ಇದೋ ಬಂತು ಸ್ವಾತಂತ್ರ್ಯ…


ಇದೋ ಬಂತು ಸ್ವಾತಂತ್ರ್ಯ
ಜನ್ಮಭೂಮಿ ಮಡಿಲಿಗೆ
ಸತತ ಬೆಂದು ನೊಂದ ಸುತರ
ಸಂತೈಸುವ ಒಡಲಿಗೆ.

ದುಷ್ಟರಕೂಟ ಭ್ರಷ್ಟರಾಟ
ಧನದಾಹಿಗಳ‌ ಹಗರಣಕೆ
ಅಧಿಕಾರಗಳಟ್ಟಹಾಸಕೆ ಕುಗ್ಗದೆ ಜಗ್ಗದೇ
ನುಗ್ಗಿ ನಡೆವ ಮಹಾಜನತೆಗೆ.

ದ್ವೇಷ ಸೇಡು ವಿಷ ಬೀಜಬಿತ್ತಿ
ಬೆಳೆವ ಒಳಗಣ ಕಿಚ್ಚಿಗವರೇ
ಬೆಂಕಿ ಹಚ್ಚಿಕೊಂಡು ವಿಕಟಹಾಸಗೈವ
ಪುಂಡ ಭಂಡರ ರಾಜಕೀಯ ದೊಂಬರಾಟಕೆ
ಅಂಜದೆ ಅಳುಕದೇ  ಮುಗಳ್ನಗುತಲಿ ಎದೆಸೆಟೆಸಿ
ಮುಂದೆ ಮುಂದೆ ದಿಟ್ಟ ಹೆಜ್ಜೆ  ಇಡುವ ಯುವಶಕ್ತಿಯ
ನೇತಾರರ ಈ ಪುಣ್ಯ ಭೂಮಿಗೆ.

ದೇಶ ಒಡೆವ ಐಕ್ಯತೆಗೆ ಭಂಗ ತರುವ
ಒಳಹೊರಗಿನ ಭಯೋತ್ಪಾದಕರ
ಹಿಮ್ಮೆಟ್ಟಿಸಿ ಹಡೆಮುರಿಕಟ್ಟಿ ಸೆರೆಗೆಸೆವ
ಕ್ಷಾತ್ರ ಯೋಧರ ಹೆಮ್ಮೆಯ ಹಿಂದೂಸ್ತಾನಕೆ

ಇದೋ ಬಂತು ಸ್ವಾತಂತ್ರ್ಯಹಲವು ಹತ್ತುನೂರು
ಸವಾಲುಗಳಿಗೆಲ್ಲ ಮಣಿಯದೆಲ್ಲ ಕ್ಷೇತ್ರಗಳಲಿ ನಿಂತು
ಹೋರಾಡುವಂಥ ಧೀಮಂತರ ನೆಲೆ ಬೀಡಿಗೆ.

ಅಕ್ರಮ ಅವ್ಯವಹಾರಗಳ ಮಸಲತ್ತುಗಳಿಗೆ
ನೇತಾರರ ಹೆಸರಿಗೆ ಮಸಿಬಳಿವ ಸೊಗಲಾಡಿಗಳಿಗೆ
ಕಾಮುಕರ ಹೆಣ್ಣಿನ ಮೇಲತ್ಯಾಚಾರಗಳಬ್ಬರಕೆ
ಸಿಡಿದು ಪ್ರತಿಭಟಿಸಿ ಶಿಕ್ಷೆಗೆಳೆವ ಪ್ರಜೆಗಳಿರುವ
ಸತ್ವಗುಣ ಸಾಧಕರ ಈ ಕರ್ಮ ಭೂಮಿಗೆ
ಬಡವ ಬಲ್ಲಿದರ ಬೆವರಿನ ದುಡಿಮೆ ನಿಷ್ಠೆಗೆ.

ವ್ಯವಸ್ಥೆಯಲಿ ಎಷ್ಟೇ ಮಾಲೀನ್ಯವಿರಲಿ ಜ್ಞಾನ-
ವಿಜ್ಞಾನದಲಿ ತಾಂತ್ರಿಕ ತಾತ್ವಿಕ ಬುದ್ಧಿಮತ್ತೆಯಲಿ
ಆತ್ಮಶಕ್ತಿ ಜಾಗರಣೆಯಲೆಲ್ಲ ತೊಡಕು ತೊಳೆದು ತೊನೆವ
ಸ್ವಚ್ಛ ಭಯಮುಕ್ತ ಸಾಧು ಸಂತರ ನೆಲೆ ವೀಡಿಗೆ
ಇದೋ ಬಂತು ಸ್ವಾತಂತ್ರ್ಯ
ದೇಶ ಸೇವೆ ಅಭಿವೃದ್ಧಿಯೆ ತಾರಕ
ಮಂತ್ರವೆನುವ ಈ ಭವ್ಯ ಭಾರತಕೆ.

ಹೈಮಾಚಲ ಗಿರಿಶೃಂಗಗಳಾಚೆ
ವಿಶ್ವಶಾಂತಿ ಸಂಕಲ್ಪದ ಸಾನ್ನಿಧ್ಯಲಿ
ನಮ್ಮ ಜನರ ರೀತಿ ಸಂಸ್ಕೃತಿಗಳು
ಪರಮೋಚ್ಚವೆಂದು ಸಾರುವಂಥ ನಾಡಿಗೆ
ಇದೋ ಬಂತು ಸ್ವಾಂತಂತ್ರ್ಯ
ಈ ನೆಲದ ಹಿರಿಮೆ ಗರಿಮೆಗೆ.

ವಿವಿಧ ಜಾತಿ ಪಂಥಗಳಲಿ ಬೇರೆಯಾಗದುಳಿದು
ಬೆರೆತು ಬೇಧಭಾವ ದ್ವಂದ್ವಗಳಲಿ ಎಂದೆಂದಿಗೂ
ಮತ್ತೆ ಮತ್ತೆ ವೈವಿಧ್ಯತೆಯಲಿ ಒಂದುಗೂಡಿಸಿ
ದೇಶದ ಹಿತಗೈವ ಗಣ್ಯರಿಗೆ ಮಣಿವ ಸೀಮೆಗೆ
ಇದೋ ಬಂತು ಸ್ವಾತಂತ್ರ್ಯ
ನಮ್ಮ ಒಲುಮೆ ಬಲುಮೆಗೆ.

(೧೯೯೮ ರ ಸುವರ್ಣ ಸ್ವಾತಂತ್ರ‍್ಯೋತ್ಸವ ಸಂಭ್ರಮಕೆ ನಾನು ಭದ್ರಾವತಿ ಆಕಾಶವಾಣಿಯಲ್ಲಿ ವಾಚಿಸಿದ ಕವನ, ಪ್ರಸ್ತುತ ಭಾರತಕೆ ತಿದ್ದಿ ವಿಸ್ತೃತಗೊಂಡಿದೆ….)

ಕವನ: ಅಟಲ್ ಬಿಹಾರಿ ವಾಜಪೇಯಿ   

ಕವನ: ಕಾರ್ಗಿಲ್ ಯುದ್ಧ ನಡೆದ ಸಂದರ್ಭದಲ್ಲಿ     

ಕವನ: ದೇಶ ಹೇಗಿದೆ ನೋಡಿ

ಇನ್ನಷ್ಟು ಕವನಗಳಿಗೆ>>>

Leave a comment