ಸ್ವಾಮಿ ವಿವೇಕಾನಂದರ ಜನ್ಮದಿನ- ರಾಷ್ಟ್ರೀಯ ಯುವ ದಿನ


ಭಾರತ ಸರಕಾರ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಘೋಷಿಸಿ ಆಚರಣೆಗೆ ತಂದಿರುವುದು ಸಂತೋಷದ ಸಂಗತಿ. ನಮ್ಮದೇಶವೇ ಹೆಮ್ಮೆಪಡುವಂತ ಮಹಾನ್ ಸಂತ ಮತ್ತು ರಾಷ್ಟ್ರಪ್ರೇಮಿ ಅವರು. ಸ್ವಾಮಿ ವಿವೇಕಾನಂದರಿಂದ ಸ್ಪೂರ್ತಿ ಪಡೆಯದಿರುವ ಯುವಜನರೇ ಇಲ್ಲವೆಂದರೆ ಉತ್ಪ್ರೇಕ್ಷೇಯಾಗಲಾರದು. ನಮ್ಮ ಹಿರಿಯ ಸಾಹಿತಿಗಳು ಮತ್ತು ಕಲಾವಿದರು ಆದಿಯಾಗಿ ಇಂದಿನ ಯುವ ಪೀಳಿಗೆಯಲ್ಲೂ ಸ್ವಾಮಿವಿವೇಕಾನಂದರ ವಾಣಿಯಿಂದ ಪ್ರಭಾವಿತರಾದವರೇ ಎಲ್ಲೆಲ್ಲೂ ಕಾಣಸಿಗುವರು. ಸೂರ್ಯ ಚಂದ್ರರಿರುವವರೆಗೂ ಸ್ವಾಮಿ ವಿವೇಕಾನಂದರ ಸ್ಮರಣೆಯೊಂದಿಗೇ ಅವರ ಆಧ್ಯಾತ್ಮಿಕ ಚಿಂತನೆಗಳು ವಿಶ್ವದ ಎಲ್ಲೆಡೆ  ಮಾನವ ಜನ್ಮೋನ್ನತಿಗೆ ಮಾರ್ಗದರ್ಶನ ನೀಡುತ್ತಲೇ  ಇರುತ್ತವೆ. ಮನುಷ್ಯ ಆತ್ಮವಿಶ್ವಾಸದಿಂದ ಮಾನಸಿಕ ದೃಢತೆ ಮತ್ತು ದೈಹಿಕ ಸಬಲತೆಯನ್ನು ಸಾಧಿಸಲು ವಿವೇಕಾನಂದರು ನೀಡುವ ಆಧ್ಯಾತ್ಮಿಕ ಚಿಂತನೆಗಳು ತುಂಬ ಸರಳವಾಗಿವೆ. ಜಟಿಲವಾದ ಬ್ರಹ್ಮರಹಸ್ಯಗಳೇನೆ ಇರಲಿ ಎಳೆ ಎಳೆಯಾಗಿ ಬಿಡಿಸಿ ಹೇಳುವ ಅವರ ಪರಿ ವಿಭಿನ್ನ ರೀತಿಯಲ್ಲಿ ಎಂತಹ ಪಾಮರರನ್ನೂ ಆಕರ್ಷಿಸುತ್ತವೆ; ಪರಮ ಪಾಪಿಗಳೂ ಆತ್ಮವಿಮರ್ಶೆಮಾಡಿಕೊಳ್ಳುವಂತೆ ಮಾಡುತ್ತವೆ.
“ದೌರ್ಬಲ್ಯವೇ ಪಾಪ. ದೌರ್ಬಲ್ಯವೇ ಮರಣ.  ವ್ಯಕ್ತಿ ತಾನು ದುರ್ಬಲನೆಂದು ಭಾವಿಸಬಾರದು. ತನ್ನ ದೌರ್ಬಲ್ಯವನ್ನು ಗೆಲ್ಲುವುದರಿಂದ ಏನೆಲ್ಲವನ್ನೂ ಸಾಧಿಸಬಹುದು. ತನ್ನ ಆತ್ಮವಿಶ್ವಾಸದಿಂದ ಎದ್ದು ನಿಲ್ಲಬೇಕು; ತನ್ನೊಳಗಿರುವ ದೈವಿಕತೆಯನ್ನು ಹೊರಚಿಮ್ಮಬೇಕು…” ಎಂಬ ಅವರ ವಾಣಿ ಎಂಥವರನ್ನೂ  ಚಿಂತನೆಗೀಡು ಮಾಡುತ್ತವೆ;  ತಮ್ಮ ಆತ್ಮೋನ್ನತಿಯನ್ನು ತಾವೇ ಕಂಡುಕೊಳ್ಳುವಂತೆ ಮಾಡುತ್ತವೆ.
ಪರಮ ಪಾಪಿಗಳಿಗೂ ಇಲ್ಲಿ ಮತ್ತೆ ಮನುಷ್ಯರಾಗಲು ಅವಕಾಶಗಳಿವೆ ಎಂಬ ಭಗವದ್ಗೀತೆಯ ನುಡಿಯನ್ನು ನೆನಪಿಸುವ ಸ್ವಾಮೀಜಿಯವರು, “ಶ್ರೀ ಕೃಷ್ಣನನ್ನು  ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ” ಎನ್ನುತ್ತಾರೆ.
ಹೌದು, ಶ್ರೀಕೃಷ್ಣ ವಿಲಾಸ ಪ್ರಿಯ, ವಿಚಾರ ಪ್ರಿಯ,  ವಿಶಿಷ್ಟ ವೇದಾಂತ ಸ್ವರೂಪನೇ ಅವನು. ಅವನನ್ನು ಅರ್ಥಮಾಡಿಕೊಳ್ಳಬೇಕಾದರೆ, ಮನುಷ್ಯನಾದವನಲ್ಲಿ ಅತೀವ ವ್ಯಾಕುಲಭಾವ ಸ್ಫರಿಸಬೇಕು, ಆತ್ಮಚೇತನ ಅನಿತ್ಯ ಚಿಂತನೆಯಲ್ಲಿ ಲೀನವಾಗಬೇಕು. ಸ್ವಾಮಿ ವಿವೇಕಾನಂದರ ವಿವೇಕವಾಣಿಗಳು  ಎಲ್ಲ ವೇದಾಂತ ತತ್ವಗಳ ಒರೆಗಲ್ಲಿನ ಮೇಲೇ ನಿತ್ಯ ಜೀವನ ಸಿದ್ಧಾಂತಗಳಿವೆ ಎಂಬುದನ್ನು ತೆರೆದು ತೋರುತ್ತವೆ.  ಅವು ನಮ್ಮ ಬದುಕಿನ ಸಂಕಷ್ಟಗಳನ್ನು ಎದುರಿಸುವ ಶಕ್ತಿ ನಮ್ಮ ಆಂತರ್ಯದಲ್ಲೇ ಇದೆ ಎಂಬುದನ್ನು ತಿಳಿಸುತ್ತವೆ.
ನಮ್ಮ ಜನ ಮೊದಲು ವಿದ್ಯಾವಂತರಾಗಬೇಕು, ಸುಸಂಸ್ಕೃತರಾಗಬೇಕು.  ಪ್ರತಿಯೊಬ್ಬನ ಶಿಕ್ಷಣ ಮಾತೃಭಾಷೆಯಿಂದಲೇ ಆರಂಭವಾಗಬೇಕು. ವಿದ್ಯಾವಂತನಾಗುವುದೆಂದರೆ ಉದ್ಯೋಗಸ್ಥನಾಗುವುದಕ್ಕೆ  ಒಳ್ಳೆಯ ಸಂಪಾದನೆ ಮಾಡುವುದಕ್ಕೆ ಎಂಬ ಭಾವನೆಯೇ ಬೇರೂರಿರುವ ಇಂದಿನ ಕಾಲಮಾನದಲ್ಲಿ ನಾವಿದ್ದೇವೆ…  ಸ್ವಾಮಿ ವಿವೇಕಾನಂದರ ವಾಣಿಯಿಂದ ನಮ್ಮ ಯುವ ಜನತೆ  ಮೊದಲು  ಎಚ್ಚೆತ್ತುಕೊಳ್ಳಬೇಕು. ವಿವೇಕಾನಂದರು ವ್ಯಕ್ತಿ ವಿದ್ಯಾರ್ಜನೆ ಮಾಡುವುದರ ಮೂಲ ಉದ್ದೇಶವೇನೆಂದರೆ ತನ್ನೊಳಗಿರುವ ದೈವತ್ವವನ್ನು ಪ್ರಕಾಶಗೊಳಸಿವುದು ಎನ್ನುತ್ತಾರೆ.  ಹೌದು, ಮಾನವತೆಯ ಅಳತೆಗೋಲೊಂದಿದ್ದರೆ ಅದು ದೈವತ್ವವಲ್ಲದೇ ಇನ್ನೇನು! ಇಂದು ನಾವು ಕಂಡು ಕೇಳುತ್ತಿರುವುದೇನು? ವಿದ್ಯಾವಂತರಾದವರಲ್ಲೇ ಮೂರ್ಖರ ಸಂಖ್ಯೆ ಹೆಚ್ಚುತ್ತಿರುವುದು. ಅಂಥವರಲ್ಲಿ ವಿದ್ಯೆಯಿಂದ ವಿನಯ ನಮ್ರತೆ ಹೆಚ್ಚುವುದರ ಬದಲು ಅಹಂಕಾರದ ಅಂಧಕಾರವೇ ಮೈಮನವನ್ನೆಲ್ಲಾ ಮುಸುಕಿ ಅವರ ಸರ್ವನಾಶಕ್ಕೆ ಕಾರಣವಾಗುತ್ತಿರುವುದು. ಅದಕ್ಕೆ ಕಾರಣವೆಂದರೆ, ಅವರ‍್ಯಾರೂ ವಿದ್ಯೆಯ ನಿಜವಾದ ಅರ್ಥವನ್ನೇ ಅರಿಯದವರು, ಕೇವಲ ದೊಡ್ಡ ಮೊತ್ತದ ಸಂಪಾದನೆಯಿಂದ ಮದೋನ್ಮತ್ತರಾದವರಷ್ಟೇ, ಅಂಥವರಲ್ಲಿ ತಮ್ಮನ್ನು ಹೆತ್ತ ತಂದೆ ತಾಯಿಯವರನ್ನೂ ಹೇಯವಾಗಿ ನಡೆಸಿಕೊಳ್ಳುತ್ತಿರುವವರಿಗೇನೂ ಕಡಿಮೆಯೇನಿಲ್ಲ.  ಸ್ವಾಮಿವಿವೇಕಾನಂದರು ವಿದ್ಯೆಯ ಮಹತ್ವವನ್ನು ಜಗತ್ತಿಗೇ ತಮ್ಮ ಆಧ್ಯಾತ್ಮಿಕ ಸಂವಹನದಿಂದಲೇ ನಿವೇದನೆ ಮಾಡಿದವರು. ಅವರು ಎಲ್ಲ ಜನ ಸಮಾನ್ಯರ ಸಂಕಟಗಳಿಗೆ ಸ್ಪಂದಿಸಿದ ಹೃದಯವಂತಿಕೆಯ ದೊಡ್ಡ ಮಾನವತಾವಾದಿ. ನಮ್ಮ ರಾಷ್ಟ್ರ ಪ್ರೇಮಿ ಮಾತ್ರವಲ್ಲ; ವಿಶ್ವಪ್ರೇಮಿಯವರು.

ತಾವು ಕಲಿತ ವಿದ್ಯೆಯಿಂದಲೆ ಸಂಪತ್ತಿನ ಸೂರೆಯೊಡೆಯುತ್ತಿದ್ದೇವೆಂದು ಮತ್ತರಾಗಿರುವ ಮೂರ್ಖ ವಿದ್ಯಾವಂತರು ಎಚ್ಚೆತ್ತುಕೊಳ್ಳಬೇಕು.  ಸ್ವಾಮೀಜಿ ಹೇಳುತ್ತಾರೆ: “ಸುಖಕ್ಕಿಂತ ದುಃಖವೇ, ಐಶ್ವರ್ಯಕ್ಕಿಂತಲೂ ದಾರಿದ್ರ‍್ಯವೇ, ಹೊಗಳಿಕೆಗಿಂತಲೂ ಪೆಟ್ಟುಗಳೇ ಮನುಷ್ಯನಲ್ಲಿ ಅಡಕವಾಗಿರುವ ಅಂತರಾಗ್ನಿಯನ್ನು ಹೊರಗೆಡಹುದು ಎಂದು ದೈರ್ಯವಾಗಿ ಹೇಳುತ್ತೇನೆ”

ಸಾಮಾನ್ಯವಾಗಿ ಎಲ್ಲ ತಂದೆ ತಾಯಿಗಳು ತಾವು ಕಷ್ಟಪಟ್ಟು ಗಳಿಸಿದುದನ್ನೆಲ್ಲಾ ಧಾರೆ ಎರೆದು ತಮ್ಮ ಮಕ್ಕಳಿಗೆ ಏನೂ ಕಷ್ಟವೇ ಅರಿವಾಗದಂತೆ ಅವರನ್ನು ಸಾಕಿ ಸಲಹಿ ಅವರಿಗೆ ಉನ್ನತ ಶಿಕ್ಷಣ ಕೊಡಿಸುತ್ತಾರೆ.  ಅವರೋ ತಮ್ಮ ಬುದ್ಧಿವಂತಿಕೆಯ ಮಾತ್ರದಿಂದಲೇ  ತಾವು ಚೆನ್ನಾಗಿ ಓದಿ ಮುಂದೆ ಬಂದಿದ್ದೇವೆಂದು ಬೀಗುತ್ತಾರೆ.  ಆ ಬದ್ಧಿವಂತಿಕೆಯಾದರೋ ತಮ್ಮನ್ನು ಹೆತ್ತವರ ವಂಶವಾಹಿನಿಯಿಂದಲೇ ಬಂದುದೆಂಬುದನ್ನೂ ಮರೆಯುತ್ತಾರೆ ಅಲ್ಲವೇ…?
ವಿಶ್ವ ಕವಿ ರವೀಂದ್ರನಾಥ ಠಾಕೂರರು ಸ್ವಾಮಿವಿವೇಕಾನಂದರ ಬಗ್ಗೆ ಹೀಗೆ  ಹೇಳುತ್ತಾರೆ-  ನೀವು ಭಾರತವನ್ನು ಅರಿಯಬೇಕೆಂದರೆ ಸ್ವಾಮಿ ವಿವೇಕಾನಂದರನ್ನು  ಅಧ್ಯಯನ ಮಾಡಿ.  ಅವರಲ್ಲಿ ಎಲ್ಲವೂ ರಚನಾತ್ಮಕವಾದುದಾಗಿದೆ. ನೇತಾತ್ಮಕವಾದದ್ದು ಯಾವುದೂ ಇಲ್ಲ” ಎಂಬುವ ಈ ಮಾತನ್ನು  ನಾವು ಗಮನಿಸಬೇಕು.

ಹೌದು, ಶ್ರೀ  ಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆ ಓದಬೇಕು. ಭಾರತವನ್ನು ಅರಿಯಬೇಕೆಂದರೆ ಸ್ವಾಮಿ ವಿವೇಕಾನಂದರನ್ನು ಅಭ್ಯಸಿಸಬೇಕು. ಅವರು  ಯಾವೊಬ್ಬ ಸಂತರಿಗೂ ಸಾಟಿಯಲ್ಲ; ಅವರಿಗೇ ಅವರೇ ಸಾಟಿ. ಅವರೊಬ್ಬ ಸಂತ ಮಾತ್ರವಲ್ಲ; ಭೂಮಿಗಿಳಿದು ಬಂದ ಭಗವಂತ ಎಂದರೂ ಸರಿಯೇ.  ಸ್ವಾಮಿ ವಿವೇಕಾನಂದ ಅವರ  ಆಧ್ಯಾತ್ಮಿಕತೆಯಲ್ಲಿ ಮತ್ತು ವಿವೇಕವಾಣಿಯಲ್ಲಿ ನಮ್ಮ ಯುವ ಜನತೆಯಲ್ಲಿ ಎಚ್ಚೆತ್ತುಕೊಳ್ಳುವವರು ಎಚ್ಚೆತ್ತುಕೊಳ್ಳತ್ತಲೇ ಇದ್ದಾರೆ.  ತಾವು ವಿದ್ಯಾವಂತರು ಬುದ್ಧಿವಂತರು ತಮಗೆ ಯಾವ ಬೋಧನೆಗಳೂ ಚಿಂತನೆಗಳೂ ಬೇಕಿಲ್ಲ; ಹೆತ್ತವರಿರಲಿ ಮತ್ತೆ ಯಾರೇ ಇರಲಿ ಅವರ ಬುದ್ಧಿವಾದಗಳೇನೂ ತಮಗೆ ರುಚಿಸುವುದಿಲ್ಲ; ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುತ್ತೇವೆ ಎಂದೇ ಸುಮ್ಮನೆ ಬೀಗುತ್ತಾ ವಾದಿಸುವವರೂ ಇದ್ದಾರಲ್ಲ!
ಸ್ವಾಮಿ ವಿವೇಕಾನಂದರೂ ಸಹ ಹೇಳುತ್ತಾರೆ- ನಿಮ್ಮ ಅದೃಷ್ಟವನ್ನೂ ನೀವೇ ಸೃಷ್ಟಿಸಬಲ್ಲಿರಿ”  ಅದು ಹೇಗೆಂಬುದನ್ನು ತಿಳಿಯಬೇಕೇ….ನಮ್ಮ ಎಲ್ಲ ಅಜ್ಞಾನ ಮತ್ತು ಅಹಮಿಕೆಯನ್ನು ದೂರವಿಟ್ಟು ಅವರನ್ನು ಅರಿಯುವ ಪ್ರಯತ್ನವನ್ನಾದರೂ ನಾವು ಮಾಡಬೇಕಲ್ಲವೇ…?

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s