Category Archives: ಆಧ್ಯಾತ್ಮ

ನಾಡ ದೇವಿ ಭುವನೇಶ್ವರಿ – ಐತಿಹ್ಯ


kannada Taye Bhuvneshwariಭಾರತ ಮಾತೆ ಭಾರತಾಂಬೆ ಎಂಬ ಅಭಿದಾನಗಳಿಂದ ಕರೆಯಲ್ಪಟ್ಟಿರುವ ನಮ್ಮ ರಾಷ್ಟ್ರಮಾತೆಯ ಪ್ರಭಾವದಿಂದಲೇ ಆವಿರ್ಭವಿಸಿದವಳು ಕರ್ನಾಟಕದ ಮಾತೆ ಭುವನೇಶ್ವರಿ. ೧೯ ನೇ ಶತಮಾನದ ಕೊನೆ ದಶಕಗಳಲ್ಲಿ ಭಾರತೀಯರ ಏಕತೆ ಸಮಗ್ರತೆಯ ರೂಪಕಾರ್ಥವಾಗಿ ಜನತೆಯ ಬುದ್ಧಿ-ಭಾವ ಪ್ರಜ್ಞೆಗಳಿಗೆ ನವಚೇತನೋತ್ಸಾಹ ಮೂಡಿಸಲಿಕ್ಕಾಗಿಯೇ ಅವರ ಮನೋಭೂಮಿಕೆಯಲ್ಲಿ ಅವತರಿಸಿದ ದೇವತೆಯೇ ಭಾರತ ಮಾತೆ, ಭಾರತಾಂಬೆ. ಹಾಗೆ ರಾಷ್ಟಮಟ್ಟದಲ್ಲಿ ದೇಶಭಕ್ತಿ-ಅಭಿವ್ಯಕ್ತಿ-ಅಭಿಮಾನಗಳ ದ್ಯೋತಕವಾಗಿ ಬಂದ ಭಾರತಮಾತೆಯ ತನುಜಾತೆಯೇ ನಮ್ಮ ಕರ್ನಾಟಕ ನೆಲದ ನಾಡ ದೇವಿ ಭುವನೇಶ್ವರಿ.

ಭಾರತೀಯರ ಜನಮಾನಸದಲ್ಲಿ ಭಾವೈಕ್ಯತೆಯ ವೃಂದಗಾನವನ್ನು ಅರಳಿಸಿ ಹಾಡಿಸಿ, “ವಂದೇ ಮಾತರಂ” ಗೀತೆಯು ದಶದಿಕ್ಕುಗಳಿಗೆ ಮೇಳವಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ, ಸೂರ್ಯ ಮುಳುಗದ ಸಾಮ್ಯಾಜ್ಯವನ್ನು ಕಂಪನಗೊಳಿಸಿ, ಬ್ರಿಟಿಷರು ಕಂಗೆಟ್ಟು ಇಲ್ಲಿಂದ ಕಾಲ್ತೆಗೆಯುವಂತೆ ಮಾಡಿದ ನಮ್ಮೆಲ್ಲರ ತಾಯಿ ಭಾರತಾಂಬೆ. ಅಂತೆಯೇ, ಅಂದು ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಜನಸಮುದಾಯಗಳನ್ನು ಭಾವೈಕ್ಯತೆಯಲ್ಲಿ ಒಂದುಗೂಡಿಸಿದ ಭಾರತಮಾತೆಯ ಕೊರಳದನಿಯೇ ಸಂಕೇತವಾಗಿ “ವಂದೇ ಮಾತರಂ”ಮೇಳವಿಸಿತ್ತೆಂದರೆ ಉತ್ಪ್ರೇಕ್ಷೆಯೇನಿಲ್ಲ.

ಕರ್ನಾಟಕವೆಂದರೆ ಕೇವಲ ಒಂದು ನಾಡಲ್ಲ, ಭಾಷೆಯೊಂದರ ನೆಲವಷ್ಟೇ ಅಲ್ಲ, ಸಾಹಿತ್ಯ-ಕಲೆ-ಸಂಗೀತ ಸಂಸ್ಕೃತಿಗಳ ಪರಂಪರೆಯ ಚರಿತ್ರೆಯಷ್ಟೇ ಎಂದು ತಿಳಿಯುವಂತಿಲ್ಲ. ಹಾಗೆ ನೋಡಿದರೆ, ಒಬ್ಬ ವ್ಯಕ್ತಿಗೆ ಹೇಗೋ ಹಾಗೆಯೇ ಒಂದು ದೇಶಕ್ಕೂ ಮೂರು ಸ್ತರಗಳ ಶರೀರವಿದೆ. ಸ್ಥೂಲ, ಸೂಕ್ಷ್ಮ ಹಾಗೂ ಕಾರಣ(ಆಧ್ಯಾತ್ಮ. ಇವು ಮೂರೂ ಶರೀರಗಳ ಮೂಲಕ ಒಬ್ಬ ವ್ಯಕ್ತಿ ಹೇಗೆ ತನ್ನ ಜಿವಿತೋದ್ಧಾರವನ್ನು ಮಾಡಿಕೊಂಡು ಮೋಕ್ಷ ಪಡೆಯುತ್ತಾನೆಯೋ ಹಾಗೆಯೇ ಒಂದು ದೇಶ/ನಾಡು/ರಾಷ್ಟ್ರವೂ ಇಂಥದೇ ಸ್ತರಗಳಾದ ಮೂರು ಶರೀರಗಳಲ್ಲಿ ವಿಕಾಸ ಹೊಂದುವುದರ ಮೂಲಕವೇ ಉನ್ನತಿ ಹಾಗೂ ಔನ್ಯತ್ಯವನ್ನು ಸಾಧಿಸಿಕೊಳ್ಳುತ್ತದೆ. ಅದು ನಿತ್ಯನಿರಂತರ ಜನಮಾನಸದಲ್ಲಿ ಅವ್ಯಕ್ತ ಪ್ರೇರಣೆಯಿಂದ ನಡೆದೇ ತಿರುತ್ತದೆ.

ಭರತಮಾತೆ ಜನ್ಮ ತಳೆದುದು ವಂಗದೇಶದಲ್ಲಿ(ಬಂಗಾಲ. ಸ್ವದೇಶೀ ಚಳುವಳಿಯ ಹರಿಕಾರ ಅವನೀಂದ್ರನಾಥ ಠಾಗೋರ್ ೧೯೦೫ ರಲ್ಲಿ ವಿವರಿಸಿದ ರೀತಿಯನ್ನು ಚಿತ್ರಸಮೇತ “ದ ಗಾಡ್ ಅಂಡ್ ನೇಶನ್” ಎಂಬ ಸುಮತಿ ರಾಮಸ್ವಾಮಿಯವರ ಕೃತಿಯಲ್ಲಿ ಕಾಣಿಸಲಾಗಿದೆ. ಹಾಗೆ ವಂಗಮಾತೆಯೇ ಮುಂದೆ ನಮ್ಮ ಭಾರತಮಾತೆ ಎಂಬುದಾಗಿ ವಿಶ್ವದಾದ್ಯಂತ ಕ್ಯೋಟ್ಯಾನುಕೋಟಿ ಜನತೆಗೆ ಕಂಗೊಳಿಸಿದ್ದಾಳೆ. ಕರ್ನಾಟಕ, ತಮಿಳು ನಾಡು, ಕೇರಳಗಳು ಭಾರತಮಾತೆಯ ಪರಿಕಲ್ಪನೆಗೆ ಚಿತ್ರ ಕಲಾ ಕೃತಿಗಳ ಮೂಲಕ ಸಾಕಾರ ರೂಪವನ್ನು ಕೊಟ್ಟಿವೆ. ರಾಜಾ ರವಿವರ್ಮನ ಪ್ರಸಿದ್ಧ ವರ್ಣ ಚಿತ್ರವೊಂದು ಭೂಮಾತೆಯ ಪರಿಕಲ್ಪನೆಗೆ (ಸೀತೆಯನ್ನು ಭೂದೇವಿ ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ದೃಶ್ಯ) ಪುಷ್ಟಿ ನೀಡಿದೆ. ಹೀಗಾಗಿ ಭರತಭೂಮಿಯ ಮಾತೆ ಭರತ ಮಾತೆಯಿಂದ ನಾಡ ನೆಲದ ದೇವತೆಯ ಪರಿಕಲ್ಪನೆ ಬೆಳದು ಬಂದಿದೆಯನ್ನಬಹುದಾಗಿದೆ.

ಕರ್ನಾಟಕದಲ್ಲಿ ಕನ್ನಡ ಭುವನೇಶ್ವರಿ ದೇವಿ ಪರಿಕಲ್ಪನೆಗೆ ಸ್ಫೂರ್ತಿ-ಪ್ರೇರಣೆಯೊದಿಗಿಸಿದ ಆಕರಗಳೆಂದರೆ, ಹಂಪಿ ವಿರೂಪಾಕ್ಷ ಮಂದಿರದ ಪದ್ಮಾಂಬಿಕೆ ಭುವನೇಶ್ವರಿ ವಿಗ್ರಹ, ಕನ್ನಡ ಮೊದಲ ರಾಜವಂಶಸ್ತರಾದ ಕದಂಬರ ಆರಾಧ್ಯ ದೇವತೆಗಳ ಚಿತ್ರಣ. ಮೂರನೆಯದಾಗಿ ಮುಮ್ಮಡಿ ಕೃಷ್ಣರಾಜರ ರಚನೆಯಾದ ಮೈಸೂರು ಅರಮನೆಯಲ್ಲಿರುವ ಭುವನೇಶ್ವರಿ ಕೃತಿಯೆ. ಅಲ್ಲದೇ, ದೇವೀ ಭಾಗವತ(ದೇವೀ ಮಹಾತ್ಮೆ) ಆಧಾರವಾಗಿ ರಚಿತವಾದ ಸಂಸ್ಕೃತ ಕೃತಿಗಳಲ್ಲೂ ಭುವನೇಶ್ವರಿಯ ಪರಿಕಲ್ಪನೆಯಿದೆ. ಮೈಸೂರಿನ ಚಾಮುಂಡಿ ಬೆಟ್ಟದ ಶಿಲಾಲೇಖನವೊಂದರಲ್ಲಿ ಭುವನೇಶ್ವರಿಯ ಉಲ್ಲೇಖವಿದೆ. ಹೀಗೆ ಇನ್ನೂ ಹಲವು ಆಕರಗಳು ಕರ್ನಾಟಕದಲ್ಲಿ ಲಭ್ಯವಿವೆ. ಕನ್ನಡ ಏಕೀಕರಣ ಚಳುವಳಿಗೆ ಭುವನೇಶ್ವರಿ ಸ್ಫೂರ್ತಿ ದೇವತೆಯಾಗಿದ್ದಾಳೆ.

ಕನ್ನಡ ನೆಲದ ತಾಯಿಯನ್ನು ಕರ್ನಾಟಕ ದೇವಿ(ಶಾಂತ ಕವಿ), ಕನ್ನಡಿಗರ ತಾಯಿ(ಗೋವಿಂದ ಪೈ), ಜೈ ಭಾರತ ಜನನಿಯ ತನುಜಾತೆ(ಕುವೆಂಪು) ಹೀಗೆ ನಮ್ಮ ಕನ್ನಡ ನಾಡಿನ ಕವಿವರ್ಯರೆಲ್ಲ ಹಾಡಿದ್ದಾರೆ. ಕನ್ನಡ ಚಲನ ಚಿತ್ರರಂಗದ ಗೀತೆಗಳೂ ಜನಪ್ರಿಯವಾಗಿ ಅನುರಣಿಸಿವೆ. ಈ ಪರಿಯಲ್ಲಿಯೇ ಕನ್ನಡ ನೆಲದ ಕೀರ್ತಿಪತಾಕೆಯುನ್ನು ಜಗದಗಲ ಹಾಗೂ ಮುಗಿಲೆತ್ತರಕ್ಕೆ ಹಾಯಿಸಿದ್ದಾರೆ ಕರ್ನಾಟಕದ ಮಹಾಜನತೆ.

(ಉದಯವಾಣಿ-ಸಾಪ್ತಾಹಿಕ ಸಂಪದದಲ್ಲಿ (೦೧-೧೦-೨೦೧೪)ಪ್ರಕಟವಾದ ಉಣ್ಣಿ ಕೃಷ್ಣನ್ ಅವರ ಲೇಖನದಿಂದ )

Advertisements

ದೈವೀಶಕ್ತಿ ಸ್ವರೂಪಗಳಲ್ಲಿ ಪ್ರಮುಖ ಗಜಮುಖ


Ganesha dancing

ವಿಶ್ವದಲ್ಲಿ ಮಾನವಜನಾಂಗ ವೈವಿಧ್ಯತೆಯಿಂದಲೂ ಹಾಗೂ ವೈಚಿತ್ರ್ಯಗಳಿಂದಲೂ ಕೂಡಿದೆ.. ಆಯಾ ಜನಾಂಗದವರಿಗೆ ಅವರವರದೇ ಆದ ಧಾರ್ಮಿಕ ಆಚಾರ, ವಿಚಾರ ಮತ್ತು ಸಂಪ್ರದಾಯಗಳು. ಎಲ್ಲ ಧರ್ಮಗಳ ಮೂಲವೂ ಮಾನವನನ್ನು ವಿಶ್ವಮಾನವನನ್ನಾಗಿ ರೂಪಿಸುವುದೇ ಆಗಿದೆ.  ಆಯಾ ಜನಾಂಗೀಯ ಪದ್ಧತಿಗಳು ಕಾಲಕಾಲಕ್ಕೆ ಮಾನವನ ಬದುಕಿಗೆ ಹೊಸಬೆಳಕು ಹೊಸತಿರುವು ನೀಡತ್ತಲೇ ಬೆರಗುಗೊಳಿಸಿವೆ. ಹಿಂದೂಧರ್ಮವು ಮಾನವೀಯ ನೆಲೆಯಲ್ಲೇ ವೈವಿಧ್ಯತೆಯಲ್ಲಿ ಐಕ್ಯತೆಯನ್ನೇ ಸಾರುತ್ತದೆ, ಸಾಂಪ್ರದಾಯಿಕ ಹಬ್ಬಗಳ ಆಚರಣೆಯಲ್ಲಿ ಸಹಬಾಳ್ವೆಯಿಂದ, ಸಂತೋಷ  ಮತ್ತು ನೆಮ್ಮದಿಯನ್ನರಸಲು ಧರ್ಮಸೂಕ್ಷ್ಮವನ್ನು ತಿಳಿಸುತ್ತದೆ.

ganesh-chaturthi-history

ಭಾರತೀಯ ಸನಾತನ ಧರ್ಮದಲ್ಲಿ ಆದಿಮಹರ್ಷಿಗಳ ಮಹತ್ವಾಕಾಂಕ್ಷೆಯೇ ಮನುಕುಲದ ಉದ್ಧಾರ.  ಅವರು ತಮ್ಮ ದಿವ್ಯದೃಷ್ಟಿ ಮತ್ತು ದೂರದೃಷ್ಟಿಯಲ್ಲಿ ಗ್ರಹಗತಿ, ಋತುಮಾನ ಮತ್ತು ದೈವಾರಾಧನೆಯ ಸ್ವರೂಪಗಳಲ್ಲಿ ಹಬ್ಬ ಹರಿದಿನ ವ್ರತನಿಯಮಗಳ ಪ್ರಾಮುಖ್ಯತೆ ತಿಳಿಸಿದ್ದಾರೆ. ಸಾಂಪ್ರದಾಯಿಕ ಹಬ್ಬಗಳ ಆಚರಣೆಗಳಲ್ಲಿ ಮಾನವಧರ್ಮ ಜಾಗೃತಿಯಲ್ಲಿ ಖಗೋಳಿಯ ನಿತ್ಯ ಸತ್ಯಗಳನ್ನು ಸಾದೃಶಗೊಳಿಸಿದ್ದಾರೆ.  ಆದಕಾರಣ, ಮಾನವನಿಗೆ ಧರ್ಮಸೂಕ್ಷ್ಮಗಳಿವೆ. ಧರ್ಮಸೂಕ್ಷ್ಮಗಳೆಂದರೆ ಅಲೌಕಿತೆ ದೈವಿಕತೆಯಲ್ಲಿ ಕಂಡುಕೊಂಡ ಕಟುಸತ್ಯವೇ. ಅದು  ಎಲ್ಲರಿಗೂ ಒಂದೇ. ಅದು ಏನೆಲ್ಲ ವೈಜ್ಞಾನಿಕತೆ ಆಧುನಿಕತೆಗಳಾಚೆ ಆಂತರಿಕ ಪ್ರಜ್ಞೆಯಲ್ಲಿರುತ್ತದೆ. ಯಾವೊಂದು ವಿಚಾರವೇ ಆಗಲಿ ಪ್ರಾಕೃತಿಕ ಮತ್ತು ಭೌತಿಕಜಗತ್ತಿನಿಂದ ಪ್ರೇರಿತವಾಗಿರುತ್ತದೆ ಯಾವುದು ಪರಿವೀಕ್ಷಣೆಯಲ್ಲಿ ಪ್ರಾಯೋಗಿಕವಾಗಿ ಅನುಭವಸಿದ್ಧವಾಗಿ ಪ್ರಾಮಾಣೀಕರಿಸಲ್ಪಟ್ಟಿರುತ್ತದೋ ಅದು ಸಿದ್ಧಾಂತವಾಗಿರುತ್ತದೆ. ಹಾಗೇ ಆದಿಮಹರ್ಷಿಗಳು ಅಲೌಕಿ-ದೈವಿಕಶಕ್ತಿ ಸ್ವರೂಪಗಳನ್ನೂ ಆಂತರಿಕ ಪ್ರಜ್ಞೆಯಲ್ಲೇ ಶೋಧನೆಗೊಪಡಿಸಿದ್ದಾರೆ. ಮನುಷ್ಯ ಆಯಾ ಶಕ್ತಿಸ್ವರೂಪಕ್ಕೆ ವಿಧೇಯನಾಗಿ ಭಯ ಭಕ್ತಿ ತೋರಬೇಕೆಂಬುದನ್ನು ಧರ್ಮಸೂಕ್ಷ್ಮದಲ್ಲಿ ನಿರೂಪಿಸಿದ್ದಾರೆ. ಹಾಗೆ ಪ್ರಾಮಾಣೀಕರಿಸಿದವುಗಳೇ ಸಿದ್ಧಾಂತಗಳಾಗಿ ಶಾಸ್ತ್ರಗಳಾಗಿರುತ್ತವೆ. ಅಂತೆಯೇ, ಶತಶತಮಾನಗಳಿಂದ ಅನೂಚಾನವಾಗಿ ನಡೆದು ಬಂದಿರುವ ಹಬ್ಬ ಹರಿದಿನಗಳಲ್ಲಿ ಪೂಜಾವಿಧಿಗಳು ವ್ರತನೇಮ ಉಪವಾಸಾದಿಗಳು ಸಾಂಪ್ರದಾಯಿಕ ಆಚರಣೆಗಳೆಲ್ಲವೂ ಅಚಲ ನಂಬಿಕೆಗಳಾಗಿವೆ.

ಆದ್ದರಿಂದ, ಮನುಷ್ಯ ವಿಚಾರವಂತನಾದರೆ ಮಾತ್ರ ಸಾಲದು; ಆಚಾರವಂತನೂ ಆಗಬೇಕು. ಆಚಾರದಲ್ಲಿ ಉತ್ತಮ ವಿಚಾರಗಳಿರಬೇಕು.  ಉತ್ತಮ ವಿಚಾರಗಳೆಂದರೆ ಜೀವನದ ಮೂಲಧ್ಯೇಯ ಮತ್ತು ಉದ್ದೇಶಗಳು. ಜೀವನ ಕಾಲಕಾಲಕ್ಕೆ ಪರಿವರ್ತನಶೀಲವೇ ಸರಿ. ಪರಿವರ್ತನೆಯಲ್ಲಿ ಪುರೋಗಾಮಿತ್ವದ ಪ್ರಗತಿಯಿರಬೇಕು. ತಿರೋಗಾಮಿಯಾದರೆ, ತಾನು ಹುಟ್ಟಿಬಂದ ಜನಾಂಗ ಪರಿಸರದ ಸಂಪ್ರದಾಯಗಳಿಗೆ ಬೆನ್ನುಹಾಕಿ ನಡೆದರೆ ಜೀವನವು ದ್ವಂದ್ವಾರ್ಥಗಳಿಂದ ಗೊಂದಲಗಳ ಗೂಡಾಗುತ್ತದೆ. ಸ್ವಾಮಿ ವಿವೇಕಾನಂದರು ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗ ವೆನ್ನುತ್ತಾರೆ. ಯಾಕೆಂದರೆ, ಜ್ಞಾನಮಾರ್ಗದಲ್ಲಿ ಯಾವೊಂದು ಗೊಂದಲವಿಲ್ಲದಿರುವ ಸ್ಥಾಯೀಭಾವವಿದೆ. ಅದನ್ನು ಸಾಂಪ್ರದಾಯಿಕ ಆಚರಣೆಗಳಲ್ಲಿ ತಿಳಿಸಿಕೊಡುವುದೇ ಹಬ್ಬ ಹರಿದಿಗಳು.

ಒಂದು ಕಾಲಕ್ಕೆ ವೇದಶಾಸ್ತ್ರ ಶೃತಿಸೂತ್ರಗಳ ಪಾರಾಯಣಕ್ಕೆ ಸೀಮಿತವಾದ ಸಂಪ್ರದಾಯಿಕ ಆಚರಣೆಗಳೆಲ್ಲ ಜನಸಾಮಾನ್ಯರಿಗೆಟುಕದೇ ಅತಿಕಷ್ಟಕರವೆನಿಸಿದ್ದವು. ವೇದಶಾಸ್ತ್ರಗಳೆಂದರೇನೆಂದು ತಿಳಿಯದೇ ಸತ್ವಗುಣಸಾಧಕರಾಗಿ ಸಿದ್ಧಿ ಪಡೆದ ಮಹಾನ್  ಯೋಗೀಶ್ವರರೂ ಇದ್ದರು.  ಆದುದರಿಂದ ಬ್ರಹ್ಮನ ವಾಙ್ಞಯ ರೂಪದ ವೇದಗಳನ್ನು ಲಿಖಿತರೂಪಕ್ಕೆ ತಂದ ವೇದವ್ಯಾಸರು ಜನಸಾಮಾನ್ಯರಿಗೂ ಅರ್ಥವಾಗುವಂತೆ ಪುರಾಣಗಳನ್ನು ಬರೆದರು. ಅಂತೆಯೇ, ಪುರಾಣಕಥೆಗಳ ಮೂಲಕ ವಿವಿಧ ದೈವೀಶಕ್ತಿಗಳ ಆರಾಧನೆಯಲ್ಲಿ ಹಿರಿಯರು ನಡೆಸಿಕೊಂಡುಬಂದ ಸಂಪ್ರದಾಯಗಳಲ್ಲಿ ಹಬ್ಬ ಹರಿದಿನಗಳ ಆಚರಣೆಗಳು. ಅವುಗಳಲ್ಲಿ, ಜಪ,ತಪ, ಧ್ಯಾನ, ಪ್ರಾರ್ಥನೆ, ಭಜನೆ ಫೂಜೆ ವ್ರತಗಳು. ಹಬ್ಬಗಳ ಆಚರಣೆಯಲ್ಲಿ ಅವರವರ ಶಕ್ತ್ಯಾನುಸಾರ ಭಗವಂತನನ್ನು ಆರಾಧಿಸುವುದೇ ಆಗಿದೆ ಎಂದು ಪುರಾಣಗಳಲ್ಲಿ ಸಾರಿದ್ದಾರೆ.ಆದ್ದರಿಂದ, ಹಬ್ಬಗಳ ಆಚರಣೆಯಲ್ಲಿ ಅಲೌಕಿ ದೈವೀಶಕ್ತಿ ಸ್ವರೂಪವನ್ನು ಭಯಭಕ್ತಿಯಿಂದ ಪೂಜಿಸಿ ಒಲಿಸಿಕೊಳ್ಳುವುದೇ ಮೂಲೋದ್ಧೇಶ. ಜನಸಾಮಾನ್ಯರೂ ಸರಳ ಪೂಜಾಪದ್ಧತಿಗಳಿಂದ ದೈವಾನುಗ್ರಹ ಪಡೆದು ಸಂತಾನಫಲ, ಆಯಸ್ಸು ಶ್ರೇಯಸ್ಸು, ಸುಖ-ಶಾಂತಿ ಮತ್ತು ಸಂಪತ್ತುಗಳನ್ನು ಹೊಂದಬಹುದು. ಆದುದರಿಂದ, ಹಬ್ಬಗಳೆಂದರೆ, ವಿಶೇ಼ಷಭೋಜನ ಮಾಡಿ ಸಂಭ್ರಮಿಸುವುದಷ್ಡೇ ಅಲ್ಲ, ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರಾಗತ ಸಂಪ್ರದಾಯಿಕ ಆಚರಣೆಯಲ್ಲಿರುವ ಅರ್ಥವನ್ನು ಗ್ರಹಿಸಿ ದೈವೀಶಕ್ತಿಸ್ವರೂಪಗಳಿಗೆ ಶರಣಾರ್ಥಿಗಳಾಗುವುದು. ನಮ್ಮ ರಾಷ್ಟ್ರಕವಿ ಕುವೆಂಪು ನುಡಿದಂತೆ- “ತನುವು ನಿನ್ನದು ಮನವು ನಿನ್ನದು| ಎನ್ನ ಜೀವನ ಧನವು ನಿನ್ನದು| ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೆ ನನ್ನದು|

ಗಣಪತಿಯ ಹುಟ್ಟು ಮತ್ತು ಬಾಲ್ಯ ವಿಚಿತ್ರ –ವೈಕಲ್ಯಗಳಿಂದ ಕೂಡಿದ್ದೂ  ಅಚ್ಚರಿ ಎಂಬಂತೇ ಸಾತ್ವಿಕಶಕ್ತಿ ಸಂದೇಶ ಸಾರುತ್ತದೆ. ತಂದೆಗೆ ಅರಿವಿಲ್ಲದಂತೆ ಜನ್ಮಿಸಿದ ತಾಯಿಯ ಮಾನಸ ಪುತ್ರ. ಆ ಬಳಿಕ ಮಾತೃವಾಕ್ಯ ಪರಿಪಾಲನೆಯಲ್ಲಿ ಪಿತಾಮಹ ಪರಮೇಶ್ವರನ ಪ್ರಕೋಪಕ್ಕೊಳಗಾದ. ಕೈಲಾಸ –ಭೂಲೋಕಗಳ ನಡುವಣ ಅಂತರ ಕಿರಿದುಗೊಳಿಸಿ ಕಾಯಕ- ಕೈಂಕರ್ಯ ತಿಳಿಸಿದ ಬೆನಕವನು.  ಮಾತಾಪಿತೃ ದಂಪತಿಗಳು ತಮ್ಮ ಅಂತಃಕಲಹದಲ್ಲಿ ಪರಸ್ವರರನ್ನು ಪುನಃ ಪರಾಮರ್ಶಿಸಿ ಅರ್ಥೈಸಿಕೊಳ್ಳುವಂತೆ ಮಾಡಿ ಸಾತ್ವಿಕತೆಯ ಸಂದೇಶ ಬೀರಿದ. ಇಂದಿಗೂ ಭೋಲೋಕದ ಗೃಹಸ್ಥರ ಮನೆಮನೆಯ ಮಹಾದ್ವಾರದ ಹೊಸ್ತಿಲಲ್ಲಿ (ಮರೆಯದಲೇ ಗಣೇಶ ಚತುರ್ಥಿಯಂದು)ಅವನು ಅನಭಿಷಕ್ತ ದೈವಗಣನಾಯಕ -ಬೆನಕನಾಗಿ ಅಗ್ರಪೂಜೆಗೊಳ್ಳುತ್ತಾನೆ.

ಬಾಲಕ ಗಣಪ ಮಾತಾಪಿತೃಗಳು ತನ್ನ ಸೋದರ ಸುಬ್ರಮಣಿಯೊಂದಿಗೆ ಒಡ್ಡಿದ ಪ್ರಪಂಚ ಪರ್ಯಟನಾ ಪರೀಕ್ಷೆಯಲ್ಲಿ ಅವರನ್ನೇ (ತಂದೆ ತಾಯಿಗಳನ್ನೇ)ಸುತ್ತಿ ಪ್ರದಕ್ಷಿಣೆಗೈದು, ಸಮಯಪ್ರಜ್ಞೆಯ ತೀಕ್ಷ್ಣ ಬುದ್ಧಿಯಿಂದ ಜನ್ಮದಾತ ರಿಗೇ ಅನನ್ಯ ಗೌರವದಿಂದ ಹೃತ್ಪೂರ್ವಕ ವಾಗಿ ನಮಿಸಿ  ಅವರಿಂದ ಆದರಣೀಯ ನಾಗಿ ವಿಶ್ವಪ್ರಿಯನೆನಿಸಿದ. ಇಂದಿಗೂ ಮಕ್ಕಳು ಗಣಪತಿ ಹಬ್ಬವೆಂದರೇ ಸಾಕು ಅವರು ದೂರದಲ್ಲಿದ್ದರೂ ತಪ್ಪದೇ ತಂದೆ ತಾಯಿಗಳ ಬಳಿಗೆ ಧಾವಿಸಿ ಬಂದು ಆಶೀರ್ವಾದ ಪಡೆಯುತ್ತಾರೆ. ಗಣಪತಿಯ ಅಭಿಮಾನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ಎಲ್ಲ ದೈವೀಶಕ್ತಿ ಸ್ವರೂಪಗಳಲ್ಲಿ ಪ್ರಮುಖನಾಗಿದ್ದಾನೆ ಗಜಮುಖ. ಅವನಿಗೆ ಅಗ್ರಪೂಜೆ. ವಿಶ್ವಜೀವನದ ಬಹುರಾಷ್ಟ್ರಗಳಲ್ಲಿ ಗಣಪತಿ ಹಬ್ಬ ಪ್ರಾಮುಖ್ಯತೆ ಪಡೆದಿದೆ. ಅಮೆರಿಕದ ರೆಡ್ ಇಂಡಿಯನ್ ಜನಾಂಗೀಯದಲ್ಲಿ, ಮೆಕ್ಸಿಕೋದ ನಿವಾಸಿಗಳು ಗಣಪತಿಯನ್ನು ಹೋಲುವ ದೇವತಾಮೂರ್ತಿಯನ್ನು ಪೂಜಿಸುತ್ತಾರೆ. ದಕ್ಷಿಣ ಏಷಿಯಾ ದೇಶಗಳಲ್ಲಂತೂ ಗಣೇಶನ ಆರಾಧನೆ ಹೆಚ್ಚಾಗಿ ಆಚರಣೆಯಲ್ಲಿದೆ. ಜಾವಾ, ಬಾಲಿ, ಸುಮಾತ್ರಗಳಲ್ಲಿ ಮತ್ತು ಮುಸ್ಮಿಂ ರಾಷ್ಟ್ರವಾದ ಇಂಡೋನೇಷಿಯಾದಲ್ಲಿ(ಇಂದಿಗೂ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸುತ್ತಾರೆ).

ಥಾಯ್ ಲೆಂಡಿನಲ್ಲಿ ಗಣೇಶನ ಆರಾಧನೆ ಇದೆ. ಹಿಂದೆ ಚೋಳರ ಆಳ್ವಿಕೆ ದಕ್ಷಿಣ ಏಷಿಯಾದತ್ತ ವ್ಯಾಪಿಸಿತ್ತು ಎನ್ನುವುದಕ್ಕೆ ಇಲ್ಲಿ ಪುರಾವೆಗಳಿವೆ. ಜೈನರಲ್ಲಿ ಗಣೇಶ ಆರಾಧನೆ ಸರ್ವೇಸಾಮಾನ್ಯವಾಗಿದೆ. ಅವರ ವ್ಯವಹಾರೀಕ ದಿನಚರಿ ಆರಂಭವಾಗುವುದೇ ಗಣೇಶನನ್ನು ಸ್ತುತಿಸುವುದರಿಂದ.

ಬೌದ್ಧರಲ್ಲಿ ಗಣೇಶ ಬುದ್ಧಿಪ್ರದ. ಜಪಾನ್ ದೇಶದ ಕೆಲ ಬೌದ್ಧ ದೇವಾಲಯಗಳಲ್ಲಿ ಗಣೇಶನ ಮೂರ್ತಿಗಳಿವೆ. ಜಪಾನ್ ನ ಕಾಂಗಿ ಬೌದ್ಧರಲ್ಲಿ ಗಣೇಶನ ಆರಾಧನೆ ಇದೆ. ಹೀಗೆ ವಿಶ್ವಜೀವನದಲ್ಲಿ ಸರ್ವಧರ್ಮ ಪೂಜಿತ ಸುಮುಖ ಗಣಪನಾಗಿದ್ದಾನೆ. ಶ್ರೀ ಗಜಮುಖ ಸೌಖ್ಯದಾತ| ಲೋಕಾದೀಶ ಸತತವು ನಮಿಪೆವು ಶ್ರೀ|| ಎಂಬ ಗೀತೆ ನಮ್ಮಲ್ಲಿದೆ.

ವೇದೋಕ್ತವಾಗಿ ಗಣಪತಿ ಎಂದರೆ ಅಖಿಲಾಂಡ ಕೋಟಿ ಬ್ರಹ್ಮಾಂಡದ ಗಣನಾಯಕ. ಗಣಗಳೆಂದರೆ ಮನುಷ್ಯಗಣ, ಪ್ರಾಣಿಪಕ್ಷಿಗಳಗಣ, ಸಸ್ಯ, ಹುಲ್ಲುಗರಿಕೆ, ವನ ವೃಕ್ಷಗಳಗಣ, ಸೌರಮಂಡಲದ ಭೂಮಿ ಮತ್ತು ಸಕಲಗ್ರಹಗಳು ಇವುಗಳೆಲ್ಲವೂ ಸೇರಿ  ಚರಾಚರ ಜಗತ್ತು ನಿರ್ವಿಘ್ನವಾಗಿ ನಿರಂತರ ಚಲನೆಯಲ್ಲಿರಬೇಕಲ್ಲ. ಅವುಗಳ ಅಧಿನಾಯಕನೇ ಮಹಾಗಣಪತಿ. “ ಮೂಷಿಕವಾಹನ ಮೋದಕ ಹಸ್ತಾ… ಎಂದು ಆರಂಭವಾಗುವ ಗೀತೆ ಕೇಳಿದ್ದೇವೆ-  ಮೋದಕ ಎಂದರೆ ಸದಾಕಾಲವೂ ಆನಂದ ಉಂಟುಮಾಡುವ ಪದಾರ್ಥ ಎಂದರ್ಥವೆನ್ನುತ್ತಾರೆ. ಆದುದರಿಂದಲೇ ಗಣಪತಿಗೆ ಮೋದಕ ಭಕ್ಷ್ಯವಿಶೇಷವೆಂದರೆ ಇಷ್ಟವಂತೆ. ಚತುರ್ಥಿಯಂದು ಗಣಪತಿಗೆ ವಿಶೇಷವಾಗಿ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ಮೋದಕಭಕ್ಷ್ಯವನ್ನು ನೈವೇದ್ಯಮಾಡಿ ಆನಂತರ ಅದನ್ನು ಪ್ರಸಾದವಾಗಿ ಸ್ವೀಕರಿಸುವುದರಿಂದ ಇಂದ್ರಿಯ ಸಂಪ್ರೀತಿ ಪ್ರಾಪ್ತವಾಗುವುದಲ್ಲದೇ, ನಾವು ಜೀವಾತ್ಮನಲ್ಲಿ ಪರಮಾತ್ಮನ ಪ್ರಸನ್ನಃತೆಯನ್ನೇ ಕಂಡುಕೊಳ್ಳಬಹುದೆಂಬ  ನಂಬಿಕೆಯಿದೆ.

ನಿನ್ನ ಜ್ಞಾನದ ಮುಂದೆ ನಾನು…


ನಾನು ನುಡಿದರೆ ನನ್ನನ್ನೇ ನಾನು ಕಳೆದುಕೊಂಡಂತೆ
ನೀನು ನುಡಿಸಿದರೆ ನಿನ್ನನ್ನೇ ನಾನು ಕಂಡುಕೊಂಡಂತೆ
ನನ್ನ ಜ್ಞಾನದ ಹಿಂದೆ ಆಗಿಹೋದುದೆಲ್ಲ ಅಜ್ಞಾನ;
ನಿನ್ನ ಜ್ಞಾನದ ಮುಂದೆ ನನಗೆ ಬಂದುದೆಲ್ಲ
ಇಂದ್ರಿಯಾತೀತ ಜ್ಞಾನ.

ನಿತ್ಯ ಚಿಂತನ ರಶ್ಮಿ


ಜ್ಞಾನಿಯು ಸತ್ಕರ್ಮ ಸಮರ್ಥನಾಗುವಂತೆ ದುಷ್ಕರ್ಮ ನಿರತನೂ ಆಗಿ ಜಯಿಸುವನು.
ಆದರೆ, ಆ ಜಯ ಅಲ್ಪಕಾಲವಷ್ಟೇ. ಅದು ಅವನ ಅವನತಿ ಅವನೇ ತಂದುಕೊಂಡಂತೆ.
****

ನಾನು ನಾನಲ್ಲ;
ನನ್ನೊಳಗಿನ ಮನಸ್ಸು ಮದಗಜದಂತೆ ನನ್ನ ಮಾತು ಕೇಳದಲ್ಲ
ಅದರ ಸೊಕ್ಕು ಮುರಿದಾಗ ನನಗೆ ನಾನೇ ಸರ್ವಜ್ಞ.

****

ಧ್ಯಾನದಲ್ಲಿ ಮೌನವಿದೆ
ಮೌನದಲ್ಲಿ ಮನಸ್ಸಿನ ಹಾರಾಟವಿದೆ
ಆ ಹಾರಾಟದಲ್ಲಿ ದೇಹದುಸಿರಾಟವಿದೆ
ಆ ಉಸಿರಾಟದಾಚೆ ಸಮಾಧಿ ಸ್ಥಿತಿ ಇದೆ
ಆ ಸ್ಥಿತಿಯಲ್ಲೇ ದೈವ ಸಾನ್ನಿಧ್ಯವಿದೆ.

*****

ನೀವು ಆತ್ಮನ ಅರಿವಿನಲ್ಲಿ
ಪರಮಾತ್ಮನನ್ನು ಏನೆಲ್ಲ ಬೇಡಿಕೊಳ್ಳುವಿರೋ
ಅವನು ಅದನ್ನೆಲ್ಲ ದಯಪಾಲಿಸುವನು.

****

ಚಿಂತೆ ತಳಮಳಗಳಿರಲಿ ತ್ರಿಗುಣಗಳ ಲೀಲೆಯಲಿ
ಜೀವನದಾಟ ಸಾಗುವುದು ಸಾಹಸದಿ
ಜೀವಸಮುದ್ರದ ತೆರೆಗಳೇರಿಳಿತದಲಿ
ಸತ್ವಗುಣದ ಹಿರಿಮೆ ಗರಿಮೆಗಳು
ಇಲ್ಲಿ ಸಿಗುವುವು ಜಲಧಿಯಾಳದ ಮುತ್ತು ರತ್ನಗಳಂದದಲಿ

ದಿನಾಂಕ:  ೦೯-೦೬-೨೦೧೩

ವಿಜ್ಞಾನಿ ಮತ್ತು ತತ್ವಜ್ಞಾನಿ


ವಿಜ್ಞಾನಿಯ ದೃಷ್ಟಿ ವೀಕ್ಷಣೆ, ವಿಶ್ಲೇಷಣೆಯಿಂದ ಕಂಡುಕೊಳ್ಳುವಿಕೆ. ಅವನದೆಲ್ಲ ಬಾಹ್ಯಾಚರಣೆಯಷ್ಟೇ. ಅವನ ದೃಷ್ಟಿಯು ಎಷ್ಟೇ ಸೂಕ್ಷ್ಮ ತೀಕ್ಷ್ಣ ವಾದರೇನು ಅದು ಪರಮಾತ್ಮನ ಇರುವಿಕೆಯನ್ನು ಕಂಡುಕೊಳ್ಳಲಾಗುವುದಿಲ್ಲ. ಯಾಕೆಂದರೆ, ಅವನ ನೋಟವು ಹೊರಗೆ ಬಾಹ್ಯದಲ್ಲಿ. ತತ್ವಜ್ಞಾನಿಯ ದೃಷ್ಟಿ ಆಂತರಂಗಿಕವಾದದ್ದು. ಅವನು ಧ್ಯಾನ ನಿರತನಾಗಿ ಆಂತರ್ಯದಲ್ಲಿ ಸಾಕ್ಷಿಚೇತನನಾಗುತ್ತಾನೆ. ಆ ಚೈತನ್ಯದಲ್ಲಿ ಪರಮಾತ್ಮನನ್ನೇ ಕಂಡುಕೊಳ್ಳುತ್ತಾನೆ.; ಧ್ಯಾನದ ರಹಸ್ಯವು ವೈಜ್ಞಾನಿಕ ದೃಷ್ಟಿಯಲ್ಲೇ ಇದೆ. ಅದು ಒಂದು ಕಲೆ, ಯುಕ್ತಿ ಎನ್ನಬಹುದು. ಆದುದರಿಂದಲೇ ಅದನ್ನು ಬ್ರಹ್ಮರಹಸ್ಯ ಎಂದರು. ‘ಬ್ರಹ್ಮ ಸತ್ಯವೇ. ಜಗನ್ಮಿತ್ಯವೇ.’ ವಿಜ್ಞಾನಿಯದು ವಾಸ್ತವಿಕ ಸತ್ಯ. ತತ್ವಜ್ಞಾನಿಯದು ಅಲೌಕಿಕ ಸತ್ಯ. ಹೇಗೆ ವಿಜ್ಞಾನಿ ಭೌತಿಕವಾಗಿ ತಾನು ಕಂಡುಕೊಂಡ ಸತ್ಯ ಪ್ರತಿಪಾದಿಸುತ್ತಾನೆ; ಪ್ರದರ್ಶಿಸುತ್ತಾನೆಯೋ ಹಾಗೆ ತತ್ವಜ್ಞಾನಿ ತಾನು ಕಂಡ ಸತ್ಯ ಅಲೌಕಿಕ; ಅದು ಆಂತರ್ಯಲದಲ್ಲಿ ಧ್ಯಾನಸ್ಥರಾದಾಗ ಅರಿವಿಗೆ ಬರುವುದೆನ್ನುತ್ತಾನೆ. ಆ ಪರಮಾತ್ಮನು ಅಂತರಂಗದ ಅನ್ವೇಷಣೆಯಲ್ಲಿ ಅನುಭವ ವೇದ್ಯನಾಗುತ್ತಾನೆ ಎನ್ನುತ್ತಾನೆ. ಹೇಗೆ ಎಲ್ಲರೂ ವಿಜ್ಞಾನಿಗಳಾಗಲಾರರೋ ಹಾಗೆ ಎಲ್ಲರೂ ತತ್ವಜ್ಞಾನಿಗಳಾಗಲಾರರು. ನಿಜ. ಆದರೆ, ಎಲ್ಲರಲ್ಲೂ ಆಂತರಂಗಿಕವಾದ ಪರಮ ಸತ್ಯವೊಂದು ಇದೆ. ಅದನ್ನು ಅವಿರತ ಧ್ಯಾನ ಯೋಗ ಸಾಧನೆಯಲ್ಲಿ ಸಾಕ್ಷಿಚೇತನರಾಗಿ ಕಂಡುಕೊಳ್ಳಲು ಸಾಧ್ಯವಿದೆ.

ಧ್ಯಾನದಲ್ಲಿ ಮೌನವಿದೆ.  ಮೌನದಲ್ಲಿ ಮನಸ್ಸಿನ ಹಾರಾಟವಿದೆ.  ಹಾರಾಟದಲ್ಲಿ ಪರಮಸತ್ಯದ ಹುಡುಕಾಟವಿದೆ. ಸತ್ಯದಲ್ಲಿ ಜೀವಾತ್ಮನ ಗಮ್ಯವಿದೆ. ಗಮ್ಯದಲ್ಲಿ ಸಮಾಧಿ ಸ್ಥಿತಿ ಇದೆ.  ಆ ಸ್ಥಿತ ಪ್ರಜ್ಞೆಯಲ್ಲಿ ಪರಮಾತ್ಮನ ಸಾಕ್ಷಾತ್ಕಾರವಿದೆ.