Category Archives: Blogs

ಆಣ್ಣಾ ಹಜಾರೆ ಸತ್ಯಾಗ್ರಹ ಅಂತ್ಯವಲ್ಲ; ಆರಂಭ ಯಾಕೆ…?

ಇದೇನೂ ಅಂತ್ಯವಲ್ಲ ಆರಂಭ ಎಂಬ ಮಾತೂ ಕೇಳಿ ಬರುತ್ತಿರುವುದು ಗಮನಾರ್ಹ. ಯಾಕೆಂದರೆ, ಅಣ್ಣಾ ಅವರ ಹೋರಾಟ  13 ದಿನಗಳೇ ಅಹರ್ನಿಶಿ ನಡೆಯಿತು. ಅದರ ಆರಂಭದಲ್ಲೇ ಅದು ಸಂವಿಧಾನಿಕ ನಿಯಮಗಳಿಗೆ ವಿರೋಧಿ, ಅವರು ಜನತೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಅವರನ್ನು ಸೆರೆಮನೆಗೆ ತಳ್ಳುವ ನಾಟಕವೂ ನಡೆಯಿತು. ಆನಂತರ, ದೇಶದಾದ್ಯಂತ ಹಜಾರೆ ಅವರ ಉಪವಾಸ ಸತ್ಯಾಗ್ರಹಕ್ಕೆ ಜನಬೆಂಬಲ ದೊರೆತು, ಅಣ್ಣಾ ಅವರ ಗುಂಪು ಸಶಕ್ತ ಜನಲೋಕಪಾಲ ಮಸೂದೆ ಹೀಗೇ ಇರಬೇಕೆಂಬ ಅಂಶಗಳನ್ನು ಸರ್ಕಾರದ ಮುಂದಿಟ್ಟು ತಮ್ಮ ಹೋರಾಟದ ಪಟ್ಟು ಬಿಗಿಗೊಳಿಸಿತು. ಅದು ಸರ್ವಾಧಿಕಾರಿ ದೋರಣೆ ಎಂಬ ವಾದವೂ ಕೂಡ ಪ್ರಬಲವಾಗಿ  ಆಳುವ ವರ್ಗದಿಂದ ಜನರ ನಡುವೆ ಬುದ್ದಿವಂತರೂ ವಿದ್ವಾಂಸರು ಎನಿಸಿಕೊಂಡವರ ಗುಂಪಿನಿಂದಲೂ ಕೇಳಿ ಬಂದದ್ದೂ ದೊಡ್ಡ ವಾದವಿವಾದಕ್ಕೆ ಕಾರಣವಾಯಿತು.

ಯಾರೇನೆ ಅನ್ನಲಿ, ಅಣ್ಣಾ ಅವರ ಗುಂಪು ಹಾಗೆ ಪಟ್ಟು ಹಿಡಿಯಲು ಕಾರಣ ನಿಚ್ಛಳವಾಗಿತ್ತು.  ನಮ್ಮ ಸಂವಿಧಾನದಲ್ಲಿ ಶಾಸನಗಳನ್ನು ರೋಪಿಸಿವವರು ಶಾಸಕರೇ, ಅದಕ್ಕೆ ಆಚಾರ ಸಂಹಿತೆಗಳನ್ನು ನೀಡುವವರು ಸಂಸದರೇ ಆಗಿರುತ್ತಾರೆ. ಯಾವುದೇ ವಿಧೇಯಕ ಒಂದನ್ನು ಮಂಡಿಸಿದಾಗ ಸಭಾದ್ಯಕ್ಷರೂ ಸಚಿವರೆಲ್ಲರೂ ಸೇರಿ ಸಂಸತ್ತಿನಲ್ಲಿ ಒಮ್ಮತದಿಂದ ಅಂಗೀಕರಿಸಿದಾಗ ಮಾತ್ರ ಅದೊಂದು ಕಾಯಿದೆಯಾಗುತ್ತದೆ. ಸಂವಿಧಾನಕ್ಕೆ ಯಾವುದೇ ತಿದ್ದು ಪಡಿಯೂ ಆಗಬೇಕೆಂದರೆ ಇದೇ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಇದು ನಮ್ಮ ಪ್ರಜಾಪ್ರಭುತ್ವದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಸಂವಿಧಾನಿಕ ಅಧಿನಿಯಮವೇ. ಆದರೂ, ಸ್ವಾತಂತ್ರ್ಯಾನಂತರದ ಭಾರತದಲ್ಲಿ ನಮ್ಮ ದೇಶದ ಸಂವಿಧಾನವೆಂಬುದು 1950 ರ ದಶಕದಲ್ಲಿ ಜಾರಿಗೆ ಬಂದಂದಿನಿಂದಲೂ ಅದಕ್ಕೆ ಅನೇಕ ತಿದ್ದು ಪಡಿಗಳಾಗಿವೆ; ಅವೆಲ್ಲ ಕಾಯ್ದೆಗಳೂ ಆಗಿ ಜಾರಿಯಲ್ಲಿವೆ. ಬರು ಬರುತ್ತಾ ಆದುದು ಆಗುತ್ತಿರುವುದಾದರೂ ಏನು? ನಾವುಗಳು ಆರಿಸಿ ಕಳುಹಿಸಿದ ಬಹುತೇಕ ಶಾಸಕರು ಸಚಿವರು ಜನಪ್ರತಿನಿಧಿಗಳೆನಿಸಿಕೊಂಡಿರುವವರು ಜನಹಿತಕ್ಕಿಂತ ತಮ್ಮಸ್ವಹಿತ  ಸ್ವಲಾಭಕ್ಕೆ ಸ್ವಜನ ಪಕ್ಷಪಾತಕ್ಕಷ್ಟೇ ಹೆಚ್ಚುಹೆಚ್ಚು ಒತ್ತುಕೊಡಲಾರಂಭಿಸಿದರು.  ಅವರ ಅಕ್ರಮ ಅವ್ಯವಹಾರಗಳಿಗೆ  ಕೊನೆ ಮೊದಲಿಲ್ಲವಾಯಿತು. ಅವರಲ್ಲಿ ಪ್ರಾಮಾಣಿಕರೂ ಯಾರೂ ಇಲ್ಲ ಎಂಬಷ್ಟು ನಂಬಿಕೆ! ಸಚಿವರು ಶಾಸಕರಾಗುವುದೆಂದರೆ ತಮ್ಮ ಸ್ವಂತಕ್ಕೆ ಅಕ್ರಮ ಆಸ್ತಿ ಹಣ ಮಾಡಿಕೊಳ್ಳುವುದೇ ಮುಖ್ಯವಾಗಿ ಬಿಟ್ಟಿತು.

ಈ ಜನಪ್ರತಿನಿಧಿಗಳಲ್ಲಿ ಎಷ್ಟೋ ಮಂದಿ ದುಡ್ಡು ಗುಳುಂ ಮಾಡುವ ಅವಕಾಶಗಳನ್ನು ಯಾವುದೇ ಜನಪರ ಯೋಜನೆಗಳು ಜಾರಿಯಾಗಲಿ ಅವನ್ನು ಚೆನ್ನಾಗಿಯೆ ಬಳಸಿಕೊಂಡು ತಾವು ಶ್ರೀಮಂತರಾಗಿ ಮೆರೆಯುತ್ತಿದ್ದಾರೆ.  ಅದೇ ಅವರಿಗೆ ಪ್ರತಿಕೂಲವಾಗುವಂತಹ ಯಾವುದೇ ಕಾಯಿದೆ ಕಾನೂನು ಜಾರಿಯಾಗುವುದರಲ್ಲಿ  ವಿಳಂಬ ನೀತಿಯಾಗುವುದನ್ನು ಅವರೆಲ್ಲರೂ ಪೋಷಿಸಿಕೊಂಡೇ ಬಂದಿದ್ದಾರೆ ಎಂಬುದು ಉತ್ಪ್ರೇಕ್ಷೆಯೇನಲ್ಲ.

ಜನಲೋಕಪಾಲ ಮಸೂದೆ ಮೊದಲ ಬಾರಿಗೆ ಮಂಡನೆಯಾದದ್ದು  1968 ರಲ್ಲಿ; ಮೊರಾರ್ಜಿದೇಸಾಯಿ ಅವರ ಸರ್ಕಾರವಿದ್ದಾಗ. ಕಳೆದ ನಾಲ್ಕು ದಶಕಗಳಿಂದ ನೆನೆಗುದಿಗೆ ಬೀಳಲು ಕಾಂಗ್ರೇಸ್ ಕಾರಣವೆಂಬುದು ಇದೀಗ ಸ್ಪಷ್ಟವಾಗಿಬಿಟ್ಟಿದೆ. ಇಂತಹ ಸಶಕ್ತ ಜನಪರ ಲೋಕಪಾಲ ವಿಧೇಯಕದ ವಿಚಾರದಲ್ಲಿ ಸಾಮಾನ್ಯ ಜನತೆ ಏನೂ ಮಾಡಲಾರದವರಾಗಿದ್ದರು.  ಸಾಮಾನ್ಯವಾಗಿ ಸಂವಿಧಾನದ ವಿಧಿವಿಧಾನಗಳಲ್ಲಿ  ಕೈಗೊಳ್ಳುವ ನಿರ್ಣಯಗಳೆಲ್ಲಿ ಶಾಸಕ ಸಂಸದರ ಸ್ವಾರ್ಥಕ್ಕೆ ಹಾಗೂ ಲಾಭಕ್ಕೆ ಅಡೆತಡೆಯಿಲ್ಲದಿರುವಂತಹವು ಬಹುಬೇಗ ಜಾರಿಯಾಗಿಬಿಡುತ್ತವೆ. (ಉದಾಹರಣೆಗೆ ಇತ್ತಿಚೆಗೆ ದುಪ್ಟಟ್ಟು ಹೆಚ್ಚಾಗಿ ಅತಿಶೀಘ್ರದಲ್ಲೇ ಜಾರಿಯಾಗಿರುವ ಶಾಸಕರು ಮತ್ತು  ಮಂತ್ರಿ ಮಹೋದಯರುಗಳ ಸಂಬಳ ಸಾರಿಗೆ ಹಾಗೂ ಇತರೆ ಭತ್ಯೆಗಳು!). ಅದೇ ಬಡ ಜನತೆಯ ಜನಪರ ಕಾಳಜಿಯುಳ್ಳ, ಮಸೂದೆಗಳು ಚರ್ಚೆಗೆ ಬಂದರೂ  ಅವುಗಳ ಅನುಮೋದನೆಗೆ ಅನಗತ್ಯ ವಿಳಂಬಮಾಡುವುದು,  ಒಳ್ಳೆಯ ಕೆಲಸಕ್ಕೆ ಯಾವಾಗಲೂ ಅಡ್ಡಗಾಲು.

ಅಪರೂಪಕ್ಕೊಂದು ಅಂತಹ ಜನಉಪಯೋಗಿ ಕಾಯಿದೆ ಜಾರಿಯಾದರೂ ಅದು ನಿರ್ಧಿಷ್ಟ ಫಲಾನುಭವಿಗಳಿಗೆ ತಲುಪುವಾಗಲೂ ಭ್ರಷ್ಟರಿಗೆ ಅದರಲ್ಲೂ ಪಾಲು. ಇನ್ನೂ ಉಳಿದವು ಮೂಲೆಗುಂಪುಗಳಾಗಿ ಬಿಡುವುದು ಹೆಚ್ಚಾಯಿತು.  ಸಂಸತ್ತಿನಲ್ಲಿ ಆಳುವವರ ಮತ್ತು ವಿರೋಧಪಕ್ಷಗಳ  ನಡುವೆ ನಡೆಯುವ ಕಿತ್ತಾಟ ಅರಚಾಟಗಳು ನಗೆಪಾಟಲಿಗೀಡಾದವು. ಹೀಗಾಗಿ  ನಮ್ಮ ಪ್ರಜಾಸತ್ತೆಯ ಸಂವಿಧಾನಿಕ ಕಲಾಪಗಳನ್ನೇ ದೇಶದ ಮಹಾಜನತೆ ಸಂಶಯದಿಂದ ನೋಡುವಂತಾಗಿದ್ದು  ತಾವು ಆಯ್ಕೆಮಾಡಿ ಕಳುಹಿಸಿದ ಜನಪ್ರತಿನಿಧಿಗಳೇ ಕಡು ಸ್ವಾರ್ಥಿಗಳಾಗಿ  ಭ್ರಷ್ಟಾಚಾರ ಸ್ವಜನ ಪಕ್ಷಪಾತದಲ್ಲಿ ತೊಡಗಿದ್ದು  ಜನರ ನಂಬಿಕೆಗೆ ಅರ್ಹರಲ್ಲವೆಂಬಂತೆ  ಕಂಡುಬರುವುದೇ ವಿಪರೀತವಾಗಿದ್ದು ದುರಾದೃಷ್ಟಕರವೇ.

ಹೀಗಾಗಿ  ದಿನೇ ದಿನೇ ಇಡಿ ದೇಶವೇ ಕೆಳವರ್ಗದಿಂದ ಮೇಲ್ಮಟ್ಟದ ಅಧಿಕಾರಿಗಳವರೆಗೂ ಭ್ರಷಾಚಾರದ ಜಟಿಲ ಸಮಸ್ಯೆಯನ್ನೆದುರಿಸುತ್ತಿರುವ ದುರ್ಭರ ಪರಿಸ್ಥಿತಿಯಲ್ಲಿ ಗಾಂಧೀವಾದಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭ್ರಷ್ಟಾಚಾರವನ್ನು ಬುಡಸಹಿತ  ಕಿತ್ತೊಗೆಯಲು ಕಾರ್ಯಪ್ರವೃತ್ತರಾದರು.  ದೇಶದಾದ್ಯಂತ ಜನತೆಗೆ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕರೆಕೊಟ್ಟರು. ಈವರೆಗೆ ಭ್ರಷ್ಟಾಚಾರದಿಂದ ರೋಸಿಹೋಗಿದ್ದ ಜನತೆ ಸ್ವಯಂ ಪ್ರೇರಿತರಾಗಿ ಮುಂದೆ ಬಂದದ್ದು ಅಣ್ಣಾ ಅವರ ಸತ್ಯಾಗ್ರಹಕ್ಕೆ ಬೆಂಬಲ ಪ್ರವಾಹದಂತೆ ಹರಿದು ಬಂದದ್ದು ಸಹಜವೇ ಆಗಿತ್ತು.
ಇದೀಗ ಅಣ್ಣಾ ಹಜಾರೆ ಅವರ ಸೇವೆ ಈ ದೇಶಕ್ಕೆ ಇನ್ನೂ ಬೇಕಾಗಿದೆ. ಸದ್ಯ ಸರ್ಕಾರ ಅಣ್ಣಾ ಕೊನೆ  ಘಟ್ಟದಲ್ಲಿ ಸಶಕ್ತ ಜನಲೋಕಪಾಲ ಮಸೂದೆಗೆ ಮುಂದಿಟ್ಟ 3 ತಾತ್ವಿಕ ನೆಲೆಗಟ್ಟಿನ ಅಂಶಗಳನ್ನು  ಸಂಸತ್ತಿನಲ್ಲಿ ಮಾನ್ಯಮಾಡಿದೆ.  ಅಣ್ಣಾ  ಅವರ ಆರೋಗ್ಯ ಮತ್ತು ವಯೋಮಾನದ ದೃಷ್ಟಿಯಲ್ಲಿ ಎಲ್ಲರ ಅಪೇಕ್ಷೆಯಂತೆ ಅವರ  ಸತ್ಯಾಗ್ರಹ ಅಂತ್ಯಕಂಡಿದೆ.  ಈಗಾಗಲೇ ಅಣ್ಣಾ ತಮ್ಮ ಮುಂದಿನ ಹೋರಾಟ ದೇಶದ ಯಾವ ಸಮಸ್ಯೆಗಳ ಬಗ್ಗೆ  ಎಂಬುದರ ಸುಳಿವನ್ನೂ ನೀಡಿದ್ದಾರೆ.

ಆದರೆ, ಜನಲೋಕಪಾಲ ಮಸೂದೆ ಮಂಡನೆಯಾಗಿ ನಾಲ್ಕು ದಶಕಗಳೇ ಕಳೆದಿದ್ದು, ಈ ಅವಧಿಯಲ್ಲಿ 9 ಬಾರಿ ಸಂಸತ್ತಿನಲ್ಲಿ ಮಂಡನೆಯಾಗಿದೆಯಾದರೂ, ಯಾವೊಬ್ಬ ಜನಪ್ರತಿನಿಧಿಯೂ ಅದನ್ನು ಜಾರಿಗೊಳಿಸುವ ಹೋರಾಟಕ್ಕೆ ಮುಂದಾಗಿಲ್ಲವೆಂಬುದೂ ಗಮನಿಸಬೇಕಾದ್ದೇ… ಇದೀಗ ಅಣ್ಣಾ ಹೋರಾಟದಲ್ಲಿ ಅದು ಮಂಡನೆಯಾಗಿ ಸಂದೀಯ ಸ್ಥಾಯಿ ಸಮಿತಿಯ ಎದುರು ಇದೆ.  ಈ ಸಮಿತಿಯಲ್ಲಿರುವವರ ಚಾರಿತ್ರ್ಯವು ಶಂಕಾಸ್ಪದವಾಗಿದೆ. ಮೇವು  ಹಗರಣದ ಲಾಲೂ ಪ್ರಸಾದ್ ಯಾದವ್, ಕಲ್ಲಿದ್ದಲು ಹಗರಣದ ರಾಮ್ ವಿಲಾಸ್ ಪಸ್ವಾನ್, ಸಂಸದರಿಗೆ ಮತಕ್ಕಾಗಿ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಅಮರ್ ಸಿಂಗ್ ಇವರುಗಳೆಲ್ಲ ಇಂದಿನ ಆಳುವ ಪಕ್ಷ ಕಾಂಗ್ರೆಸ್ ಬೆಂಬಲಿಗರೇ.

ಇಲ್ಲಿ ಒಂದು ಪ್ರಶ್ನೆ ಎಳುತ್ತದೆ. ಇತ್ತೀಚೆಗೆ  ಸಂಸತ್ತಿನಲ್ಲಿ ಈ ಮಸೂದೆ ಚರ್ಚೆಗೆ ಬಂದಾಗ ಭ್ರಷ್ಟಾಚಾರ ವಿರೋಧಕ್ಕೆ ಅಣ್ಣಾ ಅವರ ಪರ ಹೆಚ್ಚು ವಾದಕ್ಕಿಳಿದ ಪ್ರಬಲ ವಿರೋಧ ಪಕ್ಷವೆಂದರೆ ಬಿಜೆಪಿ.  ಅವರೂ ಆಯ್ಕೆಯಾಗಿ ಬಂದಿರುವ ಸಂಸದರೇ ಅಲ್ಲವೇ…?  ಅಂದರೆ, ವಿರೋಧಪಕ್ಷದ ಕಡೆಯಿಂದಲೂ  ಜನಲೋಪಕಪಾಲ  ಸ್ಥಾಯಿಸಮಿತಿಗೆ ಒಬ್ಬಿಬ್ಬರಾದರೂ ಸಂಸದರನ್ನೇಕೆ ಆರಿಸಲಿಲ್ಲ…? ಆಳುವ ಪಕ್ಷ ಮಾತ್ರಕ್ಕೆ ಆ ಅನುಮೋದನೆಗೆ ಪರಮಾಧಿಕಾರವೇನೂ ಇಲ್ಲವಲ್ಲ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾದ ವಿಚಾರವಾಗಿದೆ.

ಈ ದೇಶದ ಇಂದಿನ ರಾಜಕೀಯದ ಬಗ್ಗೆ ಬರೆಯಲಿಕ್ಕೆ ಬಹಳ ಬೇಜಾರು….

ಈ ದೇಶದ ಪ್ರಸ್ತುತ ರಾಜಕೀಯ ವಿದ್ಯಮಾನಗಳ  ಬಗ್ಗೆ ಬರೆಯಲಿಕ್ಕೆ ಬಹಳ ಬೇಜಾರು ಎಂದು ಕೊಂಡ ಬ್ಲಾಗಿಗರೇ ಬಹಳಷ್ಟು ಮಂದಿಯಲ್ಲವೇ…? ನನಗೂ ಹಾಗೆ ಅನ್ನಿಸಿದ್ದಿದೆ. ಆದರೆ, ದೇಶ ಇಂತಹ ಗಂಭೀರ ಪರಿಸ್ಥಿತಿಯನ್ನೆದುರಿಸುತ್ತಿರುವಾಗ ನಾವು ಸಾಹಿತ್ಯ ಸಂಗೀತ, ಕಲೆ ಅಂತ ಬರೆಯುವುದಾದರೂ ಹೇಗೆ..? ಅದೇನೋ ಹೇಳ್ತಾರಲ್ಲ; “ದೇಶವೇ ಹತ್ತಿ ಉರಿಯುತ್ತಿರುವಾಗ ನಿರೋ ದೊರೆ ಪಿಟೀಲು ಬಾರಿಸುತ್ತಿದ್ದನಂತೆ!” ಹೀಗೆ ಹೇಳ್ತೀನೀಂತ ಬೇಸರಿಸಬೇಡಿ, ಕ್ಷಮಿಸಿ…

ಅಂದ ಹಾಗೆ ಹೇಳಲೇ ಬೆಕೆನಿಸಿದ್ದನ್ನು ಹೇಳದೇ ಇರಲಿಕ್ಕಾಗೊಲ್ಲ; ಯಾಕೆಂದರೆ, ಮನೆಯಲ್ಲಿ ಟಿವಿ.ನ್ಯೂಸ್ ನೋಡ್ತಾ ಪೇಪರ್ ಓದ್ತಾ ಗೊಣಗುಟ್ಟುವುದರ ಜೊತೆಗೆ ಒಂದಿಷ್ಟಾದ್ರೂ ಬ್ಲಾಗಿನಲ್ಲಿ ನಾವುಗಳು
ಹೀಗೆ ಬೊಬ್ಬೆ ಹೊಡೆಯಬಹುದಲ್ಲ ಅನ್ನಿಸೋದು ನಿಜವೇ… ಈವತ್ತಿನ ಸುದ್ದಿ ಸಂಗತಿ – ಇದೇ ಆಗಸ್ಟ್ 16ರಂದು ಭ್ರಷ್ಟಾಚಾರದ ವಿರುದ್ದ ಆಮರಣಾಂತ ಉಪವಾಸ ಮಾಡಲೆಂದು ಬೆಳಿಗ್ಗೆ ಮನೆಯಲ್ಲಿ ಸಿದ್ದರಾಗಿ ಹೊರಡುತ್ತಿರುವಾಗಲೇ ಸಾಮಾಜಿಕ ಕಾರ್ಯಕರ್ತ ಸ್ವಾತಂತ್ರ್ಯ ಹೊರಾಟಗಾರರು ವಯೋವೃದ್ಧರೂ ಆದ ಅಣ್ಣಾ ಹಜಾರೆ ಅವರನ್ನ  ಅವರ ಬೆಂಬಲಿಗರಾದ ಕಿರಣ್ ಬೇಡಿ ಮುಂತಾದವರೊಂದಿಗೆ ಬಂಧಿಸಲಾಗಿದೆ. ಅಲ್ಲದೇ ಅವರನ್ನೆ ಈಗಾಗಲೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸುರೇಶ್ ಕಲ್ಮಾಡಿಯವರಂಥ ಖೈದಿಗಳನ್ನಿರಿಸಿರುವ ಸೆಲ್ ನಲ್ಲಿ ಹಾಕಿದ್ದಾರೆ. ಇದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ “ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಕ್ರಮವಂತೆ” ಅಣ್ಣಾ ಇಂದು ನಿರಶನ ಕೈಗೊಳ್ಳುತ್ತಾರೆಂದು ತಿಳಿದಿದ್ದ ಕಾಂಗ್ರೆಸ್  ಸರ್ಕಾರ ನಿನ್ನೆ ರಾತ್ರಿಯಿಂದಲೇ ಆ ಪ್ರದೇಶದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ತನ್ನ 64 ವರ್ಷಗಳ ಅನುಭವದ “ರಾಜಕೀಯದ ಕಿಡಿಗೇಡಿತನ” ಪ್ರದರ್ಶಿಸಿದೆ.

ಇದು “ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಇಡೀ ದೇಶವೇ ಬೊಬ್ಬೆ ಹೊಡೆದರೇನಂತೆ, ಅದೆಲ್ಲ ಸ್ವಲ್ಪದಿನವಷ್ಟೇ ಜನ ಮರೆಯುತ್ತಾರೆ. ಮತ್ತೆ ಮುಂದಿನ ಚುನಾವಣೆಯಲ್ಲಿ ಹಣದಿಂದಲೇ ತಮ್ಮ ಪಕ್ಷ ಗೆದ್ದು ಬರುತ್ತೆಂಬ ದೃಢ ನಂಬಿಕೆ ತಳೆಂದಂತಿದೆ; ಆಳುವ ಈ ಕಾಂಗ್ರೆಸ್ ಪಕ್ಷ! ಹಾಗೆ ಅವರನ್ನ ಓಟುಕೊಟ್ಟು ಬಹುಮತದಿಂದ ಆರಿಸಲು ಕಾರಣರಾದ ಜನರಲ್ಲಿ ಬಹಳಷ್ಟು ಜನ ಅಜ್ಞಾನ ಅನಕ್ಷರತೆ
ಮತ್ತು ಬಡತನದಿಂದ ಆವರ ಎಂಜಲು ಕಾಸಿಗೆ ಋಣಿಗಳಾದವರು; ಮತ್ತೆ ಅವರ ಬಾಲಬಡುಕರಾದರೇನೆ ಇಲ್ಲಿ ಬದುಕಲು ಸಾಧ್ಯವೆಂದುಕೊಂಡಿರೋ ಕಾರ್ಯಕರ್ತ ರೆನಿಸಿಕೊಂಡವರೂ ಇದ್ದಾರೆಂದರೆ ಯಾರೂ ಇಲ್ಲವೆಂದು  ಹೇಳಲಾರರು…..

ಆದರೇನು! ಈ ದೇಶಕ್ಕೆ ಸ್ವಾತಂತ್ರ್ಯ ಬಂದು 64 ವರ್ಷಗಳಾದ್ರೂ ನಮ್ಮೊಳಗೇ ಇನ್ನೂ ತಿಳಿವಳಿಕೆಯುಳ್ಳ ಜನ ಇದ್ದಾರೆ, ಅವರೆಂದೂ ಇಂಥ ಘೋರ ಅನ್ಯಾಯ ಅಕ್ರಮದ  ವಿರುದ್ಧ ಹೋರಾಡ್ತಾರೆ ಅನ್ನೋ ಪರಿಜ್ಞಾನವೂ ನಮ್ಮನ್ನ ಆಳುವವರಿಗೆ ಇಲ್ಲಾಂದ್ರೆ.. ಅವರು ಅದೆಷ್ಟು ಧನಮದ, ಅಧಿಕಾರಮದದಿಂದ ಆಧಮರಾಗಿ ಮೆರೆಯುತ್ತಿರಬಹುದು….?  ಈ ಭವ್ಯ ಭಾರತ ದೇಶವನ್ನ ಕಾಪಾಡಲು ಶ್ರೀಕೃಷ್ಣ ಪರಮಾತ್ಮ “ಯದಾ ಯಾದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ…” ಅಂತಾ ಇನ್ನೊಮ್ಮೆ ಅವತರಿಸಿ ಬಂದರೂ ಏನೂ ಆಗೊಲ್ಲ
ಅಂದುಕೊಂಡಿದ್ದಾರೇನು ….?

ಕಥೆ ಏಕೆ ಮತ್ತು ಹೇಗೆ ಬರೆಯಬೇಕು…?

ಯಾವುದೇ ವಸ್ತು, ವಿಷಯ, ಘಟನೆ ಬಿಡದೇ ತಿಂಗಳಾನುಗಟ್ಟಲೇ, ವರ್ಷಗಳೇ ಕಾಡಿದಾಗ ಅದು ಕಥೆಯೋ ಕಾದಂಬರಿಯೋ ಆಗಿ ರೂಪ ತಳೆಯುತ್ತದೆ. ಕಥಾ ವಸ್ತುವಿನ ಆಯ್ಕೆ, ಅದು ಬೆರಗೊಡೆದು ಹೇಳಬಹುದಾದ ಹೊಸದೊಂದು ಕಥೆಯಾಗುತ್ತದೆಯೇ ಎಂಬ ಸೂಕ್ತ ಪರಾಮರ್ಶೆ ಮೊದಲಾಗಬೇಕು. ನಂತರ ಕಥಾ ರಚನೆ, ದಟ್ಟವಾದ ವಿವರಣೆ ಇದ್ದೂ ಓದುಗನನ್ನು ಸೆಳೆದುಕೊಳ್ಳುವ  ಆಕರ್ಷಕ ಕಲ್ಪನೆ, ನಿರೂಪಣಾ ತಂತ್ರಗಳಂತಹ ತಾಂತ್ರಿಕ ಸಂಗತಿಗಳವರೆಗೆ ಕಥೆಯ ವ್ಯಾಪ್ತಿ ಹರವು ಇರುತ್ತದೆ.  ಕಥೆ ಬರೆಯುವುದಕ್ಕೆ ಅಗತ್ಯವಾದ ಮೂಲ ಪ್ರೇರಣೆಗಳೆಂದರೆ- ಸ್ವಂತ ಅನುಭವ, ಸಂವೇದನೆ ಮತ್ತು ಸೃಜನಶೀಲ ಪ್ರತಿಭೆಗಳಿಂದ ಬರುತ್ತದೆ.  ಆದರೂ ಕಥಾ ರಚನೆಯ ಕಲೆಗಾರಿಕೆಯು ಅನೇಕ ಶ್ರೇಷ್ಠವಾದ ಕಥೆಗಳ ಆಭ್ಯಾಸಪೂರ್ಣ ಅಧ್ಯಯನದಿಂದ ಮಾತ್ರ ಬರುತ್ತದೆ. ಕನ್ನಡದಲ್ಲಿ  ಮತ್ತು ಅನ್ಯಭಾಷೆಗಳಲ್ಲಿ ಬಂದಿರುವ ನೂರಾರು ಕಥೆಗಳನ್ನು ಎಚ್ಚರದಿಂದ ಓದಿದಾಗ ಆಗುವ ಅನುಭವಗಳಿಂದ ಮತ್ತು ಅವುಗಳ ಅರ್ಥವಂತಿಕೆ ಸೋಪಜ್ಞತೆ ಹಾಗೂ ಶೈಲಿಗಳ ಹಲವು ಸಂಕೀರ್ಣ ಬಗೆಗಳು ಬರೆಯುವವನಿಗೆ ಗೋಚರವಾಗುತ್ತವೆ. ಅಂತಹ ಸಂದರ್ಭದಲ್ಲೂ  ಸ್ವಂತಿಕೆಯಿಂದ ಸೃಜಿಸಲ್ಪಡುವ ಬರವಣಿಗೆಯಲ್ಲಿ ಬರೆಯುವವಗೆ ಅಂತರಂಗದ ಧ್ವನಿಯೊಂದು ಕೇಳಿ ಬರಬೇಕು; ಆಗ ಮಾತ್ರ ಬರವಣಿಗೆ ಸರಾಗ ಸಲಲಿತವಾಗಿ ಸಾಗುತ್ತದೆ. ಸುಭಗ ಶೈಲಿ ಎಂಬುದು ಆನಂತರವಷ್ಟೇ ಪೂರ್ವಭಾವಿ ಸಿದ್ದತೆಯಲ್ಲಿ ಆಗಿರಬಹುದಾದ ಏನೆಲ್ಲ ಅಧ್ಯಯನದಿಂದ ತಂತಾನೆ ಕೂಡಿಬರಲು ಸಾಧ್ಯವಾಗುತ್ತದೆ….
ನನ್ನ ಕಥೆಗಳಿಗೆ…. ಆವರ್ತಕಾಲ…>>>

ವಿಷಯಕ್ಕೊಂದು ವಿಶ್ವ ವಿದ್ಯಾನಿಲಯ….?

ವಿಷಯಕ್ಕೊಂದು ವಿಶ್ವ ವಿದ್ಯಾನಿಲಯ ಸ್ಥಾಪಿಸುವುದು ನಮ್ಮ ಶಿಕ್ಷಣ ಕ್ಷೇತ್ರವನ್ನು ಬಾಧಿಸುತ್ತಿರುವ ಮಾರಕ ರೋಗ. ಇದನ್ನು ನೋಡುತ್ತಿದ್ದರೆ ನಾವು ನಮ್ಮ ದೇಶವನ್ನು ದ್ವಿತೀಯ ಸ್ಥಾನಕ್ಕೆ ಕೊಂಡೊಯ್ಯಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ ಎಂಬ ಸಂಶಯ ಬರುತ್ತದೆ….ನಮಗೆ ಚಿಂತನೆ  ಮತ್ತು ಆಲೋಚನೆಗಳಲ್ಲಿ ಯಾವತ್ತೂ ಮುಂಚೂಣಿಯಲ್ಲಿರಲು ಸಾಧ್ಯವಿಲ್ಲ. ಎಂದು ನಾವೇ ನಿರ್ಧರಿಸಿಬಿಟ್ಟಿದ್ದೇವೆ. ಜೊತೆಗೆ ಶಿಕ್ಷಣವನ್ನೂ ಒಂದು ಲಾಭದಾಯಕ ಉದ್ಯಮವೆಂದು ಭಾವಿಸುವವರಿಗೆ ಈ ವಿಷಯ ವಿಶ್ವವಿದ್ಯಾಲಯಗಳು ಗಳಿಕೆ ಯ ಮಾರ್ಗವೂ ಆಗಿಬಟ್ಟಿವೆ….
ಎಂದಿದ್ದಾರೆ ಹಿರಿಯ ವಿಜ್ಞಾನಿ, ಶಿಕ್ಷಣ ತಜ್ಞ ಪ್ರೊ.ಯಶ್ ಪಾಲ್. (ಪ್ರ.ವಾಣಿ)

ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಗೇ ವಿರುದ್ಧವಾಗಿರುವ  ಈ “ವಿಷಯ ವಿಶ್ವವಿದ್ಯಾಲಯಗಳು” ವಿಶ್ವವಿದ್ಯಾಲಯಗಳನ್ನು ಕೇವಲ ತರಬೇತಿ ಸಂಸ್ಥೆಗಳಾಗಿ ಪರಿವರ್ತಿಸಿಬಿಡುತ್ತವೆ. ಅಂದರೆ ವಿಶ್ವವಿದ್ಯಾಲಯಗಳು ವಿಶಾಲ ಮನೋಭಾವದ ಪಾಂಡಿತ್ಯವುಳ್ಳ ನಾಗರೀಕರನ್ನು ಸೃಷ್ಟಿಸುವ ಕೆಲಸವನ್ನೂ ನಿಲ್ಲಿಸಿಬಿಡುತ್ತವೆ….ಯಾಕೆಂದರೆ, ನಮ್ಮ ಸರ್ಕಾರಕ್ಕೆ ಬೇಕಿರುವುದು ತನ್ನ ಗೊಡ್ಡು ಚಿಂತನೆಗಳನ್ನು ಪ್ರಶ್ನಿಸದ ನಾಗರಿಕ ಸಮಾಜವಷ್ಟೇ… ಇದು ಬಡವರನ್ನು ಉನ್ನತ ಶಿಕ್ಷಣದಿಂದ ಹೊರಗಿಡುವ ಕ್ರಿಯೆಯೂ ಆಗಿಬಿಡುತ್ತದೆ.. ಆದ್ದರಿಂದ ವಿಷಯ ವಿದ್ಯಾಲಯಗಳ ಸ್ಥಾಪನೆ ಒಂದು ಅಪ್ರಜಾಸತ್ತಾತ್ಮಕ ನೀತಿ.
-ಎಂದಿದ್ದಾರೆ ಕೇರಳ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರಾದ ಡಾ.ಕೆ.ಎನ್.ಪಣಿಕ್ಕರ್. (ಪ್ರ.ವಾಣಿ)

ಮೇಲೆ ತಿಳಿಸಿದ ಹಿರಿಯ ಶಿಕ್ಷಣ ತಜ್ಞರೂ ಮೇಧಾವಿಗಳ ಮಾತನ್ನು ನಮ್ಮ ಇಂದಿನ ಶಿಕ್ಷಣತಜ್ಞರು ಮತ್ತು ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ, ಮುಂದೊಂದು ದಿನ ಜ್ಞಾನ ದೇಗುಲ ಗಳೆಂದು ಕರೆಸಿಕೊಳ್ಳುವ, ನಮ್ಮ ಮುಂದಿನ ಪೀಳಿಗೆ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳೂ ಕೇವಲ “ಇಂಡಸ್ಟ್ರಿ” (ಕಾರ್ಖಾನೆ) ಗಳಾಗಿ ಬಿಡುತ್ತವೆಯಷ್ಟೇ. ಬಡವರಿಗೆ ಉನ್ನತ ಶಿಕ್ಷಣವೆಂಬುದು ಮರೀಚಿಕೆಯಾಗುತ್ತದೆ.  ಅಂತಹ ಸಾಮಾಜವಾದ ವಿರೋಧಿ ನೀತಿಯಿಂದ  ಅಪಾಯ ಬರದಿರುವಂತೆ ಸಂಬಂಧಪಟ್ಟ ಗಣ್ಯರು ಶಿಕ್ಷಣತಜ್ಞರೂ ಸೂಕ್ತ ಕ್ರಮ ತಡೆಯಾಜ್ಞೆಗಳತ್ತ ಗಮನ ಹರಿಸಬೇಕಲ್ಲವೇ…?

 

ತಪ್ಪಾಯ್ತು ಅಂತಾ… ತಿದ್ದಿಕೋಳ್ತಾರಾ..?. ಮತ್ತೆ ಮಬ್ ನಲ್ಲಿ ತಬ್ಬಿಕೊಳ್ಳದೇನೆ ಇರ್ತಾರಾ…..

ತಪ್ಪು ಯಾರು ಮಾಡಲ್ಲ..? ತಪ್ಪು ಎಲ್ಲರೂ ಮಾಡುತ್ತಾರೆ. ಮನುಷ್ಯ ಅಂದ್ಮೇಲೆ ತಪ್ಪು ಮಾಡದೇ ಇರಲಿಕ್ಕೆ ಆಗುತ್ತೇನು!  ಅಷ್ಟಕ್ಕೂ ತಪ್ಪು ಮಾಡದೇನೆ ಯಾರೂ ದೊಡ್ಡವರಾಗಿಲ್ಲ. ಪ್ರತಿಭಾವಂತ ಪಂಡಿತರ ತಪ್ಪುಗಳೂ ಹೊಸ ಶೋಧಕ್ಕೆ ಹೊಳಹು ನೀಡುತ್ತವೆ. ಎಂತಹ ಮಹಾನ್ ಮೇಧಾವಿಗಳೂ, ವಿಜ್ಞಾನಿಗಳೂ ತಪ್ಪು ಮಾಡಿಯೇ ಯಶಸ್ಸು ಕಂಡವರಿದ್ದಾರೆ. ಅವರ ಯಶಸ್ಸಿನ ಗುಟ್ಟೆಂದರೆ ಮಾಡಿದ ತಪ್ಪನ್ನು ಪುನಃ ಮಾಡದೇ ಇರುವುದು. ಗಾಂಧೀಜಿ ಮಹಾತ್ಮರಾದದ್ದೂ ಹಾಗೆಯೇ.  ಇದೆಲ್ಲ ಗೊತ್ತಿರೋದೇ. ತಪ್ಪು ಆದರಾಯಿತು  ಒಂದು ಕೈ ನೋಡಿಯೇ ಬಿಡೋಣ..  ಎಂದು ನಿರ್ಲಕ್ಷಿಸಿ ನಡೆಯುವವರೂ ಇದ್ದೇವೆ. ಆದರೇನು, ತಪ್ಪು ತಪ್ಪೇ ಅದರ ಪರಿಣಾಮ ಅನುಭವಿಸಬೇಕಾದ್ದೇ. ಆದ್ದರಿಂದ, ಮಾಡಿದ ತಪ್ಪನ್ನೇ ಮಾಡದಿರುವುದು ಬುದ್ದಿವಂತಿಕೆಯ ಲಕ್ಷಣ.
*****  ***** *****
ನಮ್ಮ ಆರೋಗ್ಯದ ವಿಷಯಕ್ಕೆ ಬಂದಾಗಲಂತೂ, ನಾವು  ತಪ್ಪು ಮಾಡುತ್ತಲೇ ಬಂದಿದ್ದೇವೆ ಎನಿಸುತ್ತದೆ. ಇಂದಿನ ಯುವ ಪೀಳಿಗೆಯವರನ್ನು ನೋಡಿದಾಗ ಹಾಗೆ ಖಂಡಿತ ಅನಿಸದೇ ಇರದು. ಲೈಫ್ ಸ್ಟೈಲ್ ವಿಷಯದಲ್ಲಿ ನಾವು ಇಂದಿನ ಯುವ ಪೀಳಿಗೆಯವರಿಗಿಂತಲೂ (ಕೆಲವರು exceptionally good) ಎಷ್ಟೋ ವಾಸಿ ಎನಿಸುತ್ತದೆಯಲ್ಲವೇ..?  ಏನೇ ಹೇಳಿ ನಮ್ಮ ದೇಹವನ್ನು ಅನಗತ್ಯವಾಗಿ ದಂಡಿಸಿ ಆರೋಗ್ಯಕ್ಕೆ ಹಾನಿ ಮಾಡಿಕೊಂಡಿದ್ದೇವೆಂಬುದು ವಯಸ್ಸಾಗುತ್ತಾ ಹೋದಂತೆ ತಿಳಿಯದೇ ಇರುವುದಿಲ್ಲ.

ತಿಳಿದರೂ ಎಚ್ಚೆತ್ತುಕೊಳ್ಳವುದೂ ಮತ್ತೆ ಮತ್ತೆ ಮನೋ ದೌರ್ಬಲ್ಯ ಜಿಹ್ವಾ ಚಾಪಲ್ಯಕ್ಕೊಳಗಾಗಿ ತಿನ್ನಬಾರದನ್ನ ತಿಂದು ಆಮೇಲೆ ಚಡಪಡಿಸುವುದೂ  ಮಾತ್ರೆಗಳನ್ನು ನುಂಗುವುದೂ ಇದೆಯಲ್ಲ.  ಅಷ್ಟಕ್ಕೂ ಇಳಿವಯಸ್ಸೇ ಹಾಗೆ ಅನ್ನಿ. ನಾವು ಮನಸ್ಸು ಮಾಡಿದರೂ ಶರೀರ ಪ್ರಕೃತಿ ಇಂದು ಇದ್ದಂತೆ ನಾಳೆ ಇರುವುದಿಲ್ಲವಾದ್ದರಿಂದ ಸಮತೂಕದ ಆಹಾರ ಪದ್ಧತಿ ಅನುಸರಿಸುವುದು ಅಷ್ಟು ಸುಲಭವೇನಲ್ಲ. ಎಲ್ಲದಕ್ಕೂ “ಲಂಘನಂ ಪರಮ ಔಷಧಂ” ಎಂಬಂತೆ  ಇಳಿವಯಸ್ಸಿನಲ್ಲಿ ಔಷಧಿಗಳಿಗಿಂತಲೂ ಮಿತ  ಆಹಾರ ಸೇವಿಸುವುದು (ರಾತ್ರಿ ಹೊತ್ತು ಹಣ್ಣಗಳನ್ನಷ್ಟೆ   ಸೇವಿಸುವುದು,  ಒಮ್ಮೊಮ್ಮೆ  ಲಘ ಉಪಹಾರ ತೆಗೆದುಕೊಳ್ಳುವುದು ಉತ್ತಮ.  ಅಲ್ಲದೇ ವಾರಕ್ಕೊಮ್ಮೆ ಉಪವಾಸ ಮಾಡುವುದೇ ಶ್ರೇಯಸ್ಕರವೆನಿಸುತ್ತದೆ.  ಇದು ನಮ್ಮಂಥ ಜನಸಾಮಾನ್ಯರ ಆರೋಗ್ಯವ ವಿಷಯಕ್ಕಷ್ಟೇ ಸಂಬಂಧಿಸಿದ್ದೂ ಅನ್ನಿ.  ಏನೇ ಆಗಲಿ, ಕಡುಬಡವರಿಗೆ, ಮಧ್ಯಮವರ್ಗದವರಿಗೆ, ಮೇಲ್ಮಟ್ಟದ ಮಧ್ಯಮ ವರ್ಗದವರಿಗೂ ಸಹ ದೇವರು ಒಳ್ಳೇ ಆರೋಗ್ಯಕೊಟ್ಟಿದ್ದರೆ, ಅವರೇ ಪುಣ್ಯವಂತರು ಬಿಡಿ. ಒಂದುವೇಳೆ  ತಪ್ಪು ಮಾಡ್ತಾನೆ; ತಿದ್ದಿಕೊಳ್ಳುವುದನ್ನೂ ಮಾಡ್ತಾನೆ ಇರ್ತಾರೆ. ಯಾವಾದಾದ್ರೂ ಮಬ್ ನಲ್ಲಿ ತಬ್ಬಿಕೊಳ್ಳೋಕೆ ಹೋದ್ರೆ ಬಚಾವ್ ಆಗಿ ಬರೋಕೆ ಅವ್ರೇನು ರಾಜಕಾರಣಿಗಳೇ…..?
******   *******   *****
ನಮ್ಮ ರಾಜಕಾರಣಿಗಳಲ್ಲಿ ನೋಡಿದ್ರೆ, ಅವ್ರ ಲೈಫ್ ಸ್ಟೈಲ್ ಅವರ ಸಂಬಳಕ್ಕಿಂತಲೂ ಬಹಳ ಹೈಲೆವೆಲ್ ನಲ್ಲಿ ಗ್ರಾಫ್ ಹೋಗ್ತಾನೆ ಇರುತ್ತದೆ.  ಅಷ್ಟೇ ಅವರು ಆರೋಗ್ಯಕ್ಕೆ ನೀಡುವ ಕಾಳಜಿ ನಮ್ಮನ್ನು ದಂಗುಬಡಿಸುತ್ತದೆ. ಅವರಲ್ಲಿ ಬಡವರೇ  ಇಲ್ಲವೆನ್ನಬಹುದು.  ಹಿಂದೊಮ್ಮೆ ಕಂಡ ಪತ್ರಿಕಾ ವರದಿಯಂತೆ ಎಲ್ಲರೂ ಕರೋಡ್ ಪತಿಗಳೇ…!! ಅಧಿಕಾರದಲ್ಲಿದ್ದು ಏನೆಲ್ಲ ಆರೋಪಗಳೂ ಇರಿಸುಮುರಿಸುಗಳೂ ಹಾಗೂ ಎಲ್ಲಿಲ್ಲದ ಒತ್ತಡದ ನಡುವೆಯೂ “ಜನಸೇವೆ” ಮಾಡುವುದಕ್ಕೋಸ್ಕರ ಅವರ ಆರೋಗ್ಯ ಕಾಪಾಡ್ಕೋಳ್ಳೂದು ಬಹಳ ಕಷ್ಟವೇ ಅನ್ನಿ.  ಹಾಗೆ ನಡು ನಡುವೆಯೆ ಬೇಡವೆಂದರೂ ಬಳಿ ಬಂದು ಬೀಳುವ ಹಣದಲ್ಲಿ ಜಮೀನು, ಕಾರ್ಖಾನೆಗಳು, ಹೋಟೆಲ್‌ ಗಳೂ, ಬಿಲ್ಡಿಂಗ್‌ ಗಳು ಇತ್ಯಾದಿ ಹೇರಳವಾಗಿ ಆಸ್ತಿ ಪಾಸ್ತಿ  ತಮ್ಮವರಿಗೆ ತಮ್ಮ ಕುಟುಂಬಕ್ಕೆ ಮಾಡಿಕೊಂಡಮೇಲೆ,   ಅದನ್ನೆಲ್ಲ ಅನುಭವಿಸೋಕೆ ಒಳ್ಳೆ ಆರೋಗ್ಯ ಇರಲೇಬೇಕಲ್ವೇ….  ಪಾಪ1 ಅದೇ ಪದೇ ಪದೇ ಕೈಕೊಟ್ಟಾಗ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೋಗುವುದುಂಟು.  ಈಗೀಗಲಂತೂ ವಯಸ್ಸಾದ ಮುತ್ಸದ್ದಿಗಳು ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಪಂಚ ಕರ್ಮ ಇವುಗಳಿಗೆ ಮೊರೆ ಹೋಗುತ್ತಿದ್ದಾರೆ.  ಅದೂ ನಮ್ಮ ರಾಜ್ಯದ ವೈದ್ಯರ ವೈದ್ಯಕೀಯಕ್ಕಿಂತಲೂ ಪಕ್ಕದ ಕೇರಳಕ್ಕೇ,  ಇನ್ನೂ ಹೆಚ್ಚೆಂದರೆ ಹೊರದೇಶಕ್ಕೆ ಹಾರಿ ಹೋಗುವುದೂ ವಾಡಿಕೆಯಾಗಿಬಿಟ್ಟಿದೆ.  ಕೆಲವರಂತೂ ತಾವು ಸಚಿವರಾಗಿದ್ದ ಅವಧಿಯಲ್ಲೇ  ತಮ್ಮ ಆರೋಗ್ಯ ತಪಾಸಣೆ ಸರ್ಕಾರೀ ಖರ್ಚಿನಲ್ಲಿ ಮಾಡಿಸಿಕೊಂಡು ಜಾಣರಾಗಿಬಿಡುತ್ತಾರೆ. ಹಾಗೆ ಆರೋಗ್ಯವಾಗಿದ್ದು ಆರಾಮವಾಗಿದ್ದೂ ಅಧಿಕಾರದ ಸವಿ ಸವಿಯುವುದನ್ನು ಮಿಸ್ ಮಾಡಿಕೊಳ್ಳುವುದೇಕೇ…? ಮಾಜಿ ಮಂತ್ರಿ, ಶಾಸಕರಾದಮೇಲೆ ಅದೆಲ್ಲ ಎಷ್ಟರಮಟ್ಟಿಗೆ ಸಾಧ್ಯ ? ನಮ್ಮ ಸಿ.ಎಂ. ನೋಡಿ, ಕೇರಳದ ಕೊಟ್ಟಕಲ್ ನಲ್ಲಿ  ನಾಲ್ಕೈದು ದಿನ ಇದ್ದು  ಒಳ್ಳೆ ಮಸಾಜ್ ಮಾಡಿಸಿಕೊಂಡು ಬರ್ತಾರೆ!  ಇದೀಗ ಮಾರಿಷಸ್ ಗೆ ಕುಟುಂಬ ಸಮೇತ ಫರಾರಿ. ಯಾಕಂದ್ರೆ ಅಧಿಕಾರಾವಧಿ ಮುಗಿಯೋದು ಹತ್ತಿರವಾಗಿದೆಯಲ್ಲ, ಅಷ್ಟರೊಳಗೆ ವಿದೇಶದಲ್ಲಿ ಒಂದು ಸುತ್ತು ಮಜಾ ಉಡಾಯಿಸ್ಕೊಂಡು ಬರೋದು.  ಹಾಗೇನೆ ಮಾರಿಷಸ್ ಅಂದ್ರೆ ಇನ್ನೊಂದು ಸ್ವಿಸ್ ಅಂತಾರಲ್ಲ, ಅಲ್ಲೇ ತಮ್ಮ ಕಾಷ್ಟವ್ಯಸನಾರ್ಜಿತ ದುಡ್ಡನ್ನು ಜೋಪಾನವಾಗಿಸಿ ಬರೋದು.
ಅಲ್ಲ, ತಪ್ಪಾಯ್ತು ತಿದ್ದಿಕೋತೀವಿ ಅಂತಾನೇ ಇರ್ತಾರೆ! ಮತ್ತೆ ಮಬ್ಬಿನಲ್ಲಿ ತಬ್ಬಿಕೊತಾನೇ ಇರ್ತಾರಲ್ಲಾ…”

ಹಿರಿಯ ಮನಸ್ಕರು ಮತ್ತು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳು…

ಕನ್ನಡ ಸಾಹಿತ್ಯದ ನವೋದಯದ ಕಾಲದ ಸಂದರ್ಭದಲ್ಲಿ  ಇಂಗ್ಲೀಷ್ ಪ್ರಭಾವವೇ ಬಹಳವಿತ್ತು. ಆಗ  ಕನ್ನಡಿಗರು ಕನ್ನಡವನ್ನು ಅನನ್ಯವಾಗಿ ಪ್ರೀತಿಸುವಂತೆ ಓದುಗರನ್ನು ಅಪಾರ ಸಂಖ್ಯೆಯಲ್ಲಿ ಬೆಳೆಸಿ ಮನೆಮನೆಗಳಲ್ಲೂ ಮಾತಾದವರಲ್ಲಿ ಮೊದಲಿಗರು ಅ.ನ. ಕೃಷ್ಣರಾಯರು. ಅವರು ಕಾದಂಬರಿಕಾರರಾಗಿ ಅಂದು ಮಾಡಿದ ಪವಾಡ, ಪಡೆದ ಅಪಾರ ಜನಪ್ರಿಯತೆಯನ್ನು ಕಂಡು ಹೊಗಳಿದ ವಿದ್ವಜ್ಜನರೂ ಇದ್ದರು. ಅವರದು ಜನಪ್ರಿಯ ಸಾಹಿತ್ಯ ಅಗ್ಗದ ಪ್ರಚಾರದ ಸಾಹಿತ್ಯವೆಂದು ಅವರನ್ನೂ ಅವರ ಐಡಿಯಾಲಜಿ(ಇಂದಿನ ವ್ಯಾಖ್ಯೆ)ಯನ್ನೂ ಜರೆದ ಹಿರಿಯ ಸಾಹಿತಿಗಳೂ ವಿಮರ್ಶಕರೂ ಇದ್ದರು. ಆದರೇನು! ಅ.ನ.ಕೃ. ಅವರು ಕನ್ನಡ ನವೋದಯ ಕಾಲದ ಯುಗಪ್ರವರ್ತಕರಲ್ಲಿ ಅಗ್ರಣ್ಯರಾಗಿಯೇ ಉಳಿದರು. ಅಂದೂ ಅವರ ಯಶಸ್ಸನ್ನು ಕಂಡು ಕುದಿಯುವವರು ಕಾಲೆಳೆಯುವ ವಿದ್ವಜ್ಜನರ ಗುಂಪೇ ಇತ್ತು.  ಯಾರು ಏನೇ ಗೊಣಗಿದರೂ ಅ.ನ.ಕೃ ಅವರ ಜನಪ್ರಿಯತೆ ಹೆಚ್ಚಿತ್ತಲೇ ಹೋಯಿತು.  ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅಂದಿನ ಇಂಗ್ಲೀಷ್ ಪ್ರಭಾವೇ ಮೆರೆಯುತ್ತಿದ್ದ ಕಾಲದಲ್ಲಿ ಅವರು ಕನ್ನಡ ಓದುಗರನ್ನು ಅತ್ಯಧಿಕ ಸಂಖ್ಯೆಯಲ್ಲಿ ಬೆಳೆಸಿ ಕನ್ನಡ ಚಳುವಳಿಗಳಲ್ಲೂ ಸಕ್ರಿಯರಾಗಿದ್ದುದು ದಾಖಲೆಯಾಗಿದೆ; ಚಿರಸ್ಮರಣೀಯವೇ ಆಗಿದೆ.

ಇದೀಗ ದೃಶ್ಯಮಾಧ್ಯಮದ ಚಾನೆಲ್ ಗಳು ಹಾಗೂ ಸಿನಿಮಾಗಳೂ ಓದುಗರನ್ನು ಕಿತ್ತುಕೊಳ್ಳುತ್ತಲೇ ಇವೆ. ಹೊಸ ಓದುಗರನ್ನು ಸೃಷ್ಟಿಸುವುದರಲ್ಲಿ ವಿದ್ವಜ್ಜನರ    ಸಾಹಿತ್ಯ ಅದೆಷ್ಟು ಯಶಸ್ವಿಯಾಗಿದೆ ಎಂಬುದು ಬೃಹತ್ ಪ್ರಶ್ನೆಯಾಗಿ ಕಾಡಿದೆ.   ಇಂತಹ ಕಾಲಘಟ್ಟದಲ್ಲಿ ಸಾಹಿತ್ಯೇತರ ಕೃತಿಗಳಿಗೆ ಬೇಡಿಕೆ ಹೆಚ್ಚಿದೆ.

ಆದರೂ ಆಶಾದಾಯಕವೆಂದರೆ, ಮಧ್ಯಮ ವರ್ಗದ ಜನರೂ ಮತ್ತು ಐಟಿ/ಬಿಟಿ ವರ್ಗದವರೂ  ವಯೋವೃದ್ದರೂ ತಮ್ಮ ಸಾಹಿತ್ಯಾಸಕ್ತಿ ಉಳಿಸಿಕೊಂಡು, ಕೊಂಡು ಕಥೆ ಕಾದಂಬರಿಗಳನ್ನುಓದುತ್ತಿರುವುದು ಸಮಾಧಾನಕರವೇ. ಅಷ್ಟಕ್ಕೂ ಕಥೆ ಕಾದಂಬರಿ ಸಾಹಿತ್ಯಕ್ಕೆ ಬೇಡಿಕೆ ಇಲ್ಲವೆಂಬಂತಾಗಿರುವ ಈ ಸಂದರ್ಭದಲ್ಲಿ ಎಸ್.ಎಲ್. ಭೈರಪ್ಪನವರು ತಮ್ಮ ಸಾಮಾಜಿಕ ಬದ್ಧತೆಯ ಕೃತಿಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಸಾಮಾನ್ಯ ಜನತೆಯನ್ನು ಮಾತ್ರವಲ್ಲ, ನೌಕರರು,  ಉನ್ನತ ಅಧಿಕಾರದಲ್ಲಿರುವವರೂ, ರಂಗ ಭೂಮಿ ಸಿನಿಮಾ ಕಲಾವಿದರೂ, ಮತ್ತು ಔದ್ಯೋಗಿಕವಾಗಿ  ಐಟಿ,ಬಿಟಿ ಮತ್ತು ಇತರೆ ಕಂಪೆನಿಗಳ ಕಾರ್ಮಿಕ ವರ್ಗದವರೂ ಅವರ ಕೃತಿಗಳನ್ನುಮೆಚ್ಚಿಕೊಳ್ಳುತ್ತಿದ್ದಾರೆ.  ಅಷ್ಟೇ ಅಲ್ಲ ಕೃತಿಗಳು ಇತರ ಭಾಷೆಗಳಿಗೂ ತರ್ಜಮೆಗೊಂಡಿವೆಯೆಂದರೆ ಅವುಗಳ ಗುಣಮಟ್ಟ ಮತ್ತು ಉಪಯುಕ್ತತೆ ಹೆಚ್ಚಿದೆಯೆಂದೇ. ಹಾಗೇ ಅವರು ಸಾಮಾಜಿಕವಾಗಿ ಬದಲಾವಣೆಯನ್ನು ಸುಧಾರಣೆಯನ್ನೂ ಬಯಸುವ ಅವರ ಕೃತಿಗಳಿಂದ ಕನ್ನಡಿಗರ ಹೆಮ್ಮೆಯ ಸಾಹಿತಿಯಾಗಿದ್ದಾರೆ.

ಭೈರಪ್ಪನವರಿಗೆ ಇತ್ತೀಚೆಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಲಭಿಸಿರುವುದು ಅವರ ಅಭಿಮಾನಿಗಳಿಗೆ ಮಾತ್ರವಲ್ಲ ನಿಜಕ್ಕೂ ಕನ್ನಡಪರ ಕಾಳಜಿಇರುವವರಿಗೆ ಹಾಗೂ ಸಮಾಜಿಕ ಪರಿವರ್ತನೆ ಬಯಸುವ ಬುದ್ಧಿಜೀವಿಗಳಿಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆ ಪಡುವಂತಾಗಿದೆಯಲ್ಲವೇ…?  ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ ಎನ್ನುವವರಿದ್ದಾರೆ.  ಉತ್ತಮ ಸಾಹಿತ್ಯ ಕೃತಿಗಳು ಕಾಲ ಕಾಲಕ್ಕೆ ಜನಮಾನಸದಲ್ಲಿ  ಪ್ರಭಾವ ಬೀರಿರುವುದೂ ಜನಜೀವನಕ್ಕೆ ಹೊಸ ಬೆಳಕನ್ನು ಚೆಲ್ಲುವುದು ನಗ್ನ ಸತ್ಯ.  ಸಾಹಿತ್ಯವೆಂದರೆ ಸಹೃದಯರನ್ನು ತಲುಪುವುದಷ್ಟೇ ಮುಖ್ಯ ಅಲ್ಲವೇ?    ಅದಿಲ್ಲದವರು  ಸಣ್ಣಮನಸ್ಸಿನವರಾಗಿಬಿಡುತ್ತಾರೆ. ಅ.ನ.ಕೃ ಅವರ ಜನಪ್ರಿಯತೆ ಕಂಡು ಕರುಬುವ ಅವರದು ಜನಪ್ರಿಯ ಸಾಹಿತ್ಯವೆಂದು ಜರೆಯುವವರಿದ್ದಂತೆ ಈ ಕಾಲಘಟ್ಟದಲ್ಲೂ ಅಂಥವರು ಇರುವುದರಲ್ಲಿ ಯಾವ ಸೋಜಿಗವೇನಿಲ್ಲ.
ಈಗಿತ್ತಲಾಗಿ ಹಿರಿಯ ಸಾಹಿತಿಗಳ ಬೇರೆ ಬೇರೆ “ಐಡಿಯಾಲಜಿಗಳು” ಏನೇ ಇರಲಿ, ಅದರಿಂದ ಸಾಮಾನ್ಯ ಓದುಗರಿಗೆ ಏನು ಪ್ರಯೋಜನ?  ಈಗಾಗಲೇ ದೃಶ್ಯಮಾಧ್ಯಮದಿಂದ ಒಂದಿಷ್ಟು ಸೋರಗಿರುವ ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಕೊಡುಗೆ ಶ್ಲಾಘನಿಯ…. ನಾವು ಮಾಡಲಾಗದ ಕೆಲಸವನ್ನು ಕನ್ನಡಕ್ಕೆ ಭೈರಪ್ಪನವರು ಮಾಡಿದ್ದಾರೆ ಎಂದು ಹೆಮ್ಮೆಪಡುವ ಬದಲು ಜ್ಞಾನಪೀಠ ಪ್ರಶಸ್ತಿ ಹೊತ್ತುಕೊಂಡಿರುವ ಯು.ಆರ್.ಅನಂತಮೂರ್ತಿಯವರು,  ” ತಮ್ಮದೇ ಐಡಿಯಾಲಜಿ” ಹೊಂದಿದ್ದು ದುರಹಂಕಾರ, ಪೂರ್ವಾಗ್ರಹದಿಂದ ಬೈರಪ್ಪನವರನ್ನು ರಾಹುಗ್ರಸ್ತರೆನ್ನುವುದು, ಇತರ ಸಾಹಿತಿಗಳನ್ನು ಕೇತುಗ್ರಸ್ತರೆನ್ನುವುದು ಅವರಿಗೆ ಮಾತ್ರವಲ್ಲ ಕನ್ನಡಕ್ಕೂ ಶೋಭೆ ತರುವುದಿಲ್ಲ.

ಹಿರಿಯ ಸಾಹಿತಿ ಬರಗೂರರು ಅನಂತಮೂರ್ತಿ ಸುರಕ್ಷಾ ವಲಯದಲ್ಲಿದ್ದಾರೆ, ಅವರದೇ ಪಟಲಾಮ್ ಇದೆ … ಎಂದಿದ್ದಾರೆ.  ಅವರು ಎಡ ಪಂಥಿಯರಲ್ಲ,  ಬಲಪಂಥೀಯರೂ ಅಲ್ಲ ನಡುಪಂಥೀಯರು ಎಂಬ  ಚಂಪಾ ಅವರ ಮೂದಲಿಕೆ…. ಇವೆಲ್ಲ ನಮ್ಮಜನಸಾಮಾನ್ಯರೂ ಕನ್ನಡಾಭಿಮಾನಿಗಳ ಮೇಲೆ ಯಾವ ದುಷ್ಪಪರಿಣಾಮ ಬೀರುವುವು ಎಂಬುದನ್ನೇನೂ ಈ ಹಿರಿಯರು  ಚಿಂತಿಸಿದಂತಿಲ್ಲ.

ಯಾರೇನೆ  ಹೇಳಲಿ ಓದುಗರ ಸಂಖ್ಯೆ ಬೆಳೆಯತ್ತಿರಬೇಕು,  ಸಾಹಿತ್ಯಕೃತಿಗಳು, ಕಾದಂಬರಿಗಳು ಜನಸಾಮಾನ್ಯರನ್ನು ತಲುಪುವುದಷ್ಟೇ ಮುಖ್ಯವಲ್ಲವೇ? ಯಾವುದೇ ಸಾಹಿತ್ಯಕೃತಿಗಳು ಹಿರಿಯ ಸಾಹಿತಿಗಳನ್ನು ವಿದ್ವಜ್ಜನರನ್ನು ತೃಪ್ತಿಪಡಿಸಲಿಕ್ಕಾಗಿಯೆ ಹುಟ್ಟಿಕೊಳ್ಳುತ್ತವೆಯೇ …? ಸಾಹಿತ್ಯ ಕೃತಿಗಳು ಸಾಹಿತಿ ವಿಮರ್ಶಕರ ಗುಂಪಿನ ವಲಯಕ್ಕಾಗಿಯೇ ಆ ಮಟ್ಟದ ಐಡಿಯಾಲಜಿಯಲ್ಲಿ ತಯಾರಾಗುವ ಪ್ರಾಡಕ್ಟುಗಳೇನು..? ವಿದ್ವಜ್ಜನರನ್ನು ಮೆಚ್ಚಿಸುವ ಸಾಹಿತ್ಯ ಪ್ರಕಾರವೇ ಬೇರೆ ಇದ್ದೀತು;ಇರಲಿ.  ಹಾಗೆ ನೋಡಿದರೆ,ಯಾವುದೇ ಸಾಹಿತಿಯೊಬ್ಬರ ಕೃತಿಗಳೆಲ್ಲವೂ ವಿದ್ವತ್ ಪೂರ್ಣ ಕೃತಿಗಳೇ (ಮಾಸ್ಟರ್ ಪೀಸ್)  ಆಗಿರುತ್ತವೇನು? ಎಂಬೆಲ್ಲ ಪ್ರಶ್ನೆಗಳುಕಾಡುತ್ತವೆಯಲ್ಲ! ಹಾಗೆ ನೋಡಿದರೆ, ಬೈರಪ್ಪನವರು ಜನಸಾಮಾನ್ಯರ ಸಾಹಿತಿಯಾಗಿದ್ದಾರೆ. ಸಮಾಜದ ಮೇಲೆ ಬೆಳಕು ಚೆಲ್ಲುವ ಕೃತಿಗಳು, ಸಾಮಾನ್ಯ ಜನತೆಯನ್ನು ಮನವನ್ನು ಮುಟ್ಟಿ ತಟ್ಟಿ ಎಚ್ಚರಿಸುವ ಕೃತಿಗಳನ್ನು ಭೈರಪ್ಪನವರು ಬರೆದಿದ್ದಾರೆಂಬುದಕ್ಕೆ ಅವರ ಅಪಾರ ಜನಪ್ರಿಯತೆಯೇ ಸಾಕ್ಷಿ.

ಹಿರಿಯ ಮನಸ್ಕರು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳನ್ನು ಮುಕ್ತ ಮನಸ್ಸಿನಿಂದ ಮೆಚ್ಚಿ ಬೆಂಬಲಿಸಬೇಕಲ್ಲವೇ…..?  ಹಾಗಲ್ಲದೇ, ತಮ್ಮ ಮೂಗಿನ ನೇರಕ್ಕೇ ತಕ್ಕ ಐಡಿಯಾಲಜಿ ಹುಡುಕುವಂತ ಹುನ್ನಾರವೇಕೇ? ವ್ಯರ್ಥ ಪ್ರಲಾಪವೇಕೆ..? ಅದರಿಂದ ನಮ್ಮ ಕನ್ನಡ ನಾಡು ನುಡಿಗೆ ಜನಪರ ಕಾಳಜಿಗೆ ಮತ್ತು ಎಲ್ಲರನ್ನೂ ತಲುಪಬಲ್ಲ  ಸರಳ ಸುಲಭ ಶೈಲಿಯ ಸಾಮಾಜಿಕ ಬದ್ಧತೆಯುಳ್ಳ ಸಾಹಿತ್ಯಲೋಕಕ್ಕೆ ಯಾವ ಪ್ರಯೋಜನವಿದೆ?

ಒಟ್ಟಿನಲ್ಲಿ ಸಾಹಿತ್ಯ ಕೃತಿಯೊಂದು ಕರ ಪತ್ರವೋ,  ಕೇವಲ ವಾಚ್ಯವೋ ಅತ್ಯುತ್ತಮ ಕೃತಿಯೋ ಎಂಬುದನ್ನು ಓದುಗರು ಮೊದಲು ನಿರ್ಧರಿಸುತ್ತಾರಲ್ಲವೇ….. ಭೈರಪ್ಪನವರಂಥವರು ಮಹಾಜನತೆಯ ಕಾಳಜಿಪರವಾಗಿರುವ ಲೇಖಕರು ಯಾವೊಂದು ಪದವಿ ಪುರಸ್ಕಾರ ಬಯಸಿ ಬರೆಯುವವರೇ…?   ಅಂಥ ಪದವಿ ಪುರಸ್ಕಾರ ಅವರನ್ನೇ ಹುಡುಕಿಕೊಂಡು ಬರುತ್ತವೆ.  ಅದಕ್ಕಾಗಿ ಅವರು ಯಾವ ಬಗೆ ತಾಲೀಮು ಮಾಡುವ ಅಗತ್ಯವಿರುವುದಿಲ್ಲ.  ಅಂತೆಯೆ ಅವರಿಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಹುಡುಕಿಕೊಂಡು ಬಂದಿದೆಯಲ್ಲವೇ..?

ಅನಂತ ಮೂರ್ತಿ ಅವ್ರು ಯಾವ ಪಂಥೀಯ…?

ಇತ್ತ ಎಡ ಪಂಥೀಯರನ್ನು ಎದುರು ಹಾಕಿಕೊಂಡು ಅತ್ತ ಬಲ ಬಂಥೀಯರನ್ನೂ ವಿರೋಧಿಸುವಂತೆ ನಾಟಕವಾಡುತ್ತಿರುವ ಹಿರಿಯ ಸಾಹಿತಿ ಡಾ.ಯು.ಆರ್.ಅನಂತ ಮೂರ್ತಿ ಪೂರ್ವಾಗ್ರಹ ಪೀಡಿತರು. ಇಂತಹ ಒಬ್ಬ ಸಾಹಿತಿ ರಕ್ಷಣಾ ವಲಯದಲ್ಲಿ ನಿಂತು ಮಾತನಾಡುವುದಾದರೂ ಏಕೆ ಎಂದು ಹಿರಿಯ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ. ಅನಂತ ಮೂರ್ತಿ ಪತ್ರಿಕೆಯೊಂದರ ಸಾಪ್ತಾಹಿಕದಲ್ಲಿ ಬರೆದ ಲೇಖನದ (ಪ್ರ.ವಾಣಿ-26-06-2011) ಮೂಲಕ ಇತರೆ ಸಾಹಿತಿಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ. …ದೊಡ್ಡ ಸಾಹಿತಿಯಾದ ಅನಂತ ಮೂರ್ತಿ ಅವರ ಮಾತಿಗೂ ಕೃತಿಗೂ ಸಂಬಂಧವಿಲ್ಲದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ಇಂತಹ ಪೂರ್ವಾಗ್ರಹ ಪೀಡಿತರ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು ಎಂದೂ ಹೇಳಿದ್ದಾರೆ( ಕ.ಪ್ರ -28-06-2011).

ಅದೇ ಕ.ಪ್ರ ಪತ್ರಿಕೆಯಲ್ಲಿ ಹಿರಿಯ ಸಾಹಿತಿ ಚಂದ್ರಶೇಖ್ರಪಾಟೀಲರೂ ಅನಂತ ಮೂರ್ತಿ ಎಡವೂ ಅಲ್ಲ ಬಲವೂ ಅಲ್ಲದ ನಡು ಪಂಥೀಯ ಎಂದಿದ್ದಾರೆ. (ನನಗನಿಸುತ್ತದೆ ಅವ್ರು ಅತಂತ್ರೀಯರೋ. ಎಂದು.). ಮುಂಚೆ ವೈದಿಕರು ಇತರರನ್ನು ಕಚ್ಚಾಟಕ್ಕೆ ಬಿಟ್ಟು ಮಜಾನೋಡಿ ಅನುಭವಿಸುತ್ತಿದ್ದರು. ಇದೀಗ ಅಂಥವರ ನಡುವೆಯೇ ಸಂಘರ್ಷ ಹುಟ್ಟಿಕೊಂಡಿದೆ ಎನ್ನುತ್ತಾರೆ ಪಾಟೀಲರು. ಆದರೇನು!

ವೈದಿಕರಾದ ಭೈರಪ್ಪನವರು ಈ ಅಹಮಿಕೆಯ ಮನುಷ್ಯ ಗೊಣಗಿಕೊಂಡರೆ ನನಗೇನು… ಎಂಬಂತೇ ತಮ್ಮ ಸಾತ್ವಿಕ ಮೌನದಿಂದ ಇದ್ದಾರೆ;ಯಾರೆಲ್ಲರನ್ನೂ ಈ ಬಗ್ಗೆ ಚಿಂತನಗೆ ಹಚ್ಚಿದ್ದಾರೆ.

ನಾನು ಯು.ಆರ್.ಅನಂತ ಮೂರ್ತಿಯವರ ಲೇಖನ ಓದಿದ್ದೇನೆ. ಈ ಲೇಖನದ ಉದ್ದಕ್ಕೂ ಅವರ ವಿಕೃತ ವಿಚಾರಗಳು ಮತ್ತು ವಿರೋಧಾಭಾಸಗಳು ಎಂತವ್ರನ್ನೂ ಗೊಂದಗೊಳಿಸುತ್ತವೆ; ಕೆಲವೊಮ್ಮೆ ಅಪಾಯಕಾರಿಯಾದ  ಹೇಳಿಕೆಗಳೆನಿಸುತ್ತವೆ.

ಅವರ ಆ  ” ಸೃಜನಶೀಲತೆಯ ಅಗ್ನಿ ದಿವ್ಯ” ಲೇಖನದ ಆರಂಭದಲ್ಲೇ ಹೀಗೆ ಹೇಳುತ್ತಾರೆ- ಭಾರತೀಯ ಕಾವ್ಯ ಮೀಮಾಂಸೆಯಲ್ಲಿ “ವಿಭಾವ” ಎಂಬ ಶಬ್ದವಿದೆ. ಭಾವವೊಂದು ಸಾಹಿತ್ಯ ಕೃತಿಯಾಗುವಾಗ ಅದಕ್ಕೊಂದು ವಿಭಾವದ ಅಗತ್ಯವಿದೆ. ಅಂದರೆ ಆ ಭಾವವನ್ನು ಧರಿಸಬಲ್ಲ ಒಂದು ಅಥವಾ ಅದನ್ನು ಹೊತ್ತು ಹೆರಬಲ್ಲ ಒಂದು ದೇಹದ ಅಗತ್ಯವಿದೆ- ಅದೇ ವಿಭಾವ.. ನಾವು ಎಲಿಯಟ್ ನಿಂದ ತಿಳಿದುಕೊಂಡ ಆಬ್ಜೆಕ್ಟಿವ್ ಕೊರಿಲೇಟಿವ್ ಕೂಡಾ ಇದೇ ವಿಭಾವ ಎನ್ನುತ್ತಾರೆ.

ಅವರ ಈ ಮಾತಿನ ಜಾಡನ್ನೇ ಹಿಡಿದು ಹೇಳುವುದಾದರೆ, ಆತ್ಮಕ್ಕೊಂದು ದೇಹದ ಅಗತ್ಯವಿರುವಂತೆಯೇ ಭಾವವೊಂದು ಉತ್ತಮ ಸಾಹಿತ್ಯ ಕೃತಿಯಾಗುವಾಗ ಅದಕ್ಕೊಂದು ವಿಭಾವದ ಅಗತ್ಯವಿದೆ. ಅದನ್ನು ಹೊತ್ತು ಹೊರಹಾಕಬಲ್ಲ ದೈವಿಕ ಭಾವದ  ( ದೇಹವುಳ್ಳ ತಾತ್ವಿಕ ನಿರೀಕ್ಷಣಾಭಾವದ) ಸಾಹಿತಿಯ ಅಗತ್ಯವಿದೆ ಎನ್ನುತ್ತದೆ. ಇದಕ್ಕೆ ಅನಂತಮೂರ್ತಿಯವರು ಏನೆನ್ನುತ್ತಾರೋ…

ಬರಗೂರರು ಹೇಳುವಂತೇ ಅನಂತ ಮೂರ್ತಿ ಅವರ ಮಾತು ನಡವಳಿಕೆಗಳು ಒಂದಕ್ಕೊಂದು ತಾಳೆಯಾಗುವುದೇ ಇಲ್ಲ ಎನ್ನುವುದಕ್ಕೇ ಅದೇ ಲೇಖನದ ಇನ್ನೊಂದು ಸಾಲು ಹೀಗಿದೆ ನೋಡಿ- “ಭಾರತೀಯ ಸಿನಿಮಾ ಇರುವ ಹಾಗೆಯೇ ಕನ್ನಡ ಸಿನಿಮಾ ಅನ್ನುವುದೂ ಒಂದಿದೆ. ಇದು ಕನ್ನಡಕ್ಕೆ ತನ್ನದೇ ಆದ ಕೆಲವು ಕೊಡುಗೆಗಳನ್ನು ಕೊಟ್ಟಿದೆ”

ಭಾರತೀಯ ಸಿನಿಮಾ ಇರುವ ಹಾಗೆಯೇ… ಹಾಗೆಂದರೇನು? ಕನ್ನಡ ಸಿನಿಮಾಗಳೆಲ್ಲ ಭಾರತೀಯ ಸಿನಿಮಾ ಅಲ್ಲವೆಂದೇ…?

ದೊಡ್ಡ ಸ್ಥಾನದಲ್ಲಿರುವ ಸಾಹಿತಿಯಾಗಿ ಜ್ಞಾನವೃದ್ಧರೂ ಆಗಿರುವ ಅನಂತ ಮೂರ್ತಿಗಳು ವಸ್ತು ನಿಷ್ಠೆಯಿಂದ ವಿಮರ್ಶೆ ಮತ್ತು ಪರಾಮರ್ಶೆ ಮಾಡಿಕೊಳ್ಳದೇ ಪೂರ್ವಾಗ್ರಹ ಪೀಡಿತರಾಗಿ, ದೇಶವಿದೇಶಗಳಲ್ಲಿ ಅಪಾರ ಜನಮನ್ನಣೆಗಳಿಸಿರುವ ಬೈರಪ್ಪನವರನ್ನು ರಾಹುಗ್ರಸ್ತರೆಂದು ಇತರರನ್ನು ಕೇತು ಗ್ರಸ್ತರೆಂದು ಹೇಳುತ್ತ , ತಾವು ಕನ್ನಡದ ಪ್ರಗತಿಪರ ಕಾಳಜಿಯಿಂದ ದೂರವಾದ ಬುದ್ಧಿಗೂ ಮುಪ್ಪಡರಿದಂತೇ ವಿಕೃತ ಹೇಳಿಕೆಯನ್ನು ನೀಡುವುದೂ,  ನಾಡಿನ ಹಿರಿಯ ಸಾಹಿತಿಗಳೂ ಹಾಗೂ ಜನಸಾಮಾನ್ಯರಿಂದಲೂ ಆಗಾಗ್ಗೆ ಬೈಯಿಸಿಕೊಳ್ಳುವ ಶಾಪಗ್ರಸ್ತರಂತೆ ಕಾಣುವುದು ಅವರಿಗೆ, ಅವರು ಪಡೆದುಕೊಂಡಿರುವ ಸ್ಥಾನಕ್ಕೆ ಶೋಭೆಯಲ್ಲ.

ಯಾವುದು ಸಾಚಾ? ಯಾವುದು ಮೋಸ? -ಶ್ರೀಯುತ ಯು.ಆರ್. ಅನಂತಮೂರ್ತಿ ಲೇಖನಕ್ಕೆ ಪ್ರತಿಕ್ರಿಯೆ

ಯು.ಆರ್.ಅನಂತ ಮೂರ್ತಿ ಅವರು (ವಿಕ. ಪತ್ರಿಕೆ ತಾ|| 09-06-2011)ಹೇಳಿರುವಂತೆ ನಿಜಕ್ಕೂ ಯಾವುದು ಸಾಚಾ ? ಯಾವುದು ಮೋಸ? ಎಂದು ಯಾರನ್ನೂ ಚಿಂತಿಸುವಂತೆ ಮಾಡುತ್ತದೆ.
“ಸಮಾಜ ಜೀವಿಯಾದ ಮನುಷ್ಯನಲ್ಲಿ ಮಾತ್ರ ಭ್ರಷ್ಟತೆ ಸಾಧ್ಯ ಗಾಂಧಿಯವರಿಗೆ ಇದು ಎಷ್ಟು ಅವರ ಕರುಳಿನ ಬೇನೆಯಂತೆ ಗೊತ್ತಿತ್ತೆಂದರೆ ಅವರನ್ನು ಇಡೀ ಜಗತ್ತು ಮಹಾತ್ಮನೆಂದು ಕರೆವಾಗಲೂ ತನ್ನಲ್ಲಿನ್ನೂ ಭ್ರಷ್ಟತೆ ಉಳಿದಿದೆಯೇ ಎಂದು ಅನುಮಾನಿಸುತ್ತಿದ್ದರು”  ಎಂದು ಲೇಖನ ಆರಂಭವಾಗುತ್ತದೆ.

ಹೌದು, ಇದು ಯಾರೂ ಒಪ್ಪುವಂಥದ್ದು. ಮನುಷ್ಯನಲ್ಲಿ ಇರುವಷ್ಟು ಭ್ರಷ್ಟತೆ ಇನ್ಯಾವ ಪ್ರಾಣಿಯಲ್ಲೂ ಇಲ್ಲವಲ್ಲ. ಭ್ರಷ್ಟತೆಯ ವಿರುದ್ಧ ದನಿಯೆತ್ತುವ ವ್ಯಕ್ತಿಗೆ ತಾನು ಅವರಿಗೆ ತನ್ನ ತೋರು ಬೆರಳು ತೋರಿಸಿದರೆ ತನ್ನೆಡೆಗೇ ನಾಲ್ಕುಬೆರಳುಗಳು ತೋರುತ್ತಿರುತ್ತವೆ ಎಂಬುದು ಶುದ್ಧಹಸ್ತರಿಗೆ ಮಾತ್ರ ಗೊತ್ತಿರುತ್ತದೆ.
ಇಂದಿನ ರಾಜಕಾರಣಿಗಳಲ್ಲಿ ಯಾರು ಶುದ್ಧ ಹಸ್ತರು? ಎಂದು ಹೇಳುವುದು ಕತ್ತಲೆಯಲ್ಲಿ ದುರ್ಬೀನು ಹಾಕಿ ನೋಡಿದಂತೆಯೇ. ವಿರೋಧ ಪಕ್ಷದಲ್ಲಿದ್ದು ಭ್ರಷ್ಟತೆ ವಿರುದ್ಧ ಬೊಬ್ಬೆ ಹಾಕುವಾತನ ಹಿಂದಿನ ಚಾರಿತ್ರ್ಯವೂ ಅಷ್ಟೇ ಹಳಸಲಾಗಿರುತ್ತದೆಂದರೆ ಆಶ್ಚರ್ಯವೇನಿಲ್ಲವಲ್ಲ. ಪ್ರಸ್ತುತದಲ್ಲಿ ಬಾಬಾ ರಾಮ್ ದೇವ್ ಅವರನ್ನಾಗಲಿ ಅಥವಾ ಅಣ್ಣಾ ಹಜಾರೆಯವರನ್ನಾಗಲಿ ಮಹಾತ್ಮ ಗಾಂಧೀಜಿಗೆ ಹೋಲಿಸಲಾಗುವುದಿಲ್ಲ. ಗಾಂಧೀಜಿಗೆ ಗಾಂಧೀಜಿಯೇ ಹೋಲಿಕೆ.  ಅಷ್ಟೇಕೆ ಯಾರೊಬ್ಬರೂ ಹೋಲಿಕೆಯಲ್ಲ. ಬಾಬಾ ರಾಮ್ ದೇವ್ ಮತ್ತು ಅಣ್ಣಾ ಹಜಾರೆಯವರನ್ನೂ ಸಹ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗುವುದಿಲ್ಲವೆಂಬ ಅನಂತ ಮೂರ್ತಿಯವರ ಮಾತು ಒಪ್ಪತಕ್ಕದ್ದೇ.

“ಜಲಿಯನ್ ವಾಲಾ ಬಾಗ್ ನಲ್ಲಿ ಮುಳ್ಳು ಮಲವನ್ನು ತುಳಿದು ಹೊರ ಜಗತ್ತಿನಲ್ಲಿ ಕಾಣುವ ಹಿಂಸೆ ತನ್ನಲ್ಲಿನ್ನೂ ಉಳಿದಿದೆಯೇ ಎಂದು ಪ್ರಶ್ನಿಸಿಕೊಂಡ ಗಾಂಧೀಜಿ ತಮ್ಮನ್ನು ತಾವೇ ಹಿಂಸೆಗೆ ಗುರಿಪಡಿಸಿಕೊಂಡರು ಎಂದು ಹೇಳುತ್ತಾರೆ; ಅನಂತ ಮೂರ್ತಿಯವರು ಹೀಗೆ  ಭ್ರಷ್ಟತೆಯಿಂದ ಪಾರಾಗಿ ತ್ರಿಕರಣಶುದ್ಧಿ ಬಯಸುವುದು ಮನುಷ್ಯನಿಗೆ ಮಾತ್ರ ಸಾಧ್ಯ” ಎಂದೂ ಹೇಳುತ್ತಾರೆ. ಖಂಡಿತ ಹೌದು, ಆದರೆ, ಅಂತಹ ತ್ರಿಕರಣಶುದ್ಧಿ ಗಾಂಧೀಜಿವರಲ್ಲಿತ್ತೆಂದರೆ ಅದನ್ನು ಎಲ್ಲರಲ್ಲೂ ಹುಡುಕುವ ಕಾಲವಿದಲ್ಲ. ಹಾಗೆ ಅದು ಇರಲಿಕ್ಕೆ ಇದು ಆ ಕಾಲವಲ್ಲ, ಇಲ್ಲಿ ನಾವು ನೊಂದು ಉಪವಾಸ ವನ (ಜೈಲು)ವಾಸ ಮಾಡಿದರೂ ಪರವಾಯಿಲ್ಲ; ನಮ್ಮ ಶಾಂತಿಯುತ ಹೋರಾಟದಲ್ಲಿ ಸರಕಾರ ದೌರ್ಜನ್ಯ ನಡೆಸಿದರೆ ಸುಮ್ಮನೆ ತಲೆಕೊಟ್ಟು ಸಾಯುವುದಲ್ಲ ನಮ್ಮನ್ನು ನಾವು ನಮ್ಮನ್ನು ನಾವು ಮೊದಲು ರಕ್ಷಿಸಿಕೊಳ್ಳಬೇಕು. ಅದಕ್ಕೆ ನಾವು ಸಿದ್ಧತೆ ಮಾಡಿಕೊಳ್ಳುವುದು ತಪ್ಪೇನಲ್ಲ ಎಂಬುದು ಬಾಬಾ ರಾಮ್ ದೇವ್ ಅವರ ವಾದವಾಗಿದೆ. ಆದರೆ   ಹನ್ನೊಂದು ಸಾವಿರ ಯೋಧರ ಸೇನೆ ಕಟ್ಟುವ ಭಾವೋದ್ವೇಗದ ಹೇಳಿಕೆ ಮೇಲ್ನೋಟಕ್ಕೆ ಉದ್ರೇಕಕಾರಿಯಾಗಿದ್ದರೂ ಅದರ  ಒಳನೋಟ ಸ್ವಯಂ ರಕ್ಷಣೆಯೇ ಆಗಿರಬಾರದೇಕೆ…? ಹಾಗೆಂದ ಮಾತ್ರಕ್ಕೆ ಬಾಬಾ ಸೇನೆ ಕಟ್ಟಿಯೇ ಬಿಡುವುದೂ ಅಷ್ಟೇನೂ ಸರ್ವ ಸಮ್ಮತವೂ ಅಲ್ಲ. ಅವರ ಗುಂಪಿನಲ್ಲೆ ಭಿನ್ನಾಭಿಪ್ರಾಯವಿದೆಯಲ್ಲ…ಅಷ್ಟೇಕೆ ಸಾಮಾನ್ಯ ಜನತೆಯೂ ಅವರ ಈ ಹೇಳಿಕೆಯಿಂದ ದಿಗ್ಬ್ರಮೆಗೊಂಡಿದೆ. ಆದರೂ  ಸರಕಾರ ನಡುರಾತ್ರಿಯಲ್ಲಿ ನಿಷ್ಪಾಪ ಜೀವಿ ಹೆಂಗಸರು ಮಕ್ಕಳು ವೃದ್ದರು ಎನ್ನದೇ  ದೌರ್ಜನ್ಯ ನಡೆಸಬಹುದಾದರೆ,  ತಮ್ಮ ರಕ್ಕಣೆಗೆ ಭದ್ರತೆಗೆ ಭ್ರಷ್ಟ ರಾಜಕಾರಣಿಗಳು ಕಮಾಂಡೋಗಳನ್ನು ಬಳಸಿಕೊಳ್ಳಬಹುದಾದರೆ, ತಾವೇಕೆ ತಮ್ಮ ನ್ಯಾಯ ಸಮ್ಮತ ಶಾಂತಿಯುತ ಹೋರಾಟಕ್ಕೆ ಆತ್ಮ ರಕ್ಷಣೆಗಾಗಿ ದೇಶಭಕ್ತ  ಸ್ವಯಂ ಸೇವಕರಂಥ ಸೇನೆ ಕಟ್ಟಬಾರದೆಂಬ ಹೇಳಿಕೆಯಷ್ಟೇ ಆಗಿ ಉಳಿದುಬಿಡುವಂತಿದೆ ಬಾಬಾ ರಾಮ್ ದೇವ್ ಅವರದು.

 ”ನೀವೊಂದು ಮನೆಕೊಳ್ಳಲು ಬಯಸುವಿರಿ. ಇದು ಕೇವಲ ನಿಮ್ಮ ನೆಮ್ಮದಿಗಾಗಿ. ಆದರೆ ಮಾರುವಾಗ ಅದನ್ನು ಕೊಳ್ಳುವವನು ಒಂದಿಷ್ಟು ಸಾಚಾ ಹಣಕೊಟ್ಟರೆ, ಇನ್ನೊಂದಿಷ್ಟು ಕಪ್ಪುಹಣವನ್ನು ಕೊಡುತ್ತಾನೆ” ಎನ್ನುತ್ತಾರೆ ಅನಂತ ಮೂರ್ತಿ. ನಾವು ಜನಸಾಮಾನ್ಯರು ಭಾರೀ ಉದ್ಯಮಿಗಳು ಬಿಲ್ಡರ್ ಗಳಲ್ಲ.  ಇಲ್ಲಿ ಮನೆ ಮಾರುವಾತ ಬಡಪಾಯಿ ತನ್ನ ಕಷ್ಟಕ್ಕಾಗಿ ಮನೆ ಮಾರುತ್ತಾನೆ.  ಅವನಿಗೆ ಕಷ್ಟ ನಿವಾರಣೆಗೆ ಹಣ ಬೇಕು ಅಷ್ಟೇ…. ತನಗೆ ಬಂದ ಹಣ ಬಿಳಿಯೋ ಕಪ್ಪೋ ಅವನಿಗೇನು ಗೊತ್ತು.  ಅದು ಅವನಿಗೆ ಬೇಡದ ವಿಷಯವಲ್ಲವೇ…?

 ಅನಂತ ಮೂರ್ತಿ ಮುಂದುವರೆದು ಹೇಳುತ್ತಾರೆ-”ಇನ್ನೊಂದು ಮನೆಕೊಳ್ಳುವಾಗ ನಾವೂ ಕಪ್ಪು ಹಣ ಕೊಡಬೇಕಲ್ಲ, ಅಲ್ಲಿ ಅದನ್ನು ಬಳಸಿಕೊಳ್ಳಬಹುದೆಂದು.”
ನೋಡಿ ಎಂಥ ಮಾತು! ಹಾಗಾದರೆ, ದೇಶದಲ್ಲಿರುವ ನಾವು ನಮ್ಮ ಕಷ್ಟಕ್ಕೆ ನೆಮ್ಮದಿಗೆ ಮನೆ ಮಾರುತ್ತೇವೆಂದರೆ, ನಾವೆಲ್ಲರೂ ಕಪ್ಪುಹಣ ಹೊಂದಿರುವವರು; ಭ್ರಷ್ಟರು ಎಂದೇ ಆರೋಪಿಸಲಾಗವುದೇನು? ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಹೋಲಿಕೆ ಬೇರೆ …ಅವರಿಂದ.

ನನಗೆ ಅನಿಸುತ್ತದೆ- ಕದ್ದು ಹಣ್ಣು ತಿನ್ನುವವನಿಗಿಂತ ಕೆಳಗೆ ಬಿದ್ದ ಸಿಪ್ಪೆ ತಿನ್ನುವ ಬಡಪಾಯಿ ಸಿಕ್ಕಿ ಹಾಕಿಕೊಂಡು  ಪಡಬಾರದ ಹಿಂಸೆ ಅನುಭವಿಸುವುದೂ ಕೂಡ ದೊಡ್ಡ ದುರಂತವೇ…
“….ಅಣ್ಣಾ ಹಜಾರೆ,  ಬಾಬಾ ರಾಮ್ ದೇವ್ ಇಬ್ಬರೂ ಭ್ರಷ್ಟತೆಯ ವಿರುದ್ಧ ಮಾತನಾಡುತ್ತಿದ್ದಾರೆ. ಅಣ್ಣಾ ಅವರು ಮೈತುಂಬಾ ಹೊದ್ದ ಖಾದಿಯಲ್ಲಿ; ಆದರೆ ರಾಮದೇವ್ ಅವರು ಅರೆಬೆತ್ತಲೆಯಾದ ಕಾವಿಯಲ್ಲಿ. ಹಜಾರೆಯವರಲ್ಲಿ ಸರಳತೆ ಇದೆ. ತಾನೇ ಭ್ರಷ್ಟತೆಯಿಂದ ಮುಕ್ತನಾಗಬೇಕೆಂಬ ಹಂಬಲವಿದ್ದಂತೆ ತೋರುತ್ತದೆ. ಕಿಂಚಿತ್ ಸುಖದಲ್ಲಿ ಕಾಲಕಳೆಯುವ ದೃಢತೆಯನ್ನೂ ಅವರು ಸಂಪಾದಿಸಿದ್ದಾರೆ..”

ಅರೆಬೆತ್ತಲೆಯಾಗಿ ಕಾವಿ ಧರಿಸಿರುವ ಬಾಬಾ ರಾಮ್ ದೇವ್ ಅವರ ತೇಜೋ ವಧೆ ಮಾಡುವುದು ಸೂಕ್ತವಲ್ಲ ಎಂಬುದನ್ನು ಅನಂತಮೂರ್ತಿಯವರು ಗಮನಿಸಿದಂತಿಲ್ಲ; ಯಾಕೆಂದರೆ ಅವರು ಸರ್ಕಾರದ ವಕ್ತಾರಂತೆ ಹೇಳಿಕೆ ನೀಡಬಾರದಲ್ಲವೇ.. ಮೈತುಂಬಾ ಖಾದಿ ತೊಟ್ಟ ಹಜಾರೆಯವರಲ್ಲಿ ಸರಳತೆ ಕಾಣುವುದಾದರೆ, ಅರೆ ಬೆತ್ತಲೆಯಾಗಿ ಸಾರ್ವತ್ರಿಕವಾಗಿ ತನ್ನ ಹೆಸರಲ್ಲಿ ಒಂದು ಪೈಸೆ ಕೂಡ ಇಲ್ಲವೆಂದು ಹೇಳುವ,  ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬೆಂಬಲಿಗರನ್ನು ಹೊಂದಿರುವ  ಸಂತ  ಜನಸೇವಕರಂತೆ ಗುರುತಿಸಿಕೊಂಡಿರುವ,  ಬಡವರು ದೀನದಲಿತರ ಕಾಯಿಲೆ ಕಸಾಲೆಗಳಿಗೆ ಯೋಗ ಮತ್ತು ಔಷಧಿಗಳನ್ನು ನೀಡಿ ಪೂಜನೀಯರೂ ಎನಿಸಿರುವ  ಬಾ ರಾಮ್ ದೇವ್ ಸುಖಬೋಗದಲ್ಲಿದ್ದಾರೆಂದು  ಮೂರ್ತಿಯವರು ನೇರವಾಗಿ ಆರೋಪಿಸಿದಂತಾಗುವುದಿಲ್ಲವೇ..? ಅಣ್ಣಾ ಹಜಾರೆಯವರಲ್ಲಿ ತಾನೇ ಭ್ರಷ್ಟತೆಯಿಂದ ಮುಕ್ತನಾಗಬೇಕೆಂಬ ಹಂಬಲವಿದ್ದಂತೆ ತೋರುತ್ತದೆ ಎನ್ನುವ ಮೂರ್ತಿಯವರ ಕಣ್ಣಲ್ಲಿ  ಅರೆ ಬೆತ್ತಲೆ ಸಂತ ಬಾಬಾ ರಾಮ್  ದೇವ್ ಹಾಗೆ ತೋರುವುದಿಲ್ಲ  ಯಾಕಾಗಿ…?

“….ಬಾಬಾ ರಾಮ್ ದೇವ್ ಮಾತ್ರ ಮೀಡಿಯಾಗಳೆ ಸೃಷ್ಟಿಸಿದ ಮನುಷ್ಯ ಎನಿಸುತ್ತದೆ….
ಎನ್ನುವ ಅನಂತ ಮೂರ್ತಿಯವರಿಗೆ ಬಾಬಾರವರ  ಆಧ್ಯಾತ್ಮಿಕ ಶಕ್ತಿಯಿಂದ ಕೂಡಿದ  ಅಂತರಂಗದ ಧ್ವನಿ, ಭ್ರಷ್ಟತೆ, ಕಪ್ಪುಹಣದ ವಿರುದ್ಧ ಅವರ ಗಂಟಾಘೋಷ ಮತ್ತು ಸ್ವಾಭಿಮಾನದಿಂದ ಸಿಡಿದೆದ್ದ ನುಡಿಗಳೆಲ್ಲವನ್ನು , ಕೇವಲವಾಗಿ ಕಾಣುತ್ತಾರೆ ಅಲ್ಲಿ ಚೀತ್ಕಾರ, ಅಹಂಕಾರವಿದೆ ಎನ್ನುತ್ತಾರೆ. “ಅವೆಲ್ಲ ಬಾಬಾ ರಾಮ್ ದೇವ್ ತಮ್ಮ ಗುಂಪನ್ನು ಬೆಳೆಸಿಕೊಳ್ಳುತ್ತ ಹೋಗುವ ಉಪಾಯಗಳು. ಯಾವುದರಲ್ಲೂ ಅವರಾಡುವ ಮಾತು ಸಾಚಾ ಎಂದು ನಮಗನಿಸುವುದಿಲ್ಲ.” ಎಂದು ಅನಂತ ಮೂರ್ತಿಯವರು ನಮ್ಮೆಲ್ಲರ ಪರ ವಕ್ತಾರರಂತೆ ಅನಂತ ಮೂರ್ತಿಯವರು ನುಡಿಯುತ್ತಾರೆ.
ಈಗಾಗಲೇ ವಿಶ್ವದಾದ್ಯಂತ ಮಿಲಿಯಾಂತರ ಭಕ್ತರು ಬೆಂಬಲಿಗರನ್ನು ಹೊಂದಿರುವ  ಬಾಬಾ ರಾಮ್ ದೇವ್ ಅವರಿಗೆ ಗುಂಪುಕಟ್ಟುವ  ಪ್ರಮೇಯವೆಲ್ಲಿಂದ  ಬಂದೀತೋ …
“ಇಡಿ ಕಾಲದ ಚಲನೆಯನ್ನೇ  ಗಾಂಧಿಯಿಂದ , ಬಸವನಿಂದ, ಬುದ್ಧನಿಂದ , ಅಲ್ಲಮನಿಂದ ನಾವು ಕಲಿತದ್ದನ್ನು ಬಾಬಾ ರಾಮ್ ದೇವ್ ಅವರು ಹಿಮ್ಮೆಟ್ಟಿಸುವ ಮನುಷ್ಯನಂತೆ ಕಾಣುತ್ತಾರೆ.. ಇದನ್ನೂ ಕೂಡ ಅವರು ಲಾಭದ ದೃಷ್ಟಿಯಿಲ್ಲದೇ ಮಾಡುತ್ತಿಲ್ಲ” ಯಾರೂ ಕಾಲದ ಪ್ರವಾಹವನ್ನ ಅದರ ಚಲನೆಯನ್ನು ಬದಲಾಯಿಸುವುದು ಶಕ್ಯವಿಲ್ಲ; ಅದು ಸಾಧ್ಯವೂ ಇಲ್ಲ.  ಇಡೀ ಸಮಾಜವನ್ನು ತಿದ್ದುವ ಬಲಾಯಿಸುವುದು ಯಾರೊಬ್ಬರಿಂದಲೂ ಸಾಧ್ಯವಿಲ್ಲ. ಬದಲಾವಣೆ  ಆಗುವುದಿದ್ದರೆ ಪ್ರತಿಯೊಬ್ಬರಲ್ಲೂ ಆಗಬೇಕು. ಹಾಗೇ ಸರ್ಕಾರದಲ್ಲೂ ಆಗಬೇಕಷ್ಟೇ…. ಗಾಂಧೀಜಿಯವರಿಂದ ಕಲಿತದ್ದನ್ನು ನಮ್ಮ ನ್ನು ಆಳುವ ಪ್ರಭುಗಳು ಮತ್ತು ಜನಪ್ರತಿನಿಧಿಗಳು ಇಂದಿಗೂ ಪಾಲಿಸಿಕೊಂಡು ಬರುವಂತಾಗಿದೆಯೇ… ಗಾಂಧೀಜಿ  ಮಾದರಿ ಇಂದಿನ ಸ್ವತಂತ್ರ ಭಾರತದಲ್ಲಿ ಅದೆಷ್ಟು ಪ್ರಸ್ತುತ….?   ಬುದ್ಧ, ಬಸವ, ಅಲ್ಲಮನನ್ನು ಉದಾಹರಿಸುವ ಅನಂತ ಮೂರ್ತಿಯವರು ಏಕೋ ಗಾಂಧೀಜಿಗೆ ಪ್ರಿಯವಾ ಭಗವದ್ಗೀತೆಯ ಕೃಷ್ಣನ ಹೆಸರನ್ನು ಎಲ್ಲೂ ಹೇಳಲು ಇಚ್ಚಿಸುವುದಿಲ್ಲ.  ಸಾತ್ವಿಕ ಪ್ರಭು ಶ್ರೀರಾಮ ಚಂದ್ರನ  ಸ್ಮರಿಸಿಕೊಳ್ಳುವುದಿಲ್ಲ.  ಅವರು ಬಹಳ ವರ್ಷಗಳ ಹಿಂದೆ ತರಂಗ ವಾರ ಪತ್ರಿಕೆಗೆ( ತರಂಗರ ಪತ್ರಿಕೆ ದಿನಾಂಕ:19-02-1995) ಸಂದರ್ಶನ ನೀಡುವಾಗ ಹೇಳಿದ್ದಾರೆ- “ಕ್ರಿಸ್ತ ಚಾರಿತ್ರಿಕ ವ್ಯಕ್ತಿ, ಮಹಮ್ಮದ್ ಚಾರಿತ್ರಿಕ ವ್ಯಕ್ತಿ…. ರಾಮ ಹುಟ್ಟಿದ್ದು ಅಯ್ಯೋದ್ಯೆಯಲ್ಲಲ್ಲ;  ಗೋಡ್ಸೇ ಗುಂಡಿಕ್ಕಿ ಅವರನ್ನು ಹೋಡೆದಾಗ ಅವರ ಬಾಯಲ್ಲಿ   ರಾಮ …” ಹುಟ್ಟಿದ ಎಂದು ವ್ಯಂಗವಾಡಿದ್ದರು.  ಅಷ್ಟೇ ಅಲ್ಲ  ಅವರ ಅಂದಿನ ಸಂದರ್ಶನ ಉದ್ದಕ್ಕೂ ಅಂತ ವಿಚಿತ್ರ ಹೇಳಿಕೆ ಗಳೇ ಇವೆ!   ಅವರೇ ಅಲ್ಲಿ ಹೇಳಿದ್ದಾರೆ  ತುಂಬಾ ಬುದ್ಧಿವಂತರನ್ನು ಕನ್ನಡ ಪತ್ರಿಕೆಗಳು ಒಪ್ಪಿಕೊಳ್ಳುವುದಿಲ್ಲ. ( ಈ ಬಗ್ಗೆ  ನಾನು ಹಿಂದೇ   ಬ್ಲಾಗ್  ಮಾಡಿದ್ದಿದೆ)  ಇದೇ ಕಾಲದ ಪ್ರವಾಹವಲ್ಲವೇ…? ಕನ್ನಡ ಜನಪ್ರಿಯ ಪತ್ರಿಕೆ ವಿ.ಕ. ಅವರನ್ನು ಒಪ್ಪಿಕೊಂಡಿದೆ.  ವಿಪರ್ಯಾಸವೆಂದರೆ  ಆಗ ಅವರ ಹೇಳಿಕೆಗಳಿಗೆ ಯಾವ ಪ್ರತಿಭಟನೆಯೂ ನಡೆಯಲಿಲ್ಲ ಅದೇ ಕನ್ನಡಿಗರ  ಸಹಿಷ್ಣತೆ!

“”ಪೆದ್ದು ಸರಕಾರ, ಸಾಚಾ ಅಣ್ಣಾ ಮತ್ತು ಕುಟಿಲ ಬಾಬಾ….. ಎಂದು ಹೇಳುತ್ತ ತಮ್ಮ ಕೊನೆಯ ಮಾತೆಂದು ಹೇಳುತ್ತಾರೆ- ಎಮರ್ಜೆನ್ಸಿಯನ್ನು ಜಯಪ್ರಕಾಶ ನಾರಾಯಣರು ತಮ್ಮ ಸಾತ್ವಿಕ ಹಿಂಬಾಲಕ ಮುಖಾಂತರ ವಿರೋಧಿಸಲು ಆಗಲಿಲ್ಲ. ಅವರು ಸಂಘ ಪರಿವಾರವನ್ನು ಬೆನ್ನಿಗೆ ಇಟ್ಟುಕೊಂಡು ಹೋರಾಡಬೇಕಾಯಿತು….ಅಣ್ಣಾ ಹಜಾರೆ ಬಳಗವೂ ಹೀಗೆಯೆ ರಾಮ್ ದೇವ್ ಅವರನ್ನು ಬೆನ್ನಿಗೆ ಇಟ್ಟುಕೊಂಡರೆ ಅದು ಅಪಾಯವಾದೀತು.   ಹಾಗೇನಾದರೂ ಆದರೆ ಅದು ಇಡೀ ನಾಗರೀಕತೆಗೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ….”

ಅದು ಹೇಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆಯೋ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆಯಲ್ಲವೇ…?
ಅನಂತ ಮೂರ್ತಿಯವರೇ ಹೇಳುವಂತೆ ಗಾಂಧಿ ಕಾಲದಲ್ಲಿ ಸತ್ಯಾಗ್ರಹ ವೆಂಬ ಪದ ಬಳಸುವ ಮುನ್ನ ಅದನ್ನು ಪ್ಯಾಸೀವ್ ರೆಸಿಸ್ಟೆನ್ಸ್  ಎನ್ನಲಾಗುತ್ತಿತ್ತು.

ಪ್ಯಾಸೀವ್ ರೆಸಿಸ್ಟೆನ್ಸ್ ನಲ್ಲಿ ಕೂಡ ಹಿಂಸೆಯೇ ಪ್ರತ್ಯಕ್ಷವಾಗುತ್ತದೆ ಎಂಬ ಹಣೆಪಟ್ಟಿ ಕಟ್ಟಲಾಯಿತು ಎನ್ನುತ್ತಾರೆ.   ಅಂದು ಆ ಮಾತನ್ನು ಗಾಂಧೀಜಿ ವಿರೋಧಿಸಿದ್ದ್ರರು.  ಆದರೇನಾಯಿತು ಆಗ…
ಹೌದು, ಈಗ ಆಗುತ್ತಿರುವೂದ ಅದೇ ಆಗಿದೆ.  .ಗಾಂಧೀಜಿಯ ಕಾಲದಲ್ಲಿ ಪ್ಯಾಸೀವ್ ರೆಸಿಸ್ಟೆನ್ಸ್ ಅಥವಾ ಗಾಂಧೀಜಿವರೆ ಕರೆದ ಸತ್ಯಾಗ್ರ ದಲ್ಲೂ ಕೂಡ ಜಲಿಯನ್ ವಾಲಾ ಬಾಗ್ ನಂತ ಘೋರ ಹಿಂಸೆಯೇ ಪ್ರತ್ಯಕ್ಷವಾಯಿತಲ್ಲವೇ…?
ರಾಜಕಾರಣಿಗಳ ಉಪವಾಸ ನಗೆಪಾಟಲಿಗೀಡಾಗುತ್ತದೆ ಎನ್ನುವ ಅನಂತ ಮೂರ್ತಿಯವರು ಹಾಗೆ ಉಪವಾಸ ಸತ್ಯಾಗ್ರಹ ಮಾಡಿ ಮಮತಾ ಬ್ಯಾನರ್ಜಿಯವರು ಟಾಟಾ ಸಮೂಹವು ಸಿಂಗೂರಿನಿಂದ ಕಾಲ್ತೆಗೆಯುವಂತೆ ಮಾಡಿದ್ದನ್ನು  ಒಂದು ಮಾದರಿ ಎಂದು ಬಣ್ಣಿಸುತ್ತಾರೆ. ಮೇಧಾ ಪಾಟ್ಕ ರ್ ಅವರು ನರ್ಮದಾ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಅಣೆಕಟ್ಟನ್ನು ವಿರೋಧಿಸಿ ಹೋರಾಟ ನಡೆಸಿದ್ದನ್ನೂ ಹೊಗಳುತ್ತಾರೆ.

ಆದರೆ,  ಅಂದಿಗೆ ಆ ಹೋರಾಟಗಳ್ಯಾವುವೂ ಸರಕಾರದ ರೀತಿ ನೀತಿ ಧೋರಣೆ ಮತ್ತು ರಾಜಕೀಯದಲ್ಲಿ ಪಳಗಿದ ಮಹಾ ಧುರೀಣರ ಕಪ್ಪು ಹಣದ ಬಂಡವಾಳವನ್ನೇ ಪ್ರಶ್ನಿಸುವಂಥ  ದೊಡ್ಡ ಹೋರಾಟ ಅದಾಗಿರಲಿಲ್ಲ ಎಂಬುದನ್ನು  ಅನಂತ ಮೂರ್ತಿ ಹೇಳಲು  ಮರೆಯುತ್ತಾರೆ.  ಆದ್ದರಿಂದ, ಸರ್ಕಾರ ಮಮತಾ, ಮೇಧಾ ಅವರ ಹೋರಾಟದಲ್ಲಿ ತನಗೇನೂ ಹಾನಿಯಿಲ್ಲವೆಂದು  ತೆಪ್ಪಗಿತ್ತು. ಇದೀಗ  ತನ್ನ ಬುಡವನ್ನೇ ಪ್ರಶ್ನಿಸಿದಾಗ ಅದು ಪೆಚ್ಚಾಗಿದೆ!  ಸ್ಯಾಡಿಸ್ಟ್ ನಂತೆ ಹಗಲೆಲ್ಲ ಸುಮ್ನನಿದ್ದು ರಾತ್ರೋರಾತ್ರಿ ಹೆಂಗಸರು ಮಕ್ಕಳೆನ್ನದೇ ಸತ್ಯಗ್ರಹ ನಡೆಸುತ್ತ ತೂಕಡಿಸುತ್ತಿದ್ದವರ ಮೇಲೆ ದೌರ್ಜನ್ಯವೆಸಗಿ ಘೊರ ಕೃತ್ಯ ನಡೆಸಿಬಿಟ್ಟಿದೆ…
“ಉಪವಾಸವೇ ಎಲ್ಲವೂ ಅಲ್ಲ.  ನಾವು ಉಪವಾಸವನ್ನು ಮುಖ್ಯವಾಗಿ ಆಚರಿಸಬೇಕಾಗಿರುವುದು ಆತ್ಮ ಸಂಯಮಕ್ಕಾಗಿ ಎಂದು ವಿಶ್ವದಾಚೆಗೂ ತನ್ನ  ಪ್ರಖರತೆ   ಸ್ವರೂಪವನ್ನು ಬೀರಬಲ್ಲ  ಉಪವಾಸವನ್ನು ಸೀಮಿತಗೊಳಿಸಿಬಿಡುವ ಅನಂತ ಮೂರ್ತಿಯವರು,

ಹೀಗೆ ಗಾಂಧೀಜಿ ಮಾಡಿದ ಉಪವಾಸ ಸತ್ಯಗ್ರಹ ಹೋರಾಟವನ್ನೂ ನಾವು ಸಂಶಯದಿಂದ ನೋಡುವಂತೆ ಗೊಂದಲದಲ್ಲಿ ಬೀಳಿಸುತ್ತಾರೆ.  ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಲಯಬೇಕಿರುವುದು ನಮ್ಮ ಪ್ರಾಮಾಣಿಕತೆಯಲ್ಲಿ  ಎಂದು ಅವರು ಹೇಳಿದ್ದರೆ ಒಪ್ಪ ಬಹುದಿತ್ತು.  ”ಪ್ರಾಮಾಣಿಕ ಮೌನದಲ್ಲಿ ” ಎನ್ನುತ್ತಾರೆ.  ಗಾಂಧೀಜಿ ಮಾಡಿದ ಸ್ವಾತಂತ್ರ ಹೋರಾಟದಲ್ಲಿ ಅವರೆಂದೂ ತುಟಿ ಬಿಚ್ಚದ ಮೌನಿಗಳಾಗಿ ಸತ್ಯಾಗ್ರಹ ಮಾಡಿದ್ದರೆಂದೇನು?!

ಅಥವಾ ಭ್ರಷ್ಟಾರ ವಿರುದ್ಧ ಹೋರಾಟವೆಂದರೆ ಪ್ರಾಮಾಣಿಕವಾದ ಮೌನವೇನು? ಹಾಗೆಂದರೇನು? ಅದನ್ನು  ಅನಂತ ಮೂರ್ತಿಯವರೇ  ವಿವರಿಸಿಹೇಳಬೇಕು.  ಅವರೇ   ಹಿಂದೊಮ್ಮೆ ಹೇಳಿದಂತೆ  ಅವರಂಥ  ತುಂಬಾ ಬುದ್ಧಿವಂತನ್ನು   ಜ್ಞಾನಿಗಳನ್ನು  ಕನ್ನಡ ಪತ್ರಿಕೆಗಳು ಮಾತ್ರವಲ್ಲ  ನನ್ನಂಥ ಜನಸಾಮಾನ್ಯರೂ ಒಪ್ಪಿಕೊಳ್ಳುವುದಿಲ್ಲ  ಅಲ್ಲವೇ..?

ಈ ದೇಶ ರಾಜಕೀಯ ದೊಂಬರಾಟದ ಆಡುಂಬಲವಾಗಿದೆಯೇ ಗೊಂದಲಗಳ ಗೂಡಾಗಿದೆಯೇ…

ಈವರೆಗೆ ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಯಾವೊಂದು ಸಂಘಟನೆಗಳೂ ಸವಾಲಾಗಿ ಪ್ರಶ್ನಿಸಿ ಗೆಲವು ಕಂಡ ಉದಾಹರಣೆಗಳೇ ಇಲ್ಲ!! ಯಾಕೆಂದರೆ, ಇಡೀ ನಮ್ಮ ದೇಶದ ರಾಜಕೀಯ ವ್ಯವಸ್ಥೆಯೇ ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ಅವಲಂಬಿಸಕೊಂಡೇ ಬಂದಿದೆ;ಬೆಳೆದಿದೆ ಹಾಗೂ ಅದನ್ನು ಪೋಷಿಸಿಕೊಂಡರೇನೆ ತಾವು ಅಧಿಕಾರಕ್ಕೆ ಬರುವುದಲ್ಲದೇ ಅಧಿಕಾರಕ್ಕೆ ಸಂಚಕಾರ ಬಂದಾಗಲೆಲ್ಲ ತಾವು ಆರೋಪಿಗಳಾದಾಗ, ತಮ್ಮನ್ನು ತಮ್ಮ ಅಧಿಕಾರವನ್ನೂ ತಾವು ಗಳಿಸಿದ ಕಪ್ಪು ಹಣದಿಂದಲೇ ಉಳಿಸಿಕೊಳ್ಳಲೂ ಸಾಧ್ಯ ಎಂಬುದೇ ರಾಜಕೀಯ ನೀತಿ ಎನಿಸಿಬಿಟ್ಟಿದೆ. ಅದೇ ಕಪ್ಪು ಹಣದಿಂದ ಮತ್ತೆ ಮತ್ತೆ ಚುನಾವಣೆಯಲ್ಲಿ ಗೆಲ್ಲುತ್ತ ಅಧಿಕಾರದಲ್ಲಿ ಮುಂದುವರೆಯುತ್ತ, ಕಡುಸ್ವಾರ್ಥಿಗಳಾಗಿ ಕಪ್ಪು ಧನ ದಾಹಿಗಳೇ ಆಗಿರುವ ರಾಜಕಾರಣಿಗಳು ಬೆಳೆಯುತ್ತಲೆ ಇರುವುದು ದೇಶಕ್ಕೆ ಅದರ ರಕ್ಷಣೆಗೇ ಹಿತಕರವಲ್ಲ. ಯಾವ ಸಚಿವರು ಭ್ರಷ್ಟಾಚಾರದಿಂದ ಎಷ್ಟು ಹೆಚ್ಚು ಕಪ್ಪು ಹಣಗಳಿಸಿದ್ದಾರೆ? ಯಾವ ಪಕ್ಷ ಯಾವೊಂದು ಮಹೋದ್ಯಮಿಯ ಗರಿಷ್ಠ “ಕೊಡುಗೆ”ಯಿಂದಾಗಿ ಅವನ ಕಪಿಮುಷ್ಟಿಯಲ್ಲಿದೆ? ಎಂಬಿತ್ಯದಿ ಲೆಕ್ಕಾಚಾರಗಳು ಊಹೆಗೂ ನಿಲುಕಲಾರದಷ್ಟಿವೆಯಲ್ಲ..!

ಹೀಗಾಗಿ ನಮ್ಮ ಪ್ರಜಾಪ್ರಭುತ್ವವು ಬರು ಬರುತ್ತ ವಿರೂಪಗೊಳ್ಳುತ್ತಾ ನರಳುತ್ತಲೇ ಇದೆ. ಅದರ ಸ್ವರೂಪವನ್ನು ಸುಸ್ಥಿತಿಗೆ ತರುವುದಾಗಲೀ ಅಥವಾ ಪೂರ್ಣ ಬದಲಿಸಿ ಹೊಸರೂಪ ಕೊಡುವುದಾಗಲೀ ಸಲಭ ಸಾಧ್ಯವೇನಲ್ಲ. ಹಾಗೆ ನೋಡಿದರೆ, ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವವರಲ್ಲಿ ಬಹುತೇಕ ಕೆಳವರ್ಗದ ಮುಗ್ದರು, ಅನಕ್ಷರಸ್ಥರು ಅಂತಿರಲಿ, ಈಗೀಗ ಹಳ್ಳಿ ಹಳ್ಳಿಗಳಲ್ಲಿ ಪ್ರಬುದ್ಧರಾಗಿರುವ “ನಾಗರೀಕರು” ಸಹ ಯಥಾರಾಜಾ ತಥಾ ಪ್ರಜಾ ಆಗಿಬಿಟ್ಟಿದ್ದಾರೆ! ಇನ್ನು ನಗರ, ಮಹಾನಗರಗಳ ಬೀದಿ ಬೀದಿಗಳಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳು, ಆಟೋ ಚಾಲಕರೂ ಧರ್ಮಕರ್ಮದ ಅಂಜಿಕೆ ತೊರೆದವರೇ ಬಹು ಮಂದಿ ಎಲ್ಲೆಲ್ಲೂಳ ಕಣ್ಣಿಗೆ ರಾಚುತ್ತಾರೆ. ಅಕ್ರಮದಿಂದ ಅನ್ಯಾಯವಾಗಿ ಹಣಗಳಿಸಿದರೇನೂ ತಪ್ಪಲ್ಲ; ಅದೇ ಈಗಿನ ಕಾಲಕ್ಕೆ ಸರಿ ಎಂಬ ನಿಲವು ಅವರದು. ಆದರೇನು ಎಲ್ಲೋ ಒಬ್ಬಿಬ್ಬರು ಸರ್ಕಾರಿ ಉದ್ಯೋಗದಲ್ಲಿರುವ ಗುಮಾಸ್ತರು, ಅಧಿಕಾರಿಗಳು ಹಳ್ಳಿ ಪಟ್ಟಣಗಳಲ್ಲಿ ವ್ಯಾಪಾರಿಗಳು, ನಗರದ ಆಟೊ ಚಾಲಕರು ಮೋಸ ವಂಚನೆಯಿಲ್ಲದೆ ನ್ಯಾಯ ನಿಷ್ಠೂರರಾಗಿ ನಡೆದುಕೊಳ್ಳುವುದನ್ನು ನಾವು ಕಂಡಾಗ ಇನ್ನೂ ಇಲ್ಲಿ ನಂಬಿಕೆ ಎಂಬುದು ಉಳಿದಿದೆ ಅನ್ನಿಸದೇ ಇರುವುದಿಲ್ಲ!. ಅಂಥ ಅಪರೂಪದ ಮನುಷ್ಯರೂ ಅಸಾಹಯಕರಾಗಿ ನಮ್ಮ ದೇಶದ ರಾಜಕೀಯ ವ್ಯವಸ್ಥೆಯನ್ನು ಕಂಡು ವ್ಯಥೆ ಪಡುವಾಗ ನಮ್ಮ ಬಾಯಿಕಟ್ಟಿ ಸಹ ಹೋಗುತ್ತದೆ; ಮೂಕಪ್ರೇಕ್ಷಕರಾಗುತ್ತೇವೆ.

ಅಂದಿಗೂ ಇಂದಿಗೂ ಅಜ್ಞಾನ ಅನಕ್ಷರತೆ ಮತ್ತು ಬಡತನ ವನ್ನು ಬುಡ ಸಹಿತ ಕಿತ್ತೊಗೆಯಲು ಅಸಮರ್ಥವಾಗಿರುವ, ಜನಸಂಖ್ಯಾ ಸ್ಫೋಟದಲ್ಲಿ ಮಾತ್ರ ನಾಗಾಲೋಟ ಕಂಡಿರುವ ಈ ದೇಶವನ್ನು ಭಾರೀ ಬಂಡವಾಳ ಶಾಹಿಗಳು ಮತ್ತು ಕೋಟ್ಯಾನು ಕೋಟಿ ಕಪ್ಪು ಹಣವನ್ನು ವಿದೇಶದ ಬ್ಯಾಂಕುಗಳಲ್ಲಿ ಹೊಂದಿರುವ ಬಹುಮಂದಿ ಆಧಿಕಾರಸ್ಥ ರಾಜಕೀಯ ಹೆಬ್ಬುಲಿಗಳು ತಮ್ಮ ಕಪಿ ಮುಷ್ಟಿಯಲ್ಲಿಟ್ಟು ಕೊಂಡಿದ್ದಾರೆ. ಅವರೇ ನಮ್ಮ ದಿನೇ ದಿನೇ ಪ್ರಜಾಪ್ರಭುತ್ವವನ್ನು ನಗೆಪಾಟಲಾಗೀಡು ಮಾಡಿದ್ದಾರೆ. ನಮ್ಮ ಕಾನೂನು ವ್ಯವಸ್ಥೆಯೂ ಹಾಗೆಯೆ ಇದೆ. ಯಾವೊಂದು ಕ್ರಿಮಿನಲ್ ಕೇಸ್ ಇರಲಿ, ಸಣ್ಣ ಪುಟ್ಟ ಸಿವಿಲ್ ಕೇಸ್ ಗಳೂ ಕೂಡ ಬೇಗ ಇತ್ಯರ್ಥವಾಗದೇ ವರ್ಷಗಟ್ಟಲೇ ತೆಗೆದುಕೊಳ್ಳುತ್ತವೆ. ಎಷ್ಟೋ ಕ್ರಿಮಿನಲ್ ಕೇಸ್ ಗಳು ಕಡತದಲ್ಲೇ ದೂಳು ಹಿಡಿದು ಕಾಣೆಯಾಗಿ ಬಿಡುತ್ತವೆ. ಈಗಿತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ನಮ್ಮ ರಾಜಕೀಯ ವ್ಯವಸ್ಥೆಗೆ ಕನ್ನಡಿ ಹಿಡಿದಿವೆ. ಕಂಪ್ಯೂಟರ್ ಲೆಕ್ಕಾಚಾರಗಳಿಗೂ ಮಿಗಿಲಾಗಿ ಹಿಂದಿನ ಕೈಗಳು ಕೆಲಸಮಾಡುತ್ತಿವೆ. ಹಾಗೇ ತಮ್ಮ ಕೆಲಸ ಆಗುಮಾಡಿಕೊಳ್ಳುವಷ್ಟು ಚತುರ ಚಾಣಕ್ಷತೆಯನ್ನು ಅಹರ್ನಿಶಿ ಕೆಲಸಮಾಡುವ ಕಂಪ್ಯೂಟರ್ ಗಳೂ ಕೂಡ ಸ್ಥಗಿತಗೊಂಡು ತೆಪ್ಪಗಾಗುವಷ್ಟು ಬಂಡವಾಳಶಾಹಿಗಳು ಮೈಗೂಡಿಸಿಕೊಂಡಿದ್ದಾರೆ. ಇದಕ್ಕೊಂದು ಜ್ವಲಂತ ಸಾಕ್ಷಿಯೆಂದರೆ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ಪ್ರತಿ ವರ್ಷವೂ ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರದ ನಡುವೆ ನಡೆಯುವ ಜಟಾಪಟಿಯೇ ರಾಚುತ್ತಿರುತ್ತದೆ. ಸಿಇಟಿ ಕೌನ್ಸಿಲಿಂಗ್ ಕಂಪ್ಯೂಟರೈಸ್ ಆದ ಹೊಸತರಲ್ಲಿ ಪ್ರತಿಭವಂತ ವಿದ್ಯಾರ್ಥಿಗಳಿಗೆ ಅವರ ಬಡ ತಂದೆ ತಾಯಿಗಳು ಪೋಷಕರಿಗೆ ದೊರಕುತ್ತಿದ್ದ ನ್ಯಾಯ ಸಮ್ಮತ ಸೀಟುಗಳ ಹಂಚಿಕೆ ಇಂದಿಗೆ ಕಂಡುಬರುತ್ತಿಲ್ಲವೆಂಬುದೇ…. ಶಿಕ್ಷಣ ಶುಲ್ಕ ಯದ್ವಾ ತದ್ವ ಏರಿಸುವಲ್ಲಿ ಅವರುಗಳು ಯಶಸ್ವಿಯಾಗುತ್ತಿದ್ದಾರೆ.

ಹಾಗಾದರೆ, ನಮ್ಮ ಪ್ರಜಾಪ್ರಭುತ್ವ ಯಶಸ್ವಿಯಾಗಿಲ್ಲವೇ? ಎಂದರೆ ಖಂಡಿತಾ ಆಗಿದೆ. ಸ್ವಾತಂತ್ರ್ಯಾನಂತರದ ಪಂಚವಾರ್ಷಿಕ ಯೋಜನೆಗಳೇ ಮುಂತಾದ ಅಭಿವೃದ್ಧಿಕಾರ್ಯಗಳಿಂದ ಹಿಡಿದು ನಾನಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ವೈಜ್ಞಾನಿಕವಾಗಿಯೂ ಅಷ್ಟೇ, ಉಪಗ್ರಹ ಉಡಾವಣೆಯಿಂದ ಹಿಡಿದು ನಮ್ಮ ದೇಶಕ್ಕೆ ಕಂಪ್ಯೂಟರ್ ಬರುವುದು ಅದು ಜನಸಾಮಾನ್ಯರ ಕೈಗೆಟಕುವುದೂ ದೂರವೇ ಉಳಿದಿದೆ ಅಂದುಕೊಂಡರೂ ಅದೂ ಅಷ್ಟೇ ಬೇಗನೆ ದೇಶದ ಮೂಲೆ ಮೂಲೆಯನ್ನು ಆಕ್ರಮಿಸಿಕೊಂಡಿದೆ.! ಹೌದು, ಕಾಲದ ಪ್ರವಾಹವೇ ಹಾಗೆ, ಅದರ ಎದುರು ಯಾರೂ ಈಜಿ ಜಯಿಸಲು ಸಾಧ್ಯವಿಲ್ಲ. ಅದರೊಂದಿಗೇ ಸಾಗುತ್ತ ಹೆಜ್ಚೆ ಹಾಕಬೇಕು;ಅಂತೆಯೆ ಯಾವಾಗ ನಮ್ಮ ಆಡಳಿತದಲ್ಲೂ ಹೊಸ ಬದಲಾವಣೆ ತರಬೇಕು. ಹೊಸ ಕಾಯಿದೆ ಕಟ್ಟಳೆಗಳು ಜಾರಿಯಾಗಬೇಕೆಂಬ ಮಾತು ಕೇಳಿಬಂದಾಗಲೆಲ್ಲ ನಮ್ಮ ಪ್ರಜಾಪ್ರಭುತ್ವ ಹೊಸ ಹೊಳವು ಹೊಸಬೆಳಕು ಕಂಡಿದೆ. ಹೌದು, ಪ್ರಜಾಪ್ರಭುತ್ವದ ಯಶಸ್ಸಿರುವುದೇ ಅದರ ಪ್ರಗತಿಪರ ಮಾರ್ಗದಲ್ಲಿ. ದೇಶದ ಹಿತಾಸಕ್ತಿಯಲ್ಲಿ ಬದಲಾಗಬೇಕೆಂಬುದೇ ಅದೆಲ್ಲವು ರಾಜಕಾರಣಿಗಳ ಭಾಷಣ ಮತ್ತು ಪೊಳ್ಳು ಆಶ್ವಾಸನೆಯಲ್ಲಷ್ಟೇ. ಹೀಗೇ ಪ್ರಗತಿ ಪಥದಲ್ಲಿ ನಡೆಯುತ್ತದೆ ಎಂದೇನೂ ನಿಖರವಾಗಿ ಹೇಳುವಂತಿಲ್ಲ. ಏನೂ ಬೇಕಾದರೂ ನಡೆಯಬಹುದು; ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಮನಾದದ್ದು ಏನೇ ಘಟಿಸಲೂ ಬಹುದು. ಅದು ಹೇಗೆ ಭ್ರಷ್ಟ ಮಾರ್ಗವೇ ಅಲಿಖಿತ ಸರ್ವ ಸಮ್ಮತವೆಂಬಂತೆ ನಮ್ಮ ದೇಶದ ರಾಜಕಾರಣಕ್ಕೆ ಭೂತದಂತೆ ಹಿಡಿಯಿತೋ ಹಿಡಿಯಿತು ನಮ್ಮ ದೇಶದ ರಾಜಕಾರಣ ಅಲ್ಲಿಂದ ಹಿಂತಿರುಗಿ ನೋಡಲಾಗದೇನೆ ಹಾಗೆಯೇ ಬೆಳೆಯುತ್ತಲೇ ಉಳಿದಿರುವುದೇ ಅದರ ಇತ್ತೀಚಿನ ಯಶಸ್ಸು!! ಅದನ್ನು ಹಾಗೇ ಉಳಿಸಿ ಬೆಳೆಸುತ್ತಿರುವವರಲ್ಲಿ ಮುಗ್ದರು ದಡ್ಡರಷ್ಟೇ ಅಲ್ಲ ಪ್ರಬುದ್ಧರೂ ವಿದ್ಯಾವಂತರು ಸೇರಿರುವುದೇ ಈ ನಮ್ಮ ಘನ ಪ್ರಜಾಪ್ರಭತ್ವದ ವೈಪರಿತ್ಯ- ದೊಡ್ಡ ಅಣಕವೇ! ಹಾಗಾದರೆ ಅದನ್ನು ಎಂದಿಗಾದರೂ ಸುಸ್ಥಿತಿಯಲ್ಲಿಟ್ಟು ಅಮೂಲಾಗ್ರ ಬದಲಾವಣೆಗೆ ತರುಲು ಸಾಧ್ಯವಿಲ್ಲವೇ ಎಂಬ ಬೃಹತ್ ಪ್ರಶ್ನೆ ನಮ್ಮನ್ನು ಕಾಡುತ್ತದೆಯಲ್ಲವೇ.? ಇದೀಗ ಅದು ಸಾಧ್ಯವಿದೆ ಎಂಬ ಸುಳಿವು ಗೋಚರ ವಾಗುತ್ತಿದೆಯಲ್ಲ.

.ಸೂರ್ಯ ಮುಳುಗದ ಸಾಮ್ಯಾಜ್ಯವೆಂಬ ಬ್ರಿಟಿಷ್ ಆಧಿಪತ್ಯವನ್ನು ಗಡ ಗಡ ನಡುಗಿಸಿದ್ದು ನಮ್ಮ ದೇಶದ ಆಧ್ಯಾತ್ಮಿಕ ಶಕ್ತಿಯೇ. ಆ ಶಕ್ತಿಯ ಪ್ರತಿಪಾದಕರಾಗಿ ಚಳುವಳಿಗಿಳಿದರು ಗಾಂಧೀಜಿ! ಮಹಾನ್ ಸಂತ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದು ಶಾಂತ ರೀತಿಯಿಂದ ಉಪವಾಸ ಸತ್ಯಗ್ರಹ ಚಳುವಳಿಯನ್ನು ಆರಂಭಿಸಿದರು. ಛಲಬಿಡದೇನೆ ತಮ್ಮ ಹೋರಾಟ ನಡೆಸಿದರೆ. ಅವರಿಗೆ ಅಂದಿನ ಸರ್ಕಾರ ಕೊಟ್ಟ ಕಿರುಕೊಳ ಹಿಂಸೆ ಜೈಲುವಾಸಗಳನ್ನೆಲ್ಲ ಅನುಭವಿಸಿದರು. ಅವರ ಅಹಿಂಸಾ ಚಳುವಳಿಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ತಂಡೋಪ ತಂಡವಾಗಿ ಬೆಂಬಲಿಸುತ್ತಲೆ ಬಂದರು. ಅವರು ತಮ್ಮ ವೀರವಾಣಿಯಿಂದ ಆಧ್ಯಾತ್ಮಿಕ ಶಕ್ತಿ ಎಂದರೇನೆಂಬುದನ್ನು ಮರೆದರೋ ಅಥವಾ ಸುಮ್ಮನೆ ಮೌನವಾಗಿ ಉಪವಾಸ ಸತ್ಯಾಗ್ರಹ ಮಾಡಿದರೋ ಎಂಬುದು ಇಲ್ಲಿ ಅಪ್ರಸ್ತುತವೇ ಸರಿ. ಇದೀಗ ಸಂತ ಯೋಗ ಗುರು ಬಾಬಾ ರಾಮದೇವ್ ಆ ಕೆಲಸದಲ್ಲಿ ಮುಂದಾಗಿದ್ದಾರೆ; ಅವರು ಮೊದಲಿಗೆ ಗಾಂಧೀಜಿಯಂತೆ ಶಾಂತಿಯುತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಅವರೊಂದಿಗೆ ಆರ್ ಎಸ್ ಎಸ್ ಬೆಂಬಲ ನಿಂತಿತ್ತು ಎಂಬ ಕಾರಣಕ್ಕೆ ಸರ್ಕಾರ ಅವರ ಏಕಾಗ್ರತೆಗೆ ಭಂಗ ತಂದು ಅವರ ಗುಂಪನ್ನು ರಾತ್ರೋ ರಾತ್ರಿ ದೌರ್ಜನ್ಯದಿಂದ ಕ್ರೌರ್ಯದಿಂದ ಚದುರಿಸಿತು.

ಇದೀಗ ಬಾಬಾ ರಾಮ್ ದೇವ್ ತಮ್ಮ ಶಾಂತಿ ಮಂತ್ರದ ಹೋರಾಟಕ್ಕೆ ಹೊಸ ತಿರುವು ಕೊಡುವಂತೆ ತಾವು ಹನ್ನೊಂದು ಸಾವಿರ ಶಸ್ತ್ರ ಸಜ್ಜಿತ ಸೇನೆಯನ್ನು ಸಜ್ವುಗೊಳಿಸುತ್ತೇನೆ ಎಂಬ ಉದ್ರೇಕಕಾರಿ ಹೇಳಿಕೆ ನೀಡಿದ್ದಾರೆ. ಅವರ ಹೋರಾಟ ಯಾವ ರೂಪ ಪಡೆಯುತ್ತದೆ; ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಬೇಕು. ಈ ನಡುವೆ ಭ್ರಷ್ಟರ ವಿರುದ್ದ ಮೊಟ್ಟ ಮೊದಲಿಗೆ ಸಿಡಿದೆದ್ದ ಅಣ್ಣಾ ಹಜಾರೆ ಅವರು ತಾವು ಆರ್ ಎಸ್ ಎಸ್‌., ಕಾಂಗ್ರೇಸ್ ಹೀಗೆ ಯೊವೊಂದೂ ಗುಂಪಿನೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ತಮ್ಮ ಹೋರಾಟ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ದ ಎಂದು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.

ಸ್ವಾತಂತ್ರ್ಯ ಪೂರ್ವದ ಭಾರತ ಇದಲ್ಲವೇ ಅಲ್ಲವೆಂಬುದು ನಮಗೆಲ್ಲರಿಗೂ ಗೊತ್ತು. ಆಗ ಗಾಂಧೀಜಿಯ ಸ್ವಾತಂತ್ರದ ಹೋರಾಟಕ್ಕೆ ನಮ್ಮ ದೇಶದಲ್ಲಿ ಜಾತಿ ಬೇಧವಿಲ್ಲದ ಐಕಮತ್ಯವಿತ್ತು; ಬೆಂಬಲವಿತ್ತು. ಈಗ ಅಂಥ ಗಾಂಧೀಜಿ ಮತ್ತೊಮ್ಮೆ ಹುಟ್ಟಿ ಬಂದರೂ ಅಂಥ ಸಂಘಟನೆ ಹೋರಾಟ ಕನಸಿನ ಮಾತೇ ಎಂಬುದು ಆಳುವವರಷ್ಟೇ ಅಲ್ಲ ವಿರೋಧ ಪಕ್ಷಗಳೂ ಹಾಗೂ ಜನಸಾಮನ್ಯರಿಗೂ ತಿಳಿದಿರುವಂತಿದೆ. ಆದರೆ, ಯಾರೇ ಬಂದರೂ ಗಾಂಧೀಜಿಯವರಂತಾಗುವುದಿಲ್ಲ; ಅವರನ್ನು ಅನುಕರಣೆ ಮಾಡಿ ಗೆಲ್ಲುವುದೂ ಈಗ ಸಾಧ್ಯವಿಲ್ಲ. ಯಾಕೆಂದರೆ, ಈ ದೇಶದೊಳಗೇ ರಾಜಕೀಯ ಪಕ್ಷಗಳಲ್ಲಿ ಮಾತ್ರವೇ ಭಿನ್ನ ಮತೀಯರಿಲ್ಲ; ದೇಶದ ಮೂಲೆ ಮೂಲೆ ಗಳಲ್ಲಿರುವ ಕಛೇರಿಗಳಲ್ಲಿ ಅಧಿಕಾರಿಗಳಲ್ಲಿ, ಜನಸಾಮಾನ್ಯರಲ್ಲಿ, ವಿದ್ಯಾವಂತರಲ್ಲಿ ಬುದ್ಧಿಜೀವಿಗಳಲ್ಲಿ, ವಿದ್ವಾಂಸರಲ್ಲಿ , ಅನೇಕಾನೇಕ ಸಂಘನೆಗಳ ಹೋರಾಟ ಗಾರರಲ್ಲಿ ಭಿನ್ನ ಮತೀಯರಿದ್ದಾರೆ. ಪ್ರತಿಯೊಂದು ಪತ್ರಿಕೆಯೂ ಯಾವುದೋ ಒಂದು ಪಕ್ಷದ ಅಥವಾ ಸಂಘನೆಯ ಮುಖವಾಣಿಯಾಗಿರುತ್ತದೆ ಎಂಬುದೀಗ ಎಲ್ಲರಿಗೂ ತಿಳಿದಂತಿದೆ. ಹಾಗೆ ತಮ್ಮನ್ನು ತಮ್ಮದೇ ಆದ ಗುಂಪೊಂದರಲ್ಲಿ ಗುರುತಿಸಿಕೊಂಡವರಿದ್ದಾರೆ. ಗುರುತಿಸಿಕೊಳ್ಳದವರೂ ಸಹ ಹಾಗೆ ಗುರುತಿಸಿಕೊಂಡರೇನೆ ಇಲ್ಲಿ ಬದುಕಿನಲ್ಲಿ ಬದುಕಲು, ಮತ್ತು ದುಡ್ಡು ಹೆಸರು ಮಾಡಲು ಸಾಧ್ಯ ಮೇಲೇರಲು ಸಾಧ್ಯವೇನೋ ಎಂಬ ಗೊಂದಲದಲ್ಲಿದ್ದಾರೆ…. ಒಟ್ಟಿನಲ್ಲಿ ಈ ದೇಶ ರಾಜಕೀಯ ದೊಂಬರಾಟದ ಆಡುಂಬುಲವಾಗಿದೆಯೇ ; ಗೊಂದಲಗಳ ಗೂಡಾಗಿದೆಯೇ…

ಕನ್ನಡ ಚಿತ್ರರಂಗ ಮಾತ್ರವಲ್ಲ ಕನ್ನಡ ಟಿ.ವಿ.ಧಾರಾವಾಹಿಗಳೂ ಅದೆಷ್ಟು ಹದಗೆಟ್ಟಿದೆಯೆಂದರೆ….

ಕನ್ನಡ ಚಿತ್ರರಂಗ ಮಾತ್ರವಲ್ಲ  ಕನ್ನಡ ಟಿ.ವಿ.ಧಾರಾವಾಹಿಗಳೂ ಅದೆಷ್ಟು ಹದಗೆಟ್ಟಿದೆಯೆಂದರೆ,  ಅವೇನು ಮನೆ ಮನೆಗಳನ್ನ ಸಮಾಜವನ್ನ ಹಾಳು ಮಾಡಲು ಬಂದಿವೆಯೋ ಏನೋ ಅದನ್ನು ರಿಪೇರಿ ಮಾಡುವುದು ಸುಲಭ ಸಾಧ್ಯವೇನಿಲ್ಲ.
ಆರು ಕೋಟಿ ಜನಸಂಖ್ಯೆಯಲ್ಲಿ  ಅನಕ್ಷರಸ್ಥರು, ಮತ್ತು ಮುಗ್ಧ ಜನಗಳಿಗೇನು ಕಡಿಮೆಯಿಲ್ಲ, ಅವರುಗಳೇ ಅವರ ಸದಭಿರುಚಿಯ ಪ್ರೇಕ್ಷಕರು.  (ಹೆಳಬೇಕೆಂದರೆ, ಅವರುಗಳೆ ಈ ದೇಶ ಜನಪ್ರತಿನಿಧಿಗಳನ್ನು ಆರಿಸುವವರೆಂದರೆ ತಪ್ಪೇನಿಲ್ಲವಲ್ಲ!)
ಇನ್ನು ಕಲೆಯ ಗಾಳಿ ಗಂಧ ಇಲ್ಲದವರು, ಈ ಸಿನಿಮಾ/ಟಿ.ವಿ. ಧಾರಾವಾಹಿ ಇದೆಲ್ಲ ಇಂಡಸ್ಟ್ರಿಯಷ್ಟೇ ಎಂದು ದುಡ್ಡು ಮಾಡಲೆಂದೇ ಬಂದವರು, ಬಂದು ಸೋತವರು. ಕಳಕೊಂಡವರು, ಇಲ್ಲೇ ಹುಡುಕುವವರೂ ಹೆಚ್ಚುತ್ತಲೆ ಇದ್ದಾರೆ.   ಎಲ್ಲೋ ಒಂದು ಉತ್ತಮ ಚಿತ್ರ ಕೊಟ್ಟರೂ ಅದನ್ನು ಎಲ್ಲ ವರ್ಗದ ಪ್ರೇಕ್ಷಕರನ್ನೂ ತಲುಪಿಸಲಾರದೇ ಕಂಗೆಟ್ಟು ಹೋದವರೂ ಇದ್ದಾರೆ.  ಅಪರೂಪಕ್ಕೊಮ್ಮೆ ಒಳ್ಳೆಯ ಸೂಪರ್ ಹಿಟ್ ಚಿತ್ರವೊಂದನ್ನು ಕೊಟ್ಟು, ಹೊಸ ಹುಡುಗನೊಬ್ಬನನ್ನ ದಿನ ಬೆಳಗಾಗೊದ್ರೊಳಗೇ   ಕೋಟ್ಯಾಧಿಪತಿ ಮಾಡಿದವರೂ, ಮತ್ತೆ ಅವನ ಮನೆ ಮಟ್ಟಿಲು ಹತ್ತಲೂ ಆಗದ ನಿರ್ಮಾಪಕರೂ ಇದ್ದಾರೆ!
ಕನ್ನಡದಲ್ಲಿ ಟಿ.ವಿ. ಧಾರಾವಾಹಿಗಳು ಅದೆಷ್ಟು ಅಸಹನೀಯವಾಗಿರುತ್ತವೆಯೆಂದರೆ,  ಇವರೇನು ಕಥೆ, ಚಿತ್ರ ಕಥೆ, ಸಂಭಾಷಣೆ  ಎಂಬುದನ್ನೇ ಬರೆಯದೇನೆ ಸ್ಟಾಟ್ ನಲ್ಲಿ ಅವರ ಮನಸೋ ಇಚ್ಛೆ  ಸೀನ್ ಕ್ರಿಯೇಟ್  ಮಾಡಿ ಷೂಟಿಂಗ್ ಮಾಡ್ತಾ ಇದಾರೆ ಅನ್ನಿಸದೇ ಇರೋದಿಲ್ಲ.  ನಿರ್ಮಾಪಕ ಮತ್ತು ನಿರ್ದೇಶಕ ರಿಗೆ ತಾವು ಮಾಡಿದ್ದೇ ಸರಿ ಪ್ರೇಕ್ಷಕ ನೋಡ್ತಾನೆ;ನೋಡಲೇ ಬೇಕು (ಹಾಗೇ ನೋಡ್ತಾ ಕುಳಿತಲ್ಲೇ ಗೊಣಗುತ್ತಾನೆ; ಅಯ್ಯೋ ಕನ್ನಡಕ್ಕೆ ಎಂಥ ಗತಿ ಬಂತೂ ಅಂತ, ಹಾಗೇ ಸುಮ್ಮನೇ ಬುದ್ಧಿವಂತ ಪ್ರೇಕ್ಷಕ ಚಕ್ ಅಂತ ಜಗಿತಾನೆ ಬೇರೆ ಚಾನೆಲ್  ಗೆ -ಭಾಷೆ ಧಾರಾವಾಹಿ/ಚಿತ್ರಗಳಿಗೆ. ಇಲ್ಲಾ ಟಪ್ ಅಂತ ಆಫ್ ಮಾಡ್ತಾನೆ ಟಿ.ವಿ.ನಾ).
ಮೊನ್ನೆ ಇಲ್ಲೇ ಪ್ರಾಕಾಶ್ ನಗರಕ್ಕೆ ಹೋದಾಗ ರಸ್ತೆ ಮಧ್ಯೆ ಡಾ|| ರಾಜ್ ಕುಮಾರ್ ಅವರ ದೊಡ್ಡ ಕಟ್ ಔಟ್ ನೋಡಿದೆ. ಅದರ ಅಡಿ ಬರಹ-     “ಡಾ|| ರಾಜ್ ಮತ್ತೆ ಹುಟ್ಟಿ ಬಾ”
ಆಗ ಅನ್ನಿಸಿದ್ದು- “ಡಾ|| ರಾಜ್ ಮತ್ತೆ  ಹುಟ್ಟಿ ಬಾ;
ಅಂದಿನ ಭಾವನೆಗಳನ್ನೇ ಕಟ್ಟಿ ತಾ”

Follow

Get every new post delivered to your Inbox.