ತೀರ್ಥ ಯಾತ್ರೆಗಳನ್ನು ಯಾಕೆ ಮಾಡಬೇಕು..?


ಹೈಮಾಚಲ ಸಾನ್ನಿಧ್ಯದಲ್ಲಿ ಪುಸ್ತಕ:ಅವಲೋಕನ
ಮೊಟ್ಟ ಮೊದಲಿಗೆ ತೀರ್ಥ ಯಾತ್ರೆಗಳನ್ನು ಯಾಕೆ ಮಾಡಬೇಕು..? ಎಂದು ಕುವೆಂಪು ರವರು ಪ್ರಸ್ತಾಪಿಸುತ್ತಾರೆ ಹೈಮಾಚಲ ಸಾನ್ನಿಧ್ಯದಲ್ಲಿ ಪುಸ್ತಕದ ಮುನ್ನುಡಿಯಲ್ಲಿ.
ಅದು ವಿಹಾರಕ್ಕೇ,  ವಿಲಾಸಕ್ಕೇ..ವಿಚಾರಕ್ಕೇ ಸಾಮಾಜಿಕ ಪ್ರಯೋಜನಕ್ಕೇ… ನಮ್ಮೊಳಗಿನ ಆತ್ಮ ವಿಕಾಸಕ್ಕೇ…? ಅವರ  ಮಾತುಗಳಲ್ಲೇ  ಕೇಳುವುದು ಚೆನ್ನ..
ಸಾಮಾನ್ಯವಾಗಿ ನಾನು ಯಾವುದೇ ಪುಸ್ತಕವನ್ನು ಒಮ್ಮೆ ಓದಿದಮೇಲೆ ಮತ್ತೆ ಓದಲು ಬಯಸುವವನಲ್ಲ.  ಆದರೆ, “ಹೈಮಾಚಲ ಸಾನ್ನಿಧ್ಯದಲ್ಲಿ” ಪುಸ್ತಕ ಮತ್ತೆ ಮತ್ತೆ ತನ್ನ ಪುಟಗಳತ್ತ ನನ್ನನ್ನು ಸೆಳೆದಿತ್ತು. ಅಲ್ಲಿ ನನ್ನ ಗಮನ ಸೆಳೆದ ಪಂಕ್ತಿಗಳ ಬಗ್ಗೆ ಹೇಳುವ ಮೊದಲು, ಕುವೆಂಪು ರವರು ಅವರ ಸುಧೀರ್ಘ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ ಮುಖ್ಯಾಂಶಗಳ ಬಗ್ಗೆ ಹೇಳಬಯಸುತ್ತೇನೆ.- ಮುನ್ನುಡಿಯ ಆರಂಭದಲ್ಲೇ ಶ್ಲೋಕವೊಂದನ್ನು  ಆದರ ಸಾರಾಂಶವನ್ನೂ ಹೇಳುತ್ತಾರೆ- ಅದರ ಸಾರಾಂಶವೆಂದರೆ,

“ರೂಪವಿವರ್ಜಿತನಾದ ನಿನಗೆ ಧ್ಯಾನ ಸಮಯದಲ್ಲಿ ರೂಪಕಲ್ಪನೆ ಮಾಡಿದ್ದೇನೆ.
ನಿನ್ನನ್ನು ಸ್ತೋತ್ರ ಮಾಡಿ ನಿನ್ನ ಅನಿರ್ವಚನೀಯತೆಯನ್ನು ದೂರೀಕರಿಸಿದ್ದೇನೆ.
ತೀರ್ಥಯಾತ್ರಾದಿಗಳನ್ನು ಕೈಗೊಂಡು ನಿನ್ನ ವ್ಯಾಪಿತ್ವವನ್ನು ನಿರಾಕರಿಸಿದ್ದೇನೆ.
ಹೇ ಜಗದೀಶ, ಬುದ್ಧಿವಿಕಲತೆಯಿಂದ ನಾನು ಮಾಡಿರುವ
ಈ  ಮೂರು ಅಪರಾಧಗಳೂ  ಕ್ಷಮಾರ್ಹ ಸ್ವಾಮಿ!”

“ಆ ಪ್ರಾರ್ಥನೆ  ಹೊಮ್ಮಿ ಶತಮಾನಗಳೆ ಆದರೂ ಅಂದಿನಂತೆ ಇಂದೂ ಪುಣ್ಯಕ್ಷೇತ್ರಗಳಿಗೆ ಹೋಗುವ ಹೆದ್ದಾರಿಗಳಲ್ಲಿ ಕಿರುದಾರಿಗಳಲ್ಲಿ,  ಕಡಿದಾದ ದಾರಿಗಳಲ್ಲಿ ಅನೇಕ ಯಾತ್ರಿಕರು ಈ ಸ್ತೋತ್ರವನ್ನೇ  ಹಾಡಿಕೊಳ್ಳುತ್ತ ದಾರಿ ಸಾಗುವುದಕ್ಕೆ ಬೇಕಾದ ಶಕ್ತಿ  ಉತ್ಸಾಹಗಳನ್ನು ಪಡೆದುಕೊಳ್ಳುತ್ತದ್ದರೂ ಆಶ್ಚರ್ಯ ಪಡಬೇಕಾಗಿಲ್ಲವೆನ್ನುತ್ತಾರೆ.
ಏಕೆಂದರೆ, ನಮ್ಮ ದೇಶ ವಿಲಕ್ಷಣ ದೇಶ. ವಿರೋಧಾಭಾಸಗಳ ದೇಶ. ನಮ್ಮವರು ಭಗವಂತನ ನಿರಾಕಾರತ್ವವನ್ನು ಸಾರಿದಂತೆ ಬೇರೆ ಯಾರೂ ಸಾರಿಲ್ಲ……
ಇಲ್ಲಿ ಏನುಬೇಕಾದರೂ ನಡೆಯಬಹುದು;ಯಾವುದಕ್ಕೂ ವಿಸ್ಮಯ ಪಡಬೇಕಾಗಿಲ್ಲ…..

“ಹಾಗಾದರೆ, ಆಚಾರ್ಯರು ತೀರ್ಥಯಾತ್ರೆಯನ್ನು ಮತಿವಿಕಲತಾ ದೋಷವೆಂದು ತಮ್ಮ ಯಾತ್ರೆಯಲ್ಲಾ ಪೂರೈಸಿದ ಮೇಲೆ ಸಾರಿದ್ದರೂ, ಮುನ್ನಾದರೂ ಅವರು ಆ ತಿರ್ಥಯಾತ್ರೆಯನ್ನೇಕೆ ಕೈಗೊಂಡರು? ಅವರಂತೆಯೇ ಇತರರೂ ಏಕೆ ಕೈಗೊಳ್ಳುತ್ತಾ ಬಂದಿದ್ದಾರೆ? ಎಂದು ಕುವೆಂಪು ಪ್ರಶ್ನಿಸುತ್ತಾ ಮುಂದುವರೆದು ಹೇಳುತ್ತಾರೆ,
ಮನುಷ್ಯ ಈ ಪ್ರಪಂಚದಲ್ಲಿ ಒಬ್ಬ ಪ್ರವಾಸಿ. ಅವನ ಜೀವನ ಸಮಸ್ತವೂ ಒಂದು ಪ್ರವಾಸ..  ಜೀವ ನಿತ್ಯಸ್ವರೂಪವಾದ ತನ್ನ ನಿಜನಿವಾಸವನ್ನು ಹುಡುಕುತ್ತಾ ಹೋಗುವುದೇ ಅದರ ಸಹಜ ಲಕ್ಷಣ.  ಹೊಳೆ ಕಡಲನ್ನರಸುತ್ತಾ ಹೋದಂತೆ….. ಲಕ್ಷಲಕ್ಷ ರೂಪಗಳಲ್ಲಿ ಕೋಟಿ ವಿಧಾನಗಳಲ್ಲಿ ಆಯಾ ಲೋಕಸತ್ತೆಗೆ ಅನುಗುಣವಾಗಿ…. ಆಯಾ ಜೀವ  ಸಂಸ್ಕಾರಬದ್ಧವಾಗಿ, ಬಹಿರ‍್ಮುಖಿಯಾದಾಗ ಒಂದು ರೀತಿಯಲ್ಲಿ, ಅಂತರ‍್ಮುಖಿಯಾದಾಗ ಮತ್ತೊಂದು ರೀತಿಯಲ್ಲಿ. ಬೇಸರವಾದಾಗ ಹೊರಗೆಲ್ಲಿಯಾದರೂ  ತಿರುಗಾಡಿಕೊಂಡು ಬರಲು ಹೋಗುತ್ತೇವೆ. ಹಾಗೆ ಹೊರಗೆ ಹೋಗಲಾರದವರು ತಮ್ಮೊಳಗೇ ಹೋಗುತ್ತಾರೆ ಎಂದೂ ಹೇಳುತ್ತಾರೆ…

” ಮನುಷ್ಯ ತನ್ನಿಂದ ತಾನು ತಪ್ಪಿಸಿಕೊಳ್ಳಲು, ತನ್ನನ್ನು ತಾನೇ ಮೀರಿ ತನ್ನತನದಿಂದ ಪಾರಾಗಲು ಎಂತೆಂತಹ ಉಪಾಯಗಳಿಂದ ಎಷ್ಟೆಷ್ಟು ಪ್ರಯತ್ನಿಸುತ್ತಾನೆ!  ಅಲ್ಪವಾದ ತನ್ನಿಂದ; ತನ್ನ ಅಲ್ಪತನದಿಂದ ಅಥವಾ ಅಹಂಕಾರದಿಂದ ತಾನು ತಪ್ಪಿಸಿಕೊಳ್ಳುವುದೆಂದರೆ ಭೂಮವಾದುದಕ್ಕೆ ವಿಸ್ತಾರವಾದುದಕ್ಕೆ ಚಿರನೂತನವಾದುದಕ್ಕೆ ನಿರ್ದಿಗಂತವಾದ ಅನುಭವಾಭಿಮುಖವಾಗಿ ಹೋಗುವುದು ಎಂದರ್ಥ.  ಹೀಗೆ ಪ್ರವಾಸ ಯಾತ್ರೆ ಯಾಕೆ ಮಾಡಬೇಕೆಂದು ಬಯಸುತ್ತಾರೆ  ಎಂಬ ಪ್ರಶ್ನೆಯೊಡನೆ ಪ್ರವಾಸ ಮೂರು ಮುಖಗಳಲ್ಲಿ ಸಾಗಲು ಸಾಧ್ಯವೆನ್ನುತ್ತಾರೆ-
೧.ಅಧೋಮುಖಿ, ೨. ಸಮತಲಮುಖಿ ೩. ಊರ್ಧ್ವಮುಖಿ.
೧. ಮಾದಕ ಮತ್ತು ಲೈಂಗಿಕಾದಿ ಪ್ರಪಂಚಗಳಲ್ಲಿ ತನ್ನನ್ನು ತಾನು ಮರೆಯಲೂ ಮೀರಲೂ  ಮಾನವ ಕೈಗೊಳ್ಳುವ ಸಾಹಸಗಳೆಲ್ಲ ಅಧೋಮುಖಿ ಪ್ರವಾಸ. ಅದರ ಪರಿಣಾಮ ಮೊದಲು ಸ್ವಾದುವಾದರೂ ತುದಿಯಲ್ಲಿ ಕೇಡು.
೨. ತನಗೆ ತನ್ನ  ಸಮಾಜಕ್ಕೆ ತನ್ನ ನಾಡಿಗೆ,  ಸಾಹಿತ್ಯ, ಸಂಗೀತ, ಕಲೆ, ಲೋಕವೊಪ್ಪುವ/ಮೆಚ್ಚುವ  ಯಾವುದಾದರೊಂದು  ಸುಧಾರಣೆಯ ಚಳುವಳಿ, ರಾಜಕಾರಣ, ಸಭೆಗಳಲ್ಲಿ ಭಾಗವಹಿಸುವುದು,  ಇತ್ಯಾದಿಯಾಗಿ… ಸಮಾಜ ಸೇವಾ ಚಟುವಟಿಕೆಗಳಲ್ಲಿ ಆಸಕ್ತರಾಗುವುದು…. ಸಮತಲಮುಖ ಪ್ರವಾಸ.
೩. ಆಧ್ಯಾತ್ಮಿಕ ಶ್ರೇಯಸ್ಸೇ ಧ್ಯೇಯವಾಗಿ, ನಮ್ಮ ಸಮಸ್ತ ಪ್ರಜ್ಞೆಯ ಪೂರ್ಣ  ಸಮರ್ಪಣವೇ ದಾರಿಯಾಗಿ, ನಮ್ಮ ಪೂರ್ಣತೆಯ ಅನುಸಂಧಾನಕ್ಕಾಗಿ ನಾವು ಕೈಗೊಳ್ಳುವ ಅತ್ಯಪೂರ್ವ ಸಾಹಸವೇ ಅತ್ಯಂತ ವಿರಳವೆನಿಸುವ ಊರ್ಧ್ವಮುಖ ಪ್ರವಾಸ.

ವಿಹಾರಕ್ಕಾಗಿ, ವಿಲಾಸಕ್ಕಾಗಿ, ಬೇಸರ ಪರಿಹಾರಕ್ಕಾಗಿ   ಹೊಸ ಊರು ನಾಡುಗಳನ್ನೂ ಜನರನ್ನೂ ಸಂಧಿಸುವ ಸಂತೋಷಕ್ಕಾಗಿ, ಪ್ರಕೃತಿ ಸೌಂದರ‍್ಯ  ವೈಚಿತ್ರ‍್ಯಗಳನ್ನು  ಸಂದರ್ಶಿಸುವ  ರಸಿಕಾನುಭವಕ್ಕಾಗಿ,  ಕೊನೆಗೆ ಮನೆಯ ತಾಪತ್ರಯಗಳಿಂದ ದೂರವಾಗುವುದಕ್ಕಾಗಿ,  ದೇವರ  ಋಣ, ಹರಕೆ ತೀರಿಸುವುದಕ್ಕಾಗಿ, ದಿವ್ಯ ಸ್ಥಾನಗಳಿಗ ಹೋಗಿ ಬಂದು ಜನರ ಗೌರವಾದರಗಳಿಗೆ ಭಾಜನರಾಗುವುದಕ್ಕಾಗಿ ಕೈಗೊಳ್ಳವುದೇ ಸಮತಲ ಮುಖಿ ಪ್ರವಾಸವಾಗುತ್ತದೆ….
ಊರ್ಧ್ವ ಮುಖ ಪ್ರವಾಸದ ವಿಷಯವಾಗಿ ಭಗವದ್ಗೀತೆ ಹೇಳುವುದನ್ನೂ ಹೀಗೆ  ಅದರ ಶ್ಲೋಕ ಸಹಿತ  ಪ್ರಸ್ತಾಪಿಸಿದ್ದಾರೆ.-
ಪುಣ್ಯಕ್ಷೇತ್ರಗಳಿಗೆ ಯಾತ್ರೆ ಹೋಗಿ ಬಂದ ಮಾತ್ರದಿಂದಲೇ ಪವಿತ್ರನಾಗಿ ಬಿಡುತ್ತೇನೆ ಎಂಬ ನಂಬಿಕೆಯೆ  ಆತ್ಮವಂಚನೆ. ಅನೇಕ ಸಾಧುಸಂತರು  ಅದರಿಂದ ಒದಗುವ ಧಾರ‍್ಮಿಕತೆಯನ್ನು ಪ್ರಶಂಸಿಸಿರುವುದಕ್ಕಿಂತಲೂ ಹೆಚ್ಚಾಗಿ ಅದರಿಂದೊದಗಬಹುದಾದ ಅಪಾಯದ ಕಡೆಗೆ  ಗಮನ ಸೆಳೆದಿದ್ದಾರೆ.
ಕಾಶಿಯಲ್ಲಿ ಪ್ರಾಣಬಿಟ್ಟರಾಯಿತು. ತನಗೆ ಮೋಕ್ಷವೊದಗುತ್ತದೆ ಎಂಬ ಭಾವನೆ ಒಳ್ಪಿಗೆ ಪ್ರೇರಕವಾಗುವುದಕ್ಕಿಂತ ಹೆಚ್ಚಾಗಿ ಕೇಡಿಗೆ ಕಾರಣವಾಗುತ್ತದೆಯಲ್ಲವೇ.. ಎಂದೂ ಕೇಳುತ್ತಾರೆ. ಮತ್ತೆ ಹೇಳುತ್ತಾರೆ-
“ನಮ್ಮ ಪುಣ್ಯಕ್ಷೇತ್ರಗಳಲ್ಲಿ ಪಾಪ ಪುರುಷ ಯಾವ ದಂಡನೆಯ ಮತ್ತು ದಂಢಾಧಿಕಾರಿಗಳ ಭಯವೂ ಇಲ್ಲದೇ ತನ್ನ  ಭೋಗವಿಲಾಸ ವ್ಯಾಪಾರಗಳಿಗಾಗಿ ಸಂತೆಸಂತೆಗಳನ್ನೇ ತೆರೆದಿಟ್ಟಿದ್ದಾನೆ! ಆದರೆ, ಅಂತಹ ಪರಿಸ್ಥಿತಿ ಪುಣ್ಯಕ್ಷೇತ್ರಗಳಿಗೆ ಮಾತ್ರ ವಿಶೇಷವಾದುದೇನೂ ಅಲ್ಲವಷ್ಟೇ! …”
-ಹೌದು, ನನಗನಿಸುತ್ತದೆ.  ಇದು ಕಲಿಯುಗ ಇಲ್ಲೆಲ್ಲಕಾಲಕ್ಕೂ ಪರಮಪಾಪಿಗಳಿಗೆ ಸುಭಿಕ್ಷವೇ… ತಮ್ಮ ಗುಂಪು ಅತಿ ಕಡಿಮೆಯಾದರು ಸಾತ್ವಿಕರು ಅದಕ್ಕೆಲ್ಲ ತಲೆಕಡಿಸಿಕೊಳ್ಳಬಾರದಷ್ಟೇ.
ನಾನು ಹೈಮಾಚಲ ಸಾನ್ನಿಧ್ಯದಲ್ಲೇನಿದೆ  ನಾನೇನು ಅಂಶಗಳನ್ನು ಗುರುತಿಸಿದೆನೆಂಬುದನ್ನು ಹೇಳುವುದಕ್ಕೆ ಮುಂಚೆ ನಮ್ಮ ಕವಿ ಕುವೆಂಪುರವರ ಸುಧೀರ್ಘ  ಮುನ್ನುಡಿಯಿಂದಲೂ  ಸಾಕಷ್ಟು ಪ್ರಭಾವಿತನಾಗಿದ್ದೇನೆ; ಅವರ ವಿದ್ವತ್ ಪೂರ್ಣವಾದ ವಿಚಾರಗಳು ನಮ್ಮನ್ನೂ ವಿಚಾರಪರರನ್ನಾಗಿಸುತ್ತವೆ. ಅದನ್ನೊಂದಿಷ್ಟು ನಿಮ್ಮೊಂದಿಗೆ ಹೇಳದೇ  ಮುಂದುವರೆಯುವುದು ನನ್ನಿಂದ ಸಾಧ್ಯವಾಗಲಿಲ್ಲ.
ಕುವೆಂಪುರವರು ಪುಸ್ತಕದ ಬಗ್ಗೆ ಹೇಳುವ ಮುನ್ನ ಮೇಲಿನಂತೆ  ಹೇಳಿದ  ಅವರ  ಕೆಲವು  ಪ್ರಾಸ್ತಾವಿಕ ನುಡಿಗಳನ್ನು  ಮುಂದಿಡುತ್ತಾ ಕೊನೆಗೆ ಹೇಳಿದ ಅವರ ಇನ್ನೊಂದು ನುಡಿಯನ್ನೂ ನಿಮಗೆ ತಿಳಿಸಿ  ಆನಂತರ ಪುಸ್ತಕ ಹೈಮಾಚಲ ಸಾನ್ನಿಧ್ಯದಲ್ಲಿ ಏನು ಹೇಳುತ್ತದೆಂಬುದನ್ನು ನೋಡೋಣ.
ಕುವೆಂಪು  ಹೇಳಿದ್ದಾರೆ- ಅತಿ ಖಂಡನೆ ಅತಿಶ್ಲಾಘನೆ ಅನರ್ಥಕಾರಿಯಾಗಬಹುದು. ತೀರ್ಥಯಾತ್ರೆಗಳಿಂದಲೂ, ಪುಣ್ಯಕ್ಷೇತ್ರಗಳಿಂದಲೂ ನೊಂದಜೀವಕ್ಕೂ  ಬೆಂದ ಲೋಕಕ್ಕೂ ಶಾಂತಿ ಸಮಾಧಾನಗಳು ಮತ್ತೆ ಮತ್ತೆ ದೊರಕುವುದರಿಂದಲೇ  ಜನರು ಪ್ರಯಾಣದ ಕ್ಲೇಶ,  ಕಷ್ಟ, ದುರ್ಗಮತೆ, ಅಪಾಯ,  ಕಡೆಗೆ ಸಾವು, ಯಾವುದನ್ನೂ ಲೆಕ್ಕಿಸದೇ ಮತ್ತೆ ಮತ್ತೆ ಅಂತಹ ಪ್ರವಾಸಗಳನ್ನು ಕೈಗೊಳ್ಳುತ್ತಿರುವುದಲ್ಲವೇ? ಅಂತಹ ಪ್ರವಾಸ ಯಾರಿಗೆ ಅವಶ್ಯಕವೋ ಅವರನ್ನು ಮೂಢರೆಂದಾಲಿ, ಭ್ರಾಂತರೆಂದಾಗಲೀ, ಕರೆದರೆ ತಪ್ಪಾಗುತ್ತದೆ, ಆಸ್ಪತ್ರೆಗೆ ಹೋಗುವ ರೋಗಿಯನ್ನು ಮೂಢನೆಂದಾಗಲೀ, ಭ್ರಾಂತನೆಂದಾಗಲಿ ಕರೆದರೆ ತಪ್ತಾಗುವಂತೆ….
ಯಾತ್ರೆ, ಯಾತ್ರೆ ಮಾಡುವ ಬಗ್ಗೆ ಕುವೆಂಪುರವರು ಮುನ್ನುಡಿಯಲ್ಲಿ ಹೇಳಿರುವ  ಪ್ರಮುಖವಾದ ಅಂಶಗಳನ್ನು ನಿಮ್ಮೊಡನೆ  ಹೇಳಿದ್ದೇನೆ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s