ಚಿತ್ರ ಸಾಹಿತಿ ನಿರ್ದೇಶಕ ನಿರ್ಮಾಪಕ ಸಿ.ವಿ.ಶಿವಶಂಕರ್ ಅವರ ಅಮರ ಗೀತೆಯ ಕಥೆ..


“ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ
ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ…..”
ಈ ಹಾಡು ಕೇಳದ ಕನ್ನಡಿಗರೇ ಇಲ್ಲ; ಸ್ಪಂದಿಸದ ಸಹೃದಯರೇ ಇರಲಿಕ್ಕಿಲ್ಲ. ಈ ಹಾಡು  ಹುಟ್ಟಿದ ಸಮಯದ ಬಗ್ಗೆ ಬರೆಯುವ ಎ.ಆರ‍್. ಮಣಿಕಾಂತ್
ಈ ಹಾಡನ್ನು ಬರೆದ ಚಿತ್ರ ಸಾಹಿತಿ ನಿರ್ದೇಶಕ ಸಿ.ವಿ.ಶಿವಶಂಕರ‍್ ಅವರ ಅನುಭವವನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ.(ವಿ.ಕ. ೨೦ ಜನವರಿ ೨೦೧೧).
ಕೂಡಲ ಸಂಗಮ-ಕೃಷ್ಣಾ ಮತ್ತು ಮಲಪ್ರಭಾ ನದಿ ಸಂಗಮಿಸುವ ಕ್ಡೇತ್ರ. ಬಸವಣ್ಣನವರು ಈ ಎರಡು ನದಿಗಳು ಸಂಗಮಿಸುವಲ್ಲಿಯೇ ನೀರಿನಲ್ಲಿ ಸಶರೀರ ಇಹತ್ಯಾಗ ಮಾಡಿದರೆಂದು ಪುರಾಣೇತಿಹಾಸ ಹೇಳುತ್ತದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿರುವ ಈ ಕೂಡಲಸಂಗಮ ಕ್ಷೇತ್ರವನ್ನು ವಿಶಿಷ್ಟ ರೀತಿಯ ಆಧುನಿಕ ವಾಸ್ತು ಶಿಲ್ಪ ದಲ್ಲಿ ಸಂರಕ್ಸಿಸಲಾಗಿದೆ. ಜೀವಿತದಲ್ಲಿ ಒಮ್ಮೆ ಸಂದರ್ಶಿಸಬೇಕಾದ ಸ್ಥಳವಿದು. ಇತ್ತೀಚೆಗೆ ಆ ಸದವಕಾಶ ನನ್ನ ಪ್ರವಾಸದಲ್ಲಿ ಲಭಿಸಿತ್ತು….

೭೦ರ ದಶಕದಲ್ಲಿ  ಶಿವಶಂಕರ್ ಅವರು “ಕೂಡಲ ಸಂಗಮ” ಎಂಬ ಸಿನಿಮಾ ನಿರ್ಮಾಣ ನಿರ್ದೇಶನದ ಕನಸು ಕಂಡಿದ್ದರಂತೆ.  ಕೂಡಲ ಸಂಗಮ ಕ್ಷೇತ್ರದ ಸುತ್ತಮುತ್ತ ಷೂಟಿಂಗ್ ಮಾಡುವ ಉದ್ದೇಶದಿಂದ ಆ ಲೋಕಷನ್ ನೋಡಿಕೊಂಡು ಬರಲು ಕಾರಿನಲ್ಲಿ ತಮ್ಮ ತಂಡದೊಂದಿಗೆ ಹೋಗುತ್ತಾರೆ.  ದಾರಿಯಲ್ಲಿ ಕಾರಿನ ಟೈಯರ‍್ ಪಂಕ್ಚರ‍್ ಆಗುತ್ತದೆ.  ಸ್ಟೆಪ್ನಿ ಇರಲಿಲ್ಲವಾಗಿ ಅಲ್ಲೇ ಸೈಕಲ್ ಷಾಪ್ ಒಂದರಲ್ಲಿ ಪಂಕ್ಷರ‍್ ಹಾಕಿಸಕೊಂಡು ಮುಂದೆ ಪ್ರಯಾಣ ಬೆಳೆಸಿದರೆ, ಕೂಡಲ ಸಂಗಮ ಕ್ಷೇತ್ತ ಇನ್ನೇನು ಇನ್ನರ್ಧ ಕಿ.ಮೀ ದೂರವಿದೆ ಎನ್ನುವಾಗ ಮತ್ತೆ  ಎರಡನೇ ಬಾರಿ ಕಾರಿನ ಟೈಯರ‍್ ಪಂಕ್ಷರ‍್ ಆಗಬೇಕೇ… ಅಂತೂ ನಿರಾಶರಾಗದೇ ಅಲ್ಲಿಂದ ನಡೆದೇ ಕೂಡಲ ಸಂಗಮ ತಲುಪಿ ದೇವರ ಎದುರು ಕುಳಿತು ಭಾವುಕರಾಗುತ್ತಾರೆ; ಶಿವಶಂಕರ‍್. ಆ ಕ್ಷಣಗಳಲ್ಲಿ ಅವರು  ಕನ್ನಡ ನಾಡಿನ ಇತಿಹಾಸ ವೈಭವವನ್ನೆಲ್ಲ ನೆನಪಿಸಿಕೊಂಡು, ಮರುಜನ್ಮವೊಂದಿದ್ದದರೆ ಈ ಪುಣ್ಯಭೂಮಿಯಲ್ಲೇ ಹುಟ್ಟಬೇಕೆಂದು ಕೊಂಡಾಗ ಇದ್ದಕ್ಕಿದ್ದಂತೆ ಅವರೊಳಗೇ ಸ್ಫೂರ್ತಿಯಿಂದ ಈ ಹಾಡಿನ ಸಾಲುಗಳು ಹುಟ್ಟಿಬಿಟ್ಟವು ಎನ್ನುತ್ತಾರೆ.
“ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ/ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ..
ಎಂಬ ಪಲ್ಲವಿಯೊಂದಿಗೆ ಒಂದು ಚರಣವನ್ನೂ ಆಗಲೇ ಬರೆದು ಅರ್ಚಕರಿಗೆ  ಆ ಚೀಟಿ ಕೊಟ್ಟು ದೇವರ ಲಿಂಗದ ಮೇಲಿಟ್ಟು ಅರ್ಚನೆ ಮಾಡಿಸಿ ಪಡೆದುಕೊಂಡರಂತೆ..
ಸಿನಿಮಾ  “ಸಂಗಮ” ಎಂಬ ಹೆಸರಿನಲ್ಲಿ ಮಾಡಬೇಕೆಂದು ನಿರ್ಧರಿಸಿದರಂತೆ. ಮುಂದೆ ಹಾಡೇನೋ  ಕನ್ನಡ ನಾಡಿನಾದ್ಯಂತ ಅತ್ಯಂತ ಜನಪ್ರಿಯವಾಯಿತು.  ಕನ್ನಡಿಗರಿಗೆ ಕರ್ಣಾನಂದಕರವಾಗಿ ಮೆಚ್ಚುಗೆ ಗಳಿಸಿತು. ಗ್ರಾಮಫೋನ್ ಕಂಪೆನಿಯವರು ಅದನ್ನು ಧ್ವನಿ ಮುದ್ರಿಸಿ ಹಣ ಮಾಡಿಕೊಂಡರು.  ಗುಲ್ಬಾರ್ಗದ ಆರ್ಕೆಸ್ಟ್ರಾ ಗಾಯಕರೊಬ್ಬರು ರೇಡಿಯೋ, ಮತ್ತು ಸಾಂಸ್ಕೃತಿಕ ಸಮಾರಂಭಗಳಲ್ಲಿ ಈ ಹಾಡನ್ನು ಹಾಡಿ ಅದರಿಂದಲೇ ಹಣ ಮಾಡಿ ಮನೆಕಟ್ಟಿಕೊಂಡರು.  ಮನೆಗೆ “ಸಿರಿವಂತ”  ಎಂದೇ ಹೆಸರಿಟ್ಟರು.
ಆ ಗಾಯಕ ಮುಂದೊಮ್ಮೆ ಕವಿ ಸಿ.ವಿ.ಶಂಕರ‍್ ಅವರನ್ನು ಭೇಟಿ ಮಾಡಿ ಕೃತಜ್ಞತೆಯನ್ನೂ ಸಲ್ಲಿಸದರು.
ಆಗ ಶಿವಶಂಕರ‍್ ಎಂದರಂತೆ-  ನನ್ನ  ಹಾಡಿನ ಮೊದಲ ಸಾಲಿನಂತೆ ನೀವು ಸಿರಿವಂತರಾದಿರಿ. ಎರಡನೇ ಸಾಲಿನಂತೆ ನಾನು ಬಡವನಾದೆ ಎಂದು  ವಿಷಾದದ ನಗೆ ನಕ್ಕರಂತೆ.
ಹೀಗೆ ನನ್ನ ಹಾಡು ಅಮರವಾಯಿತೇ  ಹೊರತು ನನ್ನ ಸಿನಿಮಾ ಕನಸು ನನಸಾಗಲಿಲ್ಲ. ಹಾಡು ಹಾಡಿದವರು ಸಿರಿವಂತರಾದರಷ್ಟೇ…
ನನ್ನ ಹಾಡಿಗೆ ಯಾರೊಬ್ಬರಿಂದಲೂ  ಸಂಭಾವನೆ ಬರಲಿಲ್ಲ. ನನ್ನ ಈ ಹಾಡಿನ ಸಿನಿಮಾ ಕೆಲಸ ಆರಂಭಗೊಳ್ಳಲೆ ಇಲ್ಲ!
ಹಾಡನ್ನು ಹೇಗಾದರೂ ಮಾಡಿ ಚಿತ್ರಿಸಿ ಕನ್ನಡಿಗರಿಗೆ ತೋರಿಸಲೇಬೇಕೆಂಬ ಛಲದಿಂದ ಮತ್ತೆ ಎರಡನೇ ಬಾರಿ “ಕನ್ನಡ ಕುವರ” ಎಂಬ  ಸಿನಿಮಾ ಮಾಡಿದರೂ ಅದು ಡಬ್ಬದಲೇ ಕೂತಿದೆ.  ಅದಕ್ಕೆ ಕರ್ನಾಟಕ ಸರ್ಕಾರದ ಅನುಗ್ರಹವಾಗಬೇಕೆನ್ನುತ್ತಾರೆ.  ನಮ್ಮ ನಾಡಿನ  ಜನತೆ ಈ ಮಹಾನ್ ಚಿತ್ರ ಸಾಹಿತಿ ಮತ್ತು ನಿರ್ಮಾಪಕ ಸಿ.ವಿ.ಶಿವಶಂಕರ‍್ ಅವರಿಗೆ ನೆರವು ನೀಡಬೇಕೆಂದೂ ಕರೆನೀಡಿದ್ದಾರೆ. (ಶಿವಶಂಕರ‍್ ಅವರ ಮೊಬೈಲ್  ನಂ. ೯೯೦೧೮ ೦೪೦೦೬)
ಇದನ್ನು ಓದಿದ ಕನ್ನಡಿಗರಾದ ನಮಗೆ ತೀವ್ರ ಸಂಕಟವಾಗುತ್ತದೆ. ಅಲ್ಲಾ ದೊಡ್ಡವರ ಬದುಕಿನಲ್ಲಿ ವಿಧಿ ಹೇಗೆ ಆಟವಾಡುತ್ತದೆ  ಅದರ ವಿಪಯಾರ್ಸ ನೋಡಿ!  ಕೂಡಲ ಸಂಗಮ ಸಿನಿಮಾ ಮಾಡಬೇಕೆಂದು ಸಂಗಮ ಕ್ಷೇತ್ರಕ್ಕೆ ಹೊರಟ  ದಾರಿಯಲ್ಲಿ ಅವರ  ಅಂಬಾಸಿಡರ‍್ ಕಾರು ಎರಡು ಬಾರಿ ಪಂಕ್ಚರ‍್ ಆಗುತ್ತದೆ.
ಅವರು ಎರಡು ಬಾರಿ ತಮ್ಮ ಈ ಅಮರ ಗೀತೆಯನ್ನು ಚಿತ್ರಿಸಿ  ಸಿನಿಮಾ ಮಾಡಬೇಕೆಂದು ಪ್ರಯತ್ನ ಪಡುತ್ತಾರೆ.  ಹಾಗೇ  ಅವರ ಎರಡೂ ಪ್ರಯತ್ನಗಳೂ ಪಂಕ್ಚರ‍್ ಆಗಿಹೋಗಬೇಕೇ..

ಏನೇ ಆಗಲಿ, ಅಂದು ಸಂಗಮ ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ ಅಪಶಕುನವಾಯಿತೆಂದು ಶಿವಶಂಕರ‍್ ಅವರು ಹಿಂಜರಿದಿದ್ದರೆ, ಅಥವಾ ನಿರುತ್ಸಾಹದಿಂದ  ಕುಗ್ಗಿ ಹೋಗಿದ್ದರೆ  ಅವರ ತಲೆಯಲ್ಲಿ ಈ ಹಾಡು ಮೂಡದೇ ಹೋಗಿದ್ದರೆ, ಅಂಥ ಅದ್ಭುತ ಹಾಡು ಕನ್ನಡಿಗರಿಗೆ ದೊರಕುತ್ತಿತ್ತೇ..? ಶಿವಶಂಕರ‍್ ಅವರಂಥ ಮಹಾನ್ ಕಲಾವಿದರು ತಮ್ಮ ಕಲೆಗಾಗಿ ತಮ್ಮನ್ನೇ ಅರ್ಪಿಸಿಕೊಂಡು ದುಡಿಯುತ್ತಾರೆ, ಅವರ ಆತ್ಮ ಸ್ಥೈರ್ಯ ಮತ್ತು ಆದರ್ಶಗಳು ಎಂದಿಗೂ ನಮ್ಮ ಯುವಪೀಳಿಗೆಯನ್ನು  ಯಾವತ್ತೂ  ಚೈತನ್ಯ ಶಾಲಿಗಳಾಗಿರುವಂತೆ ಮಾಡುತ್ತವೆಯಲ್ಲವೇ…?
ಅಂದಹಾಗೆ ಸಿ.ವಿ.ಶಿವಶಂಕರ‍್ ಅವರದು ಇಂದಿಗೂ ಸುಮ್ಮನೆ ಕುಳಿತುಕೊಳ್ಳವ ಜೀವ  ಅಲ್ಲ.  ಅವರ ಎರಡು ಸಿನಿಮಾಗಳು-
“ಶ್ರೀ ಶನೇಶ್ವರ ಕಲ್ಯಾಣ”  ಇನ್ನೊಂದು  “ಗಗನ ಸಖಿ”  ಇದೀಗ ಹೊಸ ವರ್ಷ ೨೦೧೧ ರಲ್ಲಿ ಮಾರ್ಚ  ಮತ್ತು ಸೆಪ್ಟೆಂಬರ‍್ ನಲ್ಲಿ ತೆರೆ ಕಾಣಲಿವೆ.
ಅವರಿಗೆ ಈಗಲಾದರೂ ಶನೀಶ್ವರ ದೂರವಾಗಬೇಕು. ಕೂಡಲ ಸಂಗಮ ದೇವ ಕೃಪೆತೋರಬೇಕು (ಸರ್ಕಾರ ಕಣ್ತೆರೆಯುವಂತಾಗಬೇಕು) ಎಂದು ಕನ್ನಡಿಗರಾದ ನಾವು ಹಾರೈಸೋಣ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s