬಾಳ ದೇವರು ಜನರಾಗಲಿ.  ||೧||

ಕೇಳಿದ ನೀತಿ ಕರ್ಮವಾಗಲಿ
ಮಾಡಿದ ಕೆಲಸ ಧರ್ಮವಾಗಲಿ
ಧರ್ವದ ದೀಕ್ಷೆಗೆ ಪೂಜೆಯಾಗಲಿ
ಆ ಪೂಜೆಗೆ ದೇವರು ಜನರಾಗಲಿ.||೨|

ಬದುಕಿನ ಭಾಗ್ಯ ಬುವಿಯಾಗಲಿ
ಭಾಗ್ಯದ ಬೆಳಕು ಜ್ಯೋತಿಯಾಗಲಿ
ಜ್ಯೋತಿಯು  ಜ್ಞಾನದ ಗುಡಿಯಾಗಲಿ
ಆ ಗುಡಿಯ ದೇವರು ಜನರಾಗಲಿ.||೩||

-ಎಚ್ .ಶಿವರಾಂ (ಮಾರ್ದನಿ ಕವನ ಸಂಕಲನ)

ರಾಮನವಮಿ ಹಬ್ಬ


ಅದೋ ಯುಗಾದಿ ಬಂದು ಹೊಸ ಹರುಷ
ಚೆಲ್ಲಿ ಹೋಯಿತೆಂದರೆ ಸಾಕು; ಅದರ ಬೆನ್ನಲ್ಲೇ
ಬಂದ ರಾಮನವಮಿಯ ಹೂವು ದವನಗಳೇ
ಎಲ್ಲ ಮನಗಳಲಿ ತುಂಬಿಕೊಂಡು ಘಮಘಮಿಸುವುವು!

ಆಗ ರಾಜಾಜಿ ನಗರದ ರಾಮಮಂದಿರಕೆ ಹೊಸರಂಗು
ಎಲ್ಲಿಲ್ಲದ ಸಡಗರವೋ ಸಡಗರ; ಬಹುಪಾಲು
ನೀರೆಯರ ಉಡಿ ತುಂಬಿದ ನಡೆಯಲಿ ಬಳುಕುತ
ಹೊಮ್ಮುವುದು; ನಮ್ಮ ಸಂಸ್ಕೃತಿಯ ನಯಾಗರ!

ಗುಡಿಯ ಒಳಗೆ  ಶ್ರೀರಾಮಚಂದಿರನ ನೋಟವಂತೂ
ಬಲು ಸುಂದರವೋ ಸುಂದರ; ಯಾರೂ ಮರೆಯದ
ನಿತ್ಯ ಸಂಗೀತೋತ್ಸವ ಸಂಭ್ರಮವೋ ಸಂಭ್ರಮ!

ಹೀಗೆ ಮತ್ತೆ ವರುಷ ಬಂದು ವರುಷ ಕಳೆಯೆ
ಹೊಸ ಹರುಷ, ಹುರುಪನೆಲ್ಲ ಎದೆಗಳಲಿ ತಂಬಿದೆ
ಹೊಸ ಹೊಸ ಭಾವಗಳನೆಲ್ಲ ಅರಸುತ ನಿಂತಿದೆ

ಯಾಕೆ ಬಂತೊ ಈ ಹಬ್ಬ! ಎಲ್ಲಕೂ ರೇಟುಗಳೆ ಜಾಸ್ತಿ
ಒಳಗೇ ಧುಮುಗುಟ್ಟುವುದೇ ಎಲ್ಲಿ ರೀತಿ ನೀತಿ?
ಬೇಡ ಬೇಡ, ನಮ್ಮ ಹೃದಯಗಳಿಗೇಕೆ ಏಟು ಶಾಸ್ತಿ
ಮನೆ ಮನಗಳು ಖಾಲಿ ಆಗದಿರಲಿ ನಾಸ್ತಿ!

ಈ ವಿಚಿತ್ರ ಪ್ರಪಂಚ ನಮ್ಮದೇ ಇಲ್ಲೆ ನಮ್ಮ ಬಾಳ್ವೆಯು
ಈ ವ್ಯವಸ್ಥೆಯಲಿ ದೋಷ ದೂರುಗಳೇನೆ ಇರಲಿ
ಇದ್ದರಿರಲಿ ಗಣಿತ ಗುಣಿತ ಏರಿಳಿತಗಳೆಲ್ಲವೂ.

ಹಬ್ಬ! ಬಂದಿದೆ ಹಬ್ಬ, ರಾಮನವಮಿ ಹಬ್ಬ
ನಿತ್ಯಸತ್ಯ ಪ್ರತಿಪಾದಕ ಸ್ವರೂಪಿ ಶ್ರೀರಾಮನ ಹಬ್ಬ!
ಅವನ ನಾಮಸ್ಮರಣೆಯಲಿ ಇಲ್ಲೆ ಇದೆ ನಮಗೆಲ್ಲವೂ

ಅಗೋ ನಂಬಿನಡೆವ ಎಷ್ಟೋ ಭಕುತರ ಕಾಣಿರೇಕೆ…
ಸುಮ್ಮನೇಕೆ ಮೂಕವಿಸ್ಮಿತರಾಗಿ ಉಳಿವಿರಿ…
ಹಬ್ಬದ ಕೋಸುಂಬರಿ ಪಾನಕ; ನಮ್ಮ ಬದುಕಿಗೆ
ಹೊಸ ಭಾವ ಬಂಧಗಳ ರಸಪಾಕ; ನೋಡಿರೇನು

ಶ್ರೀರಾಮನ ಮೃದು ಮಧುರ ಸಾತ್ವಿಕನಗೆ ನೋಟವು
ಚಿಮ್ಮುತಲಿದೆ ನಮ್ಮ ಜೀವದೊಲುಮೆಯನು ಹೊಸಬೆಳಕಲಿ!

ರಾಮಮಂದಿರ ಬಸ್ ಸ್ಟಾಪು


ಇದೋ ನೋಡಿ ರಾಜಾಜಿ ನಗರದ
ರಾಮಮಂದಿರ ತುಂಬ ಫೇಮಸ್ಸು,
ಇಲ್ಲೇ ಇದೆ ಒಂದು ಸ್ಟಾಪು; ಅಲ್ಲಿಂದ
ಎಲ್ಲಕಡೆಗೂ ಉಂಟು ಬಹಳಷ್ಟು ಬಸ್ಸು!

ಇಲ್ಲೆ ಪಕ್ಕದ ಅರಳಿಕಟ್ಟೆಯಲಿ
ಬೆಂಗಳೂರಿನ ಬೆರಗಿನ ಬಿಂದಾಸ್ ಜೀವನ
ಕತೆಗಳೆಲ್ಲವೂ ಹೊರಳಿ ಸುರಳಿ ಬಿಚ್ಚಿಕೊಳ್ಳುವವು;
ದಾರಿಲಿ ಎದುರಿಗೆ ಹೋಗೊ ಬರೊ ಬಸ್ಸುಗಳು
ಲಕಲಕನೆ ಚಿಮ್ಮುವ ಬಣ್ಣ ಬಣ್ಣದ ನೆರಿಗೆಗಳು!
ಜೊತೆಗೆ  ಓಡುವ ಸುಕ್ಕುಗಟ್ಟಿ ಮಾಸಿದ ಜೀನ್ಸುಗಳು!!

ಕಣ್ಣು ಪಿಳಿಪಿಳುಕಿಸುತ ಸಂಜೆ ಕಟ್ಟೆ ಕಚ್ಚಿ ಕುಳಿತ
ಸೋಮಾರಿಗಳ ಜೊಲ್ಲು ಸುರಿವ ಬಾಯಲ್ಲಿ
ಸೋರಿ ಸೂರೆಯೊಡೆದ ಹಸಿ ಬಿಸಿ ಹಾಸ್ಯಚಟಾಕಿಗಳು!
ಇಲ್ಲೇ ಅವರೊಂದಿಗೆ ನಗೆ ಮುಗುಳು ಹರಿಸುತ
ಕುಳಿತ ಮುದುಕರ ಬೊಚ್ಚುಬಾಯ ಚಪಲಗಳ
ಲುಲಿದುಲಿದು ತೀರಿ ಹೋಗುವವು; ಮತ್ತೇಕೊ
ಬೇಡವೆಂದರೂ ಹೊರಗೆ ಕಾರಿಬಿಡುವಂಥ
ಅವೇ ಪಿಸುಗಿನ ತೀಕ್ಷ್ಣನುಡಿಗಳು!

ಕೆಲವೊಮ್ಮೆ ಇಲ್ಲೆ ಉಂಟು ತೀರಗಂಭೀರ ಚರ್ಚೆಗಳು
ಜೀವನಾನುಭವದ ಮೂಸೆಯಿಂದ ಚಟಪಟನೆ ಸಿಡಿವುವು
ಥಟ್ಟನೆ ಹೊಸಬೆಳಕು;ಹೊಸತಿರುವು ತೋರುವುವು;
ಅದನೆಲ್ಲ ಅರಿವರ‍್ಯಾರೊ, ದಿಟ್ಟೆದೆ ಹೆಜ್ಚೆ ಮುಂದಿಡುವ ಧೀರರ‍್ಯಾರೊ
ಆ ಸಾತ್ವಿಕಪ್ರಭು ಶ್ರೀರಾಮಚಂದ್ರನೊಬ್ಬನೇ ಬಲ್ಲನು!

ಇಗೋ ಬಂತು ಯುಗಾದಿ…


ಇಗೋ ಬಂತು ಯುಗಾದಿ
ನವ ವರುಷದ ನಾಂದಿಗೆ
ಬೇವು ಬೆಲ್ಲ ಹಂಚಿ ತಿನ್ನಿರೆಲ್ಲ
ಮರಳಿ ಬರಲಿ ಚಿತ್ತ ಶಕ್ತಿ ಬಾಳಿಗೆ.

ಮರಗಳಲ್ಲಿ ಎಲೆಗಳುದುರಿ
ಕುಳಿರ್ಗಾಳಿ ತೊಲಗಿದೆ
ಎದೆಗಳಲ್ಲಿ ಹೂಗಳರಳಿ
ಮಧುರ ಭಾವ ಮೊಡಿದೆ.

ಮಾಂದಳಿರಿನ ತೋರಣದಲಿ
ಹಸಿರು ಹೊನ್ನು ಕರೆದಿದೆ
ಮನೆ ಮನಗಳ ಓರಣದಲಿ
ಪ್ರೀತಿ ಪ್ರೇಮ ಮೆರೆದಿದೆ.

ಪಂಚಾಗದ ಶ್ರವಣದಲಿ
ಗ್ರಹಗತಿ ವಿಶ್ಲೇಷಣೆ ನಡೆದಿದೆ
ಅಷ್ಟಾಂಗ ಯೋಗದಲಿ
ನೆಮ್ಮದಿಗೆ ಸಾಧನೆಯೆ ಕಾದಿದೆ.

ಹರೆಯದ ಮಧು ಪಲ್ಲವದಲಿ
ಹೊಸ ಹರುಷವೆ ತೇಲಿದೆ
ಚಂದ್ರಮನ ಡೊಂಕಿನಲ್ಲೂ
ನಗೆಮುಗುಳೇ ಹರಿದಿದೆ.

ಚೈತ್ರದ ಕೋಗಿಲೆಯುಲಿಯಲಿ
ಚಿಂತನೆಗಳು ಗರಿಗೆದರಿ ನಿಂತಿವೆ
ಒಳಗಿನ ಚಿರಚೇತನ ಹುರುಪಿನಲಿ
ಚಿನ್ಮಯ ರೂಪ ತಾಳಿದೆ.

(ನನ್ನ “ಮಾರ್ದನಿ” ಕವನ ಸಂಕಲನದಿಂದ)
-ಎಚ್.ಶಿವರಾಂ

ಇನ್ನಷ್ಟು ಕವನಗಳಿಗೆ- ರೈಟರ್ ಲೈನ್ಸ್  ಕ್ಲಿಕ್ಕಿಸಿ