೫೪ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಕನ್ನಡ…..


ಇಂದು ನಮ್ಮ ಕನ್ನಡ ನಾಡು ೫೪ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಈ ನಮ್ಮ ನಾಡ ಉತ್ಸವ ಈ ಒಂದು ದಿನಕ್ಕಷ್ಟೇ ಸೀಮಿತವಾಗಿಬಿಡುತ್ತದೆ ಎಂಬ ಅಪಸ್ವರವನ್ನು ತೊಡೆದುಹಾಕಲೆಂದೇನೊ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಸಮಿತಿಯು ನ.೧ ರಿಂದ ಮುಂದಿನ ವರ್ಷ ನ.೧ರವರೆಗೆ “ಕನ್ನಡ ಉಳಿಸಿ ವರ್ಷಾಚರಣೆ” ಹಮ್ಮಿಕೊಂಡಿದೆ. ಬೆಂಗಳೂರಿನ ಮೈಸೂರು ವೃತ್ತದಲ್ಲಿ ನೃಪತುಂಗ ಮಂಟಪ ನಿರ್ಮಿಸಿ ಆಚರಣೆಗೆ ಚಾಲನೆ ನೀಡಿ, ನವೆಂಬರ‍್ ಪೂರ್ತಿ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಹಾಗೂ ರಾಜ್ಯದಾದ್ಯಂತ ವರ್ಷವಿಡೀ ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ನಿಜಕ್ಕೂ ಇದೊಂದು ವಿಶೇಷ, ನಮ್ಮ ನಾಡಿನ ಕನ್ನಡ ಜನತೆಯನ್ನೆಚ್ಚರಿಸುವ ಅವರೆಲ್ಲ ಕನ್ನಡದ ಬಗ್ಗೆ ಮತ್ತೆ ಹೆಮ್ಮೆ ಪಡವಂತೆ ಪುನರ‍್ ಪ್ರಯತ್ನಿಸುವುದು ಕನ್ನಡಾಭಿಮಾನಿಗಳ ಮಹತ್ವದ ಕೆಲಸವೇ ಸರಿ. ಹಿರಿಯರು ಕನ್ನಡದತ್ತ ಹಿನ್ನೋಟ ಹರಿಸಬೇಕು, ತಮ್ಮ ಮಕ್ಕಳಿಗಾಗಿ ಅವರ ಭವಿಷ್ಯದ ದೃಷ್ಟಿಯಿಂದ ಮುಂದಾಲೋಚನೆ ಮಾಡಬೇಕು. ಆ ಪುಟ್ಟಮಕ್ಕಳು ತಮ್ಮ ಬಟ್ಟಲು ಕಂಗಳನ್ನು ತೆರೆದು ಕನ್ನಡದಲ್ಲಿ ಬಾಲ್ಯದಿಂದಲೇ ಆಸಕ್ತಿಯಿಂದ ಓದುವಂತಾಗಬೇಕು.

ಹೌದು, ಯಾವುದೇ ವಿದ್ಯೆಯ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೆ ಆಗಬೇಕು. ಕಾಲ ಬದಲಾಗಿದೆ ಕನ್ನಡದೊಂದಿಗೆ ಇಂಗ್ಲೀಷ್ ಇರಲಿ. ಆದರೆ, ಇಂಗ್ಲೀಷ್ಷೇ ಮುಖ್ಯವೆನಿಸಿ ಅದು ಕನ್ನಡವನ್ನುನುಂಗಿ ನಮ್ಮಕನ್ನಡದ ಕಂದಮ್ಮಗಳಿಗೆ  ಮಾತೃಭಾಷೆಯಿಂದ ನೇರವಾಗಿ ಉಂಟಾಗುವ ಅಮೂಲ್ಯ ಜ್ಞಾನರ್ಜಾನೆಯಿಂದ ವಂಚಿತರನ್ನಾಗಿಸದಿರಲಿ. ನಮ್ಮ ಮಾತೃಭಾಷೆಯಿಂದಲೇ ಆರಂಭವಾಗುವ ಜ್ಞಾನಾರ್ಜನೆಗಿಂತ ಮಿಗಿಲಾದುದು ಬೇರೆ ಇನ್ನೊಂದರಿಂದ ಸಾಧ್ಯವಿಲ್ಲವೆಂಬುದು ಅವರಿಗೆ ತೀರ ತಡವಾಗಿ ತಿಳಿದರೆ ಪಶ್ಚಾತ್ತಾಪಪಡಬೇಕಾದೀತು!!

“ಕನ್ನಡ ಕಣ್ಮರೆಯಾಗುತ್ತಿದೆ” ಎಂಬ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ.
ಇಲ್ಲ, ಹಾಗೆಂದಿಗೂ ಆಗಲಾರದು. ಹಾಗೆ ಒಂದೆಡೆ ಕಂಡು ಬರುತ್ತಿದ್ದರೂ ಅದು ಇನ್ನೊಂದೆಡಯಿಂದ ಪುನರ‍್ ಉತ್ಥಾನವಾಗುತ್ತಲೇ ಇರುತ್ತದೆ.
“ಓ ಕನ್ನಡಿಗ” ನಿನ್ನ ಉದ್ಧಾರ ನಿನ್ನ ಮಾತೃಭಾಷೆಯಿಂದಲೇ… ನಿನ್ನ ಉದ್ಯೋಗಕ್ಕೆ ಅಷ್ಟಿಷ್ಟು ಇಂಗ್ಲೀಷ್ ಇದ್ದರಾದೀತು. ಆದರೆ, ನಿನ್ನ ಜೀವನ ಚೇತನಕ್ಕೆ, ಕನ್ನಡವನ್ನೇ ಮೊದಲ ಉಸಿರಾಗಿ ಕಂಡ ನಿನ್ನ ಜನ್ಮಪಾವನವಾಗಲಿಕ್ಕೆ ಕನ್ನಡವೇ ಬೇಕು,
ಅಂತೆಯೆ, ಕನ್ನಡವ ಮರೆಯದಿರು ಎಂಬ ಧ್ವನಿಯೂ ಮತ್ತೆ ಮತ್ತೆ ಮೊಳಗುತ್ತಲೇ ಇರುತ್ತದೆ.

ನಮ್ಮಲ್ಲಿ ಕನ್ನಡ ಕಲಿತರೆ ಹೊಟ್ಟೆ ತುಂಬುತ್ತದೆಯೇ? ಎಂಬ ಪ್ರಶ್ನೆಯೆ ಕೆಲವರಿಗೆ.
ಅಯ್ಯೋ! ಎನಿಸುತ್ತದೆ ಅವರ ಅರ್ಥಹೀನ ಪ್ರಶ್ನೆಗೆ. ನಮ್ಮ ಪುಟ್ಟ ಮಕ್ಕಳು ಬೆಳೆಯುವುದು ಸುತ್ತ ಮುತ್ತ ಕನ್ನಡ ನುಡಿ ಆಡುವರೊಂದಿಗೇ, ಅದೇ ಉಸಿರಾಗಿ ಬೆಳೆದ ಅವು ನೋಡುವುದು ಆಲೋಚಿಸುವುದು ಎಲ್ಲವೂ ಸ್ವಭಾವಿಕವಾಗಿ ಕನ್ನಡದಿಂದಲೇ…. ಅವರನ್ನು ಇಂಗ್ಲೀಷ್ ನಲ್ಲಿ ಪಳಗಿಸಬೇಕು ಮುಂದೆ ಇಂಗ್ಲೀಷ್ ನಲ್ಲೇ ಪಂಡಿತರನ್ನಾಗಿಸಬೇಕೆಂಬ ಹುನ್ನಾರವುಳ್ಳ ತಂದೆ ತಾಯಿಯರೆಷ್ಟೇ ತಿಪ್ಪರಲಾಗ ಹಾಕಿದರೂ ಅವರು ಮುಂದೆ ಇತ್ತ ಇಂಗ್ಲೀಷ್ ಇಲ್ಲ ಅತ್ತ ಕನ್ನಡವೂ ಬರೋದೆ ಇಲ್ಲದ ಎಡಬಿಡಂಗಿಗಳಾಗಿಬಿಡುವ ಅಪಾಯವೇ ಹೆಚ್ಚು….
ಇದನ್ನೇಕೆ ಆ ಹಿರಿಯರು ಯೋಚಿಸಲಾರರು..?

ನಾನು ಎಷ್ಟೋ ಸಂದರ್ಭಗಳಲ್ಲಿ ಕೆಲ ವಯಸ್ಸಿಗೆ ಬಂದ ಮಕ್ಕಳನ್ನು ಕನ್ನಡ ಪತ್ರಿಕೆಗಳನ್ನು ಓದಲು ಬರುತ್ತದೆಯೇ ? ಎಂದು ಕೇಳಿದ್ದೇನೆ.
“ಇಲ್ಲ, ಅಂಕಲ್ ಕನ್ನಡ ನನಗೆ ಬರೋದೆ ಇಲ್ಲ, ನಾನು ಓದಿದ್ದೆಲ್ಲ ಕಾನ್ವೆಂಟ್..”
“ಮತ್ತೆ, ನಿಮ್ಮ ಮನೆಯಲ್ಲಿ ಮಾತನಾಡೋದು ಕನ್ನಡ ತಾನೇ…”
“ಹೌದು.”
“ನಿಮ್ಮ ತಂದೆ ತಾಯಿಗಳಿಗೆ ಕನ್ನಡ ಓದಲು ಬರೆಯಲು ಬರುತ್ತದೆ ತಾನೇ..”
“ಓಹ್! ಅವರಿಗೆ ಚೆನ್ನಾಗಿ ಬರುತ್ತದೆ. ನಮ್ಮ ಅಮ್ಮಂತೂ ಕನ್ನಡದ ಕಥೆ ಕಾದಂಬರಿಗಳನ್ನೆಲ್ಲ ಓದ್ತಾರೆ!”
“ಛೇ, ಎಂಥ ಕೆಲಸ ಮಾಡಿದ್ದಾರೆ, ನಿಮಗೆ ಕನ್ನಡ ಕಲಿಸದೇನೇ….”
“ಎಲ್ಲಿ ಅಂಕಲ್ ಅವರಿಗೆ ಟೈಮ್ ಎಲ್ಲಿತ್ತು …”
ನಾನು ಮುಂದೆ ಮಾತು ಬೆಳಸಲಿಲ್ಲ. ಮಾತಾಡಿ ಪ್ರಯೋಜನವೇನಿಲ್ಲ, ಆ ಯುವ ಮನಸ್ಸನ್ನು ಘಾಸಿಗೊಳಿಸಬೇಕಲ್ಲ…! ಅಲ್ಲ, ಎಂಥ  ಮೌಢ್ಯ!    ತಮ್ಮ ಮಕ್ಕಳಿಗೆ ತಮ್ಮ ಮಾತೃಭಾಷೆಯಿಂದಲೇ ದೂರವಿಟ್ಟು ಅದನ್ನು ಕಲಿಸದೇ ಎಂಥ ವಂಚನೆ ಮಾಡುತ್ತಿದ್ದಾರಲ್ಲ ಇವರೆಂಥ ತಂದೆ ತಾಯಿಗಳು! ಮುಂದೊಂದು ದಿನ ಅವರೂ ಪಶ್ಚಾತ್ತಾಪಡ ಪಡದಿರಲಾರರಲ್ಲ…

ಇನ್ನೊಂದು ದಿನ ರಾಜಾಜಿನಗರದ ನಮ್ಮ ಸ್ನೇಹಿತರ ಪುಸ್ತಕದ ಅಂಗಡಿಯಲ್ಲಿ ಕುಳಿತಾಗ ಇದೇ ಕನ್ನಡ ಕಣ್ಮರೆಯಾಗುತ್ತಿರುವ ವಿಷಯ ಪ್ರಸ್ತಾಪವಾಯಿತು.
ಅದೂ ಮುಖ್ಯವಾಗಿ ಐಟಬಿಟಿ ಹುಡುಗ ಹುಡುಗಿಯರು ಕನ್ನಡ ಓದೋದೇ ಇಲ್ಲ ಅಭಿಪ್ರಾಯವೂ ನುಸುಳಿತು. ಆಗ ನಮ್ಮ ಸ್ನೇಹಿತರು ತಮ್ಮ ಕೆಲವು ವರ್ಷಗಳ ಪುಸ್ತಕ ಮಾರಾಟದ ಅನುಭವನ್ನೇ ತೆರೆದಿಟ್ಟು ಹೇಳಿದರು-
“ಸರ‍್, ನೀವು ನಮ್ಮ ಅಂಗಡಿಗೆ ತಪ್ಪದೇ ದಿನವೂ ಬನ್ನಿ ಒಂದು ಹದಿನೈದು ದಿವಸ. ಆಗ ನಿಮಗೇ ಗೊತ್ತಾಗುತ್ತದೆ; ಸಾಫ್ಟ್ ವೇರಿಗಳಲ್ಲೂ ಬಹು ಮಂದಿ ಕನ್ನಡ ಕಥೆ ಕಾದಂಬರಿ ಓದ್ತಾರೆ ಅಂತ….”
ನಾನು ನಂಬುವಸ್ಥಿತಿಯಲ್ಲಿರಲಿಲ್ಲ. ಆದರೆ, ಆಗಾಗ್ಗೆ ಮನೆ ಹತ್ತಿರವೇ ಇರುವ ಅವರ ಅಂಗಡಿ ಹೋಗುವುದನ್ನೂ ಬಿಡಲಿಲ್ಲ. ಕ್ರಮೇಣ ನನಗೇ ಗೊತ್ತಾಯಿತು. ಅವರ ಮಾತು ನಿಜಾಂತ. ಯಾಕೆಂದರೆ, ಅಂಗಡಿ ಬರುತ್ತಿದ್ದವರಲ್ಲಿ ಅಂಥ ಸಾಫ್ಟ್ ವೇರಿಗಳಿದ್ದರೆ ಆತ ಕಣ್ಣು ಮಿಟುಕಿಸಿ ನನ್ನತ್ತ ನೋಡಿ ಖಷಿಯಿಂದ ಬೀಗುತ್ತಿದ್ದರು. ನಾನೂ ಕೂಡ ಆ ಹುಡುಗ/ ಹುಡುಗಿಯರನ್ನು ಮಾತನಾಡಿಸಿ ಅದನ್ನು ಖಚಿತವೆಂದು ಮನಗಾಣುತ್ತಿದ್ದೆ.
ಒಂದ್ಸಲವಂತೂ ಹೀಗಾಯ್ತು….!!
ಸಂಜೆ ಸುಮಾರು ೮ ಗಂ. ಹೊತ್ತಿಗೆ ಒಬ್ಬ ೨೫-೩೦ ರ ಆಸುಪಾಸಿನ ಹುಡುಗ ಬೆನ್ನಮೇಲೆ ಲ್ಯಾಪ್ ಟಾಪ್ ಬ್ಯಾಗ್ ಹೊತ್ತು ಅಂಗಡಿ ಪ್ರವೇಶಿಸಿದ. ಆತ ಭೈರಪ್ಪನವರ ಇತ್ತೀಚಿನ “ಕವಲು” ಕೈಗೆ ತೆಗೆದುಕೊಂಡ. ಅದು ಬಹಳ ಕುತೂಹಲ ಕೆರಳಿಸಿದ ಸಮಕಾಲೀನ ಸಮಸ್ಯೆಯುಳ್ಳ ಕಾದಂಬರಿ ಅಲ್ವೇ ಅಂದುಕೊಂಡೆ. ಆದರೇನು! ಆತ ಮುಂದುವರೆದು, ಒಂದಾದ ಮೇಲೊಂದರಂತೆ ಭೈರಪ್ಪನವರ ಇನ್ನೂ ಕೆಲ ಕೃತಿಗಳನ್ನು ಇತರೆ ಕೆಲ ಲೇಖಕರ ಒಂದೆರಡು ಕೃತಿಗಳನ್ನೂ ಆಯ್ದುಕೊಂಡ, ಒಟ್ಟು ಬಿಲ್ಲು ೨೦೦೦ ಹತ್ತಿರವಾಯಿತು. ಆತನಿಗೆ ಅದೇನೂ ದೊಡ್ಡದಾಗಿರಲಿಲ್ಲವೆನಿಸಿತು.
ನಾನು ಅದುವರೆಗೂ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದವನು ಸುಮ್ಮನಿರಲಾರದೇನೆ ಕೇಳಿಯೇ ಬಿಟ್ಟೆ-
“ನೀವೇನು ಕೆಲಸ ಮಾಡ್ತಾ ಇದೀರಿ..?” ಎಂದೆ.
“ಸಾಫ್ಟ್ ವೇರ‍್….”
“ಯಾವ ಕಂಪೆನಿ?”
“ಮೈಂಡ್ ಟ್ರೀ….”
“ಇಂಗ್ಲೀಷೂ ಓದುತ್ತೀರಾ…”
“ಅವ್ವನೌವನಾ…ಅದನ್ನೇನು ಓದೂದು ಸರ‍್ ಒಂದೊಂದು ಪುಟಕ್ಕೂ ಪದಗಳಿಗೆ ಅರ್ಥಹುಡುಕ್ಕೋತ ಕೂರಬೇಕ್ ಸರ‍್… ಕನ್ನಡ ಸರ‍್ ನಮ್ಮ ಮಾತೃಭಾಷೆ ಕನ್ನಡ, ಅದರ ಕಿಮ್ಮತ್ತು ಅದಕ್ಕ ಬರಾಂಗಿಲ್ಲ….ಬಿಡ್ರಿ….”ಅಂದ!
ನನಗೆ ನಗು ಬಂತಾದರೂ ನಾನು ಬೆಪ್ಪಾದೆ! ಆತನಿಂದ ಇಂಥಾ ಉತ್ತರ ನಿರೀಕ್ಷೆ ಮಾಡಿರಲಿಲ್ಲವಲ್ಲ…!
“ನಿಮ್ಮದು ಯಾವ ಊರು ?” ಎಂದೆ.
ಈ ಸಲ ನನ್ನ  ನಿರೀಕ್ಷೆ ಅಷ್ಟು ಹುಸಿಯಾಗಲಿಲ್ಲ.
“ಬೆಳಗಾಂ” ಎಂದ.
ಮುಂದುವರೆದು ಹೇಳಿದ,
“ನಮ್ಮ ಕಂಪೆನಿಯಲ್ಲಿ ಇರೋದು ನಾಲ್ಕೇ ಜನ ಕನ್ನಡಿಗರು ಸರ‍್… ನಾವು ಕೆಲಸದಲ್ಲಿರೋವಾಗ ಇಂಗ್ಲೀಷಲ್ಲೇ ಮಾತಾಡ್ತೀವಿ. ನಾನು ಮೊದಲು ಕನ್ನಡ ಶಾಲೆಯಲ್ಲೇ ಓದಿ ಮುಂದೆ ಬಂದವನು. ಅಷ್ಟು ಮಾತಾಡ್ತೀನಲ್ಲ ಉದ್ಯೋಗಕ್ಕೆ ಸಾಕು. ಸ್ಟೇಟ್ಸ್ ಗೂ ಹೋಗಿ ಬಂದಿದೀನಿ… ಇನ್ನೇನು? ಬಿಡಿ. ಆದರೆ, ನಾವು ಒಟ್ಟಿಗೆ ಕಾಫಿಗೆ, ಲಂಚ್ ಗೆ ಹೊರಗೆ ಬಂದರೆ ನಮ್ಮ ಜೊತೆಗಿರೋ ಆ ಮೂವರೂ ಲೋಕಲೈಟ್ಸ್ ಬೆಂಗಳೂರಿನವರು. ಆದ್ರೂ ಅವರು ನಮ್ಮ ಜೊತೆ ಕನ್ನಡ ಮಾತಾಡಲ್ಲ ಹೊರಗೂ ಕೂಡ,. ಜೊತೆಗೆ ಇರೋ ಬಿಹಾರಿಗಳ ಜೊತೆ ಅವರಿಗೆಂದೇ ಹಿಂದಿಯಲ್ಲಿ ಮಾತಾಡ್ತಾರೆ. ನಮ್ಮ ಹತ್ತಿರ ಮಾತ್ರ ನಮ್ಮದೇ ಕನ್ನಡಕ್ಕೆ ಕನ್ನಡದಲ್ಲಿ ತುಟಿ ಬಿಚ್ಚಲ್ಲ..!!.  ಇದಕ್ಕೆ ಏನನ್ನಬೇಕು ಹೇಳಿ…. ಏನೂ ಮಾಡೊಕಾಗೊಲ್ಲ ಅವರು ಹಂಗೇ ನಾವೂ ಹಿಂಗೇನೇ ನಾವಿರೋದೇ ಹೀಗೇ ಸ್ವಾಮೀ… ಅಂತ ಅಂದುಕೋಬೇಕಷ್ಟೇ…” ಎಂದ.
ನಾನು ಸುಮ್ಮನೆ ಮತ್ತೆ ನಸು ನಕ್ಕೆನಷ್ಟೇ; ಮತ್ತೆ ಮಾತನಾಡಲಿಲ್ಲ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s