Category Archives: ತುಣುಕು ಮಿಣುಕುಗಳು
ಸುಖ-ದುಃಖ ಒಂದರ ಬೆನ್ನ ಹಿಂದೆ…
ಸುಖ-ದುಃಖ ಒಂದರ ಬೆನ್ನ ಹಿಂದೆ ಮತ್ತೊಂದು. ಮನುಷ್ಯನಿಗೆ ಜೀವನ ಸಹ್ಯವೆನಿಸುವುದು ಸಖದಿಂದಲೋ ಅಥವಾ ಮನಸ್ಸಿನ ಸಮಾಧಾನದಿಂದಲೋ ಎಂಬುದು ಜೀವಮಾನದುದ್ದಕ್ಕೂ ಕಾಡುವುದೇ ಯಾಕೆಂದರೆ, ಈಗಿನ ಕಾಲದಲ್ಲಿ ಮನಸ್ಸಿನ ಸಮಾಧಾನವೆಂಬುದು ಅರ್ಥ ಮತ್ತು ಕಾಮ ಇವೆರಡರ ನಡುವೆಯಲ್ಲೊ ಇರುವಂತೆ ತೋರುತ್ತದೆ. ಧರ್ಮ ಮತ್ತು ಮೋಕ್ಷ ಮಾರ್ಗಗಳಲ್ಲಿ ಅದು ಇರುವುದು ನಿಜವೆಂದು ತಿಳಿದರೂ ಅವುಗಳು ದೈಹಿಕ ಸುಖವನ್ನು ತರಲಾರವು ಎಂಬ ಭಾವನೆಯೆ ಕಾಡುತ್ತದೆ. ಈ ಲೋಕದಲ್ಲಿ ಧರ್ಮ ಬುದ್ಧಿಯುಳ್ಳವರಿಗೆ ಜೀವನ ಸುಖ ಕ್ಷುಲ್ಲಕ-ಕ್ಷಣಿಕವೆನಿಸುತ್ತದೆ. ಅಡಿಗಡಿಗೂ ಅದರ ಬೆಂಬತ್ತಿದಷ್ಟು ಜೀವನ ತಲ್ಲಣಗಳು ನೋವಿಗೆಡೆಮಾಡುತ್ತವೆ;ಸುಖ ಮರೀಚಿಕೆಯಾಗುತ್ತದೆ. ಅಂಥವರಿಗೆ ಮತ್ತದೇ ತಾತ್ವಿಕತೆ; ಸಮಾಧಾನವಷ್ಟೇ. ಆದರೆ, ಹೇರಳ ಹಣ ಮತ್ತು ಸುಂದರ ಹೆಣ್ಣು ಜತೆಯಲ್ಲಿದ್ದರೂ ಸಹ ಸುಖವೆಲ್ಲೋ ಕಳೆದುಹೋಗುವ ಅಥವಾ ಇಲ್ಲವಾಗುವ ಸಂದರ್ಭಗಳೂ ಇರುತ್ತವೆಯಲ್ಲ! ಹಾಗಾದರೆ, ಸುಖ ಇರುವುದಾದರೂ ಎಲ್ಲಿ? ದುಃಖ ಧುತ್ತನೆ ಆವರಿಸಿಕೊಳ್ಳುವುದಾದರೂ ಎಲ್ಲಿಂದ? ಎಲ್ಲದಕ್ಕೂ ನಿರ್ಲಿಪ್ತರಾಗಿರುವುದನ್ನು ಕಲಿಯುವುದೆಂದರೆ ಯಾವುದಕ್ಕೆ ಮೊರೆಹೋಗಬೇಕು…? ಉತ್ತರ ನಮ್ಮೊಳಗೇ ಇದೆಯಲ್ಲವೇ…?
ಬಡತನ-ಶ್ರೀಮಂತಿಕೆ
ಈ ಲೋಕದಲ್ಲಿ ಬಡವರಿಗೆ ಬದುಕು ಒಂದು ಶಾಪ. ಶ್ರೀಮಂತರಿಗೆ ಅದು ವರದಾನ ಎಂಬ ಮಾತನ್ನು ಅಲ್ಲಗೆಳೆಯುವುದೇನೂ ಸುಲಭವಲ್ಲ. ಶ್ರೀಮಂತಿಕೆ ಪೂರ್ವಜನ್ಮದ ಪುಣ್ಯವೆನಿಸಿದರೆ ಬಡತನ ಹಿಂದಿನ ಜನ್ಮದ ಪಾಪವೆನಿಸಿವುದೂ ಇದೆ. ಹಾಗಾದರೆಮ ಪುಣ್ಯವಂತರಾಗಿ ಜನಿಸಿ ಬಂದ ಹಣವಂತರಲ್ಲಿಯೆ ಹೆಚ್ಚು ಪಾಪಕೃತ್ಯಗಳೇಕೆ? ದೌರ್ಜನ್ಯ ದಬ್ಬಾಳಿಕೆಗಳೇಕೆ? ಅಷ್ಟಕ್ಕೂ ಪೂರ್ವಜನ್ಮದ ಕಲ್ಪನೆಯೊಂದಿದೆ ಎಂಬುದನ್ನು ತಿರಸ್ಕರಿಸುವವರೇ ಹೆಚ್ಚುತ್ತಿದ್ದಾರೆ. ಕಡುಬಡವನಾಗಿ ಮೋಸ ವಂಚನೆಗೊಳಗಾದವನು ಕ್ರುದ್ಧನಾಗುತ್ತಾನೆ; ಕೊಲೆಗಾರನೂ ಆದಾನು. ಇಲ್ಲಾ ವಿರಾಗಿಯೂ ಆಗಿಬಿಡುವನು. ಏನೇ ಆಗಲಿ, ತನ್ನ ಬಡತನ ತನ್ನ ಪಾಪಕ್ಕೆ ಪ್ರಾಯಶ್ಚಿತವೆಂದು ಅದನ್ನೇ ಅನುಭವಿಸುತ್ತ ಕೂತರೆ ಅಥವಾ ಕ್ರುದ್ಧರಾದರೆ ಅವನು ಈ ಜನ್ಮದಲ್ಲಿ ಶ್ರೀಮಂತ ನಾಗುವುದಿಲ್ಲ; ಶ್ರೀಮಂತನಾದರೂ ನೆಮ್ಮದಿಯಿಂದಿರುವುದಿಲ್ಲ; ಅಲ್ಲವೇ…?
ನಮ್ಮ ಸ್ವಭಾವಗಳೇ ನಮಗೆ ಮುಳುವಾಗುತ್ತವೆ.
ನಮ್ಮ ಸ್ವಭಾವಗಳೇ ನಮಗೆ ದುಃಖ ತರುತ್ತವೆ. ತಂದೆ-ತಾಯಿಗಳ ದೋಷದ ಫಲ ಮಕ್ಕಳು ಅನುಭವಿಸುತ್ತಾರೆ. ಮಕ್ಕಳು ಮಾಡಿದ ದೊಡ್ಡ ತಪ್ಪುಗಳನ್ನು ತಂದೆ-ತಾಯಿಗಳು ಸರಿಪಡಿಸಲು ಹೆಣಗಬೇಕಾಗುತ್ತದೆ. ಇಲ್ಲಿ ಮಾತ್ರ ಹಣದ ಪ್ರಶ್ನೆ ಉದ್ಭವಿಸುವುದಿಲ್ಲ. ಏಕೆ? ಹಾಗಾದರೆ ಜೀವನ ನಿರ್ವಹಣೆಯಲ್ಲಿ ಹಣಗಳಿಕೆಯೇ ಪ್ರಧಾನವಲ್ಲವೆಂಬುದೂ ನಿಜ. ಅದೇ ಪ್ರಧಾನ್ಯವಾಗಿಬಿಟ್ಟರೆ ಜೀವನದಲ್ಲಿ ಪ್ರಮಾದಗಳಾಗುವುದೂ ತಪ್ಪಿದ್ದಲ್ಲ. ಮನುಷ್ಯನಿಗೆ ಜೀವನದ ಉದ್ದೇಶ ಹಣ ಮತ್ತು ಹೆಣ್ಣು ಮಾತ್ರವಲ್ಲ ಬೇರೆಯದೇ ಆದ ಮುಖ್ಯ ಗುರಿಯೊಂದಿದೆ. ಅದನ್ನು ಸ್ವತಃ ಕಂಡುಕೊಳ್ಳಬೇಕು. ಮನುಷ್ಯ ಅಮರನಲ್ಲ. ಅವನು ಮಾಡುವ ಕೆಲಸಗಳು ಅಮರವಾಗುವ ಸಾಧ್ಯತೆ ಇವೆ. ಸಾವು ಅವನ ಬೆಂಬತ್ತುತ್ತಲೇ ಇರುತ್ತದೆ. ನೋವು ಬೇಡವೆಂದರೂ ಬಾಧಿಸುತ್ತಲೇ ಇರುತ್ತದೆ. ಸುಖ ಸಿಕ್ಕರೂ ಸಿಗದಿರುವಂತೆಯೇ ಭಾಸವಾಗುತ್ತಲೇ ಇರುತ್ತದೆ.
ಇಲ್ಲ ನಾವು ಮಾಡುವ (ಮಾಡಿದ) ವ್ಯವಹಾರವಿದೆ. ಮನಸ್ಸು ಮಾಡುವ ವ್ಯಾಪಾರವಿದೆ. ವ್ಯವಸ್ಥೆಯನ್ನು ಸಂಪೂರ್ಣ ಬದಲಾಯಿಸಲಾಗದಿದ್ದರೂ ಕಾಲಕಾಲಕ್ಕೆ ಅದರಲ್ಲಿ ಅಷ್ಟಿಷ್ಟು ಬದಲಾವಣೆಗಳು ಕಂಡುಬರುತ್ತವೆ. ಅವು ಮನಸ್ಸಿನ ವ್ಯಾಪಾರವನ್ನು ಬದಲಿಸುತ್ತವೆ. ಮತ್ತು ಮನಸ್ಸಿನ ಮೇಲೇ ಪರಿಣಾಮ ಬೀರುತ್ತವೆ.
ಮನಸ್ಸಿನ ಕುದುರೆಗೆ ಕಡಿವಾಣ, ನಿಷ್ಕಲ್ಮಷ ಭಾವನೆ…
ಮನಸ್ಸಿನ ಕುದುರೆಗೆ ಕಡಿವಾಣ ಹಾಕದಿರಲಾರೆ; ಎಷ್ಟೋವೇಳೆ ಗೆಲ್ಲಲೂಲಾರೆ. ಅದನ್ನು ನಿಯಂತ್ರಿಸಿದಷ್ಟೂ ಏನೋ ಕಳಕೊಂಡ ಅನುಭವವಾಗುತ್ತದೆ. ಸುಖಿಸುವುದಕ್ಕೆ ಇಲ್ಲಿ ಯಾರ ಪರವಾನಗಿ ಬೇಡವೇಬೇಡ. ನನ್ನ ಸುಖ ನಾನು ಕಾಣುವುದು ಜನ್ಮಸಿದ್ಧ ಹಕ್ಕು. ಎಲ್ಲರೊಂದಿಗೆ ಬೆರೆತು ಅವರಲ್ಲೊಬ್ಬನಾಗಬೇಕೆಂಬ ಇಚ್ಛೆ ಹೊರತು ಯಾರನ್ನೂ ದೂಷಿಸಲಾರೆ; ದ್ವೇಷಿಸಲಾರೆ. ನನ್ನ ನೀರೀಕ್ಷೆಗಳನ್ನೆಲ್ಲ ಮೀರಿ ಬದುಕನ್ನು ಬದಲಿಸುವ ಅಗಚೋರ ಶಕ್ತಿಯೊಂದಿದೆ ಎಂಬುದನ್ನೂ ನಂಬದಿರಲಾರೆ. ಅದನ್ನು ಗೆಲ್ಲಬಲ್ಲ ಸಂಯಮ ಸಾಧನೆ ಹಾಗೂ ದೈವಶ್ರದ್ಧೆಯನ್ನೂ ಬಿಡಲಾರೆ.
ಮುಗ್ಧ ಮನಗಳಲ್ಲಿ...
ನಿಸ್ವಾರ್ಥ-ನಿಷ್ಕಲ್ಮಷ ಭಾವನೆಗಳು ಮುಗ್ಧ ಮನಗಳಲ್ಲಿ(ಮಕ್ಕಳಲ್ಲಿ) ಗೋಚರಿಸುತ್ತವೆ. ಇನ್ನೊಬ್ಬರ ನೋವು ಸಂಕಷ್ಟಗಳಿಗೆ ಸ್ಪಂದಿಸುವ ಮತ್ತು ಸಹಕರಿಸಿ ಸುಖ-ಸಮಾಧಾನ ತೋರುವ ಸಹೃದಯಿಗಳಲ್ಲಿ ಜಗತ್ತಿನ ಒಳಿತನ್ನು ಕಾಣಬಯಸುತ್ತೇನೆ; ಭಗವಂತನ ಇರುವಿಕೆಯನ್ನು ಮನಗಾಣುತ್ತೇನೆ.
ಆದರೆ, ಮುಗ್ಥರಂತೆ ಸುಳಿವ ಸೋಮಾರಿಗಳ ನೋವು-ಸಂಕಷ್ಟಗಳಿಗೆ ಅವರ ಪರಾವಲಂಬನೆಯಲ್ಲಿ ತೀವ್ರ ತಾತ್ಸಾರ ತಳೆಯುತ್ತೇನೆ. ಯಾಕೆಂದರೆ, ದುಡಿಯುವವನಿಗೆ ದುಃಖವಿಲ್ಲ; ಸೋಮಾರಿಗೆ ಸುಖವಿಲ್ಲ… ಎಂಬದನ್ನು ತಿಳಿಯದ ಮೂಢಾತ್ಮರವರು..
ಬದುಕು, ಪ್ರೀತಿ, ನೋವು, ಸೋಲು ಮತ್ತು ಸೆಳೆತ…
ಬದುಕಿಗೆ ದೆಯೆ ಎಂಬುದಿಲ್ಲ. ದಿನವೂ ಎಷ್ಟೋ ಆಸೆ-ಆಕಾಂಶೆಗಳನ್ನು
ಹುಟ್ಟಿಸುವಂತೆಯೆ ಅಷ್ಟೇ ಸೋಲು ನಿರಾಸೆಗಳಲ್ಲಿ ನಿರ್ಧಾರಗಳನ್ನು ಬದಲಿಸುವಂತೆ ಮಾಡುತ್ತದೆ.
ಕಷ್ಟ ಸಹಿಷ್ಣುಗಳು
ಇಲ್ಲಿ ನೋವು ಎಂಬುದು ಆಘಾತಕ್ಕೆ ಕಾರಣವಾಗುವಂತೆ ಬದುಕಿನ ಸಂಬಂಧಗಳಿಗೆ ನಿತ್ಯನೂತನ ಅರ್ಥವನ್ನೂ ಕಲ್ಪಿಸಬಲ್ಲದು; ಮತ್ತೆ ಹೇಗೋ ಹೊಂದಿಕೊಳ್ಳಲು ಬೆಸುಗೆಯೂ ಆಗಬಲ್ಲದು. ಇದು ಸೃಷ್ಟಿ ನಿಯಮ. ಇದನ್ನು ಮನಗಂಡಷ್ಟೂ ನಾವು ಕಷ್ಟಸಹಿಷ್ಣುಗಳು.
ಸೋಲುಗೆಲುವಿನಲ್ಲಿದೆ ನಮ್ಮ ಬದುಕು
ಒಬ್ಬರ ಸೋಲು ಇನ್ನೊಬ್ಬರ ಗೆಲುವಿಗೆ ಸೋಪಾನವಾಗುತ್ತದೆ. ಇನ್ನೊಬ್ಬರ ಅರ್ಥಹೀನ ಬದುಕು ಮತ್ತೊಬ್ಬರಿಗೆ ಅರ್ಥಪೂರ್ಣತೆ ತಂದುಕೊಡುತ್ತದೆ! ಇದೂ ಬದುಕಿನ ವಿಪರ್ಯಾಸವೇ…
ಯೌವನದ ಹುಮ್ಮಸ್ಸಿನಲಿ…
ಯೌವನದ ಹುಮ್ಮಸ್ಸಿನಲಿ ಭವಿಷ್ಯದ ಕನಸು ಕಾಣುತ್ತ ಗರ್ವದಿಂದ ಬೀಗುವುದು ಸಹಜ. ವಯಸ್ಸು ಅರಿವಿಲ್ಲದೇ ಕಳೆದುಹೋದಂತೆ ಅಷ್ಟೇ ಬೇಗ ಹುಮ್ಮಸ್ಸು ಇಳಿಯುವುದೂ ಸಹಜ.
ಪ್ರೀತಿ ಎಂಬುದು ಆಂತರಿಕ ಸೆಳೆತ….
ಅದಾವುದೋ ಆಂತರಿಕ ಸೆಳೆತ ಇಬ್ಬರನ್ನೂ ಒಂದುಗೂಡಿಸುತ್ತದೆ. ಪ್ರೀತಿಯೆ ಆದರೆ ಅದು ಕೇವಲ ಬಾಹ್ಯಕಾರಣಗಳನ್ನು ಅವಲಂಬಿಸಿರುವುದಿಲ್ಲ. ಅಷ್ಟೇ ಕಾಮಪರವಾದ ಮೋಹಕ್ಕೆ ಆಂತರಿಕ ಸೆಳೆತವೆಂಬುದಿಲ್ಲ.
ಸೂರ್ಯ ಹುಟ್ಟುತ್ತಾನೆ ಭೂಮಿ ತಿರುಗುವುದರಿಂದ…
1.ಸೂರ್ಯ ಹುಟ್ಟುತ್ತಾನೆ
ಭೂಮಿ ತಿರುಗುವುದರಿಂದ
ಬೆಳಕು ಹರಿಯುತ್ತದೆ
ಎಚ್ಚರಗೊಳುವುದರಿಂದ;
ಮನಗಳು ಬೆರೆಯುತ್ತವೆ
ಕತ್ತಲೆ ಕರಗುವುದರಿಂದ.
2.ಸೂರ್ಯ ಮುಳುಗುತ್ತಾನೆ
ಭೂಮಿ ತಿರುಗುವುದರಿಂದ
ದಿನ ಕಳೆಯುತ್ತದೆ
ಜನ ಲೆಕ್ಕಹಾಕುವುದರಿಂದ
ಮನಗಳು ಮುರಿಯುತ್ತವೆ
ಕತ್ತಲೆ ಒಳಗೇ ಉಳಿಯುವುದರಿಂದ
-ಎಚ್.ಎಸ್.ಆರ‍್.
ಪ್ರೀತಿ ಮತ್ತು ಅರ್ಥ
ಯೌವನದ ಹುಮ್ಮಸ್ಸಿನಲ್ಲಿ ಕನಸು ಕಾಣುವುದು, ಗರ್ವದಿಂದ ಬೀಗುವುದು ಸಹಜ. ಯಾವುದೋ ಆಂತರಿಕ ಸೆಳೆತವು ಇಬ್ಬರನ್ನೂ ಒಂದುಗೂಡಿಸುತ್ತದೆ. ಪ್ರೀತಿ ಎಂಬುದು ಕೇವಲ ಬಾಹೀಕ ಕಾರಣಗಳಿಂದಲೆ ಬರುವುದಿಲ್ಲ. ಆದರೆ, ಕೇವಲ ಕಾಮಪರವಾದ ಮೋಹಕ್ಕೆ ಆಂತರಿಕ ಸೆಳೆತವೆಂಬುದಿಲ್ಲ, ಅದು ಕೇವಲ ಬಾಹೀಕ ಆಕರ್ಷಣೆಯನ್ನೇ ಅವಲಂಬಿಸಿರುತ್ತದೆ.
*** *** ***
ಅಂತರಾಳದ ಅರ್ಥಗಳನ್ನೆಲ್ಲ ಶಬ್ದಗಳಲ್ಲಿ ಸೆರಹಿಡಿಯುವುದು ಸುಲಭ ಸಾಧ್ಯವಲ್ಲ. ಆದರೆ, ಈ ವಿಶ್ವದ ಉದ್ದಗಲಕ್ಕಿಂತ ವಿಸ್ತಾರವಾಗಿ ಅರ್ಥವಿಸಿಕೊಳ್ಳಬಲ್ಲ ಶಕ್ತಿಯೊಂದಿದ್ದರೆ, ಅದು ಆತ್ಮಶಕ್ತಿಯಲ್ಲದೇ ಬೇರೆ ಇನ್ನೇನು? ಆತ್ಮಶಕ್ತಿ ಯಾವಾಗಲೂ ಆಂತರ್ಯಕ್ಕೆ ಹತ್ತಿರವಾಗಿರುತ್ತದೆ.
*** *** ***
ಮನಸ್ಸಿನ ಭಾವನೆಗಳು.
ಮನಸ್ಸಿನ ಭಾವನೆಗಳು ನೂರಾರಾದರೆ, ಅವುಗಳಿಗೆ ಪ್ರತಿಕ್ರಿಯೆ ಸಾವಿರಾರು. ಅರ್ಥ ಮತ್ತು ವಿಪರೀತಾರ್ಥಗಳೋ ಲೆಕ್ಕವಿಲ್ಲದಷ್ಟು! ಆದರೇನು! ಏನೆಲ್ಲ ಭಾವನೆಗಳ ಮೂಲವೆಲ್ಲ ಒಂದೇ ಆದಾಗ ಮಾವತೆಯಿಂದ ಕೂಡಿದ ಬದುಕು ಸಾಕಾರವಾಗುತ್ತದೆ. ಬುವಿ ಸ್ವರ್ಗವಾಗುತ್ತದೆ!
**** **** ****
ಸಿಕ್ಕುವುದೆಷ್ಟೆಂಬುದಕ್ಕಿಂತಲೂ ದಕ್ಕಿಸಿಕೊಂಡದ್ದೆಷ್ಟೆಂಬುದೇ ಲಾಭ! ದಕ್ಕಿಸಿಕೊಳ್ಳುವುದು ಸುಲಭವಿದ್ದರೂ ದೊರೆಯದಂತೆ ಮಾಡುವುದೇ ಮೋಸ! ಹಾಗೆ ದಕ್ಕಿಸಿಕೊಳ್ಳದಾದಾಗ ಉಂಟಾಗುವುದೇ ನಷ್ಟ!
ಹೀಗೆ ಲಾಭ-ನಷ್ಟಗಳ ನಡುವೆಯೆ ಬದುಕಿನಾ ಪ್ರೀತಿಯಲ್ಲೇ ಇರಿಸುಮುರಿಸು. ಕ್ಷಣ ಭೃಂಗುರವಾಗದಿರಲಿ ಕನಸು! ಮತ್ತೆ ಪ್ರಕೃತಿ ಸಹಜ ಸ್ನೇಹದಲಿ ಮೊಳೆತು ಮೊಗ್ಗಾಗಿ ಅರಳಲಿ ಮನಸ್ಸು; ಅದೇ ಹೂವಿನಾ ಸುಂದರತೆಯ ಸೊಗಸು! ಆಗ ಹೊಸ ಪರಿಮಳದಲಿ ಹೊಸ ಹುಮ್ಮಸ್ಸು! ಹೊಸ ಬೆಳಕಿನಲ್ಲಿ ಹೊಸ ಅರ್ಥ ಕಾಣುವುದು. ನಿತ್ಯನೂತನ ಬದುಕು!
ಹೌದು, ಮನಸ್ಸೇನು ಮುಗಿಲಾಚೆಗೂ ಹಾರಿಬಿಡುತ್ತದೆ. ಮನಸ್ಸಿನೊಂದಿಗೆ ಮೈಯನ್ನೂ ಹೊಂದಿಸಿಕೊಂಡು ಸಾಗಿದರೇನೆ ನಿಯಂತ್ರಣವೇನೆಂಬುದು ಗೊತ್ತಾದೀತು! ಆಗ ನಿಜಕ್ಕೂ ಮುಗಿಲ ಮೋಹ ಹಾರಿ ಹೋಗುತ್ತದೆ; ಬದುಕಿನಲ್ಲಿ ಒಂದು ಮಜಲಾದರೂ ಸಿಗುತ್ತದೆ.
ಆನಂದಮಯ ಈ ಜಗದ ಹೃದಯ
ಬದುಕು ಭವಿಷ್ಯ
ಜೀವನ ಕಲಿಸುವ ಪಾಠ: ಇಲ್ಲಿ ಕಲಿತಷ್ಟೂ ಕಲಿಯುವುದಿದೆ.
ಆಯುಷ್ಯದ ಕೊನೆಯವರೆಗೂ ಇರುತ್ತದೆ. ಆದರೆ, ಯಾವುದನ್ನು ಕಲಿಯಬೇಕೆಂಬುದೇ ಮುಖ್ಯ.
ಯಾವುದರಿಂದ ಬೆಳೆಯಬೇಕೆಂಬುದೇ ನಿತ್ಯ. ಕಲಿತು ಬೆಳೆಯುತ್ತಿರಬೇಕು. ಬೆಳೆದಂತೆಲ್ಲ ಕಲಿಯುತ್ತಿರಬೇಕು.
ತಮ್ಮೊಳಗೆ ಹೊರಗೆ ಇರುವ ಅಸುರರನ್ನು ಎದುರಿಸುತ್ತ ನಡೆಯಬೇಕು.
ಇಲ್ಲಿ ದುಃಖ ದುಮ್ಮಾನ ಹಾಗೂ ದುರಂತಗಳಿವೆ, ನಲಿವು ಗೆಲವು, ನಗೆಯೊಲವು,
ಹಾಸ್ಯದ ತಿಳಿಗೊಳದಲಿ ಮೀಯುವುದು, ಎಲ್ಲವನ್ನೂ ನಿರ್ವಿಕಾರ ಚಿತ್ತದಿಂದ ಸ್ವೀಕರಿಸುವುದು,
ಬದುಕನ್ನು ಅರ್ಥೈಸಿಕೊಳ್ಳವುದಿದೆ; ಅರಗಿಸಿಕೊಳ್ಳುವುದಿದೆ. ಅಂಥವರಿಗೆ ಮಾತ್ರ ಇಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ.
**** **** ****
ಆನಂದಮಯ ಈ ಜಗದ ಹೃದಯ
ವೈಜ್ಞಾನಿಕ ಮತ್ತು ತಾಂತ್ರಿಕ ಅನ್ಷೇಷಣೆಗಳ ಉಕ್ಕಿನ ಹಿಡಿತಕ್ಕೆ ಸಿಲುಕಿದ
ಈ ಸಾಮಾಜಿಕ ಜನಜೀವನದ ಪ್ರತಿ ಅಂಗವೂ ಯಾಂತ್ರಿಕವಾಗುತ್ತಿದೆ.
ತನ್ನ ಸರಳತೆ ಸಮಷ್ಟಿ ಭಾವದ ಕೊರತೆಯಿಂದ ನಲುಗುತ್ತಿದೆ.
ಹೌದು, ವಿಜ್ಞಾನ ತಂತ್ರಜ್ಞಾನ ಮನುಷ್ಯನನ್ನು ನಿರ್ಭಾವುಕನನ್ನಾಗಿಸುತ್ತಿದೆ.
ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯ ಹೆಚ್ಚಳ ಅದನ್ನು ಸಾಬೀತುಪಡಿಸುತ್ತಿದೆ.
ಆದರೇನು! ಇನ್ನೊಂದೆಡೆಯಿಂದ ಸಾತ್ವಿಕತೆಯ ಪ್ರಭಾವೀ ವಲಯ ತನ್ನ ಅಸ್ತಿತ್ವವನ್ನು ಸಾರುತ್ತಿದೆ.
ಈ ಜಗದ ಹೃದಯದಲ್ಲಿನ್ನೂ ಮಾನವೀಯತೆ ಇದೆ ಅದು ಆನಂದಮಯ ಎಂಬುದನ್ನು ಆಗಾಗ್ಗೆ ಎತ್ತಿ ತೋರಿಸುತ್ತಲೇ ಇದೆ.
**** **** ****
ಬದುಕಿನ ನಿತ್ಯನೂತನ ಅರ್ಥಗಳು
ಇಲ್ಲಿ ನೋವು ಎಂಬುದು ಆಘಾತಕ್ಕೆ ಕಾರಣವಾಗುವಂತೆಯೆ ಬದುಕಿಗೆ ನಿತ್ಯನೂತನ ಅರ್ಥಕಲ್ಪಿಸಬಲ್ಲದು.
ಮತ್ತೆ ಬದುಕನ್ನು ಪ್ರೀತಿಸುತ್ತ ಇಹ ಸಂಬಂಧಗಳೊಡನೆ ಹೊಂದಿಕೆಯಾಗಿ ಬಿಡಿಸಲಾರದ ಬೆಸುಗೆಯಾಗಬಹುದು.
ಇದು ಸೃಷ್ಟಿ ನಿಯಮ. ನಿರಂತರ ಚಲನಶೀಲ ಜೀವನಗತಿಯ ಆಯಾಮ. ಅದನ್ನು ಮನಗಂಡಷ್ಟೂ ನಾವುಗಳು ಕಷ್ಟಸಹಿಷ್ಣುಗಳು.
**** **** **** ****
ಆದರೇನು! ಎಷ್ಟೋ ಸಂದರ್ಭಗಳಲ್ಲಿ ಬದುಕಿಗೆ ದಯೆ ಎಂಬುದಿಲ್ಲ ಎನಿಸುವುದೂ ನಿಜವೆ.
ಹೌದು, ಬದುಕು ನಿರ್ದಯಿ ಶಿಕ್ಷಕ. ಶಿಕ್ಷಕನಾದವನಿಗೆ ತನ್ನ ವಿದ್ಯಾರ್ಥಿಗಳಮೇಲೆ ಪ್ರೀತಿ ಇರುವುದಿಲ್ಲವೇ..?
ಹಾಗೆ ಪ್ರೀತಿ ಇರುವುದರಿಂದಲೇ ತನ್ನ ಶಿಷ್ಯನನ್ನು ಕೆಲವೊಮ್ಮೆ ದಂಡಿಸುತ್ತಲೆ ಅವನನ್ನು ಸರಿದಾರಿಗೆ ತರಲು ಬಯಸುತ್ತದೆ; ಬದುಕು.
ಬದುಕಿನ ಈ ಶಿಸ್ತಿನ ದಂಡನೆ ಅರಿತವನು ಮತ್ತೆ ಮತ್ತೆ ಬದುಕುತ್ತಾನೆ; ಬದುಕನ್ನು ಪ್ರೀತಿಸುತ್ತಾನೆ.
**** **** ****
ದಿನವೂ ಎಷ್ಟೋ ಆಸೆ-ಆಕಾಂಕ್ಷೆಗಳನ್ನು ಹುಟ್ಟಿಸುವಂತೆ ಅಷ್ಟೇ ಗೆಲವು ನಲವಿನಲ್ಲಿ ಮಿಂಚುವಂತೆ ಮಾಡುವ ಈ ಬದುಕು,
ಮತ್ತಷ್ಟೇ ಸೋಲು ನಿರಾಸೆಗಳಲ್ಲಿಯೂ, ಹತ್ತಿರದಲ್ಲಿ ಕಂಡ ಸಾವು ನೋವುಗಳಲ್ಲಿಯೂ ತಮ್ಮ ಬದುಕಿನ ನಿರ್ಧಾರಗಳನ್ನು
ಬದಲಿಸುವಂತೆ ಮಾಡಿಬಿಡುತ್ತದೆ. ಯಾಕೆಂದರೆ, ಒಬ್ಬರ ಸೋಲು, ಇನ್ನೊಬ್ಬರ ಗೆಲುವಿಗೆ ಸೋಪಾನವಾಗುತ್ತದೆ.
ಒಬ್ಬರ ಅರ್ಥಹಿನ ಬದುಕು ಇನ್ನೊಬ್ಬರ ಬದುಕಿಗೆ ಅರ್ಥಪೂರ್ಣತೆ ತಂದುಕೊಡುತ್ತದೆ;
ಹೊಸ ಬೆಳಕಿನಲ್ಲಿ ಹೊಸತಿರುವಿನಲ್ಲಿ ಹೊಸ ಚೈತನ್ಯವನ್ನೇ ನೀಡುತ್ತದೆ.
ಬದಲಾಗುತ್ತಿರುವ ಜೀವನ ದೃಷ್ಟಿ
ನಾಲ್ಕು ಗೋಡೆಗಳ ಮಧ್ಯೆಯೆ ಮಧ್ಯಮ ವರ್ಗದ ಜೀವನ ದೃಷ್ಟಿ.
ಅದವರ ಸ್ವಂತ ಮನೆಯೇ ಇದ್ದೀತು; ಗುಡಿಸಿ ಸಾರಿಸಿ
ಅಂಗಳದಲಿ ರಂಗವಲ್ಲಿ ಇಟ್ಟರಷ್ಟೇ ಕಾಣವುದು ಶೋಭೆ!
ಹಣದ ಮುಗ್ಗಟ್ಟಿಗೆ ಇಲ್ಲಿಲ್ಲ ಕೊರತೆ.
ಇಲ್ಲಿರುವುದೇ ಬಿಟ್ಟೂ ಬಿಡದ ಸಾಮಾಜಿಕ ನಿರ್ಬಂಧಗಳ ಒರತೆ.
ದೇವರೂ ತಲೆಬಾಗದಿದ್ದರೂ ಪೂಜೆ ಪುನಸ್ಕಾರಗಳ ನಡುವೆ
ಎಲ್ಲೆಲ್ಲೂ ಶೀಲ ಚಾರಿತ್ರ್ಯಗಳ ಮಾತು ಮಾತೇ…
**** **** ****
ಎಷ್ಟೋ ಮೇಲ್ವರ್ಗದ ಮನೆಯಲ್ಲಿ ಹಾಗಲ್ಲ;
ಇಲ್ಲಿ ಬಹುತೇಕ ಹಣವೇ ಎಲ್ಲವೂ ಎಲ್ಲಾ.
ದಿನ ಬೆಳಗಾಗುವುದರಲ್ಲಿ ಹೊಸದೊಂದು ಜೀವನ ದೃಷ್ಟಿ.
ಪೂರ್ವ-ಪಶ್ವಿಮಗಳಾಚೆಗೂ ವಿಸ್ತರಿಸುತ್ತದೆ;ಜೀವನ ಶೈಲಿ.
ಮನೆಯೋ ಬಂಗಲೆಯೋ ಅದಕೊಂದು ಹೊಸ ರೂಪ-ಹೊಸ ಕಳೆ.
ಅಂಗಳದಲಿ ನಿಲ್ಲುವವು ರಥಗಳ ಸಾಲು.
ಹಣದ ಹೊಳೆಯಲ್ಲಿ ಯಾವೊಂದು ಕಟ್ಟುಪಾಡೂ ಇನ್ನಿಲ್ಲವಾಗುವುದು.
ಹೌದು,ದೇವಾನು ದೇವತೆಗಳೂ ಏಕೋ ತಲೆದೂಗಿ ನಗುವರಿಲ್ಲಿ…!
***** **** *****
ಮನುಷ್ಯನ ಜೀವಮಾನದುದ್ದಕ್ಕೂ ಮಾನಸಿಕ ಮತ್ತು ಭೌತಿಕ ಗುಣಗಳ ಸಂಘರ್ಷ.
ಮನಸ್ಸನ್ನು ಗೆದ್ದವನೇ ಮಹಾನುಭಾವ/ ಗೆದ್ದವಳೆ ಮಹಾಮಾತೆ.
ಭೌತಿಕ ಗುಣಗಳೆಲ್ಲವೂ ಅವನ/ಅವಳ ಕೈ ವಶ. ಸೋಲೆಂಬ ಸೊಲ್ಲಿಲ್ಲ.
ಸುಖ ಎಂಬುದರ ಅರ್ಥ ಬೇರೆಯೆ ಇದೆ ಅಲ್ಲಿ.
ಹಣದ ಹುಚ್ಚು ಹಂಬಲಕಿಂತ ಮಿಗಿಲಾಗಿ ದೊರಕುವ ಶಾಂತಿಯಿದೆ ಅಲ್ಲಿ.
**** **** *****
ವಿಚಿತ್ರ-ವಿಲಕ್ಷಣ ಬದಲಾವಣೆಗಳು:
ಆಧುನಿಕ ಜಗತ್ತಿನಲ್ಲಿ ಅದರಲ್ಲೂ ನಮ್ಮ ದೇಶದಲ್ಲಿ ಆಗುತ್ತಿರುವ ವಿಚಿತ್ರ-ವಿಲಕ್ಷಣ ಬದಲಾವಣೆಗಳು.
ಯುವ ಜನಾಂಗದ ಮೇಳೆ ಬೀರುತ್ತಿರುವ ಪರಿಣಾಮಗಳು, ಅದರಿಂದಾಗಿ ಉಂಟಾಗುತ್ತಿರುವ
ನೈತಿಕ ಅಧಃಪತನದ ದೃಶ್ಯ ಹಿರಿಯರನ್ನು ಕಂಗೆಡಿಸುತ್ತಿದೆ. ಸಂಪ್ರದಾಯ, ಪರಂಪರೆ,
ಸಾಮಾಜಿಕ ಕಟ್ಟುಪಾಡು, ಅವಜ್ಞೆಗೀಡಾಗಿವೆ.. ಹಳೆಯ ಮೌಲ್ಯಗಳನ್ನು ಅಲಕ್ಷಿಸುವ ಯುವಜನಾಂಗವು
ಹೊಸ ಮೌಲ್ಯಗಳು ಹೇಗಿರಬೇಕೆಂಬ ಪರಿಕಲ್ಪನೆಯನ್ನೇ ಹೊಂದಿಲ್ಲ; ಅಷ್ಟೇಕೆ ಅದರ ಬಗ್ಗೆ ತಲೆ ಕಡೆಸಿಕೊಂಡಿಲ್ಲ.
**** **** ****
ಹೊಸತು-ಹಳತರ ಸಮನ್ವಯ
ಹಾಗಾದರೆ , ಆಧುನಿಕ ಪ್ರಪಂಚದಲ್ಲಿ ಹೊಸ ಜೀವನ ಮೌಲ್ಯಗಳ ಹುಟ್ಟುಬೇಡವೇ..?
ಅವು ಶಾರೀರಿಕ ಸಂಬಂಧಗಳು ಮತ್ತು ಭೌದ್ಧಿಕ ಅವಶ್ಯಕತೆಗಳ ಜೊತೆಗೆ ಎಂತಹ ಸಂಬಂಧ ಹೊಂದಿರುತ್ತವೆ?
ವೈಭೋಗದ ಸುಖ ಬೇರೆ. ಶರೀರ ಸುಖ ಬೇರೆ. ಶರೀರ ಸುಖದಲ್ಲಿ ವೈವಿಧ್ಯತೆ ಕಾಣುವ ಹುಚ್ಚು.
ಅಂಥ ಸುಖಕ್ಕಾಗಿಯೆ ಹಣ ಸೂರೆಯೊಡೆವ ಹುಡುಕಾಟ ಹಾಗೂ ಹೆಣ್ಣು/ಗಂಡುಗಳ ಹುಚ್ಚಾಟವಷ್ಟೇ…?!
ನಾಳೆಯ ಗೊಡವೆಯೇಕೆ? ಎಂಬುದೂ ಲೆಕ್ಕಾಚಾರವೇ..? ಏರು ಪ್ರಾಯದಲ್ಲೇ ಎಣಿಸಲಾರದಷ್ಟು
ಹಣ, ಕುಣಿಸುವಷ್ಟು ಯೌವನ ಸುಲಭವಾಗಿ ಕೈಗೆಟುಕಿದಾಗ ಇನ್ನೇನು..!
ಆದರೆ, ಇವೆಲ್ಲವನ್ನೂ ಮೀರಿ ನಿಂತ ಯುವಜನಾಂಗದ ಇನ್ನೊಂದು ಗುಂಪೊಂದು ಇಲ್ಲೇ ಇದೆಯಲ್ಲ…
ಹೊಸತು ಹಳತು ಎರಡರ ಸಮನ್ವಯದಲ್ಲಿ ಹೆತ್ತವರು, ಹಿರಿಯರೆಲ್ಲರೂ ಬೆರಗೊಡೆವಂತೆ
ತಮ್ಮ ತನ ಉಳಿಸಕೊಂಡೇ ಮುಂದುವರೆದು ಭೇಷ್ ಎನಿಸಿಕೊಂಡವರಿವರು.




