ಪ್ರಜಾಪ್ರಭುತ್ವ ಹೆಮ್ಮೆಯಿಂದ ಮತ್ತೊಮ್ಮೆ ತಲೆ ಎತ್ತಿದ ಸ್ವಾತಂತ್ರ‍್ಯೋತ್ಸವ ಸಂಭ್ರಮದಲ್ಲಿ…


National Flag೬೮ ವರುಷಗಳ ಪಯಣದಲ್ಲಿ ಪ್ರಜಾಪ್ರಭುತ್ವ ಹೆಮ್ಮೆಯಿಂದ ಮತ್ತೊಮ್ಮೆ ತಲೆ ಎತ್ತಿದ ಸ್ವಾತಂತ್ರ‍್ಯೋತ್ಸವ ಸಂಭ್ರಮದಲ್ಲಿ…

ನಮ್ಮ ದೇಶಕ್ಕೆ ಸ್ವಾತಂತ್ರ್ಯನ ಬಂದು ೬೮ ವರುಷಗಳು ಸಂದಿವೆ. ನನಗೂ ೬೮ ವರುಷದ ಪ್ರಾಯ. ಆ ಮೊದಲ ಸ್ವಾತ್ರಂತ್ರೋತ್ಸವದಲ್ಲಿ(೧೯೪೭) ನಾನು ತಾಯಿಮಡಿಲ ಕೂಸು. ನನ್ನ ಹೆತ್ತವರು ಅಂದಿನ ಸ್ವಾತಂತ್ರೋತ್ಸವದಲ್ಲಿ ಅದೆಷ್ಟು ಸಂಭ್ರಮಿಸಿದ್ದರೋ. ಆ ಸಂಭ್ರಮವನ್ನಂತೂ ಇಂದು ಕಾಣೆವು.

ಕಳೆದ ಅರವತ್ತೇಳು ವರುಷಗಳಲ್ಲಿ ದೇಶದಲ್ಲಿ ಆಗಲೇ ಬೇಕಾದ ಅಭಿವೃದ್ದಿ ಕಾರ್ಯಗಳು ಅನಿವಾರ್ಯವೆಂಬಂತೆ ಆಗಿದ್ದರೂ,  ಆಗಬಾರದ ಹಗರಣಗಳಲ್ಲಿ ಅನಾಹುತಗಳಲ್ಲಿ ದೇಶದ ವ್ಯವಸ್ಥೆ ಹದಗೆಟ್ಟಿರುವುದೇ ನಮ್ಮ ಜನತೆಯ ಕಣ್ಣಿಗೆ ರಾಚಿದೆ… ನಮ್ಮ ದೇಶದ ಆಡಳಿತ ವ್ಯವಸ್ಥೆ  ಸಂವಿಧಾನದ ಹಳೆಯ ಕಾನೂನು ಕಾಯ್ದೆಗಳಿಂದ ಸರಿಪಡಿಸಲಾಗದಷ್ಟು ಕಂಗೆಟ್ಟಿದೆಯೆಂದರೆ ಉತ್ಪ್ರೇಕ್ಷೆಯೇನಿಲ್ಲ. ಆದರೂ, ನಮ್ಮ ದೇಶದ ಜನತೆಯಲ್ಲಿ ಉತ್ಸಾಹ ಕುಂದಿಲ್ಲ ಎಂಬುದಕ್ಕೆ ಕಳೆದ ಚುನಾವಣೆಯೇ ಸಾಕ್ಷ್ಯ ನುಡಿದಿದೆ.
ನಮ್ಮ ಜನತೆ ಕಳೆದ ಹತ್ತು ವರ್ಷಗಳಲ್ಲಿ  ಹತಾಶರಾಗಿದ್ದೇ ಹೆಚ್ಚು. ಇದೀಗ ಭವಿಷ್ಯದಲ್ಲಿ ಭರವಸೆ ತಳೆದಿದ್ದಾರೆಂಬುದು ನಿಜವೇ. ಹೊಸ ನಾಯಕನನ್ನು ಆರಿಸಿದ್ದಾರೆ. ಪ್ರಜಾಪ್ರಭುತ್ವಕ್ಕೆ ಹೊಸದೊಂದು ಷರಾ ಬರೆದಿರುವರಲ್ಲದೇ ತುಂಬು ಸಂಭ್ರಮದಲ್ಲಿ ಇಂದಿನ ಸ್ವಾತಂತ್ರ್ಯೂತ್ಸವದಲ್ಲಿ ಸಂಭ್ರಮಿಸಿದ್ದಾರೆ.

ಅಂತೂ ಕಳೆದ ಹತ್ತುವರುಷಗಳ ನಂತರ ಪ್ರಪಂಚದಲ್ಲೇ ದೊಡ್ಡ ಪ್ರಜಾಪ್ರಭುತ್ವಕ್ಕೆ ಹೆಸರಾದ ನಮ್ಮ ದೇಶದ ಜನ ದಡ್ಡರಲ್ಲ ಎಂಬುದು ಜಗತ್ತಿಗೇ ಅರಿವಾಗಿದೆ. ಅದಕ್ಕೆ ಕಾರಣರಾದವರು ನರೇಂದ್ರ ಮೋದಿ. ಕಳೆದ ಚುನಾವಣೆಯಲ್ಲಿ ಜನ ಪಕ್ಷವನ್ನು ನೋಡಲಿಲ್ಲ ಒಬ್ಬ ವ್ಯಕ್ತಿಯಲ್ಲಿರುವ  ನಾಯಕತ್ವದ ಗುಣವನ್ನು, ದೇಶಕಟ್ಟುವ ವ್ಯಕ್ತಿತ್ವವನ್ನು ದೇಶಭಕ್ತಿಯನ್ನು ಕಂಡಿದ್ದಾರೆ ಎಂದರೆ ಉತ್ಪ್ರೇಕ್ಷೆಯೇನಿಲ್ಲ.
ಇಂದಿನ ೬೮ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಪ್ರಾಧನಿ ನರೇಂದ್ರ ಮೋದಿ ಸ್ವದೇಶಿ ಉಡುಪಿನಲ್ಲಿ ಶ್ವೇತ ವಸ್ತ್ರ ಧಾರಿಯಾಗಿ, ತಲೆಗೆ ಕೇಸರಿ ರುಮಾಲು ಧರಿಸಿ ಕೆಂಪು ಕೋಟೆಯಿಂದ ತಾನು ಪ್ರಧಾನ ಸೇವಕ ಎಂದು ಭಾಷಣ ಆರಂಭಿಸಿದ್ದು ಪರಿವರ್ತನೆಯ ಹಾದಿಯಲ್ಲಿ ಅವರು ತಮ್ಮ ಆಂತರ್ಯದಿಂದ ಮಹಾಜನತೆಯ ಹೃದಯಾಂತರಾಳದ ಮಾತುಗಳನ್ನೇ ಆಡಿದ್ದಾರೆ.

ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಕ್ಕೆ ಗೌರವ ಸಲ್ಲಿಸುತ್ತಾ ಸ್ವಾತಂತ್ರ್ಯ ತಂದುಕೊಟ್ಟ ಧೀಮಂತ ಹೋರಾಟ ಗಾರರನ್ನು ಸ್ಮರಿಸಿದ ಅವರು ಇಂದು ನಮ್ಮ ದೇಶ ಎಲ್ಲದರಲ್ಲೂ ಮುಂದುವರೆಯುತ್ತಿದೆ. ಸಂಪನ್ಮೂಲಗಳಿವೆ. ನಮ್ಮ ಯುವ ಜನತೆಯಲ್ಲಿ ಬುದ್ಧಿವಂತರಿದ್ದಾರೆ. ಅವರು ಪರಿಶ್ರಮದಿಂದ ದುಡಿಯಬಲ್ಲವರಾಗಿದ್ದಾರೆ. ಉದ್ಯೋಗಗಳನ್ನೂ ಸೃಷ್ಟಿಸಲೂ ಶಕ್ತರಿದ್ದಾರೆ. ಆದ್ದರಿಂದ,  ಉತ್ಪನ್ನಗಳ ಆಮದಿಗಿಂತ ರಪ್ತು ಮಾಡಬಲ್ಲ ಸಾಮರ್ಥ್ಯ ನಮ್ಮಲ್ಲಿದೆ. ನಮ್ಮ ಯುವಶಕ್ತಿಯೇ ನಮ್ಮ ದೇಶದ ಶಕ್ತಿ.

ಪ್ರಧಾನಿ ಮೋದಿ ದೇಶದಲ್ಲಿ ಸರ್ಕಾರದ ಇಲಾಖೆ ಇಲಾಖೆಗಳ ನಡುವೆ ಜಗಳವಿದ್ದು ಅದು ಸುಪ್ರೀಂ ಕೋರ್ಟ್‌ವರೆಗೂ ಹೋದರೆ ದೇಶ ಮುನ್ನಡೆಸುವುದಾದರೂ ಹೇಗೆ..? ಎಂಬ ಗಂಭೀರ ಪ್ರಶ್ನೆ ಮುಂದಿಟ್ಟಿದ್ದಾರೆ. ಹೌದು, ಒಬ್ಬ ನರೇಂದ್ರ ಮೋದಿ ಏನು ಮಾಡಬಲ್ಲರು ಎನ್ನುವುದಕ್ಕಿಂತ ಎಲ್ಲ ಕ್ಷೇತ್ರಗಳಲ್ಲೂ ಸರ್ಕಾರಿ ಇಲಾಖೆಗಳು ಸಾಮರಸ್ಯದಿಂದ ಕೈ ಜೋಡಿಸಿದರೆ ಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ನಮ್ಮ ದೇಶದ ಜನತೆಗೆ ಭವಿಷ್ಯದಲ್ಲಿ ಹೆಚ್ಚು ಹೆಚ್ಚು ನಂಬಿಕೆ ಭರವಸೆ ಮೂಡುತ್ತದೆ. ಬಡವರು ಬಡವರಾಗಷ್ಟೇ ಉಳಿಯದೇ ಇಡೀ ನಮ್ಮ ದೇಶ ಜಗತ್ತಿನ ನಕ್ಷೆಯಲ್ಲಿ ಮೊದಲನೆಯದಾಗುವುದರಲ್ಲಿ ಸಂಶಯವಿಲ್ಲ.

ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ತಾವು ದೇಶದ ಹಿತ ದೃಷ್ಟಿಯಿಂದ  ಬಡತನ ನಿರ್ಮೂಲನೆಗಾಗಿ ನೀಡಿದ ಹೇಳಿಕೆಗಳಿಂದ ರಾಜಕೀಯ ಮಾಡಬಾರದೆಂದು ಸೂಚ್ಯವಾಗಿ ರಾಜಕಾರಣಿಗಳಿಗೆ ಕರೆನೀಡಿದ್ದಾರೆ. (ನೀಚ ಸ್ವಾರ್ಥ, ಅಧಿಕಾರಲಾಲಸೆ, ಸ್ವಜನ ಪಕ್ಷಪಾತ ಹಾಗೂ ಹಣಗಳಿಸುವ ಹುನ್ನಾರಗಳೇ ರಾಜಕಾರಣವೆಂದುಕೊಂಡಿರುವವರಿಗೆ ನೇತಾರ ನರೇಂದ್ರ ಮೋದಿ ಅವರ ಇಂದಿನ ಮಾತುಗಳು ತುಂಬ ಗಮನಾರ್ಹವಾಗಿವೆ. ಯಾಕೆಂದರೆ, ಅಧಿಕಾರ ಮತ್ತು ಹಣ ಮತ್ತು ಭ್ರಷ್ಟಾಚಾರದ ಹಗರಣಗಳು ಅದೆಷ್ಟು ಅಧಿಕಾರಸ್ತರನ್ನು ಅಣಕಿಸುತ್ತಿದೆ ಅವರನ್ನು ಅಧಃಪತನಕ್ಕೆ ಕಾರಣವಾಗಿ ಅವಹೇಳನ ಮಾಡುತ್ತಿವೆ ಎಂಬುದನ್ನು ಸ್ವಾತಂತ್ರ್ಯಾನಂತರದ ವರುಷಗಳಲ್ಲಿ ಈ ದೇಶ ಕಂಡಿದೆಯಲ್ಲವೇ…?)

ಮುಂದುವರೆದು ಹೇಳಿದ ಅವರು ಇಂದು ದೇಶದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಕಂಡು ನಮಗೆನಾಚಿಕೆಯಿಂದ ತಲೆ ತಗ್ಗಿಸುವಂತಾಗುತ್ತಿದೆ. ತಂದೆ ತಾಯಿಗಳು ತಮ್ಮ ಮಗಳು ಹೊರಗೆ ಎಲ್ಲಿಗೆ ಹೋಗುತ್ತಾಳೆ? ಏನುಮಾಡುತ್ತಾಳೆ ಎಂದು ಕೇಳುತ್ತಾರೆ. ಅದೇ ತಮ್ಮ ಗಂಡು ಮಕ್ಕಳಿಗೆ ಅದೇ ಪ್ರಶ್ನೆ ಕೇಳುತ್ತಾರೆಯೇ…? ಒಬ್ಬ ಅತ್ಯಾಚಾರಿ ಯಾರೋ ಒಬ್ಬ ತಂದೆಯ ಮಗನೇ ಆಗಿರುತ್ತಾನೆ ಅಲ್ಲವೇ… ಎಂದಿದ್ದಾರೆ. 
ಇಂದು ಹೆಣ್ಣು ಮಗು ಬೇಡ ಎನ್ನುವ ದಂಪತಿಗಳಿದ್ದಾರೆ. ಆದರೆ, ತಂದೆ ತಾಯಿಗಳನ್ನು ಐವರು ಗಂಡು ಮಕ್ಕಳು ನೋಡಿಕೊಳ್ಳುವುದಕ್ಕಿಂತ ಚೆನ್ನಾಗಿ ಒಬ್ಬಳೇ ಒಬ್ಭಳು ಮಗಳು ನೋಡಿಕೊಳ್ಳುತ್ತಾಳೆ ಎಂದಿದ್ದಾರೆ. ಹೆಣ್ಣು ಮಕ್ಕಳು ರಾಷ್ಟ್ರಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಜಯಗಳಿಸುತ್ತಿದ್ದಾರೆ. ಓದಿನಲ್ಲಿ ಗಂಡು ಮಕ್ಕಳಿಗಿಂತ ಹೆಚ್ಚು ಮುಂದುವರೆದಿದ್ದಾರೆ.

ವರುಷಗಳ ಮೇಲೆ ಮೊದಲಬಾರಿಗೆ ನಮ್ಮ ದೇಶದ ಪ್ರಧಾನಿ ಬುಲೆಟ್ ಪ್ರೂಫ್ ಗ್ಲಾಸ್ ಚೌಕಟ್ಟು ಇಲ್ಲದೇನೇ ಬಹಿರಂಗ ವೇದಿಕೆಯಲ್ಲಿ ನಿಭೀತಿಯಿಂದ ಮಾತುಗಳನ್ನಾಡಿದರು. ಕಳೆದ ಹತ್ತುವರುಷಗಳಿಗೆ ಹೋಲಿಸಿದರೆ, ನಮ್ಮ ದೇಶದ ಪ್ರಧಾನಿಯವರ ಭಾಷಣ  ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವಂತಿತ್ತು ಅಲ್ಲದೇ ದೇಶದ ಮಹಾ ಜನತೆಯನ್ನು ಎಚ್ಚರಿಸುವುದಲ್ಲದೇ ಇಡೀ ದೇಶವನ್ನು ಆಭಿವೃದ್ಧಿಯತ್ತ ಮುನ್ನಡೆಸಲು ಎಲ್ಲರೂ  ಒಂದಾಗೋಣ ಎಂಬ  ಸಂದೇಶ ಮುಟ್ಟಿಸುವಲ್ಲಿ ಸಫಲವಾಗಿತ್ತು ಎಂದರೆ ಅತಿಶಯೋಕ್ತಿಯೇನಲ್ಲ..

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s