ಯಾವುದು ಸಾಚಾ? ಯಾವುದು ಮೋಸ? -ಶ್ರೀಯುತ ಯು.ಆರ್. ಅನಂತಮೂರ್ತಿ ಲೇಖನಕ್ಕೆ ಪ್ರತಿಕ್ರಿಯೆ


ಯು.ಆರ್.ಅನಂತ ಮೂರ್ತಿ ಅವರು (ವಿಕ. ಪತ್ರಿಕೆ ತಾ|| 09-06-2011)ಹೇಳಿರುವಂತೆ ನಿಜಕ್ಕೂ ಯಾವುದು ಸಾಚಾ ? ಯಾವುದು ಮೋಸ? ಎಂದು ಯಾರನ್ನೂ ಚಿಂತಿಸುವಂತೆ ಮಾಡುತ್ತದೆ.
“ಸಮಾಜ ಜೀವಿಯಾದ ಮನುಷ್ಯನಲ್ಲಿ ಮಾತ್ರ ಭ್ರಷ್ಟತೆ ಸಾಧ್ಯ ಗಾಂಧಿಯವರಿಗೆ ಇದು ಎಷ್ಟು ಅವರ ಕರುಳಿನ ಬೇನೆಯಂತೆ ಗೊತ್ತಿತ್ತೆಂದರೆ ಅವರನ್ನು ಇಡೀ ಜಗತ್ತು ಮಹಾತ್ಮನೆಂದು ಕರೆವಾಗಲೂ ತನ್ನಲ್ಲಿನ್ನೂ ಭ್ರಷ್ಟತೆ ಉಳಿದಿದೆಯೇ ಎಂದು ಅನುಮಾನಿಸುತ್ತಿದ್ದರು”  ಎಂದು ಲೇಖನ ಆರಂಭವಾಗುತ್ತದೆ.

ಹೌದು, ಇದು ಯಾರೂ ಒಪ್ಪುವಂಥದ್ದು. ಮನುಷ್ಯನಲ್ಲಿ ಇರುವಷ್ಟು ಭ್ರಷ್ಟತೆ ಇನ್ಯಾವ ಪ್ರಾಣಿಯಲ್ಲೂ ಇಲ್ಲವಲ್ಲ. ಭ್ರಷ್ಟತೆಯ ವಿರುದ್ಧ ದನಿಯೆತ್ತುವ ವ್ಯಕ್ತಿಗೆ ತಾನು ಅವರಿಗೆ ತನ್ನ ತೋರು ಬೆರಳು ತೋರಿಸಿದರೆ ತನ್ನೆಡೆಗೇ ನಾಲ್ಕುಬೆರಳುಗಳು ತೋರುತ್ತಿರುತ್ತವೆ ಎಂಬುದು ಶುದ್ಧಹಸ್ತರಿಗೆ ಮಾತ್ರ ಗೊತ್ತಿರುತ್ತದೆ.
ಇಂದಿನ ರಾಜಕಾರಣಿಗಳಲ್ಲಿ ಯಾರು ಶುದ್ಧ ಹಸ್ತರು? ಎಂದು ಹೇಳುವುದು ಕತ್ತಲೆಯಲ್ಲಿ ದುರ್ಬೀನು ಹಾಕಿ ನೋಡಿದಂತೆಯೇ. ವಿರೋಧ ಪಕ್ಷದಲ್ಲಿದ್ದು ಭ್ರಷ್ಟತೆ ವಿರುದ್ಧ ಬೊಬ್ಬೆ ಹಾಕುವಾತನ ಹಿಂದಿನ ಚಾರಿತ್ರ್ಯವೂ ಅಷ್ಟೇ ಹಳಸಲಾಗಿರುತ್ತದೆಂದರೆ ಆಶ್ಚರ್ಯವೇನಿಲ್ಲವಲ್ಲ. ಪ್ರಸ್ತುತದಲ್ಲಿ ಬಾಬಾ ರಾಮ್ ದೇವ್ ಅವರನ್ನಾಗಲಿ ಅಥವಾ ಅಣ್ಣಾ ಹಜಾರೆಯವರನ್ನಾಗಲಿ ಮಹಾತ್ಮ ಗಾಂಧೀಜಿಗೆ ಹೋಲಿಸಲಾಗುವುದಿಲ್ಲ. ಗಾಂಧೀಜಿಗೆ ಗಾಂಧೀಜಿಯೇ ಹೋಲಿಕೆ.  ಅಷ್ಟೇಕೆ ಯಾರೊಬ್ಬರೂ ಹೋಲಿಕೆಯಲ್ಲ. ಬಾಬಾ ರಾಮ್ ದೇವ್ ಮತ್ತು ಅಣ್ಣಾ ಹಜಾರೆಯವರನ್ನೂ ಸಹ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗುವುದಿಲ್ಲವೆಂಬ ಅನಂತ ಮೂರ್ತಿಯವರ ಮಾತು ಒಪ್ಪತಕ್ಕದ್ದೇ.

“ಜಲಿಯನ್ ವಾಲಾ ಬಾಗ್ ನಲ್ಲಿ ಮುಳ್ಳು ಮಲವನ್ನು ತುಳಿದು ಹೊರ ಜಗತ್ತಿನಲ್ಲಿ ಕಾಣುವ ಹಿಂಸೆ ತನ್ನಲ್ಲಿನ್ನೂ ಉಳಿದಿದೆಯೇ ಎಂದು ಪ್ರಶ್ನಿಸಿಕೊಂಡ ಗಾಂಧೀಜಿ ತಮ್ಮನ್ನು ತಾವೇ ಹಿಂಸೆಗೆ ಗುರಿಪಡಿಸಿಕೊಂಡರು ಎಂದು ಹೇಳುತ್ತಾರೆ; ಅನಂತ ಮೂರ್ತಿಯವರು ಹೀಗೆ  ಭ್ರಷ್ಟತೆಯಿಂದ ಪಾರಾಗಿ ತ್ರಿಕರಣಶುದ್ಧಿ ಬಯಸುವುದು ಮನುಷ್ಯನಿಗೆ ಮಾತ್ರ ಸಾಧ್ಯ” ಎಂದೂ ಹೇಳುತ್ತಾರೆ. ಖಂಡಿತ ಹೌದು, ಆದರೆ, ಅಂತಹ ತ್ರಿಕರಣಶುದ್ಧಿ ಗಾಂಧೀಜಿವರಲ್ಲಿತ್ತೆಂದರೆ ಅದನ್ನು ಎಲ್ಲರಲ್ಲೂ ಹುಡುಕುವ ಕಾಲವಿದಲ್ಲ. ಹಾಗೆ ಅದು ಇರಲಿಕ್ಕೆ ಇದು ಆ ಕಾಲವಲ್ಲ, ಇಲ್ಲಿ ನಾವು ನೊಂದು ಉಪವಾಸ ವನ (ಜೈಲು)ವಾಸ ಮಾಡಿದರೂ ಪರವಾಯಿಲ್ಲ; ನಮ್ಮ ಶಾಂತಿಯುತ ಹೋರಾಟದಲ್ಲಿ ಸರಕಾರ ದೌರ್ಜನ್ಯ ನಡೆಸಿದರೆ ಸುಮ್ಮನೆ ತಲೆಕೊಟ್ಟು ಸಾಯುವುದಲ್ಲ ನಮ್ಮನ್ನು ನಾವು ನಮ್ಮನ್ನು ನಾವು ಮೊದಲು ರಕ್ಷಿಸಿಕೊಳ್ಳಬೇಕು. ಅದಕ್ಕೆ ನಾವು ಸಿದ್ಧತೆ ಮಾಡಿಕೊಳ್ಳುವುದು ತಪ್ಪೇನಲ್ಲ ಎಂಬುದು ಬಾಬಾ ರಾಮ್ ದೇವ್ ಅವರ ವಾದವಾಗಿದೆ. ಆದರೆ   ಹನ್ನೊಂದು ಸಾವಿರ ಯೋಧರ ಸೇನೆ ಕಟ್ಟುವ ಭಾವೋದ್ವೇಗದ ಹೇಳಿಕೆ ಮೇಲ್ನೋಟಕ್ಕೆ ಉದ್ರೇಕಕಾರಿಯಾಗಿದ್ದರೂ ಅದರ  ಒಳನೋಟ ಸ್ವಯಂ ರಕ್ಷಣೆಯೇ ಆಗಿರಬಾರದೇಕೆ…? ಹಾಗೆಂದ ಮಾತ್ರಕ್ಕೆ ಬಾಬಾ ಸೇನೆ ಕಟ್ಟಿಯೇ ಬಿಡುವುದೂ ಅಷ್ಟೇನೂ ಸರ್ವ ಸಮ್ಮತವೂ ಅಲ್ಲ. ಅವರ ಗುಂಪಿನಲ್ಲೆ ಭಿನ್ನಾಭಿಪ್ರಾಯವಿದೆಯಲ್ಲ…ಅಷ್ಟೇಕೆ ಸಾಮಾನ್ಯ ಜನತೆಯೂ ಅವರ ಈ ಹೇಳಿಕೆಯಿಂದ ದಿಗ್ಬ್ರಮೆಗೊಂಡಿದೆ. ಆದರೂ  ಸರಕಾರ ನಡುರಾತ್ರಿಯಲ್ಲಿ ನಿಷ್ಪಾಪ ಜೀವಿ ಹೆಂಗಸರು ಮಕ್ಕಳು ವೃದ್ದರು ಎನ್ನದೇ  ದೌರ್ಜನ್ಯ ನಡೆಸಬಹುದಾದರೆ,  ತಮ್ಮ ರಕ್ಕಣೆಗೆ ಭದ್ರತೆಗೆ ಭ್ರಷ್ಟ ರಾಜಕಾರಣಿಗಳು ಕಮಾಂಡೋಗಳನ್ನು ಬಳಸಿಕೊಳ್ಳಬಹುದಾದರೆ, ತಾವೇಕೆ ತಮ್ಮ ನ್ಯಾಯ ಸಮ್ಮತ ಶಾಂತಿಯುತ ಹೋರಾಟಕ್ಕೆ ಆತ್ಮ ರಕ್ಷಣೆಗಾಗಿ ದೇಶಭಕ್ತ  ಸ್ವಯಂ ಸೇವಕರಂಥ ಸೇನೆ ಕಟ್ಟಬಾರದೆಂಬ ಹೇಳಿಕೆಯಷ್ಟೇ ಆಗಿ ಉಳಿದುಬಿಡುವಂತಿದೆ ಬಾಬಾ ರಾಮ್ ದೇವ್ ಅವರದು.

 “ನೀವೊಂದು ಮನೆಕೊಳ್ಳಲು ಬಯಸುವಿರಿ. ಇದು ಕೇವಲ ನಿಮ್ಮ ನೆಮ್ಮದಿಗಾಗಿ. ಆದರೆ ಮಾರುವಾಗ ಅದನ್ನು ಕೊಳ್ಳುವವನು ಒಂದಿಷ್ಟು ಸಾಚಾ ಹಣಕೊಟ್ಟರೆ, ಇನ್ನೊಂದಿಷ್ಟು ಕಪ್ಪುಹಣವನ್ನು ಕೊಡುತ್ತಾನೆ” ಎನ್ನುತ್ತಾರೆ ಅನಂತ ಮೂರ್ತಿ. ನಾವು ಜನಸಾಮಾನ್ಯರು ಭಾರೀ ಉದ್ಯಮಿಗಳು ಬಿಲ್ಡರ್ ಗಳಲ್ಲ.  ಇಲ್ಲಿ ಮನೆ ಮಾರುವಾತ ಬಡಪಾಯಿ ತನ್ನ ಕಷ್ಟಕ್ಕಾಗಿ ಮನೆ ಮಾರುತ್ತಾನೆ.  ಅವನಿಗೆ ಕಷ್ಟ ನಿವಾರಣೆಗೆ ಹಣ ಬೇಕು ಅಷ್ಟೇ…. ತನಗೆ ಬಂದ ಹಣ ಬಿಳಿಯೋ ಕಪ್ಪೋ ಅವನಿಗೇನು ಗೊತ್ತು.  ಅದು ಅವನಿಗೆ ಬೇಡದ ವಿಷಯವಲ್ಲವೇ…?

 ಅನಂತ ಮೂರ್ತಿ ಮುಂದುವರೆದು ಹೇಳುತ್ತಾರೆ-“ಇನ್ನೊಂದು ಮನೆಕೊಳ್ಳುವಾಗ ನಾವೂ ಕಪ್ಪು ಹಣ ಕೊಡಬೇಕಲ್ಲ, ಅಲ್ಲಿ ಅದನ್ನು ಬಳಸಿಕೊಳ್ಳಬಹುದೆಂದು.”
ನೋಡಿ ಎಂಥ ಮಾತು! ಹಾಗಾದರೆ, ದೇಶದಲ್ಲಿರುವ ನಾವು ನಮ್ಮ ಕಷ್ಟಕ್ಕೆ ನೆಮ್ಮದಿಗೆ ಮನೆ ಮಾರುತ್ತೇವೆಂದರೆ, ನಾವೆಲ್ಲರೂ ಕಪ್ಪುಹಣ ಹೊಂದಿರುವವರು; ಭ್ರಷ್ಟರು ಎಂದೇ ಆರೋಪಿಸಲಾಗವುದೇನು? ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಹೋಲಿಕೆ ಬೇರೆ …ಅವರಿಂದ.

ನನಗೆ ಅನಿಸುತ್ತದೆ- ಕದ್ದು ಹಣ್ಣು ತಿನ್ನುವವನಿಗಿಂತ ಕೆಳಗೆ ಬಿದ್ದ ಸಿಪ್ಪೆ ತಿನ್ನುವ ಬಡಪಾಯಿ ಸಿಕ್ಕಿ ಹಾಕಿಕೊಂಡು  ಪಡಬಾರದ ಹಿಂಸೆ ಅನುಭವಿಸುವುದೂ ಕೂಡ ದೊಡ್ಡ ದುರಂತವೇ…
“….ಅಣ್ಣಾ ಹಜಾರೆ,  ಬಾಬಾ ರಾಮ್ ದೇವ್ ಇಬ್ಬರೂ ಭ್ರಷ್ಟತೆಯ ವಿರುದ್ಧ ಮಾತನಾಡುತ್ತಿದ್ದಾರೆ. ಅಣ್ಣಾ ಅವರು ಮೈತುಂಬಾ ಹೊದ್ದ ಖಾದಿಯಲ್ಲಿ; ಆದರೆ ರಾಮದೇವ್ ಅವರು ಅರೆಬೆತ್ತಲೆಯಾದ ಕಾವಿಯಲ್ಲಿ. ಹಜಾರೆಯವರಲ್ಲಿ ಸರಳತೆ ಇದೆ. ತಾನೇ ಭ್ರಷ್ಟತೆಯಿಂದ ಮುಕ್ತನಾಗಬೇಕೆಂಬ ಹಂಬಲವಿದ್ದಂತೆ ತೋರುತ್ತದೆ. ಕಿಂಚಿತ್ ಸುಖದಲ್ಲಿ ಕಾಲಕಳೆಯುವ ದೃಢತೆಯನ್ನೂ ಅವರು ಸಂಪಾದಿಸಿದ್ದಾರೆ..”

ಅರೆಬೆತ್ತಲೆಯಾಗಿ ಕಾವಿ ಧರಿಸಿರುವ ಬಾಬಾ ರಾಮ್ ದೇವ್ ಅವರ ತೇಜೋ ವಧೆ ಮಾಡುವುದು ಸೂಕ್ತವಲ್ಲ ಎಂಬುದನ್ನು ಅನಂತಮೂರ್ತಿಯವರು ಗಮನಿಸಿದಂತಿಲ್ಲ; ಯಾಕೆಂದರೆ ಅವರು ಸರ್ಕಾರದ ವಕ್ತಾರಂತೆ ಹೇಳಿಕೆ ನೀಡಬಾರದಲ್ಲವೇ.. ಮೈತುಂಬಾ ಖಾದಿ ತೊಟ್ಟ ಹಜಾರೆಯವರಲ್ಲಿ ಸರಳತೆ ಕಾಣುವುದಾದರೆ, ಅರೆ ಬೆತ್ತಲೆಯಾಗಿ ಸಾರ್ವತ್ರಿಕವಾಗಿ ತನ್ನ ಹೆಸರಲ್ಲಿ ಒಂದು ಪೈಸೆ ಕೂಡ ಇಲ್ಲವೆಂದು ಹೇಳುವ,  ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬೆಂಬಲಿಗರನ್ನು ಹೊಂದಿರುವ  ಸಂತ  ಜನಸೇವಕರಂತೆ ಗುರುತಿಸಿಕೊಂಡಿರುವ,  ಬಡವರು ದೀನದಲಿತರ ಕಾಯಿಲೆ ಕಸಾಲೆಗಳಿಗೆ ಯೋಗ ಮತ್ತು ಔಷಧಿಗಳನ್ನು ನೀಡಿ ಪೂಜನೀಯರೂ ಎನಿಸಿರುವ  ಬಾ ರಾಮ್ ದೇವ್ ಸುಖಬೋಗದಲ್ಲಿದ್ದಾರೆಂದು  ಮೂರ್ತಿಯವರು ನೇರವಾಗಿ ಆರೋಪಿಸಿದಂತಾಗುವುದಿಲ್ಲವೇ..? ಅಣ್ಣಾ ಹಜಾರೆಯವರಲ್ಲಿ ತಾನೇ ಭ್ರಷ್ಟತೆಯಿಂದ ಮುಕ್ತನಾಗಬೇಕೆಂಬ ಹಂಬಲವಿದ್ದಂತೆ ತೋರುತ್ತದೆ ಎನ್ನುವ ಮೂರ್ತಿಯವರ ಕಣ್ಣಲ್ಲಿ  ಅರೆ ಬೆತ್ತಲೆ ಸಂತ ಬಾಬಾ ರಾಮ್  ದೇವ್ ಹಾಗೆ ತೋರುವುದಿಲ್ಲ  ಯಾಕಾಗಿ…?

“….ಬಾಬಾ ರಾಮ್ ದೇವ್ ಮಾತ್ರ ಮೀಡಿಯಾಗಳೆ ಸೃಷ್ಟಿಸಿದ ಮನುಷ್ಯ ಎನಿಸುತ್ತದೆ….
ಎನ್ನುವ ಅನಂತ ಮೂರ್ತಿಯವರಿಗೆ ಬಾಬಾರವರ  ಆಧ್ಯಾತ್ಮಿಕ ಶಕ್ತಿಯಿಂದ ಕೂಡಿದ  ಅಂತರಂಗದ ಧ್ವನಿ, ಭ್ರಷ್ಟತೆ, ಕಪ್ಪುಹಣದ ವಿರುದ್ಧ ಅವರ ಗಂಟಾಘೋಷ ಮತ್ತು ಸ್ವಾಭಿಮಾನದಿಂದ ಸಿಡಿದೆದ್ದ ನುಡಿಗಳೆಲ್ಲವನ್ನು , ಕೇವಲವಾಗಿ ಕಾಣುತ್ತಾರೆ ಅಲ್ಲಿ ಚೀತ್ಕಾರ, ಅಹಂಕಾರವಿದೆ ಎನ್ನುತ್ತಾರೆ. “ಅವೆಲ್ಲ ಬಾಬಾ ರಾಮ್ ದೇವ್ ತಮ್ಮ ಗುಂಪನ್ನು ಬೆಳೆಸಿಕೊಳ್ಳುತ್ತ ಹೋಗುವ ಉಪಾಯಗಳು. ಯಾವುದರಲ್ಲೂ ಅವರಾಡುವ ಮಾತು ಸಾಚಾ ಎಂದು ನಮಗನಿಸುವುದಿಲ್ಲ.” ಎಂದು ಅನಂತ ಮೂರ್ತಿಯವರು ನಮ್ಮೆಲ್ಲರ ಪರ ವಕ್ತಾರರಂತೆ ಅನಂತ ಮೂರ್ತಿಯವರು ನುಡಿಯುತ್ತಾರೆ.
ಈಗಾಗಲೇ ವಿಶ್ವದಾದ್ಯಂತ ಮಿಲಿಯಾಂತರ ಭಕ್ತರು ಬೆಂಬಲಿಗರನ್ನು ಹೊಂದಿರುವ  ಬಾಬಾ ರಾಮ್ ದೇವ್ ಅವರಿಗೆ ಗುಂಪುಕಟ್ಟುವ  ಪ್ರಮೇಯವೆಲ್ಲಿಂದ  ಬಂದೀತೋ …
“ಇಡಿ ಕಾಲದ ಚಲನೆಯನ್ನೇ  ಗಾಂಧಿಯಿಂದ , ಬಸವನಿಂದ, ಬುದ್ಧನಿಂದ , ಅಲ್ಲಮನಿಂದ ನಾವು ಕಲಿತದ್ದನ್ನು ಬಾಬಾ ರಾಮ್ ದೇವ್ ಅವರು ಹಿಮ್ಮೆಟ್ಟಿಸುವ ಮನುಷ್ಯನಂತೆ ಕಾಣುತ್ತಾರೆ.. ಇದನ್ನೂ ಕೂಡ ಅವರು ಲಾಭದ ದೃಷ್ಟಿಯಿಲ್ಲದೇ ಮಾಡುತ್ತಿಲ್ಲ” ಯಾರೂ ಕಾಲದ ಪ್ರವಾಹವನ್ನ ಅದರ ಚಲನೆಯನ್ನು ಬದಲಾಯಿಸುವುದು ಶಕ್ಯವಿಲ್ಲ; ಅದು ಸಾಧ್ಯವೂ ಇಲ್ಲ.  ಇಡೀ ಸಮಾಜವನ್ನು ತಿದ್ದುವ ಬಲಾಯಿಸುವುದು ಯಾರೊಬ್ಬರಿಂದಲೂ ಸಾಧ್ಯವಿಲ್ಲ. ಬದಲಾವಣೆ  ಆಗುವುದಿದ್ದರೆ ಪ್ರತಿಯೊಬ್ಬರಲ್ಲೂ ಆಗಬೇಕು. ಹಾಗೇ ಸರ್ಕಾರದಲ್ಲೂ ಆಗಬೇಕಷ್ಟೇ…. ಗಾಂಧೀಜಿಯವರಿಂದ ಕಲಿತದ್ದನ್ನು ನಮ್ಮ ನ್ನು ಆಳುವ ಪ್ರಭುಗಳು ಮತ್ತು ಜನಪ್ರತಿನಿಧಿಗಳು ಇಂದಿಗೂ ಪಾಲಿಸಿಕೊಂಡು ಬರುವಂತಾಗಿದೆಯೇ… ಗಾಂಧೀಜಿ  ಮಾದರಿ ಇಂದಿನ ಸ್ವತಂತ್ರ ಭಾರತದಲ್ಲಿ ಅದೆಷ್ಟು ಪ್ರಸ್ತುತ….?   ಬುದ್ಧ, ಬಸವ, ಅಲ್ಲಮನನ್ನು ಉದಾಹರಿಸುವ ಅನಂತ ಮೂರ್ತಿಯವರು ಏಕೋ ಗಾಂಧೀಜಿಗೆ ಪ್ರಿಯವಾ ಭಗವದ್ಗೀತೆಯ ಕೃಷ್ಣನ ಹೆಸರನ್ನು ಎಲ್ಲೂ ಹೇಳಲು ಇಚ್ಚಿಸುವುದಿಲ್ಲ.  ಸಾತ್ವಿಕ ಪ್ರಭು ಶ್ರೀರಾಮ ಚಂದ್ರನ  ಸ್ಮರಿಸಿಕೊಳ್ಳುವುದಿಲ್ಲ.  ಅವರು ಬಹಳ ವರ್ಷಗಳ ಹಿಂದೆ ತರಂಗ ವಾರ ಪತ್ರಿಕೆಗೆ( ತರಂಗರ ಪತ್ರಿಕೆ ದಿನಾಂಕ:19-02-1995) ಸಂದರ್ಶನ ನೀಡುವಾಗ ಹೇಳಿದ್ದಾರೆ- “ಕ್ರಿಸ್ತ ಚಾರಿತ್ರಿಕ ವ್ಯಕ್ತಿ, ಮಹಮ್ಮದ್ ಚಾರಿತ್ರಿಕ ವ್ಯಕ್ತಿ…. ರಾಮ ಹುಟ್ಟಿದ್ದು ಅಯ್ಯೋದ್ಯೆಯಲ್ಲಲ್ಲ;  ಗೋಡ್ಸೇ ಗುಂಡಿಕ್ಕಿ ಅವರನ್ನು ಹೋಡೆದಾಗ ಅವರ ಬಾಯಲ್ಲಿ   ರಾಮ …” ಹುಟ್ಟಿದ ಎಂದು ವ್ಯಂಗವಾಡಿದ್ದರು.  ಅಷ್ಟೇ ಅಲ್ಲ  ಅವರ ಅಂದಿನ ಸಂದರ್ಶನ ಉದ್ದಕ್ಕೂ ಅಂತ ವಿಚಿತ್ರ ಹೇಳಿಕೆ ಗಳೇ ಇವೆ!   ಅವರೇ ಅಲ್ಲಿ ಹೇಳಿದ್ದಾರೆ  ತುಂಬಾ ಬುದ್ಧಿವಂತರನ್ನು ಕನ್ನಡ ಪತ್ರಿಕೆಗಳು ಒಪ್ಪಿಕೊಳ್ಳುವುದಿಲ್ಲ. ( ಈ ಬಗ್ಗೆ  ನಾನು ಹಿಂದೇ   ಬ್ಲಾಗ್  ಮಾಡಿದ್ದಿದೆ)  ಇದೇ ಕಾಲದ ಪ್ರವಾಹವಲ್ಲವೇ…? ಕನ್ನಡ ಜನಪ್ರಿಯ ಪತ್ರಿಕೆ ವಿ.ಕ. ಅವರನ್ನು ಒಪ್ಪಿಕೊಂಡಿದೆ.  ವಿಪರ್ಯಾಸವೆಂದರೆ  ಆಗ ಅವರ ಹೇಳಿಕೆಗಳಿಗೆ ಯಾವ ಪ್ರತಿಭಟನೆಯೂ ನಡೆಯಲಿಲ್ಲ ಅದೇ ಕನ್ನಡಿಗರ  ಸಹಿಷ್ಣತೆ!

“”ಪೆದ್ದು ಸರಕಾರ, ಸಾಚಾ ಅಣ್ಣಾ ಮತ್ತು ಕುಟಿಲ ಬಾಬಾ….. ಎಂದು ಹೇಳುತ್ತ ತಮ್ಮ ಕೊನೆಯ ಮಾತೆಂದು ಹೇಳುತ್ತಾರೆ- ಎಮರ್ಜೆನ್ಸಿಯನ್ನು ಜಯಪ್ರಕಾಶ ನಾರಾಯಣರು ತಮ್ಮ ಸಾತ್ವಿಕ ಹಿಂಬಾಲಕ ಮುಖಾಂತರ ವಿರೋಧಿಸಲು ಆಗಲಿಲ್ಲ. ಅವರು ಸಂಘ ಪರಿವಾರವನ್ನು ಬೆನ್ನಿಗೆ ಇಟ್ಟುಕೊಂಡು ಹೋರಾಡಬೇಕಾಯಿತು….ಅಣ್ಣಾ ಹಜಾರೆ ಬಳಗವೂ ಹೀಗೆಯೆ ರಾಮ್ ದೇವ್ ಅವರನ್ನು ಬೆನ್ನಿಗೆ ಇಟ್ಟುಕೊಂಡರೆ ಅದು ಅಪಾಯವಾದೀತು.   ಹಾಗೇನಾದರೂ ಆದರೆ ಅದು ಇಡೀ ನಾಗರೀಕತೆಗೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ….”

ಅದು ಹೇಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆಯೋ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆಯಲ್ಲವೇ…?
ಅನಂತ ಮೂರ್ತಿಯವರೇ ಹೇಳುವಂತೆ ಗಾಂಧಿ ಕಾಲದಲ್ಲಿ ಸತ್ಯಾಗ್ರಹ ವೆಂಬ ಪದ ಬಳಸುವ ಮುನ್ನ ಅದನ್ನು ಪ್ಯಾಸೀವ್ ರೆಸಿಸ್ಟೆನ್ಸ್  ಎನ್ನಲಾಗುತ್ತಿತ್ತು.

ಪ್ಯಾಸೀವ್ ರೆಸಿಸ್ಟೆನ್ಸ್ ನಲ್ಲಿ ಕೂಡ ಹಿಂಸೆಯೇ ಪ್ರತ್ಯಕ್ಷವಾಗುತ್ತದೆ ಎಂಬ ಹಣೆಪಟ್ಟಿ ಕಟ್ಟಲಾಯಿತು ಎನ್ನುತ್ತಾರೆ.   ಅಂದು ಆ ಮಾತನ್ನು ಗಾಂಧೀಜಿ ವಿರೋಧಿಸಿದ್ದ್ರರು.  ಆದರೇನಾಯಿತು ಆಗ…
ಹೌದು, ಈಗ ಆಗುತ್ತಿರುವೂದ ಅದೇ ಆಗಿದೆ.  .ಗಾಂಧೀಜಿಯ ಕಾಲದಲ್ಲಿ ಪ್ಯಾಸೀವ್ ರೆಸಿಸ್ಟೆನ್ಸ್ ಅಥವಾ ಗಾಂಧೀಜಿವರೆ ಕರೆದ ಸತ್ಯಾಗ್ರ ದಲ್ಲೂ ಕೂಡ ಜಲಿಯನ್ ವಾಲಾ ಬಾಗ್ ನಂತ ಘೋರ ಹಿಂಸೆಯೇ ಪ್ರತ್ಯಕ್ಷವಾಯಿತಲ್ಲವೇ…?
ರಾಜಕಾರಣಿಗಳ ಉಪವಾಸ ನಗೆಪಾಟಲಿಗೀಡಾಗುತ್ತದೆ ಎನ್ನುವ ಅನಂತ ಮೂರ್ತಿಯವರು ಹಾಗೆ ಉಪವಾಸ ಸತ್ಯಾಗ್ರಹ ಮಾಡಿ ಮಮತಾ ಬ್ಯಾನರ್ಜಿಯವರು ಟಾಟಾ ಸಮೂಹವು ಸಿಂಗೂರಿನಿಂದ ಕಾಲ್ತೆಗೆಯುವಂತೆ ಮಾಡಿದ್ದನ್ನು  ಒಂದು ಮಾದರಿ ಎಂದು ಬಣ್ಣಿಸುತ್ತಾರೆ. ಮೇಧಾ ಪಾಟ್ಕ ರ್ ಅವರು ನರ್ಮದಾ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಅಣೆಕಟ್ಟನ್ನು ವಿರೋಧಿಸಿ ಹೋರಾಟ ನಡೆಸಿದ್ದನ್ನೂ ಹೊಗಳುತ್ತಾರೆ.

ಆದರೆ,  ಅಂದಿಗೆ ಆ ಹೋರಾಟಗಳ್ಯಾವುವೂ ಸರಕಾರದ ರೀತಿ ನೀತಿ ಧೋರಣೆ ಮತ್ತು ರಾಜಕೀಯದಲ್ಲಿ ಪಳಗಿದ ಮಹಾ ಧುರೀಣರ ಕಪ್ಪು ಹಣದ ಬಂಡವಾಳವನ್ನೇ ಪ್ರಶ್ನಿಸುವಂಥ  ದೊಡ್ಡ ಹೋರಾಟ ಅದಾಗಿರಲಿಲ್ಲ ಎಂಬುದನ್ನು  ಅನಂತ ಮೂರ್ತಿ ಹೇಳಲು  ಮರೆಯುತ್ತಾರೆ.  ಆದ್ದರಿಂದ, ಸರ್ಕಾರ ಮಮತಾ, ಮೇಧಾ ಅವರ ಹೋರಾಟದಲ್ಲಿ ತನಗೇನೂ ಹಾನಿಯಿಲ್ಲವೆಂದು  ತೆಪ್ಪಗಿತ್ತು. ಇದೀಗ  ತನ್ನ ಬುಡವನ್ನೇ ಪ್ರಶ್ನಿಸಿದಾಗ ಅದು ಪೆಚ್ಚಾಗಿದೆ!  ಸ್ಯಾಡಿಸ್ಟ್ ನಂತೆ ಹಗಲೆಲ್ಲ ಸುಮ್ನನಿದ್ದು ರಾತ್ರೋರಾತ್ರಿ ಹೆಂಗಸರು ಮಕ್ಕಳೆನ್ನದೇ ಸತ್ಯಗ್ರಹ ನಡೆಸುತ್ತ ತೂಕಡಿಸುತ್ತಿದ್ದವರ ಮೇಲೆ ದೌರ್ಜನ್ಯವೆಸಗಿ ಘೊರ ಕೃತ್ಯ ನಡೆಸಿಬಿಟ್ಟಿದೆ…
“ಉಪವಾಸವೇ ಎಲ್ಲವೂ ಅಲ್ಲ.  ನಾವು ಉಪವಾಸವನ್ನು ಮುಖ್ಯವಾಗಿ ಆಚರಿಸಬೇಕಾಗಿರುವುದು ಆತ್ಮ ಸಂಯಮಕ್ಕಾಗಿ ಎಂದು ವಿಶ್ವದಾಚೆಗೂ ತನ್ನ  ಪ್ರಖರತೆ   ಸ್ವರೂಪವನ್ನು ಬೀರಬಲ್ಲ  ಉಪವಾಸವನ್ನು ಸೀಮಿತಗೊಳಿಸಿಬಿಡುವ ಅನಂತ ಮೂರ್ತಿಯವರು,

ಹೀಗೆ ಗಾಂಧೀಜಿ ಮಾಡಿದ ಉಪವಾಸ ಸತ್ಯಗ್ರಹ ಹೋರಾಟವನ್ನೂ ನಾವು ಸಂಶಯದಿಂದ ನೋಡುವಂತೆ ಗೊಂದಲದಲ್ಲಿ ಬೀಳಿಸುತ್ತಾರೆ.  ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಲಯಬೇಕಿರುವುದು ನಮ್ಮ ಪ್ರಾಮಾಣಿಕತೆಯಲ್ಲಿ  ಎಂದು ಅವರು ಹೇಳಿದ್ದರೆ ಒಪ್ಪ ಬಹುದಿತ್ತು.  “ಪ್ರಾಮಾಣಿಕ ಮೌನದಲ್ಲಿ ” ಎನ್ನುತ್ತಾರೆ.  ಗಾಂಧೀಜಿ ಮಾಡಿದ ಸ್ವಾತಂತ್ರ ಹೋರಾಟದಲ್ಲಿ ಅವರೆಂದೂ ತುಟಿ ಬಿಚ್ಚದ ಮೌನಿಗಳಾಗಿ ಸತ್ಯಾಗ್ರಹ ಮಾಡಿದ್ದರೆಂದೇನು?!

ಅಥವಾ ಭ್ರಷ್ಟಾರ ವಿರುದ್ಧ ಹೋರಾಟವೆಂದರೆ ಪ್ರಾಮಾಣಿಕವಾದ ಮೌನವೇನು? ಹಾಗೆಂದರೇನು? ಅದನ್ನು  ಅನಂತ ಮೂರ್ತಿಯವರೇ  ವಿವರಿಸಿಹೇಳಬೇಕು.  ಅವರೇ   ಹಿಂದೊಮ್ಮೆ ಹೇಳಿದಂತೆ  ಅವರಂಥ  ತುಂಬಾ ಬುದ್ಧಿವಂತನ್ನು   ಜ್ಞಾನಿಗಳನ್ನು  ಕನ್ನಡ ಪತ್ರಿಕೆಗಳು ಮಾತ್ರವಲ್ಲ  ನನ್ನಂಥ ಜನಸಾಮಾನ್ಯರೂ ಒಪ್ಪಿಕೊಳ್ಳುವುದಿಲ್ಲ  ಅಲ್ಲವೇ..?

Advertisements

One thought on “ಯಾವುದು ಸಾಚಾ? ಯಾವುದು ಮೋಸ? -ಶ್ರೀಯುತ ಯು.ಆರ್. ಅನಂತಮೂರ್ತಿ ಲೇಖನಕ್ಕೆ ಪ್ರತಿಕ್ರಿಯೆ”

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s