Category Archives: ಕಾವ್ಯ

ಕಥೆ ಏಕೆ ಮತ್ತು ಹೇಗೆ ಬರೆಯಬೇಕು…?

ಯಾವುದೇ ವಸ್ತು, ವಿಷಯ, ಘಟನೆ ಬಿಡದೇ ತಿಂಗಳಾನುಗಟ್ಟಲೇ, ವರ್ಷಗಳೇ ಕಾಡಿದಾಗ ಅದು ಕಥೆಯೋ ಕಾದಂಬರಿಯೋ ಆಗಿ ರೂಪ ತಳೆಯುತ್ತದೆ. ಕಥಾ ವಸ್ತುವಿನ ಆಯ್ಕೆ, ಅದು ಬೆರಗೊಡೆದು ಹೇಳಬಹುದಾದ ಹೊಸದೊಂದು ಕಥೆಯಾಗುತ್ತದೆಯೇ ಎಂಬ ಸೂಕ್ತ ಪರಾಮರ್ಶೆ ಮೊದಲಾಗಬೇಕು. ನಂತರ ಕಥಾ ರಚನೆ, ದಟ್ಟವಾದ ವಿವರಣೆ ಇದ್ದೂ ಓದುಗನನ್ನು ಸೆಳೆದುಕೊಳ್ಳುವ  ಆಕರ್ಷಕ ಕಲ್ಪನೆ, ನಿರೂಪಣಾ ತಂತ್ರಗಳಂತಹ ತಾಂತ್ರಿಕ ಸಂಗತಿಗಳವರೆಗೆ ಕಥೆಯ ವ್ಯಾಪ್ತಿ ಹರವು ಇರುತ್ತದೆ.  ಕಥೆ ಬರೆಯುವುದಕ್ಕೆ ಅಗತ್ಯವಾದ ಮೂಲ ಪ್ರೇರಣೆಗಳೆಂದರೆ- ಸ್ವಂತ ಅನುಭವ, ಸಂವೇದನೆ ಮತ್ತು ಸೃಜನಶೀಲ ಪ್ರತಿಭೆಗಳಿಂದ ಬರುತ್ತದೆ.  ಆದರೂ ಕಥಾ ರಚನೆಯ ಕಲೆಗಾರಿಕೆಯು ಅನೇಕ ಶ್ರೇಷ್ಠವಾದ ಕಥೆಗಳ ಆಭ್ಯಾಸಪೂರ್ಣ ಅಧ್ಯಯನದಿಂದ ಮಾತ್ರ ಬರುತ್ತದೆ. ಕನ್ನಡದಲ್ಲಿ  ಮತ್ತು ಅನ್ಯಭಾಷೆಗಳಲ್ಲಿ ಬಂದಿರುವ ನೂರಾರು ಕಥೆಗಳನ್ನು ಎಚ್ಚರದಿಂದ ಓದಿದಾಗ ಆಗುವ ಅನುಭವಗಳಿಂದ ಮತ್ತು ಅವುಗಳ ಅರ್ಥವಂತಿಕೆ ಸೋಪಜ್ಞತೆ ಹಾಗೂ ಶೈಲಿಗಳ ಹಲವು ಸಂಕೀರ್ಣ ಬಗೆಗಳು ಬರೆಯುವವನಿಗೆ ಗೋಚರವಾಗುತ್ತವೆ. ಅಂತಹ ಸಂದರ್ಭದಲ್ಲೂ  ಸ್ವಂತಿಕೆಯಿಂದ ಸೃಜಿಸಲ್ಪಡುವ ಬರವಣಿಗೆಯಲ್ಲಿ ಬರೆಯುವವಗೆ ಅಂತರಂಗದ ಧ್ವನಿಯೊಂದು ಕೇಳಿ ಬರಬೇಕು; ಆಗ ಮಾತ್ರ ಬರವಣಿಗೆ ಸರಾಗ ಸಲಲಿತವಾಗಿ ಸಾಗುತ್ತದೆ. ಸುಭಗ ಶೈಲಿ ಎಂಬುದು ಆನಂತರವಷ್ಟೇ ಪೂರ್ವಭಾವಿ ಸಿದ್ದತೆಯಲ್ಲಿ ಆಗಿರಬಹುದಾದ ಏನೆಲ್ಲ ಅಧ್ಯಯನದಿಂದ ತಂತಾನೆ ಕೂಡಿಬರಲು ಸಾಧ್ಯವಾಗುತ್ತದೆ….
ನನ್ನ ಕಥೆಗಳಿಗೆ…. ಆವರ್ತಕಾಲ…>>>

ದೀಪಾವಳಿ ಹಬ್ಬ

ದೀಪಾಲಂಕಾರ ಲೋಕಶೃಂಗಾರ
ಬೆಳಕು ಚೆಲ್ಲಿದ ಬಾಳ ವಿಹಾರ
ಸಂಭ್ರಮ ಸ್ಫುರಿಸುವ ಹ಼ರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.

ರಕ್ಕಸಲೀಲೆಯ ದಮನಗೊಳಿದ ಧಾತ್ರಿ
ಕತ್ತಲೆ ಕಳೆದು ಜ್ಞಾನ ಉದಿಸಿದ ಜ್ಯೋತಿ
ಹೊಸಬೆಳಕಲಿ ಹೊಸತಿರುವು ನೀಡಿದೆ ಕಾಂತಿ
ಬದುಕಿಗೆ ಸಂತಸ ಚಿಮ್ಮುವ ಹರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.

ಚಟಪಟ ಸಿಡಿಯುತ ಹೊಸ ಬಿರಿಸು ಬಾಣಗಳು
ಎಳೆಯರ ಕಿಲಕಿಲ ಕುಣಿಸುವ ಹಿರಿಯರ ತಣಿಸುವ
ಮನೆ ಮನೆ ಮನಗಳ ಹಗುರಗೊಳಿಸುವ ರಾತ್ರಿ
ಮತ್ತೆ ನಾಳೆಗೆ ನವಶಕ್ತಿ ತುಂಬುವ ಹರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.

ಹೃದಯ ಹೃದಯಗಳ ನಲಿಸಿ ಬೆಸೆಯುವ ಪ್ರೀತಿ
ಹೊಸ ಗೆಲುವಲಿ ಹೊಸ ದಾರಿ ತೋರುವ ದೀಪ್ತಿ
ನವೋದಯವೆ ತೊಲಗಿಸುವುದೆಲ್ಲರ ಭ್ರಾಂತಿ
ಜೀವಕೆ ಚೇತನ ತುಂಬುವ ಹ಼ರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.
-ಎಚ್.ಶಿವರಾಂ ಬೆಂಗಳೂರು

ಆನಂದ ಲೋಕದ ಗುರಿಯಾಗಲಿ

ಆನಂದ ಲೋಕದ ಗುರಿಯಾಗಲಿ
ಅಮೃತವಾಹಿನಿ ಸಿರಿಯಾಗಲಿ
ಹೃದಯಗಳೆಲ್ಲ ಗುಡಿಯಾಗಲಿ
ಆ ಗುಡಿಯ ದೇವರು ಜನರಾಗಲಿ.||

ಪ್ರೇಮದ ಮಾತೆಲ್ಲ ಒಂದಾಗಲಿ
ಒಂದಾದ ಮನವೆಲ್ಲ ಹೂವಾಗಲಿ
ಹೂವಿನ ಮಾಲೆಯು ಬಾಳಾಗಲಿ
ಆ ಬಾಳ ದೇವರು ಜನರಾಗಲಿ.  ||೧||

ಕೇಳಿದ ನೀತಿ ಕರ್ಮವಾಗಲಿ
ಮಾಡಿದ ಕೆಲಸ ಧರ್ಮವಾಗಲಿ
ಧರ್ವದ ದೀಕ್ಷೆಗೆ ಪೂಜೆಯಾಗಲಿ
ಆ ಪೂಜೆಗೆ ದೇವರು ಜನರಾಗಲಿ.||೨|

ಬದುಕಿನ ಭಾಗ್ಯ ಬುವಿಯಾಗಲಿ
ಭಾಗ್ಯದ ಬೆಳಕು ಜ್ಯೋತಿಯಾಗಲಿ
ಜ್ಯೋತಿಯು  ಜ್ಞಾನದ ಗುಡಿಯಾಗಲಿ
ಆ ಗುಡಿಯ ದೇವರು ಜನರಾಗಲಿ.||೩||

-ಎಚ್ .ಶಿವರಾಂ (ಮಾರ್ದನಿ ಕವನ ಸಂಕಲನ)

ರಾಮನವಮಿ ಹಬ್ಬ

ಅದೋ ಯುಗಾದಿ ಬಂದು ಹೊಸ ಹರುಷ
ಚೆಲ್ಲಿ ಹೋಯಿತೆಂದರೆ ಸಾಕು; ಅದರ ಬೆನ್ನಲ್ಲೇ
ಬಂದ ರಾಮನವಮಿಯ ಹೂವು ದವನಗಳೇ
ಎಲ್ಲ ಮನಗಳಲಿ ತುಂಬಿಕೊಂಡು ಘಮಘಮಿಸುವುವು!

ಆಗ ರಾಜಾಜಿ ನಗರದ ರಾಮಮಂದಿರಕೆ ಹೊಸರಂಗು
ಎಲ್ಲಿಲ್ಲದ ಸಡಗರವೋ ಸಡಗರ; ಬಹುಪಾಲು
ನೀರೆಯರ ಉಡಿ ತುಂಬಿದ ನಡೆಯಲಿ ಬಳುಕುತ
ಹೊಮ್ಮುವುದು; ನಮ್ಮ ಸಂಸ್ಕೃತಿಯ ನಯಾಗರ!

ಗುಡಿಯ ಒಳಗೆ  ಶ್ರೀರಾಮಚಂದಿರನ ನೋಟವಂತೂ
ಬಲು ಸುಂದರವೋ ಸುಂದರ; ಯಾರೂ ಮರೆಯದ
ನಿತ್ಯ ಸಂಗೀತೋತ್ಸವ ಸಂಭ್ರಮವೋ ಸಂಭ್ರಮ!

ಹೀಗೆ ಮತ್ತೆ ವರುಷ ಬಂದು ವರುಷ ಕಳೆಯೆ
ಹೊಸ ಹರುಷ, ಹುರುಪನೆಲ್ಲ ಎದೆಗಳಲಿ ತಂಬಿದೆ
ಹೊಸ ಹೊಸ ಭಾವಗಳನೆಲ್ಲ ಅರಸುತ ನಿಂತಿದೆ

ಯಾಕೆ ಬಂತೊ ಈ ಹಬ್ಬ! ಎಲ್ಲಕೂ ರೇಟುಗಳೆ ಜಾಸ್ತಿ
ಒಳಗೇ ಧುಮುಗುಟ್ಟುವುದೇ ಎಲ್ಲಿ ರೀತಿ ನೀತಿ?
ಬೇಡ ಬೇಡ, ನಮ್ಮ ಹೃದಯಗಳಿಗೇಕೆ ಏಟು ಶಾಸ್ತಿ
ಮನೆ ಮನಗಳು ಖಾಲಿ ಆಗದಿರಲಿ ನಾಸ್ತಿ!

ಈ ವಿಚಿತ್ರ ಪ್ರಪಂಚ ನಮ್ಮದೇ ಇಲ್ಲೆ ನಮ್ಮ ಬಾಳ್ವೆಯು
ಈ ವ್ಯವಸ್ಥೆಯಲಿ ದೋಷ ದೂರುಗಳೇನೆ ಇರಲಿ
ಇದ್ದರಿರಲಿ ಗಣಿತ ಗುಣಿತ ಏರಿಳಿತಗಳೆಲ್ಲವೂ.

ಹಬ್ಬ! ಬಂದಿದೆ ಹಬ್ಬ, ರಾಮನವಮಿ ಹಬ್ಬ
ನಿತ್ಯಸತ್ಯ ಪ್ರತಿಪಾದಕ ಸ್ವರೂಪಿ ಶ್ರೀರಾಮನ ಹಬ್ಬ!
ಅವನ ನಾಮಸ್ಮರಣೆಯಲಿ ಇಲ್ಲೆ ಇದೆ ನಮಗೆಲ್ಲವೂ

ಅಗೋ ನಂಬಿನಡೆವ ಎಷ್ಟೋ ಭಕುತರ ಕಾಣಿರೇಕೆ…
ಸುಮ್ಮನೇಕೆ ಮೂಕವಿಸ್ಮಿತರಾಗಿ ಉಳಿವಿರಿ…
ಹಬ್ಬದ ಕೋಸುಂಬರಿ ಪಾನಕ; ನಮ್ಮ ಬದುಕಿಗೆ
ಹೊಸ ಭಾವ ಬಂಧಗಳ ರಸಪಾಕ; ನೋಡಿರೇನು

ಶ್ರೀರಾಮನ ಮೃದು ಮಧುರ ಸಾತ್ವಿಕನಗೆ ನೋಟವು
ಚಿಮ್ಮುತಲಿದೆ ನಮ್ಮ ಜೀವದೊಲುಮೆಯನು ಹೊಸಬೆಳಕಲಿ!

ರಾಮಮಂದಿರ ಬಸ್ ಸ್ಟಾಪು

ಇದೋ ನೋಡಿ ರಾಜಾಜಿ ನಗರದ
ರಾಮಮಂದಿರ ತುಂಬ ಫೇಮಸ್ಸು,
ಇಲ್ಲೇ ಇದೆ ಒಂದು ಸ್ಟಾಪು; ಅಲ್ಲಿಂದ
ಎಲ್ಲಕಡೆಗೂ ಉಂಟು ಬಹಳಷ್ಟು ಬಸ್ಸು!

ಇಲ್ಲೆ ಪಕ್ಕದ ಅರಳಿಕಟ್ಟೆಯಲಿ
ಬೆಂಗಳೂರಿನ ಬೆರಗಿನ ಬಿಂದಾಸ್ ಜೀವನ
ಕತೆಗಳೆಲ್ಲವೂ ಹೊರಳಿ ಸುರಳಿ ಬಿಚ್ಚಿಕೊಳ್ಳುವವು;
ದಾರಿಲಿ ಎದುರಿಗೆ ಹೋಗೊ ಬರೊ ಬಸ್ಸುಗಳು
ಲಕಲಕನೆ ಚಿಮ್ಮುವ ಬಣ್ಣ ಬಣ್ಣದ ನೆರಿಗೆಗಳು!
ಜೊತೆಗೆ  ಓಡುವ ಸುಕ್ಕುಗಟ್ಟಿ ಮಾಸಿದ ಜೀನ್ಸುಗಳು!!

ಕಣ್ಣು ಪಿಳಿಪಿಳುಕಿಸುತ ಸಂಜೆ ಕಟ್ಟೆ ಕಚ್ಚಿ ಕುಳಿತ
ಸೋಮಾರಿಗಳ ಜೊಲ್ಲು ಸುರಿವ ಬಾಯಲ್ಲಿ
ಸೋರಿ ಸೂರೆಯೊಡೆದ ಹಸಿ ಬಿಸಿ ಹಾಸ್ಯಚಟಾಕಿಗಳು!
ಇಲ್ಲೇ ಅವರೊಂದಿಗೆ ನಗೆ ಮುಗುಳು ಹರಿಸುತ
ಕುಳಿತ ಮುದುಕರ ಬೊಚ್ಚುಬಾಯ ಚಪಲಗಳ
ಲುಲಿದುಲಿದು ತೀರಿ ಹೋಗುವವು; ಮತ್ತೇಕೊ
ಬೇಡವೆಂದರೂ ಹೊರಗೆ ಕಾರಿಬಿಡುವಂಥ
ಅವೇ ಪಿಸುಗಿನ ತೀಕ್ಷ್ಣನುಡಿಗಳು!

ಕೆಲವೊಮ್ಮೆ ಇಲ್ಲೆ ಉಂಟು ತೀರಗಂಭೀರ ಚರ್ಚೆಗಳು
ಜೀವನಾನುಭವದ ಮೂಸೆಯಿಂದ ಚಟಪಟನೆ ಸಿಡಿವುವು
ಥಟ್ಟನೆ ಹೊಸಬೆಳಕು;ಹೊಸತಿರುವು ತೋರುವುವು;
ಅದನೆಲ್ಲ ಅರಿವರ‍್ಯಾರೊ, ದಿಟ್ಟೆದೆ ಹೆಜ್ಚೆ ಮುಂದಿಡುವ ಧೀರರ‍್ಯಾರೊ
ಆ ಸಾತ್ವಿಕಪ್ರಭು ಶ್ರೀರಾಮಚಂದ್ರನೊಬ್ಬನೇ ಬಲ್ಲನು!

ಇಗೋ ಬಂತು ಯುಗಾದಿ…

ಇಗೋ ಬಂತು ಯುಗಾದಿ
ನವ ವರುಷದ ನಾಂದಿಗೆ
ಬೇವು ಬೆಲ್ಲ ಹಂಚಿ ತಿನ್ನಿರೆಲ್ಲ
ಮರಳಿ ಬರಲಿ ಚಿತ್ತ ಶಕ್ತಿ ಬಾಳಿಗೆ.

ಮರಗಳಲ್ಲಿ ಎಲೆಗಳುದುರಿ
ಕುಳಿರ್ಗಾಳಿ ತೊಲಗಿದೆ
ಎದೆಗಳಲ್ಲಿ ಹೂಗಳರಳಿ
ಮಧುರ ಭಾವ ಮೊಡಿದೆ.

ಮಾಂದಳಿರಿನ ತೋರಣದಲಿ
ಹಸಿರು ಹೊನ್ನು ಕರೆದಿದೆ
ಮನೆ ಮನಗಳ ಓರಣದಲಿ
ಪ್ರೀತಿ ಪ್ರೇಮ ಮೆರೆದಿದೆ.

ಪಂಚಾಗದ ಶ್ರವಣದಲಿ
ಗ್ರಹಗತಿ ವಿಶ್ಲೇಷಣೆ ನಡೆದಿದೆ
ಅಷ್ಟಾಂಗ ಯೋಗದಲಿ
ನೆಮ್ಮದಿಗೆ ಸಾಧನೆಯೆ ಕಾದಿದೆ.

ಹರೆಯದ ಮಧು ಪಲ್ಲವದಲಿ
ಹೊಸ ಹರುಷವೆ ತೇಲಿದೆ
ಚಂದ್ರಮನ ಡೊಂಕಿನಲ್ಲೂ
ನಗೆಮುಗುಳೇ ಹರಿದಿದೆ.

ಚೈತ್ರದ ಕೋಗಿಲೆಯುಲಿಯಲಿ
ಚಿಂತನೆಗಳು ಗರಿಗೆದರಿ ನಿಂತಿವೆ
ಒಳಗಿನ ಚಿರಚೇತನ ಹುರುಪಿನಲಿ
ಚಿನ್ಮಯ ರೂಪ ತಾಳಿದೆ.

(ನನ್ನ “ಮಾರ್ದನಿ” ಕವನ ಸಂಕಲನದಿಂದ)
-ಎಚ್.ಶಿವರಾಂ

ಇನ್ನಷ್ಟು ಕವನಗಳಿಗೆ- ರೈಟರ್ ಲೈನ್ಸ್  ಕ್ಲಿಕ್ಕಿಸಿ

Follow

Get every new post delivered to your Inbox.