ಈ ಪ್ರಪಂಚವೇ ವಿಚಿತ್ರ; ನಮ್ಮ ದೇಶವಂತೂ ವಿಲಕ್ಷಣ ದೇಶ


ಈ ಪ್ರಪಂಚವೇ ವಿಚಿತ್ರ. ನಮ್ಮ ದೇಶವಂತೂ ವಿಲಕ್ಷಣ ದೇಶ.  ನಮ್ಮ ರಾಷ್ಟ್ರಕವಿ ಕುವೆಂಪು ಅವರ ಮಾತುಗಳಲ್ಲೇ ಕೇಳಿ-
“ನಮ್ಮವರು ಭಗವಂತನ ನಿರಾಕಾರತ್ವವನ್ನು ಸಾರಿದಂತೆ ಬೇರೆಯಾರೂ ಸಾರಿಲ್ಲ.  ದೇವ-ದೇವಿಯರ ವಿಗ್ರಹಕೋಟಿಗಳನ್ನೂ ನಮ್ಮವರು ಸೃಜಿಸಿದಂತೆ ಬೇರೆ ಯಾರೂ ಸೃಜಿಸಿಲ್ಲ.  ನಮ್ಮ ತತ್ವವೇತ್ತರು ಸ್ಥಾಪಿಸಿರುವಂತೆ ಅಭೇದ ತತ್ವವನ್ನು ಬೇರೆ ಯಾರೂ ಸ್ಥಾಪಿಸಿಲ್ಲ. ವರ್ಣ, ಮತ, ಜಾತಿ, ಪಂಥ, ಪಂಗಡ ಆಚಾರಾದಿಗಳಲ್ಲಿ ನಮ್ಮಲ್ಲಿರುವಷ್ಟು ಭೇದ ಭಾವಗಳು ಮತ್ತಾರಲ್ಲಿಯೂ ಇಲ್ಲ. ಗಮ್ಯದ ಏಕತ್ವವನ್ನು ನಮ್ಮವರು ಬೋಧಿಸಿದಂತೆ ಅನ್ಯರಾರೂ ಬೋಧಿಸಿಲ್ಲ; ರುಚಿವೈಚತ್ರ್ಯ ಮತ್ತು ಋಜುಕುಟಿಲ ನಾನಾ ಪಥತ್ವಗಳನ್ನೂ ನಮ್ಮವರು ಹಠತೊಟ್ಟು ಸಾಧಿಸುತ್ತಿರುವಂತೆ ಅನ್ಯರಾರೂ ಸಾಧಿಸುತ್ತಿಲ್ಲ! ಅಕ್ಷರಶಃ ನಮ್ಮದು ವಿಲಕ್ಷಣ ದೇಶವೆ ನಿಜ; ಇಲ್ಲ ಏನು ಬೇಕಾದರೂ ನಡೆಯಬಹುದು; ಯಾವುದಕ್ಕೂ ವಿಸ್ಮಯ ಪಡಬೇಕಾಗಿಲ್ಲ…”
ಇಂಥ ದೇಶದಲ್ಲಿ ಅಥವಾ ಈ ಪ್ರಪಂಚದಲ್ಲಿ ಕೇಳಿ ಬರುವುದೇನೆಂದರೇ…

*. ಸುತ್ತಲೂ ಕೆಟ್ಟವರೇ ಕಾಣುವಾಗ ನಾನೇಕೆ ಒಳ್ಳೆಯವನಾಗಿರಬೇಕು..?
* ಮನುಷ್ಯನೂ ಒಂದು ಪ್ರಾಣಿ; ಪ್ರಾಣಿಗಳಿಗೆಲ್ಲಿದೆ ಶೀಲ-ಚಾರಿತ್ರ್ಯ ಅಂಥ ಕಟ್ಟುಪಾಡುಗಳು ಮಾಢ ನಂಬಿಕೆಗಳು!ಅದಿಲ್ಲದೇ ಇರೋದೇ ಈವತ್ತಿನ ಪ್ರಪಂಚದ ಪ್ರಮುಖ ಗುಣ ಲಕ್ಷಣ!
*  ಇಂಥ ಈ ಪ್ರಪಂಚದಲ್ಲೇ  ರಾಜಕಾರಣಿಗಳು, ರೌಡಿಗಳು, ಕಾಳಸಂತೆ ಖದೀಮರು, ಉದ್ಯಮಿಗಳು, ಢೋಂಗಿ ಉದ್ಯೋಗಿಗಳು, ”ಮಹಾನ್” ತಾರೆಗಳು-ತಾರಾಮಣಿಗಳು ಮೆರೆಯುತ್ತಿರೋದು, ಹಣದ ಕೊಳ್ಳೆ ಹೊಡೆಯುತ್ತಿರುವುದು.  ಏನೆಲ್ಲವೂ ಅವರ ಕಾಲ ಬಳಿ ಬಂದು ಬೀಳುತ್ತಿರುವುದು, ದೇವರೂ ಕೂಡ ಅವರಿಗೆ ಕ್ಯೂ  ಎಂಬುದಿಲ್ಲದೇ ನೇರವಾಗಿ ದೇವಸ್ಥಾನಗಳಲ್ಲಿ ದರ್ಶನ ಕೋಡುತ್ತಾನೆ!. ಅರ್ಚಕರೂ ಅವರನ್ನ ಬಹುವಿಧದಲ್ಲಿ ಕೊಂಡಾಡಿ ಆದರಿಸೋದು…!!
* ಅಂದ್ಮೇಲೆ ಇನ್ನೇನು!  ಇಲ್ಲಿ ಒಳ್ಳೆಯ ರೀತಿಯಲ್ಲಿ ಮೇಲೇರಿ ಬರೋದೆಂದರೆ ದಡ್ಡತನವೇ…  ಹೇಗಾದರೂ ಸರಿ ಮಾನ ಮಾರಿಕೊಂಡರೂ ಪರವಾಯಿಲ್ಲ ಹಣ ಮಾಡುವುದು, ರಾಜಕಾರಣ ಮಾಡೋದು, ಕೊಳ್ಳೆನಾದರೂ ಹೊಡೆಯೋದು,  ಮುಂದೆ ಬರುವುದು ಅಧಿಕಾರಕ್ಕೇರುವುದು, ಇರೊವಷ್ಟು ದಿವ್ಸ ಮಜಾಮಾಡಿ  ಹೋಗ್ಬಿಡೋದು.  ನಾಳೆ ಚಿಂತೆ ನಮಗ್ಯಾಕೆ?  ಲೈಫ್ ಇರೋದೇ ಪ್ರತಿ ಕ್ಷಣವೂ ಎಂಜಾಯ್ ಮಾಡಲಿಕ್ಕೇ..  ನಾಳೆ ಹೇಗೋ ಯಾರಿಗ್ಗೊತ್ತು..?

ಆದರೇನು! ಅಂಥ ಕೆಟ್ವವರು ಕೆಡುತ್ತಲೆ ಇರುವವರು ಯಾವಾಗಲೂ ಮುಕ್ಕಾಲು ಮೂರುವಾಸಿ ಈ ವಿಲಕ್ಷಣ ಪ್ರಂಪದಲ್ಲಿ ಇದ್ದೇ ಇರ್ತಾರೆ!. ಅದನ್ನ ನೋಡಿ ತಲೆ ಕೆಡಿಸ್ಕೊಳ್ಳದೇ   ಒಳ್ಳೆಯ ರೀತಿಯಲ್ಲೆ  ಬದುಕಿ ಬಾಳೋರು  ಎತ್ತರಕ್ಕೇರೋರು ಎಲ್ಲ ಕಾಲಕ್ಕೂ ಇದ್ದೇ ಇರ್ತಾರಲ್ಲವೇ..? ಇಲ್ಲಿ ಬಡತನವಿದೆ, ಶ್ರೀಮಂತಿಕೆ ಇದೆ, ಭ್ರಷ್ಟತೆಯೂ ಇದೆ. ಭಯವೂ ಭವ್ಯತೆಯೂ  ಇದೆ.  ದೈವಿಕತೆಯಲ್ಲಿ ಬದುಕಿನ   ನಂಬಿಕೆಯೂ ಇದೆ. ಆಧ್ಯಾತ್ಮಿಕ ನೆಲೆಯಲ್ಲಿ ಶಾಂತಿ ಸಮಾಧಾನವೂ ಇದೆ- ಇಲ್ಲೇ ಋಜು ಮಾರ್ಗದಲ್ಲೇ ಪ್ರವರ್ದಮಾನಕ್ಕೆ ಬಂದು ಗೌರವ,ಪುರಸ್ಕಾರ  ಪುರುಷಾರ್ಥ ಕಂಡವರಿದ್ದಾರೆ,ಪ್ರಸಿದ್ಧಿಗೆ ಬಂದು ವಿಶ್ವವನ್ನೇ ಬೆರಗುಗೊಳಿಸಿದವರಿದ್ದಾರೆ.
ಅಂತೆಯೆ ನಮ್ಮ ಯುವ ಪೀಳಿಗೆಯಲ್ಲಿಯೆ ಇನ್ನೂ ನಮ್ಮ ಸಂಸ್ಕೃತಿ ಪರಂಪರೆ ಬಗ್ಗೆ ಬಹಳ ಹೆಮ್ಮೆ ಕೂಡ ಇದೆ; ಆ ದಿಸೆಯಲ್ಲೇ ಮುನ್ನೆಡೆಯುವ ಛಾತಿ ಇದೆ; ಜೀವನೋತ್ಸಾಹವಿದೆ. ಅಂಥ ಯುವಕ/ಯುವತಿಯರು  ಹಾಗೇಯೆ ಯಶಸ್ವೀ ಆದಂತಹ ಎಷ್ಟೋ ಜ್ವಲಂತ ಉದಾಹರಣೆಗಳಿನ್ನೂ ಬರುತ್ತಲೇ ಇವೆ.

ಮತ್ತೆ  ಮತ್ತೆ ನೋಡಿದರೆ, ಎಲ್ಲೆಡೆ ಪರಂಪರಾಗತ ದೈವಿಕತೆ ಸಂಪ್ರದಾಯ ಆಚಾರ ವಿಚಾರಗಳ ಬಗ್ಗೆ ತಾತ್ಸಾರವಿದೆ;ತಿರಸ್ಕಾರವಿದೆ.ತಿರೋಗಾಮಿಗಳಾಗಿ ಸ್ವಚ್ಛಂದವಾಗಿ ಸ್ವೇಚ್ಛೆಯಾಗಿ ತಿರುಗುವ ತಿಕ್ಕಲು ತನಗಳೂ  ಇರುವ ಉದಾಹರಣೆಗಳು ಲೆಕ್ಕವಿಲ್ಲದಷ್ಟಿವೆ.  ಅಂಥ ಹೀನಾಯ ಮಾರ್ಗದಲ್ಲೇ ಮೇಲೇರಿದವರಿದ್ದಾರೆ, ಉಲ್ಕೆಗಳಾಗಿ ಉರುಳಿದವರಿದ್ದಾರೆ, ತಾರೆಗಳಾಗಿ ಮೆರೆದವರಿದ್ದಾರೆ, ಕೊನೆಗೆ ತಳಾತಳ ಸೇರಿ ಕಣ್ಮರೆಯಾದವರಿದ್ದಾರೆ.
ಯಾಕೆಂದರೆ,ನಮ್ಮ ದೇಶ ಇರುವುದೇ ಹಾಗೆ ವಿಚಿತ್ರವಾಗಿ ವಿಲಕ್ಷಣವಾಗಿ. ಇದೇ ಕಾರಣಕ್ಕಾಗಿ ನಮ್ಮ ಮುಂದಿನ ಯುವ ಪೀಳಿಗೆ ಜಿಗುಪ್ಸೆ ತಾಳಿದರೆ ಆಶ್ಚರ್ಯವೇನಿಲ್ಲವಲ್ಲ!
ಆದರೆ, ಹಿರಿಯರು-ಕಿರಿಯರೂ ನಾವೆಲ್ಲರೂ ಇಲ್ಲೇ ಧೈರ್ಯವಾಗಿ ಏನೆಲ್ಲವನ್ನೂ ಎದುರಿಸುತ್ತ  ಬದುಕ ಬೇಕಾಗಿದೆ; ಬೆಳೆಯ ಬೇಕಾಗಿದೆ; ಧೀರ್ಘ ಆಯುಷಿಗಳಾಗಿ ಬದುಕಿ ಸಾರ್ಥಕ್ಯ ಕಾಣಬೇಕಿದೆ;  ಬಾಳು ಬೆಳಗಬೇಕಾಗಿದೆ.

ಹೌದು, ಕುವೆಂಪು ಅವರ ಮಾತುಗಳನ್ನು ನಿತ್ಯ ನೆನೆಯೋಣ, ಈ ಪ್ರಪಂಚ ಹೇಗಿದ್ದರೇನು ನಾವು ಸರಿಯಾಗಿದ್ದರಾಯಿತು; ಸರಿದಾರಿಯಲ್ಲಿ ಹೋಗೋಣ.  ಆದ್ದರಿಂದ, ನಾವು ಹತಾಶರಾಗಬೇಕೇಕೆ;  ಹಳಿಹಳಿಸಬೇಕೇಕೆ… ? ಎಲ್ಲರೂ ಒಂದು ದಿನ ಹೋಗುವವರೇ…ಆದರೆ, ಏನನ್ನಾದರೂ ನಮ್ಮ ಕುಟುಂಬಕ್ಕೆ ಸಮಾಜಕ್ಕೆ ಒಳಿತನ್ನೇ  ಕೊಟ್ಟು ಧನ್ಯರಾಗೋಣ. ಅದಮ್ಯ ಶಾಂತಿ ಸಮಾಧನದಿಂದ ಹೋಗುವವರಲ್ಲಿ ನಾವೂ ಒಬ್ಬರಾಗೋಣ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s