Category Archives: ಸಾಹಿತ್ಯ-ಕಲೆ
ಕಥೆ ಏಕೆ ಮತ್ತು ಹೇಗೆ ಬರೆಯಬೇಕು…?
ಯಾವುದೇ ವಸ್ತು, ವಿಷಯ, ಘಟನೆ ಬಿಡದೇ ತಿಂಗಳಾನುಗಟ್ಟಲೇ, ವರ್ಷಗಳೇ ಕಾಡಿದಾಗ ಅದು ಕಥೆಯೋ ಕಾದಂಬರಿಯೋ ಆಗಿ ರೂಪ ತಳೆಯುತ್ತದೆ. ಕಥಾ ವಸ್ತುವಿನ ಆಯ್ಕೆ, ಅದು ಬೆರಗೊಡೆದು ಹೇಳಬಹುದಾದ ಹೊಸದೊಂದು ಕಥೆಯಾಗುತ್ತದೆಯೇ ಎಂಬ ಸೂಕ್ತ ಪರಾಮರ್ಶೆ ಮೊದಲಾಗಬೇಕು. ನಂತರ ಕಥಾ ರಚನೆ, ದಟ್ಟವಾದ ವಿವರಣೆ ಇದ್ದೂ ಓದುಗನನ್ನು ಸೆಳೆದುಕೊಳ್ಳುವ ಆಕರ್ಷಕ ಕಲ್ಪನೆ, ನಿರೂಪಣಾ ತಂತ್ರಗಳಂತಹ ತಾಂತ್ರಿಕ ಸಂಗತಿಗಳವರೆಗೆ ಕಥೆಯ ವ್ಯಾಪ್ತಿ ಹರವು ಇರುತ್ತದೆ. ಕಥೆ ಬರೆಯುವುದಕ್ಕೆ ಅಗತ್ಯವಾದ ಮೂಲ ಪ್ರೇರಣೆಗಳೆಂದರೆ- ಸ್ವಂತ ಅನುಭವ, ಸಂವೇದನೆ ಮತ್ತು ಸೃಜನಶೀಲ ಪ್ರತಿಭೆಗಳಿಂದ ಬರುತ್ತದೆ. ಆದರೂ ಕಥಾ ರಚನೆಯ ಕಲೆಗಾರಿಕೆಯು ಅನೇಕ ಶ್ರೇಷ್ಠವಾದ ಕಥೆಗಳ ಆಭ್ಯಾಸಪೂರ್ಣ ಅಧ್ಯಯನದಿಂದ ಮಾತ್ರ ಬರುತ್ತದೆ. ಕನ್ನಡದಲ್ಲಿ ಮತ್ತು ಅನ್ಯಭಾಷೆಗಳಲ್ಲಿ ಬಂದಿರುವ ನೂರಾರು ಕಥೆಗಳನ್ನು ಎಚ್ಚರದಿಂದ ಓದಿದಾಗ ಆಗುವ ಅನುಭವಗಳಿಂದ ಮತ್ತು ಅವುಗಳ ಅರ್ಥವಂತಿಕೆ ಸೋಪಜ್ಞತೆ ಹಾಗೂ ಶೈಲಿಗಳ ಹಲವು ಸಂಕೀರ್ಣ ಬಗೆಗಳು ಬರೆಯುವವನಿಗೆ ಗೋಚರವಾಗುತ್ತವೆ. ಅಂತಹ ಸಂದರ್ಭದಲ್ಲೂ ಸ್ವಂತಿಕೆಯಿಂದ ಸೃಜಿಸಲ್ಪಡುವ ಬರವಣಿಗೆಯಲ್ಲಿ ಬರೆಯುವವಗೆ ಅಂತರಂಗದ ಧ್ವನಿಯೊಂದು ಕೇಳಿ ಬರಬೇಕು; ಆಗ ಮಾತ್ರ ಬರವಣಿಗೆ ಸರಾಗ ಸಲಲಿತವಾಗಿ ಸಾಗುತ್ತದೆ. ಸುಭಗ ಶೈಲಿ ಎಂಬುದು ಆನಂತರವಷ್ಟೇ ಪೂರ್ವಭಾವಿ ಸಿದ್ದತೆಯಲ್ಲಿ ಆಗಿರಬಹುದಾದ ಏನೆಲ್ಲ ಅಧ್ಯಯನದಿಂದ ತಂತಾನೆ ಕೂಡಿಬರಲು ಸಾಧ್ಯವಾಗುತ್ತದೆ….
ನನ್ನ ಕಥೆಗಳಿಗೆ…. ಆವರ್ತಕಾಲ…>>>
ಹಿರಿಯ ಮನಸ್ಕರು ಮತ್ತು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳು…
ಕನ್ನಡ ಸಾಹಿತ್ಯದ ನವೋದಯದ ಕಾಲದ ಸಂದರ್ಭದಲ್ಲಿ ಇಂಗ್ಲೀಷ್ ಪ್ರಭಾವವೇ ಬಹಳವಿತ್ತು. ಆಗ ಕನ್ನಡಿಗರು ಕನ್ನಡವನ್ನು ಅನನ್ಯವಾಗಿ ಪ್ರೀತಿಸುವಂತೆ ಓದುಗರನ್ನು ಅಪಾರ ಸಂಖ್ಯೆಯಲ್ಲಿ ಬೆಳೆಸಿ ಮನೆಮನೆಗಳಲ್ಲೂ ಮಾತಾದವರಲ್ಲಿ ಮೊದಲಿಗರು ಅ.ನ. ಕೃಷ್ಣರಾಯರು. ಅವರು ಕಾದಂಬರಿಕಾರರಾಗಿ ಅಂದು ಮಾಡಿದ ಪವಾಡ, ಪಡೆದ ಅಪಾರ ಜನಪ್ರಿಯತೆಯನ್ನು ಕಂಡು ಹೊಗಳಿದ ವಿದ್ವಜ್ಜನರೂ ಇದ್ದರು. ಅವರದು ಜನಪ್ರಿಯ ಸಾಹಿತ್ಯ ಅಗ್ಗದ ಪ್ರಚಾರದ ಸಾಹಿತ್ಯವೆಂದು ಅವರನ್ನೂ ಅವರ ಐಡಿಯಾಲಜಿ(ಇಂದಿನ ವ್ಯಾಖ್ಯೆ)ಯನ್ನೂ ಜರೆದ ಹಿರಿಯ ಸಾಹಿತಿಗಳೂ ವಿಮರ್ಶಕರೂ ಇದ್ದರು. ಆದರೇನು! ಅ.ನ.ಕೃ. ಅವರು ಕನ್ನಡ ನವೋದಯ ಕಾಲದ ಯುಗಪ್ರವರ್ತಕರಲ್ಲಿ ಅಗ್ರಣ್ಯರಾಗಿಯೇ ಉಳಿದರು. ಅಂದೂ ಅವರ ಯಶಸ್ಸನ್ನು ಕಂಡು ಕುದಿಯುವವರು ಕಾಲೆಳೆಯುವ ವಿದ್ವಜ್ಜನರ ಗುಂಪೇ ಇತ್ತು. ಯಾರು ಏನೇ ಗೊಣಗಿದರೂ ಅ.ನ.ಕೃ ಅವರ ಜನಪ್ರಿಯತೆ ಹೆಚ್ಚಿತ್ತಲೇ ಹೋಯಿತು. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅಂದಿನ ಇಂಗ್ಲೀಷ್ ಪ್ರಭಾವೇ ಮೆರೆಯುತ್ತಿದ್ದ ಕಾಲದಲ್ಲಿ ಅವರು ಕನ್ನಡ ಓದುಗರನ್ನು ಅತ್ಯಧಿಕ ಸಂಖ್ಯೆಯಲ್ಲಿ ಬೆಳೆಸಿ ಕನ್ನಡ ಚಳುವಳಿಗಳಲ್ಲೂ ಸಕ್ರಿಯರಾಗಿದ್ದುದು ದಾಖಲೆಯಾಗಿದೆ; ಚಿರಸ್ಮರಣೀಯವೇ ಆಗಿದೆ.
ಇದೀಗ ದೃಶ್ಯಮಾಧ್ಯಮದ ಚಾನೆಲ್ ಗಳು ಹಾಗೂ ಸಿನಿಮಾಗಳೂ ಓದುಗರನ್ನು ಕಿತ್ತುಕೊಳ್ಳುತ್ತಲೇ ಇವೆ. ಹೊಸ ಓದುಗರನ್ನು ಸೃಷ್ಟಿಸುವುದರಲ್ಲಿ ವಿದ್ವಜ್ಜನರ ಸಾಹಿತ್ಯ ಅದೆಷ್ಟು ಯಶಸ್ವಿಯಾಗಿದೆ ಎಂಬುದು ಬೃಹತ್ ಪ್ರಶ್ನೆಯಾಗಿ ಕಾಡಿದೆ. ಇಂತಹ ಕಾಲಘಟ್ಟದಲ್ಲಿ ಸಾಹಿತ್ಯೇತರ ಕೃತಿಗಳಿಗೆ ಬೇಡಿಕೆ ಹೆಚ್ಚಿದೆ.
ಆದರೂ ಆಶಾದಾಯಕವೆಂದರೆ, ಮಧ್ಯಮ ವರ್ಗದ ಜನರೂ ಮತ್ತು ಐಟಿ/ಬಿಟಿ ವರ್ಗದವರೂ ವಯೋವೃದ್ದರೂ ತಮ್ಮ ಸಾಹಿತ್ಯಾಸಕ್ತಿ ಉಳಿಸಿಕೊಂಡು, ಕೊಂಡು ಕಥೆ ಕಾದಂಬರಿಗಳನ್ನುಓದುತ್ತಿರುವುದು ಸಮಾಧಾನಕರವೇ. ಅಷ್ಟಕ್ಕೂ ಕಥೆ ಕಾದಂಬರಿ ಸಾಹಿತ್ಯಕ್ಕೆ ಬೇಡಿಕೆ ಇಲ್ಲವೆಂಬಂತಾಗಿರುವ ಈ ಸಂದರ್ಭದಲ್ಲಿ ಎಸ್.ಎಲ್. ಭೈರಪ್ಪನವರು ತಮ್ಮ ಸಾಮಾಜಿಕ ಬದ್ಧತೆಯ ಕೃತಿಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಸಾಮಾನ್ಯ ಜನತೆಯನ್ನು ಮಾತ್ರವಲ್ಲ, ನೌಕರರು, ಉನ್ನತ ಅಧಿಕಾರದಲ್ಲಿರುವವರೂ, ರಂಗ ಭೂಮಿ ಸಿನಿಮಾ ಕಲಾವಿದರೂ, ಮತ್ತು ಔದ್ಯೋಗಿಕವಾಗಿ ಐಟಿ,ಬಿಟಿ ಮತ್ತು ಇತರೆ ಕಂಪೆನಿಗಳ ಕಾರ್ಮಿಕ ವರ್ಗದವರೂ ಅವರ ಕೃತಿಗಳನ್ನುಮೆಚ್ಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಕೃತಿಗಳು ಇತರ ಭಾಷೆಗಳಿಗೂ ತರ್ಜಮೆಗೊಂಡಿವೆಯೆಂದರೆ ಅವುಗಳ ಗುಣಮಟ್ಟ ಮತ್ತು ಉಪಯುಕ್ತತೆ ಹೆಚ್ಚಿದೆಯೆಂದೇ. ಹಾಗೇ ಅವರು ಸಾಮಾಜಿಕವಾಗಿ ಬದಲಾವಣೆಯನ್ನು ಸುಧಾರಣೆಯನ್ನೂ ಬಯಸುವ ಅವರ ಕೃತಿಗಳಿಂದ ಕನ್ನಡಿಗರ ಹೆಮ್ಮೆಯ ಸಾಹಿತಿಯಾಗಿದ್ದಾರೆ.
ಭೈರಪ್ಪನವರಿಗೆ ಇತ್ತೀಚೆಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಲಭಿಸಿರುವುದು ಅವರ ಅಭಿಮಾನಿಗಳಿಗೆ ಮಾತ್ರವಲ್ಲ ನಿಜಕ್ಕೂ ಕನ್ನಡಪರ ಕಾಳಜಿಇರುವವರಿಗೆ ಹಾಗೂ ಸಮಾಜಿಕ ಪರಿವರ್ತನೆ ಬಯಸುವ ಬುದ್ಧಿಜೀವಿಗಳಿಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆ ಪಡುವಂತಾಗಿದೆಯಲ್ಲವೇ…? ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ ಎನ್ನುವವರಿದ್ದಾರೆ. ಉತ್ತಮ ಸಾಹಿತ್ಯ ಕೃತಿಗಳು ಕಾಲ ಕಾಲಕ್ಕೆ ಜನಮಾನಸದಲ್ಲಿ ಪ್ರಭಾವ ಬೀರಿರುವುದೂ ಜನಜೀವನಕ್ಕೆ ಹೊಸ ಬೆಳಕನ್ನು ಚೆಲ್ಲುವುದು ನಗ್ನ ಸತ್ಯ. ಸಾಹಿತ್ಯವೆಂದರೆ ಸಹೃದಯರನ್ನು ತಲುಪುವುದಷ್ಟೇ ಮುಖ್ಯ ಅಲ್ಲವೇ? ಅದಿಲ್ಲದವರು ಸಣ್ಣಮನಸ್ಸಿನವರಾಗಿಬಿಡುತ್ತಾರೆ. ಅ.ನ.ಕೃ ಅವರ ಜನಪ್ರಿಯತೆ ಕಂಡು ಕರುಬುವ ಅವರದು ಜನಪ್ರಿಯ ಸಾಹಿತ್ಯವೆಂದು ಜರೆಯುವವರಿದ್ದಂತೆ ಈ ಕಾಲಘಟ್ಟದಲ್ಲೂ ಅಂಥವರು ಇರುವುದರಲ್ಲಿ ಯಾವ ಸೋಜಿಗವೇನಿಲ್ಲ.
ಈಗಿತ್ತಲಾಗಿ ಹಿರಿಯ ಸಾಹಿತಿಗಳ ಬೇರೆ ಬೇರೆ “ಐಡಿಯಾಲಜಿಗಳು” ಏನೇ ಇರಲಿ, ಅದರಿಂದ ಸಾಮಾನ್ಯ ಓದುಗರಿಗೆ ಏನು ಪ್ರಯೋಜನ? ಈಗಾಗಲೇ ದೃಶ್ಯಮಾಧ್ಯಮದಿಂದ ಒಂದಿಷ್ಟು ಸೋರಗಿರುವ ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಕೊಡುಗೆ ಶ್ಲಾಘನಿಯ…. ನಾವು ಮಾಡಲಾಗದ ಕೆಲಸವನ್ನು ಕನ್ನಡಕ್ಕೆ ಭೈರಪ್ಪನವರು ಮಾಡಿದ್ದಾರೆ ಎಂದು ಹೆಮ್ಮೆಪಡುವ ಬದಲು ಜ್ಞಾನಪೀಠ ಪ್ರಶಸ್ತಿ ಹೊತ್ತುಕೊಂಡಿರುವ ಯು.ಆರ್.ಅನಂತಮೂರ್ತಿಯವರು, ” ತಮ್ಮದೇ ಐಡಿಯಾಲಜಿ” ಹೊಂದಿದ್ದು ದುರಹಂಕಾರ, ಪೂರ್ವಾಗ್ರಹದಿಂದ ಬೈರಪ್ಪನವರನ್ನು ರಾಹುಗ್ರಸ್ತರೆನ್ನುವುದು, ಇತರ ಸಾಹಿತಿಗಳನ್ನು ಕೇತುಗ್ರಸ್ತರೆನ್ನುವುದು ಅವರಿಗೆ ಮಾತ್ರವಲ್ಲ ಕನ್ನಡಕ್ಕೂ ಶೋಭೆ ತರುವುದಿಲ್ಲ.
ಹಿರಿಯ ಸಾಹಿತಿ ಬರಗೂರರು ಅನಂತಮೂರ್ತಿ ಸುರಕ್ಷಾ ವಲಯದಲ್ಲಿದ್ದಾರೆ, ಅವರದೇ ಪಟಲಾಮ್ ಇದೆ … ಎಂದಿದ್ದಾರೆ. ಅವರು ಎಡ ಪಂಥಿಯರಲ್ಲ, ಬಲಪಂಥೀಯರೂ ಅಲ್ಲ ನಡುಪಂಥೀಯರು ಎಂಬ ಚಂಪಾ ಅವರ ಮೂದಲಿಕೆ…. ಇವೆಲ್ಲ ನಮ್ಮಜನಸಾಮಾನ್ಯರೂ ಕನ್ನಡಾಭಿಮಾನಿಗಳ ಮೇಲೆ ಯಾವ ದುಷ್ಪಪರಿಣಾಮ ಬೀರುವುವು ಎಂಬುದನ್ನೇನೂ ಈ ಹಿರಿಯರು ಚಿಂತಿಸಿದಂತಿಲ್ಲ.
ಯಾರೇನೆ ಹೇಳಲಿ ಓದುಗರ ಸಂಖ್ಯೆ ಬೆಳೆಯತ್ತಿರಬೇಕು, ಸಾಹಿತ್ಯಕೃತಿಗಳು, ಕಾದಂಬರಿಗಳು ಜನಸಾಮಾನ್ಯರನ್ನು ತಲುಪುವುದಷ್ಟೇ ಮುಖ್ಯವಲ್ಲವೇ? ಯಾವುದೇ ಸಾಹಿತ್ಯಕೃತಿಗಳು ಹಿರಿಯ ಸಾಹಿತಿಗಳನ್ನು ವಿದ್ವಜ್ಜನರನ್ನು ತೃಪ್ತಿಪಡಿಸಲಿಕ್ಕಾಗಿಯೆ ಹುಟ್ಟಿಕೊಳ್ಳುತ್ತವೆಯೇ …? ಸಾಹಿತ್ಯ ಕೃತಿಗಳು ಸಾಹಿತಿ ವಿಮರ್ಶಕರ ಗುಂಪಿನ ವಲಯಕ್ಕಾಗಿಯೇ ಆ ಮಟ್ಟದ ಐಡಿಯಾಲಜಿಯಲ್ಲಿ ತಯಾರಾಗುವ ಪ್ರಾಡಕ್ಟುಗಳೇನು..? ವಿದ್ವಜ್ಜನರನ್ನು ಮೆಚ್ಚಿಸುವ ಸಾಹಿತ್ಯ ಪ್ರಕಾರವೇ ಬೇರೆ ಇದ್ದೀತು;ಇರಲಿ. ಹಾಗೆ ನೋಡಿದರೆ,ಯಾವುದೇ ಸಾಹಿತಿಯೊಬ್ಬರ ಕೃತಿಗಳೆಲ್ಲವೂ ವಿದ್ವತ್ ಪೂರ್ಣ ಕೃತಿಗಳೇ (ಮಾಸ್ಟರ್ ಪೀಸ್) ಆಗಿರುತ್ತವೇನು? ಎಂಬೆಲ್ಲ ಪ್ರಶ್ನೆಗಳುಕಾಡುತ್ತವೆಯಲ್ಲ! ಹಾಗೆ ನೋಡಿದರೆ, ಬೈರಪ್ಪನವರು ಜನಸಾಮಾನ್ಯರ ಸಾಹಿತಿಯಾಗಿದ್ದಾರೆ. ಸಮಾಜದ ಮೇಲೆ ಬೆಳಕು ಚೆಲ್ಲುವ ಕೃತಿಗಳು, ಸಾಮಾನ್ಯ ಜನತೆಯನ್ನು ಮನವನ್ನು ಮುಟ್ಟಿ ತಟ್ಟಿ ಎಚ್ಚರಿಸುವ ಕೃತಿಗಳನ್ನು ಭೈರಪ್ಪನವರು ಬರೆದಿದ್ದಾರೆಂಬುದಕ್ಕೆ ಅವರ ಅಪಾರ ಜನಪ್ರಿಯತೆಯೇ ಸಾಕ್ಷಿ.
ಹಿರಿಯ ಮನಸ್ಕರು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳನ್ನು ಮುಕ್ತ ಮನಸ್ಸಿನಿಂದ ಮೆಚ್ಚಿ ಬೆಂಬಲಿಸಬೇಕಲ್ಲವೇ…..? ಹಾಗಲ್ಲದೇ, ತಮ್ಮ ಮೂಗಿನ ನೇರಕ್ಕೇ ತಕ್ಕ ಐಡಿಯಾಲಜಿ ಹುಡುಕುವಂತ ಹುನ್ನಾರವೇಕೇ? ವ್ಯರ್ಥ ಪ್ರಲಾಪವೇಕೆ..? ಅದರಿಂದ ನಮ್ಮ ಕನ್ನಡ ನಾಡು ನುಡಿಗೆ ಜನಪರ ಕಾಳಜಿಗೆ ಮತ್ತು ಎಲ್ಲರನ್ನೂ ತಲುಪಬಲ್ಲ ಸರಳ ಸುಲಭ ಶೈಲಿಯ ಸಾಮಾಜಿಕ ಬದ್ಧತೆಯುಳ್ಳ ಸಾಹಿತ್ಯಲೋಕಕ್ಕೆ ಯಾವ ಪ್ರಯೋಜನವಿದೆ?
ಒಟ್ಟಿನಲ್ಲಿ ಸಾಹಿತ್ಯ ಕೃತಿಯೊಂದು ಕರ ಪತ್ರವೋ, ಕೇವಲ ವಾಚ್ಯವೋ ಅತ್ಯುತ್ತಮ ಕೃತಿಯೋ ಎಂಬುದನ್ನು ಓದುಗರು ಮೊದಲು ನಿರ್ಧರಿಸುತ್ತಾರಲ್ಲವೇ….. ಭೈರಪ್ಪನವರಂಥವರು ಮಹಾಜನತೆಯ ಕಾಳಜಿಪರವಾಗಿರುವ ಲೇಖಕರು ಯಾವೊಂದು ಪದವಿ ಪುರಸ್ಕಾರ ಬಯಸಿ ಬರೆಯುವವರೇ…? ಅಂಥ ಪದವಿ ಪುರಸ್ಕಾರ ಅವರನ್ನೇ ಹುಡುಕಿಕೊಂಡು ಬರುತ್ತವೆ. ಅದಕ್ಕಾಗಿ ಅವರು ಯಾವ ಬಗೆ ತಾಲೀಮು ಮಾಡುವ ಅಗತ್ಯವಿರುವುದಿಲ್ಲ. ಅಂತೆಯೆ ಅವರಿಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಹುಡುಕಿಕೊಂಡು ಬಂದಿದೆಯಲ್ಲವೇ..?
ಅಲ್ಲಾ, ಈ ನಮ್ಮ ಕಸ್ತೂರಿ ಕನ್ನಡದ ಹಿರಿಯ ಸಾಹಿತಿಗಳು
ಹೀಗೇಕೆ ಕೆಸರೆರಚುತ್ತಾ ಕಚ್ಚಾಡುತ್ತಿದ್ದಾರೆ..?
ಯು.ಆರ್. ಅನಂತ ಮೂರ್ತಿಯವರು ತಮ್ಮ
ಇತ್ತೀಚಿನ “ಸೃಜನಶೀಲತೆಯ ಅಗ್ನಿ ದಿವ್ಯ” ಲೇಖನದಲ್ಲಿ
(ಪ್ರ.ವಾ-26-06-11)ಎಸ್.ಎಲ್.ಭೈರಪ್ಪ ಸಮರ್ಥರಾದ ಲೇಖಕರಾಗಿವುದರಿಂದ ಅವರನ್ನು ಐಡಿಯಾಲಜಿ ಎಂಬ
ರಾಹುವಿನಿಂದ ಬಿಡುಗಡೆ ಮಾಡಿದ ತಕ್ಷಣ ಕೃತಿಯ ಒಳಗಿರುವ ಕಲೆ ಗೋಚರಿಸತೊಡಗುತ್ತದೆ. ನಮ್ಮ ಕೆಲವು
ಎಡ ಪಂಥೀಯ ಲೇಖಕರೂ ಕೂಡಾ ಅವರ ಅಬ್ಬ್ರದ ಮಾತಿನ ರತಿಯಲ್ಲಿ ಕೇತು ಗ್ರಸ್ತರಾಗಿರುತ್ತಾರೆ.
ಒಟ್ಟಿನಲ್ಲಿ ಎಲ್ಲವೂ ಬೆಳಕನ್ನು ಮಾಯಮಾಡುವ ಗ್ರಹಣಗಳೇ.. ಎಂದಿದ್ದಾರೆ?!!
ಇನ್ನು ಬರಗೂರು ರಾಮಚಂದ್ರಪ್ಪನವರೋ
ಅನಂತ ಮೂರ್ತಿಯವರ ಹೇಳಿಕೆ ರಾಹುಗ್ರಸ್ತ ಮತ್ತು ಕೇತುಗ್ರಸ್ತ ಇವುಗಳ ಬಗ್ಗೆ ಪ್ರಶ್ನಿಸಿ
ಖಂಡಿಸಿರುವುದು ಸರಿಯೇ ಆದರೂ ಅವರೂ ಭೈರಪ್ಪನವರ ಐಡಿಯಾಲಜಿ
ನನಗೂ ಇಷ್ಟವಾಗುವುದಿಲ್ಲ…..ಎನ್ನುವುದೇಕೆ..?!!.
ಈ ಹಿರಿಯ ಸಾಹಿತಿಗಳ ಐಡಿಯಾಲಜಿ ಏನೇ ಇರಲಿ, ಭೈರಪ್ಪನವರ
ಕೃತಿಗಳು ಅಪಾರ ಓದುಗರನ್ನು ದೇಶವಿದೇಶಗಳಲ್ಲಿ ಗಳಿಸಿದ್ದು ಮನೆಮನೆ ಮಾತಾಗಿವೆಯಲ್ಲ….
ಸಾಹಿತ್ಯ ಕೃತಿಗಳಲ್ಲಿ ಕಾದಂಬರಿಗಳು ಜನಸಾಮಾನ್ಯರನ್ನು ತಲುಪುವುದಷ್ಟೇ ಮುಖ್ಯವಲ್ಲದೇ ಇಂತಹ
ಹಿರಿಯ ಸಾಹಿತಿಗಳನ್ನು ತೃಪ್ತಿಪಡಿಸಲಿಕ್ಕಾಗಿಯೆ ಹುಟ್ಟಿಕೊಳ್ಳುತ್ತವೆಯೇನು? ಸಾಹಿತಿ ವಿಮರ್ಶಕರ ಗುಂಪಿನ ವಲಯದಲ್ಲಿ ಆ ಮಟ್ಟದ
ಐಡಿಯಾಲಜಿಯಲ್ಲಿ ತಯಾರಾಗುವ ಪ್ರಾಡಕ್ಟುಗಳೇನು..?
ಒಟ್ಟಿನಲ್ಲಿ ಸಮಾಜದ ಮೇಲೆ ಬೆಳಕು ಚೆಲ್ಲುವ ಕೃತಿಗಳು,
ಸಾಮಾನ್ಯ ಜನತೆಯನ್ನು ಮನವನ್ನು ಮುಟ್ಟಿ ತಟ್ಟಿ ಎಚ್ಚರಿಸುವ ಕೃತಿಗಳನ್ನು ಭೈರಪ್ಪನವರು
ಬರೆದಿದ್ದಾರೆಂಬುದಕ್ಕೆ ಅವರ ಅಪಾರ ಜನಪ್ರಿಯತೆಯೇ ಸಾಕ್ಷಿ.
ಒಟ್ಟಿನಲ್ಲಿ ಸಾಹಿತ್ಯ ಕೃತಿಯೊಂದು ಕರ ಪತ್ರವೋ, ಮಹಾನ್ ಕಲಾ ಕೃತಿಯೋ
ಎಂಬುದನ್ನು ಓದುಗರು ಮೊದಲು ನಿರ್ಧರಿಸುತ್ತಾರಲ್ಲವೇ…..ಪಂಡಿತರು ವಿಮರ್ಶಕರ “ಐಡಿಯಾಲಜಿ” ಬೇಕಿಲ್ಲ ಓದುಗ ರಿಗೆ.
ಸಾಮಾನ್ಯ ಜನತೆಗೆ ತಲುಪುವ ಸಾಹಿತ್ಯ
ಕೃತಿಗಳನ್ನು ಬರೆದಿರುವ ಭೈರಪ್ಪನವರಿಗೆ ಆ ಬಗ್ಗೆ ಚಿಂತೆ ಇರುವಂತಿಲ್ಲವೆಂದು ಕಾಣುತ್ತದೆ. ಕನ್ನಡದ
ಕಂಪನ್ನುಸೂಸುವ ಜನತೆಗೆ ಬೆಳಕನ್ನು ಚೆಲ್ಲುವ ಕೆಲಸವನ್ನಷ್ಟೇ ಅವರು ಮಾಡಿದ್ದಾರೆ ಮಾಡುತ್ತಿದ್ದಾರೆ ಎಂದೇ
ತಿಳಿದಿದ್ದಾರೆ ಕೋಟ್ಟಾನು ಕೋಟಿ ಕನ್ನಡಿಗರು.
ಚಿತ್ರ ಸಾಹಿತಿ ನಿರ್ದೇಶಕ ನಿರ್ಮಾಪಕ ಸಿ.ವಿ.ಶಿವಶಂಕರ್ ಅವರ ಅಮರ ಗೀತೆಯ ಕಥೆ..
“ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ
ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ…..”
ಈ ಹಾಡು ಕೇಳದ ಕನ್ನಡಿಗರೇ ಇಲ್ಲ; ಸ್ಪಂದಿಸದ ಸಹೃದಯರೇ ಇರಲಿಕ್ಕಿಲ್ಲ. ಈ ಹಾಡು ಹುಟ್ಟಿದ ಸಮಯದ ಬಗ್ಗೆ ಬರೆಯುವ ಎ.ಆರ‍್. ಮಣಿಕಾಂತ್
ಈ ಹಾಡನ್ನು ಬರೆದ ಚಿತ್ರ ಸಾಹಿತಿ ನಿರ್ದೇಶಕ ಸಿ.ವಿ.ಶಿವಶಂಕರ್ ಅವರ ಅನುಭವವನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ.(ವಿ.ಕ. ೨೦ ಜನವರಿ ೨೦೧೧).
ಕೂಡಲ ಸಂಗಮ-ಕೃಷ್ಣಾ ಮತ್ತು ಮಲಪ್ರಭಾ ನದಿ ಸಂಗಮಿಸುವ ಕ್ಡೇತ್ರ. ಬಸವಣ್ಣನವರು ಈ ಎರಡು ನದಿಗಳು ಸಂಗಮಿಸುವಲ್ಲಿಯೇ ನೀರಿನಲ್ಲಿ ಸಶರೀರ ಇಹತ್ಯಾಗ ಮಾಡಿದರೆಂದು ಪುರಾಣೇತಿಹಾಸ ಹೇಳುತ್ತದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿರುವ ಈ ಕೂಡಲಸಂಗಮ ಕ್ಷೇತ್ರವನ್ನು ವಿಶಿಷ್ಟ ರೀತಿಯ ಆಧುನಿಕ ವಾಸ್ತು ಶಿಲ್ಪ ದಲ್ಲಿ ಸಂರಕ್ಸಿಸಲಾಗಿದೆ. ಜೀವಿತದಲ್ಲಿ ಒಮ್ಮೆ ಸಂದರ್ಶಿಸಬೇಕಾದ ಸ್ಥಳವಿದು. ಇತ್ತೀಚೆಗೆ ಆ ಸದವಕಾಶ ನನ್ನ ಪ್ರವಾಸದಲ್ಲಿ ಲಭಿಸಿತ್ತು….
೭೦ರ ದಶಕದಲ್ಲಿ ಶಿವಶಂಕರ್ ಅವರು “ಕೂಡಲ ಸಂಗಮ” ಎಂಬ ಸಿನಿಮಾ ನಿರ್ಮಾಣ ನಿರ್ದೇಶನದ ಕನಸು ಕಂಡಿದ್ದರಂತೆ. ಕೂಡಲ ಸಂಗಮ ಕ್ಷೇತ್ರದ ಸುತ್ತಮುತ್ತ ಷೂಟಿಂಗ್ ಮಾಡುವ ಉದ್ದೇಶದಿಂದ ಆ ಲೋಕಷನ್ ನೋಡಿಕೊಂಡು ಬರಲು ಕಾರಿನಲ್ಲಿ ತಮ್ಮ ತಂಡದೊಂದಿಗೆ ಹೋಗುತ್ತಾರೆ. ದಾರಿಯಲ್ಲಿ ಕಾರಿನ ಟೈಯರ‍್ ಪಂಕ್ಚರ‍್ ಆಗುತ್ತದೆ. ಸ್ಟೆಪ್ನಿ ಇರಲಿಲ್ಲವಾಗಿ ಅಲ್ಲೇ ಸೈಕಲ್ ಷಾಪ್ ಒಂದರಲ್ಲಿ ಪಂಕ್ಷರ‍್ ಹಾಕಿಸಕೊಂಡು ಮುಂದೆ ಪ್ರಯಾಣ ಬೆಳೆಸಿದರೆ, ಕೂಡಲ ಸಂಗಮ ಕ್ಷೇತ್ತ ಇನ್ನೇನು ಇನ್ನರ್ಧ ಕಿ.ಮೀ ದೂರವಿದೆ ಎನ್ನುವಾಗ ಮತ್ತೆ ಎರಡನೇ ಬಾರಿ ಕಾರಿನ ಟೈಯರ‍್ ಪಂಕ್ಷರ‍್ ಆಗಬೇಕೇ… ಅಂತೂ ನಿರಾಶರಾಗದೇ ಅಲ್ಲಿಂದ ನಡೆದೇ ಕೂಡಲ ಸಂಗಮ ತಲುಪಿ ದೇವರ ಎದುರು ಕುಳಿತು ಭಾವುಕರಾಗುತ್ತಾರೆ; ಶಿವಶಂಕರ‍್. ಆ ಕ್ಷಣಗಳಲ್ಲಿ ಅವರು ಕನ್ನಡ ನಾಡಿನ ಇತಿಹಾಸ ವೈಭವವನ್ನೆಲ್ಲ ನೆನಪಿಸಿಕೊಂಡು, ಮರುಜನ್ಮವೊಂದಿದ್ದದರೆ ಈ ಪುಣ್ಯಭೂಮಿಯಲ್ಲೇ ಹುಟ್ಟಬೇಕೆಂದು ಕೊಂಡಾಗ ಇದ್ದಕ್ಕಿದ್ದಂತೆ ಅವರೊಳಗೇ ಸ್ಫೂರ್ತಿಯಿಂದ ಈ ಹಾಡಿನ ಸಾಲುಗಳು ಹುಟ್ಟಿಬಿಟ್ಟವು ಎನ್ನುತ್ತಾರೆ.
“ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ/ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ..
ಎಂಬ ಪಲ್ಲವಿಯೊಂದಿಗೆ ಒಂದು ಚರಣವನ್ನೂ ಆಗಲೇ ಬರೆದು ಅರ್ಚಕರಿಗೆ ಆ ಚೀಟಿ ಕೊಟ್ಟು ದೇವರ ಲಿಂಗದ ಮೇಲಿಟ್ಟು ಅರ್ಚನೆ ಮಾಡಿಸಿ ಪಡೆದುಕೊಂಡರಂತೆ..
ಸಿನಿಮಾ “ಸಂಗಮ” ಎಂಬ ಹೆಸರಿನಲ್ಲಿ ಮಾಡಬೇಕೆಂದು ನಿರ್ಧರಿಸಿದರಂತೆ. ಮುಂದೆ ಹಾಡೇನೋ ಕನ್ನಡ ನಾಡಿನಾದ್ಯಂತ ಅತ್ಯಂತ ಜನಪ್ರಿಯವಾಯಿತು. ಕನ್ನಡಿಗರಿಗೆ ಕರ್ಣಾನಂದಕರವಾಗಿ ಮೆಚ್ಚುಗೆ ಗಳಿಸಿತು. ಗ್ರಾಮಫೋನ್ ಕಂಪೆನಿಯವರು ಅದನ್ನು ಧ್ವನಿ ಮುದ್ರಿಸಿ ಹಣ ಮಾಡಿಕೊಂಡರು. ಗುಲ್ಬಾರ್ಗದ ಆರ್ಕೆಸ್ಟ್ರಾ ಗಾಯಕರೊಬ್ಬರು ರೇಡಿಯೋ, ಮತ್ತು ಸಾಂಸ್ಕೃತಿಕ ಸಮಾರಂಭಗಳಲ್ಲಿ ಈ ಹಾಡನ್ನು ಹಾಡಿ ಅದರಿಂದಲೇ ಹಣ ಮಾಡಿ ಮನೆಕಟ್ಟಿಕೊಂಡರು. ಮನೆಗೆ “ಸಿರಿವಂತ” ಎಂದೇ ಹೆಸರಿಟ್ಟರು.
ಆ ಗಾಯಕ ಮುಂದೊಮ್ಮೆ ಕವಿ ಸಿ.ವಿ.ಶಂಕರ‍್ ಅವರನ್ನು ಭೇಟಿ ಮಾಡಿ ಕೃತಜ್ಞತೆಯನ್ನೂ ಸಲ್ಲಿಸದರು.
ಆಗ ಶಿವಶಂಕರ‍್ ಎಂದರಂತೆ- ನನ್ನ ಹಾಡಿನ ಮೊದಲ ಸಾಲಿನಂತೆ ನೀವು ಸಿರಿವಂತರಾದಿರಿ. ಎರಡನೇ ಸಾಲಿನಂತೆ ನಾನು ಬಡವನಾದೆ ಎಂದು ವಿಷಾದದ ನಗೆ ನಕ್ಕರಂತೆ.
ಹೀಗೆ ನನ್ನ ಹಾಡು ಅಮರವಾಯಿತೇ ಹೊರತು ನನ್ನ ಸಿನಿಮಾ ಕನಸು ನನಸಾಗಲಿಲ್ಲ. ಹಾಡು ಹಾಡಿದವರು ಸಿರಿವಂತರಾದರಷ್ಟೇ…
ನನ್ನ ಹಾಡಿಗೆ ಯಾರೊಬ್ಬರಿಂದಲೂ ಸಂಭಾವನೆ ಬರಲಿಲ್ಲ. ನನ್ನ ಈ ಹಾಡಿನ ಸಿನಿಮಾ ಕೆಲಸ ಆರಂಭಗೊಳ್ಳಲೆ ಇಲ್ಲ!
ಹಾಡನ್ನು ಹೇಗಾದರೂ ಮಾಡಿ ಚಿತ್ರಿಸಿ ಕನ್ನಡಿಗರಿಗೆ ತೋರಿಸಲೇಬೇಕೆಂಬ ಛಲದಿಂದ ಮತ್ತೆ ಎರಡನೇ ಬಾರಿ “ಕನ್ನಡ ಕುವರ” ಎಂಬ ಸಿನಿಮಾ ಮಾಡಿದರೂ ಅದು ಡಬ್ಬದಲೇ ಕೂತಿದೆ. ಅದಕ್ಕೆ ಕರ್ನಾಟಕ ಸರ್ಕಾರದ ಅನುಗ್ರಹವಾಗಬೇಕೆನ್ನುತ್ತಾರೆ. ನಮ್ಮ ನಾಡಿನ ಜನತೆ ಈ ಮಹಾನ್ ಚಿತ್ರ ಸಾಹಿತಿ ಮತ್ತು ನಿರ್ಮಾಪಕ ಸಿ.ವಿ.ಶಿವಶಂಕರ‍್ ಅವರಿಗೆ ನೆರವು ನೀಡಬೇಕೆಂದೂ ಕರೆನೀಡಿದ್ದಾರೆ. (ಶಿವಶಂಕರ‍್ ಅವರ ಮೊಬೈಲ್ ನಂ. ೯೯೦೧೮ ೦೪೦೦೬)
ಇದನ್ನು ಓದಿದ ಕನ್ನಡಿಗರಾದ ನಮಗೆ ತೀವ್ರ ಸಂಕಟವಾಗುತ್ತದೆ. ಅಲ್ಲಾ ದೊಡ್ಡವರ ಬದುಕಿನಲ್ಲಿ ವಿಧಿ ಹೇಗೆ ಆಟವಾಡುತ್ತದೆ ಅದರ ವಿಪಯಾರ್ಸ ನೋಡಿ! ಕೂಡಲ ಸಂಗಮ ಸಿನಿಮಾ ಮಾಡಬೇಕೆಂದು ಸಂಗಮ ಕ್ಷೇತ್ರಕ್ಕೆ ಹೊರಟ ದಾರಿಯಲ್ಲಿ ಅವರ ಅಂಬಾಸಿಡರ‍್ ಕಾರು ಎರಡು ಬಾರಿ ಪಂಕ್ಚರ‍್ ಆಗುತ್ತದೆ.
ಅವರು ಎರಡು ಬಾರಿ ತಮ್ಮ ಈ ಅಮರ ಗೀತೆಯನ್ನು ಚಿತ್ರಿಸಿ ಸಿನಿಮಾ ಮಾಡಬೇಕೆಂದು ಪ್ರಯತ್ನ ಪಡುತ್ತಾರೆ. ಹಾಗೇ ಅವರ ಎರಡೂ ಪ್ರಯತ್ನಗಳೂ ಪಂಕ್ಚರ‍್ ಆಗಿಹೋಗಬೇಕೇ..
ಏನೇ ಆಗಲಿ, ಅಂದು ಸಂಗಮ ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ ಅಪಶಕುನವಾಯಿತೆಂದು ಶಿವಶಂಕರ‍್ ಅವರು ಹಿಂಜರಿದಿದ್ದರೆ, ಅಥವಾ ನಿರುತ್ಸಾಹದಿಂದ ಕುಗ್ಗಿ ಹೋಗಿದ್ದರೆ ಅವರ ತಲೆಯಲ್ಲಿ ಈ ಹಾಡು ಮೂಡದೇ ಹೋಗಿದ್ದರೆ, ಅಂಥ ಅದ್ಭುತ ಹಾಡು ಕನ್ನಡಿಗರಿಗೆ ದೊರಕುತ್ತಿತ್ತೇ..? ಶಿವಶಂಕರ‍್ ಅವರಂಥ ಮಹಾನ್ ಕಲಾವಿದರು ತಮ್ಮ ಕಲೆಗಾಗಿ ತಮ್ಮನ್ನೇ ಅರ್ಪಿಸಿಕೊಂಡು ದುಡಿಯುತ್ತಾರೆ, ಅವರ ಆತ್ಮ ಸ್ಥೈರ್ಯ ಮತ್ತು ಆದರ್ಶಗಳು ಎಂದಿಗೂ ನಮ್ಮ ಯುವಪೀಳಿಗೆಯನ್ನು ಯಾವತ್ತೂ ಚೈತನ್ಯ ಶಾಲಿಗಳಾಗಿರುವಂತೆ ಮಾಡುತ್ತವೆಯಲ್ಲವೇ…?
ಅಂದಹಾಗೆ ಸಿ.ವಿ.ಶಿವಶಂಕರ‍್ ಅವರದು ಇಂದಿಗೂ ಸುಮ್ಮನೆ ಕುಳಿತುಕೊಳ್ಳವ ಜೀವ ಅಲ್ಲ. ಅವರ ಎರಡು ಸಿನಿಮಾಗಳು-
“ಶ್ರೀ ಶನೇಶ್ವರ ಕಲ್ಯಾಣ” ಇನ್ನೊಂದು “ಗಗನ ಸಖಿ” ಇದೀಗ ಹೊಸ ವರ್ಷ ೨೦೧೧ ರಲ್ಲಿ ಮಾರ್ಚ ಮತ್ತು ಸೆಪ್ಟೆಂಬರ‍್ ನಲ್ಲಿ ತೆರೆ ಕಾಣಲಿವೆ.
ಅವರಿಗೆ ಈಗಲಾದರೂ ಶನೀಶ್ವರ ದೂರವಾಗಬೇಕು. ಕೂಡಲ ಸಂಗಮ ದೇವ ಕೃಪೆತೋರಬೇಕು (ಸರ್ಕಾರ ಕಣ್ತೆರೆಯುವಂತಾಗಬೇಕು) ಎಂದು ಕನ್ನಡಿಗರಾದ ನಾವು ಹಾರೈಸೋಣ.
ಕಲಾವಿದ ಅಯಾಜುದ್ದೀನ್ ಪಟೇಲ್
ನನ್ನ ಕಂಪ್ಯೂಟರ್ ಪುಸ್ತಕಗಳಿಂದ ಪ್ರಭಾವಿತರಾದವರಲ್ಲಿ ನಾರಾಯಣ್ ಜೋಶಿ ಒಬ್ಬರು. ಆವರು ಗುಲ್ಬರ್ಗದವರು. ಮೊನ್ನೆ ಅವರು ನನಗೆ ಫೋನ್ ಮಾಡಿ, ತಮ್ಮ ಸ್ನೇಹಿತ ಚಿತ್ರ-ಛಾಯಾಚಿತ್ರ ಕಲಾವಿದ ಅಯಾಜುದ್ದೀನ್ ಪಟೇಲ್ ಅವರ ಚಿತ್ರಗಳ ಪ್ರದರ್ಶನ ಬೆಂಗಳೂರಿನ ಚಿತ್ರ ಕಲಾ ಪರಿಷತ್ ನಲ್ಲಿ ಏರ್ಪಡಿಸಲಾಗಿದೆ. ನೀವೂ ಬರಬೇಕೆಂದು ಆಹ್ವಾನವಿತ್ತರು. ಅವರ ಅಭಿಮಾನಕ್ಕೆ ಕಟ್ಟುಬಿದ್ದು ನಾನು ಹೊರಡಲನುವಾದೆ. ಬೆಂಗಳೂರಿಗೆ ಬಂದು ಎರಡು ವರ್ಷ ಕಳೆದರೂ ಇಲ್ಲಿ ನೋಡುವುದು ಬಹಳವಿದೆ ಅನ್ನಿಸಿದೆಯಲ್ಲ. ಹೇಗೂ ಚಿತ್ರಕಲಾ ಪರಿಷತ್ ಮಂದಿರವನ್ನೂ ನೋಡಿದಂತಾಗುತ್ತದೆ. ಅಲ್ಲಿ ನನ್ನ ಮೆಚ್ಚಿನ ವಿಶ್ವದ ಹೆಸರಾಂತ ಕಲಾವಿದರಾದ ನಿಕಾಲಸ್ ರೂರಿಚ್ ಮತ್ತು ಎಸ್.ಎಸ್. ಕುಕ್ಕೆ ಮುಂತಾದವರ ಕಲಾಕೃತಿಗಳನ್ನೂ ನೋಡಿದಂತಾಗುತ್ತದೆಂದುಕೊಂಡೆ. ನನ್ನ ಶ್ರೀಮತಿಯನ್ನೂ ಜೊತೆಯಲ್ಲಿ ಕರೆದುಕೊಂಡು ಹೊರಟೆ. ಜೋಶಿಯವರು (ಇವರೂ ಕೂಡ ಛಾಯಾ ಚಿತ್ರ ಗ್ರಾಹಕರಾಗಿ ಪಡಿಣತಿ ಪಡೆದವರು). ಕಲಾವಿದ ಅಯಾಜುದ್ದೀನ್ ರನ್ನು ಪರಿಚಯಿಸಿದರು. ಸಾಮಾನ್ಯವಾಗಿ ಹೆಸರಾಂತ ಕಲಾವಿದರಲ್ಲಿ ಕಾಣುವ ಬಿಗುವು ಬಿಮ್ಮಾನಗಳೇನೂ ಕಾಣದ ಆತ ಮೊದಲ ನೋಟಕ್ಕೇ ಸರಳ, ವ್ಯಕ್ತಿ ಸ್ನೇಹ ಜೀವಿ ಎನಿಸಿದರು. ಪಟೇಲ್. ತಮ್ಮ ಕಲಾ ಕೃತಿಗಳ ಪರಿಚಯ ಮಾಡಿಸಿದರು.
ಅವರ ಬಗ್ಗೆ ವಿಚಾರಿಸಿದೆ- 1970ರಲ್ಲಿ ಗುಲ್ಬರ್ಗ ಜಿಲ್ಲೆಯ ಗಡಿಕೇಶ್ವರ ತಾಲೂಕಿನ ಚಿಂಚೋಳಿಯಲ್ಲಿ ಪ್ರೈಮರಿ ಶಾಲಾ ಮಾಸ್ತರ ಮಗನಾಗಿ ಜನಿಸಿದ ಅಯಾಜುದ್ದೀನ್ ಪಟೇಲ್. ಕಲೆಯನ್ನರಸಿ ನಡೆದು ಬಂದ ದಾರಿಯಲ್ಲಿ ಕಷ್ಟ –ನಷ್ಟಗಳು ಕಡಿಮೆಯೇನಲ್ಲ. ಗುಲ್ಬಾರ್ಗಾ ವಿಶ್ವ ವಿದ್ಯಾನಿಲಯದಿಂದ ಮಾಸ್ಟರ್ ಆಫ್ ಆರ್ಟ್ಸ ಪದವಿ ಪಡೆದಿರುವ ಅಯಾಜುದ್ದೀನ್ , ಸತತ ಇಪ್ಪ ತ್ತೈದು ವರ್ಷಗಳೇ ಸಾಧನೆಗೈದು ತಮ್ಮ ಕಲಾ ಕೃತಿಗಳ ಹಲವಾರು ಪದರ್ಶನಗಳನ್ನು ಸ್ವತಃ ಖರ್ಚಿನಿಂದ ಏರ್ಪಡಿಸಿದ್ದಾರೆ, ಅನೇಕ ಗಣ್ಯರಿಂದ ಮೆಚ್ಚುಗೆ ಪಡೆದಿದ್ದಾರೆ.
ಮೈಸೂರು ದಸರಾ ಬೆಸ್ಟ್ ಫೋಟೋ ಗ್ರಫಿ ಅವಾರ್ಡ್ ಸೇರಿದಂತೆ, ಎಂ.ಎಂ.ಕೆ.ಕಾಲೇಜ್ ಆಫ್ ಆರ್ಟ್ಸ ಗುಲ್ಬರ್ಗ, ಅಖಿಲ ಭಾರತ 4ನೇ ಕಲಾಪ್ರದರ್ಶನ ನಾಗಪುರದಲ್ಲಿ ಫೋಟೋಗ್ರಫಿ ಅವಾರ್ಡ, ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಅಯಾಜುದ್ದೀನ್ ಇದೀಗ ಗುಲ್ಬರ್ಗಾ ರಾಷ್ಟ್ರೀಯ ಛಾಯಾ ಚಿತ್ರ ಗ್ರಾಹಕರ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಹಲವು ಕಲಾ ಸಂಘ ಸಂಸ್ಥೆಗಳಲ್ಲಿ ಸದಸ್ಯರೂ ಆಗಿದ್ದಾರೆ ಮತ್ತು ಕಾರ್ಯ ನಿರ್ವಾಹಕರಾಗಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಕಲಾ ಕೃತಿ ಮತ್ತು ಸಾಧನೆಗಳನ್ನು ಕುರಿತು ಕೆಲವು ಡಾಕ್ಯುಮೆಂಟರಿ ಫಿಲಂಗಳೂ ಬಂದಿವೆ.
ಶ್ರೀಯುತ ಅಯಾಜುದ್ದೀನ್ ಪಟೇಲ್ ಅವರು ಒಬ್ಬ ಪ್ರತಿಭಾವಂತ ಮತ್ತು ಅನುಭವಿ ಚಿತ್ರ ಛಾಯಾಚಿತ್ರಗ್ರಾಹಕರು. ಅವರ ಕಲಾ ಕೃತಿಗಳಲ್ಲಿ ಗ್ರಾಮೀಣ ಜನಜೀವನದ ಸ್ಥಿತಿ-ಗತಿಗಳ ವಿಭಿನ್ನ ವಾದ ದಟ್ಟ ಚಿತ್ರಣವೇ ಹೆಚ್ಚು ವಸ್ತು ನಿಷ್ಟವಾಗಿ ತೋರಿ ಬಂದಿದೆ. ಕ್ಯಾಮೆರಾ, ಕಂಪ್ಯೂಟರ್ ತಮ್ಮಂತೆಯೆ ಬಳಸಿಕೊಂಡು ತಮ್ಮ ಕುಂಚದಿಂದ ಬಣ್ಣಗಳೊಡೆ ಬದುಕಿನ ವಾಸ್ತವಕ್ಕೆ ಹತ್ತಿರವೆನಿಸುವ ಹಾಗೆ ಚಿತ್ರಿಸುವ ಅವರ ಕಲಾವಂತಿಕೆ ಶ್ಲಾಘನೀಯವಾಗಿದೆ. ಅವರು ವಸ್ತು ನಿಷ್ಠೆ , ಗಂಭೀರ ದೃಷ್ಟಿ ಕೋನಗಳು ಇನ್ನೂ ಹೊಸ ದಿಕ್ಕುಗಳೆಡೆಗೆ ಹರಿಯುತ್ತಾ ಕಲೆಯಲ್ಲಿ ಇನ್ನಷ್ಟು ಹೊಸ ಸಾಧ್ಯತೆ ಹಾಗೂ ಆಯಾಮಗಳನ್ನೂ ಕಾಣುವಂತಾಗಲಿ ಎಂದು ಹಾರೈಸುವೆ.





