Category Archives: ಹೇಳಲೇ ಬೇಕೆನಿಸಿದ್ದು…

ಅಂದಿಗೂ ಇಂದಿಗೂ ಕನ್ನಡಿಗರು ಗುಣಗ್ರಾಹಿಗಳಲ್ಲ…?


ದ.ಕೃಭಾರದ್ವಾಜರ ಹೆಸರು ಕೇಳದ ಕನ್ನಡಿಗರೇ ಇಲ್ಲ ಎಂದರೆ ಉತ್ಪ್ರೇಕ್ಷೆಯೇನಲ್ಲ. ಭಾರದ್ವಾಜರು ಅವರ ಇಂಗ್ಲೀಷ್-ಇಂಗ್ಲೀಷ್-ಕನ್ನಡ ನಿಘಂಟು ವಿನಿಂದ ಇಂದಿಗೂ ಮನೆಮಾತಾಗಿದ್ದಾರೆ. ಇಂದಿಗೂ ಕನ್ನಡ ಶಾಲಾ ಮಕ್ಕಳಿಗೆ ನಿಘಂಟು (ಈವರೆಗೆ ಹಲವು ಆವೃತಿಗಳು ಬಂದಿವೆ) ಅತ್ಯಂತ ಉಪಯುಕ್ತವೆನಿಸಿದೆ. ಹತ್ತು ಕಟ್ಟುವ ಬದಲು ಒಂದು ಮುತ್ತುಕಟ್ಟಿ ನೋಡು ಎಂಬಂತೆ ಸಾಮಾನ್ಯ ಜನರಿಗೆ ಈ ಕನ್ನಡ ನಿಘಂಟುವಿನಿಂದಲೇ ಅವರು ಸುಪ್ರಸಿದ್ಧರು. ಮೂಲತಃ ಪ್ರಾಧ್ಯಾಪಕು, ನಂತರ, ಪತ್ರಕರ್ತರು, ಸ್ವಾತಂತ್ರ್ಯಹೋರಾಟಗಾರರು. ಅವರ ಇತರ ಕೃತಿಗಳಿಂದಲೂ ಕನ್ನಡ ಸಾಹಿತ್ಯಕ್ಕೆ ಗಣನೀಯ ಸೇವೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಆರಂಭದಿಂದಲೇ ದುಡಿದವರಲ್ಲಿ ಶ್ರೀ ಭಾರದ್ವಾಜ ದತ್ತಾತ್ರೇಯ ಕೃಷ್ಣಶರ್ಮರು (ದ.ಕೃ.ಭಾರದ್ವಾಜ) ಪ್ರಮುಖರು. ಈ ಜಿಲ್ಲೆಯಿಂದ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲು ಸೇರಿದವರಲ್ಲಿ ಅವರೇ ಮೊದಲಿಗರು.

ಅವರ ಬಗ್ಗೆ ಅ.ನ.ಕೃಷ್ಣರಾಯರು ಬರೆಯುತ್ತಾ, ಕನ್ನಡ ಕಣ್ಣುಬಿಡುತ್ತಿದ್ದ ಕಾಲದಲ್ಲಿ ಕನ್ನಡಿಗರಿಗೆ ಆತ್ಮದರ್ಶನವಾಗದಿದ್ದ ಅಂಧಯುಗದಲ್ಲಿ ಭಾರದ್ವಾಜರು ಬಹುಮುಖ ಸಾಹಿತ್ಯವನ್ನು ನಿರ್ಮಿಸಿದರು.” ಸಾಹಿತ್ಯ ರಂಗದಲ್ಲಿ ಸ್ಥಾನ ಪಡೆಯುವುದಕ್ಕೆ ಸಾಹಿತ್ಯ ಸಿದ್ಧಿಗಿಂತಲೂ ಅಧಿಕವಾಗಿ  ಐಶ್ವರ್ಯ, ಪದವಿ, ವಿಶ್ವವಿದ್ಯಾನಿಲಯದ ಪ್ರಶಸ್ತಿಗಳು ಅವಶ್ಯಕವಾಗುವುದು ನಾಡಿನ ಬದುಕಿನ ಅವಲಕ್ಷಣ” ಡಬ್ಲ್ಯೂ.ಎಚ್.ಡೇವೀಸ್ ಶುದ್ಧ “ಅಲಾಲು ಟೋಪಿ’ ಅವನು ಕಳುಹಿಸಿದ ಒಂದು ಕಟ್ಟು ಜಾರ್ಜ ಬರ್ನಾಡ್ ಷಾರನ್ನು ಸೇರಿತು,  ಷಾ ಮುನ್ನುಡಿ ಬರೆದು, ಅದರ ಪ್ರಕಟಣೆಗೂ ನೆರವಾದರು. ಡೇವಿಸ್ ಆಂಗ್ಲ ಕಾವ್ಯ ಪ್ರಂಪಂಚದಲ್ಲಿ ಪ್ರಾತಿನಿಧಿಕ ಕವಿಯಾಗಿ ಸ್ಥಾನ ಭದ್ರವಾಯಿತು. ಕನ್ನಡಿಗರಿಗೆ ಈ ಗುಣ ಗ್ರಹಣ ಶಕ್ತಿ ಇದ್ದಿದ್ದರೆ, ದ.ಕೃ.ಭಾರದ್ವಾಜರು ಯಾವ ಸ್ಥಾನದಲ್ಲಿರುತ್ತಿದ್ದರೋ ಎಂದಿದ್ದಾರೆ( ಅನಕೃ – ಕನ್ನಡ ಕುಲರಸಿಕರು ಕೃತಿಯಲ್ಲಿ).

ಇನ್ನೊಂದು ಉದಾಹರಣೆ ಎಂದರೆ, ಗಣಿತಶಾಸ್ತ್ರಜ್ಞರಾದ ರಾಮಾನುಜಂ ಅವರ ಒಂದು ಕಟ್ಟು ಕಾಗದ ಲಂಡ್ ನ ಹಾರ್ಡಿಯವರಿಗೆ ಸೇರಿ,. ಗಣಿತಶಾಸ್ತ್ರಕ್ಕೆ  ಅವರದು ಅತ್ಯುತ್ತಮ ಕೊಡುಗೆ ಎನಿಸಿ ನಾಡಿಗೆ ಹೆಸರು ಬಂದಿತು. ಮತ್ತೆ  ಹಿರಿಯ ಸಾಹಿತಿ ಸಿಪಿ. ಕೃಷ್ಣಕುಮಾರ್ ಅವರು ಸುಧಾ ವಾರಪತ್ರಿಕೆಯಲ್ಲಿ ಹೀಗೆ ಬರೆದ ನೆನಪು- “ಭಾರತೀಯರಲ್ಲಿ ಗುಣಗ್ರಹಣ, ಪ್ರೋತ್ಸಾಹಿಸುವ ಸದ್ಗುಣ ಪಾಶ್ಚಿಮಾತ್ಯರಷ್ಟಿಲ್ಲ. ಕನ್ನಡಿಗರಲ್ಲಿ ನನ್ನದೊಂದು ಕಣ್ಣು ಹೋದರೂ ಪರವಾಯಿಲ್ಲ, ಅವನ ಎರಡೂ ಕಣ್ಣಗಳನ್ನು ಕೀಳಬೇಕೆನ್ನುವವರಿದ್ದಾರೆ” ಎಂದು ಬರೆದಿದ್ದರು.

ಹೌದು  “ಕನ್ನಡಿಗರು ಅಭಿಮಾನ ಶೂನ್ಯರು” ಎಂದೂ ಹೇಳುತ್ತಾರೆ. ಏಕೆ? ಕನ್ನಡಿಗರಲ್ಲಿ ಅಂದಿಗೂ ಇಂದಿಗೂ ಕನ್ನಡ ಸಾಹಿತ್ಯ ರಂಗದಲ್ಲಿ  ನೋಡಿದರೆ ಈ ಪರಿಸ್ಥಿತಿಯಲ್ಲಿ ಏನೂ ಬದಲಾಗಿಲ್ಲವೆನಿಸುತ್ತದೆ…

ಇಂದಿನ ರಾಜಕೀಯ ವಿದ್ಯಾಮಾನ-ಡೋಲಾಯಮಾನ….


ಇದು ನಮ್ಮ ಭಾರತ್ ಮಹಾನ್ ಮಾತ್ರವಲ್ಲ.  ಇದು ವಿಚಿತ್ರ ವಿರೋಧಾಭಾಸಗಳ ದೇಶ ಎಂದರು ಹಿರಿಯರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮುತ್ಸದ್ದಿಗಳು ಮತ್ತು ಅವರ ನಿಷ್ಟಾವಂತ ಬೆಂಬಲಿಗರು ಹೇಗೆ ಕಿರಿಯ ಸೋನಿಯರನ್ನು ತಮ್ಮ ನಾಯಕಿ ಎಂದು ಅಧ್ಯಕ್ಷ ಪಟ್ಟಕ್ಕೇ ಕೂರಿಸಿದರೆಂಬುದೇ ಯಕ್ಷಪ್ರಶ್ನೆ!

*** *** ****

ಪ್ರಬಲ ವಿರೋಧ ಪಕ್ಷವೊಂದು ಆಂತರಿಕವಾಗಿ ಒಡೆದ ಮನೆಯಾಗುವುದು ಒಳ್ಳೆಯ ಲಕ್ಷಣವಲ್ಲ…

ಯಾವುದೇ ಪಕ್ಷದ ಒಳಗೇ ಆಗಲಿ ಅಥವಾ ಬಹಿರಂಗವಾಗಿಯೇ ಆಗಲಿ ಆ ಪಕ್ಷಕ್ಕೇ ಜನ ನಾಯಕನನ್ನು ಜನರೇ ಆರಿಸುವ ಕಾಲವೊಂದು ಬರಬೇಕಷ್ಟೇ…

ನಿಮ್ಮ ಓಟು ಯಾರಿಗೆ..?


ಅಂದರೆ, ಹೇಗೆ ಹೇಳುವುದೋ….ಯಾರಿಗೆ ಕೊಡುವುದೋ ಕಷ್ಟ ಕಷ್ಟ….ಹಾಗೆ ನೋಡಿದರೆ, ನೀತಿ ರೀತಿಗಳಿಗಿಂತಲೂ ಜ್ಯಾತಿಯೇ ಪ್ರಧಾನವಾಗಿರುವಂತಿದೆ.  ಕಳೆದ ಐದು ವರ್ಷಗಳಲ್ಲಿ ಆದ ಅಗಿರಬಹುದಾದ ಅಭಿವೃದ್ಧಿ ಕಾರ್ಯಗಳಿಗಿಂತಲೂ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ಭ್ರಷ್ಟಾಚಾರದ ಹಗರಣಗಳು ಬಹಿರಂಗವಾಗಿವೆ.  ಆರೋಪಿಗಳು ಸಾಬೀತಾಗಿ ಅವರಿಗೆಲ್ಲ ಶಿಕ್ಷೆಯಾಗುತ್ತದೆಯೇ…. ಎಂಬುದೂ ಬೃಹತ್ ಪ್ರಶ್ನೆಯೇ…. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಭ್ರಷ್ಟಾಚಾರಿಗಳಿದ್ದು ಪ್ರಾಮಾಣಿಕರೆಲ್ಲೋ ಇರುವರೆಂಬಷ್ಟು ತಿಳಿದು ಬಂದಿದ್ದು, ಅವರೆಲ್ಲರ ಮಾನ ಹರಾಜಾದದ್ದೂ  ಶ್ರೀ ಸಾಮಾನ್ಯರೂ ದೇಶ ಎತ್ತ ಸಾಗಿದೆ… ಎಂದು ವ್ಯಥೆ ಪಡುತ್ತಿರುವುದಂತೂ ಖಂಡಿತ ನಿಜ. ಅಷ್ಟರಮಟ್ಟಿಗೆ ಸತ್ಯವೆಂಬುದು ಪ್ರಖರವಾಗಿದೆ.  ಇವರಲ್ಲೇ  ಉತ್ತಮರನ್ನು ಆಯ್ಕೆ ಮಾಡಬೇಕಾದ “ಧರ್ಮಸಂಕಟ” ಮತ ದಾರರಿಗೆ. ರೋಸಿ ಕೊಂಡು ಓಟು ಮಾಡದ ವಿದ್ಯಾವಂತರಲ್ಲಿ ಮಧ್ಯಮ ವರ್ಗದವರಿದ್ದಾರೆ. ಅದಾಗಲೇ ಅದನ್ನರಿತ  ಅಭ್ಯರ್ಥಿಗಳು ಅವರ ಮನೆ ಬಾಗಿಲಿಗೆ ಬರುವುದೇ ಇಲ್ಲವಲ್ಲ! ಅವರು ಹೋಗುವುದೇ ಸ್ಲಮ್ ಏರಿಯಾಗಳಿಗಲ್ಲವೇ… ಬಹುತೇಕ ಅವರೇ ಅವರಿಗೆ ಆಧಿಕಾರದಾತರು ಎಂಬುದು ಎಲ್ಲರಿಗೂ ತಿಳಿದ ಸಂಗತಿ…ಕಡಿಮೆ ಭ್ರಷ್ಟರನ್ನು  ಹುಡುಕಿ ಆರಿಸಬೇಕಾದ ಸಂಧಿಗ್ಧ ಪರಿಸ್ಥಿತಿಯಲ್ಲಿದ್ದಾನೆ ಮತದಾರ..  ಕೆಲವೊಂದು ವಾರ್ಡಗಳಲ್ಲಿ ಅದೂ ಕಷ್ಟಕರವೇ…. ಫೂರ್ಣ ಸ್ವಚ್ಛ ಯಾರಿದ್ದಾರೆ….ಯಾರೂ ಇರಲು ಸಾಧ್ಯವಿಲ್ಲವೆಂಬ ವಾತಾವರಣ ಸೃಷ್ಟಿಯಾಗಿದೆ . ಕೋಟಿ ಒಡೆಯರಿಗಷ್ಟೇ ಅಧಿಕಾರವೋ ಎಂಬ ಸಂಶಯವೇ ಕಿತ್ತು ತಿನ್ನುತ್ತಿದೆ..  ಹೀಗಾದರೆ,  ದೇಶದಲ್ಲಿ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಹೆಚ್ಚಿನದೇನನ್ನು ತಾನೆ ನಿರೀಕ್ಷಿಸಲಾದೀತು…?

ಈ ದೇಶದ ಇಂದಿನ ರಾಜಕೀಯದ ಬಗ್ಗೆ ಬರೆಯಲಿಕ್ಕೆ ಬಹಳ ಬೇಜಾರು….


ಈ ದೇಶದ ಪ್ರಸ್ತುತ ರಾಜಕೀಯ ವಿದ್ಯಮಾನಗಳ  ಬಗ್ಗೆ ಬರೆಯಲಿಕ್ಕೆ ಬಹಳ ಬೇಜಾರು ಎಂದು ಕೊಂಡ ಬ್ಲಾಗಿಗರೇ ಬಹಳಷ್ಟು ಮಂದಿಯಲ್ಲವೇ…? ನನಗೂ ಹಾಗೆ ಅನ್ನಿಸಿದ್ದಿದೆ. ಆದರೆ, ದೇಶ ಇಂತಹ ಗಂಭೀರ ಪರಿಸ್ಥಿತಿಯನ್ನೆದುರಿಸುತ್ತಿರುವಾಗ ನಾವು ಸಾಹಿತ್ಯ ಸಂಗೀತ, ಕಲೆ ಅಂತ ಬರೆಯುವುದಾದರೂ ಹೇಗೆ..? ಅದೇನೋ ಹೇಳ್ತಾರಲ್ಲ; “ದೇಶವೇ ಹತ್ತಿ ಉರಿಯುತ್ತಿರುವಾಗ ನಿರೋ ದೊರೆ ಪಿಟೀಲು ಬಾರಿಸುತ್ತಿದ್ದನಂತೆ!” ಹೀಗೆ ಹೇಳ್ತೀನೀಂತ ಬೇಸರಿಸಬೇಡಿ, ಕ್ಷಮಿಸಿ…

ಅಂದ ಹಾಗೆ ಹೇಳಲೇ ಬೆಕೆನಿಸಿದ್ದನ್ನು ಹೇಳದೇ ಇರಲಿಕ್ಕಾಗೊಲ್ಲ; ಯಾಕೆಂದರೆ, ಮನೆಯಲ್ಲಿ ಟಿವಿ.ನ್ಯೂಸ್ ನೋಡ್ತಾ ಪೇಪರ್ ಓದ್ತಾ ಗೊಣಗುಟ್ಟುವುದರ ಜೊತೆಗೆ ಒಂದಿಷ್ಟಾದ್ರೂ ಬ್ಲಾಗಿನಲ್ಲಿ ನಾವುಗಳು
ಹೀಗೆ ಬೊಬ್ಬೆ ಹೊಡೆಯಬಹುದಲ್ಲ ಅನ್ನಿಸೋದು ನಿಜವೇ… ಈವತ್ತಿನ ಸುದ್ದಿ ಸಂಗತಿ – ಇದೇ ಆಗಸ್ಟ್ 16ರಂದು ಭ್ರಷ್ಟಾಚಾರದ ವಿರುದ್ದ ಆಮರಣಾಂತ ಉಪವಾಸ ಮಾಡಲೆಂದು ಬೆಳಿಗ್ಗೆ ಮನೆಯಲ್ಲಿ ಸಿದ್ದರಾಗಿ ಹೊರಡುತ್ತಿರುವಾಗಲೇ ಸಾಮಾಜಿಕ ಕಾರ್ಯಕರ್ತ ಸ್ವಾತಂತ್ರ್ಯ ಹೊರಾಟಗಾರರು ವಯೋವೃದ್ಧರೂ ಆದ ಅಣ್ಣಾ ಹಜಾರೆ ಅವರನ್ನ  ಅವರ ಬೆಂಬಲಿಗರಾದ ಕಿರಣ್ ಬೇಡಿ ಮುಂತಾದವರೊಂದಿಗೆ ಬಂಧಿಸಲಾಗಿದೆ. ಅಲ್ಲದೇ ಅವರನ್ನೆ ಈಗಾಗಲೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸುರೇಶ್ ಕಲ್ಮಾಡಿಯವರಂಥ ಖೈದಿಗಳನ್ನಿರಿಸಿರುವ ಸೆಲ್ ನಲ್ಲಿ ಹಾಕಿದ್ದಾರೆ. ಇದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ “ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಕ್ರಮವಂತೆ” ಅಣ್ಣಾ ಇಂದು ನಿರಶನ ಕೈಗೊಳ್ಳುತ್ತಾರೆಂದು ತಿಳಿದಿದ್ದ ಕಾಂಗ್ರೆಸ್  ಸರ್ಕಾರ ನಿನ್ನೆ ರಾತ್ರಿಯಿಂದಲೇ ಆ ಪ್ರದೇಶದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ತನ್ನ 64 ವರ್ಷಗಳ ಅನುಭವದ “ರಾಜಕೀಯದ ಕಿಡಿಗೇಡಿತನ” ಪ್ರದರ್ಶಿಸಿದೆ.

ಇದು “ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಇಡೀ ದೇಶವೇ ಬೊಬ್ಬೆ ಹೊಡೆದರೇನಂತೆ, ಅದೆಲ್ಲ ಸ್ವಲ್ಪದಿನವಷ್ಟೇ ಜನ ಮರೆಯುತ್ತಾರೆ. ಮತ್ತೆ ಮುಂದಿನ ಚುನಾವಣೆಯಲ್ಲಿ ಹಣದಿಂದಲೇ ತಮ್ಮ ಪಕ್ಷ ಗೆದ್ದು ಬರುತ್ತೆಂಬ ದೃಢ ನಂಬಿಕೆ ತಳೆಂದಂತಿದೆ; ಆಳುವ ಈ ಕಾಂಗ್ರೆಸ್ ಪಕ್ಷ! ಹಾಗೆ ಅವರನ್ನ ಓಟುಕೊಟ್ಟು ಬಹುಮತದಿಂದ ಆರಿಸಲು ಕಾರಣರಾದ ಜನರಲ್ಲಿ ಬಹಳಷ್ಟು ಜನ ಅಜ್ಞಾನ ಅನಕ್ಷರತೆ
ಮತ್ತು ಬಡತನದಿಂದ ಆವರ ಎಂಜಲು ಕಾಸಿಗೆ ಋಣಿಗಳಾದವರು; ಮತ್ತೆ ಅವರ ಬಾಲಬಡುಕರಾದರೇನೆ ಇಲ್ಲಿ ಬದುಕಲು ಸಾಧ್ಯವೆಂದುಕೊಂಡಿರೋ ಕಾರ್ಯಕರ್ತ ರೆನಿಸಿಕೊಂಡವರೂ ಇದ್ದಾರೆಂದರೆ ಯಾರೂ ಇಲ್ಲವೆಂದು  ಹೇಳಲಾರರು…..

ಆದರೇನು! ಈ ದೇಶಕ್ಕೆ ಸ್ವಾತಂತ್ರ್ಯ ಬಂದು 64 ವರ್ಷಗಳಾದ್ರೂ ನಮ್ಮೊಳಗೇ ಇನ್ನೂ ತಿಳಿವಳಿಕೆಯುಳ್ಳ ಜನ ಇದ್ದಾರೆ, ಅವರೆಂದೂ ಇಂಥ ಘೋರ ಅನ್ಯಾಯ ಅಕ್ರಮದ  ವಿರುದ್ಧ ಹೋರಾಡ್ತಾರೆ ಅನ್ನೋ ಪರಿಜ್ಞಾನವೂ ನಮ್ಮನ್ನ ಆಳುವವರಿಗೆ ಇಲ್ಲಾಂದ್ರೆ.. ಅವರು ಅದೆಷ್ಟು ಧನಮದ, ಅಧಿಕಾರಮದದಿಂದ ಆಧಮರಾಗಿ ಮೆರೆಯುತ್ತಿರಬಹುದು….?  ಈ ಭವ್ಯ ಭಾರತ ದೇಶವನ್ನ ಕಾಪಾಡಲು ಶ್ರೀಕೃಷ್ಣ ಪರಮಾತ್ಮ “ಯದಾ ಯಾದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ…” ಅಂತಾ ಇನ್ನೊಮ್ಮೆ ಅವತರಿಸಿ ಬಂದರೂ ಏನೂ ಆಗೊಲ್ಲ
ಅಂದುಕೊಂಡಿದ್ದಾರೇನು ….?

ವಿಷಯಕ್ಕೊಂದು ವಿಶ್ವ ವಿದ್ಯಾನಿಲಯ….?


ವಿಷಯಕ್ಕೊಂದು ವಿಶ್ವ ವಿದ್ಯಾನಿಲಯ ಸ್ಥಾಪಿಸುವುದು ನಮ್ಮ ಶಿಕ್ಷಣ ಕ್ಷೇತ್ರವನ್ನು ಬಾಧಿಸುತ್ತಿರುವ ಮಾರಕ ರೋಗ. ಇದನ್ನು ನೋಡುತ್ತಿದ್ದರೆ ನಾವು ನಮ್ಮ ದೇಶವನ್ನು ದ್ವಿತೀಯ ಸ್ಥಾನಕ್ಕೆ ಕೊಂಡೊಯ್ಯಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ ಎಂಬ ಸಂಶಯ ಬರುತ್ತದೆ….ನಮಗೆ ಚಿಂತನೆ  ಮತ್ತು ಆಲೋಚನೆಗಳಲ್ಲಿ ಯಾವತ್ತೂ ಮುಂಚೂಣಿಯಲ್ಲಿರಲು ಸಾಧ್ಯವಿಲ್ಲ. ಎಂದು ನಾವೇ ನಿರ್ಧರಿಸಿಬಿಟ್ಟಿದ್ದೇವೆ. ಜೊತೆಗೆ ಶಿಕ್ಷಣವನ್ನೂ ಒಂದು ಲಾಭದಾಯಕ ಉದ್ಯಮವೆಂದು ಭಾವಿಸುವವರಿಗೆ ಈ ವಿಷಯ ವಿಶ್ವವಿದ್ಯಾಲಯಗಳು ಗಳಿಕೆ ಯ ಮಾರ್ಗವೂ ಆಗಿಬಟ್ಟಿವೆ….
ಎಂದಿದ್ದಾರೆ ಹಿರಿಯ ವಿಜ್ಞಾನಿ, ಶಿಕ್ಷಣ ತಜ್ಞ ಪ್ರೊ.ಯಶ್ ಪಾಲ್. (ಪ್ರ.ವಾಣಿ)

ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಗೇ ವಿರುದ್ಧವಾಗಿರುವ  ಈ “ವಿಷಯ ವಿಶ್ವವಿದ್ಯಾಲಯಗಳು” ವಿಶ್ವವಿದ್ಯಾಲಯಗಳನ್ನು ಕೇವಲ ತರಬೇತಿ ಸಂಸ್ಥೆಗಳಾಗಿ ಪರಿವರ್ತಿಸಿಬಿಡುತ್ತವೆ. ಅಂದರೆ ವಿಶ್ವವಿದ್ಯಾಲಯಗಳು ವಿಶಾಲ ಮನೋಭಾವದ ಪಾಂಡಿತ್ಯವುಳ್ಳ ನಾಗರೀಕರನ್ನು ಸೃಷ್ಟಿಸುವ ಕೆಲಸವನ್ನೂ ನಿಲ್ಲಿಸಿಬಿಡುತ್ತವೆ….ಯಾಕೆಂದರೆ, ನಮ್ಮ ಸರ್ಕಾರಕ್ಕೆ ಬೇಕಿರುವುದು ತನ್ನ ಗೊಡ್ಡು ಚಿಂತನೆಗಳನ್ನು ಪ್ರಶ್ನಿಸದ ನಾಗರಿಕ ಸಮಾಜವಷ್ಟೇ… ಇದು ಬಡವರನ್ನು ಉನ್ನತ ಶಿಕ್ಷಣದಿಂದ ಹೊರಗಿಡುವ ಕ್ರಿಯೆಯೂ ಆಗಿಬಿಡುತ್ತದೆ.. ಆದ್ದರಿಂದ ವಿಷಯ ವಿದ್ಯಾಲಯಗಳ ಸ್ಥಾಪನೆ ಒಂದು ಅಪ್ರಜಾಸತ್ತಾತ್ಮಕ ನೀತಿ.
-ಎಂದಿದ್ದಾರೆ ಕೇರಳ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರಾದ ಡಾ.ಕೆ.ಎನ್.ಪಣಿಕ್ಕರ್. (ಪ್ರ.ವಾಣಿ)

ಮೇಲೆ ತಿಳಿಸಿದ ಹಿರಿಯ ಶಿಕ್ಷಣ ತಜ್ಞರೂ ಮೇಧಾವಿಗಳ ಮಾತನ್ನು ನಮ್ಮ ಇಂದಿನ ಶಿಕ್ಷಣತಜ್ಞರು ಮತ್ತು ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ, ಮುಂದೊಂದು ದಿನ ಜ್ಞಾನ ದೇಗುಲ ಗಳೆಂದು ಕರೆಸಿಕೊಳ್ಳುವ, ನಮ್ಮ ಮುಂದಿನ ಪೀಳಿಗೆ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳೂ ಕೇವಲ “ಇಂಡಸ್ಟ್ರಿ” (ಕಾರ್ಖಾನೆ) ಗಳಾಗಿ ಬಿಡುತ್ತವೆಯಷ್ಟೇ. ಬಡವರಿಗೆ ಉನ್ನತ ಶಿಕ್ಷಣವೆಂಬುದು ಮರೀಚಿಕೆಯಾಗುತ್ತದೆ.  ಅಂತಹ ಸಾಮಾಜವಾದ ವಿರೋಧಿ ನೀತಿಯಿಂದ  ಅಪಾಯ ಬರದಿರುವಂತೆ ಸಂಬಂಧಪಟ್ಟ ಗಣ್ಯರು ಶಿಕ್ಷಣತಜ್ಞರೂ ಸೂಕ್ತ ಕ್ರಮ ತಡೆಯಾಜ್ಞೆಗಳತ್ತ ಗಮನ ಹರಿಸಬೇಕಲ್ಲವೇ…?

 

ಹಿರಿಯ ಮನಸ್ಕರು ಮತ್ತು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳು…


ಕನ್ನಡ ಸಾಹಿತ್ಯದ ನವೋದಯದ ಕಾಲದ ಸಂದರ್ಭದಲ್ಲಿ  ಇಂಗ್ಲೀಷ್ ಪ್ರಭಾವವೇ ಬಹಳವಿತ್ತು. ಆಗ  ಕನ್ನಡಿಗರು ಕನ್ನಡವನ್ನು ಅನನ್ಯವಾಗಿ ಪ್ರೀತಿಸುವಂತೆ ಓದುಗರನ್ನು ಅಪಾರ ಸಂಖ್ಯೆಯಲ್ಲಿ ಬೆಳೆಸಿ ಮನೆಮನೆಗಳಲ್ಲೂ ಮಾತಾದವರಲ್ಲಿ ಮೊದಲಿಗರು ಅ.ನ. ಕೃಷ್ಣರಾಯರು. ಅವರು ಕಾದಂಬರಿಕಾರರಾಗಿ ಅಂದು ಮಾಡಿದ ಪವಾಡ, ಪಡೆದ ಅಪಾರ ಜನಪ್ರಿಯತೆಯನ್ನು ಕಂಡು ಹೊಗಳಿದ ವಿದ್ವಜ್ಜನರೂ ಇದ್ದರು. ಅವರದು ಜನಪ್ರಿಯ ಸಾಹಿತ್ಯ ಅಗ್ಗದ ಪ್ರಚಾರದ ಸಾಹಿತ್ಯವೆಂದು ಅವರನ್ನೂ ಅವರ ಐಡಿಯಾಲಜಿ(ಇಂದಿನ ವ್ಯಾಖ್ಯೆ)ಯನ್ನೂ ಜರೆದ ಹಿರಿಯ ಸಾಹಿತಿಗಳೂ ವಿಮರ್ಶಕರೂ ಇದ್ದರು. ಆದರೇನು! ಅ.ನ.ಕೃ. ಅವರು ಕನ್ನಡ ನವೋದಯ ಕಾಲದ ಯುಗಪ್ರವರ್ತಕರಲ್ಲಿ ಅಗ್ರಣ್ಯರಾಗಿಯೇ ಉಳಿದರು. ಅಂದೂ ಅವರ ಯಶಸ್ಸನ್ನು ಕಂಡು ಕುದಿಯುವವರು ಕಾಲೆಳೆಯುವ ವಿದ್ವಜ್ಜನರ ಗುಂಪೇ ಇತ್ತು.  ಯಾರು ಏನೇ ಗೊಣಗಿದರೂ ಅ.ನ.ಕೃ ಅವರ ಜನಪ್ರಿಯತೆ ಹೆಚ್ಚಿತ್ತಲೇ ಹೋಯಿತು.  ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅಂದಿನ ಇಂಗ್ಲೀಷ್ ಪ್ರಭಾವೇ ಮೆರೆಯುತ್ತಿದ್ದ ಕಾಲದಲ್ಲಿ ಅವರು ಕನ್ನಡ ಓದುಗರನ್ನು ಅತ್ಯಧಿಕ ಸಂಖ್ಯೆಯಲ್ಲಿ ಬೆಳೆಸಿ ಕನ್ನಡ ಚಳುವಳಿಗಳಲ್ಲೂ ಸಕ್ರಿಯರಾಗಿದ್ದುದು ದಾಖಲೆಯಾಗಿದೆ; ಚಿರಸ್ಮರಣೀಯವೇ ಆಗಿದೆ.

ಇದೀಗ ದೃಶ್ಯಮಾಧ್ಯಮದ ಚಾನೆಲ್ ಗಳು ಹಾಗೂ ಸಿನಿಮಾಗಳೂ ಓದುಗರನ್ನು ಕಿತ್ತುಕೊಳ್ಳುತ್ತಲೇ ಇವೆ. ಹೊಸ ಓದುಗರನ್ನು ಸೃಷ್ಟಿಸುವುದರಲ್ಲಿ ವಿದ್ವಜ್ಜನರ    ಸಾಹಿತ್ಯ ಅದೆಷ್ಟು ಯಶಸ್ವಿಯಾಗಿದೆ ಎಂಬುದು ಬೃಹತ್ ಪ್ರಶ್ನೆಯಾಗಿ ಕಾಡಿದೆ.   ಇಂತಹ ಕಾಲಘಟ್ಟದಲ್ಲಿ ಸಾಹಿತ್ಯೇತರ ಕೃತಿಗಳಿಗೆ ಬೇಡಿಕೆ ಹೆಚ್ಚಿದೆ.

ಆದರೂ ಆಶಾದಾಯಕವೆಂದರೆ, ಮಧ್ಯಮ ವರ್ಗದ ಜನರೂ ಮತ್ತು ಐಟಿ/ಬಿಟಿ ವರ್ಗದವರೂ  ವಯೋವೃದ್ದರೂ ತಮ್ಮ ಸಾಹಿತ್ಯಾಸಕ್ತಿ ಉಳಿಸಿಕೊಂಡು, ಕೊಂಡು ಕಥೆ ಕಾದಂಬರಿಗಳನ್ನುಓದುತ್ತಿರುವುದು ಸಮಾಧಾನಕರವೇ. ಅಷ್ಟಕ್ಕೂ ಕಥೆ ಕಾದಂಬರಿ ಸಾಹಿತ್ಯಕ್ಕೆ ಬೇಡಿಕೆ ಇಲ್ಲವೆಂಬಂತಾಗಿರುವ ಈ ಸಂದರ್ಭದಲ್ಲಿ ಎಸ್.ಎಲ್. ಭೈರಪ್ಪನವರು ತಮ್ಮ ಸಾಮಾಜಿಕ ಬದ್ಧತೆಯ ಕೃತಿಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಸಾಮಾನ್ಯ ಜನತೆಯನ್ನು ಮಾತ್ರವಲ್ಲ, ನೌಕರರು,  ಉನ್ನತ ಅಧಿಕಾರದಲ್ಲಿರುವವರೂ, ರಂಗ ಭೂಮಿ ಸಿನಿಮಾ ಕಲಾವಿದರೂ, ಮತ್ತು ಔದ್ಯೋಗಿಕವಾಗಿ  ಐಟಿ,ಬಿಟಿ ಮತ್ತು ಇತರೆ ಕಂಪೆನಿಗಳ ಕಾರ್ಮಿಕ ವರ್ಗದವರೂ ಅವರ ಕೃತಿಗಳನ್ನುಮೆಚ್ಚಿಕೊಳ್ಳುತ್ತಿದ್ದಾರೆ.  ಅಷ್ಟೇ ಅಲ್ಲ ಕೃತಿಗಳು ಇತರ ಭಾಷೆಗಳಿಗೂ ತರ್ಜಮೆಗೊಂಡಿವೆಯೆಂದರೆ ಅವುಗಳ ಗುಣಮಟ್ಟ ಮತ್ತು ಉಪಯುಕ್ತತೆ ಹೆಚ್ಚಿದೆಯೆಂದೇ. ಹಾಗೇ ಅವರು ಸಾಮಾಜಿಕವಾಗಿ ಬದಲಾವಣೆಯನ್ನು ಸುಧಾರಣೆಯನ್ನೂ ಬಯಸುವ ಅವರ ಕೃತಿಗಳಿಂದ ಕನ್ನಡಿಗರ ಹೆಮ್ಮೆಯ ಸಾಹಿತಿಯಾಗಿದ್ದಾರೆ.

ಭೈರಪ್ಪನವರಿಗೆ ಇತ್ತೀಚೆಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಲಭಿಸಿರುವುದು ಅವರ ಅಭಿಮಾನಿಗಳಿಗೆ ಮಾತ್ರವಲ್ಲ ನಿಜಕ್ಕೂ ಕನ್ನಡಪರ ಕಾಳಜಿಇರುವವರಿಗೆ ಹಾಗೂ ಸಮಾಜಿಕ ಪರಿವರ್ತನೆ ಬಯಸುವ ಬುದ್ಧಿಜೀವಿಗಳಿಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆ ಪಡುವಂತಾಗಿದೆಯಲ್ಲವೇ…?  ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ ಎನ್ನುವವರಿದ್ದಾರೆ.  ಉತ್ತಮ ಸಾಹಿತ್ಯ ಕೃತಿಗಳು ಕಾಲ ಕಾಲಕ್ಕೆ ಜನಮಾನಸದಲ್ಲಿ  ಪ್ರಭಾವ ಬೀರಿರುವುದೂ ಜನಜೀವನಕ್ಕೆ ಹೊಸ ಬೆಳಕನ್ನು ಚೆಲ್ಲುವುದು ನಗ್ನ ಸತ್ಯ.  ಸಾಹಿತ್ಯವೆಂದರೆ ಸಹೃದಯರನ್ನು ತಲುಪುವುದಷ್ಟೇ ಮುಖ್ಯ ಅಲ್ಲವೇ?    ಅದಿಲ್ಲದವರು  ಸಣ್ಣಮನಸ್ಸಿನವರಾಗಿಬಿಡುತ್ತಾರೆ. ಅ.ನ.ಕೃ ಅವರ ಜನಪ್ರಿಯತೆ ಕಂಡು ಕರುಬುವ ಅವರದು ಜನಪ್ರಿಯ ಸಾಹಿತ್ಯವೆಂದು ಜರೆಯುವವರಿದ್ದಂತೆ ಈ ಕಾಲಘಟ್ಟದಲ್ಲೂ ಅಂಥವರು ಇರುವುದರಲ್ಲಿ ಯಾವ ಸೋಜಿಗವೇನಿಲ್ಲ.
ಈಗಿತ್ತಲಾಗಿ ಹಿರಿಯ ಸಾಹಿತಿಗಳ ಬೇರೆ ಬೇರೆ “ಐಡಿಯಾಲಜಿಗಳು” ಏನೇ ಇರಲಿ, ಅದರಿಂದ ಸಾಮಾನ್ಯ ಓದುಗರಿಗೆ ಏನು ಪ್ರಯೋಜನ?  ಈಗಾಗಲೇ ದೃಶ್ಯಮಾಧ್ಯಮದಿಂದ ಒಂದಿಷ್ಟು ಸೋರಗಿರುವ ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಕೊಡುಗೆ ಶ್ಲಾಘನಿಯ…. ನಾವು ಮಾಡಲಾಗದ ಕೆಲಸವನ್ನು ಕನ್ನಡಕ್ಕೆ ಭೈರಪ್ಪನವರು ಮಾಡಿದ್ದಾರೆ ಎಂದು ಹೆಮ್ಮೆಪಡುವ ಬದಲು ಜ್ಞಾನಪೀಠ ಪ್ರಶಸ್ತಿ ಹೊತ್ತುಕೊಂಡಿರುವ ಯು.ಆರ್.ಅನಂತಮೂರ್ತಿಯವರು,  ” ತಮ್ಮದೇ ಐಡಿಯಾಲಜಿ” ಹೊಂದಿದ್ದು ದುರಹಂಕಾರ, ಪೂರ್ವಾಗ್ರಹದಿಂದ ಬೈರಪ್ಪನವರನ್ನು ರಾಹುಗ್ರಸ್ತರೆನ್ನುವುದು, ಇತರ ಸಾಹಿತಿಗಳನ್ನು ಕೇತುಗ್ರಸ್ತರೆನ್ನುವುದು ಅವರಿಗೆ ಮಾತ್ರವಲ್ಲ ಕನ್ನಡಕ್ಕೂ ಶೋಭೆ ತರುವುದಿಲ್ಲ.

ಹಿರಿಯ ಸಾಹಿತಿ ಬರಗೂರರು ಅನಂತಮೂರ್ತಿ ಸುರಕ್ಷಾ ವಲಯದಲ್ಲಿದ್ದಾರೆ, ಅವರದೇ ಪಟಲಾಮ್ ಇದೆ … ಎಂದಿದ್ದಾರೆ.  ಅವರು ಎಡ ಪಂಥಿಯರಲ್ಲ,  ಬಲಪಂಥೀಯರೂ ಅಲ್ಲ ನಡುಪಂಥೀಯರು ಎಂಬ  ಚಂಪಾ ಅವರ ಮೂದಲಿಕೆ…. ಇವೆಲ್ಲ ನಮ್ಮಜನಸಾಮಾನ್ಯರೂ ಕನ್ನಡಾಭಿಮಾನಿಗಳ ಮೇಲೆ ಯಾವ ದುಷ್ಪಪರಿಣಾಮ ಬೀರುವುವು ಎಂಬುದನ್ನೇನೂ ಈ ಹಿರಿಯರು  ಚಿಂತಿಸಿದಂತಿಲ್ಲ.

ಯಾರೇನೆ  ಹೇಳಲಿ ಓದುಗರ ಸಂಖ್ಯೆ ಬೆಳೆಯತ್ತಿರಬೇಕು,  ಸಾಹಿತ್ಯಕೃತಿಗಳು, ಕಾದಂಬರಿಗಳು ಜನಸಾಮಾನ್ಯರನ್ನು ತಲುಪುವುದಷ್ಟೇ ಮುಖ್ಯವಲ್ಲವೇ? ಯಾವುದೇ ಸಾಹಿತ್ಯಕೃತಿಗಳು ಹಿರಿಯ ಸಾಹಿತಿಗಳನ್ನು ವಿದ್ವಜ್ಜನರನ್ನು ತೃಪ್ತಿಪಡಿಸಲಿಕ್ಕಾಗಿಯೆ ಹುಟ್ಟಿಕೊಳ್ಳುತ್ತವೆಯೇ …? ಸಾಹಿತ್ಯ ಕೃತಿಗಳು ಸಾಹಿತಿ ವಿಮರ್ಶಕರ ಗುಂಪಿನ ವಲಯಕ್ಕಾಗಿಯೇ ಆ ಮಟ್ಟದ ಐಡಿಯಾಲಜಿಯಲ್ಲಿ ತಯಾರಾಗುವ ಪ್ರಾಡಕ್ಟುಗಳೇನು..? ವಿದ್ವಜ್ಜನರನ್ನು ಮೆಚ್ಚಿಸುವ ಸಾಹಿತ್ಯ ಪ್ರಕಾರವೇ ಬೇರೆ ಇದ್ದೀತು;ಇರಲಿ.  ಹಾಗೆ ನೋಡಿದರೆ,ಯಾವುದೇ ಸಾಹಿತಿಯೊಬ್ಬರ ಕೃತಿಗಳೆಲ್ಲವೂ ವಿದ್ವತ್ ಪೂರ್ಣ ಕೃತಿಗಳೇ (ಮಾಸ್ಟರ್ ಪೀಸ್)  ಆಗಿರುತ್ತವೇನು? ಎಂಬೆಲ್ಲ ಪ್ರಶ್ನೆಗಳುಕಾಡುತ್ತವೆಯಲ್ಲ! ಹಾಗೆ ನೋಡಿದರೆ, ಬೈರಪ್ಪನವರು ಜನಸಾಮಾನ್ಯರ ಸಾಹಿತಿಯಾಗಿದ್ದಾರೆ. ಸಮಾಜದ ಮೇಲೆ ಬೆಳಕು ಚೆಲ್ಲುವ ಕೃತಿಗಳು, ಸಾಮಾನ್ಯ ಜನತೆಯನ್ನು ಮನವನ್ನು ಮುಟ್ಟಿ ತಟ್ಟಿ ಎಚ್ಚರಿಸುವ ಕೃತಿಗಳನ್ನು ಭೈರಪ್ಪನವರು ಬರೆದಿದ್ದಾರೆಂಬುದಕ್ಕೆ ಅವರ ಅಪಾರ ಜನಪ್ರಿಯತೆಯೇ ಸಾಕ್ಷಿ.

ಹಿರಿಯ ಮನಸ್ಕರು ಸಾಮಾನ್ಯ ಜನತೆಯನ್ನು ತಲುಪುವಂತ ಸಾಹಿತ್ಯ ಕೃತಿಗಳನ್ನು ಮುಕ್ತ ಮನಸ್ಸಿನಿಂದ ಮೆಚ್ಚಿ ಬೆಂಬಲಿಸಬೇಕಲ್ಲವೇ…..?  ಹಾಗಲ್ಲದೇ, ತಮ್ಮ ಮೂಗಿನ ನೇರಕ್ಕೇ ತಕ್ಕ ಐಡಿಯಾಲಜಿ ಹುಡುಕುವಂತ ಹುನ್ನಾರವೇಕೇ? ವ್ಯರ್ಥ ಪ್ರಲಾಪವೇಕೆ..? ಅದರಿಂದ ನಮ್ಮ ಕನ್ನಡ ನಾಡು ನುಡಿಗೆ ಜನಪರ ಕಾಳಜಿಗೆ ಮತ್ತು ಎಲ್ಲರನ್ನೂ ತಲುಪಬಲ್ಲ  ಸರಳ ಸುಲಭ ಶೈಲಿಯ ಸಾಮಾಜಿಕ ಬದ್ಧತೆಯುಳ್ಳ ಸಾಹಿತ್ಯಲೋಕಕ್ಕೆ ಯಾವ ಪ್ರಯೋಜನವಿದೆ?

ಒಟ್ಟಿನಲ್ಲಿ ಸಾಹಿತ್ಯ ಕೃತಿಯೊಂದು ಕರ ಪತ್ರವೋ,  ಕೇವಲ ವಾಚ್ಯವೋ ಅತ್ಯುತ್ತಮ ಕೃತಿಯೋ ಎಂಬುದನ್ನು ಓದುಗರು ಮೊದಲು ನಿರ್ಧರಿಸುತ್ತಾರಲ್ಲವೇ….. ಭೈರಪ್ಪನವರಂಥವರು ಮಹಾಜನತೆಯ ಕಾಳಜಿಪರವಾಗಿರುವ ಲೇಖಕರು ಯಾವೊಂದು ಪದವಿ ಪುರಸ್ಕಾರ ಬಯಸಿ ಬರೆಯುವವರೇ…?   ಅಂಥ ಪದವಿ ಪುರಸ್ಕಾರ ಅವರನ್ನೇ ಹುಡುಕಿಕೊಂಡು ಬರುತ್ತವೆ.  ಅದಕ್ಕಾಗಿ ಅವರು ಯಾವ ಬಗೆ ತಾಲೀಮು ಮಾಡುವ ಅಗತ್ಯವಿರುವುದಿಲ್ಲ.  ಅಂತೆಯೆ ಅವರಿಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಹುಡುಕಿಕೊಂಡು ಬಂದಿದೆಯಲ್ಲವೇ..?


ಅಲ್ಲಾ, ಈ ನಮ್ಮ ಕಸ್ತೂರಿ ಕನ್ನಡದ ಹಿರಿಯ ಸಾಹಿತಿಗಳು
ಹೀಗೇಕೆ ಕೆಸರೆರಚುತ್ತಾ ಕಚ್ಚಾಡುತ್ತಿದ್ದಾರೆ..?
ಯು.ಆರ್. ಅನಂತ ಮೂರ್ತಿಯವರು  ತಮ್ಮ
ಇತ್ತೀಚಿನ “ಸೃಜನಶೀಲತೆಯ ಅಗ್ನಿ ದಿವ್ಯ” ಲೇಖನದಲ್ಲಿ
(ಪ್ರ.ವಾ-26-06-11)ಎಸ್.ಎಲ್.ಭೈರಪ್ಪ ಸಮರ್ಥರಾದ ಲೇಖಕರಾಗಿವುದರಿಂದ ಅವರನ್ನು ಐಡಿಯಾಲಜಿ ಎಂಬ
ರಾಹುವಿನಿಂದ ಬಿಡುಗಡೆ ಮಾಡಿದ ತಕ್ಷಣ ಕೃತಿಯ ಒಳಗಿರುವ ಕಲೆ ಗೋಚರಿಸತೊಡಗುತ್ತದೆ. ನಮ್ಮ ಕೆಲವು
ಎಡ ಪಂಥೀಯ ಲೇಖಕರೂ ಕೂಡಾ ಅವರ ಅಬ್ಬ್ರದ ಮಾತಿನ ರತಿಯಲ್ಲಿ ಕೇತು ಗ್ರಸ್ತರಾಗಿರುತ್ತಾರೆ.
ಒಟ್ಟಿನಲ್ಲಿ ಎಲ್ಲವೂ ಬೆಳಕನ್ನು ಮಾಯಮಾಡುವ ಗ್ರಹಣಗಳೇ.. ಎಂದಿದ್ದಾರೆ
?!!

ಇನ್ನು ಬರಗೂರು ರಾಮಚಂದ್ರಪ್ಪನವರೋ
ಅನಂತ ಮೂರ್ತಿಯವರ ಹೇಳಿಕೆ ರಾಹುಗ್ರಸ್ತ ಮತ್ತು ಕೇತುಗ್ರಸ್ತ ಇವುಗಳ ಬಗ್ಗೆ ಪ್ರಶ್ನಿಸಿ
ಖಂಡಿಸಿರುವುದು ಸರಿಯೇ ಆದರೂ ಅವರೂ  ಭೈರಪ್ಪನವರ ಐಡಿಯಾಲಜಿ
ನನಗೂ ಇಷ್ಟವಾಗುವುದಿಲ್ಲ…..ಎನ್ನುವುದೇಕೆ..?!!.

ಈ ಹಿರಿಯ ಸಾಹಿತಿಗಳ ಐಡಿಯಾಲಜಿ ಏನೇ ಇರಲಿ,  ಭೈರಪ್ಪನವರ
ಕೃತಿಗಳು ಅಪಾರ ಓದುಗರನ್ನು ದೇಶವಿದೇಶಗಳಲ್ಲಿ ಗಳಿಸಿದ್ದು ಮನೆಮನೆ ಮಾತಾಗಿವೆಯಲ್ಲ….
ಸಾಹಿತ್ಯ ಕೃತಿಗಳಲ್ಲಿ ಕಾದಂಬರಿಗಳು ಜನಸಾಮಾನ್ಯರನ್ನು ತಲುಪುವುದಷ್ಟೇ ಮುಖ್ಯವಲ್ಲದೇ ಇಂತಹ
ಹಿರಿಯ ಸಾಹಿತಿಗಳನ್ನು ತೃಪ್ತಿಪಡಿಸಲಿಕ್ಕಾಗಿಯೆ ಹುಟ್ಟಿಕೊಳ್ಳುತ್ತವೆಯೇನು?  ಸಾಹಿತಿ ವಿಮರ್ಶಕರ ಗುಂಪಿನ ವಲಯದಲ್ಲಿ ಆ ಮಟ್ಟದ
ಐಡಿಯಾಲಜಿಯಲ್ಲಿ ತಯಾರಾಗುವ ಪ್ರಾಡಕ್ಟುಗಳೇನು..?

ಒಟ್ಟಿನಲ್ಲಿ ಸಮಾಜದ ಮೇಲೆ ಬೆಳಕು ಚೆಲ್ಲುವ ಕೃತಿಗಳು,
ಸಾಮಾನ್ಯ ಜನತೆಯನ್ನು ಮನವನ್ನು ಮುಟ್ಟಿ ತಟ್ಟಿ ಎಚ್ಚರಿಸುವ ಕೃತಿಗಳನ್ನು ಭೈರಪ್ಪನವರು
ಬರೆದಿದ್ದಾರೆಂಬುದಕ್ಕೆ ಅವರ ಅಪಾರ ಜನಪ್ರಿಯತೆಯೇ ಸಾಕ್ಷಿ.

ಒಟ್ಟಿನಲ್ಲಿ ಸಾಹಿತ್ಯ ಕೃತಿಯೊಂದು ಕರ ಪತ್ರವೋ,  ಮಹಾನ್ ಕಲಾ ಕೃತಿಯೋ
ಎಂಬುದನ್ನು ಓದುಗರು ಮೊದಲು ನಿರ್ಧರಿಸುತ್ತಾರಲ್ಲವೇ…..ಪಂಡಿತರು ವಿಮರ್ಶಕರ “ಐಡಿಯಾಲಜಿ”  ಬೇಕಿಲ್ಲ ಓದುಗ ರಿಗೆ.

ಸಾಮಾನ್ಯ ಜನತೆಗೆ ತಲುಪುವ ಸಾಹಿತ್ಯ
ಕೃತಿಗಳನ್ನು ಬರೆದಿರುವ ಭೈರಪ್ಪನವರಿಗೆ ಆ ಬಗ್ಗೆ ಚಿಂತೆ ಇರುವಂತಿಲ್ಲವೆಂದು ಕಾಣುತ್ತದೆ. ಕನ್ನಡದ
ಕಂಪನ್ನುಸೂಸುವ ಜನತೆಗೆ ಬೆಳಕನ್ನು ಚೆಲ್ಲುವ ಕೆಲಸವನ್ನಷ್ಟೇ ಅವರು ಮಾಡಿದ್ದಾರೆ ಮಾಡುತ್ತಿದ್ದಾರೆ ಎಂದೇ
ತಿಳಿದಿದ್ದಾರೆ ಕೋಟ್ಟಾನು ಕೋಟಿ ಕನ್ನಡಿಗರು.

ಅನಂತ ಮೂರ್ತಿ ಅವ್ರು ಯಾವ ಪಂಥೀಯ…?


ಇತ್ತ ಎಡ ಪಂಥೀಯರನ್ನು ಎದುರು ಹಾಕಿಕೊಂಡು ಅತ್ತ ಬಲ ಬಂಥೀಯರನ್ನೂ ವಿರೋಧಿಸುವಂತೆ ನಾಟಕವಾಡುತ್ತಿರುವ ಹಿರಿಯ ಸಾಹಿತಿ ಡಾ.ಯು.ಆರ್.ಅನಂತ ಮೂರ್ತಿ ಪೂರ್ವಾಗ್ರಹ ಪೀಡಿತರು. ಇಂತಹ ಒಬ್ಬ ಸಾಹಿತಿ ರಕ್ಷಣಾ ವಲಯದಲ್ಲಿ ನಿಂತು ಮಾತನಾಡುವುದಾದರೂ ಏಕೆ ಎಂದು ಹಿರಿಯ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ. ಅನಂತ ಮೂರ್ತಿ ಪತ್ರಿಕೆಯೊಂದರ ಸಾಪ್ತಾಹಿಕದಲ್ಲಿ ಬರೆದ ಲೇಖನದ (ಪ್ರ.ವಾಣಿ-26-06-2011) ಮೂಲಕ ಇತರೆ ಸಾಹಿತಿಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ. …ದೊಡ್ಡ ಸಾಹಿತಿಯಾದ ಅನಂತ ಮೂರ್ತಿ ಅವರ ಮಾತಿಗೂ ಕೃತಿಗೂ ಸಂಬಂಧವಿಲ್ಲದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ಇಂತಹ ಪೂರ್ವಾಗ್ರಹ ಪೀಡಿತರ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು ಎಂದೂ ಹೇಳಿದ್ದಾರೆ( ಕ.ಪ್ರ -28-06-2011).

ಅದೇ ಕ.ಪ್ರ ಪತ್ರಿಕೆಯಲ್ಲಿ ಹಿರಿಯ ಸಾಹಿತಿ ಚಂದ್ರಶೇಖ್ರಪಾಟೀಲರೂ ಅನಂತ ಮೂರ್ತಿ ಎಡವೂ ಅಲ್ಲ ಬಲವೂ ಅಲ್ಲದ ನಡು ಪಂಥೀಯ ಎಂದಿದ್ದಾರೆ. (ನನಗನಿಸುತ್ತದೆ ಅವ್ರು ಅತಂತ್ರೀಯರೋ. ಎಂದು.). ಮುಂಚೆ ವೈದಿಕರು ಇತರರನ್ನು ಕಚ್ಚಾಟಕ್ಕೆ ಬಿಟ್ಟು ಮಜಾನೋಡಿ ಅನುಭವಿಸುತ್ತಿದ್ದರು. ಇದೀಗ ಅಂಥವರ ನಡುವೆಯೇ ಸಂಘರ್ಷ ಹುಟ್ಟಿಕೊಂಡಿದೆ ಎನ್ನುತ್ತಾರೆ ಪಾಟೀಲರು. ಆದರೇನು!

ವೈದಿಕರಾದ ಭೈರಪ್ಪನವರು ಈ ಅಹಮಿಕೆಯ ಮನುಷ್ಯ ಗೊಣಗಿಕೊಂಡರೆ ನನಗೇನು… ಎಂಬಂತೇ ತಮ್ಮ ಸಾತ್ವಿಕ ಮೌನದಿಂದ ಇದ್ದಾರೆ;ಯಾರೆಲ್ಲರನ್ನೂ ಈ ಬಗ್ಗೆ ಚಿಂತನಗೆ ಹಚ್ಚಿದ್ದಾರೆ.

ನಾನು ಯು.ಆರ್.ಅನಂತ ಮೂರ್ತಿಯವರ ಲೇಖನ ಓದಿದ್ದೇನೆ. ಈ ಲೇಖನದ ಉದ್ದಕ್ಕೂ ಅವರ ವಿಕೃತ ವಿಚಾರಗಳು ಮತ್ತು ವಿರೋಧಾಭಾಸಗಳು ಎಂತವ್ರನ್ನೂ ಗೊಂದಗೊಳಿಸುತ್ತವೆ; ಕೆಲವೊಮ್ಮೆ ಅಪಾಯಕಾರಿಯಾದ  ಹೇಳಿಕೆಗಳೆನಿಸುತ್ತವೆ.

ಅವರ ಆ  ” ಸೃಜನಶೀಲತೆಯ ಅಗ್ನಿ ದಿವ್ಯ” ಲೇಖನದ ಆರಂಭದಲ್ಲೇ ಹೀಗೆ ಹೇಳುತ್ತಾರೆ- ಭಾರತೀಯ ಕಾವ್ಯ ಮೀಮಾಂಸೆಯಲ್ಲಿ “ವಿಭಾವ” ಎಂಬ ಶಬ್ದವಿದೆ. ಭಾವವೊಂದು ಸಾಹಿತ್ಯ ಕೃತಿಯಾಗುವಾಗ ಅದಕ್ಕೊಂದು ವಿಭಾವದ ಅಗತ್ಯವಿದೆ. ಅಂದರೆ ಆ ಭಾವವನ್ನು ಧರಿಸಬಲ್ಲ ಒಂದು ಅಥವಾ ಅದನ್ನು ಹೊತ್ತು ಹೆರಬಲ್ಲ ಒಂದು ದೇಹದ ಅಗತ್ಯವಿದೆ- ಅದೇ ವಿಭಾವ.. ನಾವು ಎಲಿಯಟ್ ನಿಂದ ತಿಳಿದುಕೊಂಡ ಆಬ್ಜೆಕ್ಟಿವ್ ಕೊರಿಲೇಟಿವ್ ಕೂಡಾ ಇದೇ ವಿಭಾವ ಎನ್ನುತ್ತಾರೆ.

ಅವರ ಈ ಮಾತಿನ ಜಾಡನ್ನೇ ಹಿಡಿದು ಹೇಳುವುದಾದರೆ, ಆತ್ಮಕ್ಕೊಂದು ದೇಹದ ಅಗತ್ಯವಿರುವಂತೆಯೇ ಭಾವವೊಂದು ಉತ್ತಮ ಸಾಹಿತ್ಯ ಕೃತಿಯಾಗುವಾಗ ಅದಕ್ಕೊಂದು ವಿಭಾವದ ಅಗತ್ಯವಿದೆ. ಅದನ್ನು ಹೊತ್ತು ಹೊರಹಾಕಬಲ್ಲ ದೈವಿಕ ಭಾವದ  ( ದೇಹವುಳ್ಳ ತಾತ್ವಿಕ ನಿರೀಕ್ಷಣಾಭಾವದ) ಸಾಹಿತಿಯ ಅಗತ್ಯವಿದೆ ಎನ್ನುತ್ತದೆ. ಇದಕ್ಕೆ ಅನಂತಮೂರ್ತಿಯವರು ಏನೆನ್ನುತ್ತಾರೋ…

ಬರಗೂರರು ಹೇಳುವಂತೇ ಅನಂತ ಮೂರ್ತಿ ಅವರ ಮಾತು ನಡವಳಿಕೆಗಳು ಒಂದಕ್ಕೊಂದು ತಾಳೆಯಾಗುವುದೇ ಇಲ್ಲ ಎನ್ನುವುದಕ್ಕೇ ಅದೇ ಲೇಖನದ ಇನ್ನೊಂದು ಸಾಲು ಹೀಗಿದೆ ನೋಡಿ- “ಭಾರತೀಯ ಸಿನಿಮಾ ಇರುವ ಹಾಗೆಯೇ ಕನ್ನಡ ಸಿನಿಮಾ ಅನ್ನುವುದೂ ಒಂದಿದೆ. ಇದು ಕನ್ನಡಕ್ಕೆ ತನ್ನದೇ ಆದ ಕೆಲವು ಕೊಡುಗೆಗಳನ್ನು ಕೊಟ್ಟಿದೆ”

ಭಾರತೀಯ ಸಿನಿಮಾ ಇರುವ ಹಾಗೆಯೇ… ಹಾಗೆಂದರೇನು? ಕನ್ನಡ ಸಿನಿಮಾಗಳೆಲ್ಲ ಭಾರತೀಯ ಸಿನಿಮಾ ಅಲ್ಲವೆಂದೇ…?

ದೊಡ್ಡ ಸ್ಥಾನದಲ್ಲಿರುವ ಸಾಹಿತಿಯಾಗಿ ಜ್ಞಾನವೃದ್ಧರೂ ಆಗಿರುವ ಅನಂತ ಮೂರ್ತಿಗಳು ವಸ್ತು ನಿಷ್ಠೆಯಿಂದ ವಿಮರ್ಶೆ ಮತ್ತು ಪರಾಮರ್ಶೆ ಮಾಡಿಕೊಳ್ಳದೇ ಪೂರ್ವಾಗ್ರಹ ಪೀಡಿತರಾಗಿ, ದೇಶವಿದೇಶಗಳಲ್ಲಿ ಅಪಾರ ಜನಮನ್ನಣೆಗಳಿಸಿರುವ ಬೈರಪ್ಪನವರನ್ನು ರಾಹುಗ್ರಸ್ತರೆಂದು ಇತರರನ್ನು ಕೇತು ಗ್ರಸ್ತರೆಂದು ಹೇಳುತ್ತ , ತಾವು ಕನ್ನಡದ ಪ್ರಗತಿಪರ ಕಾಳಜಿಯಿಂದ ದೂರವಾದ ಬುದ್ಧಿಗೂ ಮುಪ್ಪಡರಿದಂತೇ ವಿಕೃತ ಹೇಳಿಕೆಯನ್ನು ನೀಡುವುದೂ,  ನಾಡಿನ ಹಿರಿಯ ಸಾಹಿತಿಗಳೂ ಹಾಗೂ ಜನಸಾಮಾನ್ಯರಿಂದಲೂ ಆಗಾಗ್ಗೆ ಬೈಯಿಸಿಕೊಳ್ಳುವ ಶಾಪಗ್ರಸ್ತರಂತೆ ಕಾಣುವುದು ಅವರಿಗೆ, ಅವರು ಪಡೆದುಕೊಂಡಿರುವ ಸ್ಥಾನಕ್ಕೆ ಶೋಭೆಯಲ್ಲ.

“ಮೇಲೇರಿದಾತ ಸಣ್ಣವನಿರಲೇಬೇಕು…” ಎಂಬ ಹಿರಿಯ ಕವಿಗಳ ಮಾತನ್ನು ಮರೆತವರು…


ಮೂಡುವನು ರವಿ ಮೂಡುವನು
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು
ಕುಣಿದಾಡುವನು
ಏರುವನು ರವಿ ಏರುವನು
ಬಾನೊಳು ಸಣ್ಣಗೆ ತೋರುವನು
ಮೇಲೇರಿದಾತ ಸಣ್ಣವನಿರಲೇಬೇಕೆಂಬ ಮಾತನು ಸಾರುವನು.
ಇದು ನಾನು ಚಿಕ್ಕವನಿದ್ದಾಗ ಪಠ್ಯ ಪುಸ್ತಕದಲ್ಲಿ ಓದಿದ ಪದ್ಯ. ಬಹುಶಃ ನನ್ನ ನೆನಪಿನಂತೆ ಹಿರಿಯ ಕವಿ ಪಂಚೆ ಮಂಗೇಶ ರಾಯರು  ಬರೆದ ಪದ್ಯವದು. ತೀರ ಸರಳವಾಗಿದ್ದು ಹಾಗೂ ಅಬಾಲವೃದ್ಧರಾದಿಯಾಗಿ ಓದಿದರೆ ಮರೆಯಲಾಗದ ಸಾಲುಗಳಿರುವ ಪದ್ಯವಿದು.  ಈ ಪದ್ಯದ ಸಾಲುಗಳು  ಇಂದಿಗೆ ನಮ್ಮ ಅತ್ಯಂತ ಜನಪ್ರಿಯ ಸಾಹಿತಿ ಭೈರಪ್ಪನವರಿಗೆ ಅವರ ಮೇರು ವ್ಯಕ್ತಿತ್ವ ಮತ್ತು ಘನತೆಗೆ ತಕ್ಕಂತೆ ಕಲಶಪ್ರಾಯದಂತಿವೆ.

ಕೆಲ ಘನ ವಿದ್ವಾಂಸರೂ ಇರುತ್ತಾರೆ “ಮೇಲೇರಿದಾತ ಸಣ್ಣವನಿರಲೇಬೇಕು…”  ಎಂಬ ಹಿರಿಯ ಕವಿಗಳ ಮಾತನ್ನು ಮರೆತು ತಮ್ಮ ಸಣ್ಣತನ, ಸಣ್ಣ ಮನವನ್ನು ತರೆದು ತೋರುತ್ತಾರೆ. ತಮ್ಮ ವ್ಯಕ್ತಿತ್ವ ಘನತೆ ತಾವೇ ಪಡಕೊಂಡಿರುವ ಮಾನಸಮ್ಮಾನಗಳಿಗೂ ಸೊಪ್ಪು ಹಾಕದಂಥ ಮಹಾಜ್ಞಾನಕ್ಕೆ ಅಧಿಪತಿಗಳಿವರು!
ಅಂಥವರಲ್ಲಿ ಪ್ರಾಯಶಃ ಮೊಟ್ಟ ಮೊದಲಿಗೆ ಎತ್ತರಕ್ಕೆ ಕಾಣುವವರೆಂದರೆ ಕನ್ನಡ ಜ್ಞಾನಪೀಠಾಧಿಪತಿ ಯು.ಆರ್. ಅನಂತಮೂರ್ತಿಯವರು. ನನಗೆ ನೆನಪಿರುವಂತೆ ಅದು ಇಂದಿರಾಗಾಂಧಿ ಎಮರ್ಜನ್ಸಿ ಘೋಷಸಿದ್ದ ಕಾಲ. ಆಗ ಶಿವಮೊಗ್ಗಾದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ  ನಡೆದಿತ್ತು. ಎಸ್.ವಿ.ರಂಗಣ್ಣನವರು ಆ ಸಮ್ಮೇಳನಾಧ್ಯಕ್ಷರಾಗಿದ್ದರು. ಸಮ್ಮೇಳನಕ್ಕೆ ಗೋಪಾಲಕೃಷ್ಣ ಅಡಿಗರನ್ನು, ಅನಂತ ಮೂರ್ತಿಯವರನ್ನೋ ಅಧ್ಯಕ್ಷರನ್ನಾಗಿ ಅರಿಸಲಿಲ್ಲವೆಂಬ ಆಕ್ರೋಶವೋ ಏನೋ… ಅಂದು  “ಸಾಹಿತ್ಯ ಸಂಜೆ” ಎಂಬ ಕಾರ್ಯಕ್ರಮವೊಂದನ್ನು ಕಸ್ತೂರಬಾ ಕಾಲೇಜಿನ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.  ಆ ಕಾರ್ಯಕ್ರಮದಲ್ಲಿ ಅಡಿಗರು ತಮ್ಮ ಸಾತ್ವಿಕ ಕೋಪವನ್ನು ಪದರ್ಶಿಸಿ  ಅಂದೇನು ಸಾಹಿತ್ಯಕ್ಕೇ ಸಂಜೆಯಾಗಿದೇಯೋ.. ಎಂದು ಉದ್ದಾರವೆತ್ತಿ ತಮ್ಮ ಘನತೆ ಉಳಿಸಿಕೊಂಡು  ಭಾಷಣ ಮಾಡಿದರೆ, ಅದೇ ವೇದಿಕೆಯ ಮೇಲಿದ್ದ ಯು.ಆರ್.ಅನಂತ ಮೂರ್ತಿಯವರು ಎದ್ದು ಭಾಷಣ ಮಾಡುವಾಗ ತಮ್ಮ ತಾಮಸ ಕೋಪವನ್ನು ತಾವು ಇಂಗ್ಲೀಷ್ ಬಲ್ಲ ಪ್ರೊಫೆಸರರೆಂಬ ಆಟಾಟೋಪದಿಂದ ತಮ್ಮೊಳಗೇ ಚಿಗರೊಡೆಯುತ್ತಿದ್ದ ಅಹಂಕಾರದಿಂದ ಭಾಷಣ ಬಿಗಿದಿದ್ದರು…ಜನರೂ ಅಂದಿನ ಅನಂತ ಮೂರ್ತಿ ಹೇಳುವುದೇ ನಿಜವೇನೋ ಎಂಬಂತೆ ಮಂತ್ರ ಮುಗ್ದರಾಗಿದ್ದರು.  ಅದೇ ಅನಂತ ಮೂರ್ತಿ ಇಂದಿಗೆ ನಮ್ಮ ಜನ ಮುಂದುವರೆದಿದ್ದಾರೆ, ಎಂಬುದನ್ನು ಮರೆತಿದ್ದಾರೆ. ತಾವು ಪಡಕೊಂಡಿರು ಸ್ಥಾನದಿಂದ ತಾವು ಏನು ಹೇಳಿದರೂ ಕೇಳುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಇವರಂಥ ಜ್ಞಾನಿಗಳು ಬುದ್ದಿ (ಬದ್ಧ) ಜೀವಿಗಳನ್ನು ಬೆಂಬಲಿಸುವ  ಪ್ರೊಫೆಸರ್ ಜಿ.ಕೆ.ಗೋವಿಂದರಾವ್ ಅವರಂಥವರೂ  ಇದ್ದಾರೆ! ಇವರನ್ನು ಬೆಂಬಲಿಸುವ ಶಿಷ್ಯರೂ ಮತ್ತು  ಇವರ ವಿಚಾರಗಳನ್ನು ಪ್ರಕಟಿಸುವ ಪತ್ರಿಕೆಗಳೂ ಇವೆಯಲ್ಲ!

ಜೀವನದ ಸಂಜೆಯಲ್ಲಿ ಶಾಂತರಾಗಿ ದ್ದುಕೊಂಡು ತಮ್ಮ ಸಮಚಿತ್ತತೆಯಿಂದ ಎಲ್ಲರನ್ನೂ ಏನೆಲ್ಲವನ್ನು ತೂಗಿ ನೋಡುವುದನ್ನು ಬಿಟ್ಟು ತಾವು ಜ್ಞಾನಪೀಠಾಧಿಪತಿ ಜ್ಞಾನಕ್ಕೇ ಅಧಿಪತಿ ಎಂಬ ಭೃಗು ಮಹರ್ಷಿಯ ಅಹಂಕಾರವನ್ನು ಮರೆಯುತ್ತಲೇ ಬಂದಿದ್ದಾರೆ. ಇವರ ಅಂಗಾಲಿನಲ್ಲಿ ಅದೇನು ಅಹಂಮಿಕೆಯ ಕಣ್ಣೇನಾದರೂ ಇದ್ದರೆ ಅದನ್ನು ಆ ನಮ್ಮ ಸಾಕ್ಷಾತ್ ವಿಷ್ಣುವೇ ಅವತರಿಸಿ ಬಂದು ಉಪಾಯದಿಂದ ಚಿವುಟಿ ಹಾಕಬೇಕಷ್ಟೇ…. ಅವನೂ ಕೂಡ ಇವರ ಹತ್ತಿರಕ್ಕೆ ಸುಳಿಯಲಾರನೆನಿಸತ್ತದೆ- ಯಾಕೇ ಅಂತಿರೇನು? ಹಲವು ವರ್ಷಗಳ ಹಿಂದೇ ಇದೇ ಅನಂತ ಮೂರ್ತಿಯವರು ತರಂಗ ಪತ್ರಿಕೆಯಲ್ಲಿ ತಮ್ಮ ಸಂದರ್ಶನದಲ್ಲಿ ಹೀಗೆ ಹೇಳುತ್ತಾರೆ- …ಬುದ್ಧ ಚಾರಿತ್ರಿಕ ವ್ಯಕ್ತಿ, ಮಹಮ್ಮದ್ ಚಾರಿತ್ರಿಕ ವ್ಯಕ್ತಿ… ರಾಮ ಅಲ್ಲ..  ರಾಮ ಹುಟ್ಟಿದ್ದು ಅಯ್ಯೋಧ್ಯೆಯಲ್ಲಲ್ಲ; ಗೋಡ್ಸೆ ಗುಂಡಿಕ್ಕಿ ಕೊಂದಾಗ . ಗಾಂಧೀಜಿಯವರ ಬಾಯಲ್ಲಿ….” ಎಂದು ವ್ಯಂಗ್ಯವಾಡಿದ್ದಾರೆ; ಅನಂತಮೂರ್ತಿಗಳು!  ಎಷ್ಟೇ ಆಗಲಿ  ಇವರು ನಮ್ಮ “ಸಂಸ್ಕಾರ…. ಗಳನ್ನು ಅಲ್ಲಗೆಳೆದು ಪ್ರಸಿದ್ಧಿಪಡೆದವರಲ್ಲವೇ… ಹಾಗೇ ನಮ್ಮ ಏನೆಲ್ಲ ಆಚಾರ ವಿಚಾರಗಳನ್ನೂ ಅಲ್ಲಗೆಳೆಯುತ್ತಲೇ ವಿವಾದಗಳನ್ನು ಹುಟ್ಟು ಹಾಕುತ್ತಲೇ ತಾವು ಇನ್ನೂ ಇನ್ನೂ ಎತ್ತರಕ್ಕೇರುತ್ತೇನೆಂಬ ಭ್ರಮೆಯಲ್ಲಿರುವಂತಿದೆ. ಯಾಕೆಂದರೆ, ಇತ್ತೀಚೆಗೆ ಬಾಬಾ ರಾಮ್ ದೇವ್ ಸತ್ಯಗ್ರಹಕ್ಕೆ ಸಂಬಂಧಿಸಿದಂತೆ  ವಿಜಯ ಕರ್ನಾಟಕದಲ್ಲಿ ಇವರ ಲೇಖನ ನೋಡಿದಾಗ ಗಡ್ಡಬಿಟ್ಟು ಭಾವೋದ್ವೇಗದಿಂದ ಬಡಬಡಿಸುವ ಕಾವಿ ತೊಟ್ಟ ಬಾಬಾಗಿಂತಲೂ  (ಸ್ಟೈಲ್ ಆಗಿ ಬಿಳಿಗಡ್ಡ ಪೋಷಿಸಿಕೊಂಡು) ತಾವೇ ಮಹಾನ್ ವಿಚಾರವಾದಿಗಳು ಮೇಧಾವಿಗಳೆಂದು ಮರೆವಂಥವರಿಂದಲೇ ನಮಗೆ ಅಪಾಯವಿದೆ ಅನ್ನಿಸದೆಯೂ ಇರಲಿಲ್ಲ.  ಈ ಬಗ್ಗೆ ನನ್ನ ಬ್ಲಾಗ್ ಕೊಂಡಿ ನೋಡಿ..
…ಅಲ್ಲಾ ಸೂರ್ಯನೂ ಅಸ್ತಂಗತನಾಗಲೇ ಬೇಕು. ಅವನಿಗೋ ಇನ್ನೊಂದು ಮತ್ತೊಂದು ಮಗದೊಂದು ಬೆಳಗು ಇದೆ ನಮಗೋ ಜೀವಿತದ ಅಂತ್ಯಕಂಡರೆ ಇನ್ನೊಂದು ಬೆಳಗೆಲ್ಲಿ…? ಅನಂತಮೂರ್ತಿಯವರ ಬಗ್ಗೆ ಈ ದಿನ ಕನ್ನಡ ಪ್ರಭದಲ್ಲಿ ಚೈತನ್ಯ ಹೆಗಡೆಯವರು “ಬಹಳ ಚೆನ್ನಾಗಿ ಹಾಡಿ ಹೊಗಳಿದ್ದಾರೆ” ಖಂಡಿತ ನೀವೂ ಓದಿರುತ್ತೀರಿ; ಇಲ್ಲವಾದರೆ ಓದಿ.. ಭೈರಪ್ಪನವರ ಸುಪ್ರಸಿದ್ಧಿಯನ್ನು ಕಂಡು  ಕರುಬುವುದೇಕೋ ಜ್ಞಾನಪೀಠಿ ಅನಂತಮೂರ್ತಿ, ಇವರು ಎಷ್ಟ್ ಚೆನ್ನಾಗಿ ಅರ್ಥವಾಗ್ತಿದಾರೆ.. ಎನ್ನುತ್ತಾರೆ ಚೈತನ್ಯ ಹೆಗಡೆ (ಕ.ಪ್ರ. 22-06-11). ಅದೇ ಪತ್ರಿಕೆಯಲ್ಲಿ ವಾಚಕರೊಬ್ಬರು ಹೀಗೆ ಹೇಳುತ್ತಾರೆ;  ” ಗಡ್ಡ ಬಿಡುವ ಬದಲು ಈತ ತನ್ನ ಅಹಂಕಾರವನ್ನು ಬಿಟ್ರೆ ಒಳ್ಳಯದು…”

ಕನ್ನಡ ಚಿತ್ರರಂಗ ಮಾತ್ರವಲ್ಲ ಕನ್ನಡ ಟಿ.ವಿ.ಧಾರಾವಾಹಿಗಳೂ ಅದೆಷ್ಟು ಹದಗೆಟ್ಟಿದೆಯೆಂದರೆ….


ಕನ್ನಡ ಚಿತ್ರರಂಗ ಮಾತ್ರವಲ್ಲ  ಕನ್ನಡ ಟಿ.ವಿ.ಧಾರಾವಾಹಿಗಳೂ ಅದೆಷ್ಟು ಹದಗೆಟ್ಟಿದೆಯೆಂದರೆ,  ಅವೇನು ಮನೆ ಮನೆಗಳನ್ನ ಸಮಾಜವನ್ನ ಹಾಳು ಮಾಡಲು ಬಂದಿವೆಯೋ ಏನೋ ಅದನ್ನು ರಿಪೇರಿ ಮಾಡುವುದು ಸುಲಭ ಸಾಧ್ಯವೇನಿಲ್ಲ.
ಆರು ಕೋಟಿ ಜನಸಂಖ್ಯೆಯಲ್ಲಿ  ಅನಕ್ಷರಸ್ಥರು, ಮತ್ತು ಮುಗ್ಧ ಜನಗಳಿಗೇನು ಕಡಿಮೆಯಿಲ್ಲ, ಅವರುಗಳೇ ಅವರ ಸದಭಿರುಚಿಯ ಪ್ರೇಕ್ಷಕರು.  (ಹೆಳಬೇಕೆಂದರೆ, ಅವರುಗಳೆ ಈ ದೇಶ ಜನಪ್ರತಿನಿಧಿಗಳನ್ನು ಆರಿಸುವವರೆಂದರೆ ತಪ್ಪೇನಿಲ್ಲವಲ್ಲ!)
ಇನ್ನು ಕಲೆಯ ಗಾಳಿ ಗಂಧ ಇಲ್ಲದವರು, ಈ ಸಿನಿಮಾ/ಟಿ.ವಿ. ಧಾರಾವಾಹಿ ಇದೆಲ್ಲ ಇಂಡಸ್ಟ್ರಿಯಷ್ಟೇ ಎಂದು ದುಡ್ಡು ಮಾಡಲೆಂದೇ ಬಂದವರು, ಬಂದು ಸೋತವರು. ಕಳಕೊಂಡವರು, ಇಲ್ಲೇ ಹುಡುಕುವವರೂ ಹೆಚ್ಚುತ್ತಲೆ ಇದ್ದಾರೆ.   ಎಲ್ಲೋ ಒಂದು ಉತ್ತಮ ಚಿತ್ರ ಕೊಟ್ಟರೂ ಅದನ್ನು ಎಲ್ಲ ವರ್ಗದ ಪ್ರೇಕ್ಷಕರನ್ನೂ ತಲುಪಿಸಲಾರದೇ ಕಂಗೆಟ್ಟು ಹೋದವರೂ ಇದ್ದಾರೆ.  ಅಪರೂಪಕ್ಕೊಮ್ಮೆ ಒಳ್ಳೆಯ ಸೂಪರ್ ಹಿಟ್ ಚಿತ್ರವೊಂದನ್ನು ಕೊಟ್ಟು, ಹೊಸ ಹುಡುಗನೊಬ್ಬನನ್ನ ದಿನ ಬೆಳಗಾಗೊದ್ರೊಳಗೇ   ಕೋಟ್ಯಾಧಿಪತಿ ಮಾಡಿದವರೂ, ಮತ್ತೆ ಅವನ ಮನೆ ಮಟ್ಟಿಲು ಹತ್ತಲೂ ಆಗದ ನಿರ್ಮಾಪಕರೂ ಇದ್ದಾರೆ!
ಕನ್ನಡದಲ್ಲಿ ಟಿ.ವಿ. ಧಾರಾವಾಹಿಗಳು ಅದೆಷ್ಟು ಅಸಹನೀಯವಾಗಿರುತ್ತವೆಯೆಂದರೆ,  ಇವರೇನು ಕಥೆ, ಚಿತ್ರ ಕಥೆ, ಸಂಭಾಷಣೆ  ಎಂಬುದನ್ನೇ ಬರೆಯದೇನೆ ಸ್ಟಾಟ್ ನಲ್ಲಿ ಅವರ ಮನಸೋ ಇಚ್ಛೆ  ಸೀನ್ ಕ್ರಿಯೇಟ್  ಮಾಡಿ ಷೂಟಿಂಗ್ ಮಾಡ್ತಾ ಇದಾರೆ ಅನ್ನಿಸದೇ ಇರೋದಿಲ್ಲ.  ನಿರ್ಮಾಪಕ ಮತ್ತು ನಿರ್ದೇಶಕ ರಿಗೆ ತಾವು ಮಾಡಿದ್ದೇ ಸರಿ ಪ್ರೇಕ್ಷಕ ನೋಡ್ತಾನೆ;ನೋಡಲೇ ಬೇಕು (ಹಾಗೇ ನೋಡ್ತಾ ಕುಳಿತಲ್ಲೇ ಗೊಣಗುತ್ತಾನೆ; ಅಯ್ಯೋ ಕನ್ನಡಕ್ಕೆ ಎಂಥ ಗತಿ ಬಂತೂ ಅಂತ, ಹಾಗೇ ಸುಮ್ಮನೇ ಬುದ್ಧಿವಂತ ಪ್ರೇಕ್ಷಕ ಚಕ್ ಅಂತ ಜಗಿತಾನೆ ಬೇರೆ ಚಾನೆಲ್  ಗೆ -ಭಾಷೆ ಧಾರಾವಾಹಿ/ಚಿತ್ರಗಳಿಗೆ. ಇಲ್ಲಾ ಟಪ್ ಅಂತ ಆಫ್ ಮಾಡ್ತಾನೆ ಟಿ.ವಿ.ನಾ).
ಮೊನ್ನೆ ಇಲ್ಲೇ ಪ್ರಾಕಾಶ್ ನಗರಕ್ಕೆ ಹೋದಾಗ ರಸ್ತೆ ಮಧ್ಯೆ ಡಾ|| ರಾಜ್ ಕುಮಾರ್ ಅವರ ದೊಡ್ಡ ಕಟ್ ಔಟ್ ನೋಡಿದೆ. ಅದರ ಅಡಿ ಬರಹ-     “ಡಾ|| ರಾಜ್ ಮತ್ತೆ ಹುಟ್ಟಿ ಬಾ”
ಆಗ ಅನ್ನಿಸಿದ್ದು- “ಡಾ|| ರಾಜ್ ಮತ್ತೆ  ಹುಟ್ಟಿ ಬಾ;
ಅಂದಿನ ಭಾವನೆಗಳನ್ನೇ ಕಟ್ಟಿ ತಾ”

Follow

Get every new post delivered to your Inbox.

Join 195 other followers