ಹಿರಿಯ ಮನಸ್ಕರು ಮತ್ತು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳು…


ಕನ್ನಡ ಸಾಹಿತ್ಯದ ನವೋದಯದ ಕಾಲದ ಸಂದರ್ಭದಲ್ಲಿ  ಇಂಗ್ಲೀಷ್ ಪ್ರಭಾವವೇ ಬಹಳವಿತ್ತು. ಆಗ  ಕನ್ನಡಿಗರು ಕನ್ನಡವನ್ನು ಅನನ್ಯವಾಗಿ ಪ್ರೀತಿಸುವಂತೆ ಓದುಗರನ್ನು ಅಪಾರ ಸಂಖ್ಯೆಯಲ್ಲಿ ಬೆಳೆಸಿ ಮನೆಮನೆಗಳಲ್ಲೂ ಮಾತಾದವರಲ್ಲಿ ಮೊದಲಿಗರು ಅ.ನ. ಕೃಷ್ಣರಾಯರು. ಅವರು ಕಾದಂಬರಿಕಾರರಾಗಿ ಅಂದು ಮಾಡಿದ ಪವಾಡ, ಪಡೆದ ಅಪಾರ ಜನಪ್ರಿಯತೆಯನ್ನು ಕಂಡು ಹೊಗಳಿದ ವಿದ್ವಜ್ಜನರೂ ಇದ್ದರು. ಅವರದು ಜನಪ್ರಿಯ ಸಾಹಿತ್ಯ ಅಗ್ಗದ ಪ್ರಚಾರದ ಸಾಹಿತ್ಯವೆಂದು ಅವರನ್ನೂ ಅವರ ಐಡಿಯಾಲಜಿ(ಇಂದಿನ ವ್ಯಾಖ್ಯೆ)ಯನ್ನೂ ಜರೆದ ಹಿರಿಯ ಸಾಹಿತಿಗಳೂ ವಿಮರ್ಶಕರೂ ಇದ್ದರು. ಆದರೇನು! ಅ.ನ.ಕೃ. ಅವರು ಕನ್ನಡ ನವೋದಯ ಕಾಲದ ಯುಗಪ್ರವರ್ತಕರಲ್ಲಿ ಅಗ್ರಣ್ಯರಾಗಿಯೇ ಉಳಿದರು. ಅಂದೂ ಅವರ ಯಶಸ್ಸನ್ನು ಕಂಡು ಕುದಿಯುವವರು ಕಾಲೆಳೆಯುವ ವಿದ್ವಜ್ಜನರ ಗುಂಪೇ ಇತ್ತು.  ಯಾರು ಏನೇ ಗೊಣಗಿದರೂ ಅ.ನ.ಕೃ ಅವರ ಜನಪ್ರಿಯತೆ ಹೆಚ್ಚಿತ್ತಲೇ ಹೋಯಿತು.  ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅಂದಿನ ಇಂಗ್ಲೀಷ್ ಪ್ರಭಾವೇ ಮೆರೆಯುತ್ತಿದ್ದ ಕಾಲದಲ್ಲಿ ಅವರು ಕನ್ನಡ ಓದುಗರನ್ನು ಅತ್ಯಧಿಕ ಸಂಖ್ಯೆಯಲ್ಲಿ ಬೆಳೆಸಿ ಕನ್ನಡ ಚಳುವಳಿಗಳಲ್ಲೂ ಸಕ್ರಿಯರಾಗಿದ್ದುದು ದಾಖಲೆಯಾಗಿದೆ; ಚಿರಸ್ಮರಣೀಯವೇ ಆಗಿದೆ.

ಇದೀಗ ದೃಶ್ಯಮಾಧ್ಯಮದ ಚಾನೆಲ್ ಗಳು ಹಾಗೂ ಸಿನಿಮಾಗಳೂ ಓದುಗರನ್ನು ಕಿತ್ತುಕೊಳ್ಳುತ್ತಲೇ ಇವೆ. ಹೊಸ ಓದುಗರನ್ನು ಸೃಷ್ಟಿಸುವುದರಲ್ಲಿ ವಿದ್ವಜ್ಜನರ    ಸಾಹಿತ್ಯ ಅದೆಷ್ಟು ಯಶಸ್ವಿಯಾಗಿದೆ ಎಂಬುದು ಬೃಹತ್ ಪ್ರಶ್ನೆಯಾಗಿ ಕಾಡಿದೆ.   ಇಂತಹ ಕಾಲಘಟ್ಟದಲ್ಲಿ ಸಾಹಿತ್ಯೇತರ ಕೃತಿಗಳಿಗೆ ಬೇಡಿಕೆ ಹೆಚ್ಚಿದೆ.

ಆದರೂ ಆಶಾದಾಯಕವೆಂದರೆ, ಮಧ್ಯಮ ವರ್ಗದ ಜನರೂ ಮತ್ತು ಐಟಿ/ಬಿಟಿ ವರ್ಗದವರೂ  ವಯೋವೃದ್ದರೂ ತಮ್ಮ ಸಾಹಿತ್ಯಾಸಕ್ತಿ ಉಳಿಸಿಕೊಂಡು, ಕೊಂಡು ಕಥೆ ಕಾದಂಬರಿಗಳನ್ನುಓದುತ್ತಿರುವುದು ಸಮಾಧಾನಕರವೇ. ಅಷ್ಟಕ್ಕೂ ಕಥೆ ಕಾದಂಬರಿ ಸಾಹಿತ್ಯಕ್ಕೆ ಬೇಡಿಕೆ ಇಲ್ಲವೆಂಬಂತಾಗಿರುವ ಈ ಸಂದರ್ಭದಲ್ಲಿ ಎಸ್.ಎಲ್. ಭೈರಪ್ಪನವರು ತಮ್ಮ ಸಾಮಾಜಿಕ ಬದ್ಧತೆಯ ಕೃತಿಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಸಾಮಾನ್ಯ ಜನತೆಯನ್ನು ಮಾತ್ರವಲ್ಲ, ನೌಕರರು,  ಉನ್ನತ ಅಧಿಕಾರದಲ್ಲಿರುವವರೂ, ರಂಗ ಭೂಮಿ ಸಿನಿಮಾ ಕಲಾವಿದರೂ, ಮತ್ತು ಔದ್ಯೋಗಿಕವಾಗಿ  ಐಟಿ,ಬಿಟಿ ಮತ್ತು ಇತರೆ ಕಂಪೆನಿಗಳ ಕಾರ್ಮಿಕ ವರ್ಗದವರೂ ಅವರ ಕೃತಿಗಳನ್ನುಮೆಚ್ಚಿಕೊಳ್ಳುತ್ತಿದ್ದಾರೆ.  ಅಷ್ಟೇ ಅಲ್ಲ ಕೃತಿಗಳು ಇತರ ಭಾಷೆಗಳಿಗೂ ತರ್ಜಮೆಗೊಂಡಿವೆಯೆಂದರೆ ಅವುಗಳ ಗುಣಮಟ್ಟ ಮತ್ತು ಉಪಯುಕ್ತತೆ ಹೆಚ್ಚಿದೆಯೆಂದೇ. ಹಾಗೇ ಅವರು ಸಾಮಾಜಿಕವಾಗಿ ಬದಲಾವಣೆಯನ್ನು ಸುಧಾರಣೆಯನ್ನೂ ಬಯಸುವ ಅವರ ಕೃತಿಗಳಿಂದ ಕನ್ನಡಿಗರ ಹೆಮ್ಮೆಯ ಸಾಹಿತಿಯಾಗಿದ್ದಾರೆ.

ಭೈರಪ್ಪನವರಿಗೆ ಇತ್ತೀಚೆಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಲಭಿಸಿರುವುದು ಅವರ ಅಭಿಮಾನಿಗಳಿಗೆ ಮಾತ್ರವಲ್ಲ ನಿಜಕ್ಕೂ ಕನ್ನಡಪರ ಕಾಳಜಿಇರುವವರಿಗೆ ಹಾಗೂ ಸಮಾಜಿಕ ಪರಿವರ್ತನೆ ಬಯಸುವ ಬುದ್ಧಿಜೀವಿಗಳಿಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆ ಪಡುವಂತಾಗಿದೆಯಲ್ಲವೇ…?  ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ ಎನ್ನುವವರಿದ್ದಾರೆ.  ಉತ್ತಮ ಸಾಹಿತ್ಯ ಕೃತಿಗಳು ಕಾಲ ಕಾಲಕ್ಕೆ ಜನಮಾನಸದಲ್ಲಿ  ಪ್ರಭಾವ ಬೀರಿರುವುದೂ ಜನಜೀವನಕ್ಕೆ ಹೊಸ ಬೆಳಕನ್ನು ಚೆಲ್ಲುವುದು ನಗ್ನ ಸತ್ಯ.  ಸಾಹಿತ್ಯವೆಂದರೆ ಸಹೃದಯರನ್ನು ತಲುಪುವುದಷ್ಟೇ ಮುಖ್ಯ ಅಲ್ಲವೇ?    ಅದಿಲ್ಲದವರು  ಸಣ್ಣಮನಸ್ಸಿನವರಾಗಿಬಿಡುತ್ತಾರೆ. ಅ.ನ.ಕೃ ಅವರ ಜನಪ್ರಿಯತೆ ಕಂಡು ಕರುಬುವ ಅವರದು ಜನಪ್ರಿಯ ಸಾಹಿತ್ಯವೆಂದು ಜರೆಯುವವರಿದ್ದಂತೆ ಈ ಕಾಲಘಟ್ಟದಲ್ಲೂ ಅಂಥವರು ಇರುವುದರಲ್ಲಿ ಯಾವ ಸೋಜಿಗವೇನಿಲ್ಲ.
ಈಗಿತ್ತಲಾಗಿ ಹಿರಿಯ ಸಾಹಿತಿಗಳ ಬೇರೆ ಬೇರೆ “ಐಡಿಯಾಲಜಿಗಳು” ಏನೇ ಇರಲಿ, ಅದರಿಂದ ಸಾಮಾನ್ಯ ಓದುಗರಿಗೆ ಏನು ಪ್ರಯೋಜನ?  ಈಗಾಗಲೇ ದೃಶ್ಯಮಾಧ್ಯಮದಿಂದ ಒಂದಿಷ್ಟು ಸೋರಗಿರುವ ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಕೊಡುಗೆ ಶ್ಲಾಘನಿಯ…. ನಾವು ಮಾಡಲಾಗದ ಕೆಲಸವನ್ನು ಕನ್ನಡಕ್ಕೆ ಭೈರಪ್ಪನವರು ಮಾಡಿದ್ದಾರೆ ಎಂದು ಹೆಮ್ಮೆಪಡುವ ಬದಲು ಜ್ಞಾನಪೀಠ ಪ್ರಶಸ್ತಿ ಹೊತ್ತುಕೊಂಡಿರುವ ಯು.ಆರ್.ಅನಂತಮೂರ್ತಿಯವರು,  ” ತಮ್ಮದೇ ಐಡಿಯಾಲಜಿ” ಹೊಂದಿದ್ದು ದುರಹಂಕಾರ, ಪೂರ್ವಾಗ್ರಹದಿಂದ ಬೈರಪ್ಪನವರನ್ನು ರಾಹುಗ್ರಸ್ತರೆನ್ನುವುದು, ಇತರ ಸಾಹಿತಿಗಳನ್ನು ಕೇತುಗ್ರಸ್ತರೆನ್ನುವುದು ಅವರಿಗೆ ಮಾತ್ರವಲ್ಲ ಕನ್ನಡಕ್ಕೂ ಶೋಭೆ ತರುವುದಿಲ್ಲ.

ಹಿರಿಯ ಸಾಹಿತಿ ಬರಗೂರರು ಅನಂತಮೂರ್ತಿ ಸುರಕ್ಷಾ ವಲಯದಲ್ಲಿದ್ದಾರೆ, ಅವರದೇ ಪಟಲಾಮ್ ಇದೆ … ಎಂದಿದ್ದಾರೆ.  ಅವರು ಎಡ ಪಂಥಿಯರಲ್ಲ,  ಬಲಪಂಥೀಯರೂ ಅಲ್ಲ ನಡುಪಂಥೀಯರು ಎಂಬ  ಚಂಪಾ ಅವರ ಮೂದಲಿಕೆ…. ಇವೆಲ್ಲ ನಮ್ಮಜನಸಾಮಾನ್ಯರೂ ಕನ್ನಡಾಭಿಮಾನಿಗಳ ಮೇಲೆ ಯಾವ ದುಷ್ಪಪರಿಣಾಮ ಬೀರುವುವು ಎಂಬುದನ್ನೇನೂ ಈ ಹಿರಿಯರು  ಚಿಂತಿಸಿದಂತಿಲ್ಲ.

ಯಾರೇನೆ  ಹೇಳಲಿ ಓದುಗರ ಸಂಖ್ಯೆ ಬೆಳೆಯತ್ತಿರಬೇಕು,  ಸಾಹಿತ್ಯಕೃತಿಗಳು, ಕಾದಂಬರಿಗಳು ಜನಸಾಮಾನ್ಯರನ್ನು ತಲುಪುವುದಷ್ಟೇ ಮುಖ್ಯವಲ್ಲವೇ? ಯಾವುದೇ ಸಾಹಿತ್ಯಕೃತಿಗಳು ಹಿರಿಯ ಸಾಹಿತಿಗಳನ್ನು ವಿದ್ವಜ್ಜನರನ್ನು ತೃಪ್ತಿಪಡಿಸಲಿಕ್ಕಾಗಿಯೆ ಹುಟ್ಟಿಕೊಳ್ಳುತ್ತವೆಯೇ …? ಸಾಹಿತ್ಯ ಕೃತಿಗಳು ಸಾಹಿತಿ ವಿಮರ್ಶಕರ ಗುಂಪಿನ ವಲಯಕ್ಕಾಗಿಯೇ ಆ ಮಟ್ಟದ ಐಡಿಯಾಲಜಿಯಲ್ಲಿ ತಯಾರಾಗುವ ಪ್ರಾಡಕ್ಟುಗಳೇನು..? ವಿದ್ವಜ್ಜನರನ್ನು ಮೆಚ್ಚಿಸುವ ಸಾಹಿತ್ಯ ಪ್ರಕಾರವೇ ಬೇರೆ ಇದ್ದೀತು;ಇರಲಿ.  ಹಾಗೆ ನೋಡಿದರೆ,ಯಾವುದೇ ಸಾಹಿತಿಯೊಬ್ಬರ ಕೃತಿಗಳೆಲ್ಲವೂ ವಿದ್ವತ್ ಪೂರ್ಣ ಕೃತಿಗಳೇ (ಮಾಸ್ಟರ್ ಪೀಸ್)  ಆಗಿರುತ್ತವೇನು? ಎಂಬೆಲ್ಲ ಪ್ರಶ್ನೆಗಳುಕಾಡುತ್ತವೆಯಲ್ಲ! ಹಾಗೆ ನೋಡಿದರೆ, ಬೈರಪ್ಪನವರು ಜನಸಾಮಾನ್ಯರ ಸಾಹಿತಿಯಾಗಿದ್ದಾರೆ. ಸಮಾಜದ ಮೇಲೆ ಬೆಳಕು ಚೆಲ್ಲುವ ಕೃತಿಗಳು, ಸಾಮಾನ್ಯ ಜನತೆಯನ್ನು ಮನವನ್ನು ಮುಟ್ಟಿ ತಟ್ಟಿ ಎಚ್ಚರಿಸುವ ಕೃತಿಗಳನ್ನು ಭೈರಪ್ಪನವರು ಬರೆದಿದ್ದಾರೆಂಬುದಕ್ಕೆ ಅವರ ಅಪಾರ ಜನಪ್ರಿಯತೆಯೇ ಸಾಕ್ಷಿ.

ಹಿರಿಯ ಮನಸ್ಕರು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳನ್ನು ಮುಕ್ತ ಮನಸ್ಸಿನಿಂದ ಮೆಚ್ಚಿ ಬೆಂಬಲಿಸಬೇಕಲ್ಲವೇ…..?  ಹಾಗಲ್ಲದೇ, ತಮ್ಮ ಮೂಗಿನ ನೇರಕ್ಕೇ ತಕ್ಕ ಐಡಿಯಾಲಜಿ ಹುಡುಕುವಂತ ಹುನ್ನಾರವೇಕೇ? ವ್ಯರ್ಥ ಪ್ರಲಾಪವೇಕೆ..? ಅದರಿಂದ ನಮ್ಮ ಕನ್ನಡ ನಾಡು ನುಡಿಗೆ ಜನಪರ ಕಾಳಜಿಗೆ ಮತ್ತು ಎಲ್ಲರನ್ನೂ ತಲುಪಬಲ್ಲ  ಸರಳ ಸುಲಭ ಶೈಲಿಯ ಸಾಮಾಜಿಕ ಬದ್ಧತೆಯುಳ್ಳ ಸಾಹಿತ್ಯಲೋಕಕ್ಕೆ ಯಾವ ಪ್ರಯೋಜನವಿದೆ?

ಒಟ್ಟಿನಲ್ಲಿ ಸಾಹಿತ್ಯ ಕೃತಿಯೊಂದು ಕರ ಪತ್ರವೋ,  ಕೇವಲ ವಾಚ್ಯವೋ ಅತ್ಯುತ್ತಮ ಕೃತಿಯೋ ಎಂಬುದನ್ನು ಓದುಗರು ಮೊದಲು ನಿರ್ಧರಿಸುತ್ತಾರಲ್ಲವೇ….. ಭೈರಪ್ಪನವರಂಥವರು ಮಹಾಜನತೆಯ ಕಾಳಜಿಪರವಾಗಿರುವ ಲೇಖಕರು ಯಾವೊಂದು ಪದವಿ ಪುರಸ್ಕಾರ ಬಯಸಿ ಬರೆಯುವವರೇ…?   ಅಂಥ ಪದವಿ ಪುರಸ್ಕಾರ ಅವರನ್ನೇ ಹುಡುಕಿಕೊಂಡು ಬರುತ್ತವೆ.  ಅದಕ್ಕಾಗಿ ಅವರು ಯಾವ ಬಗೆ ತಾಲೀಮು ಮಾಡುವ ಅಗತ್ಯವಿರುವುದಿಲ್ಲ.  ಅಂತೆಯೆ ಅವರಿಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಹುಡುಕಿಕೊಂಡು ಬಂದಿದೆಯಲ್ಲವೇ..?

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s