ಅವಲೋಕನ

2. ಹೃದಯ ಕಲಕುವ ಬುದ್ಧಿಗೆ ಚುರುಕು ಮುಟ್ಟಿಸುವ ಪುಸ್ತಕ “ಹೈಮಾಚಲ ಸಾನ್ನಿಧ್ಯದಲ್ಲಿ”

ಹೈಮಾಚಲ ಸಾನ್ನಿಧ್ಯದಲ್ಲಿ ಸ್ವಾಮಿ ಸೋಮನಾಥಾನಂದ ಅವರ  ಅಮರನಾಥ, ಕೇದಾರ, ಬದರಿ ಯಾತ್ರೆಗಳ ಪ್ರವಾಸ ಕಥನ. ಮೈಸೂರಿನ ರಾಮಕೃಷ್ಣಾಶ್ರಮ ಪ್ರಕಟಿಸಿದೆ. ಸ್ವಾಮೀಜಿ ಒಬ್ಬರು ಬರೆದಿದ್ದಾರೆಂದರೆ ಅದು ಭಕ್ತಿ ರಸ ಪ್ರಧಾನವಾದ ಧಾರ್ಮಿಕ  ಕೃತಿಯಾಗಿರುತ್ತದೆಂದೇ ಭಾವಿಸುತ್ತೇವೆ. ಆದರೆ, ಸ್ವಾಮಿ ಸೋಮನಾಥರು ಆ ನಮ್ಮ ತಪ್ಪು ಕಲ್ಪನೆಯಿಂದ ಹೊರಬರುವಂತೆ ಇಲ್ಲಿ ಚಿತ್ರಿಸಿದ್ದಾರೆ. ಅವರ ನವಿರಾದ ಮೃದು ಭಾಷೆಯಲ್ಲಿ ಅಮರನಾಥ, ಕೇದಾರ, ಬದರಿ ಯಾತ್ರಾ ಸ್ಥಳಗಳನ್ನು ತಲುಪುವವರೆಗೂ ದಾರಿಯುದ್ದಕ್ಕೂ ನಮ್ಮನ್ನು ಹೊಸ ಲೋಕಾನುಭವಕ್ಕೇ ಕೊಂಡೊಯ್ಯುತ್ತಾರೆ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವರು, ಧಾರ್ಮಿಕತೆ ಆಧ್ಯಾತ್ಮಿಕತೆ ಹಾಗೂ ತಮ್ಮ ಯಾತ್ರೆಗಳಲ್ಲಿ ಕಂಡ ಸ್ಥಳ ಪುರಾಣಗಳ ಬಗ್ಗೆ ಹೇಳುತ್ತಲೇ ನಮ್ಮ ಸಾಮಾಜಿಕ ರೀತಿ ನೀತಿಗಳ ಬಗ್ಗೆ ಮತ್ತು ನಮ್ಮ ಸ್ಥಿತಿ ಗತಿಗಳ ಬಗ್ಗೆ  ಸಾದ್ಯಾಂತ ವಿವರಿಸುತ್ತಾರೆ; ವಿಶ್ಲೇಷಣೆ ಮಾಡುತ್ತಾರೆ. ಯಾತ್ರಿಕರಿಗೆ ಸಂಪೂರ್ಣ ಮಾರ್ಗದರ್ಶನವಲ್ಲದೇ ಅವರೊಂದಿಗೇ ನಾವೂ ಯಾತ್ರೆ ಮಾಡಿದಂತೆಯೇ ಭಾಸವಾಗುತ್ತದೆ.

ಅವರ ೧೮೦ ಪುಟಗಳ ಈ ಪುಸ್ತಕವನ್ನು ನಾನು ಮತ್ತೊಮ್ಮೆ ಮಗದೊಮ್ಮೆ ಓದಿದ್ದೇನೆ. ಪ್ರತಿ ಸಲ ಓದಿದಾಗಲೂ ಹೊಸ ಲೋಕ ಹೊಕ್ಕ ಅನುಭವ ರಸಾನುಭೂತಿ! ಪುಸ್ತಕದ ಪುಟ ಪುಟಗಳಲ್ಲಿ ಅದೆಷ್ಟು ಪಂಕ್ತಿಗಳನ್ನು ಅಡಿಗೆರೆಗಳಿಂದ ಗುರುತು ಹಾಕಿದ್ದೇನೆಯೋ…. ಅವುಗಳಲ್ಲಿ ಕೆಲವನ್ನಾದರೂ ನಿಮ್ಮೊಂದಿಗೆ ಹಂಚಿಕೊಳ್ಳುವ ಉತ್ಕಟೇಚ್ಛೆ ನನ್ನದು…

ಮೊದಲನೆಯದಾಗಿ ಸ್ವಾಮಿ ಸೋಮನಾಥಾನಂದರು, ತಮ್ಮ “ಈ ಹೈಮಾಚಲ ಸಾನ್ನಿಧ್ಯದಲ್ಲಿ” ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಿ ಎಂದು ನಮ್ಮ ನಾಡಿನ ಮೆಚ್ಚಿನ ಕವಿ ಕುವೆಂಪು ಅವರನ್ನು  ಕೇಳಿಕೊಂಡಾಗ,

“ನಿಮ್ಮ ಪುಸ್ತಕ ಓದುತ್ತೇನೆ, ಸಾಧ್ಯವಾದರೆ, ಪ್ರೇರಣೆಯಾದರೆ, ಬರೆಯುತ್ತೇನೆ.  ಇಲ್ಲದಿದ್ದರೆ ಇಲ್ಲ. ನಾನು ಬರೆದುಕೊಡುತ್ತೇನೆಂದು ನೀವು ಬಂಬಲೂ ಬಾರದು, ನಿರೀಕ್ಷಿಸಲೂಬಾರದು” ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರಂತೆ.  ಸ್ವಾಮೀಜಿವರೂ “ಆಗಲಿ” ಎಂದು ಹೇಳಿ ಹೊದರಂತೆ.

ಕೊನೆಗೂ ಹದಿನಾಲ್ಕು ಪುಟಗಳಷ್ಟು ಮುನ್ನುಡಿ ಬರೆದು ಕೊಟ್ಟ ಕುವೆಂಪು ತಮ್ಮ ಮುನ್ನುಡಿಯಲ್ಲೇ ಹೀಗೆ ಬರೆಯುತ್ತಾರೆ-

.“..ಏಕೆಂದರೆ, ನನಗೆ ಪುಣ್ಯಕ್ಷೇತ್ರ ಮತ್ತು ತೀರ್ಥಯಾತ್ರೆಗಳ ವಿಚಾರದಲ್ಲಿ ಅಷ್ಟೇನೂ ಶ್ರದ್ಧೆಯಿದೆ ಎಂದು ಹೇಳಿಕೊಳ್ಳಲಾರೆ. ನಾನು ಪೂಜೆಯ ಸಲುವಾಗಿ ದೇವಸ್ಥಾನಗಳಿಗೆ ಕೂಡ  ಹೋಗದೆ ಕಾಲು ಶತಮಾನಕ್ಕಿಂತಲೂ ಹೆಚ್ಚಾಯಿತೆಂದು ತೋರುತ್ತದೆ. (ಹಾಗೆಂದು ಕುವೆಂಪುರವರು ಪೂಜೆ ಮಾಡುತ್ತಿರಲಿಲ್ಲವೆಂದಲ್ಲ. ಅವರು ಮನೆಯಲ್ಲೇ ಪೂಜೆ ಮಾಡುತ್ತಿದ್ದ ಪ್ರಸಂಗವನ್ನು ಪೂರ್ಣ ಚಂದ್ರ ತೇಜಸ್ವಿಯವರು ತಮ್ಮದೊಂದು ಪುಸ್ತಕ “ಅಣ್ಣನ ನೆನಪು…” ದಲ್ಲಿ ಬರೆದಿದ್ದಾರೆ. ಅದು ಪಿ.ಯು ವಿದ್ಯಾರ್ಥಿಗಳಿಗೆ ಪಠವಾಗಿದೆ ಎಂದು ನನ್ನ ನೆನಪು).

ನಾನು ಜಾತಕ ಪಂಚಾಂಗ ಇತ್ಯಾದಿಗಗಳ ಕಡೆ ಮುಖಹಾಕಿದವನಲ್ಲ. ರಾಹುಕಾಲ ಗುಳಿಕ  ಕಾಲಗಳ ಅರ್ಥವೂ ಗೊತ್ತಿಲ್ಲ. ಪಿತೃಗಳಿಗೆ ಶ್ರಾದ್ಧ ಮಾಡುವುದು ಪಿಂಡ  ಅರ್ಪಿಸುವುದು ಇತ್ಯಾದಿ ಕೇಳಿಬಲ್ಲೇನೇ ಹೊರತು ಮಾಡು ಗೋಜಿಗೆ ಹೋದವನಲ್ಲ…. ಎನ್ನುತ್ತಾರೆ

“..ಹಿಂದೂಧರ್ಮಕ್ಕೆ ಸೇರಿದವು ಎಂದು ಹೇಳಿಕೊಂಡು ಅನೇಕರು ಆಚರಿಸುವ ಕ್ರಿಯೆಗಳಲ್ಲಿ ಮುಕ್ಕಾಲುಮೂರು ಮೀರಿದುದಕ್ಕಿಂತಲೂ ಹೆಚ್ಚು ಪಾಲಿಗೆ ನಾನು ಸ್ವಭಾವತಃ  ವಿಮುಖವಾಗಿದ್ದೇನೆಂದು  ತೋರುತ್ತದೆ. ಹೀಗಿರುವವನು ಕೇದಾರ, ಬದರೀನಾಥದ ಪುಣ್ಯಕ್ಷೇತ್ರಗಳಿಗೆ ಯಾತ್ರೆಹೋಗಿರುವವರು ಯಾವ ಬಗೆಯ ನಂಬುಗೆಗಳಿಂದ ಏನೇನನ್ನು ಮಾಡುತ್ತಾರೋ ಅದನ್ನೆಲ್ಲ ಸಹಾನುಭೂತಿಯಿಂದ ನೋಡಿ ಶ್ಲಾಘಿಸುವುದು ಸಾಧ್ಯವಾಗುತ್ತೆಯೇ?…ಅದು ಸಾಧ್ಯವಾಗದಿದ್ದರೆ ಟೀಕಿಸುವುದು ಮುನ್ನುಡಿ ಬರೆಯುವವನಿಗೆ ಯೋಗ್ಯವೇ, ಸಭ್ಯವೇ? ಮನಸ್ಸಿನಲ್ಲಿ ಖಂಡನೆಯಿದ್ದೂ ಬಾಯಲ್ಲಿ ಮಾತ್ರ ಉಪಕಾರ  ಶ್ಲಾಘನೆ ಮಾಡುವುದು ನನಗೆ ಎಂದಾದರೂ ಸಾಧ್ಯವೇ? ನನ್ನ ಸ್ವಂತ ಅಭಿಪ್ರಾಯವೇನಾದರೂ ಆಗಿರಲಿ; ಇತರರ ಹೃದಯಾನುಭವದ ದೃಷ್ಟಿಯಿಂದಲಾದರೂ ಅದನ್ನು ಮೆಚ್ಚಬಹುದಲ್ಲ ಎಂದರೆ,

“…ಮನಸ್ಸಿನಲ್ಲಿ ಇನ್ನೂ ಹಸಿಹಸಿಯಾಗಿರುವ ಮೊನ್ನೆಮೊನ್ನೆ ನಡೆದ ಕುಂಭಮೇಳದ ಕಾಲ್ತುಳಿತದ ಪ್ರಕರಣ, ಮಲೆ ಮಾದೇಶ್ವರ ಬೆಟ್ಟದ ಜಾತ್ರೆಯ ಕಾಲರಾ ಬಲಿಯ ವಾರ್ತೆಯ ಅಸಹ್ಯಾನುಭವವೂ ಅಶ್ಲೀಲ ವಿಕಾರರೂಪಗಳಿಂದ ನನ್ನ ಮುಂದೆದ್ದು ನಿಂತು ಹಲ್ಲು ಕಿರಿದು ಹಾಸ್ಯ ಮಾಡಿದಂತೆ ಭಾಸವಾಯಿತು. ಇಂತಹ ಗುರುಪ್ರಮಾಣದ ಕೇಡಿಗೆ ಕಾರಣವಾಗುವ ಮೌಢ್ಯಗಳನ್ನು ಖಂಡಿಸದೇ ಶ್ಲಾಘಿಸಿದರೆ ಜನಕ್ಕೆ ದ್ರೋಹವೆಸಗಿದಂತಾಗುತ್ತದೆಂದು ತೋರಿತು. ಈ  ಎಲ್ಲ ಇಕ್ಕಟ್ಟಿನಲ್ಲಿ ಸಿಲುಕಿದ ನಾನು  ಮುನ್ನುಡಿ ಬರೆದು ಕೊಡುತ್ತೇನೆಂದು ಮಾತು ಕೊಡಲಿಲ್ಲ ಎನ್ನುತ್ತಾರೆ; ಕೊನೆಗೂ ೧೪ ಪುಟಗಳ ಸುಧೀರ್ಘ ಮುನ್ನುಡಿಯನ್ನೇ ಬರೆದು ಕೊಟ್ಟ  ನಮ್ಮ ಕವಿ ಕುವೆಂಪುರವರು.

ಮತ್ತೆ ಕುವೆಂಪು ಹೇಳುತ್ತಾರೆ-

ನಾನು ಪುಸ್ತಕ  ಓದಿದೆ. ಧೈರ್ಯವಾಯಿತು. ಸ್ವಾಮಿ ಸೋಮನಾಥಾನಂದರಂತಹ ಭಕ್ತರ ಭಾವಸಂಗವೂ ಜ್ಞಾನಿಗಳ ವಿಚಾರಪೂರ್ಣ ದೃಷ್ಟಿಯೂ ಸಹ ಯಾತ್ರಿಗಳಾದ ಪಕ್ಷದಲ್ಲಿ, ನಾನೂ ಮೂಢಾಚಾರಿಯಾಗುವ ಭೀತಿಯಿಲ್ಲದೆ ಹೈಮಾಚಲ ಸಾನ್ನಿಧ್ಯಕ್ಕೆ ಯಾತ್ರೆ ಹೋಗಿ ಬರಹುದೆಂದು ತೋರಿತು. ಅಷ್ಟೇ ಅಲ್ಲ; ಆಗಲೇ ಅವರೊಡನೆ ಯಾತ್ರೆ ಹೋಗಿ ಬಂದಂತೆಯೂ ಅನುಭವವಾಯಿತು…”

“… ಇಲ್ಲಿ ಭಕ್ತಿ, ಮೌಢ್ಯಕ್ಕೂ, ಮಿಥ್ಯಾಚಾರಕ್ಕೂ ಶರಣಾಗಿಲ್ಲ, ವಿವೇಕ  ವಿಚಾರಗಳ ಗೌರವ ರಕ್ಷೆಯಲ್ಲೇ  ದೇವಸ್ಥಾನ ಪ್ರವೇಶವಾಗುತ್ತದೆ. ಮತೀಯ ತೀಕ್ಷ್ಣ ಖಡ್ಗ ಸದಾ ಒರೆಗಳದಿದ್ದರೂ ಔದಾರ‍್ಯದ ಮುಷ್ಠಿಯಲ್ಲಿ ಸಂಯಮಶೀಲವಾಗಿ  ವರ್ತಿಸುವುದನ್ನು ಕಾಣುತ್ತೇವೆ… ದೇವರ  ಹೆಸರಿನಲ್ಲಿ ಮಿಥ್ಯಾಚಾರ, ವಂಚನಗಳನ್ನು ಕಂಡಾಗ ಲೇಖಕರ ಟೀಕೆ ನಖವೆತ್ತಿ ಅಪ್ಪಳಿಸುವುದನ್ನು  ಕಾಣುತ್ತೇವೆ….  ಈ ಪುಸ್ತಿಕೆಯಲ್ಲಿ  ಉದ್ದಕ್ಕೂ  ಅಲ್ಲಲ್ಲಿ ತಿಳಿಯಾದ ಹಾಸ್ಯದ ಮುಗುಳು ನಗೆಯುಕ್ಕಿಸುವುದನ್ನು ನಾವು  ಕಾಣುತ್ತೇವೆ. ವಿಡಂಬನೆಯ ಲೇಖಕರ ಮನೋಧರ್ಮ ಓದುಗರನ್ನು ಒಂದು ಪ್ರಸನ್ನತೆಯ ಸಾನ್ನಿಧ್ಯದಲ್ಲಿರಿಸುವುದರಿಂದ ಎಲ್ಲಿಯೂ ಉದ್ರೇಕಾನುಭವಕ್ಕೆ ಎಡೆಗೊಡುವುದಿಲ್ಲ… ಲೇಖಕರು ತಮ್ಮ ಹಿಂದಿನದೊಂದು ಪ್ರವಾಸ ಕಥನಕ್ಕಿಂತ ಇಲ್ಲಿ ಸುಮಧಿಕತರವಾದ ಔತಣವನ್ನೇ ಉಣ ಬಡಿಸಿದ್ದಾರೆ ಎಂಬ ಕುವೆಂಪುರವರ  ಅನುಭವದ ಮಾತುಗಳಲ್ಲಿ  ನಾವೂ  ಸಹ ಪುಸ್ತಕ ಓದಿದಮೇಲೇ ಅಂತೆಯೇ  ತಲೆದೂಗುತ್ತೇವೆ….

ಈ ಹಿಂದೆ  ನಾನು ಹೇಳಿದಂತೆ ಈ ಪುಸ್ತಕದ ಪುಟ ಪುಟಗಳಲ್ಲಿ ನಾನು ಸವಿದಹಾಗೆಯೆ ನನ್ನನ್ನು  ನಗೆ ಮುಗುಳಲ್ಲಿ ತೇಲಿಸಿದ ಪಂಕ್ತಿಗಳನ್ನು  ಅಡಿಗೆರೆಗಳಿಂದ  ಗುರುತಿಸಿದ್ದೆನಲ್ಲವೇ ಅವುಗಳಲ್ಲಿ ಕೆಲವನ್ನಾದರೂ  ನಿಮ್ಮೊಂದಿಗೆ ಮುಂದಿನ ಬರೆಹದಲ್ಲಿ ಹಂಚಿಕೊಳ್ಳ ಬಯಸುತ್ತೇನೆ…

ಅದಕ್ಕಾಗಿ ನೀವು ಇನ್ನೊಮ್ಮ ಕಾತರದಿಂದ ನಿರೀಕ್ಷಿಸುವಿರೆಂದು  ಭಾವಿಸುತ್ತೇನೆ…

ತೀರ್ಥ ಯಾತ್ರೆಗಳನ್ನು ಯಾಕೆ ಮಾಡಬೇಕು..?

ಪುಸ್ತಕ: “ಕಥೆಯೊಳಗಿನ ಕಥೆ”                                                                            1. ಹೊರದೇಶಕ್ಕೆ ಹೋಗ ಬಯಸುವ  ಯವಕರ  ಮನಸ್ಸಿನ “ದ್ವಂದ್ವ”

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Ritertimes- New Light;New Dimension

%d bloggers like this: