Category Archives: ಇತರೆ…

ಯಾವುದು ಸಾಚಾ? ಯಾವುದು ಮೋಸ? -ಶ್ರೀಯುತ ಯು.ಆರ್. ಅನಂತಮೂರ್ತಿ ಲೇಖನಕ್ಕೆ ಪ್ರತಿಕ್ರಿಯೆ

ಯು.ಆರ್.ಅನಂತ ಮೂರ್ತಿ ಅವರು (ವಿಕ. ಪತ್ರಿಕೆ ತಾ|| 09-06-2011)ಹೇಳಿರುವಂತೆ ನಿಜಕ್ಕೂ ಯಾವುದು ಸಾಚಾ ? ಯಾವುದು ಮೋಸ? ಎಂದು ಯಾರನ್ನೂ ಚಿಂತಿಸುವಂತೆ ಮಾಡುತ್ತದೆ.
“ಸಮಾಜ ಜೀವಿಯಾದ ಮನುಷ್ಯನಲ್ಲಿ ಮಾತ್ರ ಭ್ರಷ್ಟತೆ ಸಾಧ್ಯ ಗಾಂಧಿಯವರಿಗೆ ಇದು ಎಷ್ಟು ಅವರ ಕರುಳಿನ ಬೇನೆಯಂತೆ ಗೊತ್ತಿತ್ತೆಂದರೆ ಅವರನ್ನು ಇಡೀ ಜಗತ್ತು ಮಹಾತ್ಮನೆಂದು ಕರೆವಾಗಲೂ ತನ್ನಲ್ಲಿನ್ನೂ ಭ್ರಷ್ಟತೆ ಉಳಿದಿದೆಯೇ ಎಂದು ಅನುಮಾನಿಸುತ್ತಿದ್ದರು”  ಎಂದು ಲೇಖನ ಆರಂಭವಾಗುತ್ತದೆ.

ಹೌದು, ಇದು ಯಾರೂ ಒಪ್ಪುವಂಥದ್ದು. ಮನುಷ್ಯನಲ್ಲಿ ಇರುವಷ್ಟು ಭ್ರಷ್ಟತೆ ಇನ್ಯಾವ ಪ್ರಾಣಿಯಲ್ಲೂ ಇಲ್ಲವಲ್ಲ. ಭ್ರಷ್ಟತೆಯ ವಿರುದ್ಧ ದನಿಯೆತ್ತುವ ವ್ಯಕ್ತಿಗೆ ತಾನು ಅವರಿಗೆ ತನ್ನ ತೋರು ಬೆರಳು ತೋರಿಸಿದರೆ ತನ್ನೆಡೆಗೇ ನಾಲ್ಕುಬೆರಳುಗಳು ತೋರುತ್ತಿರುತ್ತವೆ ಎಂಬುದು ಶುದ್ಧಹಸ್ತರಿಗೆ ಮಾತ್ರ ಗೊತ್ತಿರುತ್ತದೆ.
ಇಂದಿನ ರಾಜಕಾರಣಿಗಳಲ್ಲಿ ಯಾರು ಶುದ್ಧ ಹಸ್ತರು? ಎಂದು ಹೇಳುವುದು ಕತ್ತಲೆಯಲ್ಲಿ ದುರ್ಬೀನು ಹಾಕಿ ನೋಡಿದಂತೆಯೇ. ವಿರೋಧ ಪಕ್ಷದಲ್ಲಿದ್ದು ಭ್ರಷ್ಟತೆ ವಿರುದ್ಧ ಬೊಬ್ಬೆ ಹಾಕುವಾತನ ಹಿಂದಿನ ಚಾರಿತ್ರ್ಯವೂ ಅಷ್ಟೇ ಹಳಸಲಾಗಿರುತ್ತದೆಂದರೆ ಆಶ್ಚರ್ಯವೇನಿಲ್ಲವಲ್ಲ. ಪ್ರಸ್ತುತದಲ್ಲಿ ಬಾಬಾ ರಾಮ್ ದೇವ್ ಅವರನ್ನಾಗಲಿ ಅಥವಾ ಅಣ್ಣಾ ಹಜಾರೆಯವರನ್ನಾಗಲಿ ಮಹಾತ್ಮ ಗಾಂಧೀಜಿಗೆ ಹೋಲಿಸಲಾಗುವುದಿಲ್ಲ. ಗಾಂಧೀಜಿಗೆ ಗಾಂಧೀಜಿಯೇ ಹೋಲಿಕೆ.  ಅಷ್ಟೇಕೆ ಯಾರೊಬ್ಬರೂ ಹೋಲಿಕೆಯಲ್ಲ. ಬಾಬಾ ರಾಮ್ ದೇವ್ ಮತ್ತು ಅಣ್ಣಾ ಹಜಾರೆಯವರನ್ನೂ ಸಹ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗುವುದಿಲ್ಲವೆಂಬ ಅನಂತ ಮೂರ್ತಿಯವರ ಮಾತು ಒಪ್ಪತಕ್ಕದ್ದೇ.

“ಜಲಿಯನ್ ವಾಲಾ ಬಾಗ್ ನಲ್ಲಿ ಮುಳ್ಳು ಮಲವನ್ನು ತುಳಿದು ಹೊರ ಜಗತ್ತಿನಲ್ಲಿ ಕಾಣುವ ಹಿಂಸೆ ತನ್ನಲ್ಲಿನ್ನೂ ಉಳಿದಿದೆಯೇ ಎಂದು ಪ್ರಶ್ನಿಸಿಕೊಂಡ ಗಾಂಧೀಜಿ ತಮ್ಮನ್ನು ತಾವೇ ಹಿಂಸೆಗೆ ಗುರಿಪಡಿಸಿಕೊಂಡರು ಎಂದು ಹೇಳುತ್ತಾರೆ; ಅನಂತ ಮೂರ್ತಿಯವರು ಹೀಗೆ  ಭ್ರಷ್ಟತೆಯಿಂದ ಪಾರಾಗಿ ತ್ರಿಕರಣಶುದ್ಧಿ ಬಯಸುವುದು ಮನುಷ್ಯನಿಗೆ ಮಾತ್ರ ಸಾಧ್ಯ” ಎಂದೂ ಹೇಳುತ್ತಾರೆ. ಖಂಡಿತ ಹೌದು, ಆದರೆ, ಅಂತಹ ತ್ರಿಕರಣಶುದ್ಧಿ ಗಾಂಧೀಜಿವರಲ್ಲಿತ್ತೆಂದರೆ ಅದನ್ನು ಎಲ್ಲರಲ್ಲೂ ಹುಡುಕುವ ಕಾಲವಿದಲ್ಲ. ಹಾಗೆ ಅದು ಇರಲಿಕ್ಕೆ ಇದು ಆ ಕಾಲವಲ್ಲ, ಇಲ್ಲಿ ನಾವು ನೊಂದು ಉಪವಾಸ ವನ (ಜೈಲು)ವಾಸ ಮಾಡಿದರೂ ಪರವಾಯಿಲ್ಲ; ನಮ್ಮ ಶಾಂತಿಯುತ ಹೋರಾಟದಲ್ಲಿ ಸರಕಾರ ದೌರ್ಜನ್ಯ ನಡೆಸಿದರೆ ಸುಮ್ಮನೆ ತಲೆಕೊಟ್ಟು ಸಾಯುವುದಲ್ಲ ನಮ್ಮನ್ನು ನಾವು ನಮ್ಮನ್ನು ನಾವು ಮೊದಲು ರಕ್ಷಿಸಿಕೊಳ್ಳಬೇಕು. ಅದಕ್ಕೆ ನಾವು ಸಿದ್ಧತೆ ಮಾಡಿಕೊಳ್ಳುವುದು ತಪ್ಪೇನಲ್ಲ ಎಂಬುದು ಬಾಬಾ ರಾಮ್ ದೇವ್ ಅವರ ವಾದವಾಗಿದೆ. ಆದರೆ   ಹನ್ನೊಂದು ಸಾವಿರ ಯೋಧರ ಸೇನೆ ಕಟ್ಟುವ ಭಾವೋದ್ವೇಗದ ಹೇಳಿಕೆ ಮೇಲ್ನೋಟಕ್ಕೆ ಉದ್ರೇಕಕಾರಿಯಾಗಿದ್ದರೂ ಅದರ  ಒಳನೋಟ ಸ್ವಯಂ ರಕ್ಷಣೆಯೇ ಆಗಿರಬಾರದೇಕೆ…? ಹಾಗೆಂದ ಮಾತ್ರಕ್ಕೆ ಬಾಬಾ ಸೇನೆ ಕಟ್ಟಿಯೇ ಬಿಡುವುದೂ ಅಷ್ಟೇನೂ ಸರ್ವ ಸಮ್ಮತವೂ ಅಲ್ಲ. ಅವರ ಗುಂಪಿನಲ್ಲೆ ಭಿನ್ನಾಭಿಪ್ರಾಯವಿದೆಯಲ್ಲ…ಅಷ್ಟೇಕೆ ಸಾಮಾನ್ಯ ಜನತೆಯೂ ಅವರ ಈ ಹೇಳಿಕೆಯಿಂದ ದಿಗ್ಬ್ರಮೆಗೊಂಡಿದೆ. ಆದರೂ  ಸರಕಾರ ನಡುರಾತ್ರಿಯಲ್ಲಿ ನಿಷ್ಪಾಪ ಜೀವಿ ಹೆಂಗಸರು ಮಕ್ಕಳು ವೃದ್ದರು ಎನ್ನದೇ  ದೌರ್ಜನ್ಯ ನಡೆಸಬಹುದಾದರೆ,  ತಮ್ಮ ರಕ್ಕಣೆಗೆ ಭದ್ರತೆಗೆ ಭ್ರಷ್ಟ ರಾಜಕಾರಣಿಗಳು ಕಮಾಂಡೋಗಳನ್ನು ಬಳಸಿಕೊಳ್ಳಬಹುದಾದರೆ, ತಾವೇಕೆ ತಮ್ಮ ನ್ಯಾಯ ಸಮ್ಮತ ಶಾಂತಿಯುತ ಹೋರಾಟಕ್ಕೆ ಆತ್ಮ ರಕ್ಷಣೆಗಾಗಿ ದೇಶಭಕ್ತ  ಸ್ವಯಂ ಸೇವಕರಂಥ ಸೇನೆ ಕಟ್ಟಬಾರದೆಂಬ ಹೇಳಿಕೆಯಷ್ಟೇ ಆಗಿ ಉಳಿದುಬಿಡುವಂತಿದೆ ಬಾಬಾ ರಾಮ್ ದೇವ್ ಅವರದು.

 ”ನೀವೊಂದು ಮನೆಕೊಳ್ಳಲು ಬಯಸುವಿರಿ. ಇದು ಕೇವಲ ನಿಮ್ಮ ನೆಮ್ಮದಿಗಾಗಿ. ಆದರೆ ಮಾರುವಾಗ ಅದನ್ನು ಕೊಳ್ಳುವವನು ಒಂದಿಷ್ಟು ಸಾಚಾ ಹಣಕೊಟ್ಟರೆ, ಇನ್ನೊಂದಿಷ್ಟು ಕಪ್ಪುಹಣವನ್ನು ಕೊಡುತ್ತಾನೆ” ಎನ್ನುತ್ತಾರೆ ಅನಂತ ಮೂರ್ತಿ. ನಾವು ಜನಸಾಮಾನ್ಯರು ಭಾರೀ ಉದ್ಯಮಿಗಳು ಬಿಲ್ಡರ್ ಗಳಲ್ಲ.  ಇಲ್ಲಿ ಮನೆ ಮಾರುವಾತ ಬಡಪಾಯಿ ತನ್ನ ಕಷ್ಟಕ್ಕಾಗಿ ಮನೆ ಮಾರುತ್ತಾನೆ.  ಅವನಿಗೆ ಕಷ್ಟ ನಿವಾರಣೆಗೆ ಹಣ ಬೇಕು ಅಷ್ಟೇ…. ತನಗೆ ಬಂದ ಹಣ ಬಿಳಿಯೋ ಕಪ್ಪೋ ಅವನಿಗೇನು ಗೊತ್ತು.  ಅದು ಅವನಿಗೆ ಬೇಡದ ವಿಷಯವಲ್ಲವೇ…?

 ಅನಂತ ಮೂರ್ತಿ ಮುಂದುವರೆದು ಹೇಳುತ್ತಾರೆ-”ಇನ್ನೊಂದು ಮನೆಕೊಳ್ಳುವಾಗ ನಾವೂ ಕಪ್ಪು ಹಣ ಕೊಡಬೇಕಲ್ಲ, ಅಲ್ಲಿ ಅದನ್ನು ಬಳಸಿಕೊಳ್ಳಬಹುದೆಂದು.”
ನೋಡಿ ಎಂಥ ಮಾತು! ಹಾಗಾದರೆ, ದೇಶದಲ್ಲಿರುವ ನಾವು ನಮ್ಮ ಕಷ್ಟಕ್ಕೆ ನೆಮ್ಮದಿಗೆ ಮನೆ ಮಾರುತ್ತೇವೆಂದರೆ, ನಾವೆಲ್ಲರೂ ಕಪ್ಪುಹಣ ಹೊಂದಿರುವವರು; ಭ್ರಷ್ಟರು ಎಂದೇ ಆರೋಪಿಸಲಾಗವುದೇನು? ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಹೋಲಿಕೆ ಬೇರೆ …ಅವರಿಂದ.

ನನಗೆ ಅನಿಸುತ್ತದೆ- ಕದ್ದು ಹಣ್ಣು ತಿನ್ನುವವನಿಗಿಂತ ಕೆಳಗೆ ಬಿದ್ದ ಸಿಪ್ಪೆ ತಿನ್ನುವ ಬಡಪಾಯಿ ಸಿಕ್ಕಿ ಹಾಕಿಕೊಂಡು  ಪಡಬಾರದ ಹಿಂಸೆ ಅನುಭವಿಸುವುದೂ ಕೂಡ ದೊಡ್ಡ ದುರಂತವೇ…
“….ಅಣ್ಣಾ ಹಜಾರೆ,  ಬಾಬಾ ರಾಮ್ ದೇವ್ ಇಬ್ಬರೂ ಭ್ರಷ್ಟತೆಯ ವಿರುದ್ಧ ಮಾತನಾಡುತ್ತಿದ್ದಾರೆ. ಅಣ್ಣಾ ಅವರು ಮೈತುಂಬಾ ಹೊದ್ದ ಖಾದಿಯಲ್ಲಿ; ಆದರೆ ರಾಮದೇವ್ ಅವರು ಅರೆಬೆತ್ತಲೆಯಾದ ಕಾವಿಯಲ್ಲಿ. ಹಜಾರೆಯವರಲ್ಲಿ ಸರಳತೆ ಇದೆ. ತಾನೇ ಭ್ರಷ್ಟತೆಯಿಂದ ಮುಕ್ತನಾಗಬೇಕೆಂಬ ಹಂಬಲವಿದ್ದಂತೆ ತೋರುತ್ತದೆ. ಕಿಂಚಿತ್ ಸುಖದಲ್ಲಿ ಕಾಲಕಳೆಯುವ ದೃಢತೆಯನ್ನೂ ಅವರು ಸಂಪಾದಿಸಿದ್ದಾರೆ..”

ಅರೆಬೆತ್ತಲೆಯಾಗಿ ಕಾವಿ ಧರಿಸಿರುವ ಬಾಬಾ ರಾಮ್ ದೇವ್ ಅವರ ತೇಜೋ ವಧೆ ಮಾಡುವುದು ಸೂಕ್ತವಲ್ಲ ಎಂಬುದನ್ನು ಅನಂತಮೂರ್ತಿಯವರು ಗಮನಿಸಿದಂತಿಲ್ಲ; ಯಾಕೆಂದರೆ ಅವರು ಸರ್ಕಾರದ ವಕ್ತಾರಂತೆ ಹೇಳಿಕೆ ನೀಡಬಾರದಲ್ಲವೇ.. ಮೈತುಂಬಾ ಖಾದಿ ತೊಟ್ಟ ಹಜಾರೆಯವರಲ್ಲಿ ಸರಳತೆ ಕಾಣುವುದಾದರೆ, ಅರೆ ಬೆತ್ತಲೆಯಾಗಿ ಸಾರ್ವತ್ರಿಕವಾಗಿ ತನ್ನ ಹೆಸರಲ್ಲಿ ಒಂದು ಪೈಸೆ ಕೂಡ ಇಲ್ಲವೆಂದು ಹೇಳುವ,  ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬೆಂಬಲಿಗರನ್ನು ಹೊಂದಿರುವ  ಸಂತ  ಜನಸೇವಕರಂತೆ ಗುರುತಿಸಿಕೊಂಡಿರುವ,  ಬಡವರು ದೀನದಲಿತರ ಕಾಯಿಲೆ ಕಸಾಲೆಗಳಿಗೆ ಯೋಗ ಮತ್ತು ಔಷಧಿಗಳನ್ನು ನೀಡಿ ಪೂಜನೀಯರೂ ಎನಿಸಿರುವ  ಬಾ ರಾಮ್ ದೇವ್ ಸುಖಬೋಗದಲ್ಲಿದ್ದಾರೆಂದು  ಮೂರ್ತಿಯವರು ನೇರವಾಗಿ ಆರೋಪಿಸಿದಂತಾಗುವುದಿಲ್ಲವೇ..? ಅಣ್ಣಾ ಹಜಾರೆಯವರಲ್ಲಿ ತಾನೇ ಭ್ರಷ್ಟತೆಯಿಂದ ಮುಕ್ತನಾಗಬೇಕೆಂಬ ಹಂಬಲವಿದ್ದಂತೆ ತೋರುತ್ತದೆ ಎನ್ನುವ ಮೂರ್ತಿಯವರ ಕಣ್ಣಲ್ಲಿ  ಅರೆ ಬೆತ್ತಲೆ ಸಂತ ಬಾಬಾ ರಾಮ್  ದೇವ್ ಹಾಗೆ ತೋರುವುದಿಲ್ಲ  ಯಾಕಾಗಿ…?

“….ಬಾಬಾ ರಾಮ್ ದೇವ್ ಮಾತ್ರ ಮೀಡಿಯಾಗಳೆ ಸೃಷ್ಟಿಸಿದ ಮನುಷ್ಯ ಎನಿಸುತ್ತದೆ….
ಎನ್ನುವ ಅನಂತ ಮೂರ್ತಿಯವರಿಗೆ ಬಾಬಾರವರ  ಆಧ್ಯಾತ್ಮಿಕ ಶಕ್ತಿಯಿಂದ ಕೂಡಿದ  ಅಂತರಂಗದ ಧ್ವನಿ, ಭ್ರಷ್ಟತೆ, ಕಪ್ಪುಹಣದ ವಿರುದ್ಧ ಅವರ ಗಂಟಾಘೋಷ ಮತ್ತು ಸ್ವಾಭಿಮಾನದಿಂದ ಸಿಡಿದೆದ್ದ ನುಡಿಗಳೆಲ್ಲವನ್ನು , ಕೇವಲವಾಗಿ ಕಾಣುತ್ತಾರೆ ಅಲ್ಲಿ ಚೀತ್ಕಾರ, ಅಹಂಕಾರವಿದೆ ಎನ್ನುತ್ತಾರೆ. “ಅವೆಲ್ಲ ಬಾಬಾ ರಾಮ್ ದೇವ್ ತಮ್ಮ ಗುಂಪನ್ನು ಬೆಳೆಸಿಕೊಳ್ಳುತ್ತ ಹೋಗುವ ಉಪಾಯಗಳು. ಯಾವುದರಲ್ಲೂ ಅವರಾಡುವ ಮಾತು ಸಾಚಾ ಎಂದು ನಮಗನಿಸುವುದಿಲ್ಲ.” ಎಂದು ಅನಂತ ಮೂರ್ತಿಯವರು ನಮ್ಮೆಲ್ಲರ ಪರ ವಕ್ತಾರರಂತೆ ಅನಂತ ಮೂರ್ತಿಯವರು ನುಡಿಯುತ್ತಾರೆ.
ಈಗಾಗಲೇ ವಿಶ್ವದಾದ್ಯಂತ ಮಿಲಿಯಾಂತರ ಭಕ್ತರು ಬೆಂಬಲಿಗರನ್ನು ಹೊಂದಿರುವ  ಬಾಬಾ ರಾಮ್ ದೇವ್ ಅವರಿಗೆ ಗುಂಪುಕಟ್ಟುವ  ಪ್ರಮೇಯವೆಲ್ಲಿಂದ  ಬಂದೀತೋ …
“ಇಡಿ ಕಾಲದ ಚಲನೆಯನ್ನೇ  ಗಾಂಧಿಯಿಂದ , ಬಸವನಿಂದ, ಬುದ್ಧನಿಂದ , ಅಲ್ಲಮನಿಂದ ನಾವು ಕಲಿತದ್ದನ್ನು ಬಾಬಾ ರಾಮ್ ದೇವ್ ಅವರು ಹಿಮ್ಮೆಟ್ಟಿಸುವ ಮನುಷ್ಯನಂತೆ ಕಾಣುತ್ತಾರೆ.. ಇದನ್ನೂ ಕೂಡ ಅವರು ಲಾಭದ ದೃಷ್ಟಿಯಿಲ್ಲದೇ ಮಾಡುತ್ತಿಲ್ಲ” ಯಾರೂ ಕಾಲದ ಪ್ರವಾಹವನ್ನ ಅದರ ಚಲನೆಯನ್ನು ಬದಲಾಯಿಸುವುದು ಶಕ್ಯವಿಲ್ಲ; ಅದು ಸಾಧ್ಯವೂ ಇಲ್ಲ.  ಇಡೀ ಸಮಾಜವನ್ನು ತಿದ್ದುವ ಬಲಾಯಿಸುವುದು ಯಾರೊಬ್ಬರಿಂದಲೂ ಸಾಧ್ಯವಿಲ್ಲ. ಬದಲಾವಣೆ  ಆಗುವುದಿದ್ದರೆ ಪ್ರತಿಯೊಬ್ಬರಲ್ಲೂ ಆಗಬೇಕು. ಹಾಗೇ ಸರ್ಕಾರದಲ್ಲೂ ಆಗಬೇಕಷ್ಟೇ…. ಗಾಂಧೀಜಿಯವರಿಂದ ಕಲಿತದ್ದನ್ನು ನಮ್ಮ ನ್ನು ಆಳುವ ಪ್ರಭುಗಳು ಮತ್ತು ಜನಪ್ರತಿನಿಧಿಗಳು ಇಂದಿಗೂ ಪಾಲಿಸಿಕೊಂಡು ಬರುವಂತಾಗಿದೆಯೇ… ಗಾಂಧೀಜಿ  ಮಾದರಿ ಇಂದಿನ ಸ್ವತಂತ್ರ ಭಾರತದಲ್ಲಿ ಅದೆಷ್ಟು ಪ್ರಸ್ತುತ….?   ಬುದ್ಧ, ಬಸವ, ಅಲ್ಲಮನನ್ನು ಉದಾಹರಿಸುವ ಅನಂತ ಮೂರ್ತಿಯವರು ಏಕೋ ಗಾಂಧೀಜಿಗೆ ಪ್ರಿಯವಾ ಭಗವದ್ಗೀತೆಯ ಕೃಷ್ಣನ ಹೆಸರನ್ನು ಎಲ್ಲೂ ಹೇಳಲು ಇಚ್ಚಿಸುವುದಿಲ್ಲ.  ಸಾತ್ವಿಕ ಪ್ರಭು ಶ್ರೀರಾಮ ಚಂದ್ರನ  ಸ್ಮರಿಸಿಕೊಳ್ಳುವುದಿಲ್ಲ.  ಅವರು ಬಹಳ ವರ್ಷಗಳ ಹಿಂದೆ ತರಂಗ ವಾರ ಪತ್ರಿಕೆಗೆ( ತರಂಗರ ಪತ್ರಿಕೆ ದಿನಾಂಕ:19-02-1995) ಸಂದರ್ಶನ ನೀಡುವಾಗ ಹೇಳಿದ್ದಾರೆ- “ಕ್ರಿಸ್ತ ಚಾರಿತ್ರಿಕ ವ್ಯಕ್ತಿ, ಮಹಮ್ಮದ್ ಚಾರಿತ್ರಿಕ ವ್ಯಕ್ತಿ…. ರಾಮ ಹುಟ್ಟಿದ್ದು ಅಯ್ಯೋದ್ಯೆಯಲ್ಲಲ್ಲ;  ಗೋಡ್ಸೇ ಗುಂಡಿಕ್ಕಿ ಅವರನ್ನು ಹೋಡೆದಾಗ ಅವರ ಬಾಯಲ್ಲಿ   ರಾಮ …” ಹುಟ್ಟಿದ ಎಂದು ವ್ಯಂಗವಾಡಿದ್ದರು.  ಅಷ್ಟೇ ಅಲ್ಲ  ಅವರ ಅಂದಿನ ಸಂದರ್ಶನ ಉದ್ದಕ್ಕೂ ಅಂತ ವಿಚಿತ್ರ ಹೇಳಿಕೆ ಗಳೇ ಇವೆ!   ಅವರೇ ಅಲ್ಲಿ ಹೇಳಿದ್ದಾರೆ  ತುಂಬಾ ಬುದ್ಧಿವಂತರನ್ನು ಕನ್ನಡ ಪತ್ರಿಕೆಗಳು ಒಪ್ಪಿಕೊಳ್ಳುವುದಿಲ್ಲ. ( ಈ ಬಗ್ಗೆ  ನಾನು ಹಿಂದೇ   ಬ್ಲಾಗ್  ಮಾಡಿದ್ದಿದೆ)  ಇದೇ ಕಾಲದ ಪ್ರವಾಹವಲ್ಲವೇ…? ಕನ್ನಡ ಜನಪ್ರಿಯ ಪತ್ರಿಕೆ ವಿ.ಕ. ಅವರನ್ನು ಒಪ್ಪಿಕೊಂಡಿದೆ.  ವಿಪರ್ಯಾಸವೆಂದರೆ  ಆಗ ಅವರ ಹೇಳಿಕೆಗಳಿಗೆ ಯಾವ ಪ್ರತಿಭಟನೆಯೂ ನಡೆಯಲಿಲ್ಲ ಅದೇ ಕನ್ನಡಿಗರ  ಸಹಿಷ್ಣತೆ!

“”ಪೆದ್ದು ಸರಕಾರ, ಸಾಚಾ ಅಣ್ಣಾ ಮತ್ತು ಕುಟಿಲ ಬಾಬಾ….. ಎಂದು ಹೇಳುತ್ತ ತಮ್ಮ ಕೊನೆಯ ಮಾತೆಂದು ಹೇಳುತ್ತಾರೆ- ಎಮರ್ಜೆನ್ಸಿಯನ್ನು ಜಯಪ್ರಕಾಶ ನಾರಾಯಣರು ತಮ್ಮ ಸಾತ್ವಿಕ ಹಿಂಬಾಲಕ ಮುಖಾಂತರ ವಿರೋಧಿಸಲು ಆಗಲಿಲ್ಲ. ಅವರು ಸಂಘ ಪರಿವಾರವನ್ನು ಬೆನ್ನಿಗೆ ಇಟ್ಟುಕೊಂಡು ಹೋರಾಡಬೇಕಾಯಿತು….ಅಣ್ಣಾ ಹಜಾರೆ ಬಳಗವೂ ಹೀಗೆಯೆ ರಾಮ್ ದೇವ್ ಅವರನ್ನು ಬೆನ್ನಿಗೆ ಇಟ್ಟುಕೊಂಡರೆ ಅದು ಅಪಾಯವಾದೀತು.   ಹಾಗೇನಾದರೂ ಆದರೆ ಅದು ಇಡೀ ನಾಗರೀಕತೆಗೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ….”

ಅದು ಹೇಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆಯೋ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆಯಲ್ಲವೇ…?
ಅನಂತ ಮೂರ್ತಿಯವರೇ ಹೇಳುವಂತೆ ಗಾಂಧಿ ಕಾಲದಲ್ಲಿ ಸತ್ಯಾಗ್ರಹ ವೆಂಬ ಪದ ಬಳಸುವ ಮುನ್ನ ಅದನ್ನು ಪ್ಯಾಸೀವ್ ರೆಸಿಸ್ಟೆನ್ಸ್  ಎನ್ನಲಾಗುತ್ತಿತ್ತು.

ಪ್ಯಾಸೀವ್ ರೆಸಿಸ್ಟೆನ್ಸ್ ನಲ್ಲಿ ಕೂಡ ಹಿಂಸೆಯೇ ಪ್ರತ್ಯಕ್ಷವಾಗುತ್ತದೆ ಎಂಬ ಹಣೆಪಟ್ಟಿ ಕಟ್ಟಲಾಯಿತು ಎನ್ನುತ್ತಾರೆ.   ಅಂದು ಆ ಮಾತನ್ನು ಗಾಂಧೀಜಿ ವಿರೋಧಿಸಿದ್ದ್ರರು.  ಆದರೇನಾಯಿತು ಆಗ…
ಹೌದು, ಈಗ ಆಗುತ್ತಿರುವೂದ ಅದೇ ಆಗಿದೆ.  .ಗಾಂಧೀಜಿಯ ಕಾಲದಲ್ಲಿ ಪ್ಯಾಸೀವ್ ರೆಸಿಸ್ಟೆನ್ಸ್ ಅಥವಾ ಗಾಂಧೀಜಿವರೆ ಕರೆದ ಸತ್ಯಾಗ್ರ ದಲ್ಲೂ ಕೂಡ ಜಲಿಯನ್ ವಾಲಾ ಬಾಗ್ ನಂತ ಘೋರ ಹಿಂಸೆಯೇ ಪ್ರತ್ಯಕ್ಷವಾಯಿತಲ್ಲವೇ…?
ರಾಜಕಾರಣಿಗಳ ಉಪವಾಸ ನಗೆಪಾಟಲಿಗೀಡಾಗುತ್ತದೆ ಎನ್ನುವ ಅನಂತ ಮೂರ್ತಿಯವರು ಹಾಗೆ ಉಪವಾಸ ಸತ್ಯಾಗ್ರಹ ಮಾಡಿ ಮಮತಾ ಬ್ಯಾನರ್ಜಿಯವರು ಟಾಟಾ ಸಮೂಹವು ಸಿಂಗೂರಿನಿಂದ ಕಾಲ್ತೆಗೆಯುವಂತೆ ಮಾಡಿದ್ದನ್ನು  ಒಂದು ಮಾದರಿ ಎಂದು ಬಣ್ಣಿಸುತ್ತಾರೆ. ಮೇಧಾ ಪಾಟ್ಕ ರ್ ಅವರು ನರ್ಮದಾ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಅಣೆಕಟ್ಟನ್ನು ವಿರೋಧಿಸಿ ಹೋರಾಟ ನಡೆಸಿದ್ದನ್ನೂ ಹೊಗಳುತ್ತಾರೆ.

ಆದರೆ,  ಅಂದಿಗೆ ಆ ಹೋರಾಟಗಳ್ಯಾವುವೂ ಸರಕಾರದ ರೀತಿ ನೀತಿ ಧೋರಣೆ ಮತ್ತು ರಾಜಕೀಯದಲ್ಲಿ ಪಳಗಿದ ಮಹಾ ಧುರೀಣರ ಕಪ್ಪು ಹಣದ ಬಂಡವಾಳವನ್ನೇ ಪ್ರಶ್ನಿಸುವಂಥ  ದೊಡ್ಡ ಹೋರಾಟ ಅದಾಗಿರಲಿಲ್ಲ ಎಂಬುದನ್ನು  ಅನಂತ ಮೂರ್ತಿ ಹೇಳಲು  ಮರೆಯುತ್ತಾರೆ.  ಆದ್ದರಿಂದ, ಸರ್ಕಾರ ಮಮತಾ, ಮೇಧಾ ಅವರ ಹೋರಾಟದಲ್ಲಿ ತನಗೇನೂ ಹಾನಿಯಿಲ್ಲವೆಂದು  ತೆಪ್ಪಗಿತ್ತು. ಇದೀಗ  ತನ್ನ ಬುಡವನ್ನೇ ಪ್ರಶ್ನಿಸಿದಾಗ ಅದು ಪೆಚ್ಚಾಗಿದೆ!  ಸ್ಯಾಡಿಸ್ಟ್ ನಂತೆ ಹಗಲೆಲ್ಲ ಸುಮ್ನನಿದ್ದು ರಾತ್ರೋರಾತ್ರಿ ಹೆಂಗಸರು ಮಕ್ಕಳೆನ್ನದೇ ಸತ್ಯಗ್ರಹ ನಡೆಸುತ್ತ ತೂಕಡಿಸುತ್ತಿದ್ದವರ ಮೇಲೆ ದೌರ್ಜನ್ಯವೆಸಗಿ ಘೊರ ಕೃತ್ಯ ನಡೆಸಿಬಿಟ್ಟಿದೆ…
“ಉಪವಾಸವೇ ಎಲ್ಲವೂ ಅಲ್ಲ.  ನಾವು ಉಪವಾಸವನ್ನು ಮುಖ್ಯವಾಗಿ ಆಚರಿಸಬೇಕಾಗಿರುವುದು ಆತ್ಮ ಸಂಯಮಕ್ಕಾಗಿ ಎಂದು ವಿಶ್ವದಾಚೆಗೂ ತನ್ನ  ಪ್ರಖರತೆ   ಸ್ವರೂಪವನ್ನು ಬೀರಬಲ್ಲ  ಉಪವಾಸವನ್ನು ಸೀಮಿತಗೊಳಿಸಿಬಿಡುವ ಅನಂತ ಮೂರ್ತಿಯವರು,

ಹೀಗೆ ಗಾಂಧೀಜಿ ಮಾಡಿದ ಉಪವಾಸ ಸತ್ಯಗ್ರಹ ಹೋರಾಟವನ್ನೂ ನಾವು ಸಂಶಯದಿಂದ ನೋಡುವಂತೆ ಗೊಂದಲದಲ್ಲಿ ಬೀಳಿಸುತ್ತಾರೆ.  ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಲಯಬೇಕಿರುವುದು ನಮ್ಮ ಪ್ರಾಮಾಣಿಕತೆಯಲ್ಲಿ  ಎಂದು ಅವರು ಹೇಳಿದ್ದರೆ ಒಪ್ಪ ಬಹುದಿತ್ತು.  ”ಪ್ರಾಮಾಣಿಕ ಮೌನದಲ್ಲಿ ” ಎನ್ನುತ್ತಾರೆ.  ಗಾಂಧೀಜಿ ಮಾಡಿದ ಸ್ವಾತಂತ್ರ ಹೋರಾಟದಲ್ಲಿ ಅವರೆಂದೂ ತುಟಿ ಬಿಚ್ಚದ ಮೌನಿಗಳಾಗಿ ಸತ್ಯಾಗ್ರಹ ಮಾಡಿದ್ದರೆಂದೇನು?!

ಅಥವಾ ಭ್ರಷ್ಟಾರ ವಿರುದ್ಧ ಹೋರಾಟವೆಂದರೆ ಪ್ರಾಮಾಣಿಕವಾದ ಮೌನವೇನು? ಹಾಗೆಂದರೇನು? ಅದನ್ನು  ಅನಂತ ಮೂರ್ತಿಯವರೇ  ವಿವರಿಸಿಹೇಳಬೇಕು.  ಅವರೇ   ಹಿಂದೊಮ್ಮೆ ಹೇಳಿದಂತೆ  ಅವರಂಥ  ತುಂಬಾ ಬುದ್ಧಿವಂತನ್ನು   ಜ್ಞಾನಿಗಳನ್ನು  ಕನ್ನಡ ಪತ್ರಿಕೆಗಳು ಮಾತ್ರವಲ್ಲ  ನನ್ನಂಥ ಜನಸಾಮಾನ್ಯರೂ ಒಪ್ಪಿಕೊಳ್ಳುವುದಿಲ್ಲ  ಅಲ್ಲವೇ..?

ಬಾಬಾ ರಾಮ್ ದೇವ್ ಉಪವಾಸ ಸತ್ಯಾಗ್ರಹ

 

ಅಂದು ಗಾಂಧಿ ಇಂದು ಬಾಬಾ ರಾಮ್ ದೇವ್

 

From the Ruling party side it was heard that- 

“Who is scared of Ramdev?’
64 years back the British rulers was under the same impression-

“Who is scared of Gandhi?

ಜಗತ್ತಿನಲ್ಲಿ ಅನರ್ಥಕಾರಿಗಳ ನಡುವೆ ಹೆಣ್ಣು…

ಇಡೀ ಜಗತ್ತಿನಲ್ಲಿ  ಅನರ್ಥಕಾರಿಗಳೇ ಹೆಚ್ಚು ಸುಖಿಗಳಾಗಿ  ಕಾಣುತ್ತಾರೆ. ಅವರಿಗೆ ಯಾವ ಬದುಕಿನ ಅರ್ಥವೂ ಬೇಕಿಲ್ಲ. ಆರ್ಥಿಕಾನುಕೂಲತೆಯೊಂದೇ  ಸಾಕು. ಹೆಣ್ಣು ಒಂದು ಭೋಗವಸ್ತುವಾಗಿರಬೇಕು. ವಿಪರ್ಯಾಸವೆಂದರೆ,  ಇಂದಿನ ಆಧುನಿಕತೆಯ ಸೋಗಿನಲ್ಲಿ  ಎಷ್ಟೋ ಹೆಣ್ಣುಗಳು ಅದನ್ನು ಒಪ್ಫಿಕೊಂಡಿದ್ದಾರೆ.
ಅಷ್ಟಕ್ಕೂ, ಹೆಣ್ಣು ಇಂದಿನ  ತಂತ್ರಜ್ಞಾನ ಯುಗದಲ್ಲಿ ತಾನೂ ವಿಚಾರವಂತಳೆಂಬುದನ್ನು ತೋರಿಸಿಕೊಟ್ಟಿದ್ದಾಳೆ. ತನ್ನದೇ ಉನ್ನತ ಸ್ಥಾನಮಾನ  ಸಂಪಾದಿಸುವ  ಅರ್ಹತೆ ಪಡೆದಿದ್ದಾಳೆ. ಪ್ರೀತಿ-ಪ್ರೇಮ  ಸಂಬಂಧಗಳಲ್ಲಿ  ಕೇವಲ  ಭಾವುಕಳಾಗದೆ ತನ್ನ ಸುಖದಲ್ಲೇ ತನ್ನವರ ಸುಖವನ್ನೂ ಕಾಣಬಲ್ಲ ಚದುರೆಯಾಗಿದ್ದಾಳೆ.   ಇಂದಿನ ಸಮಾಜ ಪುರುಷ ಪ್ರಧಾನವಲ್ಲ;  ಸ್ತ್ರೀಪ್ರಧಾನ ಎಂಬಷ್ಟು ಮುಂದುವರೆದಿದ್ದಾಳೆ.
ಆದರೇನು! ಹೆಣ್ಣು  ಕಲಿತರೂ ಹೆಣ್ಣೇ ಎಂಬುದನ್ನೇ ಮರೆಯುತ್ತಿದ್ದಾಳೆ!  ತನ್ನ  ವಿದ್ಯೆ, ಉನ್ನತ ಹುದ್ದೇ  ಮತ್ತು ಯೌವನದ ರೂಪಾತಿಶಯದಲ್ಲಿ, ಆರ್ಥಿಕ  ಸ್ವಾತಂತ್ರ‍್ಯವನ್ನು  ಪಡೆದಿರುವೆನೆಂಬ  ಗರ್ವದಲ್ಲಿ ಬೀಗುತ್ತಾ  ತನ್ನ ಹೆಣ್ತನವನ್ನೇ ಕಳೆದುಕೊಂಡು ಬದುಕಿನಲ್ಲಿ  ಕಂಗಾಲಾಗುತ್ತಿದ್ದಾಳೆ…
ಅಂಥ  ಹೆಣ್ಣುಗಳಲ್ಲಿ  ನೀನೊಬ್ಬಳಾಗಬೇಕೇ… ಎನ್ನುವಂತಾಗಿದೆಯಲ್ಲ…

ಹೌದು, ಬದಲಾಗುತ್ತಲೆ ಇರುವ  ಸಾಮಾಜಿಕ ದೃಷ್ಟಿಯೊಂದಾದರೆ, ಪ್ರತಿಯೊಬ್ಬರಿಗೂ ಆತ್ಮನಿಷ್ಠೆಯುಳ್ಳ ಜೀವನ ದೃಷ್ಟಿಯೊಂದಿರುತ್ತದೆ. ಅದೇ ಎಂದಿಗೂ ಶ್ರೇಯಸ್ಸನ್ನು ತರುತ್ತದೆ  ಅಲ್ಲವೇ….?

ಮನಸ್ಸಿನ ಕುದುರೆಗೆ ಕಡಿವಾಣ, ನಿಷ್ಕಲ್ಮಷ ಭಾವನೆ…

ಮನಸ್ಸಿನ ಕುದುರೆಗೆ ಕಡಿವಾಣ ಹಾಕದಿರಲಾರೆ; ಎಷ್ಟೋವೇಳೆ ಗೆಲ್ಲಲೂಲಾರೆ. ಅದನ್ನು ನಿಯಂತ್ರಿಸಿದಷ್ಟೂ ಏನೋ ಕಳಕೊಂಡ  ಅನುಭವವಾಗುತ್ತದೆ. ಸುಖಿಸುವುದಕ್ಕೆ ಇಲ್ಲಿ ಯಾರ ಪರವಾನಗಿ  ಬೇಡವೇಬೇಡ.  ನನ್ನ  ಸುಖ ನಾನು ಕಾಣುವುದು ಜನ್ಮಸಿದ್ಧ ಹಕ್ಕು. ಎಲ್ಲರೊಂದಿಗೆ ಬೆರೆತು ಅವರಲ್ಲೊಬ್ಬನಾಗಬೇಕೆಂಬ  ಇಚ್ಛೆ  ಹೊರತು  ಯಾರನ್ನೂ ದೂಷಿಸಲಾರೆ; ದ್ವೇಷಿಸಲಾರೆ. ನನ್ನ  ನೀರೀಕ್ಷೆಗಳನ್ನೆಲ್ಲ  ಮೀರಿ ಬದುಕನ್ನು ಬದಲಿಸುವ ಅಗಚೋರ ಶಕ್ತಿಯೊಂದಿದೆ  ಎಂಬುದನ್ನೂ ನಂಬದಿರಲಾರೆ.  ಅದನ್ನು ಗೆಲ್ಲಬಲ್ಲ ಸಂಯಮ  ಸಾಧನೆ ಹಾಗೂ ದೈವಶ್ರದ್ಧೆಯನ್ನೂ  ಬಿಡಲಾರೆ.

ಮುಗ್ಧ ಮನಗಳಲ್ಲಿ...

ನಿಸ್ವಾರ್ಥ-ನಿಷ್ಕಲ್ಮಷ  ಭಾವನೆಗಳು ಮುಗ್ಧ ಮನಗಳಲ್ಲಿ(ಮಕ್ಕಳಲ್ಲಿ) ಗೋಚರಿಸುತ್ತವೆ. ಇನ್ನೊಬ್ಬರ ನೋವು ಸಂಕಷ್ಟಗಳಿಗೆ  ಸ್ಪಂದಿಸುವ ಮತ್ತು ಸಹಕರಿಸಿ ಸುಖ-ಸಮಾಧಾನ ತೋರುವ ಸಹೃದಯಿಗಳಲ್ಲಿ ಜಗತ್ತಿನ ಒಳಿತನ್ನು ಕಾಣಬಯಸುತ್ತೇನೆ; ಭಗವಂತನ ಇರುವಿಕೆಯನ್ನು  ಮನಗಾಣುತ್ತೇನೆ.

ಆದರೆ,  ಮುಗ್ಥರಂತೆ ಸುಳಿವ ಸೋಮಾರಿಗಳ ನೋವು-ಸಂಕಷ್ಟಗಳಿಗೆ  ಅವರ ಪರಾವಲಂಬನೆಯಲ್ಲಿ ತೀವ್ರ ತಾತ್ಸಾರ ತಳೆಯುತ್ತೇನೆ. ಯಾಕೆಂದರೆ, ದುಡಿಯುವವನಿಗೆ  ದುಃಖವಿಲ್ಲ;  ಸೋಮಾರಿಗೆ  ಸುಖವಿಲ್ಲ… ಎಂಬದನ್ನು  ತಿಳಿಯದ  ಮೂಢಾತ್ಮರವರು..

ಜಾತಿ ಬೇಧವಿಲ್ಲದ ಪಂಕ್ತಿಯೂಟ ಸಾಧ್ಯವೇ….?

ನಾವು ದಲಿತನನ್ನು ಮಠಾಧೀಶರನ್ನಾಗಿ ಮಾಡಲು ಸಿದ್ಧರಿದ್ದೇವೆ. ಹಾಗೆಯೇ ದಲಿತನೊಬ್ಬನನ್ನು ಪೋಪ್ ಮಾಡಲು ನೀವು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದ ಉಡುಪಿ ಮಠದ ಪೇಜಾವರ ಶ್ರೀಗಳಿಗೆ, ಪ್ರತ್ಯುತ್ತರವಾಗಿ ನಾವು ದಲಿತರನ್ನು ಪಾದ್ರಿ ಮಾಡುತ್ತೇವೆ, ಆದರೆ, ಪೇಜಾವರ ಶ್ರೀ ಯಾವುದಾದರೂ ಮಠಕ್ಕೆ ಧರ್ಮಗುರುವಾಗಿ ಅವರನ್ನು ನೇಮಿಸುತ್ತಾರೆಯೇ… ಎಂದು ಮರು ಪ್ರಶ್ನಿಸಿದ್ದಾರೆ ಪಾದ್ರಿಗಳು ಎಂಬ ವರದಿ ಬಂದಿದೆ!

ಅದಿರಲಿ,ಸಾಮಾನ್ಯರಾದ ನಮ್ಮದೊಂದು ಪ್ರಶ್ನೆ, ಉಡುಪಿ ಮಠದಲ್ಲಿ ಶ್ರೀ ಕೃಷ್ಣನ ದರ್ಶನಾನಂತರ ಭೋಜನ ಶಾಲೆಗೆ ಹೊರಟರೆ, ಬ್ರಾಹ್ಮಣರಿಗೇ ಪ್ರತ್ಯೇಕ ಪಂಕ್ತಿ ಭೋಜನ. ಅಲ್ಲಿ ಇತರೆ ಜಾತಿಯವರನ್ನು ಬಿಡುವುದಿಲ್ಲ.  ಒಂದು ವೇಳೆ ಬ್ರಾಹ್ಮಣರಲ್ಲವೆಂದು  ಅನುಮಾನಿಸಿದರೆನ್ನಿ,  ಜನಿವಾರ ಧರಿಸಿದ್ದರೆ ಸಾಕು, ಮರು ಮಾತಿಲ್ಲದೇ  ಒಳಗೆ ಬಿಟ್ಟುಕೊಳ್ಳುತ್ತಾರೆ!
ಅಲ್ಲಾ, ಜನಿವಾರಧರಿಸಿದವರೆಲ್ಲಾ ಬ್ರಾಹ್ಮಣರೇ….? ಜನಿವಾರಧರಿಸಿದವರಲ್ಲೂ ಅನ್ಯಾಹಾರ/ಅನಾಚಾರ ಮಾಡುವರಿಲ್ಲವೇ…? ಕೇವಲ ತುಂಡು ದಾರವೊಂದರಿಂದ ಒಬ್ಬ ಮನುಷ್ಯನ ಜಾತಿಯನ್ನೋ ಚಾರಿತ್ರ‍್ಯವನ್ನೋ ಅಳೆಯುವ ಇಂಥವರ ಸಂಸ್ಕೃತಿಗೇನೆನ್ನಬೇಕೋ….ಮಂತ್ರಾಲಯದ ಮಠದಲ್ಲೂ ಇದೇ ಸಂಸ್ಕೃತಿಯನ್ನು ನಾವು ಕಾಣಬಹುದಾಗಿದೆ…
ಮೊದಲು ಪೇಜವರ ಶ್ರಿಗಳಾದಿಯಾಗಿ ಮಠಾಧಿಪತಿಗಳು ಇಂಥ ಜಾತಿಬೇಧದ ಪಂಕ್ತಿಯೂಟವನ್ನು ನಿಷೇಧಿಸುವ ಕೈಂಕರ್ಯ ತೊಡಲಿ; ಎಲ್ಲರಿಗೂ ಜಾತಿ ಬೇಧವಿಲ್ಲದೇನೆ ಪಂಕ್ತಿಯೂಟ ದೊರಕುವಂತೆ ವ್ಯವಸ್ಥೆ ಮಾಡಲು ಸಾಧ್ಯವೇ ಯೋಚಿಸಲಿ….?.

ಮರಳಿ ಬ್ಲಾಗಿಂಗ್ ಲೋಕಕ್ಕೆ…

ಕಳೆದ ೫-೬ ತಿಂಗಳಿಂದ ಬ್ಲಾಗಿಂಗ್ ಲೋಕದಿಂದ ದೂರ ಉಳಿದಿದ್ದೆ. ಕ್ಷಮಿಸಿ ಇದು ನನ್ನ ಕೆಟ್ಟ ಗುಣ ಎನ್ನಿ, ಇಲ್ಲವೇ ಇದು ನಾನು ಹಿಡಿದ ಕೆಲಸದಲ್ಲಿ ಒಳ್ಳೆಯ ಇನ್ವಾಲ್ ಮೆಂಟ್ ಯಾ ಕಮಿಟ್ ಮೆಂಟ್ ಎನ್ನಿ. ಹೌದು, ನಾನು ಯಾವುದಾದರೂ ಒಂದು ಲೋಕಕ್ಕೆಹೋದರೆ, ಅಲ್ಲೇ.. ಅಲ್ಲಿನ ಕೆಲಸ ಮುಗಿಯುವವರೆಗೆ ಅಲ್ಲೇ ಉಳಿದುಬಿಡುತ್ತೇನೆ. ಬೇರೆ ಯಾವುದರ ಕಡೆಗೆ ನನ್ನ ಗಮನ ಹೋಗುವುದು ಕಷ್ಟವೇ….  ನನಗೆ ಚಿಕ್ಕಂದಿನಲ್ಲಿ, ನನ್ನ ಅಮ್ಮ ಹೇಳುತ್ತಿದ್ದುದು  ನೆನಪಾಗುತ್ತದೆ-
“ಈ ಹುಡುಗ ಯಾವಾಗಲಾದರೂ ತನ್ನದೇ ಲೋಕದಲ್ಲಿ ಹೋಗಿ ಬಿಡುತ್ತಾನೆ!”
- ಅಮ್ಮ ಇದ್ದಿದ್ದರೆ, ನಾನೀವರೆಗೆ ನನ್ನದೇ ಲೋಕದಲ್ಲಿ ಮಾಡಿರುವ ಕೃಷಿ-ಸಾಧನೆ ಕಂಡು ಅದೆಷ್ಟು ಸಂತೋಷ ಪಡುತ್ತಿದ್ದಳೋ. ಅಂತೂ,
ನನ್ನ ಕನ್ನಡ “ವಿನ್ ಕಂಪ್ಯೂಟರ್ಸ” ಪುಸ್ತಕದ ಏಳನೆಯ ಆವೃತಿ ಕೆಲಸ ಮುಗಿದೆ; ಪುಸ್ತಕ ಅಚ್ಚಿಗೆ ಹೋಗಬೇಕಿದೆ. ಈ ನಡುವೆ ನನಗೆ ಬರುವ ಮೇಲ್ ಗಳನ್ನೂ ಸಹ ಸರಿಯಾಗಿ ನೋಡಲಾಗಲಿಲ್ಲ. ಈಗ ಮತ್ತೆ ಮರಳಿದ್ದೇನೆ;ಗೆಳೆಯರೇ ನಿಮ್ಮೊಡನೆ ಅನಿಸಿಕೆಗಳನ್ನು ಹಂಚಿಕೊಳ್ಳಲಿಕ್ಕೆ; ಸಂವಾದ ನಡೆಸಲಿಕ್ಕೆ…

ತೀರ್ಥ ಯಾತ್ರೆಗಳನ್ನು ಯಾಕೆ ಮಾಡಬೇಕು..?

ಮೊಟ್ಟ ಮೊದಲಿಗೆ ತೀರ್ಥ ಯಾತ್ರೆಗಳನ್ನು ಯಾಕೆ ಮಾಡಬೇಕು..? ಎಂದು ಕುವೆಂಪು ರವರು ಪ್ರಸ್ತಾಪಿಸುತ್ತಾರೆ ಹೈಮಾಚಲ ಸಾನ್ನಿಧ್ಯದಲ್ಲಿ ಪುಸ್ತಕದ ಮುನ್ನುಡಿಯಲ್ಲಿ.
ಅದು ವಿಹಾರಕ್ಕೇ,  ವಿಲಾಸಕ್ಕೇ..ವಿಚಾರಕ್ಕೇ ಸಾಮಾಜಿಕ ಪ್ರಯೋಜನಕ್ಕೇ… ನಮ್ಮೊಳಗಿನ ಆತ್ಮ ವಿಕಾಸಕ್ಕೇ…? ಅವರ  ಮಾತುಗಳಲ್ಲೇ  ಕೇಳುವುದು ಚೆನ್ನ..
ಸಾಮಾನ್ಯವಾಗಿ ನಾನು ಯಾವುದೇ ಪುಸ್ತಕವನ್ನು ಒಮ್ಮೆ ಓದಿದಮೇಲೆ ಮತ್ತೆ ಓದಲು ಬಯಸುವವನಲ್ಲ.  ಆದರೆ, “ಹೈಮಾಚಲ ಸಾನ್ನಿಧ್ಯದಲ್ಲಿ” ಪುಸ್ತಕ ಮತ್ತೆ ಮತ್ತೆ ತನ್ನ ಪುಟಗಳತ್ತ ನನ್ನನ್ನು ಸೆಳೆದಿತ್ತು. ಅಲ್ಲಿ ನನ್ನ ಗಮನ ಸೆಳೆದ ಪಂಕ್ತಿಗಳ ಬಗ್ಗೆ ಹೇಳುವ ಮೊದಲು, ಕುವೆಂಪು ರವರು ಅವರ ಸುಧೀರ್ಘ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ ಮುಖ್ಯಾಂಶಗಳ ಬಗ್ಗೆ ಹೇಳಬಯಸುತ್ತೇನೆ.- ಮುನ್ನುಡಿಯ ಆರಂಭದಲ್ಲೇ ಶ್ಲೋಕವೊಂದನ್ನು  ಆದರ ಸಾರಾಂಶವನ್ನೂ ಹೇಳುತ್ತಾರೆ- ಅದರ ಸಾರಾಂಶವೆಂದರೆ,

“ರೂಪವಿವರ್ಜಿತನಾದ ನಿನಗೆ ಧ್ಯಾನ ಸಮಯದಲ್ಲಿ ರೂಪಕಲ್ಪನೆ ಮಾಡಿದ್ದೇನೆ.
ನಿನ್ನನ್ನು ಸ್ತೋತ್ರ ಮಾಡಿ ನಿನ್ನ ಅನಿರ್ವಚನೀಯತೆಯನ್ನು ದೂರೀಕರಿಸಿದ್ದೇನೆ.
ತೀರ್ಥಯಾತ್ರಾದಿಗಳನ್ನು ಕೈಗೊಂಡು ನಿನ್ನ ವ್ಯಾಪಿತ್ವವನ್ನು ನಿರಾಕರಿಸಿದ್ದೇನೆ.
ಹೇ ಜಗದೀಶ, ಬುದ್ಧಿವಿಕಲತೆಯಿಂದ ನಾನು ಮಾಡಿರುವ
ಈ  ಮೂರು ಅಪರಾಧಗಳೂ  ಕ್ಷಮಾರ್ಹ ಸ್ವಾಮಿ!”

“ಆ ಪ್ರಾರ್ಥನೆ  ಹೊಮ್ಮಿ ಶತಮಾನಗಳೆ ಆದರೂ ಅಂದಿನಂತೆ ಇಂದೂ ಪುಣ್ಯಕ್ಷೇತ್ರಗಳಿಗೆ ಹೋಗುವ ಹೆದ್ದಾರಿಗಳಲ್ಲಿ ಕಿರುದಾರಿಗಳಲ್ಲಿ,  ಕಡಿದಾದ ದಾರಿಗಳಲ್ಲಿ ಅನೇಕ ಯಾತ್ರಿಕರು ಈ ಸ್ತೋತ್ರವನ್ನೇ  ಹಾಡಿಕೊಳ್ಳುತ್ತ ದಾರಿ ಸಾಗುವುದಕ್ಕೆ ಬೇಕಾದ ಶಕ್ತಿ  ಉತ್ಸಾಹಗಳನ್ನು ಪಡೆದುಕೊಳ್ಳುತ್ತದ್ದರೂ ಆಶ್ಚರ್ಯ ಪಡಬೇಕಾಗಿಲ್ಲವೆನ್ನುತ್ತಾರೆ.
ಏಕೆಂದರೆ, ನಮ್ಮ ದೇಶ ವಿಲಕ್ಷಣ ದೇಶ. ವಿರೋಧಾಭಾಸಗಳ ದೇಶ. ನಮ್ಮವರು ಭಗವಂತನ ನಿರಾಕಾರತ್ವವನ್ನು ಸಾರಿದಂತೆ ಬೇರೆ ಯಾರೂ ಸಾರಿಲ್ಲ……
ಇಲ್ಲಿ ಏನುಬೇಕಾದರೂ ನಡೆಯಬಹುದು;ಯಾವುದಕ್ಕೂ ವಿಸ್ಮಯ ಪಡಬೇಕಾಗಿಲ್ಲ…..

“ಹಾಗಾದರೆ, ಆಚಾರ್ಯರು ತೀರ್ಥಯಾತ್ರೆಯನ್ನು ಮತಿವಿಕಲತಾ ದೋಷವೆಂದು ತಮ್ಮ ಯಾತ್ರೆಯಲ್ಲಾ ಪೂರೈಸಿದ ಮೇಲೆ ಸಾರಿದ್ದರೂ, ಮುನ್ನಾದರೂ ಅವರು ಆ ತಿರ್ಥಯಾತ್ರೆಯನ್ನೇಕೆ ಕೈಗೊಂಡರು? ಅವರಂತೆಯೇ ಇತರರೂ ಏಕೆ ಕೈಗೊಳ್ಳುತ್ತಾ ಬಂದಿದ್ದಾರೆ? ಎಂದು ಕುವೆಂಪು ಪ್ರಶ್ನಿಸುತ್ತಾ ಮುಂದುವರೆದು ಹೇಳುತ್ತಾರೆ,
ಮನುಷ್ಯ ಈ ಪ್ರಪಂಚದಲ್ಲಿ ಒಬ್ಬ ಪ್ರವಾಸಿ. ಅವನ ಜೀವನ ಸಮಸ್ತವೂ ಒಂದು ಪ್ರವಾಸ..  ಜೀವ ನಿತ್ಯಸ್ವರೂಪವಾದ ತನ್ನ ನಿಜನಿವಾಸವನ್ನು ಹುಡುಕುತ್ತಾ ಹೋಗುವುದೇ ಅದರ ಸಹಜ ಲಕ್ಷಣ.  ಹೊಳೆ ಕಡಲನ್ನರಸುತ್ತಾ ಹೋದಂತೆ….. ಲಕ್ಷಲಕ್ಷ ರೂಪಗಳಲ್ಲಿ ಕೋಟಿ ವಿಧಾನಗಳಲ್ಲಿ ಆಯಾ ಲೋಕಸತ್ತೆಗೆ ಅನುಗುಣವಾಗಿ…. ಆಯಾ ಜೀವ  ಸಂಸ್ಕಾರಬದ್ಧವಾಗಿ, ಬಹಿರ‍್ಮುಖಿಯಾದಾಗ ಒಂದು ರೀತಿಯಲ್ಲಿ, ಅಂತರ‍್ಮುಖಿಯಾದಾಗ ಮತ್ತೊಂದು ರೀತಿಯಲ್ಲಿ. ಬೇಸರವಾದಾಗ ಹೊರಗೆಲ್ಲಿಯಾದರೂ  ತಿರುಗಾಡಿಕೊಂಡು ಬರಲು ಹೋಗುತ್ತೇವೆ. ಹಾಗೆ ಹೊರಗೆ ಹೋಗಲಾರದವರು ತಮ್ಮೊಳಗೇ ಹೋಗುತ್ತಾರೆ ಎಂದೂ ಹೇಳುತ್ತಾರೆ…

” ಮನುಷ್ಯ ತನ್ನಿಂದ ತಾನು ತಪ್ಪಿಸಿಕೊಳ್ಳಲು, ತನ್ನನ್ನು ತಾನೇ ಮೀರಿ ತನ್ನತನದಿಂದ ಪಾರಾಗಲು ಎಂತೆಂತಹ ಉಪಾಯಗಳಿಂದ ಎಷ್ಟೆಷ್ಟು ಪ್ರಯತ್ನಿಸುತ್ತಾನೆ!  ಅಲ್ಪವಾದ ತನ್ನಿಂದ; ತನ್ನ ಅಲ್ಪತನದಿಂದ ಅಥವಾ ಅಹಂಕಾರದಿಂದ ತಾನು ತಪ್ಪಿಸಿಕೊಳ್ಳುವುದೆಂದರೆ ಭೂಮವಾದುದಕ್ಕೆ ವಿಸ್ತಾರವಾದುದಕ್ಕೆ ಚಿರನೂತನವಾದುದಕ್ಕೆ ನಿರ್ದಿಗಂತವಾದ ಅನುಭವಾಭಿಮುಖವಾಗಿ ಹೋಗುವುದು ಎಂದರ್ಥ.  ಹೀಗೆ ಪ್ರವಾಸ ಯಾತ್ರೆ ಯಾಕೆ ಮಾಡಬೇಕೆಂದು ಬಯಸುತ್ತಾರೆ  ಎಂಬ ಪ್ರಶ್ನೆಯೊಡನೆ ಪ್ರವಾಸ ಮೂರು ಮುಖಗಳಲ್ಲಿ ಸಾಗಲು ಸಾಧ್ಯವೆನ್ನುತ್ತಾರೆ-
೧.ಅಧೋಮುಖಿ, ೨. ಸಮತಲಮುಖಿ ೩. ಊರ್ಧ್ವಮುಖಿ.
೧. ಮಾದಕ ಮತ್ತು ಲೈಂಗಿಕಾದಿ ಪ್ರಪಂಚಗಳಲ್ಲಿ ತನ್ನನ್ನು ತಾನು ಮರೆಯಲೂ ಮೀರಲೂ  ಮಾನವ ಕೈಗೊಳ್ಳುವ ಸಾಹಸಗಳೆಲ್ಲ ಅಧೋಮುಖಿ ಪ್ರವಾಸ. ಅದರ ಪರಿಣಾಮ ಮೊದಲು ಸ್ವಾದುವಾದರೂ ತುದಿಯಲ್ಲಿ ಕೇಡು.
೨. ತನಗೆ ತನ್ನ  ಸಮಾಜಕ್ಕೆ ತನ್ನ ನಾಡಿಗೆ,  ಸಾಹಿತ್ಯ, ಸಂಗೀತ, ಕಲೆ, ಲೋಕವೊಪ್ಪುವ/ಮೆಚ್ಚುವ  ಯಾವುದಾದರೊಂದು  ಸುಧಾರಣೆಯ ಚಳುವಳಿ, ರಾಜಕಾರಣ, ಸಭೆಗಳಲ್ಲಿ ಭಾಗವಹಿಸುವುದು,  ಇತ್ಯಾದಿಯಾಗಿ… ಸಮಾಜ ಸೇವಾ ಚಟುವಟಿಕೆಗಳಲ್ಲಿ ಆಸಕ್ತರಾಗುವುದು…. ಸಮತಲಮುಖ ಪ್ರವಾಸ.
೩. ಆಧ್ಯಾತ್ಮಿಕ ಶ್ರೇಯಸ್ಸೇ ಧ್ಯೇಯವಾಗಿ, ನಮ್ಮ ಸಮಸ್ತ ಪ್ರಜ್ಞೆಯ ಪೂರ್ಣ  ಸಮರ್ಪಣವೇ ದಾರಿಯಾಗಿ, ನಮ್ಮ ಪೂರ್ಣತೆಯ ಅನುಸಂಧಾನಕ್ಕಾಗಿ ನಾವು ಕೈಗೊಳ್ಳುವ ಅತ್ಯಪೂರ್ವ ಸಾಹಸವೇ ಅತ್ಯಂತ ವಿರಳವೆನಿಸುವ ಊರ್ಧ್ವಮುಖ ಪ್ರವಾಸ.

ವಿಹಾರಕ್ಕಾಗಿ, ವಿಲಾಸಕ್ಕಾಗಿ, ಬೇಸರ ಪರಿಹಾರಕ್ಕಾಗಿ   ಹೊಸ ಊರು ನಾಡುಗಳನ್ನೂ ಜನರನ್ನೂ ಸಂಧಿಸುವ ಸಂತೋಷಕ್ಕಾಗಿ, ಪ್ರಕೃತಿ ಸೌಂದರ‍್ಯ  ವೈಚಿತ್ರ‍್ಯಗಳನ್ನು  ಸಂದರ್ಶಿಸುವ  ರಸಿಕಾನುಭವಕ್ಕಾಗಿ,  ಕೊನೆಗೆ ಮನೆಯ ತಾಪತ್ರಯಗಳಿಂದ ದೂರವಾಗುವುದಕ್ಕಾಗಿ,  ದೇವರ  ಋಣ, ಹರಕೆ ತೀರಿಸುವುದಕ್ಕಾಗಿ, ದಿವ್ಯ ಸ್ಥಾನಗಳಿಗ ಹೋಗಿ ಬಂದು ಜನರ ಗೌರವಾದರಗಳಿಗೆ ಭಾಜನರಾಗುವುದಕ್ಕಾಗಿ ಕೈಗೊಳ್ಳವುದೇ ಸಮತಲ ಮುಖಿ ಪ್ರವಾಸವಾಗುತ್ತದೆ….
ಊರ್ಧ್ವ ಮುಖ ಪ್ರವಾಸದ ವಿಷಯವಾಗಿ ಭಗವದ್ಗೀತೆ ಹೇಳುವುದನ್ನೂ ಹೀಗೆ  ಅದರ ಶ್ಲೋಕ ಸಹಿತ  ಪ್ರಸ್ತಾಪಿಸಿದ್ದಾರೆ.-
ಪುಣ್ಯಕ್ಷೇತ್ರಗಳಿಗೆ ಯಾತ್ರೆ ಹೋಗಿ ಬಂದ ಮಾತ್ರದಿಂದಲೇ ಪವಿತ್ರನಾಗಿ ಬಿಡುತ್ತೇನೆ ಎಂಬ ನಂಬಿಕೆಯೆ  ಆತ್ಮವಂಚನೆ. ಅನೇಕ ಸಾಧುಸಂತರು  ಅದರಿಂದ ಒದಗುವ ಧಾರ‍್ಮಿಕತೆಯನ್ನು ಪ್ರಶಂಸಿಸಿರುವುದಕ್ಕಿಂತಲೂ ಹೆಚ್ಚಾಗಿ ಅದರಿಂದೊದಗಬಹುದಾದ ಅಪಾಯದ ಕಡೆಗೆ  ಗಮನ ಸೆಳೆದಿದ್ದಾರೆ.
ಕಾಶಿಯಲ್ಲಿ ಪ್ರಾಣಬಿಟ್ಟರಾಯಿತು. ತನಗೆ ಮೋಕ್ಷವೊದಗುತ್ತದೆ ಎಂಬ ಭಾವನೆ ಒಳ್ಪಿಗೆ ಪ್ರೇರಕವಾಗುವುದಕ್ಕಿಂತ ಹೆಚ್ಚಾಗಿ ಕೇಡಿಗೆ ಕಾರಣವಾಗುತ್ತದೆಯಲ್ಲವೇ.. ಎಂದೂ ಕೇಳುತ್ತಾರೆ. ಮತ್ತೆ ಹೇಳುತ್ತಾರೆ-
“ನಮ್ಮ ಪುಣ್ಯಕ್ಷೇತ್ರಗಳಲ್ಲಿ ಪಾಪ ಪುರುಷ ಯಾವ ದಂಡನೆಯ ಮತ್ತು ದಂಢಾಧಿಕಾರಿಗಳ ಭಯವೂ ಇಲ್ಲದೇ ತನ್ನ  ಭೋಗವಿಲಾಸ ವ್ಯಾಪಾರಗಳಿಗಾಗಿ ಸಂತೆಸಂತೆಗಳನ್ನೇ ತೆರೆದಿಟ್ಟಿದ್ದಾನೆ! ಆದರೆ, ಅಂತಹ ಪರಿಸ್ಥಿತಿ ಪುಣ್ಯಕ್ಷೇತ್ರಗಳಿಗೆ ಮಾತ್ರ ವಿಶೇಷವಾದುದೇನೂ ಅಲ್ಲವಷ್ಟೇ! …”
-ಹೌದು, ನನಗನಿಸುತ್ತದೆ.  ಇದು ಕಲಿಯುಗ ಇಲ್ಲೆಲ್ಲಕಾಲಕ್ಕೂ ಪರಮಪಾಪಿಗಳಿಗೆ ಸುಭಿಕ್ಷವೇ… ತಮ್ಮ ಗುಂಪು ಅತಿ ಕಡಿಮೆಯಾದರು ಸಾತ್ವಿಕರು ಅದಕ್ಕೆಲ್ಲ ತಲೆಕಡಿಸಿಕೊಳ್ಳಬಾರದಷ್ಟೇ.
ನಾನು ಹೈಮಾಚಲ ಸಾನ್ನಿಧ್ಯದಲ್ಲೇನಿದೆ  ನಾನೇನು ಅಂಶಗಳನ್ನು ಗುರುತಿಸಿದೆನೆಂಬುದನ್ನು ಹೇಳುವುದಕ್ಕೆ ಮುಂಚೆ ನಮ್ಮ ಕವಿ ಕುವೆಂಪುರವರ ಸುಧೀರ್ಘ  ಮುನ್ನುಡಿಯಿಂದಲೂ  ಸಾಕಷ್ಟು ಪ್ರಭಾವಿತನಾಗಿದ್ದೇನೆ; ಅವರ ವಿದ್ವತ್ ಪೂರ್ಣವಾದ ವಿಚಾರಗಳು ನಮ್ಮನ್ನೂ ವಿಚಾರಪರರನ್ನಾಗಿಸುತ್ತವೆ. ಅದನ್ನೊಂದಿಷ್ಟು ನಿಮ್ಮೊಂದಿಗೆ ಹೇಳದೇ  ಮುಂದುವರೆಯುವುದು ನನ್ನಿಂದ ಸಾಧ್ಯವಾಗಲಿಲ್ಲ.
ಕುವೆಂಪುರವರು ಪುಸ್ತಕದ ಬಗ್ಗೆ ಹೇಳುವ ಮುನ್ನ ಮೇಲಿನಂತೆ  ಹೇಳಿದ  ಅವರ  ಕೆಲವು  ಪ್ರಾಸ್ತಾವಿಕ ನುಡಿಗಳನ್ನು  ಮುಂದಿಡುತ್ತಾ ಕೊನೆಗೆ ಹೇಳಿದ ಅವರ ಇನ್ನೊಂದು ನುಡಿಯನ್ನೂ ನಿಮಗೆ ತಿಳಿಸಿ  ಆನಂತರ ಪುಸ್ತಕ ಹೈಮಾಚಲ ಸಾನ್ನಿಧ್ಯದಲ್ಲಿ ಏನು ಹೇಳುತ್ತದೆಂಬುದನ್ನು ನೋಡೋಣ.
ಕುವೆಂಪು  ಹೇಳಿದ್ದಾರೆ- ಅತಿ ಖಂಡನೆ ಅತಿಶ್ಲಾಘನೆ ಅನರ್ಥಕಾರಿಯಾಗಬಹುದು. ತೀರ್ಥಯಾತ್ರೆಗಳಿಂದಲೂ, ಪುಣ್ಯಕ್ಷೇತ್ರಗಳಿಂದಲೂ ನೊಂದಜೀವಕ್ಕೂ  ಬೆಂದ ಲೋಕಕ್ಕೂ ಶಾಂತಿ ಸಮಾಧಾನಗಳು ಮತ್ತೆ ಮತ್ತೆ ದೊರಕುವುದರಿಂದಲೇ  ಜನರು ಪ್ರಯಾಣದ ಕ್ಲೇಶ,  ಕಷ್ಟ, ದುರ್ಗಮತೆ, ಅಪಾಯ,  ಕಡೆಗೆ ಸಾವು, ಯಾವುದನ್ನೂ ಲೆಕ್ಕಿಸದೇ ಮತ್ತೆ ಮತ್ತೆ ಅಂತಹ ಪ್ರವಾಸಗಳನ್ನು ಕೈಗೊಳ್ಳುತ್ತಿರುವುದಲ್ಲವೇ? ಅಂತಹ ಪ್ರವಾಸ ಯಾರಿಗೆ ಅವಶ್ಯಕವೋ ಅವರನ್ನು ಮೂಢರೆಂದಾಲಿ, ಭ್ರಾಂತರೆಂದಾಗಲೀ, ಕರೆದರೆ ತಪ್ಪಾಗುತ್ತದೆ, ಆಸ್ಪತ್ರೆಗೆ ಹೋಗುವ ರೋಗಿಯನ್ನು ಮೂಢನೆಂದಾಗಲೀ, ಭ್ರಾಂತನೆಂದಾಗಲಿ ಕರೆದರೆ ತಪ್ತಾಗುವಂತೆ….
ಯಾತ್ರೆ, ಯಾತ್ರೆ ಮಾಡುವ ಬಗ್ಗೆ ಕುವೆಂಪುರವರು ಮುನ್ನುಡಿಯಲ್ಲಿ ಹೇಳಿರುವ  ಪ್ರಮುಖವಾದ ಅಂಶಗಳನ್ನು ನಿಮ್ಮೊಡನೆ  ಹೇಳಿದ್ದೇನೆ. ಇನ್ನು ಪುಸ್ತಕ ವಿಷಯದ  ಬಗ್ಗೆ ಮುಂದೆ ಮತ್ತೆ ಬರೆಯುತ್ತೇನೆ….

ಹೊರದೇಶಕ್ಕೆ ಹೋಗ ಬಯಸುವ ಯವಕರ ಮನಸ್ಸಿನ “ದ್ವಂದ್ವ”

ಹೊರದೇಶಕ್ಕೆ ಹೋಗ ಬಯಸುವ  ಯವಕರ  ಮನಸ್ಸಿನ “ದ್ವಂದ್ವ”

ನಾನು ಇತ್ತೀಚೆಗೆ ಓದಿ ಮೆಚ್ಚಿಕೊಂಡ “ಮನು” ಅವರ “ಕಥೆಯೊಳಗಿನ ಕಥೆ”- ಒಂದು ಸಾಹಿತ್ಯಕ ಆತ್ಮ ಕಥನದಲ್ಲಿ ಸಾಹಿತಿ ಮನು(ಪಿ.ಎನ್.ರಂಗನ್ ಇವರು ಇಂಜಿನಿಯರ್ ಆಗಿದ್ದು  ಆ ಕ್ಷೇತ್ರದಲ್ಲಿಯೆ ಕೆಲಸ ಮಾಡುತ್ತ, ಉನ್ನತ ಹುದ್ದೆಯಲ್ಲಿದ್ದೂ, ಎಂ.ಎ.ಪದವಿಯನ್ನೂ ಗಳಿಸಿ, ಹಿಂದಿ, ಇಂಗ್ಷೀಷ್, ಸಂಸ್ಕೃತ ಮತ್ತು ಶಾಸನ ಶಾಸ್ತ್ರ ಇವುಗಳಲ್ಲಿ ಪ್ರಾವಿಣ್ಯತೆ ಪಡೆದ ಘನ ವಿದ್ವಾಂಸರು). ಇಂಗ್ಷೀಷ್ ಭಾಷೆಯ ಮೇಲೆ ಅವರು ಪಡೆದ ಹಿಡಿತವೇನೆಂಬುದರ ಬಗ್ಗೆ ಅವರ ಮಾತುಗಳಲ್ಲೇ ಕೇಳಿ-

“ಅಷ್ಟೇಕೆ ಇಂಗ್ಷೀಷಿನ ತವರು ಮನೆಯಾದ ಇಂಗ್ಲೆಂಡಿನಲ್ಲಿ ನಮ್ಮ ಇಂಗ್ಷೀಷನ್ನು ಗೌರವಿಸತ್ತಾರೆ. ಲಂಡನ್, ಬಿರ್ಮಿಂಗ್ ಹ್ಯಾಮ್, ಬ್ರಿಸ್ಟಲ್ ಗಳಲ್ಲಿ ಓಡಾಡುವಾಗ ನಮ್ಮ ರೀತಿಯ ಭಾಷೆಯಿಂದ ನನಗೆ ಗೌರವ ಸಿಕ್ಕಿದೆ. ಷೆಫೀಲ್ಡ್ ನ ಒಂದು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅವರು ‘ಯು ಸ್ಪೀಕ್ ಸೋ ವೆಲ್’  ಎಂದು ಶ್ಲಾಘಿಸಿದರು. “I cannot say the same thing of British English these days” ಎಂಬ ದಾಷ್ಟ್ಯದ ಮಾತುಗಳನ್ನಾಡಿದ್ದೆ”

ಪಾಶ್ಚಿಮಾತ್ಯ ಸಂಸ್ಕೃತಿಗೆ ಆಕರ್ಷಿತರಾಗುವುದೇ ನಮ್ಮ ಯುವಜನಾಂಗದಲ್ಲಿ ಬಹಳ ಹಿಂದಿನಿಂದಲೂ ಕಂಡು ಬಂದಿದೆ.  ಈಗಂತೂ ಟಿ.ವಿ.ಸೆಟಲೈಟ್ ಹಾಗೂ ಸಿನಿಮಾ ಜೀವನ ಶೈಲಿಯ ಪ್ರಭಾವವೇ.  ಇಂಥ ಆಕರ್ಷಣೆಯೆ ಅವರಿಗೆ ಹೆಚ್ಚು ಮನಮೋಹಕವಾಗುತ್ತಿದೆ. ಇಂಡಿಯನ್ ಇಂಗ್ಲೀಷ್ ಎಂದರೆ ಅಸಡ್ಡೆ  ಪಡುವವರೇ  ಬಹಳ ಮಂದಿ ನಮ್ಮ ನಡುವೆ ಇದ್ದಾರೆ! ಯಾಕೆಂದರೆ, ನಮ್ಮ ಸಂಸ್ಕೃತಿಯಲ್ಲಿನ ಸಾಮಾಜಿಕ ಕಟ್ಟು ಪಾಡುಗಳು, ಪಾಶ್ಚಿಮಾತ್ಯರ ಸ್ವಚ್ಛಂದ ಪ್ರವೃತ್ತಿಯ ನಡೆ ನುಡಿಗಳು, ಸ್ವೇಚ್ಛ ಜೀವನ ಪದ್ಧತಿಗಳು.  ಅವುಗಳ ಅನುಕರಣೆಗೆ ಮಾರುಹೋಗುವವರೇ ಬಹಳ(ಕೆಲವರು ಈ ಮಾತಿಗೆ ಅಪವಾದ; ಅವರನ್ನು ಮೆಚ್ಚಲೇ ಬೇಕಲ್ಲ). ಸಹಜವಾಗಿ ಎಂಥ ಯುವ ಮನಸ್ಸುಗಳೂ ತತ್ ಕ್ಷಣ ದ್ವಂದ್ವದಲ್ಲಿ ಸಿಲುಕಿ ಬಹಳ ಒದ್ದಾಡುವುದೂ ಇದೆ.

ನಮ್ಮ ಯುವಕರು ವಿದೇಶಕ್ಕೆ ಹೋಗುತ್ತಿರುವುದೂ ಅಲ್ಲೇ ನೆಲೆಸಲಿಚ್ಛಿಸುವುದರ ಬಗ್ಗೆ , ಯವಕರ  ಮನಸ್ಸಿನ “ದ್ವಂದ್ವ” ದ  ಬಗ್ಗೆ ಮನು ಅವರು ಆತ್ಮ ಕಥನದಲ್ಲಿ ಮುಂದುವರೆದು ಹೀಗೆ ಬರೆಯುತ್ತಾರೆ- ”ತಂಡೋಪ ತಂಡವಾಗಿ  ವಿದೇಶಕ್ಕೆಹೋಗುವವರಿಗೆ ಎಲ್ಲವೂ ಹೂವಿನಂತೆ ಮೃದುವಾಗಿರುವುದಿಲ್ಲ ಎಂದು ನನಗೆ ತಿಳಿಸಬೇಕಾಗಿತ್ತು. ಹಾಗಾಗಿ ಅಮೆರಿಕೆಗೆ ಹೋದವರ ಪರಿಸ್ಥಿತಿಗಳನ್ನು ಕಲೆಹಾಕಿ, ನಕಾರಾತ್ಮಕವಾದ ಮಿನಿ ಕಾದಂಬರಿ “ದ್ವಂದ್ವ”ವನ್ನು ಬರೆದೆ. ಅದನ್ನು ಓದಿದ ಗೆಳೆಯ ಶೇಷಗಿರಿರಾಯರು ನನಗೆ ಕಣ್ಣೀರು ತಡೆಯಲಾಗಲಿಲ್ಲ.” ಎಂದರು.

-ಅವರ ಈ ಮಿನಿ ಕಾದಂಬರಿ ಪ್ರಕಟವಾಗಿ ನಾಲ್ಕಾರು ತಿಂಗಳನಂತರ ಪುಣೆಯಲ್ಲಿದ್ದ ಅವರ ಮನೆಗೆ ಹಿರಿಯರೊಬ್ಬರು ಫೋನ್ ಮಾಡಿ ನಿಮ್ಮನ್ನು ಕಾಣಬೇಕು ಅಂತಿದ್ದೀನಿ ಎಂದಾಗ, ಮನು ಅವರು ತಮ್ಮ ಮನೆಯ ವಿಳಾಸವನ್ನು ಅವರಿಗೆ ತಿಳಿಸಿದರು.

ಆ ಹಿರಿಯರು ಅವರ ಮನೆಗೆ ಬಂದರು. ಉಭಯ ಕುಶೋಲೋಪರಿಯನಂತರ, ತಮ್ಮ ಏಕೈಕ ಪುತ್ರ ಟಾಟಾ ಇನ್ಸ್ ಟಿಟ್ಯೂಟ್ ನಲ್ಲಿ ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ ಡಿಗ್ರಿ ಮಾಡಿದವ, ಅಮೆರಿಕೆಗೆ ಹೋಗುತ್ತೇನೆಂದ. ಅವನು ಹೋಗುವುದು ನಮಗೆ ಇಷ್ಟವಿರಲಿಲ್ಲ, ಅವನು ಇಲ್ಲೇ ಏನಾದರೂ ಉದ್ಯೋಗ ದೊರಕಿಸಿಕೊಂಡು ನಮ್ಮ ಕಣ್ಮುಂದೆ ಇರಬೇಕೆಂಬುದೇ ನಮ್ಮ ಆಸೆ. ಹೋಗಲೇ ಬೇಕೆಂದು ಹಠ ಹಿಡಿದ. ಪಾಸ್ ಪೋರ್ಟ್ ವೀಸಾ ಎಲ್ಲ ಸಿದ್ಧತೆ ಮಾಡಿಕೊಂಡ. ಇನ್ನೇನು ವಾರದಲ್ಲಿ ಅಮೆರಿಕೆಗೆ ಹಾರುತ್ತಾನೆ ಎಂದಿದ್ದಾಗ, ಅಪ್ಪ ನಾನು ಹೋಗುವುದಿಲ್ಲ, ನಾನು ಇಲ್ಲೇ ಇರುತ್ತೇನೆ ಎಂದ. ನನಗೆ ತುಂಬಾ ಸಂತೋಷವಾಯಿತು. ಅವನು ಕಾರಣವನ್ನೂ ಹೇಳಲಿಲ್ಲ. ನಾನೂ ಕೇಳಲಿಲ್ಲ.

ಇದಾಗಿ ಸುಮಾರು ದಿನಗಳ ಮೇಲೆ ನಾನು ಪುಣೆಗೆ  ಕೆಲಸದ ನಿಮಿತ್ತ ಹೋಗಬೇಕೆಂದಾಗ, ಅಪ್ಪಾ ಅಲ್ಲಿ ಮನು ಅವರನ್ನು ಕಂಡು ಭೇಟಿ ಮಾಡಿ ಬಾ ಎಂದ. ನನಗೆ ಆಶ್ಚರ್ಯವಾಯಿತು. ಯಾರೋ ಅವರು ಎಂದು ಕೇಳಿದಾಗ, ಇಲ್ಲಿದೆ ನೋಡಿಕೋ ಎಂದ ತುಷಾರವನ್ನು ಕೈಯಲ್ಲಿಟ್ಟ.  ತುಷಾರದ  ಆ ಕಾಪಿ ಬಿಡಿಸಿ ನೋಡಿದೆ.  ನಾನೂ ದ್ವಂದ್ವ ಓದಿದೆ. ಮನು ಅವರಿಗೆ ಕೃತಜ್ಞತೆ ತಿಳಿಸಲು ಬಂದೆ ಎಂದು ಹೇಳುತ್ತಾರೆ ಆ ಹಿರಿಯರು.

ಪಾಶ್ಚಿಮಾತ್ಯ ಸಂಸ್ಕೃತಿಗೆ ಆಕರ್ಷಿತರಾಗುವುದೇ ನಮ್ಮ ಯುವಜನಾಂಗದಲ್ಲಿ ಬಹಳ ಹಿಂದಿನಿಂದಲೂ ಕಂಡು ಬಂದಿದೆ.  ಈಗಂತೂ ಟಿ.ವಿ.ಸೆಟಲೈಟ್ ಹಾಗೂ ಸಿನಿಮಾ ಜೀವನ ಶೈಲಿಯ ಪ್ರಭಾವವೇ.  ಇಂಥ ಆಕರ್ಷಣೆಯೆ ಅವರಿಗೆ ಹೆಚ್ಚು ಮನಮೋಹಕವಾಗುತ್ತಿದೆ. ಯಾಕೆಂದರೆ, ನಮ್ಮ ಸಂಸ್ಕೃತಿಯಲ್ಲಿನ ಸಾಮಾಜಿಕ ಕಟ್ಟು ಪಾಡುಗಳು, ಪಾಶ್ಚಿಮಾತ್ಯರ ಸ್ವಚ್ಛಂದ ಪ್ರವೃತ್ತಿಯ ನಡೆ ನುಡಿಗಳು, ಸ್ವೇಚ್ಛ ಜೀವನ ಪದ್ಧತಿಗಳು.  ಅವುಗಳ ಅನುಕರಣೆಗೆ ಮಾರುಹೋಗುವವರೇ ಬಹಳ(ಕೆಲವರು ಈ ಮಾತಿಗೆ ಅಪವಾದ; ಅವರನ್ನು ಮೆಚ್ಚಲೇ ಬೇಕಲ್ಲ). ಸಹಜವಾಗಿ ಎಂಥ ಯುವ ಮನಸ್ಸುಗಳೂ ತತ್ ಕ್ಷಣ ದ್ವಂದ್ವದಲ್ಲಿ ಸಿಲುಕಿ ಬಹಳ ಒದ್ದಾಡುವುದೂ ಇದೆ.

ನಮ್ಮ ಯುವಕರು ವಿದೇಶಕ್ಕೆ ಹೋಗುತ್ತಿರುವುದೂ ಅಲ್ಲೇ ನೆಲೆಸಲಿಚ್ಛಿಸುವುದರ ಬಗ್ಗೆ , ಯವಕರ  ಮನಸ್ಸಿನ “ದ್ವಂದ್ವ” ದ  ಬಗ್ಗೆ ಮನು ಅವರು ಆತ್ಮ ಕಥನದಲ್ಲಿ ಮುಂದುವರೆದು ಹೀಗೆ ಬರೆಯುತ್ತಾರೆ- “ತಂಡೋಪ ತಂಡವಾಗಿ  ವಿದೇಶಕ್ಕೆಹೋಗುವವರಿಗೆ ಎಲ್ಲವೂ ಹೂವಿನಂತೆ ಮೃದುವಾಗಿರುವುದಿಲ್ಲ ಎಂದು ನನಗೆ ತಿಳಿಸಬೇಕಾಗಿತ್ತು. ಹಾಗಾಗಿ ಅಮೆರಿಕೆಗೆ ಹೋದವರ ಪರಿಸ್ಥಿತಿಗಳನ್ನು ಕಲೆಹಾಕಿ, ನಕಾರಾತ್ಮಕವಾದ ಮಿನಿ ಕಾದಂಬರಿ “ದ್ವಂದ್ವ”ವನ್ನು ಬರೆದೆ. ಅದನ್ನು ಓದಿದ ಗೆಳೆಯ ಶೇಷಗಿರಿರಾಯರು ನನಗೆ ಕಣ್ಣೀರು ತಡೆಯಲಾಗಲಿಲ್ಲ.” ಎಂದರು.

“ ‘ದಂದ್ವ’  ಈ ಪದವೇ ಹೇಳುವಂತೆ ಜೀವನದ ದ್ವಂದ್ವವನ್ನು ಪ್ರತಿ ಬಿಂಬಿಸುತ್ತದೆ. ಇಲ್ಲಿ ಒಂದು ಕಡೆ ಅಮೆರಿಕೆಯಂತಹ ವೈಭವೋಪೇತ ಜೀವನದ ಸೆಳೆತ, ಇನ್ನೊಂದು ಕಡೆ ಆ ಬ್ರಹ್ಮಾಂಡ ಸಾಗರದಲ್ಲಿ ನಮ್ಮ ತನವನ್ನು ಕಳೆದುಕೊಳ್ಳುವ ಭಯ, ವೈಯಕ್ತಿಕ ಸಂಬಂಧಗಳು ಏನಾಗುತ್ತವೆಯೋ ಎಂಬ ಶಂಕೆ-ಈ ಎಲ್ಲ ಹೋರಾಟಗಳು, ನನ್ನ ಕಳೆದು ಹೋದ ಸ್ನೇಹಿತನನ್ನು ಕೇಂದ್ರವಾಗಿಟ್ಟುಕೊಂಡು ಇದನ್ನು ಚಿತ್ರಿಸಿದ್ದೆ.” ಎನ್ನುತ್ತಾರೆ ಮನು. .

ಅವರ ಈ ಮಿನಿ ಕಾದಂಬರಿ ಪ್ರಕಟವಾಗಿ ನಾಲ್ಕಾರು ತಿಂಗಳನಂತರ ಪುಣೆಯಲ್ಲಿದ್ದ ಅವರ ಮನೆಗೆ ಹಿರಿಯರೊಬ್ಬರು ಫೋನ್ ಮಾಡಿ ನಿಮ್ಮನ್ನು ಕಾಣಬೇಕು ಅಂತಿದ್ದೀನಿ ಎಂದಾಗ, ಮನು ಅವರು ತಮ್ಮ ಮನೆಯ ವಿಳಾಸವನ್ನು ಅವರಿಗೆ ತಿಳಿಸಿದರು.

ಮನು ಅವರು ಹೇಳುತ್ತಾರೆ- ” ಇದನ್ನು ಇಷ್ಟು ವಿವರವಾಗಿ ಬರೆಯುವುದಕ್ಕೆ ಕಾರಣ ಸಾಹಿತ್ತ ಬೀರಬಲ್ಲ ಪ್ರಭಾವ ಎಷ್ಟು ಅಗಾಧವಾದದ್ದು ಎಂದು ತಿಳಿಸಲು. ಒಬ್ಬ ಮನುಷ್ಯನನ್ನು ಅದು  ಮನುಷ್ಯನನ್ನಾಗಿಸಬಹುದು, ಇಲ್ಲ ದಾನವನನ್ನಾಗಿಯೊ ಮಾಡಬಹುದು. ಒಬ್ಬನಿಗೆ ಜೀವ ಕೊಡಬಹುದು. ಧೈರ್ಯ ಕೊಡಬಹುದು, ಅಂಗವಿಕಲನನ್ನು ಸತ್ವಶಾಲಿ ಯುವಕನನ್ನಾಗಿ ಮಾಡ ಬಹುದು. ಹಾಗೆಯೆ ಜೀವಿಗೆ ಪ್ರಾಣಭಯವನ್ನೂ ತರಬಹುದು. ಹಾಗಾಗಿ ಸಾಹಿತ್ಯ ಕಾರನ ಕೆಲಸ ಬಹಳ ಗುರುತರ ವಾದದ್ದು.”

ನನಗನಿಸುತ್ತದೆ- ಟಿ.ವಿ.,ಸಿನಿಮಾ ಈ ದೃಶ್ಯ ಮಾಧ್ಯಮಗಳಂತು ಅತ್ಯಂತ ಪ್ರಭಾವೀ ಮಾಧ್ಯಮಗಳು. ಇವುಗಳು ಇಂದು ಬಹುತೇಕ ಮಾಡುತ್ತಿರುವುದೇನು ? ಇವುಗಳನ್ನೇ ಪುಟ್ಟ ಮಕ್ಕಳಾದಿಯಾಗಿ ಯುವಕರು,ವೃದ್ಧರೂ ಸಹ ನೋಡುತ್ತ ಓದುವುದನ್ನೇ ಬಿಟ್ಟಿರುವವರೂ ಬಹಳ ಮಂದಿ ಇದ್ದಾರೆ. ಹೀಗೆ ನಮ್ಮ ಸಮಾಜದ ಮೇಲೆ ಅವುಗಳು ಬೀರುವ ಪ್ರಭಾವ ಅದೆಷ್ಟು ಪರಿಣಾಮಕಾರಿಯಾಗಬಹುದು? ತಮಗೂ ಗುರುತರ ಜವಬ್ದಾರಿ ಇದೆ; ಹಣ ಮಾಡುವುದೇ ಮುಖ್ಯವಲ್ಲ ಎಂಬುದನ್ನು ಅವುಗಳ ನಿರ್ಮಾತೃ-ನಿರ್ದೇಶಕರುಗಳು ಅರಿತು ಕೊಳ್ಳುವರೇ.

ಮುಂದುವರೆದು ಮನು ಹೇಳುತ್ತಾರೆ- ನಂತರದ ದಿನಗಳಲ್ಲಿ ನಾನು ಬಹಳಷ್ಟು ಘಟನೆಗಳನ್ನು ಪ್ರಸಂಗಗಳನ್ನು ಅಮೆರಿಕೆಯಲ್ಲಿ ನೆಲೆಸಿರುವವರ ವಿಷಯದಲ್ಲಿ ಕೇಳಿದ್ದೆ. ಇದೆಲ್ಲದರೆ ಕೇಂದ್ರ ಬಿಂದು ಮತ್ತದೇ “ದ್ವಂದ್ವ” ನಾವು ಭಾರತೀಯರೇ, ಅಥವಾ ಅಮೆರಿಕನ್ನರೇ, ನಾವು ಭಾರತೀಯ ಸಂಸ್ಕೃತಿಗೆ ಬೆಲೆಕೊಡಬೇಕೇ? ಅಮೆರಿಕೆಯ ಸಂಸ್ಕೃತಿಗೇ ಬೆಲೆ ಕೊಡಬೇಕೇ? ಈ ದ್ವಂದ್ವ ವಿಶೇಷವಾಗಿ ಭಾರತೀಯ ಸಂಜಾತ ಮಕ್ಕಳಲ್ಲಿ ಕಂಡು ಬರುತ್ತಿತ್ತು. ಎನ್ನುವ ಅವರು ಹಾಗಾಗಿ ಅದನ್ನೇ ಕೇಂದ್ರವಾಗಿಟ್ಟು ಕೊಂಡು ದ್ವಂದ್ವ ದ ಎರಡನೆಯ ಮತ್ತು ಮೊರನೆಯ ಭಾಗವನ್ನೂ ಬರೆದರು.

Follow

Get every new post delivered to your Inbox.