Category Archives: ಚಿಂತನೆಗಳು

ವಿಷಯಕ್ಕೊಂದು ವಿಶ್ವ ವಿದ್ಯಾನಿಲಯ….?

ವಿಷಯಕ್ಕೊಂದು ವಿಶ್ವ ವಿದ್ಯಾನಿಲಯ ಸ್ಥಾಪಿಸುವುದು ನಮ್ಮ ಶಿಕ್ಷಣ ಕ್ಷೇತ್ರವನ್ನು ಬಾಧಿಸುತ್ತಿರುವ ಮಾರಕ ರೋಗ. ಇದನ್ನು ನೋಡುತ್ತಿದ್ದರೆ ನಾವು ನಮ್ಮ ದೇಶವನ್ನು ದ್ವಿತೀಯ ಸ್ಥಾನಕ್ಕೆ ಕೊಂಡೊಯ್ಯಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ ಎಂಬ ಸಂಶಯ ಬರುತ್ತದೆ….ನಮಗೆ ಚಿಂತನೆ  ಮತ್ತು ಆಲೋಚನೆಗಳಲ್ಲಿ ಯಾವತ್ತೂ ಮುಂಚೂಣಿಯಲ್ಲಿರಲು ಸಾಧ್ಯವಿಲ್ಲ. ಎಂದು ನಾವೇ ನಿರ್ಧರಿಸಿಬಿಟ್ಟಿದ್ದೇವೆ. ಜೊತೆಗೆ ಶಿಕ್ಷಣವನ್ನೂ ಒಂದು ಲಾಭದಾಯಕ ಉದ್ಯಮವೆಂದು ಭಾವಿಸುವವರಿಗೆ ಈ ವಿಷಯ ವಿಶ್ವವಿದ್ಯಾಲಯಗಳು ಗಳಿಕೆ ಯ ಮಾರ್ಗವೂ ಆಗಿಬಟ್ಟಿವೆ….
ಎಂದಿದ್ದಾರೆ ಹಿರಿಯ ವಿಜ್ಞಾನಿ, ಶಿಕ್ಷಣ ತಜ್ಞ ಪ್ರೊ.ಯಶ್ ಪಾಲ್. (ಪ್ರ.ವಾಣಿ)

ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಗೇ ವಿರುದ್ಧವಾಗಿರುವ  ಈ “ವಿಷಯ ವಿಶ್ವವಿದ್ಯಾಲಯಗಳು” ವಿಶ್ವವಿದ್ಯಾಲಯಗಳನ್ನು ಕೇವಲ ತರಬೇತಿ ಸಂಸ್ಥೆಗಳಾಗಿ ಪರಿವರ್ತಿಸಿಬಿಡುತ್ತವೆ. ಅಂದರೆ ವಿಶ್ವವಿದ್ಯಾಲಯಗಳು ವಿಶಾಲ ಮನೋಭಾವದ ಪಾಂಡಿತ್ಯವುಳ್ಳ ನಾಗರೀಕರನ್ನು ಸೃಷ್ಟಿಸುವ ಕೆಲಸವನ್ನೂ ನಿಲ್ಲಿಸಿಬಿಡುತ್ತವೆ….ಯಾಕೆಂದರೆ, ನಮ್ಮ ಸರ್ಕಾರಕ್ಕೆ ಬೇಕಿರುವುದು ತನ್ನ ಗೊಡ್ಡು ಚಿಂತನೆಗಳನ್ನು ಪ್ರಶ್ನಿಸದ ನಾಗರಿಕ ಸಮಾಜವಷ್ಟೇ… ಇದು ಬಡವರನ್ನು ಉನ್ನತ ಶಿಕ್ಷಣದಿಂದ ಹೊರಗಿಡುವ ಕ್ರಿಯೆಯೂ ಆಗಿಬಿಡುತ್ತದೆ.. ಆದ್ದರಿಂದ ವಿಷಯ ವಿದ್ಯಾಲಯಗಳ ಸ್ಥಾಪನೆ ಒಂದು ಅಪ್ರಜಾಸತ್ತಾತ್ಮಕ ನೀತಿ.
-ಎಂದಿದ್ದಾರೆ ಕೇರಳ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರಾದ ಡಾ.ಕೆ.ಎನ್.ಪಣಿಕ್ಕರ್. (ಪ್ರ.ವಾಣಿ)

ಮೇಲೆ ತಿಳಿಸಿದ ಹಿರಿಯ ಶಿಕ್ಷಣ ತಜ್ಞರೂ ಮೇಧಾವಿಗಳ ಮಾತನ್ನು ನಮ್ಮ ಇಂದಿನ ಶಿಕ್ಷಣತಜ್ಞರು ಮತ್ತು ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ, ಮುಂದೊಂದು ದಿನ ಜ್ಞಾನ ದೇಗುಲ ಗಳೆಂದು ಕರೆಸಿಕೊಳ್ಳುವ, ನಮ್ಮ ಮುಂದಿನ ಪೀಳಿಗೆ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳೂ ಕೇವಲ “ಇಂಡಸ್ಟ್ರಿ” (ಕಾರ್ಖಾನೆ) ಗಳಾಗಿ ಬಿಡುತ್ತವೆಯಷ್ಟೇ. ಬಡವರಿಗೆ ಉನ್ನತ ಶಿಕ್ಷಣವೆಂಬುದು ಮರೀಚಿಕೆಯಾಗುತ್ತದೆ.  ಅಂತಹ ಸಾಮಾಜವಾದ ವಿರೋಧಿ ನೀತಿಯಿಂದ  ಅಪಾಯ ಬರದಿರುವಂತೆ ಸಂಬಂಧಪಟ್ಟ ಗಣ್ಯರು ಶಿಕ್ಷಣತಜ್ಞರೂ ಸೂಕ್ತ ಕ್ರಮ ತಡೆಯಾಜ್ಞೆಗಳತ್ತ ಗಮನ ಹರಿಸಬೇಕಲ್ಲವೇ…?

 

ಹಿರಿಯ ಮನಸ್ಕರು ಮತ್ತು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳು…

ಕನ್ನಡ ಸಾಹಿತ್ಯದ ನವೋದಯದ ಕಾಲದ ಸಂದರ್ಭದಲ್ಲಿ  ಇಂಗ್ಲೀಷ್ ಪ್ರಭಾವವೇ ಬಹಳವಿತ್ತು. ಆಗ  ಕನ್ನಡಿಗರು ಕನ್ನಡವನ್ನು ಅನನ್ಯವಾಗಿ ಪ್ರೀತಿಸುವಂತೆ ಓದುಗರನ್ನು ಅಪಾರ ಸಂಖ್ಯೆಯಲ್ಲಿ ಬೆಳೆಸಿ ಮನೆಮನೆಗಳಲ್ಲೂ ಮಾತಾದವರಲ್ಲಿ ಮೊದಲಿಗರು ಅ.ನ. ಕೃಷ್ಣರಾಯರು. ಅವರು ಕಾದಂಬರಿಕಾರರಾಗಿ ಅಂದು ಮಾಡಿದ ಪವಾಡ, ಪಡೆದ ಅಪಾರ ಜನಪ್ರಿಯತೆಯನ್ನು ಕಂಡು ಹೊಗಳಿದ ವಿದ್ವಜ್ಜನರೂ ಇದ್ದರು. ಅವರದು ಜನಪ್ರಿಯ ಸಾಹಿತ್ಯ ಅಗ್ಗದ ಪ್ರಚಾರದ ಸಾಹಿತ್ಯವೆಂದು ಅವರನ್ನೂ ಅವರ ಐಡಿಯಾಲಜಿ(ಇಂದಿನ ವ್ಯಾಖ್ಯೆ)ಯನ್ನೂ ಜರೆದ ಹಿರಿಯ ಸಾಹಿತಿಗಳೂ ವಿಮರ್ಶಕರೂ ಇದ್ದರು. ಆದರೇನು! ಅ.ನ.ಕೃ. ಅವರು ಕನ್ನಡ ನವೋದಯ ಕಾಲದ ಯುಗಪ್ರವರ್ತಕರಲ್ಲಿ ಅಗ್ರಣ್ಯರಾಗಿಯೇ ಉಳಿದರು. ಅಂದೂ ಅವರ ಯಶಸ್ಸನ್ನು ಕಂಡು ಕುದಿಯುವವರು ಕಾಲೆಳೆಯುವ ವಿದ್ವಜ್ಜನರ ಗುಂಪೇ ಇತ್ತು.  ಯಾರು ಏನೇ ಗೊಣಗಿದರೂ ಅ.ನ.ಕೃ ಅವರ ಜನಪ್ರಿಯತೆ ಹೆಚ್ಚಿತ್ತಲೇ ಹೋಯಿತು.  ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅಂದಿನ ಇಂಗ್ಲೀಷ್ ಪ್ರಭಾವೇ ಮೆರೆಯುತ್ತಿದ್ದ ಕಾಲದಲ್ಲಿ ಅವರು ಕನ್ನಡ ಓದುಗರನ್ನು ಅತ್ಯಧಿಕ ಸಂಖ್ಯೆಯಲ್ಲಿ ಬೆಳೆಸಿ ಕನ್ನಡ ಚಳುವಳಿಗಳಲ್ಲೂ ಸಕ್ರಿಯರಾಗಿದ್ದುದು ದಾಖಲೆಯಾಗಿದೆ; ಚಿರಸ್ಮರಣೀಯವೇ ಆಗಿದೆ.

ಇದೀಗ ದೃಶ್ಯಮಾಧ್ಯಮದ ಚಾನೆಲ್ ಗಳು ಹಾಗೂ ಸಿನಿಮಾಗಳೂ ಓದುಗರನ್ನು ಕಿತ್ತುಕೊಳ್ಳುತ್ತಲೇ ಇವೆ. ಹೊಸ ಓದುಗರನ್ನು ಸೃಷ್ಟಿಸುವುದರಲ್ಲಿ ವಿದ್ವಜ್ಜನರ    ಸಾಹಿತ್ಯ ಅದೆಷ್ಟು ಯಶಸ್ವಿಯಾಗಿದೆ ಎಂಬುದು ಬೃಹತ್ ಪ್ರಶ್ನೆಯಾಗಿ ಕಾಡಿದೆ.   ಇಂತಹ ಕಾಲಘಟ್ಟದಲ್ಲಿ ಸಾಹಿತ್ಯೇತರ ಕೃತಿಗಳಿಗೆ ಬೇಡಿಕೆ ಹೆಚ್ಚಿದೆ.

ಆದರೂ ಆಶಾದಾಯಕವೆಂದರೆ, ಮಧ್ಯಮ ವರ್ಗದ ಜನರೂ ಮತ್ತು ಐಟಿ/ಬಿಟಿ ವರ್ಗದವರೂ  ವಯೋವೃದ್ದರೂ ತಮ್ಮ ಸಾಹಿತ್ಯಾಸಕ್ತಿ ಉಳಿಸಿಕೊಂಡು, ಕೊಂಡು ಕಥೆ ಕಾದಂಬರಿಗಳನ್ನುಓದುತ್ತಿರುವುದು ಸಮಾಧಾನಕರವೇ. ಅಷ್ಟಕ್ಕೂ ಕಥೆ ಕಾದಂಬರಿ ಸಾಹಿತ್ಯಕ್ಕೆ ಬೇಡಿಕೆ ಇಲ್ಲವೆಂಬಂತಾಗಿರುವ ಈ ಸಂದರ್ಭದಲ್ಲಿ ಎಸ್.ಎಲ್. ಭೈರಪ್ಪನವರು ತಮ್ಮ ಸಾಮಾಜಿಕ ಬದ್ಧತೆಯ ಕೃತಿಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಸಾಮಾನ್ಯ ಜನತೆಯನ್ನು ಮಾತ್ರವಲ್ಲ, ನೌಕರರು,  ಉನ್ನತ ಅಧಿಕಾರದಲ್ಲಿರುವವರೂ, ರಂಗ ಭೂಮಿ ಸಿನಿಮಾ ಕಲಾವಿದರೂ, ಮತ್ತು ಔದ್ಯೋಗಿಕವಾಗಿ  ಐಟಿ,ಬಿಟಿ ಮತ್ತು ಇತರೆ ಕಂಪೆನಿಗಳ ಕಾರ್ಮಿಕ ವರ್ಗದವರೂ ಅವರ ಕೃತಿಗಳನ್ನುಮೆಚ್ಚಿಕೊಳ್ಳುತ್ತಿದ್ದಾರೆ.  ಅಷ್ಟೇ ಅಲ್ಲ ಕೃತಿಗಳು ಇತರ ಭಾಷೆಗಳಿಗೂ ತರ್ಜಮೆಗೊಂಡಿವೆಯೆಂದರೆ ಅವುಗಳ ಗುಣಮಟ್ಟ ಮತ್ತು ಉಪಯುಕ್ತತೆ ಹೆಚ್ಚಿದೆಯೆಂದೇ. ಹಾಗೇ ಅವರು ಸಾಮಾಜಿಕವಾಗಿ ಬದಲಾವಣೆಯನ್ನು ಸುಧಾರಣೆಯನ್ನೂ ಬಯಸುವ ಅವರ ಕೃತಿಗಳಿಂದ ಕನ್ನಡಿಗರ ಹೆಮ್ಮೆಯ ಸಾಹಿತಿಯಾಗಿದ್ದಾರೆ.

ಭೈರಪ್ಪನವರಿಗೆ ಇತ್ತೀಚೆಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಲಭಿಸಿರುವುದು ಅವರ ಅಭಿಮಾನಿಗಳಿಗೆ ಮಾತ್ರವಲ್ಲ ನಿಜಕ್ಕೂ ಕನ್ನಡಪರ ಕಾಳಜಿಇರುವವರಿಗೆ ಹಾಗೂ ಸಮಾಜಿಕ ಪರಿವರ್ತನೆ ಬಯಸುವ ಬುದ್ಧಿಜೀವಿಗಳಿಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆ ಪಡುವಂತಾಗಿದೆಯಲ್ಲವೇ…?  ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ ಎನ್ನುವವರಿದ್ದಾರೆ.  ಉತ್ತಮ ಸಾಹಿತ್ಯ ಕೃತಿಗಳು ಕಾಲ ಕಾಲಕ್ಕೆ ಜನಮಾನಸದಲ್ಲಿ  ಪ್ರಭಾವ ಬೀರಿರುವುದೂ ಜನಜೀವನಕ್ಕೆ ಹೊಸ ಬೆಳಕನ್ನು ಚೆಲ್ಲುವುದು ನಗ್ನ ಸತ್ಯ.  ಸಾಹಿತ್ಯವೆಂದರೆ ಸಹೃದಯರನ್ನು ತಲುಪುವುದಷ್ಟೇ ಮುಖ್ಯ ಅಲ್ಲವೇ?    ಅದಿಲ್ಲದವರು  ಸಣ್ಣಮನಸ್ಸಿನವರಾಗಿಬಿಡುತ್ತಾರೆ. ಅ.ನ.ಕೃ ಅವರ ಜನಪ್ರಿಯತೆ ಕಂಡು ಕರುಬುವ ಅವರದು ಜನಪ್ರಿಯ ಸಾಹಿತ್ಯವೆಂದು ಜರೆಯುವವರಿದ್ದಂತೆ ಈ ಕಾಲಘಟ್ಟದಲ್ಲೂ ಅಂಥವರು ಇರುವುದರಲ್ಲಿ ಯಾವ ಸೋಜಿಗವೇನಿಲ್ಲ.
ಈಗಿತ್ತಲಾಗಿ ಹಿರಿಯ ಸಾಹಿತಿಗಳ ಬೇರೆ ಬೇರೆ “ಐಡಿಯಾಲಜಿಗಳು” ಏನೇ ಇರಲಿ, ಅದರಿಂದ ಸಾಮಾನ್ಯ ಓದುಗರಿಗೆ ಏನು ಪ್ರಯೋಜನ?  ಈಗಾಗಲೇ ದೃಶ್ಯಮಾಧ್ಯಮದಿಂದ ಒಂದಿಷ್ಟು ಸೋರಗಿರುವ ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಕೊಡುಗೆ ಶ್ಲಾಘನಿಯ…. ನಾವು ಮಾಡಲಾಗದ ಕೆಲಸವನ್ನು ಕನ್ನಡಕ್ಕೆ ಭೈರಪ್ಪನವರು ಮಾಡಿದ್ದಾರೆ ಎಂದು ಹೆಮ್ಮೆಪಡುವ ಬದಲು ಜ್ಞಾನಪೀಠ ಪ್ರಶಸ್ತಿ ಹೊತ್ತುಕೊಂಡಿರುವ ಯು.ಆರ್.ಅನಂತಮೂರ್ತಿಯವರು,  ” ತಮ್ಮದೇ ಐಡಿಯಾಲಜಿ” ಹೊಂದಿದ್ದು ದುರಹಂಕಾರ, ಪೂರ್ವಾಗ್ರಹದಿಂದ ಬೈರಪ್ಪನವರನ್ನು ರಾಹುಗ್ರಸ್ತರೆನ್ನುವುದು, ಇತರ ಸಾಹಿತಿಗಳನ್ನು ಕೇತುಗ್ರಸ್ತರೆನ್ನುವುದು ಅವರಿಗೆ ಮಾತ್ರವಲ್ಲ ಕನ್ನಡಕ್ಕೂ ಶೋಭೆ ತರುವುದಿಲ್ಲ.

ಹಿರಿಯ ಸಾಹಿತಿ ಬರಗೂರರು ಅನಂತಮೂರ್ತಿ ಸುರಕ್ಷಾ ವಲಯದಲ್ಲಿದ್ದಾರೆ, ಅವರದೇ ಪಟಲಾಮ್ ಇದೆ … ಎಂದಿದ್ದಾರೆ.  ಅವರು ಎಡ ಪಂಥಿಯರಲ್ಲ,  ಬಲಪಂಥೀಯರೂ ಅಲ್ಲ ನಡುಪಂಥೀಯರು ಎಂಬ  ಚಂಪಾ ಅವರ ಮೂದಲಿಕೆ…. ಇವೆಲ್ಲ ನಮ್ಮಜನಸಾಮಾನ್ಯರೂ ಕನ್ನಡಾಭಿಮಾನಿಗಳ ಮೇಲೆ ಯಾವ ದುಷ್ಪಪರಿಣಾಮ ಬೀರುವುವು ಎಂಬುದನ್ನೇನೂ ಈ ಹಿರಿಯರು  ಚಿಂತಿಸಿದಂತಿಲ್ಲ.

ಯಾರೇನೆ  ಹೇಳಲಿ ಓದುಗರ ಸಂಖ್ಯೆ ಬೆಳೆಯತ್ತಿರಬೇಕು,  ಸಾಹಿತ್ಯಕೃತಿಗಳು, ಕಾದಂಬರಿಗಳು ಜನಸಾಮಾನ್ಯರನ್ನು ತಲುಪುವುದಷ್ಟೇ ಮುಖ್ಯವಲ್ಲವೇ? ಯಾವುದೇ ಸಾಹಿತ್ಯಕೃತಿಗಳು ಹಿರಿಯ ಸಾಹಿತಿಗಳನ್ನು ವಿದ್ವಜ್ಜನರನ್ನು ತೃಪ್ತಿಪಡಿಸಲಿಕ್ಕಾಗಿಯೆ ಹುಟ್ಟಿಕೊಳ್ಳುತ್ತವೆಯೇ …? ಸಾಹಿತ್ಯ ಕೃತಿಗಳು ಸಾಹಿತಿ ವಿಮರ್ಶಕರ ಗುಂಪಿನ ವಲಯಕ್ಕಾಗಿಯೇ ಆ ಮಟ್ಟದ ಐಡಿಯಾಲಜಿಯಲ್ಲಿ ತಯಾರಾಗುವ ಪ್ರಾಡಕ್ಟುಗಳೇನು..? ವಿದ್ವಜ್ಜನರನ್ನು ಮೆಚ್ಚಿಸುವ ಸಾಹಿತ್ಯ ಪ್ರಕಾರವೇ ಬೇರೆ ಇದ್ದೀತು;ಇರಲಿ.  ಹಾಗೆ ನೋಡಿದರೆ,ಯಾವುದೇ ಸಾಹಿತಿಯೊಬ್ಬರ ಕೃತಿಗಳೆಲ್ಲವೂ ವಿದ್ವತ್ ಪೂರ್ಣ ಕೃತಿಗಳೇ (ಮಾಸ್ಟರ್ ಪೀಸ್)  ಆಗಿರುತ್ತವೇನು? ಎಂಬೆಲ್ಲ ಪ್ರಶ್ನೆಗಳುಕಾಡುತ್ತವೆಯಲ್ಲ! ಹಾಗೆ ನೋಡಿದರೆ, ಬೈರಪ್ಪನವರು ಜನಸಾಮಾನ್ಯರ ಸಾಹಿತಿಯಾಗಿದ್ದಾರೆ. ಸಮಾಜದ ಮೇಲೆ ಬೆಳಕು ಚೆಲ್ಲುವ ಕೃತಿಗಳು, ಸಾಮಾನ್ಯ ಜನತೆಯನ್ನು ಮನವನ್ನು ಮುಟ್ಟಿ ತಟ್ಟಿ ಎಚ್ಚರಿಸುವ ಕೃತಿಗಳನ್ನು ಭೈರಪ್ಪನವರು ಬರೆದಿದ್ದಾರೆಂಬುದಕ್ಕೆ ಅವರ ಅಪಾರ ಜನಪ್ರಿಯತೆಯೇ ಸಾಕ್ಷಿ.

ಹಿರಿಯ ಮನಸ್ಕರು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳನ್ನು ಮುಕ್ತ ಮನಸ್ಸಿನಿಂದ ಮೆಚ್ಚಿ ಬೆಂಬಲಿಸಬೇಕಲ್ಲವೇ…..?  ಹಾಗಲ್ಲದೇ, ತಮ್ಮ ಮೂಗಿನ ನೇರಕ್ಕೇ ತಕ್ಕ ಐಡಿಯಾಲಜಿ ಹುಡುಕುವಂತ ಹುನ್ನಾರವೇಕೇ? ವ್ಯರ್ಥ ಪ್ರಲಾಪವೇಕೆ..? ಅದರಿಂದ ನಮ್ಮ ಕನ್ನಡ ನಾಡು ನುಡಿಗೆ ಜನಪರ ಕಾಳಜಿಗೆ ಮತ್ತು ಎಲ್ಲರನ್ನೂ ತಲುಪಬಲ್ಲ  ಸರಳ ಸುಲಭ ಶೈಲಿಯ ಸಾಮಾಜಿಕ ಬದ್ಧತೆಯುಳ್ಳ ಸಾಹಿತ್ಯಲೋಕಕ್ಕೆ ಯಾವ ಪ್ರಯೋಜನವಿದೆ?

ಒಟ್ಟಿನಲ್ಲಿ ಸಾಹಿತ್ಯ ಕೃತಿಯೊಂದು ಕರ ಪತ್ರವೋ,  ಕೇವಲ ವಾಚ್ಯವೋ ಅತ್ಯುತ್ತಮ ಕೃತಿಯೋ ಎಂಬುದನ್ನು ಓದುಗರು ಮೊದಲು ನಿರ್ಧರಿಸುತ್ತಾರಲ್ಲವೇ….. ಭೈರಪ್ಪನವರಂಥವರು ಮಹಾಜನತೆಯ ಕಾಳಜಿಪರವಾಗಿರುವ ಲೇಖಕರು ಯಾವೊಂದು ಪದವಿ ಪುರಸ್ಕಾರ ಬಯಸಿ ಬರೆಯುವವರೇ…?   ಅಂಥ ಪದವಿ ಪುರಸ್ಕಾರ ಅವರನ್ನೇ ಹುಡುಕಿಕೊಂಡು ಬರುತ್ತವೆ.  ಅದಕ್ಕಾಗಿ ಅವರು ಯಾವ ಬಗೆ ತಾಲೀಮು ಮಾಡುವ ಅಗತ್ಯವಿರುವುದಿಲ್ಲ.  ಅಂತೆಯೆ ಅವರಿಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಹುಡುಕಿಕೊಂಡು ಬಂದಿದೆಯಲ್ಲವೇ..?

ಅನಂತ ಮೂರ್ತಿ ಅವ್ರು ಯಾವ ಪಂಥೀಯ…?

ಇತ್ತ ಎಡ ಪಂಥೀಯರನ್ನು ಎದುರು ಹಾಕಿಕೊಂಡು ಅತ್ತ ಬಲ ಬಂಥೀಯರನ್ನೂ ವಿರೋಧಿಸುವಂತೆ ನಾಟಕವಾಡುತ್ತಿರುವ ಹಿರಿಯ ಸಾಹಿತಿ ಡಾ.ಯು.ಆರ್.ಅನಂತ ಮೂರ್ತಿ ಪೂರ್ವಾಗ್ರಹ ಪೀಡಿತರು. ಇಂತಹ ಒಬ್ಬ ಸಾಹಿತಿ ರಕ್ಷಣಾ ವಲಯದಲ್ಲಿ ನಿಂತು ಮಾತನಾಡುವುದಾದರೂ ಏಕೆ ಎಂದು ಹಿರಿಯ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ. ಅನಂತ ಮೂರ್ತಿ ಪತ್ರಿಕೆಯೊಂದರ ಸಾಪ್ತಾಹಿಕದಲ್ಲಿ ಬರೆದ ಲೇಖನದ (ಪ್ರ.ವಾಣಿ-26-06-2011) ಮೂಲಕ ಇತರೆ ಸಾಹಿತಿಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ. …ದೊಡ್ಡ ಸಾಹಿತಿಯಾದ ಅನಂತ ಮೂರ್ತಿ ಅವರ ಮಾತಿಗೂ ಕೃತಿಗೂ ಸಂಬಂಧವಿಲ್ಲದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ಇಂತಹ ಪೂರ್ವಾಗ್ರಹ ಪೀಡಿತರ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು ಎಂದೂ ಹೇಳಿದ್ದಾರೆ( ಕ.ಪ್ರ -28-06-2011).

ಅದೇ ಕ.ಪ್ರ ಪತ್ರಿಕೆಯಲ್ಲಿ ಹಿರಿಯ ಸಾಹಿತಿ ಚಂದ್ರಶೇಖ್ರಪಾಟೀಲರೂ ಅನಂತ ಮೂರ್ತಿ ಎಡವೂ ಅಲ್ಲ ಬಲವೂ ಅಲ್ಲದ ನಡು ಪಂಥೀಯ ಎಂದಿದ್ದಾರೆ. (ನನಗನಿಸುತ್ತದೆ ಅವ್ರು ಅತಂತ್ರೀಯರೋ. ಎಂದು.). ಮುಂಚೆ ವೈದಿಕರು ಇತರರನ್ನು ಕಚ್ಚಾಟಕ್ಕೆ ಬಿಟ್ಟು ಮಜಾನೋಡಿ ಅನುಭವಿಸುತ್ತಿದ್ದರು. ಇದೀಗ ಅಂಥವರ ನಡುವೆಯೇ ಸಂಘರ್ಷ ಹುಟ್ಟಿಕೊಂಡಿದೆ ಎನ್ನುತ್ತಾರೆ ಪಾಟೀಲರು. ಆದರೇನು!

ವೈದಿಕರಾದ ಭೈರಪ್ಪನವರು ಈ ಅಹಮಿಕೆಯ ಮನುಷ್ಯ ಗೊಣಗಿಕೊಂಡರೆ ನನಗೇನು… ಎಂಬಂತೇ ತಮ್ಮ ಸಾತ್ವಿಕ ಮೌನದಿಂದ ಇದ್ದಾರೆ;ಯಾರೆಲ್ಲರನ್ನೂ ಈ ಬಗ್ಗೆ ಚಿಂತನಗೆ ಹಚ್ಚಿದ್ದಾರೆ.

ನಾನು ಯು.ಆರ್.ಅನಂತ ಮೂರ್ತಿಯವರ ಲೇಖನ ಓದಿದ್ದೇನೆ. ಈ ಲೇಖನದ ಉದ್ದಕ್ಕೂ ಅವರ ವಿಕೃತ ವಿಚಾರಗಳು ಮತ್ತು ವಿರೋಧಾಭಾಸಗಳು ಎಂತವ್ರನ್ನೂ ಗೊಂದಗೊಳಿಸುತ್ತವೆ; ಕೆಲವೊಮ್ಮೆ ಅಪಾಯಕಾರಿಯಾದ  ಹೇಳಿಕೆಗಳೆನಿಸುತ್ತವೆ.

ಅವರ ಆ  ” ಸೃಜನಶೀಲತೆಯ ಅಗ್ನಿ ದಿವ್ಯ” ಲೇಖನದ ಆರಂಭದಲ್ಲೇ ಹೀಗೆ ಹೇಳುತ್ತಾರೆ- ಭಾರತೀಯ ಕಾವ್ಯ ಮೀಮಾಂಸೆಯಲ್ಲಿ “ವಿಭಾವ” ಎಂಬ ಶಬ್ದವಿದೆ. ಭಾವವೊಂದು ಸಾಹಿತ್ಯ ಕೃತಿಯಾಗುವಾಗ ಅದಕ್ಕೊಂದು ವಿಭಾವದ ಅಗತ್ಯವಿದೆ. ಅಂದರೆ ಆ ಭಾವವನ್ನು ಧರಿಸಬಲ್ಲ ಒಂದು ಅಥವಾ ಅದನ್ನು ಹೊತ್ತು ಹೆರಬಲ್ಲ ಒಂದು ದೇಹದ ಅಗತ್ಯವಿದೆ- ಅದೇ ವಿಭಾವ.. ನಾವು ಎಲಿಯಟ್ ನಿಂದ ತಿಳಿದುಕೊಂಡ ಆಬ್ಜೆಕ್ಟಿವ್ ಕೊರಿಲೇಟಿವ್ ಕೂಡಾ ಇದೇ ವಿಭಾವ ಎನ್ನುತ್ತಾರೆ.

ಅವರ ಈ ಮಾತಿನ ಜಾಡನ್ನೇ ಹಿಡಿದು ಹೇಳುವುದಾದರೆ, ಆತ್ಮಕ್ಕೊಂದು ದೇಹದ ಅಗತ್ಯವಿರುವಂತೆಯೇ ಭಾವವೊಂದು ಉತ್ತಮ ಸಾಹಿತ್ಯ ಕೃತಿಯಾಗುವಾಗ ಅದಕ್ಕೊಂದು ವಿಭಾವದ ಅಗತ್ಯವಿದೆ. ಅದನ್ನು ಹೊತ್ತು ಹೊರಹಾಕಬಲ್ಲ ದೈವಿಕ ಭಾವದ  ( ದೇಹವುಳ್ಳ ತಾತ್ವಿಕ ನಿರೀಕ್ಷಣಾಭಾವದ) ಸಾಹಿತಿಯ ಅಗತ್ಯವಿದೆ ಎನ್ನುತ್ತದೆ. ಇದಕ್ಕೆ ಅನಂತಮೂರ್ತಿಯವರು ಏನೆನ್ನುತ್ತಾರೋ…

ಬರಗೂರರು ಹೇಳುವಂತೇ ಅನಂತ ಮೂರ್ತಿ ಅವರ ಮಾತು ನಡವಳಿಕೆಗಳು ಒಂದಕ್ಕೊಂದು ತಾಳೆಯಾಗುವುದೇ ಇಲ್ಲ ಎನ್ನುವುದಕ್ಕೇ ಅದೇ ಲೇಖನದ ಇನ್ನೊಂದು ಸಾಲು ಹೀಗಿದೆ ನೋಡಿ- “ಭಾರತೀಯ ಸಿನಿಮಾ ಇರುವ ಹಾಗೆಯೇ ಕನ್ನಡ ಸಿನಿಮಾ ಅನ್ನುವುದೂ ಒಂದಿದೆ. ಇದು ಕನ್ನಡಕ್ಕೆ ತನ್ನದೇ ಆದ ಕೆಲವು ಕೊಡುಗೆಗಳನ್ನು ಕೊಟ್ಟಿದೆ”

ಭಾರತೀಯ ಸಿನಿಮಾ ಇರುವ ಹಾಗೆಯೇ… ಹಾಗೆಂದರೇನು? ಕನ್ನಡ ಸಿನಿಮಾಗಳೆಲ್ಲ ಭಾರತೀಯ ಸಿನಿಮಾ ಅಲ್ಲವೆಂದೇ…?

ದೊಡ್ಡ ಸ್ಥಾನದಲ್ಲಿರುವ ಸಾಹಿತಿಯಾಗಿ ಜ್ಞಾನವೃದ್ಧರೂ ಆಗಿರುವ ಅನಂತ ಮೂರ್ತಿಗಳು ವಸ್ತು ನಿಷ್ಠೆಯಿಂದ ವಿಮರ್ಶೆ ಮತ್ತು ಪರಾಮರ್ಶೆ ಮಾಡಿಕೊಳ್ಳದೇ ಪೂರ್ವಾಗ್ರಹ ಪೀಡಿತರಾಗಿ, ದೇಶವಿದೇಶಗಳಲ್ಲಿ ಅಪಾರ ಜನಮನ್ನಣೆಗಳಿಸಿರುವ ಬೈರಪ್ಪನವರನ್ನು ರಾಹುಗ್ರಸ್ತರೆಂದು ಇತರರನ್ನು ಕೇತು ಗ್ರಸ್ತರೆಂದು ಹೇಳುತ್ತ , ತಾವು ಕನ್ನಡದ ಪ್ರಗತಿಪರ ಕಾಳಜಿಯಿಂದ ದೂರವಾದ ಬುದ್ಧಿಗೂ ಮುಪ್ಪಡರಿದಂತೇ ವಿಕೃತ ಹೇಳಿಕೆಯನ್ನು ನೀಡುವುದೂ,  ನಾಡಿನ ಹಿರಿಯ ಸಾಹಿತಿಗಳೂ ಹಾಗೂ ಜನಸಾಮಾನ್ಯರಿಂದಲೂ ಆಗಾಗ್ಗೆ ಬೈಯಿಸಿಕೊಳ್ಳುವ ಶಾಪಗ್ರಸ್ತರಂತೆ ಕಾಣುವುದು ಅವರಿಗೆ, ಅವರು ಪಡೆದುಕೊಂಡಿರುವ ಸ್ಥಾನಕ್ಕೆ ಶೋಭೆಯಲ್ಲ.

ಕನ್ನಡ ಚಿತ್ರರಂಗ ಮಾತ್ರವಲ್ಲ ಕನ್ನಡ ಟಿ.ವಿ.ಧಾರಾವಾಹಿಗಳೂ ಅದೆಷ್ಟು ಹದಗೆಟ್ಟಿದೆಯೆಂದರೆ….

ಕನ್ನಡ ಚಿತ್ರರಂಗ ಮಾತ್ರವಲ್ಲ  ಕನ್ನಡ ಟಿ.ವಿ.ಧಾರಾವಾಹಿಗಳೂ ಅದೆಷ್ಟು ಹದಗೆಟ್ಟಿದೆಯೆಂದರೆ,  ಅವೇನು ಮನೆ ಮನೆಗಳನ್ನ ಸಮಾಜವನ್ನ ಹಾಳು ಮಾಡಲು ಬಂದಿವೆಯೋ ಏನೋ ಅದನ್ನು ರಿಪೇರಿ ಮಾಡುವುದು ಸುಲಭ ಸಾಧ್ಯವೇನಿಲ್ಲ.
ಆರು ಕೋಟಿ ಜನಸಂಖ್ಯೆಯಲ್ಲಿ  ಅನಕ್ಷರಸ್ಥರು, ಮತ್ತು ಮುಗ್ಧ ಜನಗಳಿಗೇನು ಕಡಿಮೆಯಿಲ್ಲ, ಅವರುಗಳೇ ಅವರ ಸದಭಿರುಚಿಯ ಪ್ರೇಕ್ಷಕರು.  (ಹೆಳಬೇಕೆಂದರೆ, ಅವರುಗಳೆ ಈ ದೇಶ ಜನಪ್ರತಿನಿಧಿಗಳನ್ನು ಆರಿಸುವವರೆಂದರೆ ತಪ್ಪೇನಿಲ್ಲವಲ್ಲ!)
ಇನ್ನು ಕಲೆಯ ಗಾಳಿ ಗಂಧ ಇಲ್ಲದವರು, ಈ ಸಿನಿಮಾ/ಟಿ.ವಿ. ಧಾರಾವಾಹಿ ಇದೆಲ್ಲ ಇಂಡಸ್ಟ್ರಿಯಷ್ಟೇ ಎಂದು ದುಡ್ಡು ಮಾಡಲೆಂದೇ ಬಂದವರು, ಬಂದು ಸೋತವರು. ಕಳಕೊಂಡವರು, ಇಲ್ಲೇ ಹುಡುಕುವವರೂ ಹೆಚ್ಚುತ್ತಲೆ ಇದ್ದಾರೆ.   ಎಲ್ಲೋ ಒಂದು ಉತ್ತಮ ಚಿತ್ರ ಕೊಟ್ಟರೂ ಅದನ್ನು ಎಲ್ಲ ವರ್ಗದ ಪ್ರೇಕ್ಷಕರನ್ನೂ ತಲುಪಿಸಲಾರದೇ ಕಂಗೆಟ್ಟು ಹೋದವರೂ ಇದ್ದಾರೆ.  ಅಪರೂಪಕ್ಕೊಮ್ಮೆ ಒಳ್ಳೆಯ ಸೂಪರ್ ಹಿಟ್ ಚಿತ್ರವೊಂದನ್ನು ಕೊಟ್ಟು, ಹೊಸ ಹುಡುಗನೊಬ್ಬನನ್ನ ದಿನ ಬೆಳಗಾಗೊದ್ರೊಳಗೇ   ಕೋಟ್ಯಾಧಿಪತಿ ಮಾಡಿದವರೂ, ಮತ್ತೆ ಅವನ ಮನೆ ಮಟ್ಟಿಲು ಹತ್ತಲೂ ಆಗದ ನಿರ್ಮಾಪಕರೂ ಇದ್ದಾರೆ!
ಕನ್ನಡದಲ್ಲಿ ಟಿ.ವಿ. ಧಾರಾವಾಹಿಗಳು ಅದೆಷ್ಟು ಅಸಹನೀಯವಾಗಿರುತ್ತವೆಯೆಂದರೆ,  ಇವರೇನು ಕಥೆ, ಚಿತ್ರ ಕಥೆ, ಸಂಭಾಷಣೆ  ಎಂಬುದನ್ನೇ ಬರೆಯದೇನೆ ಸ್ಟಾಟ್ ನಲ್ಲಿ ಅವರ ಮನಸೋ ಇಚ್ಛೆ  ಸೀನ್ ಕ್ರಿಯೇಟ್  ಮಾಡಿ ಷೂಟಿಂಗ್ ಮಾಡ್ತಾ ಇದಾರೆ ಅನ್ನಿಸದೇ ಇರೋದಿಲ್ಲ.  ನಿರ್ಮಾಪಕ ಮತ್ತು ನಿರ್ದೇಶಕ ರಿಗೆ ತಾವು ಮಾಡಿದ್ದೇ ಸರಿ ಪ್ರೇಕ್ಷಕ ನೋಡ್ತಾನೆ;ನೋಡಲೇ ಬೇಕು (ಹಾಗೇ ನೋಡ್ತಾ ಕುಳಿತಲ್ಲೇ ಗೊಣಗುತ್ತಾನೆ; ಅಯ್ಯೋ ಕನ್ನಡಕ್ಕೆ ಎಂಥ ಗತಿ ಬಂತೂ ಅಂತ, ಹಾಗೇ ಸುಮ್ಮನೇ ಬುದ್ಧಿವಂತ ಪ್ರೇಕ್ಷಕ ಚಕ್ ಅಂತ ಜಗಿತಾನೆ ಬೇರೆ ಚಾನೆಲ್  ಗೆ -ಭಾಷೆ ಧಾರಾವಾಹಿ/ಚಿತ್ರಗಳಿಗೆ. ಇಲ್ಲಾ ಟಪ್ ಅಂತ ಆಫ್ ಮಾಡ್ತಾನೆ ಟಿ.ವಿ.ನಾ).
ಮೊನ್ನೆ ಇಲ್ಲೇ ಪ್ರಾಕಾಶ್ ನಗರಕ್ಕೆ ಹೋದಾಗ ರಸ್ತೆ ಮಧ್ಯೆ ಡಾ|| ರಾಜ್ ಕುಮಾರ್ ಅವರ ದೊಡ್ಡ ಕಟ್ ಔಟ್ ನೋಡಿದೆ. ಅದರ ಅಡಿ ಬರಹ-     “ಡಾ|| ರಾಜ್ ಮತ್ತೆ ಹುಟ್ಟಿ ಬಾ”
ಆಗ ಅನ್ನಿಸಿದ್ದು- “ಡಾ|| ರಾಜ್ ಮತ್ತೆ  ಹುಟ್ಟಿ ಬಾ;
ಅಂದಿನ ಭಾವನೆಗಳನ್ನೇ ಕಟ್ಟಿ ತಾ”

ಪರಂಜ್ಯೋತಿ ಸ್ವರೂಪ ಪವಾಡಪುರುಷ ಸತ್ಯ ಸಾಯಿಬಾಬ

“ಶರಣರ ಜೀವನವನ್ನು ಮರಣದಲ್ಲಿ ನೋಡು” ಎಂಬ ಸತ್ಯವಾಕ್ಯಕ್ಕೆ ಇನ್ನೊಂದು ನಿದರ್ಶನ. ದೇವಮಾನವ ಪವಾಡ ಪುರುಷ ಶ್ರೀ ಸತ್ಯ ಸಾಯಿಬಾಬ ಅವರು ಅಸ್ತಂಗತರಾಗಿದ್ದಾರೆ. ಅವರು ಭೌತಿಕ ಶರೀರವನ್ನು ತ್ಯಜಿಸಿದ್ದರೂ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರ ಜನಮಾನಸದಲ್ಲಿ ನೆಲೆಯೂರಿದ್ದಾರೆ;ಯಾರೆಲ್ಲರಿಗೂ ದಿಗ್ ಭ್ರಮೆಯುಂಟುಮಾಡಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ! ನಮ್ಮ ಭಾರತ ಕಂಡ ಮಹಾನ್ ಯೋಗಿಗಳ ಸಾಲಿನಲ್ಲಿ ಸ್ವತಃ ತಮ್ಮನ್ನು ದೇವರೆಂದೇ ಘೋಷಿಸಿಕೊಂಡು, ತಮ್ಮದೇ ವಿಶಿಷ್ಟ ರೀತಿಯಲ್ಲಿ ಜನಸೇವಕರಾದ ಚಿನ್ಮಯಿ ಅವರು.  ತಮ್ಮ ಬಳಿಬಂದ  ಭಕ್ತರಿಗೆ ಹರಸಿ ಹರುಷವನ್ನುಂಟು ಮಾಡಿದ ಮಹಾನ್ ತಪಸ್ವಿ, ಪರಂಜ್ಯೋತಿ ಸ್ವರೂಪ ರೇ ಆದ ಅವರು “ನಾನು ಮತ್ತೆ  ಹುಟ್ಟಿ ಬರುತ್ತೇನೆ’”ಎಂದೇ ಹೇಳಿದ್ದಾರೆ.  ಅವರು ಮರು ಹುಟ್ಟು ಪಡೆಯಲಿ ಎಂದು ಆಶಿಸೋಣ. ಈ ದೇಶದಲ್ಲಿ ಅಂಥ ಆಧ್ಯಾತ್ಮಿಕ ಚೇತನಗಳು ಪುನರಪಿ ಜನನವಾಗುವುದೂ  ನಮ್ಮ ದೈವಶ್ರದ್ಧೆ–ಅಚಲ ನಂಬಿಕೆಯ ದ್ಯೋತಕವೇ ಆಗಿದೆಯಲ್ಲವೇ…

ಸ್ವಾಮಿ ವಿವೇಕಾನಂದರ ಜನ್ಮದಿನ- ರಾಷ್ಟ್ರೀಯ ಯುವ ದಿನ

ಭಾರತ ಸರಕಾರ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಘೋಷಿಸಿ ಆಚರಣೆಗೆ ತಂದಿರುವುದು ಸಂತೋಷದ ಸಂಗತಿ. ನಮ್ಮದೇಶವೇ ಹೆಮ್ಮೆಪಡುವಂತ ಮಹಾನ್ ಸಂತ ಮತ್ತು ರಾಷ್ಟ್ರಪ್ರೇಮಿ ಅವರು. ಸ್ವಾಮಿ ವಿವೇಕಾನಂದರಿಂದ ಸ್ಪೂರ್ತಿ ಪಡೆಯದಿರುವ ಯುವಜನರೇ ಇಲ್ಲವೆಂದರೆ ಉತ್ಪ್ರೇಕ್ಷೇಯಾಗಲಾರದು. ನಮ್ಮ ಹಿರಿಯ ಸಾಹಿತಿಗಳು ಮತ್ತು ಕಲಾವಿದರು ಆದಿಯಾಗಿ ಇಂದಿನ ಯುವ ಪೀಳಿಗೆಯಲ್ಲೂ ಸ್ವಾಮಿವಿವೇಕಾನಂದರ ವಾಣಿಯಿಂದ ಪ್ರಭಾವಿತರಾದವರೇ ಎಲ್ಲೆಲ್ಲೂ ಕಾಣಸಿಗುವರು. ಸೂರ್ಯ ಚಂದ್ರರಿರುವವರೆಗೂ ಸ್ವಾಮಿ ವಿವೇಕಾನಂದರ ಸ್ಮರಣೆಯೊಂದಿಗೇ ಅವರ ಆಧ್ಯಾತ್ಮಿಕ ಚಿಂತನೆಗಳು ವಿಶ್ವದ ಎಲ್ಲೆಡೆ  ಮಾನವ ಜನ್ಮೋನ್ನತಿಗೆ ಮಾರ್ಗದರ್ಶನ ನೀಡುತ್ತಲೇ  ಇರುತ್ತವೆ. ಮನುಷ್ಯ ಆತ್ಮವಿಶ್ವಾಸದಿಂದ ಮಾನಸಿಕ ದೃಢತೆ ಮತ್ತು ದೈಹಿಕ ಸಬಲತೆಯನ್ನು ಸಾಧಿಸಲು ವಿವೇಕಾನಂದರು ನೀಡುವ ಆಧ್ಯಾತ್ಮಿಕ ಚಿಂತನೆಗಳು ತುಂಬ ಸರಳವಾಗಿವೆ. ಜಟಿಲವಾದ ಬ್ರಹ್ಮರಹಸ್ಯಗಳೇನೆ ಇರಲಿ ಎಳೆ ಎಳೆಯಾಗಿ ಬಿಡಿಸಿ ಹೇಳುವ ಅವರ ಪರಿ ವಿಭಿನ್ನ ರೀತಿಯಲ್ಲಿ ಎಂತಹ ಪಾಮರರನ್ನೂ ಆಕರ್ಷಿಸುತ್ತವೆ; ಪರಮ ಪಾಪಿಗಳೂ ಆತ್ಮವಿಮರ್ಶೆಮಾಡಿಕೊಳ್ಳುವಂತೆ ಮಾಡುತ್ತವೆ.
“ದೌರ್ಬಲ್ಯವೇ ಪಾಪ. ದೌರ್ಬಲ್ಯವೇ ಮರಣ.  ವ್ಯಕ್ತಿ ತಾನು ದುರ್ಬಲನೆಂದು ಭಾವಿಸಬಾರದು. ತನ್ನ ದೌರ್ಬಲ್ಯವನ್ನು ಗೆಲ್ಲುವುದರಿಂದ ಏನೆಲ್ಲವನ್ನೂ ಸಾಧಿಸಬಹುದು. ತನ್ನ ಆತ್ಮವಿಶ್ವಾಸದಿಂದ ಎದ್ದು ನಿಲ್ಲಬೇಕು; ತನ್ನೊಳಗಿರುವ ದೈವಿಕತೆಯನ್ನು ಹೊರಚಿಮ್ಮಬೇಕು…” ಎಂಬ ಅವರ ವಾಣಿ ಎಂಥವರನ್ನೂ  ಚಿಂತನೆಗೀಡು ಮಾಡುತ್ತವೆ;  ತಮ್ಮ ಆತ್ಮೋನ್ನತಿಯನ್ನು ತಾವೇ ಕಂಡುಕೊಳ್ಳುವಂತೆ ಮಾಡುತ್ತವೆ.
ಪರಮ ಪಾಪಿಗಳಿಗೂ ಇಲ್ಲಿ ಮತ್ತೆ ಮನುಷ್ಯರಾಗಲು ಅವಕಾಶಗಳಿವೆ ಎಂಬ ಭಗವದ್ಗೀತೆಯ ನುಡಿಯನ್ನು ನೆನಪಿಸುವ ಸ್ವಾಮೀಜಿಯವರು, “ಶ್ರೀ ಕೃಷ್ಣನನ್ನು  ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ” ಎನ್ನುತ್ತಾರೆ.
ಹೌದು, ಶ್ರೀಕೃಷ್ಣ ವಿಲಾಸ ಪ್ರಿಯ, ವಿಚಾರ ಪ್ರಿಯ,  ವಿಶಿಷ್ಟ ವೇದಾಂತ ಸ್ವರೂಪನೇ ಅವನು. ಅವನನ್ನು ಅರ್ಥಮಾಡಿಕೊಳ್ಳಬೇಕಾದರೆ, ಮನುಷ್ಯನಾದವನಲ್ಲಿ ಅತೀವ ವ್ಯಾಕುಲಭಾವ ಸ್ಫರಿಸಬೇಕು, ಆತ್ಮಚೇತನ ಅನಿತ್ಯ ಚಿಂತನೆಯಲ್ಲಿ ಲೀನವಾಗಬೇಕು. ಸ್ವಾಮಿ ವಿವೇಕಾನಂದರ ವಿವೇಕವಾಣಿಗಳು  ಎಲ್ಲ ವೇದಾಂತ ತತ್ವಗಳ ಒರೆಗಲ್ಲಿನ ಮೇಲೇ ನಿತ್ಯ ಜೀವನ ಸಿದ್ಧಾಂತಗಳಿವೆ ಎಂಬುದನ್ನು ತೆರೆದು ತೋರುತ್ತವೆ.  ಅವು ನಮ್ಮ ಬದುಕಿನ ಸಂಕಷ್ಟಗಳನ್ನು ಎದುರಿಸುವ ಶಕ್ತಿ ನಮ್ಮ ಆಂತರ್ಯದಲ್ಲೇ ಇದೆ ಎಂಬುದನ್ನು ತಿಳಿಸುತ್ತವೆ.
ನಮ್ಮ ಜನ ಮೊದಲು ವಿದ್ಯಾವಂತರಾಗಬೇಕು, ಸುಸಂಸ್ಕೃತರಾಗಬೇಕು.  ಪ್ರತಿಯೊಬ್ಬನ ಶಿಕ್ಷಣ ಮಾತೃಭಾಷೆಯಿಂದಲೇ ಆರಂಭವಾಗಬೇಕು. ವಿದ್ಯಾವಂತನಾಗುವುದೆಂದರೆ ಉದ್ಯೋಗಸ್ಥನಾಗುವುದಕ್ಕೆ  ಒಳ್ಳೆಯ ಸಂಪಾದನೆ ಮಾಡುವುದಕ್ಕೆ ಎಂಬ ಭಾವನೆಯೇ ಬೇರೂರಿರುವ ಇಂದಿನ ಕಾಲಮಾನದಲ್ಲಿ ನಾವಿದ್ದೇವೆ…  ಸ್ವಾಮಿ ವಿವೇಕಾನಂದರ ವಾಣಿಯಿಂದ ನಮ್ಮ ಯುವ ಜನತೆ  ಮೊದಲು  ಎಚ್ಚೆತ್ತುಕೊಳ್ಳಬೇಕು. ವಿವೇಕಾನಂದರು ವ್ಯಕ್ತಿ ವಿದ್ಯಾರ್ಜನೆ ಮಾಡುವುದರ ಮೂಲ ಉದ್ದೇಶವೇನೆಂದರೆ ತನ್ನೊಳಗಿರುವ ದೈವತ್ವವನ್ನು ಪ್ರಕಾಶಗೊಳಸಿವುದು ಎನ್ನುತ್ತಾರೆ.  ಹೌದು, ಮಾನವತೆಯ ಅಳತೆಗೋಲೊಂದಿದ್ದರೆ ಅದು ದೈವತ್ವವಲ್ಲದೇ ಇನ್ನೇನು! ಇಂದು ನಾವು ಕಂಡು ಕೇಳುತ್ತಿರುವುದೇನು? ವಿದ್ಯಾವಂತರಾದವರಲ್ಲೇ ಮೂರ್ಖರ ಸಂಖ್ಯೆ ಹೆಚ್ಚುತ್ತಿರುವುದು. ಅಂಥವರಲ್ಲಿ ವಿದ್ಯೆಯಿಂದ ವಿನಯ ನಮ್ರತೆ ಹೆಚ್ಚುವುದರ ಬದಲು ಅಹಂಕಾರದ ಅಂಧಕಾರವೇ ಮೈಮನವನ್ನೆಲ್ಲಾ ಮುಸುಕಿ ಅವರ ಸರ್ವನಾಶಕ್ಕೆ ಕಾರಣವಾಗುತ್ತಿರುವುದು. ಅದಕ್ಕೆ ಕಾರಣವೆಂದರೆ, ಅವರ‍್ಯಾರೂ ವಿದ್ಯೆಯ ನಿಜವಾದ ಅರ್ಥವನ್ನೇ ಅರಿಯದವರು, ಕೇವಲ ದೊಡ್ಡ ಮೊತ್ತದ ಸಂಪಾದನೆಯಿಂದ ಮದೋನ್ಮತ್ತರಾದವರಷ್ಟೇ, ಅಂಥವರಲ್ಲಿ ತಮ್ಮನ್ನು ಹೆತ್ತ ತಂದೆ ತಾಯಿಯವರನ್ನೂ ಹೇಯವಾಗಿ ನಡೆಸಿಕೊಳ್ಳುತ್ತಿರುವವರಿಗೇನೂ ಕಡಿಮೆಯೇನಿಲ್ಲ.  ಸ್ವಾಮಿವಿವೇಕಾನಂದರು ವಿದ್ಯೆಯ ಮಹತ್ವವನ್ನು ಜಗತ್ತಿಗೇ ತಮ್ಮ ಆಧ್ಯಾತ್ಮಿಕ ಸಂವಹನದಿಂದಲೇ ನಿವೇದನೆ ಮಾಡಿದವರು. ಅವರು ಎಲ್ಲ ಜನ ಸಮಾನ್ಯರ ಸಂಕಟಗಳಿಗೆ ಸ್ಪಂದಿಸಿದ ಹೃದಯವಂತಿಕೆಯ ದೊಡ್ಡ ಮಾನವತಾವಾದಿ. ನಮ್ಮ ರಾಷ್ಟ್ರ ಪ್ರೇಮಿ ಮಾತ್ರವಲ್ಲ; ವಿಶ್ವಪ್ರೇಮಿಯವರು.

ತಾವು ಕಲಿತ ವಿದ್ಯೆಯಿಂದಲೆ ಸಂಪತ್ತಿನ ಸೂರೆಯೊಡೆಯುತ್ತಿದ್ದೇವೆಂದು ಮತ್ತರಾಗಿರುವ ಮೂರ್ಖ ವಿದ್ಯಾವಂತರು ಎಚ್ಚೆತ್ತುಕೊಳ್ಳಬೇಕು.  ಸ್ವಾಮೀಜಿ ಹೇಳುತ್ತಾರೆ: “ಸುಖಕ್ಕಿಂತ ದುಃಖವೇ, ಐಶ್ವರ್ಯಕ್ಕಿಂತಲೂ ದಾರಿದ್ರ‍್ಯವೇ, ಹೊಗಳಿಕೆಗಿಂತಲೂ ಪೆಟ್ಟುಗಳೇ ಮನುಷ್ಯನಲ್ಲಿ ಅಡಕವಾಗಿರುವ ಅಂತರಾಗ್ನಿಯನ್ನು ಹೊರಗೆಡಹುದು ಎಂದು ದೈರ್ಯವಾಗಿ ಹೇಳುತ್ತೇನೆ”

ಸಾಮಾನ್ಯವಾಗಿ ಎಲ್ಲ ತಂದೆ ತಾಯಿಗಳು ತಾವು ಕಷ್ಟಪಟ್ಟು ಗಳಿಸಿದುದನ್ನೆಲ್ಲಾ ಧಾರೆ ಎರೆದು ತಮ್ಮ ಮಕ್ಕಳಿಗೆ ಏನೂ ಕಷ್ಟವೇ ಅರಿವಾಗದಂತೆ ಅವರನ್ನು ಸಾಕಿ ಸಲಹಿ ಅವರಿಗೆ ಉನ್ನತ ಶಿಕ್ಷಣ ಕೊಡಿಸುತ್ತಾರೆ.  ಅವರೋ ತಮ್ಮ ಬುದ್ಧಿವಂತಿಕೆಯ ಮಾತ್ರದಿಂದಲೇ  ತಾವು ಚೆನ್ನಾಗಿ ಓದಿ ಮುಂದೆ ಬಂದಿದ್ದೇವೆಂದು ಬೀಗುತ್ತಾರೆ.  ಆ ಬದ್ಧಿವಂತಿಕೆಯಾದರೋ ತಮ್ಮನ್ನು ಹೆತ್ತವರ ವಂಶವಾಹಿನಿಯಿಂದಲೇ ಬಂದುದೆಂಬುದನ್ನೂ ಮರೆಯುತ್ತಾರೆ ಅಲ್ಲವೇ…?
ವಿಶ್ವ ಕವಿ ರವೀಂದ್ರನಾಥ ಠಾಕೂರರು ಸ್ವಾಮಿವಿವೇಕಾನಂದರ ಬಗ್ಗೆ ಹೀಗೆ  ಹೇಳುತ್ತಾರೆ-  ನೀವು ಭಾರತವನ್ನು ಅರಿಯಬೇಕೆಂದರೆ ಸ್ವಾಮಿ ವಿವೇಕಾನಂದರನ್ನು  ಅಧ್ಯಯನ ಮಾಡಿ.  ಅವರಲ್ಲಿ ಎಲ್ಲವೂ ರಚನಾತ್ಮಕವಾದುದಾಗಿದೆ. ನೇತಾತ್ಮಕವಾದದ್ದು ಯಾವುದೂ ಇಲ್ಲ” ಎಂಬುವ ಈ ಮಾತನ್ನು  ನಾವು ಗಮನಿಸಬೇಕು.

ಹೌದು, ಶ್ರೀ  ಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆ ಓದಬೇಕು. ಭಾರತವನ್ನು ಅರಿಯಬೇಕೆಂದರೆ ಸ್ವಾಮಿ ವಿವೇಕಾನಂದರನ್ನು ಅಭ್ಯಸಿಸಬೇಕು. ಅವರು  ಯಾವೊಬ್ಬ ಸಂತರಿಗೂ ಸಾಟಿಯಲ್ಲ; ಅವರಿಗೇ ಅವರೇ ಸಾಟಿ. ಅವರೊಬ್ಬ ಸಂತ ಮಾತ್ರವಲ್ಲ; ಭೂಮಿಗಿಳಿದು ಬಂದ ಭಗವಂತ ಎಂದರೂ ಸರಿಯೇ.  ಸ್ವಾಮಿ ವಿವೇಕಾನಂದ ಅವರ  ಆಧ್ಯಾತ್ಮಿಕತೆಯಲ್ಲಿ ಮತ್ತು ವಿವೇಕವಾಣಿಯಲ್ಲಿ ನಮ್ಮ ಯುವ ಜನತೆಯಲ್ಲಿ ಎಚ್ಚೆತ್ತುಕೊಳ್ಳುವವರು ಎಚ್ಚೆತ್ತುಕೊಳ್ಳತ್ತಲೇ ಇದ್ದಾರೆ.  ತಾವು ವಿದ್ಯಾವಂತರು ಬುದ್ಧಿವಂತರು ತಮಗೆ ಯಾವ ಬೋಧನೆಗಳೂ ಚಿಂತನೆಗಳೂ ಬೇಕಿಲ್ಲ; ಹೆತ್ತವರಿರಲಿ ಮತ್ತೆ ಯಾರೇ ಇರಲಿ ಅವರ ಬುದ್ಧಿವಾದಗಳೇನೂ ತಮಗೆ ರುಚಿಸುವುದಿಲ್ಲ; ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುತ್ತೇವೆ ಎಂದೇ ಸುಮ್ಮನೆ ಬೀಗುತ್ತಾ ವಾದಿಸುವವರೂ ಇದ್ದಾರಲ್ಲ!
ಸ್ವಾಮಿ ವಿವೇಕಾನಂದರೂ ಸಹ ಹೇಳುತ್ತಾರೆ- ನಿಮ್ಮ ಅದೃಷ್ಟವನ್ನೂ ನೀವೇ ಸೃಷ್ಟಿಸಬಲ್ಲಿರಿ”  ಅದು ಹೇಗೆಂಬುದನ್ನು ತಿಳಿಯಬೇಕೇ….ನಮ್ಮ ಎಲ್ಲ ಅಜ್ಞಾನ ಮತ್ತು ಅಹಮಿಕೆಯನ್ನು ದೂರವಿಟ್ಟು ಅವರನ್ನು ಅರಿಯುವ ಪ್ರಯತ್ನವನ್ನಾದರೂ ನಾವು ಮಾಡಬೇಕಲ್ಲವೇ…?

“ಸ್ವಾಮಿಗಳು ನಾವು ಇಂದಿಗೆ ಹೀಗೇ ಇರಬೇಕು…

ಸ್ವಾಮಿ ವಿವೇಕಾನಂದರ ಗುರುಗಳಾದ ಶ್ರೀ ರಾಮಕೃಷ್ಣ ಪರಮ ಹಂಸರಾಗಲಿ, ಸ್ವಾಮಿ ವಿವೇಕಾನಂದರೇ ಆಗಲಿ ಯಾವೊಂದು ಧಾರ್ಮಿಕ ಮತ ಪಂಥ ಸ್ಥಾಪಕರಾಗಲಿಲ್ಲ. ಎಲ್ಲರ ಆಧ್ಯಾತ್ಮಿಕೋನ್ನತಿಯ ಮಾರ್ಗದಲ್ಲಿ ಎಲ್ಲ ಜನತೆಯ ಉದ್ದಾರಕ್ಕಾಗಿಯೆ ಹೊರಟವರು. ಅವರು ಯಾವೊಂದೂ ನೆರವನ್ನೂ ಅಂದಿನ ಬ್ರಿಟಿಷ್ ಸಾಮ್ರಾಜ್ಯದಿಂದ ಅಥವಾ ಶ್ರಿಮಂತ ಮಹಾಶಯರಿಂದ ನಿರೀಕ್ಷಿಸಲಿಲ್ಲ. ಅವರತ್ತ ಸುಳಿಯಲೂ ಇಲ್ಲ. ಅಷ್ಟೇ ಅಲ್ಲ, ತಾವಾಗಿಯೆ ಯಾವ ರೀತಿಯ ಪ್ರಚಾರವನ್ನೂ ಬಯಸಲಿಲ್ಲ. ಅವರ ಅಮೆರಿಕಾ ಪ್ರವಾಸಕ್ಕೆ ಹೇಗೆ ತಾನಾಗಿಯೆ ಅವರೆಡೆಗೆ ನೆರವು ಬಂದಿತೋ ಹಾಗೆಯೆ ವಿಶ್ವದೆಲ್ಲೆಡೆಯಿಂದ ಎಲ್ಲ ಮಾನ ಸಮ್ಮಾನಗಳೂ ಹರಿದು ಬಂದವು. ಸ್ವಾಮೀಜಿಯವರು ಎಂದೆಂದಿಗೂ ಆಚಂದ್ರಾರ್ಕವಾಗಿಯೆ ಉಳಿದರು.

ಆದರೆ, ಇಂದಿಗೆ ನಮ್ಮ ದೇಶದ ತುಂಬೆಲ್ಲ ಸ್ವಾಮೀಜಿಗಳ ದಂಡಿಗೆ ದಂಡೇ ಇದೆ. ಅವರಲ್ಲಿ ಬಹು ಮಂದಿ ನಮ್ಮ ಆಧ್ಯಾತ್ಮಿಕತೆ ಧಾರ್ಮಿಕತೆ ಮತ್ತು ಧ್ಯಾನ ಮನನಗಳನ್ನು Commercialize ಮಾಡಿದ್ದಾರೆ. ರಾಜಕೀಯ ಪ್ರಭಾವ ಪಡೆದು “ಜಾತ್ಯಾ-ಅತೀತ” ಲೆಕ್ಕದಲ್ಲೇ ತಮ್ಮ ಮಠಮಾನ್ಯಗಳ ಉದ್ಧಾರಕ್ಕಾಗಿ ಸರಕಾರದ ಖಜಾನೆಯಿಂದ ಹೇರಳ ಧನಸಹಾಯ ಪಡೆದವರಾಗಿದ್ದಾರೆ.ಇತ್ತೀಚೆಗಿನ ಉದಾಹರಣೆ ಯನ್ನೇ ತೆಗೆದುಕೊಳ್ಳಿ, ಈಗ ನಡೆಯುತ್ತಿರುವ ಏನೇ ಹೊಲಸು ರಾಜಕೀಯಕ್ಕೂ ತಮಗೂ ಸಂಬಂಧವಿಲ್ಲವೆಂದು ತಟಸ್ಥನೀತಿ ಅನುಸರಿಸುವುದನ್ನು ಬಿಟ್ಟು, ತಾವೆಲ್ಲರೂ ನಿತ್ಯವೂ ಹಲವಾರು ಹಗರಣಗಳಲ್ಲಿ ಸುದ್ದಿಗೆ ಗ್ರಾಸವಾಗಿ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಮುಖ್ಯಮಂತ್ರಿಗಳಿಂದ ಕೃಪಾಪೋಷಿತರಾದ ನಾಟಕ ಮಂಡಳಿಯ ಸದಸ್ಯರಂತೆ ಬೀದಿಗಿಳಿದು, ಅವರನ್ನೇ ಅಧಿಕಾರದಲ್ಲಿ ಮುಂದುವರೆಸಬೇಕೆಂದು ಅವರ ಪರವಹಿಸಿ ಪುರಭವನದ ಮುಂದೆ ಧರಣಿ ಮಾಡಿದ್ದನ್ನು ಇಡೀ ಕರ್ನಾಟಕದ ಜನತೆ ದೃಶ್ಯ ಮಾಧ್ಯಮಗಳಲ್ಲಿ ನೋಡಿ ಅಸಹ್ಯಪಡುವಂತಾಯಿತಲ್ಲ!

ಉಹೂಂ! ಅದು ಅಂದಿನ ಕಾಲ, ಇದು ಇಂದಿನ ಕಾಲ. ಸ್ವಾಮಿಗಳು ನಾವು ಹೀಗಿರುವುದೇ.. ಹೀಗೇ ಇರಬೇಕಾಗುತ್ತದೆ ಇಂದಿಗೆ ಸ್ವಾಮಿಗಳಾಗಿ.. -ಎಂಬ ಅಂಬೋಣವೇ ಇರಬಹುದು ಅವರದು ಎನ್ನೋಣವೇ…

೫೪ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಕನ್ನಡ…..

ಇಂದು ನಮ್ಮ ಕನ್ನಡ ನಾಡು ೫೪ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಈ ನಮ್ಮ ನಾಡ ಉತ್ಸವ ಈ ಒಂದು ದಿನಕ್ಕಷ್ಟೇ ಸೀಮಿತವಾಗಿಬಿಡುತ್ತದೆ ಎಂಬ ಅಪಸ್ವರವನ್ನು ತೊಡೆದುಹಾಕಲೆಂದೇನೊ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಸಮಿತಿಯು ನ.೧ ರಿಂದ ಮುಂದಿನ ವರ್ಷ ನ.೧ರವರೆಗೆ “ಕನ್ನಡ ಉಳಿಸಿ ವರ್ಷಾಚರಣೆ” ಹಮ್ಮಿಕೊಂಡಿದೆ. ಬೆಂಗಳೂರಿನ ಮೈಸೂರು ವೃತ್ತದಲ್ಲಿ ನೃಪತುಂಗ ಮಂಟಪ ನಿರ್ಮಿಸಿ ಆಚರಣೆಗೆ ಚಾಲನೆ ನೀಡಿ, ನವೆಂಬರ‍್ ಪೂರ್ತಿ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಹಾಗೂ ರಾಜ್ಯದಾದ್ಯಂತ ವರ್ಷವಿಡೀ ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ನಿಜಕ್ಕೂ ಇದೊಂದು ವಿಶೇಷ, ನಮ್ಮ ನಾಡಿನ ಕನ್ನಡ ಜನತೆಯನ್ನೆಚ್ಚರಿಸುವ ಅವರೆಲ್ಲ ಕನ್ನಡದ ಬಗ್ಗೆ ಮತ್ತೆ ಹೆಮ್ಮೆ ಪಡವಂತೆ ಪುನರ‍್ ಪ್ರಯತ್ನಿಸುವುದು ಕನ್ನಡಾಭಿಮಾನಿಗಳ ಮಹತ್ವದ ಕೆಲಸವೇ ಸರಿ. ಹಿರಿಯರು ಕನ್ನಡದತ್ತ ಹಿನ್ನೋಟ ಹರಿಸಬೇಕು, ತಮ್ಮ ಮಕ್ಕಳಿಗಾಗಿ ಅವರ ಭವಿಷ್ಯದ ದೃಷ್ಟಿಯಿಂದ ಮುಂದಾಲೋಚನೆ ಮಾಡಬೇಕು. ಆ ಪುಟ್ಟಮಕ್ಕಳು ತಮ್ಮ ಬಟ್ಟಲು ಕಂಗಳನ್ನು ತೆರೆದು ಕನ್ನಡದಲ್ಲಿ ಬಾಲ್ಯದಿಂದಲೇ ಆಸಕ್ತಿಯಿಂದ ಓದುವಂತಾಗಬೇಕು.

ಹೌದು, ಯಾವುದೇ ವಿದ್ಯೆಯ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೆ ಆಗಬೇಕು. ಕಾಲ ಬದಲಾಗಿದೆ ಕನ್ನಡದೊಂದಿಗೆ ಇಂಗ್ಲೀಷ್ ಇರಲಿ. ಆದರೆ, ಇಂಗ್ಲೀಷ್ಷೇ ಮುಖ್ಯವೆನಿಸಿ ಅದು ಕನ್ನಡವನ್ನುನುಂಗಿ ನಮ್ಮಕನ್ನಡದ ಕಂದಮ್ಮಗಳಿಗೆ  ಮಾತೃಭಾಷೆಯಿಂದ ನೇರವಾಗಿ ಉಂಟಾಗುವ ಅಮೂಲ್ಯ ಜ್ಞಾನರ್ಜಾನೆಯಿಂದ ವಂಚಿತರನ್ನಾಗಿಸದಿರಲಿ. ನಮ್ಮ ಮಾತೃಭಾಷೆಯಿಂದಲೇ ಆರಂಭವಾಗುವ ಜ್ಞಾನಾರ್ಜನೆಗಿಂತ ಮಿಗಿಲಾದುದು ಬೇರೆ ಇನ್ನೊಂದರಿಂದ ಸಾಧ್ಯವಿಲ್ಲವೆಂಬುದು ಅವರಿಗೆ ತೀರ ತಡವಾಗಿ ತಿಳಿದರೆ ಪಶ್ಚಾತ್ತಾಪಪಡಬೇಕಾದೀತು!!

“ಕನ್ನಡ ಕಣ್ಮರೆಯಾಗುತ್ತಿದೆ” ಎಂಬ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ.
ಇಲ್ಲ, ಹಾಗೆಂದಿಗೂ ಆಗಲಾರದು. ಹಾಗೆ ಒಂದೆಡೆ ಕಂಡು ಬರುತ್ತಿದ್ದರೂ ಅದು ಇನ್ನೊಂದೆಡಯಿಂದ ಪುನರ‍್ ಉತ್ಥಾನವಾಗುತ್ತಲೇ ಇರುತ್ತದೆ.
“ಓ ಕನ್ನಡಿಗ” ನಿನ್ನ ಉದ್ಧಾರ ನಿನ್ನ ಮಾತೃಭಾಷೆಯಿಂದಲೇ… ನಿನ್ನ ಉದ್ಯೋಗಕ್ಕೆ ಅಷ್ಟಿಷ್ಟು ಇಂಗ್ಲೀಷ್ ಇದ್ದರಾದೀತು. ಆದರೆ, ನಿನ್ನ ಜೀವನ ಚೇತನಕ್ಕೆ, ಕನ್ನಡವನ್ನೇ ಮೊದಲ ಉಸಿರಾಗಿ ಕಂಡ ನಿನ್ನ ಜನ್ಮಪಾವನವಾಗಲಿಕ್ಕೆ ಕನ್ನಡವೇ ಬೇಕು,
ಅಂತೆಯೆ, ಕನ್ನಡವ ಮರೆಯದಿರು ಎಂಬ ಧ್ವನಿಯೂ ಮತ್ತೆ ಮತ್ತೆ ಮೊಳಗುತ್ತಲೇ ಇರುತ್ತದೆ.

ನಮ್ಮಲ್ಲಿ ಕನ್ನಡ ಕಲಿತರೆ ಹೊಟ್ಟೆ ತುಂಬುತ್ತದೆಯೇ? ಎಂಬ ಪ್ರಶ್ನೆಯೆ ಕೆಲವರಿಗೆ.
ಅಯ್ಯೋ! ಎನಿಸುತ್ತದೆ ಅವರ ಅರ್ಥಹೀನ ಪ್ರಶ್ನೆಗೆ. ನಮ್ಮ ಪುಟ್ಟ ಮಕ್ಕಳು ಬೆಳೆಯುವುದು ಸುತ್ತ ಮುತ್ತ ಕನ್ನಡ ನುಡಿ ಆಡುವರೊಂದಿಗೇ, ಅದೇ ಉಸಿರಾಗಿ ಬೆಳೆದ ಅವು ನೋಡುವುದು ಆಲೋಚಿಸುವುದು ಎಲ್ಲವೂ ಸ್ವಭಾವಿಕವಾಗಿ ಕನ್ನಡದಿಂದಲೇ…. ಅವರನ್ನು ಇಂಗ್ಲೀಷ್ ನಲ್ಲಿ ಪಳಗಿಸಬೇಕು ಮುಂದೆ ಇಂಗ್ಲೀಷ್ ನಲ್ಲೇ ಪಂಡಿತರನ್ನಾಗಿಸಬೇಕೆಂಬ ಹುನ್ನಾರವುಳ್ಳ ತಂದೆ ತಾಯಿಯರೆಷ್ಟೇ ತಿಪ್ಪರಲಾಗ ಹಾಕಿದರೂ ಅವರು ಮುಂದೆ ಇತ್ತ ಇಂಗ್ಲೀಷ್ ಇಲ್ಲ ಅತ್ತ ಕನ್ನಡವೂ ಬರೋದೆ ಇಲ್ಲದ ಎಡಬಿಡಂಗಿಗಳಾಗಿಬಿಡುವ ಅಪಾಯವೇ ಹೆಚ್ಚು….
ಇದನ್ನೇಕೆ ಆ ಹಿರಿಯರು ಯೋಚಿಸಲಾರರು..?

ನಾನು ಎಷ್ಟೋ ಸಂದರ್ಭಗಳಲ್ಲಿ ಕೆಲ ವಯಸ್ಸಿಗೆ ಬಂದ ಮಕ್ಕಳನ್ನು ಕನ್ನಡ ಪತ್ರಿಕೆಗಳನ್ನು ಓದಲು ಬರುತ್ತದೆಯೇ ? ಎಂದು ಕೇಳಿದ್ದೇನೆ.
“ಇಲ್ಲ, ಅಂಕಲ್ ಕನ್ನಡ ನನಗೆ ಬರೋದೆ ಇಲ್ಲ, ನಾನು ಓದಿದ್ದೆಲ್ಲ ಕಾನ್ವೆಂಟ್..”
“ಮತ್ತೆ, ನಿಮ್ಮ ಮನೆಯಲ್ಲಿ ಮಾತನಾಡೋದು ಕನ್ನಡ ತಾನೇ…”
“ಹೌದು.”
“ನಿಮ್ಮ ತಂದೆ ತಾಯಿಗಳಿಗೆ ಕನ್ನಡ ಓದಲು ಬರೆಯಲು ಬರುತ್ತದೆ ತಾನೇ..”
“ಓಹ್! ಅವರಿಗೆ ಚೆನ್ನಾಗಿ ಬರುತ್ತದೆ. ನಮ್ಮ ಅಮ್ಮಂತೂ ಕನ್ನಡದ ಕಥೆ ಕಾದಂಬರಿಗಳನ್ನೆಲ್ಲ ಓದ್ತಾರೆ!”
“ಛೇ, ಎಂಥ ಕೆಲಸ ಮಾಡಿದ್ದಾರೆ, ನಿಮಗೆ ಕನ್ನಡ ಕಲಿಸದೇನೇ….”
“ಎಲ್ಲಿ ಅಂಕಲ್ ಅವರಿಗೆ ಟೈಮ್ ಎಲ್ಲಿತ್ತು …”
ನಾನು ಮುಂದೆ ಮಾತು ಬೆಳಸಲಿಲ್ಲ. ಮಾತಾಡಿ ಪ್ರಯೋಜನವೇನಿಲ್ಲ, ಆ ಯುವ ಮನಸ್ಸನ್ನು ಘಾಸಿಗೊಳಿಸಬೇಕಲ್ಲ…! ಅಲ್ಲ, ಎಂಥ  ಮೌಢ್ಯ!    ತಮ್ಮ ಮಕ್ಕಳಿಗೆ ತಮ್ಮ ಮಾತೃಭಾಷೆಯಿಂದಲೇ ದೂರವಿಟ್ಟು ಅದನ್ನು ಕಲಿಸದೇ ಎಂಥ ವಂಚನೆ ಮಾಡುತ್ತಿದ್ದಾರಲ್ಲ ಇವರೆಂಥ ತಂದೆ ತಾಯಿಗಳು! ಮುಂದೊಂದು ದಿನ ಅವರೂ ಪಶ್ಚಾತ್ತಾಪಡ ಪಡದಿರಲಾರರಲ್ಲ…

ಇನ್ನೊಂದು ದಿನ ರಾಜಾಜಿನಗರದ ನಮ್ಮ ಸ್ನೇಹಿತರ ಪುಸ್ತಕದ ಅಂಗಡಿಯಲ್ಲಿ ಕುಳಿತಾಗ ಇದೇ ಕನ್ನಡ ಕಣ್ಮರೆಯಾಗುತ್ತಿರುವ ವಿಷಯ ಪ್ರಸ್ತಾಪವಾಯಿತು.
ಅದೂ ಮುಖ್ಯವಾಗಿ ಐಟಬಿಟಿ ಹುಡುಗ ಹುಡುಗಿಯರು ಕನ್ನಡ ಓದೋದೇ ಇಲ್ಲ ಅಭಿಪ್ರಾಯವೂ ನುಸುಳಿತು. ಆಗ ನಮ್ಮ ಸ್ನೇಹಿತರು ತಮ್ಮ ಕೆಲವು ವರ್ಷಗಳ ಪುಸ್ತಕ ಮಾರಾಟದ ಅನುಭವನ್ನೇ ತೆರೆದಿಟ್ಟು ಹೇಳಿದರು-
“ಸರ‍್, ನೀವು ನಮ್ಮ ಅಂಗಡಿಗೆ ತಪ್ಪದೇ ದಿನವೂ ಬನ್ನಿ ಒಂದು ಹದಿನೈದು ದಿವಸ. ಆಗ ನಿಮಗೇ ಗೊತ್ತಾಗುತ್ತದೆ; ಸಾಫ್ಟ್ ವೇರಿಗಳಲ್ಲೂ ಬಹು ಮಂದಿ ಕನ್ನಡ ಕಥೆ ಕಾದಂಬರಿ ಓದ್ತಾರೆ ಅಂತ….”
ನಾನು ನಂಬುವಸ್ಥಿತಿಯಲ್ಲಿರಲಿಲ್ಲ. ಆದರೆ, ಆಗಾಗ್ಗೆ ಮನೆ ಹತ್ತಿರವೇ ಇರುವ ಅವರ ಅಂಗಡಿ ಹೋಗುವುದನ್ನೂ ಬಿಡಲಿಲ್ಲ. ಕ್ರಮೇಣ ನನಗೇ ಗೊತ್ತಾಯಿತು. ಅವರ ಮಾತು ನಿಜಾಂತ. ಯಾಕೆಂದರೆ, ಅಂಗಡಿ ಬರುತ್ತಿದ್ದವರಲ್ಲಿ ಅಂಥ ಸಾಫ್ಟ್ ವೇರಿಗಳಿದ್ದರೆ ಆತ ಕಣ್ಣು ಮಿಟುಕಿಸಿ ನನ್ನತ್ತ ನೋಡಿ ಖಷಿಯಿಂದ ಬೀಗುತ್ತಿದ್ದರು. ನಾನೂ ಕೂಡ ಆ ಹುಡುಗ/ ಹುಡುಗಿಯರನ್ನು ಮಾತನಾಡಿಸಿ ಅದನ್ನು ಖಚಿತವೆಂದು ಮನಗಾಣುತ್ತಿದ್ದೆ.
ಒಂದ್ಸಲವಂತೂ ಹೀಗಾಯ್ತು….!!
ಸಂಜೆ ಸುಮಾರು ೮ ಗಂ. ಹೊತ್ತಿಗೆ ಒಬ್ಬ ೨೫-೩೦ ರ ಆಸುಪಾಸಿನ ಹುಡುಗ ಬೆನ್ನಮೇಲೆ ಲ್ಯಾಪ್ ಟಾಪ್ ಬ್ಯಾಗ್ ಹೊತ್ತು ಅಂಗಡಿ ಪ್ರವೇಶಿಸಿದ. ಆತ ಭೈರಪ್ಪನವರ ಇತ್ತೀಚಿನ “ಕವಲು” ಕೈಗೆ ತೆಗೆದುಕೊಂಡ. ಅದು ಬಹಳ ಕುತೂಹಲ ಕೆರಳಿಸಿದ ಸಮಕಾಲೀನ ಸಮಸ್ಯೆಯುಳ್ಳ ಕಾದಂಬರಿ ಅಲ್ವೇ ಅಂದುಕೊಂಡೆ. ಆದರೇನು! ಆತ ಮುಂದುವರೆದು, ಒಂದಾದ ಮೇಲೊಂದರಂತೆ ಭೈರಪ್ಪನವರ ಇನ್ನೂ ಕೆಲ ಕೃತಿಗಳನ್ನು ಇತರೆ ಕೆಲ ಲೇಖಕರ ಒಂದೆರಡು ಕೃತಿಗಳನ್ನೂ ಆಯ್ದುಕೊಂಡ, ಒಟ್ಟು ಬಿಲ್ಲು ೨೦೦೦ ಹತ್ತಿರವಾಯಿತು. ಆತನಿಗೆ ಅದೇನೂ ದೊಡ್ಡದಾಗಿರಲಿಲ್ಲವೆನಿಸಿತು.
ನಾನು ಅದುವರೆಗೂ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದವನು ಸುಮ್ಮನಿರಲಾರದೇನೆ ಕೇಳಿಯೇ ಬಿಟ್ಟೆ-
“ನೀವೇನು ಕೆಲಸ ಮಾಡ್ತಾ ಇದೀರಿ..?” ಎಂದೆ.
“ಸಾಫ್ಟ್ ವೇರ‍್….”
“ಯಾವ ಕಂಪೆನಿ?”
“ಮೈಂಡ್ ಟ್ರೀ….”
“ಇಂಗ್ಲೀಷೂ ಓದುತ್ತೀರಾ…”
“ಅವ್ವನೌವನಾ…ಅದನ್ನೇನು ಓದೂದು ಸರ‍್ ಒಂದೊಂದು ಪುಟಕ್ಕೂ ಪದಗಳಿಗೆ ಅರ್ಥಹುಡುಕ್ಕೋತ ಕೂರಬೇಕ್ ಸರ‍್… ಕನ್ನಡ ಸರ‍್ ನಮ್ಮ ಮಾತೃಭಾಷೆ ಕನ್ನಡ, ಅದರ ಕಿಮ್ಮತ್ತು ಅದಕ್ಕ ಬರಾಂಗಿಲ್ಲ….ಬಿಡ್ರಿ….”ಅಂದ!
ನನಗೆ ನಗು ಬಂತಾದರೂ ನಾನು ಬೆಪ್ಪಾದೆ! ಆತನಿಂದ ಇಂಥಾ ಉತ್ತರ ನಿರೀಕ್ಷೆ ಮಾಡಿರಲಿಲ್ಲವಲ್ಲ…!
“ನಿಮ್ಮದು ಯಾವ ಊರು ?” ಎಂದೆ.
ಈ ಸಲ ನನ್ನ  ನಿರೀಕ್ಷೆ ಅಷ್ಟು ಹುಸಿಯಾಗಲಿಲ್ಲ.
“ಬೆಳಗಾಂ” ಎಂದ.
ಮುಂದುವರೆದು ಹೇಳಿದ,
“ನಮ್ಮ ಕಂಪೆನಿಯಲ್ಲಿ ಇರೋದು ನಾಲ್ಕೇ ಜನ ಕನ್ನಡಿಗರು ಸರ‍್… ನಾವು ಕೆಲಸದಲ್ಲಿರೋವಾಗ ಇಂಗ್ಲೀಷಲ್ಲೇ ಮಾತಾಡ್ತೀವಿ. ನಾನು ಮೊದಲು ಕನ್ನಡ ಶಾಲೆಯಲ್ಲೇ ಓದಿ ಮುಂದೆ ಬಂದವನು. ಅಷ್ಟು ಮಾತಾಡ್ತೀನಲ್ಲ ಉದ್ಯೋಗಕ್ಕೆ ಸಾಕು. ಸ್ಟೇಟ್ಸ್ ಗೂ ಹೋಗಿ ಬಂದಿದೀನಿ… ಇನ್ನೇನು? ಬಿಡಿ. ಆದರೆ, ನಾವು ಒಟ್ಟಿಗೆ ಕಾಫಿಗೆ, ಲಂಚ್ ಗೆ ಹೊರಗೆ ಬಂದರೆ ನಮ್ಮ ಜೊತೆಗಿರೋ ಆ ಮೂವರೂ ಲೋಕಲೈಟ್ಸ್ ಬೆಂಗಳೂರಿನವರು. ಆದ್ರೂ ಅವರು ನಮ್ಮ ಜೊತೆ ಕನ್ನಡ ಮಾತಾಡಲ್ಲ ಹೊರಗೂ ಕೂಡ,. ಜೊತೆಗೆ ಇರೋ ಬಿಹಾರಿಗಳ ಜೊತೆ ಅವರಿಗೆಂದೇ ಹಿಂದಿಯಲ್ಲಿ ಮಾತಾಡ್ತಾರೆ. ನಮ್ಮ ಹತ್ತಿರ ಮಾತ್ರ ನಮ್ಮದೇ ಕನ್ನಡಕ್ಕೆ ಕನ್ನಡದಲ್ಲಿ ತುಟಿ ಬಿಚ್ಚಲ್ಲ..!!.  ಇದಕ್ಕೆ ಏನನ್ನಬೇಕು ಹೇಳಿ…. ಏನೂ ಮಾಡೊಕಾಗೊಲ್ಲ ಅವರು ಹಂಗೇ ನಾವೂ ಹಿಂಗೇನೇ ನಾವಿರೋದೇ ಹೀಗೇ ಸ್ವಾಮೀ… ಅಂತ ಅಂದುಕೋಬೇಕಷ್ಟೇ…” ಎಂದ.
ನಾನು ಸುಮ್ಮನೆ ಮತ್ತೆ ನಸು ನಕ್ಕೆನಷ್ಟೇ; ಮತ್ತೆ ಮಾತನಾಡಲಿಲ್ಲ.

ಜಾತಿ ಬೇಧವಿಲ್ಲದ ಪಂಕ್ತಿಯೂಟ ಸಾಧ್ಯವೇ….?

ನಾವು ದಲಿತನನ್ನು ಮಠಾಧೀಶರನ್ನಾಗಿ ಮಾಡಲು ಸಿದ್ಧರಿದ್ದೇವೆ. ಹಾಗೆಯೇ ದಲಿತನೊಬ್ಬನನ್ನು ಪೋಪ್ ಮಾಡಲು ನೀವು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದ ಉಡುಪಿ ಮಠದ ಪೇಜಾವರ ಶ್ರೀಗಳಿಗೆ, ಪ್ರತ್ಯುತ್ತರವಾಗಿ ನಾವು ದಲಿತರನ್ನು ಪಾದ್ರಿ ಮಾಡುತ್ತೇವೆ, ಆದರೆ, ಪೇಜಾವರ ಶ್ರೀ ಯಾವುದಾದರೂ ಮಠಕ್ಕೆ ಧರ್ಮಗುರುವಾಗಿ ಅವರನ್ನು ನೇಮಿಸುತ್ತಾರೆಯೇ… ಎಂದು ಮರು ಪ್ರಶ್ನಿಸಿದ್ದಾರೆ ಪಾದ್ರಿಗಳು ಎಂಬ ವರದಿ ಬಂದಿದೆ!

ಅದಿರಲಿ,ಸಾಮಾನ್ಯರಾದ ನಮ್ಮದೊಂದು ಪ್ರಶ್ನೆ, ಉಡುಪಿ ಮಠದಲ್ಲಿ ಶ್ರೀ ಕೃಷ್ಣನ ದರ್ಶನಾನಂತರ ಭೋಜನ ಶಾಲೆಗೆ ಹೊರಟರೆ, ಬ್ರಾಹ್ಮಣರಿಗೇ ಪ್ರತ್ಯೇಕ ಪಂಕ್ತಿ ಭೋಜನ. ಅಲ್ಲಿ ಇತರೆ ಜಾತಿಯವರನ್ನು ಬಿಡುವುದಿಲ್ಲ.  ಒಂದು ವೇಳೆ ಬ್ರಾಹ್ಮಣರಲ್ಲವೆಂದು  ಅನುಮಾನಿಸಿದರೆನ್ನಿ,  ಜನಿವಾರ ಧರಿಸಿದ್ದರೆ ಸಾಕು, ಮರು ಮಾತಿಲ್ಲದೇ  ಒಳಗೆ ಬಿಟ್ಟುಕೊಳ್ಳುತ್ತಾರೆ!
ಅಲ್ಲಾ, ಜನಿವಾರಧರಿಸಿದವರೆಲ್ಲಾ ಬ್ರಾಹ್ಮಣರೇ….? ಜನಿವಾರಧರಿಸಿದವರಲ್ಲೂ ಅನ್ಯಾಹಾರ/ಅನಾಚಾರ ಮಾಡುವರಿಲ್ಲವೇ…? ಕೇವಲ ತುಂಡು ದಾರವೊಂದರಿಂದ ಒಬ್ಬ ಮನುಷ್ಯನ ಜಾತಿಯನ್ನೋ ಚಾರಿತ್ರ‍್ಯವನ್ನೋ ಅಳೆಯುವ ಇಂಥವರ ಸಂಸ್ಕೃತಿಗೇನೆನ್ನಬೇಕೋ….ಮಂತ್ರಾಲಯದ ಮಠದಲ್ಲೂ ಇದೇ ಸಂಸ್ಕೃತಿಯನ್ನು ನಾವು ಕಾಣಬಹುದಾಗಿದೆ…
ಮೊದಲು ಪೇಜವರ ಶ್ರಿಗಳಾದಿಯಾಗಿ ಮಠಾಧಿಪತಿಗಳು ಇಂಥ ಜಾತಿಬೇಧದ ಪಂಕ್ತಿಯೂಟವನ್ನು ನಿಷೇಧಿಸುವ ಕೈಂಕರ್ಯ ತೊಡಲಿ; ಎಲ್ಲರಿಗೂ ಜಾತಿ ಬೇಧವಿಲ್ಲದೇನೆ ಪಂಕ್ತಿಯೂಟ ದೊರಕುವಂತೆ ವ್ಯವಸ್ಥೆ ಮಾಡಲು ಸಾಧ್ಯವೇ ಯೋಚಿಸಲಿ….?.

ಓದು,ಶ್ರವಣ,ಮನನ,ಧ್ಯಾನ ಮತ್ತು ದೃಶ್ಯ ಮಾಧ್ಯಮಗಳು

ಓದು,

ಓದುವುದು ಕೆಳವರ್ಗದ ಹಾಗೂ ಮಧ್ಯಮ ವರ್ಗದ ಜನರಲ್ಲಿ ತೀರಾ ಕಡಿಮೆಯಾಗಿದೆ ಎಂದರೆ ಉತ್ಪ್ರೇಕ್ಷೆಯೇನಿಲ್ಲ….ಇಂತಹ ಮನೆಗಳಲ್ಲಿ ನೋಡಿ ಟಿ.ವಿ.ಉರಿಯುತ್ತಿರುತ್ತದೆ; ಅವರೆಲ್ಲ ಅದರ ಮುಂದೆ ಕುಳಿತು ಬೇಯ್ತಾ ಇರ್ತಾರೆ;ಅಲ್ಲಲ್ಲಾ ನೋಡ್ತಾ ಇರ್ತಾರೆ…. ದಿನ ಪತ್ರಿಕೆ, ವಾರ ಪತ್ರಿಕೆ  ಕಥೆ ಸಾಹಿತ್ಯದ ಪುಸ್ತಕಗಳನ್ನ ಓದೋರು ಎಲ್ಲಿ….? ಹುಡುಕ್ಬೇಕೂ ಹಗಲಲ್ಲೇ ದೀಪಹಚ್ಚೊಂಡೂ…ಇನ್ನೂ ಹೈಲೆವಲ್ ಮನೆಗಳಲ್ಲಿ ಇಂಗ್ಲೀಷ್ ಕ್ರೇಜಿ. ಅಲ್ಲಿನ ಕ್ರೇಜಿ ಬಾಯ್ಸ್ ಗರ್ಲ್ಸ ಇಂಗ್ಲೀಷ್ ಅರ್ಥ ಆಗಲಿ ಆಗದೇ ಇರಲಿ,  ಕಾಮಿಕ್ಸ್ ,ಜೋಕ್ಸ್, ನಾವೆಲ್ಸ್, ಪೇಪರ್ಸ್ , ಮ್ಯಾಗಜಿನ್ ಹಿಡ್ಕೊಂಡಿರ್ತಾವೆ… ಇಲ್ಲದಿದ್ದರೆ ಅವೂ ಟಿ.ವಿ. ಮುಂದೆ ಕೂತಿರುತ್ತವೇ…

ಓದುವುದು ಮನುಷ್ಯನನ್ನಾಗಿ ಮಾಡಿದರೆ ಬರೆಯುವುದು ಅವನನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ ಎನ್ನುತ್ತಾರೆ. ಪರಿಪೂರ್ಣರಾಗುವುದು ಕಷ್ಟ ಸಾಧ್ಯವಾದರೂ, ಆ ದಾರಿಯಲ್ಲಿ ಮುಂದುವರೆಯುವುದಂತೂ ಖಂಡಿತ ಸಾಧ್ಯ.

ಶ್ರವಣ,ಮನನ,ಧ್ಯಾನ…

ಇವು ಮೂರು ಕ್ರಮಾತ್ರಯಗಳಿಂದ ಆಂತರಿಕವಾದ ಅರಿವು. ಅಂತರಾತ್ಮನಲ್ಲೇ ಪರಮಾತ್ಮನ ದರ್ಶನ. ಬದುಕಿನಲ್ಲಿ ಸದಾ ಶಾಂತಿ, ನೆಮ್ಮದಿಗೆ ಇವು ಮೂಲ ಸೋಫಾನಗಳು.
ಶ್ರವಣ ಎಂದರೆ ಆಲಿಸುವುದು ಅಥವಾ ಕೇಳಿಸಿಕೊಳ್ಳುವುದು. ಕೇಳಿಸಿಕೊಳ್ಳವುದರಿಂದ ಅರಿವು ಜಾಗೃತಗೊಳ್ಳುತ್ತದೆ. ಮನನ ಮಾಡುವುದರಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಧಾನ ವೆಂದರೆ, ಮೌನದ ಎಲ್ಲೆಯನ್ನು ಮೀರಿ ನಿಲ್ಲುವುದೇ ಧ್ಯಾನ. ಧ್ಯಾನ ಮಾಡುವುದರಿಂದ ಅಂತರಂಗದಲ್ಲೇ ದಿವ್ಯಾನುಭೂತಿಯುಂಟಾಗುತ್ತದೆ.  ಆ ಅನುಭೂತಿಯಲ್ಲೇ ಭಗವಂತನ ದರ್ಶನ ಎಲ್ಲರಿಗೂ ಆಗಲಾರದಾದರೂ  ದೈವಸಾಕ್ಷಾತ್ಕಾರವೆಂದರೇನೆಂಬ ಅನುಭಾವ ಉಂಟಾಗುತ್ತದೆ.

ಮುಖ್ಯವಾಗಿ ಇಂತಹ ತಾತ್ವಿಕ ವಿಚಾರಗಳಲ್ಲಿ ಶ್ರವಣ ಎಂಬುದು ಅವಜ್ಞೆಗೀಡಾಗುತ್ತಿದೆ.  ಅದೇ ವೈಜ್ಞಾನಿಕವಾಗಿ ಉಪಭೋಗ ವಸ್ತುಗಳ ಮತ್ತು ಭೌತಿಕ ಸುಖಭೋಗಗಳ ವಿಚಾರಗಳಲ್ಲಿ ಎರಡೂ ಕಿವಿಗಳು ನಾಲ್ಕಾಗಿ ಹರವಿಕೊಳ್ಳುತ್ತವೆ!

ಜಗನ್ನಾಥ ದಾಸರು ಹೇಳುತ್ತಾರೆ:-
ಶ್ರವಣ ಮನಕಾನಂದವೀವುದು
ಭವಜನಿತ ದುಃಖಗಳ ಕಳೆಯುವುದು
ವಿವಿಧ ಬೋಗಂಗಳನು ಇಹಪರಂಗಳಲಿತ್ತು ಸಲಹುವುದು||

ಆದರೆ ಇಂದೇನಾಗಿದೆ?
ದೃಶ್ಯ ಮನಕಾನಂದವೀವುದು
ಭವಜನಿತ ದುಃಖಗಳ ಹೆಚ್ಚಿಸುವುದು
ವಿವಿಧ ಭೋಗಂಗಳನು ಇಹಪರಂಗಳಿಂ ಕಿತ್ತು ಕೊಲ್ಲುವುದು||

ಹೌದ್ಹೌದು, ಕೆಟ್ಟದ್ದನ್ನೇ ವೈಭವೀಕರಿಸುವ, ಹಸಿಹಸಿಯಾಗಿ ಹಿರೋಯಿಸಂ, ಹಲ್ಲಲ್ ಕಡಿ,  ಹೊಡಿ ಬಡಿಯಂಥ ಸಿನಿಮಾಗಳು, ಮನೆಹಾಳು ಐಡಿಯಾ ಕೊಡವ ಟಿ.ವಿ. ಧಾರಾವಾಹಿಗಳು,,,,,

ಈವತ್ತೊಂದು ಉದಾಹರಣೆ ನೋಡಿ-
ವಧು ಮದುವೆ ಮಂಟಪದಿಂದ ಪರಾರಿಯಾಗಿದ್ದಾಳೆ! ಆ ಬಳಿಕ ಆ “ಮಹಾ ಸಾಧ್ವಿ” ಅದ್ಹೇಗೋ ಆ ಹುಡುಗನ್ನ ಅಂದ್ರೆ ಅವಳ ಪ್ರಿಯಕರನನ್ನಾ ಅದೇ ಮದುವೆ ಮಂಟಪಕ್ಕೆ ಎಳ್ಕೋಂಡ್ ಬಂದವ್ಳೇ..!!
ಅವಾಗೇನಾಯ್ತೂಂತಿರಾ ಆ ಮಹಾನ್ ಪ್ರೇಮಿ ಮದ್ವೆ ಮಂಟಪದಲ್ಲಿ ಸಿನಿಮಾ ಹೀರೋ ಥರಾ ಪ್ರತ್ಯಕ್ಷವಾಗಿದ್ದನಲ್ಲ ಅವನನ್ನಾ ಅಲ್ಲಿದ್ದ ಆ  ಹುಡುಗಿ ಕಡೆವರೆಲ್ಲಾ ಹಿಡ್ಕೊಂಡೂ ಎದ್ವತದ್ವಾ ಹೊಡೆದ್ರು  ಬಡಿದ್ರೂ ನೋಡಿ…(ಅವನೂ ಸಿನಿಮಾ ಹಿರೋ ತರಾ ಅಲ್ಲಿದ್ದವರನ್ನೆಲ್ಲ ಎತ್ತಿ ಹೊಡೆದೂ ಬಿಸಾಕಾಕಾಯ್ತದಾ… ಹೇಳಿ.? ಅಯ್ಯಯ್ಯೋ ಅಂತ ಅರಚದ್ರೂ ಅವನನ್ನ ಬಿಡಿಸ್ಕೋಳ್ಳೋರು ಎಲ್ಲಿದ್ರೂಂತಿರಾ ಹುಡುಕ್ ಬೇಕಿತ್ತು  ಆ  ಟ.ವಿ. ಕ್ಯಾಮೆರಾದ ಕಣ್ಣಲ್ಲೀ….
ಈ ಹುಡುಗಿ ತನ್ನ ಅಕ್ಕನೋ ಯಾರೋ ಅವಳ ಮಡಿಲಲ್ಲಿ ಮುಖಾ ಮುಚ್ಕಂಡೂ ಅಳೂ ಅಳೂ ಅಳ್ತಾವ್ಳೇ….
ಅಲ್ಲಾ, ಪಾಪ ಆ ಹುಡ್ಗ ಅದೆಲ್ಲೋ ರಗಳೇ  ಇಲ್ದೇ ಅವನಷ್ಟಕ್ಕೇ ಸುಮ್ಕೆ ಇದ್ದವನನ್ನಾ ಹಿರೋ ಥರಾ ಬಾರೋ ನಾನಿವಳ್ನ ಪ್ರೀತಿಸ್ತೀನಿಂತೇಳೋಂತ, ಮದ್ವೆ ಮಂಟಪಕ್ಕೆ ಎಳ್ಕೊಂಡ್ ಬಂದು ಹೀಗೆ ದನಿಗೆ ಹೊಡೆದಂಗೆ ಹೊಡೆಸೋದೆ,
ಅಯ್ಯೋ ಹೊಡಿ ಬೇಡ್ರೀ ಅವನನ್ನಾ ನಾ ಪ್ರೀತಿಸ್ತೀನಿ ಅದಿಕ್ಕೇ ಅವನ ಹಿಂದೆ ಓಡಿ ಹೋಗಿದ್ದೆ ಅಂತನಾದ್ರು ಹೇಳಬಾರ‍್ದೇ…ಈ ಹಾಳಾದೋಳೂ….

ಇದನ್ನೆಲ್ಲಾ  ತೋರಿಸಿದ ಚಾನೆಲ್ ಯಾವ್ದೂಂತ ಗೊತ್ತಾಗಿರಬೇಕಲ್ಲಾ….ಅದೇ ಈ ಪರ‍್ ಪಂಚ ಹೆಂಗೈತೆ ನೋಡೀ ಹೀಗೂ  ಉಂಟಾ.. ಅನ್ನೋ ಟವಿ9

ಒಟ್ಟಿನಲ್ಲಿ, ನಮ್ಮ ಮುಗ್ದರಾದ ಯುವಜನಾಂಗ ಯಾಕೆ ಹೀಗೆ…?  ಇವರಿಗೇಕೆ ಬುದ್ದಿಗೇ ದಾರಿದ್ರಾಂತೀನಿ….
ಹಾಗೇ ಗಮನಿಸಿ ನೋಡಿ ಇಂತಹ ಟಿ.ವಿ.ರಗಳೆ ಜಗಳ, ಫಜೀತಿಗಳಲ್ಲಿ ಸಿಕ್ಕಿ ಅವಿವೇಕಿಗಳಂತಾಗುವವರು ವಿದ್ಯೆ ಕಳೆ ಅಂಬೋದು ಇಲ್ದೇ ಇರೋರೇ ಜಾಸ್ತಿ ಎಂದು ಕಾಣಿಸುವುದೇ ಆಗಿದೆಯಲ್ಲ…?!
ಇಂತಹ ಉದಾಹರಣೆಗಳಿಂದಲಾದ್ರು ನಮ್ಮ ಮುಗ್ದ ಅವಿದ್ಯಾವಂತ  ಜನ ಸಿನಿಮಾ, ಟಿ.ವಿ.ಸೀರಿಯಲ್ ಗಳು ಬೇರೆ ಜೀವನವೇ ಬೇರೆ ಅಂತ ತಿಳ್ಕೋಂಡ್ರೆ ಸಾಕು ಎಷ್ಟೋ ಉದ್ದಾರವಾಗ್ತಾರೆ…

Follow

Get every new post delivered to your Inbox.